ವಿಜಯ ಕರ್ನಾಟಕ ಅಂಕಣ, ಸೆಪ್ಟೆಂಬರ್ 23, 2013 ಮಾಹಿತಿ @ ತಂತ್ರಜ್ಞಾನ.
ಒಂದು ವರದಿಯ ಪ್ರಕಾರ, ಟ್ಯಾಬ್ಲೆಟ್ ಮತ್ತು ಲ್ಯಾಪ್‌ಟಾಪ್ ಕಂಪ್ಯೂಟರುಗಳನ್ನು ಫ್ಯಾಬ್ಲೆಟ್ ಹಿಂದಿಕ್ಕಿದೆ. ಹಾಗಿದ್ದರೆ, ಬೇಸಿಕ್ ಫೋನ್, ಸ್ಮಾರ್ಟ್‌ಫೋನ್, ಫ್ಯಾಬ್ಲೆಟ್, ಟ್ಯಾಬ್ಲೆಟ್ ಎಂದರೇನು ಎಂಬುದು ಹಲವರ ಕುತೂಹಲ. ಈ ಕುರಿತು ಸ್ಥೂಲವಾಗಿ ತಿಳಿದುಕೊಳ್ಳೋಣ.
ಬೇಸಿಕ್ ಫೋನ್: ಇವು ಹೆಚ್ಚಿನವರು ಬಳಸುತ್ತಿರುವ ಮೊಬೈಲ್ ಫೋನ್‌ಗಳು. ಕರೆ, ಎಸ್ಎಂಎಸ್ ಮತ್ತು ಎಫ್ಎಂ ರೇಡಿಯೋ, ಕ್ಯಾಲ್ಕುಲೇಟರ್ ಮುಂತಾದ ಮೂಲಭೂತ ಅನುಕೂಲಗಳು ಇದರಲ್ಲಿರುತ್ತವೆ. ಕೆಲವು ಹ್ಯಾಂಡ್‌ಸೆಟ್‌ಗಳಲ್ಲಿ ಪುಟ್ಟ ಕ್ಯಾಮರಾ, ಟಾರ್ಚ್ ಲೈಟ್, ಇನ್ನು ಕೆಲವಲ್ಲಿ ಎರಡು ಸಿಮ್ ಕಾರ್ಡ್ ವ್ಯವಸ್ಥೆಯೂ ಇರಬಹುದು. ಬ್ಯಾಟರಿ ಚಾರ್ಜ್‌ನಲ್ಲಿ ಇವುಗಳನ್ನು ಮೀರಿಸುವುದು ಕೆಳಗೆ ಹೇಳಿದ ಯಾವುದೇ ಗ್ಯಾಜೆಟ್‌ಗಳಿಗೆ ಅಸಾಧ್ಯ. ಬೆಲೆ ತೀರಾ ಕಡಿಮೆ, 700 ರೂಪಾಯಿಯಿಂದ ಆರಂಭವಾಗುತ್ತವೆ.
ಸ್ಮಾರ್ಟ್‌ಫೋನ್: ಕಳೆದೆರಡು ವರ್ಷಗಳಲ್ಲಿ ಹೆಚ್ಚು ಸದ್ದು ಮಾಡಿದ್ದು ಸ್ಮಾರ್ಟ್‌ಫೋನ್‌ಗಳು. ಇಂಟರ್ನೆಟ್ ಸಂಪರ್ಕಿಸಬಹುದಾದ, ನಾಲ್ಕೈದು ಇಂಚಿಗಿಂತ ಕಡಿಮೆ ವಿಶಾಲವಾಗಿರುವ ಟಚ್ ಸ್ಕ್ರೀನ್ ಇರುವ (ಕೈಯಲ್ಲೇ ಸ್ಪರ್ಶಿಸುವ ಮೂಲಕ ಕಾರ್ಯಾಚರಿಸಬಹುದಾದ) ಮೊಬೈಲ್ ಫೋನ್‌ಗಳಿವು. ಬೇಸಿಕ್ ಫೋನ್‌ನ ಎಲ್ಲ ಸಾಮರ್ಥ್ಯಗಳಲ್ಲದೆ, ಫೇಸ್‌ಬುಕ್, ಟ್ವಿಟರ್ ಬೆಂಬಲದೊಂದಿಗೆ, ಉತ್ತಮ ಸಾಮರ್ಥ್ಯದ ಫೋಟೋ ಕ್ಯಾಮರಾ, ವೀಡಿಯೋ ಕ್ಯಾಮರಾಗಳು ಇದರಲ್ಲಿ ಅಡಕವಾಗಿರುತ್ತವೆ. ಎರಡು ಸಿಮ್ ಕಾರ್ಡ್ ವ್ಯವಸ್ಥೆಯೂ ಇರುತ್ತದೆ. ಬೆಲೆ ಮೂರು ಸಾವಿರ ರೂ. ಆಸುಪಾಸಿನಿಂದ ಆರಂಭವಾಗುತ್ತವೆ.
ಟ್ಯಾಬ್ಲೆಟ್: ಸ್ಮಾರ್ಟ್‌ಫೋನ್ ಬಳಿಕ ಹೆಚ್ಚು ಜನಪ್ರಿಯವಾಗತೊಡಗಿದ್ದು ಟ್ಯಾಬ್ಲೆಟ್. ಸ್ಮಾರ್ಟ್‌ಫೋನ್‌ಗೂ ಟ್ಯಾಬ್ಲೆಟ್ ಕಂಪ್ಯೂಟರ್‌ಗಳಿಗೂ ಇರಬಹುದಾದ ಮೂಲಭೂತ ವ್ಯತ್ಯಾಸವೆಂದರೆ ಪರದೆಯ ಗಾತ್ರ. 7 ಇಂಚಿಗಿಂತ ಮೇಲ್ಪಟ್ಟು 10 ಇಂಚು ಒಳಗಿರುವಷ್ಟು ವಿಶಾಲವಾದ ಪರದೆಯುಳ್ಳ, ಪುಟ್ಟ ಕಂಪ್ಯೂಟರ್‌ಗಳಿವು. ಕೆಲವು ಟ್ಯಾಬ್ಲೆಟ್ ಕಂಪ್ಯೂಟರ್‌ಗಳಲ್ಲಿ ಕರೆ ಮಾಡುವ ವ್ಯವಸ್ಥೆಯೂ ಇರುತ್ತದೆ. ಇಲ್ಲವಾದಲ್ಲಿ, ಸಿಮ್ ಕಾರ್ಡ್ ಹಾಕಲು ಸಾಧ್ಯವಿಲ್ಲದ, ಕೇವಲ ವೈ-ಫೈ ಅಥವಾ ಇಂಟರ್ನೆಟ್ ಡಾಂಗಲ್‌ಗಳ (ಇಂಟರ್ನೆಟ್ ಸಂಪರ್ಕಕ್ಕೆ ಏರ್‌ಟೆಲ್, ಬಿಎಸ್ಎನ್ಎಲ್, ಟಾಟಾ ಡೊಕೊಮೊ, ರಿಲಯನ್ಸ್, ವೊಡಾಫೋನ್, ಏರ್‌ಸೆಲ್, ಐಡಿಯಾ ಮುಂತಾದ ಕಂಪನಿಗಳು ಒದಗಿಸುತ್ತಿರುವ, ಪೆನ್‌ಡ್ರೈವ್‌ನಂತಹಾ ಸಾಧನ) ಮೂಲಕ ಮಾತ್ರ ಇಂಟರ್ನೆಟ್ ಸಂಪರ್ಕಿಸುವ ಅವಕಾಶವಿರುತ್ತದೆ. ಟ್ಯಾಬ್ಲೆಟ್‌ಗಳಿಗೆ ಬಾಹ್ಯ ಕೀಬೋರ್ಡ್ ಅಳವಡಿಸಿ ಟೈಪ್ ಮಾಡುವ ಅವಕಾಶವಿದ್ದು, ಪರದೆಯೇ ವಿಶಾಲವಾಗಿರುವುದರಿಂದ ಮೇಜಿನ ಮೇಲಿಟ್ಟು ಟೈಪ್ ಮಾಡಲು ಸ್ಮಾರ್ಟ್‌ಫೋನ್‌ಗಳಿಗಿಂತ ಹೆಚ್ಚಿನ ಅನುಕೂಲವಿದೆ. ಬೆಲೆ ನಾಲ್ಕು ಸಾವಿರ ರೂಪಾಯಿಯಿಂದಲೇ ಆರಂಭವಾಗುತ್ತದೆ. ಬ್ರ್ಯಾಂಡೆಡ್ ಕಂಪನಿಯ ಟ್ಯಾಬ್ಲೆಟ್‌ಗಳ ಬೆಲೆ ಹತ್ತು ಸಾವಿರ ರೂಪಾಯಿಗಿಂತ ಮೇಲಿರುತ್ತದೆ.
ಟ್ಯಾಬ್ಲೆಟ್ ಕೊಳ್ಳುವವರು ಕೆಲವೊಮ್ಮೆ ಮೋಸ ಹೋಗುವುದೂ ಉಂಟು. ಯಾಕೆಂದರೆ, ಕಾಲಿಂಗ್ ವ್ಯವಸ್ಥೆಯುಳ್ಳ, ಅಂದರೆ ಸಿಮ್ ಕಾರ್ಡ್ ಹಾಕಲು ಅವಕಾಶವುಳ್ಳ ಟ್ಯಾಬ್ಲೆಟ್‌ಗಳಿಗೆ ಬೆಲೆ ಹೆಚ್ಚು. ಸಿಮ್ ಆಯ್ಕೆ ಇಲ್ಲದಿರುವ, ವೈಫೈ ಅಥವಾ ಡಾಂಗಲ್ ಮೂಲಕ ಮಾತ್ರ ಇಂಟರ್ನೆಟ್ ಸಂಪರ್ಕಿಸಬಹುದಾಗಿರುವ ಟ್ಯಾಬ್ಲೆಟ್‌ಗಳಿಗೆ ಬೆಲೆ ಕಡಿಮೆ. ಮಾಡೆಲ್ ಹೆಸರು ಒಂದೇ ರೀತಿಯಾಗಿದ್ದರೂ, ಮಾಡೆಲ್ ಸಂಖ್ಯೆಯಲ್ಲಿ ವ್ಯತ್ಯಾಸ ಇರುತ್ತದೆ. ಇದನ್ನು ಗಮನಿಸಬೇಕು.
ಫ್ಯಾಬ್ಲೆಟ್: ಇನ್ನು ಇತ್ತೀಚೆಗೆ ಎಲ್ಲರ ಕುತೂಹಲ ಕೆರಳಿಸಿರುವುದು ಫ್ಯಾಬ್ಲೆಟ್. ಇದು ಮೂಲತಃ ಸ್ಮಾರ್ಟ್‌ಫೋನ್ ಮತ್ತು ಟ್ಯಾಬ್ಲೆಟ್‌ಗಳ ನಡುವೆ ಇರುವ ಮೊಬೈಲ್ ಫೋನ್ (Phone + Tablet = Phablet). ಅಂದರೆ, ಸ್ಮಾರ್ಟ್‌ಫೋನ್‌ಗಳ ಹಾಗೂ ಟ್ಯಾಬ್ಲೆಟ್‌ಗಳ ಕೆಲಸದೊಂದಿಗೆ ಮುಖ್ಯವಾಗಿ ಎದ್ದುಕಾಣುವ ಗುಣವೈಶಿಷ್ಟ್ಯವೆಂದರೆ ಅದರ ಸ್ಕ್ರೀನ್ ಗಾತ್ರ. ಇದರ ಪರದೆಯು ನಾಲ್ಕೈದು ಮೇಲ್ಪಟ್ಟು, 7 ಇಂಚಿಗಿಂತ ಕಡಿಮೆ ಇರುತ್ತದೆ. ಟ್ಯಾಬ್ಲೆಟ್‌ನಂಥದ್ದೇ ಕೆಲಸ ಮಾಡುವುದರಿಂದ ಜೇಬಿನಲ್ಲಿ ಹೊತ್ತೊಯ್ಯಲು ಸುಲಭ. ದೊಡ್ಡ ಗಾತ್ರದಲ್ಲಿ ಇಂಟರ್ನೆಟ್‌ನಲ್ಲಿ ಸೈಟ್‌ಗಳನ್ನು ನೋಡಬಹುದು ಮತ್ತು ಪಿಡಿಎಫ್ ರೀಡರ್ ಮೂಲಕ ಪಿಡಿಎಫ್ ರೂಪದ ಪುಸ್ತಕಗಳನ್ನೂ ಓದಬಹುದು. ಎರಡು ಸಿಮ್ ಕಾರ್ಡ್‌ಗಳನ್ನೂ ಬಳಸಬಹುದು. ಒಂದನ್ನು ಕರೆ-ಎಸ್ಎಂಎಸ್‌ಗಳಿಗಾಗಿ ಮತ್ತೊಂದನ್ನು ಇಂಟರ್ನೆಟ್ ಸಂಪರ್ಕಕ್ಕಾಗಿ ಬಳಸಬಹುದು.
ಒಂದು ಫೋನ್ ಹಾಗೂ ಮತ್ತೊಂದು ಟ್ಯಾಬ್ಲೆಟ್ ಹೊಂದಿರುವುದು ಇತ್ತೀಚೆಗೆ ನಗರ ಪ್ರದೇಶಗಳಲ್ಲಿ ಸಾಮಾನ್ಯವಾಗುತ್ತಿದೆ. ಕಾರಣವೆಂದರೆ, ಇಂಟರ್ನೆಟ್ ಸಂಪರ್ಕಕ್ಕೆ ಬ್ಯಾಟರಿಯ ಅಗತ್ಯ ಹೆಚ್ಚಿರುತ್ತದೆ, ಬಲುಬೇಗನೇ ಪದೇ ಪದೇ ಚಾರ್ಜ್ ಮಾಡಬೇಕಾಗುತ್ತದೆ. ಹೀಗಾಗಿ ಫೋನ್ ಕರೆಗಳಿಗೆ ಸಮಸ್ಯೆಯಾಗುತ್ತದೆ. ಇದಕ್ಕಾಗಿಯೇ ಕರೆಗಳಿಗಾಗಿ ಪ್ರತ್ಯೇಕ ಬೇಸಿಕ್/ಸ್ಮಾರ್ಟ್‌ಫೋನ್, ಇಂಟರ್ನೆಟ್ ಸಂಪರ್ಕಕ್ಕೆ, ವೀಡಿಯೋ ವೀಕ್ಷಣೆಗೆ ಒಂದು ಟ್ಯಾಬ್ಲೆಟ್.
ಸದಾಕಾಲ ಎರಡನ್ನೂ ಒಯ್ಯುವುದು ಕಷ್ಟ ಎಂದುಕೊಳ್ಳುವವರು, ಫ್ಯಾಬ್ಲೆಟ್‌ಗಳ ಮೊರೆ ಹೋಗುತ್ತಿರುವುದರಿಂದಾಗಿಯೇ ಅವುಗಳ ಮಾರಾಟ ಹೆಚ್ಚಾಗಿರುವುದು. ಇಂಟರ್‌ನ್ಯಾಷನಲ್ ಡೇಟಾ ಕಾರ್ಪೊರೇಶನ್ ವರದಿ ಪ್ರಕಾರ, ಏಷ್ಯಾ ಪೆಸಿಫಿಕ್ ಪ್ರದೇಶಕ್ಕಾಗಿ 2013ರ ಎರಡನೇ ತ್ರೈಮಾಸಿಕ (ಏಪ್ರಿಲ್‌ನಿಂದ ಸೆಪ್ಟೆಂಬರ್) ಅವಧಿಯಲ್ಲಿ 2.52 ಕೋಟಿ ಫ್ಯಾಬ್ಲೆಟ್‌ಗಳು ಮಾರುಕಟ್ಟೆಗೆ ಬಂದಿದ್ದರೆ, 1.26 ಕೋಟಿ ಟ್ಯಾಬ್ಲೆಟ್‌ಗಳು ಮತ್ತು 1.27 ಕೋಟಿ ಪೋರ್ಟೆಬಲ್ ಕಂಪ್ಯೂಟರುಗಳು ರವಾನೆಯಾಗಿವೆ. ಕಳೆದ ವರ್ಷದ 2ನೇ ತ್ರೈಮಾಸಿಕ ಅವಧಿಯಲ್ಲಿ ಶೇ.5ರ ಮಾರುಕಟ್ಟೆ ಪಾಲು ಹೊಂದಿದ್ದ ಫ್ಯಾಬ್ಲೆಟ್‌ಗಳು ಈ ವರ್ಷ ಶೇ.30ಕ್ಕೆ ಜಿಗಿದಿವೆ.
ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…
ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.
ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…
Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.
ಹಾಡುಗಾರಿಕೆ, ಚೆಂಡೆ-ಮದ್ದಳೆಯ ಬಿಡಿತ-ಮುಕ್ತಾಯಗಳ ಬಳಿಕ, ಬಂದಿದ್ದ ಗಣ್ಯರು, ಒಂದೊಂದು ಹಾಡಿನಲ್ಲಿ ಅಡಕವಾಗಿರುವ ಮಂತ್ರ ಮಾಂಗಲ್ಯದ ಪ್ರತಿಜ್ಞಾಗುಚ್ಛವನ್ನು ವಿವರಿಸಿ, ವಧು-ವರರಿಗೆ ಬೋಧಿಸಿದರು
ಮುದ್ದಣನ ಕುಮಾರ ವಿಜಯದ ಸುಮಾರು 700ರಷ್ಟಿರುವ ಹಾಡುಗಳನ್ನು ಹಾಡಿದ್ದು ತೆಂಕು ತಿಟ್ಟಿನ ಬಲಿಪ ಶೈಲಿಯ ಪ್ರತಿಪಾದಕ ಭಾಗವತರೇ. ಏಳೆಂಟು ವರ್ಷಗಳ…