ಲ್ಯಾಪ್‌ಟಾಪ್ ಖರೀದಿಸುವ ಮೊದಲು ಈ ಅಂಶಗಳನ್ನು ಗಮನದಲ್ಲಿರಿಸಿ…

ವಿಂಡೋಸ್ ಎಕ್ಸ್‌ಪಿ ಹಾಗೂ ವಿಂಡೋಸ್ 7 ಕಾರ್ಯಾಚರಣಾ ವ್ಯವಸ್ಥೆಗಳಿಗೆ ಮೈಕ್ರೋಸಾಫ್ಟ್ ಬೆಂಬಲ ನಿಲ್ಲಿಸಿದೆ. ಹೀಗಾಗಿ ಹಳೆಯ ಡೆಸ್ಕ್‌ಟಾಪ್ ಕಂಪ್ಯೂಟರನ್ನು ಹೊಸ ವಿಂಡೋಸ್ 8 ಕಾರ್ಯಾಚರಣಾ ವ್ಯವಸ್ಥೆಗೆ ಅಪ್‌ಗ್ರೇಡ್ ಮಾಡಲು ಅವುಗಳ ಹಾರ್ಡ್‌ವೇರ್ ಅಡ್ಡಿಯಾಗಬಹುದು. ಎಚ್ಚರಿಕೆಯಿಂದ, ಸೂಕ್ತ ಆ್ಯಂಟಿ ವೈರಸ್ ಆ್ಯಪ್ ಬಳಸುವ ಮೂಲಕ ಹಳೆಯ ಸಿಸ್ಟಂಗಳ ಬಳಕೆ ಮುಂದುವರಿಸಬಹುದು. ಆದರೆ, ಹೊಸತೇ ಬೇಕೆಂದಾದವರು ಕಡಿಮೆ ಸ್ಥಳಾವಕಾಶ ಬೇಕಾಗಿರುವ, ಬಳಕೆಗೆ ಸರಳವೂ ಮತ್ತು ಅತ್ತಿಂದಿತ್ತ ಒಯ್ಯಲು ಸುಲಭವೂ ಆಗಿರುವ ಲ್ಯಾಪ್‌ಟಾಪ್ ಖರೀದಿಗೆ ಮನ ಮಾಡಬಹುದು.

ಇತ್ತೀಚೆಗಿನ ವರ್ಷಗಳಲ್ಲಿ ಲ್ಯಾಪ್‌ಟಾಪ್‌ನ ವಿನ್ಯಾಸ, ತಂತ್ರಜ್ಞಾನದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ನಿಮ್ಮ ಬಜೆಟ್‌ಗೆ ತಕ್ಕಂತಹಾ ಲ್ಯಾಪ್‌ಟಾಪ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಡೆಸ್ಕ್‌ಟಾಪ್‌ನಷ್ಟೇ ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಾಧ್ಯವಿದೆ.

ಮುಖ್ಯವಾಗಿ ಗಮನಿಸಬೇಕಾಗಿರುವುದು ನಮಗೆ ಬೇಕಾದ ಲ್ಯಾಪ್‌ಟಾಪ್‌ನ ಗಾತ್ರ, ತೂಕ ಮತ್ತು ವಿನ್ಯಾಸ. ಲ್ಯಾಪ್‌ಟಾಪನ್ನು ಮನೆಯಲ್ಲಿ ಮಾತ್ರ ಬಳಸುತ್ತೀರಿ, ಸುತ್ತಾಟ ಕಡಿಮೆ ಎಂದಾದರೆ ದೊಡ್ಡ ಸ್ಕ್ರೀನ್‌ನ (14 ಇಂಚಿಗಿಂತಲೂ ಅಗಲ ಪರದೆ) ಲ್ಯಾಪ್‌ಟಾಪ್ ಖರೀದಿಸಬಹುದು. ಇದು ಕಣ್ಣಿಗೂ ಒಳ್ಳೆಯದು. ಆದರೆ, ತೂಕ ಕಡಿಮೆಯಿದ್ದಷ್ಟು ಮತ್ತು ಸ್ಲಿಮ್ ಆಗಿದ್ದಷ್ಟು ಪ್ರಯಾಣ ಸಂದರ್ಭದಲ್ಲಿ ಅನುಕೂಲ ಹೆಚ್ಚಿರುವುದರಿಂದ 12ರಿಂದ 14 ಇಂಚು ಸ್ಕ್ರೀನ್ ಉಳ್ಳ ಲ್ಯಾಪ್‌ಟಾಪ್‌ಗಳತ್ತ (ನೋಟ್‌ಬುಕ್) ಮನ ಮಾಡಬಹುದು. (ಅದಕ್ಕಿಂತ ಕಡಿಮೆಯಾದರೆ, ಟ್ಯಾಬ್ಲೆಟ್ ಥರ ಇರುತ್ತದೆ). ಆದರೆ ಗೇಮಿಂಗ್ ಅಥವಾ ಫೋಟೋ, ವೀಡಿಯೋ ಎಡಿಟಿಂಗ್ ಬಗ್ಗೆ ಆಸಕ್ತಿ ಇರುವವರು ಹೆಚ್ಚು ಶಕ್ತಿಶಾಲಿಯಾದ ಮತ್ತು 15 ಇಂಚಿಗಿಂತ ದೊಡ್ಡ ಸ್ಕ್ರೀನ್ ಇರುವ ಲ್ಯಾಪ್‌ಟಾಪ್‌ಗಳನ್ನು ಆಯ್ದುಕೊಳ್ಳಬಹುದು. ಹೆಚ್ಚು ಪ್ರಯಾಣ ಮಾಡುವವರಾದರೆ, ಮನೆಯಲ್ಲಿ ಮಕ್ಕಳು ಅದನ್ನು ಬಳಸುತ್ತಿದ್ದರೆ, ಪ್ಲಾಸ್ಟಿಕ್‌ಗಿಂತ ಮೆಟಾಲಿಕ್ ಕವಚವುಳ್ಳ ಲ್ಯಾಪ್‌ಟಾಪ್ ಖರೀದಿಸಿದರೆ ಬಾಳಿಕೆ ಹೆಚ್ಚು.

ಇದು ವಿನ್ಯಾಸ, ತೂಕದ ಸಂಗತಿಯಾಯಿತು. ಇನ್ನು, ಹಾರ್ಡ್‌ವೇರ್ (ಯಂತ್ರಾಂಶಗಳ) ಬಗ್ಗೆ ಗಮನ ಹರಿಸಿದರೆ, ಮುಖ್ಯವಾಗಿ ನೋಡುವುದು ಸ್ಟೋರೇಜ್ ಸಾಮರ್ಥ್ಯ. ಈಗಿನ ಲ್ಯಾಪ್‌ಟಾಪ್‌ಗಳು 500 ಜಿಬಿಯಿಂದ 1 ಟಿಬಿವರೆಗಿನ ಸ್ಟೋರೇಜ್ ಸಾಮರ್ಥ್ಯದೊಂದಿಗೆ ಬರುತ್ತವೆ. ಕಡಿಮೆ ಸ್ಟೋರೇಜ್ ಸಾಮರ್ಥ್ಯವುಳ್ಳವುಗಳನ್ನು ಖರೀದಿಸಿದಲ್ಲಿ, ಬಾಹ್ಯ ಸ್ಟೋರೇಜ್ (External Hard Drives) ಕೊಳ್ಳಬಹುದಾಗಿದೆ. ಅಂದರೆ ಲ್ಯಾಪ್‌ಟಾಪಲ್ಲಿ ಎಷ್ಟು ಬೇಕೋ ಅಷ್ಟು ಫೈಲುಗಳನ್ನು ಮಾತ್ರ ಇರಿಸಿಕೊಂಡು, ಉಳಿದವುಗಳನ್ನು ಈ External Hard Drive ಗಳಿಗೆ ವರ್ಗಾಯಿಸಬಹುದು. 1 ಟಿಬಿ (ಅಂದರೆ 1024 ಜಿಬಿ) ಸಾಮರ್ಥ್ಯದ ಬಾಹ್ಯ ಸ್ಟೋರೇಜ್ ಸಾಧನಗಳು ಈಗ ಮೂರು-ನಾಲ್ಕು ಸಾವಿರ ರೂ. ಆಸುಪಾಸಿಗೆ ದೊರೆಯುತ್ತವೆ. ಅಗತ್ಯವಿದ್ದರೆ ಮಾತ್ರ ಅದನ್ನು ಜತೆಗೆ ಒಯ್ಯಬಹುದು.

ಈಗಾಗಲೇ ಸ್ಮಾರ್ಟ್‌ಫೋನ್‌ಗಳನ್ನೋ, ಟ್ಯಾಬ್ಲೆಟ್‌ಗಳನ್ನೋ ಬಳಸಿ ಅಭ್ಯಾಸವಿರುವವರು ಟಚ್ ಸ್ಕ್ರೀನ್ ಸೌಲಭ್ಯವಿರುವ ಲ್ಯಾಪ್‌ಟಾಪ್ ಹೊಂದುವ ಬಗ್ಗೆ ಮನಸ್ಸು ಮಾಡಬಹುದು. ಆಧುನಿಕ ವಿಂಡೋಸ್ 8 ಕಾರ್ಯಾಚರಣಾ ವ್ಯವಸ್ಥೆಯು ಟಚ್ ಸ್ಕ್ರೀನ್‌ಗೆ ಪರಿಪೂರ್ಣ ಬೆಂಬಲ ನೀಡುತ್ತದೆ. ಇದರಿಂದಾಗಿ ಲ್ಯಾಪ್‌ಟಾಪ್ ಕೆಲಸಗಳೆಲ್ಲವೂ ಈಗ ಮತ್ತಷ್ಟು ಸುಲಭವಾಗಿಬಿಟ್ಟಿದೆ. ಉದಾಹರಣೆಗೆ, ವೆಬ್ ಸೈಟಿನಲ್ಲಿ ಪುಟ ಬದಲಾಯಿಸುವುದು, ಯಾವುದೇ ಆ್ಯಪ್ ಪ್ರಾರಂಭಿಸುವುದು, ದೊಡ್ಡ ಇ-ಪುಸ್ತಕಗಳನ್ನು ಓದುವುದು… ಇವೆಲ್ಲ ತುಂಬ ಸುಲಭ, ಟ್ಯಾಬ್ಲೆಟ್ ಬಳಸಿದ ರೀತಿಯಲ್ಲೇ ಇದರ ಕಾರ್ಯಾಚರಣೆ. ಟಚ್ ಸ್ಕ್ರೀನ್ ಇದ್ದರೆ ಅದು ದುಬಾರಿಯಾಗಿರುತ್ತದೆ.

ಉಳಿದಂತೆ, ವೇಗವಾಗಿ ಕೆಲಸ ಮಾಡುವಂತಾಗಲು ಮಲ್ಟಿ ಕೋರ್ (ಡ್ಯುಯಲ್, ಕ್ವಾಡ್ ಕೋರ್ ಇತ್ಯಾದಿ) ಪ್ರೊಸೆಸರ್ (ಇಂಟೆಲ್ ಅಥವಾ ಎಎಂಡಿ ಕಂಪನಿಗಳದ್ದು) ಇರುವುದನ್ನು ಆಯ್ಕುಕೊಳ್ಳಿ. ಕೋರ್ ಐ3 ಅಥವಾ ಐ5 ಮಾಡೆಲ್‌ನವು ಅತ್ಯಾಧುನಿಕವಾದವು. RAM ಕನಿಷ್ಠ 2 ಜಿಬಿಯಿಂದ 8 ಜಿಬಿ ಆಯ್ಕೆ ಮಾಡಿಕೊಳ್ಳಿ. ಮೂರು-ನಾಲ್ಕು ಯುಎಸ್‌ಬಿ ಸ್ಲಾಟ್‌ಗಳಿದ್ದರೆ ಪ್ರಿಂಟರ್, ಮೊಬೈಲ್, ಪೆನ್ ಡ್ರೈವ್ ಇತ್ಯಾದಿಗಳನ್ನು ಸಂಪರ್ಕಿಸಲು ಅನುಕೂಲ. ವೈಫೈ, ಬ್ಲೂಟೂತ್ ಸೌಲಭ್ಯ ಅತ್ಯಗತ್ಯ. ಬ್ಯಾಟರಿ ಸಾಮರ್ಥ್ಯವನ್ನೂ ವಿಚಾರಿಸಿಕೊಳ್ಳಬೇಕಾಗುತ್ತದೆ.

ಒಟ್ಟಿನಲ್ಲಿ ಕಂಪ್ಯೂಟರಿನಲ್ಲಿ ಜಾಸ್ತಿ ಕೆಲಸ ಇಲ್ಲ, ಇಂಟರ್ನೆಟ್ ಜಾಲಾಟಕ್ಕೋ, ಲೇಖನ ಬರೆಯುವುದಕ್ಕೋ, ಪ್ರೆಸೆಂಟೇಶನ್ ಮಾಡುವುದಕ್ಕೋ ಮಾತ್ರ ಸಾಕೆಂದಾದರೆ, ತೂಕದಲ್ಲಿಯೂ ಕಿಸೆಗೂ ಹಗುರವಾಗಿರುವ ಲ್ಯಾಪ್‌ಟಾಪ್‌ಗಳನ್ನು ಖರೀದಿಸಬಹುದು. 1ಟಿಬಿ ಸ್ಟೋರೇಜ್, 8 ಜಿಬಿ RAM, ಕೋರ್ ಐ5 ಪ್ರೊಸೆಸರ್, 15 ಇಂಚು ಸ್ಕ್ರೀನ್ ಇರುವ ಲ್ಯಾಪ್‌ಟಾಪ್ ಸಾಮಾನ್ಯವಾಗಿ 45 ಸಾವಿರ ರೂ. ಆಸುಪಾಸಿನಲ್ಲಿ ದೊರೆಯುತ್ತದೆ. ಕಡಿಮೆ ಬಜೆಟ್‌ಗಾದರೆ 25ರಿಂದ 30 ಸಾವಿರ ರೂ. ಆಸುಪಾಸಿನಲ್ಲಿ 500 ಜಿಬಿ, ಡ್ಯುಯಲ್ ಕೋರ್, 2 ಅಥವಾ 4 ಜಿಬಿ RAM, 15 ಇಂಚು ಸ್ಕ್ರೀನ್ ಲ್ಯಾಪ್‌ಟಾಪ್ ದೊರೆಯುತ್ತದೆ.

ಮಾಹಿತಿ@ತಂತ್ರಜ್ಞಾನ: ಅವಿನಾಶ್ ಬಿ. ವಿಜಯ ಕರ್ನಾಟಕ ಮೇ 04, 2015

Avinash B

Avinash B. Tech Writer, Columnist, Working as Online media Journalist for more than two decades. Passionate about Technology and Gadgets. Yakshagana and Music are passion.

Recent Posts

ರಿಯಲ್‌ಮಿ ನಾರ್ಜೋ 70 ಟರ್ಬೊ 5 ಜಿ, ರಿಯಲ್‌ಮಿ ಬಡ್ಸ್ ಎನ್‌1 ಬಿಡುಗಡೆ: ಬೆಲೆ, ವೈಶಿಷ್ಟ್ಯ ತಿಳಿಯಿರಿ

ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…

1 month ago

ಓದುವಿಕೆ, ಕಲಿಕೆ ಉತ್ತೇಜನಕ್ಕೆ ‘ರೀಡ್-ಅ-ಥಾನ್’: ದಾಖಲೆಯ ಗುರಿ

ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.

1 month ago

Realme 13 +, Realme 13 5ಜಿ ಫೋನ್ ಬಿಡುಗಡೆ: ವೇಗದ ಫೋನ್‌ನ ವೈಶಿಷ್ಟ್ಯಗಳು, ಬೆಲೆ ಇಲ್ಲಿ ತಿಳಿಯಿರಿ

ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…

2 months ago

e-ಯುಗದ ತನಿಖಾ ಪತ್ರಿಕೋದ್ಯಮ: ಫ್ಯಾಕ್ಟ್ ಚೆಕ್

Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.

3 months ago

ಯಕ್ಷ ಮಂತ್ರ ಮಾಂಗಲ್ಯ: ಕೀರ್ತನಾ ಪ್ರಸಾದ ಕಲ್ಯಾಣವು

ಹಾಡುಗಾರಿಕೆ, ಚೆಂಡೆ-ಮದ್ದಳೆಯ ಬಿಡಿತ-ಮುಕ್ತಾಯಗಳ ಬಳಿಕ, ಬಂದಿದ್ದ ಗಣ್ಯರು, ಒಂದೊಂದು ಹಾಡಿನಲ್ಲಿ ಅಡಕವಾಗಿರುವ ಮಂತ್ರ ಮಾಂಗಲ್ಯದ ಪ್ರತಿಜ್ಞಾಗುಚ್ಛವನ್ನು ವಿವರಿಸಿ, ವಧು-ವರರಿಗೆ ಬೋಧಿಸಿದರು

8 months ago

ಮುದ್ದಣನ ಕುಮಾರ ವಿಜಯ, ರತ್ನಾವತಿ ಕಲ್ಯಾಣ ಯಕ್ಷಗಾನ ಧ್ವನಿಮುದ್ರಿಕೆ

ಮುದ್ದಣನ ಕುಮಾರ ವಿಜಯದ ಸುಮಾರು 700ರಷ್ಟಿರುವ ಹಾಡುಗಳನ್ನು ಹಾಡಿದ್ದು ತೆಂಕು ತಿಟ್ಟಿನ ಬಲಿಪ ಶೈಲಿಯ ಪ್ರತಿಪಾದಕ ಭಾಗವತರೇ. ಏಳೆಂಟು ವರ್ಷಗಳ…

8 months ago