ಜನ ಸಾಮಾನ್ಯರಿಗಾಗಿ ಮಾಹಿತಿ@ತಂತ್ರಜ್ಞಾನ- ವಿ.ಕ.ಅಂಕಣ-24 (ಫೆಬ್ರವರಿ 18, 2013)
ನಿಮ್ಮ ಮೊಬೈಲ್ ಫೋನ್ ಕಳೆದುಹೋಗಿರುತ್ತದೆ ಅಥವಾ ನೀವೆಲ್ಲೋ ಮರೆತಿರುತ್ತೀರಿ, ಯಾರಾದರೂ ಅದಕ್ಕೆ ಕೈ ಕೊಟ್ಟಿರುತ್ತಾರೆ. ಏನು ಮಾಡಬೇಕು ಅಂತ ಯೋಚಿಸುತ್ತಿದ್ದೀರಾ? ವರ್ಷಗಳ ಹಿಂದೆ, ಎಲ್ಲ ಮೊಬೈಲ್ ಫೋನ್‌ಗಳಿಗೆ ಐಎಂಇಐ (IMEI) ಸಂಖ್ಯೆ ಕಡ್ಡಾಯ ಎಂದು ಸರಕಾರವು ಆದೇಶ ಹೊರಡಿಸಿದ್ದು ನೆನಪಿದೆಯೇ? ಅಲ್ಲದೆ, ಚೈನಾ ಸೆಟ್‌ಗಳನ್ನು ತೆಗೆದುಕೊಳ್ಳಬೇಡಿ, ಅದರಲ್ಲಿ ಐಎಂಇಐ ಸಂಖ್ಯೆ ಇರುವುದಿಲ್ಲ ಅಂತೆಲ್ಲಾ ಹೇಳುತ್ತಿದ್ದುದನ್ನು ಕೇಳಿದ್ದೀರಾ?
ಹೌದು. ಮೊಬೈಲ್ ಫೋನ್‌ಗಳಲ್ಲಿ ಐಎಂಇಐ ಸಂಖ್ಯೆ ಎಂಬುದು ಅತ್ಯಂತ ಮಹತ್ವದ್ದು. ಇದನ್ನು ಬಳಸಿ ನಿಮ್ಮ ಕಳೆದುಹೋದ ಮೊಬೈಲ್ ಫೋನನ್ನು ಪತ್ತೆ ಹಚ್ಚಬಹುದು, ಅಥವಾ ಉಗ್ರಗಾಮಿಗಳೋ, ಕಳ್ಳಕಾಕರೋ ನಿಮ್ಮ ಮೊಬೈಲ್ ಬಳಸಿ ಮಾಡಬಾರದ್ದನ್ನು ಮಾಡದಂತೆ ತಡೆಗಟ್ಟಲೂಬಹುದು. ಅದು ಹೇಗಂತೀರಾ?
ಐಎಂಇಐ ಎಂದರೆ ಇಂಟರ್‌ನ್ಯಾಷನಲ್ ಮೊಬೈಲ್ ಇಕ್ವಿಪ್‌ಮೆಂಟ್ ಐಡೆಂಟಿಟಿ (ಮೊಬೈಲ್ ಉಪಕರಣದ ಅಂತಾರಾಷ್ಟ್ರೀಯ ಗುರುತಿನ ಸಂಖ್ಯೆ). ಪ್ರತಿ ಮೊಬೈಲ್ ಫೋನ್‌ಗೂ ಇದು ಪ್ರತ್ಯೇಕ ಮತ್ತು ವಿಶಿಷ್ಟವಾಗಿದ್ದು, 15 ಅಂಕಿಗಳನ್ನು ಹೊಂದಿರುತ್ತದೆ. ಹೆಚ್ಚಾಗಿ ಬ್ಯಾಟರಿ ತೆಗೆದಾಗ ಅಲ್ಲಿನ ಕುಳಿಯಲ್ಲಿ ಇದು ಗೋಚರಿಸುತ್ತದೆ. ಮೊಬೈಲ್ ಸಾಧನಗಳ ಪ್ಯಾಕೇಜ್‌ನ ಹೊರಗೆ ಕೂಡ ಈ ಸಂಖ್ಯೆಯನ್ನು ನಮೂದಿಸಲಾಗಿರುತ್ತದೆ. ಹೀಗಾಗಿ ಈ ಸಂಖ್ಯೆಯನ್ನು ಎಲ್ಲಾದರೂ ಜೋಪಾನವಾಗಿ ತೆಗೆದಿಡುವುದು ಅತೀ ಅಗತ್ಯ.
ಹಳೆಯ ಮೊಬೈಲ್ ಫೋನ್‌ಗಳ ಪ್ಯಾಕೇಜ್ ಬಾಕ್ಸ್ ನಿಮ್ಮಲ್ಲಿಲ್ಲದಿದ್ದರೆ, ಅಥವಾ ಬ್ಯಾಟರಿಯ ಅಡಿಯಲ್ಲಿ ಈ ಸಂಖ್ಯೆ ಕಾಣಿಸದೇ ಇದ್ದರೆ, ಮೊಬೈಲ್ ಫೋನ್‌ನಲ್ಲಿ *#06# ಅಂತ ಟೈಪ್ ಮಾಡಿ, ಕರೆ ಬಟನ್ ಒತ್ತಿದರೆ, ನಿಮ್ಮ ಸಾಧನದ ಐಎಂಇಐ ಸಂಖ್ಯೆಯು ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳುತ್ತದೆ. ಅತ್ಯಾಧುನಿಕ ಸ್ಮಾರ್ಟ್‌ಫೋನ್‌ಗಳಲ್ಲಿ ಸೆಟ್ಟಿಂಗ್ಸ್‌ನಲ್ಲಿ “About the Device” ಅಂತ ಇರುವಲ್ಲಿ ಈ ಸಂಖ್ಯೆಯನ್ನು ಕಾಣಬಹುದು.
ಈಗ ನಿಮ್ಮ ಮೊಬೈಲ್ ಫೋನ್ ಕಳೆದುಹೋಯಿತು ಅಂತ ಇಟ್ಟುಕೊಳ್ಳೋಣ. ಆವಾಗ ನೀವು ಪೊಲೀಸರಿಗೆ ದೂರು ನೀಡಬೇಕಿದ್ದರೂ, ಹ್ಯಾಂಡ್‌ಸೆಟ್‌ನ ಐಎಂಇಐ ಸಂಖ್ಯೆಯನ್ನು ಕೇಳಲಾಗುತ್ತದೆ. ಹೀಗಾಗಿ ಇದು ಅತ್ಯಗತ್ಯ. ಅಂತೆಯೇ, ನಿಮ್ಮ ಸೆಲ್ ಆಪರೇಟರ್‌ಗೆ ಹ್ಯಾಂಡ್‌ಸೆಟ್ ಕಳೆದುಹೋಗಿರುವ ಸಂಗತಿಯನ್ನು ತಿಳಿಸಿದರೆ, ಅವರು ಕೂಡ ಐಎಂಇಐ ಸಂಖ್ಯೆಯನ್ನು ಕೇಳುತ್ತಾರೆ.
ಯಾಕೆ? ಈ ಸಂಖ್ಯೆಯನ್ನು ಮೊಬೈಲ್ ಆಪರೇಟರ್‌ಗಳು ಪಡೆದುಕೊಂಡು, ಆ ಸಂಖ್ಯೆಯನ್ನು ಬ್ಲ್ಯಾಕ್‌ಲಿಸ್ಟ್‌ನಲ್ಲಿ ಸೇರಿಸಿ, ಅದಕ್ಕೆ (ಅಂದರೆ ಹ್ಯಾಂಡ್‌ಸೆಟ್‌ಗೆ) ತಮ್ಮ ಸೇವೆಯನ್ನು ನಿಲ್ಲಿಸುತ್ತಾರೆ. ಹೀಗಾಗಿ ಮೊಬೈಲ್ ಫೋನನ್ನು ಕದ್ದವರಿಗೆ ಸಿಮ್ ಕಾರ್ಡ್ ಬದಲಾಯಿಸಿದರೂ, ಇದು ಕೇಂದ್ರೀಕೃತ ವ್ಯವಸ್ಥೆಯಾಗಿರುವುದರಿಂದ ಆ ಫೋನನ್ನು ಬಳಸುವುದು ಸಾಧ್ಯವಾಗುವುದಿಲ್ಲ. ಅಂದರೆ ಅದನ್ನು ಕದ್ದರೂ ಅವನಿಗದು ಪ್ರಯೋಜನವಾಗುವುದಿಲ್ಲ! ಅದೇ ರೀತಿ, ಪೊಲೀಸರು ಉಪಗ್ರಹ ಆಧಾರಿತ ಜಿಪಿಎಸ್ (ಗ್ಲೋಬಲ್ ಪೊಸಿಶನಿಂಗ್ ಸಿಸ್ಟಂ) ತಂತ್ರಜ್ಞಾನದ ಮೂಲಕ, ಈ ನಿರ್ದಿಷ್ಟ ಐಎಂಇಐ ಸಂಖ್ಯೆಯುಳ್ಳ ಸಾಧನವು ಎಲ್ಲಿದೆ ಎಂದು ಪತ್ತೆಹಚ್ಚಬಲ್ಲರು.
ಕೆಲವು ವರ್ಷಗಳಿಂದೀಚೆಗೆ ಉಗ್ರಗಾಮಿಗಳು, ಕ್ರಿಮಿನಲ್‌ಗಳು ಮೊಬೈಲ್ ಫೋನ್‌ಗಳ ಮೂಲಕ ಕಾರ್ಯಾಚರಿಸುತ್ತಿರುವುದರಿಂದ ಐಎಂಇಐ ಸಂಖ್ಯೆ ಕಡ್ಡಾಯ ಮಾಡಿ ಭಾರತ ಸರಕಾರ ಆದೇಶ ಹೊರಡಿಸಿದೆ. ಇದರಿಂದ ಜಿಪಿಎಸ್ ಬಳಸಿ ಕ್ರಿಮಿನಲ್‌ಗಳ ಜಾಡು ಹಿಡಿಯಬಹುದಾಗಿದೆ.
ಇನ್ನೂ ಒಂದು ವ್ಯವಸ್ಥೆಯಿದೆ. ನೀವು http://www.trackimei.com ಎಂಬಲ್ಲಿ ನಿಮ್ಮ ಮೊಬೈಲ್ ಫೋನನ್ನು ಐಎಂಇಐ ಸಂಖ್ಯೆ, ಖರೀದಿ ಮಾಡಿದ್ದೆಲ್ಲಿಂದ, ಅದರ ಬಿಲ್ ಮುಂತಾದ ವಿವರಗಳೊಂದಿಗೆ ನೋಂದಾಯಿಸಿಕೊಂಡರೆ, ಮೊಬೈಲ್ ಕಳವಾದರೆ ಈ ಐಎಂಇಐ ಸಂಖ್ಯೆಯಿರುವ ಮೊಬೈಲ್ ಫೋನ್ ಎಲ್ಲಿದೆ ಎಂದು ಪತ್ತೆ ಹಚ್ಚಲು ನಕ್ಷೆಯ ಮೂಲಕ ನೆರವು ದೊರೆಯುತ್ತದೆ.