ನೋಕಿಯಾ ಬ್ರ್ಯಾಂಡ್ ತೆರೆಮರೆಗೆ…. ಒಂದು ಹಿನ್ನೋಟ

0
616

ಟೆಕ್-Know ಲೇಖನ: ನವೆಂಬರ್ 3, ವಿಜಯ ಕರ್ನಾಟಕ : ನೆಟ್ಟಿಗ
Nokia 3310ನೋಕಿಯಾ ಫೋನ್‌ಗಳಿಗೂ ಭಾರತಕ್ಕೂ ತಾದಾತ್ಮ್ಯ ನಂಟು. ಹಳ್ಳಿ ಹಳ್ಳಿಗೂ ನೋಕಿಯಾ ಚಿರಪರಿಚಿತ. ಫಿನ್ಲೆಂಡ್ ಎಂಬ ಪುಟ್ಟ ದೇಶದಿಂದ ಜಗತ್ತಿನಾದ್ಯಂತ ತನ್ನ ಸುಂದರ, ಸುದೃಢ ಮೊಬೈಲ್ ಫೋನ್‌ಗಳ ಮೂಲಕ ಕನಸುಗಳನ್ನು ಬೆಸೆದ, ಅತ್ಯುತ್ತಮ ಬ್ಯಾಟರಿ ಸಾಮರ್ಥ್ಯಕ್ಕಾಗಿ ಈಗಲೂ ಜನ ಮಾನಸದಲ್ಲಿ ಸ್ಥಾನ ಪಡೆದಿರುವ ನೋಕಿಯಾ, ಈಗ 730 ಶತಕೋಟಿ ಡಾಲರ್ ವಹಿವಾಟಿನ ಮೂಲಕ ಮೈಕ್ರೋಸಾಫ್ಟ್ ತೆಕ್ಕೆಯೊಳಗೆ ಸೇರಿಕೊಂಡಿದೆ. ಭಾರತದಲ್ಲಿ ಫೋನ್‌ಗಳು ತಯಾರಾಗುತ್ತಿರುವ ಚೆನ್ನೈಯ ಅದರ ಘಟಕವನ್ನೂ ಮುಚ್ಚಲಾಗುತ್ತಿದೆ. ನೋಕಿಯಾ ಎಂಬ ಬ್ರ್ಯಾಂಡ್ ಈಗ ಕಾಲನ ಮರೆಗೆ ಸರಿಯುತ್ತಿದೆ. ನಮ್ಮ ಬದುಕನ್ನು ಅರಳಿಸಿದ, ನಮ್ಮ ಕೈಯಲ್ಲಿ, ನಮ್ಮ ಬಂಧುಗಳು-ಸ್ನೇಹಿತರ ಕೈಯಲ್ಲಿ ರಾರಾಜಿಸುತ್ತಿದ್ದ ಫೋನುಗಳನ್ನು ಕಂಡು ನಿಬ್ಬೆರಗಾಗಿದ್ದವರು ನಾವು. ಇಂಥಹಾ ನೋಕಿಯಾ ಫೋನ್‌ಗಳ ಸಂದುಹೋದ, ಅತ್ಯಂತ ಸುಂದರ, ಅನನ್ಯ, ವೈಭವದ ಸಾಧನಗಳ ಮೇಲೊಂದು ಹಿನ್ನೋಟ ಇಲ್ಲಿದೆ.

ನೋಕಿಯಾ 1011
1992ರಲ್ಲಿ ಜಿಎಸ್ಎಂ ನೆಟ್‌ವರ್ಕ್‌ನಲ್ಲಿ ಕೆಲಸ ಮಾಡಿದ ನೋಕಿಯಾದ ಮೊದಲ ಫೋನ್.

ನೋಕಿಯಾ 2110
ನೋಕಿಯಾ ಬ್ರ್ಯಾಂಡ್‌ನ ಪ್ರಖ್ಯಾತ ರಿಂಗ್‌ಟೋನ್ ಜತೆಗೆ ಬಂದ ಪ್ರಪ್ರಥಮ ಫೋನ್.

ನೋಕಿಯಾ 6110
90ರ ದಶಕದ ಕೊನೆಯ ಭಾಗದಲ್ಲಿ ಭಾರತದಲ್ಲಿ ಅತ್ಯಂತ ಹೆಚ್ಚು ಪ್ರಸಿದ್ಧಿ ಪಡೆದಿದ್ದು ಇದು.

ನೋಕಿಯಾ 8110
1996ರಲ್ಲಿ ನೋಕಿಯಾದಿಂದ ಪ್ರಥಮವಾಗಿ ಉದ್ಯಮ ವಲಯಕ್ಕಾಗಿ ತಯಾರಾದ ಸ್ಲೈಡರ್ ಫೋನ್.

ಕಮ್ಯುನಿಕೇಟರ್ 9000
1996ರಲ್ಲಿ ಮಾರುಕಟ್ಟೆಗಿಳಿದ ಪೂರ್ಣಪ್ರಮಾಣದ ಕ್ವೆರ್ಟಿ (QWERTY) ಕೀಬೋರ್ಡ್, 24 MHz ಪ್ರೊಸೆಸರ್, 4.5 ಇಂಚು ಸ್ಕ್ರೀನ್ ಇರುವ ಅದ್ಭುತ ಫೋನ್.

ನೋಕಿಯಾ 8210
1999ರಲ್ಲಿ ಮೊದಲ ಬಾರಿ ಆಂತರಿಕ ಆಂಟೆನಾ ಕಾಣಿಸಿಕೊಂಡಿದ್ದು ಇದರಲ್ಲಿ. ತೂಕ ಕೇವಲ 79 ಗ್ರಾಂ. ಇನ್‌ಫ್ರಾರೆಡ್ ಪೋರ್ಟ್, ‘ಸ್ನೇಕ್’ (ಹಾವು ಜೋಡಿಸುವ) ಗೇಮ್ ಇದ್ದ ಫೋನ್ ಇದು.

ನೋಕಿಯಾ 3310
6110 ಮಾಡೆಲ್ ಬಳಿಕ, ಜಗತ್ತಿನಲ್ಲಿ ಅತೀ ಹೆಚ್ಚು ಜನರು ಇಷ್ಟಪಟ್ಟಿದ್ದ ಫೋನ್ ಇದು.12.50 ಕೋಟಿ ಸೆಟ್‌ಗಳು ಮಾರಾಟವಾಗಿವೆ.

ನೋಕಿಯಾ 7650
‘ಸಿಂಬಿಯಾನ್’ ಕಾರ್ಯಾಚರಣಾ ವ್ಯವಸ್ಥೆ ಜತೆಗೆ ಮೊತ್ತ ಮೊದಲು ಕಾಣಿಸಿಕೊಂಡ ಫೋನ್, ನೋಕಿಯಾದ ಪ್ರಥಮ ಕ್ಯಾಮೆರಾ ಫೋನ್.

ನೋಕಿಯಾ 6800
QWERTY ಕೀಬೋರ್ಡನ್ನು ಹೀಗೂ ಬಳಸಬಹುದು. ಕ್ಯಾಂಡಿಬಾರ್ ಶೈಲಿಯ ‘ಬಟರ್‌ಫ್ಲೈ’ ಫೋನ್ ಇದು.

ನೋಕಿಯಾ ಎನ್-ಗೇಜ್
ಗೇಮ್ಸ್ ಆಡುವ ಗ್ಯಾಜೆಟ್‌ಗಳ ಕಾಲದಲ್ಲಿ, ನಿಂಟೆಂಡೋ ಕಂಪನಿಗೆ ಸಡ್ಡು ಹೊಡೆದ ನೋಕಿಯಾ ಸಾಧನವಿದು. ಮೈಕ್ರೋಫೋನ್ ಮತ್ತು ಇಯರ್‌ಪೀಸ್ ಕೂಡ ಇದೆ.

ನೋಕಿಯಾ 7600
21ನೇ ಶತಮಾನದ ಆರಂಭದಲ್ಲಿ ಬಂದ, ನೋಕಿಯಾದ ಪ್ರಥಮ 3ಜಿ ಸಾಧನ. 2003ರಲ್ಲಿ ಆಕರ್ಷಕ ವಿನ್ಯಾಸದಿಂದ ಗಮನ ಸೆಳೆಯಿತು.

ನೋಕಿಯಾ 7610
2004ರಲ್ಲಿ ಸುಧಾರಿತ ರೂಪವಾಗಿ ಬಂದ ಈ ಫೋನನ್ನು, ಒಂದು ಕೈಯ ಹೆಬ್ಬೆರಳಿನಲ್ಲಿಯೇ ಟೈಪ್, ಡಯಲ್ ಮಾಡುವುದಕ್ಕಾಗಿ ರೂಪಿಸಲಾಗಿದೆ.

ನೋಕಿಯಾ 7280
ಪ್ರಯೋಗಕ್ಕೆ ಎಂದೂ ಹಿಂಜರಿಯದ ನೋಕಿಯಾ, ಕೀಬೋರ್ಡ್ ಇಲ್ಲದ ‘ಲಿಪ್‌ಸ್ಟಿಕ್’ ಫೋನನ್ನು 2004ರಲ್ಲಿ ಮಾರುಕಟ್ಟೆಗೆ ಬಿಟ್ಟಿತ್ತು.

ನೋಕಿಯಾ 7710
2004ರಲ್ಲಿ ಬಂದ ನೋಕಿಯಾದ ಮೊದಲ ಟಚ್ ಸ್ಕ್ರೀನ್ ಫೋನ್. ಕೀಬೋರ್ಡ್ ಇಲ್ಲದಿರುವುದರಿಂದಾಗಿ ಜನರು ಇದರತ್ತ ಒಲವು ತೋರಲಿಲ್ಲ.

ನೋಕಿಯಾ 9300
ಬಿಸಿನೆಸ್ ಜಗತ್ತಿಗಾಗಿ 2005ರಲ್ಲಿ ‘ಕಮ್ಯುನಿಕೇಟರ್’ನ ಸುಧಾರಿತ ಆವೃತ್ತಿಯನ್ನು ನೋಕಿಯಾ ಮಾರುಕಟ್ಟೆಗೆ ಬಿಟ್ಟಿತು.

ನೋಕಿಯಾ 770 ಇಂಟರ್ನೆಟ್ ಟ್ಯಾಬ್ಲೆಟ್
2005ರಲ್ಲೇ ನೋಕಿಯಾದ ಈ ಇಂಟರ್ನೆಟ್ ಟ್ಯಾಬ್ಲೆಟ್ ಹೆಚ್ಚಿನ ಗಮನ ಸೆಳೆದಿತ್ತು. ಮೇಮೋ (Maemo) [ನಂತರ ಇದು MeeGo ಎಂದು ಮರುನಾಮಕರಣಗೊಂಡ] ಆಪರೇಟಿಂಗ್ ಸಿಸ್ಟಂ ಇದರಲ್ಲಿತ್ತು.

ನೋಕಿಯಾ ಎನ್-93
2006ರಲ್ಲಿ ಬಿಡುಗಡೆಯಾದ, ನೋಕಿಯಾದ ಪ್ರಯೋಗಗಳಿಗೆ ಸಾಕ್ಷಿಯಾಗಬಲ್ಲ ಕ್ಯಾಮೆರಾ ಫೋನ್ ಇದು. ಕಾರ್ಲ್ ಝೇಯಿಸ್ ಲೆನ್ಸ್ ಇದರ ವಿಶೇಷತೆ. ಆಲ್-ಇನ್-ಒನ್ ಸ್ಮಾರ್ಟ್‌ಫೋನ್ ಮತ್ತು ಕ್ಯಾಮ್‌ಕಾರ್ಡರ್.

ನೋಕಿಯಾ ಎನ್-95
2007ರಲ್ಲಿ ಐಫೋನ್‌ಗೆ ಪ್ರತಿಯಾಗಿ ಮಾರುಕಟ್ಟೆಗೆ ಬಂದಿದ್ದ ಈ ಸ್ಮಾರ್ಟ್‌ಫೋನ್, ಸಿಂಬಿಯಾನ್ ಆಪರೇಟಿಂಗ್ ಸಿಸ್ಟಂ ಮೂಲಕ ಕೆಲಸ ಮಾಡುತ್ತಿತ್ತು.

ನೋಕಿಯಾ ಎನ್-97
ಐಫೋನ್ ಮಾದರಿಯಲ್ಲೇ ದೊಡ್ಡ ಸ್ಕ್ರೀನ್ ಹೊಂದಿದ್ದ ಇದರಲ್ಲಿ ಕ್ವೆರ್ಟಿ ಕೀಬೋರ್ಡ್ ಕೂಡ ಇತ್ತು. ಟಚ್ ಸ್ಕ್ರೀನ್ ಆಕರ್ಷಕವಾಗಿತ್ತು.

ನೋಕಿಯಾ ಇ-71
ಐಫೋನ್ ಬಳಿಕ ಬ್ಲ್ಯಾಕ್‌ಬೆರಿಗೆ ಸವಾಲೊಡ್ಡಲು ನಿರ್ಮಾಣಗೊಂಡ ಇ-71 ಫೋನ್.

ನೋಕಿಯಾ ಎಕ್ಸ್-7
ಸಿಂಬಿಯಾನ್ 3 (‘ಆನ್ನಾ’ ಹಾಗೂ ನಂತರ ‘ಬೆಲ್ಲೆ’ ಎಂದು ಹೆಸರಿಸಲಾಯಿತು) ಆಪರೇಟಿಂಗ್ ಸಿಸ್ಟಂನಲ್ಲಿ ಬಂದ ಮೊದಲ ಎಕ್ಸ್-ಸರಣಿಯ ಫೋನ್ ಇದು.

ನೋಕಿಯಾ ಎನ್9
ಐಫೋನ್, ಆಂಡ್ರಾಯ್ಡ್ ಫೋನ್‌ಗಳಿಗೆ ಸಡ್ಡು ಹೊಡೆಯಲು ನೋಕಿಯಾ ಪರಿಚಯಿಸಿದ ಈ ಫೋನ್, 2011ರಲ್ಲಿ ಮೀಗೋ ಹರ್ಮಟನ್ ಒಎಸ್ ಜತೆಗೆ ಬಂದಿತ್ತು.

ನೋಕಿಯಾ 808 ಪ್ಯೂರ್‌ವ್ಯೂ
ಇದು ನೋಕಿಯಾದ ಕೊನೆಯ ಸಿಂಬಿಯಾನ್ ಫೋನ್ ಮತ್ತು 41 ಮೆಗಾಪಿಕ್ಸೆಲ್ ಕ್ಯಾಮೆರಾ ಜತೆಗೆ ನೋಕಿಯಾದ ಮೈಲಿಗಲ್ಲು ಕೂಡ ಆಗಿದೆ.

ನೋಕಿಯಾ ಲುಮಿಯಾ 800
ಆಧುನಿಕ ಫೋನ್. 2011ರ ನವೆಂಬರ್‌ನಲ್ಲಿ ಲುಮಿಯಾ 800 ಬಿಡುಗಡೆಯಾಯಿತು. ನೋಕಿಯಾ ಲುಮಿಯಾ ಬದಲಾಗಿ ಈಗ ಮೈಕ್ರೋಸಾಫ್ಟ್ ಲುಮಿಯಾ ಎಂಬ ಹೆಸರಿನಿಂದ ಮಾರುಕಟ್ಟೆಯಲ್ಲಿದೆ.
* ನೆಟ್ಟಿಗ

LEAVE A REPLY

Please enter your comment!
Please enter your name here