ಇದೇನು ಲ್ಯಾಪ್‌ಟಾಪ್? ಅಲ್ಲಲ್ಲ ವಿಂಡೋಸ್ ಟ್ಯಾಬ್ಲೆಟ್ 2-ಇನ್-1: NotionInk Cain

0
706

ವಿಜಯ ಕರ್ನಾಟಕ ಮಾಹಿತಿ@ತಂತ್ರಜ್ಞಾನ ಅಂಕಣ 101: ನವೆಂಬರ್ 10, 2014
ಲ್ಯಾಪ್‌ಟಾಪ್ ದೊಡ್ಡದಾಯಿತು, ಒಯ್ಯುವುದು ಕಷ್ಟ; ಸ್ಮಾರ್ಟ್‌ಫೋನ್ ತೀರಾ ಚಿಕ್ಕದಾಯಿತು. ಟ್ಯಾಬ್ಲೆಟ್ 0033ತೆಗೆದುಕೊಂಡರೆ, ಅದರಲ್ಲಿ ನುಡಿ, ಬರಹ ಅಲ್ಲದೆ ಯುನಿಕೋಡ್‌ನಲ್ಲಿ ಕೂಡ ನಮ್ಮ ಕನ್ನಡವನ್ನು ಪಡಿಮೂಡಿಸುವುದು ಹೇಗೆಂಬ ಚಿಂತೆ. ಇದಕ್ಕಾಗಿ ಟ್ಯಾಬ್ಲೆಟ್‌ನಷ್ಟೇ ಗಾತ್ರದ ಪುಟ್ಟ ಕಂಪ್ಯೂಟರ್ ನಮ್ಮ ಬಳಿ ಇದ್ದಿದ್ದರೆ? ಎಂದು ಯೋಚಿಸಿದ್ದೀರಾದರೆ, ಟು-ಇನ್-ಒನ್ ಸಾಧನವೊಂದು ಇಲ್ಲಿದೆ. ಬೆಂಗಳೂರಿನ ನೋಶನ್ ಇಂಕ್ ಡಿಸೈನ್ ಲ್ಯಾಬ್ಸ್, ಇಂಟೆಲ್ ಹಾಗೂ ಮೈಕ್ರೋಸಾಫ್ಟ್ ಜತೆಗೆ ಸೇರಿಕೊಂಡು ವಿನ್ಯಾಸಪಡಿಸಿರುವ ಈ ಸಾಧನದ ಹೆಸರು ಕೇಯ್ನ್ (Cain).

ಮೈಕ್ರೋಸಾಫ್ಟ್ ಮತ್ತು ನೋಶನ್ ಇಂಕ್ ಆಹ್ವಾನದ ಮೇರೆಗೆ ಈ 2-ಇನ್-1 ಸಾಧನವನ್ನು ಪ್ರಯೋಗಕ್ಕೊಳಪಡಿಸುವ ಅವಕಾಶ ವಿಜಯ ಕರ್ನಾಟಕಕ್ಕೆ ಸಿಕ್ಕಿತ್ತು. ಅದು ಹೇಗಿದೆ?

ನೋಟ: ಥಟ್ಟನೇ ನೋಡಿದರೆ, ಒಂದು ನೋಟ್ ಪುಸ್ತಕದಂತಿದೆ, ತೆರೆದರೆ ಪುಟ್ಟ ಲ್ಯಾಪ್‌ಟಾಪ್, ಟಚ್ ಸ್ಕ್ರೀನ್ ಇರುವ ಭಾಗ ಬೇರ್ಪಡಿಸಿದರೆ ಟ್ಯಾಬ್ಲೆಟ್! ಟಚ್ ಪ್ಯಾಡ್ ಇರುವ ಮ್ಯಾಗ್ನೆಟಿಕ್ ಕೀಬೋರ್ಡ್ ಪ್ರತ್ಯೇಕವಾಗಿಸಿದಾಗ ಸ್ಕ್ರೀನ್‌ನಲ್ಲೇ ಟಚ್ ಕೀಬೋರ್ಡ್ ಸಕ್ರಿಯವಾಗುತ್ತದೆ. ಇದರ ಜತೆಗೆ ವೈರ್‌ಲೆಸ್ ಮೌಸ್ ನೀಡಲಾಗಿದೆ. ಮೈಕ್ರೋಸಾಫ್ಟ್‌ನ ನವನವೀನ ವಿಂಡೋಸ್ 8.1 ಕಾರ್ಯಾಚರಣಾ ವ್ಯವಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು ಮುಂಬರುವ ವಿಂಡೋಸ್ 10ಕ್ಕೂ ಉಚಿತವಾಗಿ ಅಪ್‌ಗ್ರೇಡ್ ಆಗಲಿದೆ.

ಏನೆಲ್ಲಾ ಇದೆ
10.1 ಇಂಚಿನ ಐಪಿಎಸ್ ಎಲ್‌ಸಿಡಿ ಟಚ್ ಸ್ಕ್ರೀನ್, 1280×800 ರೆಸೊಲ್ಯುಶನ್, ಇಂಟೆಲ್ ಆಟಮ್ 1.33 ಗಿಗಾಹರ್ಟ್ಜ್ ಕ್ವಾಡ್‌ಕೋರ್ ಪ್ರೊಸೆಸರ್, 2 ಜಿಬಿ ಡಿಡಿಆರ್3 RAM, 32 ಜಿಬಿ ಆಂತರಿಕ ಮೆಮೊರಿ (ROM), 64 ಜಿಬಿ ವರೆಗೆ ವಿಸ್ತರಿಸಲು ಸಾಧ್ಯವಿರುವ ಮೆಮೊರಿ ಕಾರ್ಡ್ ಸ್ಲಾಟ್, ಯುಎಸ್‌ಬಿ 3.0 ಪೋರ್ಟ್ (3ಜಿ ಇಂಟರ್ನೆಟ್ ಡಾಂಗಲ್, ಪ್ರಿಂಟರ್ ಸಂಪರ್ಕಿಸಬಹುದು ಮತ್ತು ಬೇಕಿದ್ದರೆ ಯುಎಸ್‌ಬಿ ಕೀಬೋರ್ಡ್ ಜೋಡಿಸಿ, ದೊಡ್ಡ ಕೀಬೋರ್ಡ್‌ನಲ್ಲಿ ಟೈಪಿಂಗ್ ಮಾಡುವ ಆನಂದ ಪಡೆಯಬಹುದು), ಮಿನಿ ಹೆಚ್‌ಡಿಎಂಐ ಪೋರ್ಟ್, ಮೈಕ್ರೋ ಯುಎಸ್‌ಬಿ ಪೋರ್ಟ್ (ಚಾರ್ಜರ್, ಒಟಿಜಿ ಸಂಪರ್ಕಿಸಬಹುದು), 3.5 ಮಿಮೀ ಹೆಡ್‌ಫೋನ್ ಸಾಕೆಟ್, ಮೈಕ್, 2 ಮೆಗಾಪಿಕ್ಸೆಲ್‍ನ ಎರಡು ಕ್ಯಾಮೆರಾಗಳಿವೆ. ವೈಫೈ, ಬ್ಲೂಟೂತ್ 4.0, ಇಂಟೆಲ್ ಹೆಚ್‌ಡಿ ಗ್ರಾಫಿಕ್ಸ್, ತೂಕ 635 ಗ್ರಾಂ. ಬ್ಯಾಟರಿ ಸಾಮರ್ಥ್ಯ 7900 mAh (ಆರೇಳು ಗಂಟೆ ಕೆಲಸ ಮಾಡಬಹುದು).

ಇಮೇಲ್, ಇಂಟರ್ನೆಟ್ ಬ್ರೌಸಿಂಗ್, ಹಾಡು ಕೇಳುವುದು, ವೀಡಿಯೋ ವೀಕ್ಷಣೆ, ಸ್ಕೈಪ್ ಕರೆ ಮುಂತಾದ ದಿನ ಬಳಕೆಯ ಸಾಮಾನ್ಯ ಕಂಪ್ಯೂಟಿಂಗ್ ಕೆಲಸ ಕಾರ್ಯಗಳನ್ನು ಇದರಲ್ಲಿ ಮಾಡಿ ನೋಡಿದಾಗ, ಯಾವುದೇ ಅಡ್ಡಿಯಾಗಿಲ್ಲ. ಬೇರೆ ಆಂಡ್ರಾಯ್ಡ್ ಟ್ಯಾಬ್ಲೆಟ್ ಅಥವಾ ಐಪ್ಯಾಡ್‌ಗಿಂತ ಇದು ಹೇಗೆ ಭಿನ್ನವೆಂದರೆ, ವಿಂಡೋಸ್ ಕಂಪ್ಯೂಟರಿಗೆ ಅಳವಡಿಸಬಹುದಾದ ಯಾವುದೇ ತಂತ್ರಾಂಶವನ್ನು ಕೇಯ್ನ್‌ನಲ್ಲಿ ಅಳವಡಿಸಿಕೊಳ್ಳಬಹುದು. ಮೊಬೈಲ್‌ನಲ್ಲೇ 5 ಮೆಗಾಪಿಕ್ಸೆಲ್ ಕ್ಯಾಮೆರಾ ಲಭ್ಯವಿರುವಾಗ ಇದರ ಕ್ಯಾಮೆರಾ ರೆಸೊಲ್ಯುಶನ್ ಹೆಚ್ಚಿಸಿದ್ದರೆ, ಅಂತೆಯೇ, 32 ಜಿಬಿಗಿಂತ ಜಾಸ್ತಿ ಸ್ಟೋರೇಜ್ ಇದ್ದಿದ್ದರೆ ಉತ್ತಮ. ಅಲ್ಲದೆ, ಲ್ಯಾಪ್‌ಟಾಪ್‌ನಂತೆ ಬಳಸಲು ಕೀಬೋರ್ಡ್ ಫ್ಲ್ಯಾಪ್ ಅನ್ನು ಮಡಚಿಟ್ಟಾಗ, ಅದರ ಸ್ಕ್ರೀನ್‌ಗೆ ಹೊಂದಿಕೊಳ್ಳುವಂತೆ ನಮ್ಮ ಕುರ್ಚಿಯ ಮಟ್ಟವನ್ನು ತಗ್ಗಿಸಿಕೊಳ್ಳಬೇಕಾಗುತ್ತದೆ. ಆದರೂ ಇದು ಬೆಲೆಗೆ ತಕ್ಕ ಮೌಲ್ಯ ಅಂತ ಹೇಳಲಡ್ಡಿಯಿಲ್ಲ.

ಅಲ್ಟ್ರಾಸ್ಟಿಕ್ 3G ಅಡಾಪ್ಟರ್ ಹಾಕಲು ಸ್ಲಾಟ್ ಇರುವುದರಿಂದ, ಇಂಟರ್ನೆಟ್ ಡಾಂಗಲ್ ಬಳಸುವ ಬದಲಾಗಿ ಒಳಗೆ ಸಿಮ್ ಕಾರ್ಡ್ ಸೇರಿಸಬಹುದು. ಸ್ನ್ಯಾಪ್‌ಡೀಲ್ ಡಾಟ್ ಕಾಮ್‌ನಲ್ಲಿ ಮಾತ್ರ ಇದು ಲಭ್ಯವಿದ್ದು, ಈಗಿನ ಬೆಲೆ 19499 ರೂ; ಮೊದಲ ವರ್ಷ 1 ಟಿಬಿ ಕ್ಲೌಡ್ ಸ್ಟೋರೇಜ್ ಉಚಿತ, ಬಳಿಕ 30 ಜಿಬಿ. 1 ವರ್ಷ ಸ್ವ್ಯಾಪ್ ವಾರಂಟಿ (ಕಸ್ಟಮರ್ ಕೇರ್‌ಗೆ ಫೋನ್ ಮಾಡಿದರೆ ಅವರು ಬೇರೆ ಸಾಧನ ಕಳುಹಿಸಿ, ನಿಮ್ಮ ಸಾಧನವನ್ನು ಒಯ್ಯುತ್ತಾರೆ). ಸ್ಟೋರೇಜ್ ಕಡಿಮೆಯಾಯಿತು ಎನ್ನುವವರು 500ಜಿಬಿ ಅಥವಾ 1 ಟಿಬಿ ಬಾಹ್ಯ ಹಾರ್ಡ್ ಡ್ರೈವ್ ಅನ್ನು (ಈಗ 4- 5 ಸಾವಿರ ರೂ. ಆಸುಪಾಸು) ವೈಫೈ ಅಥವಾ ಯುಎಸ್‌ಬಿ ಮೂಲಕ ಸಂಪರ್ಕಿಸಬಹುದು.

Avinash Column-New“ಭಾರತದಲ್ಲೇ ಪರಿಕಲ್ಪನೆ, ವಿನ್ಯಾಸಗೊಳಿಸಿ, ಚೀನಾದಲ್ಲಿ ಉತ್ಪಾದಿಸಲಾಗುತ್ತಿದೆ. ಬಳಿಕ ಅದರ ಗುಣಮಟ್ಟ ಪರೀಕ್ಷೆಗೊಳಪಡಿಸಲಾಗುತ್ತದೆ. ಇದನ್ನು ಮೇಡ್ ಇನ್ ಇಂಡಿಯಾ ಅಂತ ಹೇಳಲು ಅಡ್ಡಿಯಿಲ್ಲ” ಎನ್ನುತ್ತಾರೆ ನೋಶನ್ಇಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರೋಹನ್ ಶ್ರಾವಣ್.

ಇದರ ಪ್ರತಿಸ್ಫರ್ಧಿಗಳು: ಡೆಲ್ ವೆನ್ಯೂ ಪ್ರೋ 8, ಐ-ಬಾಲ್ ಸ್ಲೈಡ್ ಡಬ್ಲ್ಯುಕ್ಯೂ149, ಅಸುಸ್ ಟ್ರಾನ್ಸ್‌ಫಾರ್ಮರ್ ಟಿ100, ಕ್ರೋಮಾ 1177.

ಟೆಕ್ ಟಾನಿಕ್: ಹೆಚ್ಚು ವಿಕಿರಣ ಸೂಸುತ್ತದೆಯೇ?
ಹೆಸರುವಾಸಿ ಬ್ರ್ಯಾಂಡ್‌ಗಳ ಸ್ಮಾರ್ಟ್‌ಫೋನ್‌ಗಳನ್ನು ಕೊಂಡರೆ ತೊಂದರೆಯಿರುವುದಿಲ್ಲ. ಆದರೆ ಸ್ಥಳೀಯ, ವಿಶೇಷವಾಗಿ ಚೈನೀಸ್, ಕೊರಿಯನ್ ಕಳಪೆ ಗುಣಮಟ್ಟದ ಫೋನ್‌ಗಳನ್ನು ಬಳಸಿದರೆ, ಇದರಿಂದ ಹೊರಸೂಸುವ ರೇಡಿಯೇಶನ್‌ಗಳು ಆರೋಗ್ಯಕ್ಕೆ ಅಪಾಯಕಾರಿ ಮತ್ತು ಕ್ಯಾನ್ಸರ್‌ಗೂ ಕಾರಣವಾಗಬಹುದು. ಅಂತಾರಾಷ್ಟ್ರೀಯ ಮಾನದಂಡದ ಪ್ರಕಾರ ಈ SAR (Specific Absorption Rate) ಮೌಲ್ಯವು 1.6 Watts/kg ಇದ್ದರೆ ಆರೋಗ್ಯಕ್ಕೆ ಅಪಾಯವಿಲ್ಲ. ಇದಕ್ಕಿಂತ ಹೆಚ್ಚಿದ್ದರೆ ತೊಂದರೆ. ನಿಮ್ಮ ಫೋನ್‌ನ ಎಸ್ಎಆರ್ ಮೌಲ್ಯವು ಮಾನದಂಡಕ್ಕೆ ಬದ್ಧವಾಗಿದೆಯೇ ಎಂದು ತಿಳಿದುಕೊಳ್ಳಬೇಕಿದ್ದರೆ, *#07# ಅಂತ ಟೈಪ್ ಮಾಡಿ ನೋಡಿ. ವಿವರಗಳ ಸಮೇತ ಮಾಹಿತಿ ದೊರೆಯುತ್ತದೆ.

LEAVE A REPLY

Please enter your comment!
Please enter your name here