Categories: Vijaya Karnataka

ಇಂಗ್ಲಿಷ್‌ಗಿಂತ ಪ್ರಾದೇಶಿಕ ಭಾಷೆಗಳ ಅಂತರ್‌‘ಜಾಲ’ ದೊಡ್ಡದು!

13-01-13ರಂದು ವಿಜಯ ಕರ್ನಾಟಕ ಮುಖಪುಟದಲ್ಲಿ ಪ್ರಕಟವಾದ ನನ್ನ ಲೇಖನ
ಬೆಂಗಳೂರು: ‘ಇಂಗ್ಲಿಷ್ ಗೊತ್ತಿರುವವರಿಗೆ ಮಾತ್ರವೇ ಇಂಟರ್ನೆಟ್’ ಎಂಬ ಮಿಥ್ಯೆಗೆ ಪ್ರತಿಯಾಗಿ, ಗ್ರಾಮಾಂತರ ಪ್ರದೇಶವಾಸಿಗಳೂ ಅಂತರ್ಜಾಲವನ್ನು ಹೆಚ್ಚು ಹೆಚ್ಚು ಜಾಲಾಡತೊಡಗುತ್ತಿದ್ದಾರೆ. ಗ್ರಾಮಾಂತರ ಪ್ರದೇಶಗಳಲ್ಲಿ ಇಂಟರ್ನೆಟ್ ಬಳಕೆ ಹೆಚ್ಚಾಗುತ್ತಿರುವ ಕುರಿತು ಭಾರತೀಯ ಇಂಟರ್ನೆಟ್ ಮತ್ತು ಮೊಬೈಲ್ ಒಕ್ಕೂಟ (ಐಎಎಂಎಐ) ಬಿಡುಗಡೆಗೊಳಿಸಿದ ವರದಿಯು ಬೆಳಕು ಚೆಲ್ಲಿದೆ.

ಇಂಗ್ಲಿಷ್ ತಿಳಿವಳಿಕೆ ಕಡಿಮೆ ಇರುವುದರಿಂದಾಗಿ, ಪ್ರಾದೇಶಿಕ ಭಾಷೆಗಳ ವೆಬ್ ಸೈಟ್ ವೀಕ್ಷಿಸುವವರ ಸಂಖ್ಯೆ ವೃದ್ಧಿಯ ವೇಗವು ನಗರ ಪ್ರದೇಶಕ್ಕಿಂತಲೂ ಗ್ರಾಮಾಂತರ ಭಾರತದಲ್ಲಿ ಹೆಚ್ಚಾಗುತ್ತಿದೆ ಎಂದಿದೆ ಈ ವರದಿ. ಇದು ಭಾಷಾ ವೆಬ್‌ಸೈಟ್‌ಗಳಿಗೆ ಶುಭ ಸುದ್ದಿಯಾದರೆ, ಆದಷ್ಟು ಶೀಘ್ರದಲ್ಲೇ ಎಲ್ಲ ಅಂತರಜಾಲ ಆಧಾರಿತ ಸೇವೆಗಳನ್ನು ಆಯಾ ಭಾಷೆಗಳಲ್ಲೇ ನೀಡುವಂತಾಗಲು ಸರಕಾರಕ್ಕೊಂದು ಎಚ್ಚರಿಕೆಯ ಕರೆಗಂಟೆ.

ಐಎಎಂಎಐ ಈ ವಾರಾರಂಭದಲ್ಲಿ ಬಿಡುಗಡೆಗೊಳಿಸಿದ ‘ಪ್ರಾದೇಶಿಕ ಭಾಷಾ ವರದಿ- 2012’ ಅನುಸಾರ, ನಮ್ಮ ಕನ್ನಡದಲ್ಲೇ (ನಮ್ಮ ಭಾಷೆಯಲ್ಲೇ) ಇಂಟರ್ನೆಟ್ ಸೌಲಭ್ಯಗಳು ದೊರೆಯುತ್ತವೆ ಎಂಬ ಅರಿವು ನಗರ ಪ್ರದೇಶದ ನಾಗರಿಕರಿಗಿಂತಲೂ ಗ್ರಾಮಾಂತರ ವಾಸಿಗಳಲ್ಲಿ ಹೆಚ್ಚಿದೆ.

‘ಇಂಟರ್ನೆಟ್ ಜಾಲಾಡಬೇಕಿದ್ದರೆ ಇಂಗ್ಲಿಷ್ ತಿಳಿದಿರಬೇಕು, ಮಾತೃ ಭಾಷೆಯಲ್ಲಿ ಏನೂ ಸಿಗುವುದಿಲ್ಲ’ ಎಂಬ ತಪ್ಪು ನಂಬಿಕೆಗಳನ್ನು ಹೋಗಲಾಡಿಸಿ, ಸೂಕ್ತ ಮೂಲಸೌಕರ್ಯ ಮತ್ತು ಒಂದಿಷ್ಟು ಜಾಗೃತಿ ಮೂಡಿಸಿದಲ್ಲಿ ಈ ಮಾಹಿತಿ ತಂತ್ರಜ್ಞಾನ ಲೋಕವು ಮತ್ತಷ್ಟು ವ್ಯಾಪಕವಾಗಿ ವಿಸ್ತಾರವಾಗಲಿದೆ ಎಂಬ ಅಂಶವು ಈ ಸಮೀಕ್ಷಾ ವರದಿಯಿಂದ ವ್ಯಕ್ತವಾಗಿದೆ.

2006ರ ರಾಷ್ಟ್ರೀಯ ಓದುಗರ ಸಮೀಕ್ಷೆ (ಎನ್‌ಆರ್‌ಎಸ್)ಯಿಂದ ತಿಳಿದುಬಂದ ಅಂಶದ ಪ್ರಕಾರ, ಭಾರತದಲ್ಲಿ ಕೇವಲ ಶೇ.18.2 ಮಂದಿ ಇಂಗ್ಲಿಷ್-ಬಲ್ಲವರು. ಅದರಲ್ಲಿ ಶೇ.34 ನಗರದವರು, ಶೇ.11 ಮಾತ್ರ ಗ್ರಾಮೀಣ ಭಾಗದವರು. ಹೀಗಾಗಿ ಈ ಇಂಗ್ಲಿಷ್ ಗುಮ್ಮನಿಂದಾಗಿಯೂ ಗ್ರಾಮೀಣ ಭಾಗದವರು ತಮ್ಮ ಮಾತೃಭಾಷೆಯಲ್ಲೇ ಇಂಟರ್ನೆಟ್ ಬಳಸಲು ಇಚ್ಛಿಸುತ್ತಾರೆ.

ಇಂಟರ್ನೆಟ್‌ನಲ್ಲಿ ಏನು ಇಷ್ಟ?
ಗರಿಷ್ಠ ಪ್ರಮಾಣದಲ್ಲಿ ಆಯಾ ಭಾಷೆಯಲ್ಲಿ ಇಂಟರ್ನೆಟ್ ಬಳಸುತ್ತಿರುವುದು ಇಮೇಲ್, ಸರ್ಚ್ ಎಂಜಿನ್, ಸುದ್ದಿ, ಚಾಟಿಂಗ್… ಇತ್ಯಾದಿಗಳಿಗಾಗಿ. ಇದಲ್ಲದೆ ಉದ್ಯೋಗ ಹುಡುಕಾಟ, ರೈಲು ಟಿಕೆಟ್ ಬುಕಿಂಗ್, ವೈವಾಹಿಕ ಸೇವೆಗಳು ಮತ್ತು ಆನ್‌ಲೈನ್ ಬ್ಯಾಂಕಿಂಗ್ ವಿಭಾಗದಲ್ಲಿಯೂ ಸಾಕಷ್ಟು ಪ್ರಗತಿಯ ಅವಕಾಶಗಳಿವೆ. ಇವುಗಳೆಲ್ಲ ಸ್ಥಳೀಯ ಭಾಷೆಯಲ್ಲಿ ಲಭ್ಯವಾದಲ್ಲಿ ಹೆಚ್ಚು ಹೆಚ್ಚು ಅಂತರ್ಜಾಲ ಬಳಸುವುದಾಗಿ 35 ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಭಾಗವಹಿಸಿದವರು ಹೇಳಿದ್ದಾರೆ.

ಇನ್ನು ಗ್ರಾಮಾಂತರ ಬಳಕೆದಾರರನ್ನು ಪರಿಗಣಿಸಿದರೆ, ಅವರು ಮೇಲಿನವುಗಳೆಲ್ಲವನ್ನೂ ತಮ್ಮ ಭಾಷೆಯಲ್ಲೇ ನೋಡಬಯಸುತ್ತಿದ್ದು, ಅಂತರಜಾಲದಲ್ಲಿ ಹೆಚ್ಚಾಗಿ ಸರಕಾರಿ ಸೇವೆಗಳು, ಕೃಷಿ, ಜಮೀನಿನ ದಾಖಲೆ, ರೈತರಿಗೆ ನೆರವಾಗುವ ಮಾಹಿತಿ ಇತ್ಯಾದಿಗಳಿಗಾಗಿಯೇ ಅವರ ಮನಸ್ಸು ತುಡಿಯುತ್ತದೆ.

ಪ್ರಾದೇಶಿಕ ಭಾಷೆಗಳ ಪಾರಮ್ಯ
ಒಟ್ಟು 4.5 ಕೋಟಿ ಮಂದಿ ಭಾರತೀಯ ಇಂಟರ್ನೆಟ್ ಬಳಕೆದಾರರು ತಮ್ಮದೇ ಭಾಷೆಗಳಲ್ಲಿ ಇಂಟರ್ನೆಟ್ ವಿಷಯವನ್ನು ನೋಡುತ್ತಾರೆ. ಗ್ರಾಮಾಂತರ ಭಾಗದಲ್ಲಿ ಇಂಟರ್ನೆಟ್ ಬಳಸುತ್ತಿರುವ 3.8 ಕೋಟಿಯಲ್ಲಿ ಶೇ.64ರಷ್ಟು ಮಂದಿ (2.43 ಕೋಟಿ) ತಮ್ಮ ಭಾಷೆಯಲ್ಲೇ ಅಂತರಜಾಲದಲ್ಲಿ ವ್ಯವಹರಿಸುತ್ತಾರೆ. ನಗರ ಪ್ರದೇಶದಲ್ಲಿ ಇದರ ಪ್ರಮಾಣ ಶೇ.25 ಮಾತ್ರ. ಅಂದರೆ, ನಗರ ಭಾಗದಲ್ಲಿ ಇಂಟರ್ನೆಟ್ ಬಳಸುವ ಒಟ್ಟು 8.4 ಕೋಟಿಯಲ್ಲಿ 2.09 ಕೋಟಿ ಮಂದಿ ಮಾತ್ರವೇ ತಮ್ಮ ಭಾಷೆಯ ವೆಬ್ ಸೈಟುಗಳನ್ನು ಸಂದರ್ಶಿಸುತ್ತಾರೆ.

ಕನ್ನಡವೂ ಬೆಳೆದಿದೆ
ಕನ್ನಡದ ಮಟ್ಟಿಗೆ ಹೇಳುವುದಾದರೆ, ಇಂಟರ್ನೆಟ್‌ನಲ್ಲಿ ಕನ್ನಡ ಓದಲು ಮತ್ತು ಬರೆಯಲು ಹಿಂದೆ ತಾಂತ್ರಿಕ ಸಮಸ್ಯೆಯಿತ್ತು. ಯುನಿಕೋಡ್ ಎಂಬ ಸಾರ್ವತ್ರಿಕ ವ್ಯವಸ್ಥೆಯೊಂದು ಓದುವ ಸಮಸ್ಯೆಯಂತೂ ಬಹುತೇಕ ನಿವಾರಣೆಯಾಗಿದೆ ಎನ್ನಬಹುದು.

ಕನ್ನಡ ಬರವಣಿಗೆಗೆ ಕೂಡ ಸಾಕಷ್ಟು ಟೂಲ್‌ಗಳು ಆನ್‌ಲೈನ್‌ನಲ್ಲಿ (ಮೊಬೈಲ್‌ಗೆ ಮತ್ತು ಕಂಪ್ಯೂಟರ್‌ಗೆ) ದೊರೆಯುತ್ತಿರುವುದರಿಂದ ಬರವಣಿಗೆ ಸಮಸ್ಯೆಯೂ ನಿಧಾನವಾಗಿ ಮರೆಯಾಗುತ್ತಿದೆ.

ಇತ್ತೀಚೆಗೆ ಕರ್ನಾಟಕ ಸರಕಾರ ಯುನಿಕೋಡ್ ಶಿಷ್ಟತೆಗೆ ಮನ್ನಣೆ ನೀಡಿರುವುದರಿಂದ, ಎಲ್ಲ ಸರಕಾರಿ ಅಂತರಜಾಲ ತಾಣಗಳು ಇನ್ನು ಯುನಿಕೋಡ್‌ನಲ್ಲೇ ಓದಲು-ಬರೆಯಲು ಲಭ್ಯವಾಗಲಿವೆ. ಇದರಿಂದ ಗ್ರಾಮೀಣ ಭಾಗದಲ್ಲಿ ಇಂಟರ್ನೆಟ್ ಬಳಕೆ ಮತ್ತಷ್ಟು ಹೆಚ್ಚಾಗಲಿದೆ.

ಇದರೊಂದಿಗೆ ಮುಂದಿನ ದಿನಗಳಲ್ಲಿ ಪ್ರಾದೇಶಿಕ ಭಾಷೆಯ ವಿಷಯಗಳು ಭರಪೂರ ಲಭ್ಯವಾಗುತ್ತವಷ್ಟೇ ಅಲ್ಲದೆ, ಹೆಚ್ಚು ಹೆಚ್ಚು ಜನರು ತಮ್ಮದೇ ವಿಷಯಗಳನ್ನು ಅಪ್‌ಲೋಡ್ ಮಾಡುವಲ್ಲಿಯೂ ತೊಡಗುತ್ತಾರೆ.

ಸಾಧ್ಯತೆಗಳು ಸಾಕಷ್ಟಿವೆ
ಡಿಜಿಟಲ್ ಜಗತ್ತಿನ ದೈತ್ಯ, ಅಗ್ರ ಸರ್ಚ್ ಎಂಜಿನ್ ‘ಗೂಗಲ್’ ಕಂಪನಿಯೇ ಇತ್ತೀಚೆಗೆ ‘ಭಾರತದಲ್ಲಿ ಇಂಗ್ಲಿಷಿನಲ್ಲಿ ಅಂತರಜಾಲ ತಾಣವನ್ನು ಜಾಲಾಡುವವರ ಸಂಖ್ಯೆ 15 ಕೋಟಿಯ ಗಡಿರೇಖೆಯನ್ನು ದಾಟುವುದಿಲ್ಲ’ ಎಂದು ಹೇಳಿತ್ತು.

ಮುಂದೆ 30ರಿಂದ 40 ಕೋಟಿ ಮಂದಿ ಆನ್‌ಲೈನ್‌ಗೆ ಬರಲಿದ್ದಾರೆ, ಅವರೆಲ್ಲರೂ ಸ್ಥಳೀಯ ಭಾಷೆಗಳಲ್ಲೇ ಅಂತರಜಾಲ ಜಾಲಾಡುವವರಾಗಿರುತ್ತಾರೆ ಅಂತ ಗೂಗಲ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ರಾಜನ್ ಆನಂದನ್ ಅವರು ಹೈದರಾಬಾದ್‌ನಲ್ಲಿ ಕಳೆದ ನವೆಂಬರ್ ತಿಂಗಳಲ್ಲಿ ನಡೆದ ವಿಚಾರ ಸಂಕಿರಣವೊಂದರಲ್ಲಿ ಹೇಳಿದ್ದರು.

ಹೀಗಾಗಿ ಇಂಟರ್ನೆಟ್ ಎಂಬುದು ಇಂಗ್ಲಿಷೇತರ ಜನ ಸಾಮಾನ್ಯರನ್ನು ತಲುಪಬೇಕಿದ್ದರೆ, ಹೆಚ್ಚು ಹೆಚ್ಚು ವಿಷಯಗಳು ಪ್ರಾದೇಶಿಕ ಭಾಷೆಗಳಲ್ಲಿ ಲಭ್ಯವಾಗಬೇಕಾಗುತ್ತದೆ.

ಗ್ರಾಮೀಣ ಭಾರತದಲ್ಲೇ ಇಂಟರ್ನೆಟ್ ಪ್ರಗತಿಯ ವೇಗ ಹೆಚ್ಚು
ವರದಿಯಲ್ಲಿ 2012ರ ಡಿಸೆಂಬರ್‌ನಲ್ಲಿ ಕಲೆಹಾಕಿದ ಅಂಕಿ ಅಂಶದ ಪ್ರಕಾರ, ನಗರ ಭಾರತದಲ್ಲಿ 10.50 ಕೋಟಿ ಮತ್ತು ಗ್ರಾಮೀಣ ಭಾರತದಲ್ಲಿ 4.50 ಕೋಟಿ ಇಂಟರ್ನೆಟ್ ಬಳಕೆದಾರರಿದ್ದಾರೆ. ಇಂಟರ್ನೆಟ್ ಬಳಕೆಯು ನಗರ ಪ್ರದೇಶದಲ್ಲಿ ಶೇ.7ರ ವೇಗದಲ್ಲಿಯೂ, ಗ್ರಾಮಾಂತರ ಭಾರತದಲ್ಲಿ ಶೇ.31ರ ವೇಗದಲ್ಲಿಯೂ ಬೆಳೆಯುತ್ತಿದೆ.

ಮಾತೃಭಾಷೆಯಲ್ಲೇ ಆನ್‌ಲೈನ್‌ನಲ್ಲಿ ವ್ಯವಹರಿಸಲು ಜನರು ತುಡಿಯುತ್ತಿದ್ದಾರೆ ಎಂದರೆ, ಇಲ್ಲಿ ಭಾಷಾ ವಿಷಯಕ್ಕೆ ಸಾಕಷ್ಟು ಅವಕಾಶಗಳಿವೆ ಅಂತಲೇ ಅರ್ಥ. ಈ ನಿಟ್ಟಿನಲ್ಲಿ ಸರಕಾರವು ಪ್ರಮುಖವಾಗಿ ಮೂರು ಅಂಶಗಳನ್ನು ಪರಿಗಣಿಸಬೇಕಿದೆ – ಮೊದಲು ತನ್ನೆಲ್ಲಾ ಇಲಾಖೆಗಳ ವೆಬ್ ತಾಣಗಳನ್ನು ಕನ್ನಡದಲ್ಲೇ ಇರುವಂತೆ ನೋಡಿಕೊಳ್ಳುವುದು, ಮೂಲಸೌಕರ್ಯ ಒದಗಿಸುವುದು, ಇಂಟರ್ನೆಟ್ ಅಗತ್ಯವಿಲ್ಲ ಎಂಬ ಜನರ ಭಾವನೆಯನ್ನು ಹೋಗಲಾಡಿಸುವುದು ಮತ್ತು ಇಂಟರ್ನೆಟ್ ಎಂದರೇನೆಂದೇ ಗೊತ್ತಿಲ್ಲದವರಿಗೂ ಅರಿವು ಮೂಡಿಸುವುದು.

Avinash B

Avinash B. Tech Writer, Columnist, Working as Online media Journalist for more than two decades. Passionate about Technology and Gadgets. Yakshagana and Music are passion.

Recent Posts

ಓದುವಿಕೆ, ಕಲಿಕೆ ಉತ್ತೇಜನಕ್ಕೆ ‘ರೀಡ್-ಅ-ಥಾನ್’: ದಾಖಲೆಯ ಗುರಿ

ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.

5 days ago

Realme 13 +, Realme 13 5ಜಿ ಫೋನ್ ಬಿಡುಗಡೆ: ವೇಗದ ಫೋನ್‌ನ ವೈಶಿಷ್ಟ್ಯಗಳು, ಬೆಲೆ ಇಲ್ಲಿ ತಿಳಿಯಿರಿ

ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…

2 weeks ago

e-ಯುಗದ ತನಿಖಾ ಪತ್ರಿಕೋದ್ಯಮ: ಫ್ಯಾಕ್ಟ್ ಚೆಕ್

Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.

2 months ago

ಯಕ್ಷ ಮಂತ್ರ ಮಾಂಗಲ್ಯ: ಕೀರ್ತನಾ ಪ್ರಸಾದ ಕಲ್ಯಾಣವು

ಹಾಡುಗಾರಿಕೆ, ಚೆಂಡೆ-ಮದ್ದಳೆಯ ಬಿಡಿತ-ಮುಕ್ತಾಯಗಳ ಬಳಿಕ, ಬಂದಿದ್ದ ಗಣ್ಯರು, ಒಂದೊಂದು ಹಾಡಿನಲ್ಲಿ ಅಡಕವಾಗಿರುವ ಮಂತ್ರ ಮಾಂಗಲ್ಯದ ಪ್ರತಿಜ್ಞಾಗುಚ್ಛವನ್ನು ವಿವರಿಸಿ, ವಧು-ವರರಿಗೆ ಬೋಧಿಸಿದರು

7 months ago

ಮುದ್ದಣನ ಕುಮಾರ ವಿಜಯ, ರತ್ನಾವತಿ ಕಲ್ಯಾಣ ಯಕ್ಷಗಾನ ಧ್ವನಿಮುದ್ರಿಕೆ

ಮುದ್ದಣನ ಕುಮಾರ ವಿಜಯದ ಸುಮಾರು 700ರಷ್ಟಿರುವ ಹಾಡುಗಳನ್ನು ಹಾಡಿದ್ದು ತೆಂಕು ತಿಟ್ಟಿನ ಬಲಿಪ ಶೈಲಿಯ ಪ್ರತಿಪಾದಕ ಭಾಗವತರೇ. ಏಳೆಂಟು ವರ್ಷಗಳ…

7 months ago

ಒಂದೇ ಫೋನ್‌ನಲ್ಲಿ ಎರಡು WhatsApp ಖಾತೆ ಬಳಸುವುದು ಹೇಗೆ?

ಕಳೆದ ಅಕ್ಟೋಬರ್ 19ರಂದು ಮೆಟಾ ಒಡೆತನದ WhatsApp ಸಂಸ್ಥೆಯೇ ತನ್ನ ಆ್ಯಪ್‌ಗೆ ಹೊಸ ಅಪ್‌ಡೇಟ್ ನೀಡಿದ್ದು, ಎರಡು ವಾಟ್ಸ್ಆ್ಯಪ್ ಖಾತೆಗಳನ್ನು…

9 months ago