ಕಂಪ್ಯೂಟರ್ ಸ್ಲೋ ಆಗೋದನ್ನು ತಪ್ಪಿಸಲು, ಫೈಲ್ ಸುರಕ್ಷಿತವಾಗಿಡಲು ಹೀಗೆ ಮಾಡಿ

ಜನಸಾಮಾನ್ಯರಿಗಾಗಿ ಮಾಹಿತಿ @ ತಂತ್ರಜ್ಞಾನ: ವಿಜಯ ಕರ್ನಾಟಕ ಅಂಕಣ – 41 – ಜುಲೈ 1, 2013

ನಿಮ್ಮ ಕಂಪ್ಯೂಟರನ್ನು ನಂಬುವಷ್ಟು ಬೇರಾವುದನ್ನೂ ನೀವು ನಂಬಲಾರಿರಿ. ಆತ್ಮೀಯ ಕ್ಷಣಗಳ ಚಿತ್ರಗಳು, ವೀಡಿಯೋಗಳು, ಪ್ರೀತಿಯ ಹಾಡುಗಳು, ಮಹತ್ವದ ಡಾಕ್ಯುಮೆಂಟುಗಳು… ಎಲ್ಲವನ್ನೂ ಅದರಲ್ಲಿ ಧೈರ್ಯವಾಗಿಯೇ ಸೇವ್ ಮಾಡಿರುತ್ತೀರಿ. ಆದರೆ ಅದೊಂದು ದಿನ, ದಿಢೀರ್ ಆಗಿ ಕಂಪ್ಯೂಟರ್ ಸ್ಲೋ ಆಗಿಬಿಡುತ್ತದೆ, ಅಥವಾ ವಿನಾಕಾರಣ ಕೈಕೊಡುತ್ತದೆ, ವೈರಸ್ ಬಾಧೆಯಿಂದಾಗಿ ಕಂಪ್ಯೂಟರ್ ಆನ್ ಆಗೋದೇ ಇಲ್ಲ ಅಂದುಕೊಳ್ಳಿ. ಕಷ್ಟಪಟ್ಟು ಸಂಪಾದಿಸಿದ್ದ ಆ ಫೈಲುಗಳ ರಕ್ಷಣೆ ಹೇಗೆ ಅಂತೇನಾದರೂ ಯೋಚಿಸಿದ್ದೀರಾ?

ಕೆಲವರ ಡೆಸ್ಕ್‌ಟಾಪ್/ಲ್ಯಾಪ್‌ಟಾಪ್ ಕಂಪ್ಯೂಟರುಗಳನ್ನು ನೋಡಿದ್ದೇನೆ. ರಾಶಿ ರಾಶಿ ಫೈಲುಗಳು ಡೆಸ್ಕ್‌ಟಾಪ್ (ಕಂಪ್ಯೂಟರ್ ಆನ್ ಆದಾಗ ಮಾನಿಟರ್‌ನಲ್ಲಿ ಮೊದಲು ನಮಗೆ ಕಾಣಿಸುವ ಸ್ಥಳ) ಇಡೀ ಆವರಿಸಿಕೊಂಡಿರುತ್ತವೆ! ಮತ್ತು ಇಂಥವರು ‘ನನ್ನ ಕಂಪ್ಯೂಟರ್ ಸ್ಲೋ ಆಗಿದೆ, ಒಂದು ಫೈಲ್ ಕ್ಲಿಕ್ ಮಾಡಿದರೆ, ಓಪನ್ ಆಗಲು ಐದಾರು ನಿಮಿಷಗಳೇ ಬೇಕು’ ಅಂತೆಲ್ಲಾ ದೂರುವುದನ್ನೂ ಕೇಳಿದ್ದೇನೆ.

ಕಂಪ್ಯೂಟರ್ ಕಾರ್ಯನಿರ್ವಹಣೆ ಸ್ಲೋ ಆಗದಂತಿರಲು ಹಾಗೂ ಕಂಪ್ಯೂಟರ್ ಬಳಕೆಯ ಮೂಲಭೂತ ರೂಲ್‌ಗಳಲ್ಲೊಂದು ಎಂದರೆ, ಯಾವುದೇ ಫೈಲ್‌ಗಳನ್ನು ‘ಸಿ’ ಡ್ರೈವ್‌ನಲ್ಲಿ ಸೇವ್ ಮಾಡಬಾರದು.

ಕಂಪ್ಯೂಟರಿನ ಹಾರ್ಡ್ ಡಿಸ್ಕ್‌ನಲ್ಲಿ ಲಭ್ಯವಿರುವ ಸ್ಥಳಾವಕಾಶವನ್ನು (ಸ್ಟೋರೇಜ್) ಹಲವಾರು ಡ್ರೈವ್‌ಗಳಾಗಿ (ಸಿ, ಡಿ ಇತ್ಯಾದಿ) ವಿಭಾಗಿಸಲಾಗುತ್ತದೆ (ಪಾರ್ಟಿಷನ್). ಅವುಗಳಲ್ಲಿ, ಡ್ರೈವ್ ‘ಸಿ’ ಎಂಬುದು ನಮ್ಮ ಕಾರ್ಯಾಚರಣಾ ತಂತ್ರಾಂಶ (ಓಎಸ್) ಸೇರಿದಂತೆ ಎಲ್ಲ ಪ್ರೋಗ್ರಾಂಗಳು, ಅಪ್ಲಿಕೇಶನ್‌ಗಳ ಮೂಲಾಧಾರ. ಅದನ್ನು ‘ಸ್ವಚ್ಛ’ವಾಗಿ ಇರಿಸಿಕೊಂಡರೆ ಕಂಪ್ಯೂಟರಿನ ವೇಗಕ್ಕೆ ಯಾವುದೇ ತೊಂದರೆಯಾಗುವುದಿಲ್ಲ.

ಈ ನಿಟ್ಟಿನಲ್ಲಿ ನೀವು ಮಾಡಬೇಕಾದ ಮೊದಲ ಕಾರ್ಯವೆಂದರೆ, ಸಿಕ್ಕಸಿಕ್ಕಲ್ಲಿ ಸೇವ್ ಮಾಡುವ ಅಭ್ಯಾಸವನ್ನು ಬಿಟ್ಟುಬಿಡಬೇಕು. ಡೆಸ್ಕ್‌ಟಾಪ್, ಮೈ ಡಾಕ್ಯುಮೆಂಟ್ಸ್, ಮೈ ಪಿಕ್ಚರ್ಸ್, ಮೈ ಮ್ಯೂಸಿಕ್, ಮೈ ವೀಡಿಯೋ …ಮುಂತಾಗಿ ಡೀಫಾಲ್ಟ್ ಆಗಿ ಸೇವ್ ಆಗುವ ಸ್ಥಳಗಳೆಲ್ಲವೂ ಇರುವುದು ಸಿ ಡ್ರೈವ್‌ನಲ್ಲೇ ಎಂಬುದು ನೆನಪಿನಲ್ಲಿರಲಿ.

ಕಂಪ್ಯೂಟರಿಗೇನಾದರೂ ಹಾನಿಯಾದರೆ (ಕರಪ್ಟ್ ಆದರೆ) ಅಥವಾ ವೈರಸ್ ದಾಳಿಯಾದರೆ, ಮೊದಲು ಬಲಿಯಾಗುವುದು ಸಿ ಡ್ರೈವ್. ಅದರಲ್ಲಿರುವ ಚಿತ್ರ, ಹಾಡು, ಡಾಕ್ಯುಮೆಂಟ್ ಮತ್ತಿತರ ಫೈಲುಗಳೆಲ್ಲವೂ ಮರಳಿ ದೊರೆಯದಷ್ಟು ಹಾನಿಗೀಡಾಗಬಹುದು. ಆದರೆ, ಬೇರೆ ಡ್ರೈವ್‌ಗಳಲ್ಲಿ (ಉದಾಹರಣೆಗೆ ಡಿ ಅಥವಾ ಇ) ಸೇವ್ ಆಗಿರುವವು ಸುರಕ್ಷಿತವಾಗಿರುತ್ತವೆ. ಇದಕ್ಕಾಗಿಯೇ ಸಿ ಡ್ರೈವ್‌ನಲ್ಲಿ ಏನೂ ಇಡಬಾರದು, ಎಲ್ಲವನ್ನೂ ಬೇರೆ ಡ್ರೈವ್‌ನಲ್ಲಿ ನಿರ್ದಿಷ್ಟ ಫೋಲ್ಡರ್‌ಗಳನ್ನು ರಚಿಸಿಕೊಂಡು ಸೇವ್ ಮಾಡಿಕೊಳ್ಳಬೇಕು. ಅನಿವಾರ್ಯವೆಂದಾದರೆ ಮಾತ್ರ, ಡೆಸ್ಕ್‌ಟಾಪ್‌ನಲ್ಲಿ ತಾತ್ಕಾಲಿಕವಾಗಿ ಸೇವ್ ಮಾಡಿಕೊಂಡು, ಕೆಲಸ ಪೂರ್ಣಗೊಳಿಸಿದ ಬಳಿಕ ಅದನ್ನು ಬೇರೆ ಡ್ರೈವ್‌ಗೆ ವರ್ಗಾಯಿಸುವುದು ಒಳಿತು.

ಕಂಪ್ಯೂಟರ್ ಕೆಟ್ಟಾಗ ಅದನ್ನು ‘ಫಾರ್ಮ್ಯಾಟ್ ಮಾಡಬೇಕು’ ಅಂತ ಹೇಳೋದನ್ನು ಕೇಳಿದ್ದೀರಿ. ಇದನ್ನು ಸರಳವಾಗಿ ಹೇಳುವುದಾದರೆ, ಎಲ್ಲ ಫೈಲುಗಳನ್ನು ಡಿಲೀಟ್ ಮಾಡಿ, ಕಂಪ್ಯೂಟರಿನ ಕಾರ್ಯಾಚರಣಾ ತಂತ್ರಾಂಶವನ್ನು ಹೊಚ್ಚ ಹೊಸದರಂತೆ ಆಗಿಸುವ ಕ್ರಿಯೆ. ಹೆಚ್ಚಿನ ಸಂದರ್ಭಗಳಲ್ಲಿ, ಸಿ ಡ್ರೈವ್ ಮಾತ್ರ ಫಾರ್ಮ್ಯಾಟ್ ಮಾಡಿದರೂ ಸಾಕಾಗುತ್ತದೆ. ಹೀಗಾಗಿ ಬೇರೆ ಡ್ರೈವ್‌ಗಳಲ್ಲಿರುವ ನಿಮ್ಮ ಫೈಲ್‌ಗಳು ಸುರಕ್ಷಿತವಾಗಿರುತ್ತವೆ.

ಕಷ್ಟಪಟ್ಟು ನೀವು ಯಾವುದೋ ಲೇಖನ ಸಿದ್ಧ ಮಾಡುತ್ತಿರುವಾಗ, ಅದು ಇನ್ನೇನು ಪೂರ್ಣಗೊಳ್ಳುವ ಹಂತದಲ್ಲಿದ್ದಾಗ ಕಂಪ್ಯೂಟರ್ ಹ್ಯಾಂಗ್ ಆಗಿ, ಕೊನೆಗೆ ಫಾರ್ಮ್ಯಾಟ್ ಮಾಡಬೇಕಾಗಿ ಬಂದರೆ, ನಿಮ್ಮ ಫೈಲ್ ಮತ್ತೆ ಸಿಗಲಾರದು. ಮುನ್ನೆಚ್ಚರಿಕೆಯಾಗಿ ಯಾವತ್ತೂ ಫೈಲ್‌ಗಳನ್ನು ಸಿ ಡ್ರೈವ್‌ಗೆ ಹೊರತಾದ ಸ್ಥಳಗಳಲ್ಲೇ ಸೇವ್ ಮಾಡಿಕೊಳ್ಳುವುದು ಅಗತ್ಯ.

Avinash B

Avinash B. Tech Writer, Columnist, Working as Online media Journalist for more than two decades. Passionate about Technology and Gadgets. Yakshagana and Music are passion.

Recent Posts

ರಿಯಲ್‌ಮಿ ನಾರ್ಜೋ 70 ಟರ್ಬೊ 5 ಜಿ, ರಿಯಲ್‌ಮಿ ಬಡ್ಸ್ ಎನ್‌1 ಬಿಡುಗಡೆ: ಬೆಲೆ, ವೈಶಿಷ್ಟ್ಯ ತಿಳಿಯಿರಿ

ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…

1 month ago

ಓದುವಿಕೆ, ಕಲಿಕೆ ಉತ್ತೇಜನಕ್ಕೆ ‘ರೀಡ್-ಅ-ಥಾನ್’: ದಾಖಲೆಯ ಗುರಿ

ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.

1 month ago

Realme 13 +, Realme 13 5ಜಿ ಫೋನ್ ಬಿಡುಗಡೆ: ವೇಗದ ಫೋನ್‌ನ ವೈಶಿಷ್ಟ್ಯಗಳು, ಬೆಲೆ ಇಲ್ಲಿ ತಿಳಿಯಿರಿ

ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…

2 months ago

e-ಯುಗದ ತನಿಖಾ ಪತ್ರಿಕೋದ್ಯಮ: ಫ್ಯಾಕ್ಟ್ ಚೆಕ್

Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.

3 months ago

ಯಕ್ಷ ಮಂತ್ರ ಮಾಂಗಲ್ಯ: ಕೀರ್ತನಾ ಪ್ರಸಾದ ಕಲ್ಯಾಣವು

ಹಾಡುಗಾರಿಕೆ, ಚೆಂಡೆ-ಮದ್ದಳೆಯ ಬಿಡಿತ-ಮುಕ್ತಾಯಗಳ ಬಳಿಕ, ಬಂದಿದ್ದ ಗಣ್ಯರು, ಒಂದೊಂದು ಹಾಡಿನಲ್ಲಿ ಅಡಕವಾಗಿರುವ ಮಂತ್ರ ಮಾಂಗಲ್ಯದ ಪ್ರತಿಜ್ಞಾಗುಚ್ಛವನ್ನು ವಿವರಿಸಿ, ವಧು-ವರರಿಗೆ ಬೋಧಿಸಿದರು

9 months ago

ಮುದ್ದಣನ ಕುಮಾರ ವಿಜಯ, ರತ್ನಾವತಿ ಕಲ್ಯಾಣ ಯಕ್ಷಗಾನ ಧ್ವನಿಮುದ್ರಿಕೆ

ಮುದ್ದಣನ ಕುಮಾರ ವಿಜಯದ ಸುಮಾರು 700ರಷ್ಟಿರುವ ಹಾಡುಗಳನ್ನು ಹಾಡಿದ್ದು ತೆಂಕು ತಿಟ್ಟಿನ ಬಲಿಪ ಶೈಲಿಯ ಪ್ರತಿಪಾದಕ ಭಾಗವತರೇ. ಏಳೆಂಟು ವರ್ಷಗಳ…

9 months ago