ಆಧುನಿಕ ಸ್ಮಾರ್ಟ್ ಫೋನ್ ಯುಗದಲ್ಲಿ ಮಕ್ಕಳನ್ನು ನಮ್ಮ ಕಲೆ, ಸಂಸ್ಕೃತಿಯತ್ತ ಒಲಿಸಿ ಕರೆತರುವುದು ಪೋಷಕರ ಅತಿದೊಡ್ಡ ಸವಾಲಿನ ವಿಷಯವೇ. ಎಳಸು ಮನದ ಅವರ ಅದ್ಭುತ ಪ್ರತಿಭೆಯನ್ನು ಸೂಕ್ತ ದಿಕ್ಕಿಗೆ ತಿರುಗಿಸಿದರೆ ಚಿಕ್ಕ ವಯಸ್ಸಿನಲ್ಲೇ ಮೇರು ಸಾಧನೆ ಮಾಡಬಹುದೆಂಬುದಕ್ಕೆ ಉದಾಹರಣೆ 8ರ ಹರೆಯದ ಪಂಚಮಿ ಅಡಿಗ (ಜನ್ಮ ದಿನಾಂಕ 02 ಸೆಪ್ಟೆಂಬರ್ 2011).
ಈ ಪುಟಾಣಿ ಹಿಂದೆಲ್ಲ ಯಕ್ಷಗಾನವನ್ನೇನೂ ನೋಡಿದವಳಲ್ಲ. ಮನೆಯಲ್ಲಿ ಯಕ್ಷಗಾನ ಕ್ಯಾಸೆಟ್ ಅಥವಾ ಸಿಡಿ ಹಾಕಿ ಆಸ್ವಾದಿಸುತ್ತಿದ್ದರು. ಅಂಬೆಗಾಲಿಡುತ್ತಾ, ಆಡುತ್ತಿದ್ದ ಈ ಹುಡುಗಿಯ ಮನಸ್ಸು ಕೂಡ ಯಕ್ಷಗಾನದ ತಾಳ ಹಾಗೂ ಲಯಕ್ಕೆ ಒಳಗಿಂದೊಳಗೇ ಕುಣಿಯುತ್ತಿತ್ತು ಎಂಬುದನ್ನು ಬಲ್ಲವರಾರು? ಹಾಡಿನ ಗತಿಗೆ ಕೈಕಾಲನ್ನು ಲಯಬದ್ಧವಾಗಿ ಆಡಿಸುತ್ತಿದ್ದ ಈ ಬಾಲಕಿ ಪಂಚಮಿಗೆ ಪಂಚಮ ವರ್ಷದಲ್ಲಷ್ಟೇ ಯಕ್ಷಗಾನದ ಗಂಧ ಗಾಳಿ ಬೀಸಿದ್ದು. ಇದನ್ನು ಗಮನಿಸಿದ ಅವಳ ತಂದೆ ಪ್ರಕಾಶ್ ಅಡಿಗ ಮತ್ತು ತಾಯಿ ಅರ್ಚನಾ, 6ನೇ ವಯಸ್ಸಿಗೆ ಬೆಂಗಳೂರಿನ ಯಕ್ಷ ಕಲಾ ಅಕಾಡೆಮಿಯ ಕೃಷ್ಣಮೂರ್ತಿ ತುಂಗ ಅವರ ಗರಡಿಗೆ ಸೇರಿಸಿದರು. ಮೂಲತಃ ಉಡುಪಿ ಜಿಲ್ಲೆಯವರಾದ ಅವರಿಬ್ಬರೂ ವೃತ್ತಿಯಲ್ಲಿ ಸಾಫ್ಟ್‌ವೇರ್ ಉದ್ಯೋಗಿಗಳು. ತೊದಲು ನುಡಿಗಳಿಂದ ರಂಜಿಸುತ್ತಿದ್ದ ಈ ಮಗು, ಕಲಿಕೆಯ ಎರಡು ವರ್ಷಗಳಲ್ಲಿ ರಂಗವೇರಿ, ವೀರ ರಸದ ಮಾತುಗಳನ್ನು ಆಡುವಷ್ಟರ ಮಟ್ಟಕ್ಕೆ ಬೆಳೆದದ್ದು ಒಂದು ಪವಾಡವೋ ಅಥವಾ ಯಕ್ಷ ಕಲಾಮಾತೆಗೂ ಈ ಮುದ್ದುಕಂಗಳ ಬಾಲಕಿ ಇಷ್ಟವಾದಳೋ, ಈ ಪುಟಾಣಿಯ ಹೆಜ್ಜೆ-ಗೆಜ್ಜೆಯ ಸಾಂಗತ್ಯವು ಬೆಂಗಳೂರಿನ ಯಕ್ಷಗಾನ ಪ್ರಿಯರನ್ನು ಆಕರ್ಷಿಸಿದ್ದು ಸುಳ್ಳಲ್ಲ.
2016ರ ಮೇ ತಿಂಗಳಲ್ಲಿ ಯಕ್ಷಗಾನದ ಕಿಟತಕ ತರಿಕಿಟ ಹೆಜ್ಜೆ ಕಲಿಯಲಾರಂಭಿಸಿದ್ದ ಈ ಹುಡುಗಿ 2018ರ ಜನವರಿ ತಿಂಗಳಲ್ಲಿ ಮೊದಲ ಬಾರಿ ಕೋಡಂಗಿ ಮತ್ತು ಬಾಲಗೋಪಾಲ ವೇಷದಲ್ಲಿ ರಂಗವೇರಿದಳು. ನಂತರದ ಒಂದುವರೆ ವರ್ಷಗಳಲ್ಲಿ ಸುಮಾರು ಇಪ್ಪತ್ತೈದು ಯಕ್ಷಗಾನ ಪ್ರದರ್ಶನಗಳಲ್ಲಿ ಈ ಬಾಲೆ ವೇಷ ಹಾಕಿ ಕುಣಿದಿದ್ದಾಳೆ. ಎರಡು ವರ್ಷದಲ್ಲಿ ರಂಗವೇರುವುದು ಸಾಮಾನ್ಯ ಎನಿಸಬಹುದಾದರೂ, ಈ ಬಾಲೆಯ ಯಕ್ಷಗಾನ ಕುಣಿತ, ಅಭಿನಯದಲ್ಲಿ ವಿಶೇಷವಿದೆ. ಅದೇ ಕಾರಣಕ್ಕೆ ಪ್ರಸಂಗದ ಪ್ರಧಾನ ಪಾತ್ರಗಳ ನಿರ್ವಹಣೆಗೆ ಆಕೆ ಆಯ್ಕೆಯಾಗಿದ್ದಾಳೆ. ಯಕ್ಷಗಾನ ರಂಗದಲ್ಲಿ ಬೆಳೆಯಲು ಪ್ರತಿಭೆಯೇ ಮಾನದಂಡ. ಭಾಗವತರ ಪದವನ್ನು ಕೇಳುತ್ತಾ, ಅದಕ್ಕೆ ತಕ್ಕುದಾದಂತಹಾ ಅಭಿನಯದ ಜತೆಗೆ, ಕುಣಿತದ ಲಯ – ಇದು ಪಂಚಮಿಗೆ ಸಿದ್ಧಿಸಿದೆ ಎಂದರೆ ತಪ್ಪಾಗಲಾರದು. ಈ ರೀತಿಯ ಲಯಾಭಿನಯ ಪ್ರಕಟಗೊಳ್ಳಬೇಕಿದ್ದರೆ, ಖಂಡಿತವಾಗಿಯೂ ಇದಕ್ಕೆ ಪರಿಶ್ರಮ ಬೇಕೇಬೇಕು. ವಿಶೇಷವಾಗಿ ಅನುಭವ ಬೇಕು. ಕೇಳುವ ಆಸಕ್ತಿ, ಕಲಿಯುವ ಛಲ ಇವಳಲ್ಲಿರುವುದರಿಂದಲೇ 8ರ ಹರೆಯದಲ್ಲಿ ಈ ಬಾಲಕಿ, ಉತ್ತಮ ಕುಣಿತ, ಅಭಿನಯ ಮತ್ತು ಲಯಬದ್ಧ ನಡೆಗಳಿಂದ ಗಮನ ಸೆಳೆಯುವುದು ಸಾಧ್ಯವಾಯಿತು. ಈ ಬಾಲಕಿಯೊಳಗಿನ ಕಲಾವಿದೆಯನ್ನು ಗುರುತಿಸಿ, ಪೋಷಿಸಿದವರು ಬೆಂಗಳೂರಿನ ಪ್ರಸಿದ್ಧ ಯಕ್ಷಗಾನ ಗುರು ಕೃಷ್ಣಮೂರ್ತಿ ತುಂಗ.
ಪ್ರಸಂಗದ ನಡೆ, ನೃತ್ಯ, ಅಭಿನಯ ಹೇಗಿರಬೇಕು, ವೀರ ರಸದ ಪದ್ಯಗಳಿಗೆ ಕುಣಿಯುವ ಬಗೆ ನೋಡಲು ಚಂದ. ವಿಶೇಷವಾಗಿ ಯುದ್ಧ ಕುಣಿತವೋ, ಏರು ಪದದ ಕುಣಿತವೋ – ಇಂಥ ಸಂದರ್ಭದಲ್ಲಿ ಹಿರಿಯ ಕಲಾವಿದರನೇಕರು ಆಯುಧವನ್ನು ಕೆಳಗಿಟ್ಟು ಕುಣಿಯುತ್ತಾರೆ. ಆದರೆ ಈ ಬಾಲಕಿ, ಪರಂಪರೆಯ ಹಾದಿ ತಪ್ಪದಂತೆ, ಆಯುಧಪಾಣಿಯಾಗಿಯೇ ಯುದ್ಧದ ತೈತತಕತ ಕುಣಿತವನ್ನು ನೋಡಿದಾಗ, ಯಕ್ಷಗಾನದ ಪರಂಪರೆಯ ಸೊಗಡು ಅರಿವಿಗೆ ಬರುತ್ತದೆ. ಕೆಲ ಮಕ್ಕಳು ಹೆತ್ತವರ ಒತ್ತಾಯಕ್ಕೋ, ಅಥವಾ ಪ್ರಸಿದ್ಧಿಗೆ ಬರಬೇಕೆಂಬ ಉದ್ದೇಶದಿಂದ ಸಾಮಾನ್ಯವಾಗಿ ಕಲಿತು, ರಂಗವೇರಿ ಸಂಭ್ರಮಿಸುತ್ತಾರೆ. ಅಂಥವರಿಗೆ ಪ್ರೋತ್ಸಾಹವೂ ಸಿಗುತ್ತದೆ, ಪರಿಣತಿ ಸಾಧಿಸುವ ಮೊದಲೇ ಕರತಾಡನ ಗಿಟ್ಟಿಸುತ್ತಾರೆ. ಆದರೆ, ಈ ಪುಟಾಣಿ ಹಾಗಲ್ಲ. ನೈಜ ಸಾಮರ್ಥ್ಯ ಮತ್ತು ನಾಟಕೀಯವೆನಿಸದ ಅಭಿನಯ ಚಾತುರ್ಯವಿದೆ.
ನಿರಂತರ ಅಭ್ಯಾಸ ಮಾಡುತ್ತಾಳೆಂಬುದು ಇವಳ ಕುಣಿತಾಭಿನಯ ನೋಡಿದರೆ ವೇದ್ಯವಾಗುತ್ತದೆ. ಭಾಗವತರು ಯಕ್ಷಗಾನದಲ್ಲಷ್ಟೇ ಸಾಧ್ಯವಿರುವಂತೆ, ದಿಢೀರನೇ ತಾಳ ಬದಲಿಸಿದರೂ ತಕ್ಷಣ ಅದನ್ನು ಗ್ರಹಿಸುವ ಆಕೆಗೆ, ಅದಕ್ಕೆ ತಕ್ಕಂತೆ ಕುಣಿತವನ್ನೂ ತಾಳಕ್ಕೆ ಚ್ಯುತಿಯಾಗದಂತೆ ಬದಲಿಸಿಕೊಳ್ಳುವ ಛಾತಿ ಸಿದ್ಧಿಸಿದೆ. ಪಂಚಮಿಯ ಕುಣಿತ ಮತ್ತು ಪಾತ್ರಾಭಿನಯ ನೋಡುವಾಗ ಅದರಲ್ಲಿರುವ ರಂಗದ ಶಿಸ್ತು, ಅವಳೆಷ್ಟು ಅಭ್ಯಾಸ ಮಾಡುತ್ತಿದ್ದಾಳೆ ಎಂಬುದನ್ನು ಎತ್ತಿ ತೋರಿಸುತ್ತದೆ.
ಗಿರಿನಗರದ ಪೂರ್ಣಪ್ರಮತಿ ಶಾಲೆಯಲ್ಲಿ 2ನೇ ತರಗತಿ ಕಲಿಯುತ್ತಿರುವ ಈ ಪುಟಾಣಿ, ಈಗಾಗಲೇ ಜಾಂಬವತಿ ಕಲ್ಯಾಣದ ಕೃಷ್ಣ ಮತ್ತು ಪ್ರಸೇನ, ವೀರ ವೃಷಸೇನ ಪ್ರಸಂಗದ ವೃಷಸೇನ, ಲವ-ಕುಶ ಕಾಳಗದಲ್ಲಿ ಲವ ಹಾಗೂ ಚಂದ್ರಕೇತು, ಗದಾಯುದ್ಧದ ಅಶ್ವತ್ಥಾಮ, ರಾಮಾಂಜನೇಯ ಕಾಳಗದ ಅಂಗದ ಪಾತ್ರಗಳ ಮೂಲಕ ಗಮನ ಸೆಳೆದಿದ್ದಾಳೆ. ಮುದ್ದಾದ ಆದರೆ ಅಷ್ಟೇ ತೀಕ್ಷ್ಣ ಭಾವದ ವೀರರಸದ ಮಾತುಗಳನ್ನು ಕೇಳುವುದೇ ಒಂದು ಅಂದ.
ತಂದೆ-ತಾಯಿ ಕುಂದಾಪುರದ ಬಡಾಕೆರೆಯವರು. ಮಗಳ ಆಸಕ್ತಿಯನ್ನು ಮನಗಂಡು ಯಕ್ಷಗಾನದ ಜತೆಗೆ, ನಾಗರಬಾವಿಯ ಸ್ವರಸಾಧನಾ ಸಂಗೀತ ಶಾಲೆಯಲ್ಲಿ ಅವಳನ್ನು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಲಿಕೆಗೂ ಸೇರಿಸಿದ್ದಾರೆ. ಇಂಟರ್ನೆಟ್‌ನಲ್ಲಿ ಇವಳ ಯಕ್ಷಗಾನದ ವೀಡಿಯೊಗಳನ್ನು ನೋಡಿ ಸಾಕಷ್ಟು ಅಭಿಮಾನಿಗಳೂ ಸೃಷ್ಟಿಯಾಗಿದ್ದಾರೆ. ತುಮಕೂರಿನ ಅಭಿಮಾನಿಯೊಬ್ಬರು ಇವಳ ಪೆನ್ಸಿಲ್ ಸ್ಕೆಚ್ ರಚಿಸಿದ್ದಾರೆ. ಯಕ್ಷ ಕಲಾ ಅಕಾಡೆಮಿಯು ವಿವಿಧೆಡೆ ಪ್ರದರ್ಶನ ನೀಡುತ್ತಿರುವ ಮಕ್ಕಳ ಯಕ್ಷಗಾನದಲ್ಲಿ ಇವಳೇ ಆಕರ್ಷಣೆಯ ಕೇಂದ್ರ ಬಿಂದು. ಈ ಪುಟ್ಟ ಬಾಲಕಿಯ ಕಲಾ ಜೀವನ ಉತ್ತರೋತ್ತರ ಅಭಿವೃದ್ಧಿಯಾಗಲಿ.
ರಿಯಲ್‌ಮಿ 14 ಪ್ರೊ ಸರಣಿಯ 5ಜಿ ಫೋನ್, ಡ್ಯಾನಿಶ್ ಡಿಸೈನ್ ಸ್ಟುಡಿಯೋ ವ್ಯಾಲರ್ ಡಿಸೈನರ್ಸ್ ಮೂಲಕ ರೂಪುಗೊಂಡ ವಿಶ್ವದ ಮೊದಲ…
ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್ ಇರುವ ಬಹುನಿರೀಕ್ಷಿತ…
ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…
ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.
ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…
Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.