ಯಕ್ಷ ಮಂತ್ರ ಮಾಂಗಲ್ಯ: ಕೀರ್ತನಾ ಪ್ರಸಾದ ಕಲ್ಯಾಣವು

ಇದೆ ಮಂತ್ರ ಮಾಂಗಲ್ಯವಿದೆ ಮಂತ್ರ ಮಾಂಗಲ್ಯ| ಇದೆ ಪ್ರತಿಜ್ಞೆಯು ನಿಮಗೆ ಕೇಳಿ ವಧುವರರೇ|
ಮುದದೊಳು ಕುವೆಂಪು ರಚಿಸಿದ ಮಂತ್ರ ಮಾಂಗಲ್ಯ| ವಿಧಿಯಂತೆ ಮದುವೆಯಾಗುವಿರಿ ನೀವಿಂದು||
ಸದೆದೆಲ್ಲ ಮನಸಿನಾಧ್ಯಾತ್ಮದಾ ಸಂಕೋಲೆ| ಯದ ಕಳೆದು ಮುಕ್ತರಾದಿರಿ ತಿಳಿಯಿರಿಂದು

ಕೆಂಪಾದ ಸೂರ್ಯನು ಪಡುಗಡಲಲ್ಲಿ ಇಳಿಯುವ ಹೊತ್ತು. ಕರಾವಳಿಯಲ್ಲಂತೂ ಚೆಂಡೆ ಮದ್ದಳೆಯ ಸದ್ದು ಕೇಳುವ ಋತುವಿದು. ಉಡುಪಿ ಜಿಲ್ಲೆಯ ಚೇರ್ಕಾಡಿ ಗ್ರಾಮದ ನೂಜಿನಬೈಲು ಎಂಬ ಹಳ್ಳಿ. ಭಾಗವತರು ಮೇಲಿನ ಈ ಹಾಡನ್ನು ಚೆಂಡೆ ಮದ್ದಳೆಯ ನಿನಾದದೊಂದಿಗೆ ತುಜಾವಂತು ಝಂಪೆ ಮಟ್ಟಿನಲ್ಲಿ ಹಾಡುತ್ತಿದ್ದರೆ, ಇದನ್ನು ಕೇಳಿ ಸುತ್ತಮುತ್ತಲಿನ ಜನ ಓಡೋಡಿ ಬಂದು, ರಂಗಸ್ಥಳದೆದುರು ಮುಂದಿನ ಸೀಟಿನಲ್ಲೇ ಕೂತು ಕಾಯುತ್ತಾರೆ. ಇಲ್ಲಿ ಇವತ್ತೊಂದು ‘ಆಟ’ವಿದೆ ಎಂಬ ಕಾತರ ಅವರದು. ಗದ್ದೆ, ಅದರ ಮಧ್ಯೆ ಯಕ್ಷಗಾನ ಬಯಲಾಟಕ್ಕೆ ಎಂದಿನಂತೆ ಹಾಕುವ ನಾಲ್ಕು ಕಂಬಗಳ ರಂಗಸ್ಥಳವೂ ಇತ್ತು. ಆದರೆ, ಆ ದಿನ ಅವರು ಕಾದದ್ದೇ ಬಂತು. ರಂಗಸ್ಥಳದಲ್ಲಿ ವೇಷಗಳೇನೂ ಕಾಣಿಸುತ್ತಿಲ್ಲ. ಸಿಂಗಾರಗೊಂಡಿರುವ ಗಂಡು-ಹೆಣ್ಣು ಮಧ್ಯೆ ಕೂತಿದ್ದಾರೆ, ಅಕ್ಕ ಪಕ್ಕದಲ್ಲಿ ಹಿರಿಯರಿಬ್ಬರು ಕೂತಿದ್ದಾರೆ. ಹಿಂಭಾಗದಲ್ಲಿ ಯಕ್ಷಗಾನದ ಹಿಮ್ಮೇಳದವರು. ಅರೆ, ‘ಇದು ಯಕ್ಷಗಾನ ಅಲ್ಲ ಮಾರ‍್ರೇ’ ಎಂಬ ಉದ್ಗಾರ ಯಕ್ಷಗಾನ ನೋಡಲೆಂದು ಬಂದವರ ಬಾಯಿಂದ.

ಜನವರಿ 26ರ ಗಣರಾಜ್ಯೋತ್ಸವ ದಿನದಂದು ನಿರ್ಮಾಣಗೊಂಡಿದ್ದ ಈ ರಂಗಸ್ಥಳದ ವಿಶೇಷತೆ ಎಂದರೆ ಅದು ಯಕ್ಷಗಾನ ಅಲ್ಲ; ಅಲ್ಲಿ ನಡೆದದ್ದು ಯಕ್ಷ ಮಂತ್ರ ಮಾಂಗಲ್ಯ. ಮೂಲತಃ ಕರಾವಳಿಯವರೇ ಆಗಿದ್ದುಕೊಂಡು ಬೆಂಗಳೂರಿನಲ್ಲಿ ನೆಲಸಿರುವ ಪ್ರಸಾದ್ ಚೇರ್ಕಾಡಿ ಮತ್ತು ಕೀರ್ತನಾ ಉದ್ಯಾವರ ಈಗ ಜನುಮದ ಅನುಬಂಧವನ್ನು ಬೆಸೆಯಲು ಆಯ್ಕೆ ಮಾಡಿಕೊಂಡಿದ್ದು ಈ ಯಕ್ಷ ಮಂತ್ರ ಮಾಂಗಲ್ಯ ವಿಧಾನವನ್ನು. ಪ್ರಸಾದ್ ಚೇರ್ಕಾಡಿ ಅವರು ಸ್ಕ್ರಿಪ್ಟ್ ರೈಟರ್ ಆಗಿ, ಚಲನಚಿತ್ರ, ಕಿರುತೆರೆ ನಟನಾಗಿ, ಯಕ್ಷಗಾನ ಕಲಾವಿದನಾಗಿ ಮತ್ತು ಗುರುವಾಗಿ ಹೆಸರು ಮಾಡುತ್ತಿದ್ದರೆ, ಕೀರ್ತನಾ ಅವರು ಯಕ್ಷಗಾನ, ಭರತನಾಟ್ಯ, ಯೋಗ ಗುರುವಾಗಿ ತೊಡಗಿಸಿಕೊಂಡಿರುವ ಬಹುಮುಖೀ ಪ್ರತಿಭೆ. ಇಬ್ಬರೂ ಬಾಲ್ಯದಿಂದಲೇ ಕುವೆಂಪು ಸಾಹಿತ್ಯದಿಂದ ಪ್ರಭಾವಿತರಾದವರು ಮತ್ತು ಅವರಿಬ್ಬರನ್ನೂ ಬೆಸೆದದ್ದು ಯಕ್ಷಗಾನವೇ.

ಮಂತ್ರ ಮಾಂಗಲ್ಯ
ಪುರುಷ ಮೇಲಲ್ಲ, ಮಹಿಳೆ ಕೀಳಲ್ಲ. ಇಬ್ಬರೂ ಸಮಾನರು. ಜೊತೆಗೆ, ಜಾತಿ ಪದ್ಧತಿ, ಮೇಲು-ಕೀಳು, ಸಂಪ್ರದಾಯ, ದುಂದು ವೆಚ್ಚ, ಶ್ರೀಮಂತಿಕೆಯ ಪ್ರದರ್ಶನ, ಪೌರೋಹಿತ್ಯ – ಇವೆಲ್ಲವುಗಳಿಗೆ ಕಡಿವಾಣ ಹಾಕಿ, ಜೀವನದ ಅತ್ಯಂತ ಪವಿತ್ರ ಬಂಧಕ್ಕೆ ಸಾಕ್ಷಿಯಾಗುವ ಕಾರ್ಯವೊಂದನ್ನು ದುಂದು ವೆಚ್ಚ ಮಾಡದೆ, ಅತ್ಯಂತ ಸರಳವಾಗಿ ಮತ್ತು ಖಾಸಗಿಯಾಗಿ ಆಚರಿಸುವುದಕ್ಕಾಗಿ ರಾಷ್ಟ್ರಕವಿ ಕುವೆಂಪು ರೂಪಿಸಿದ ಸೂತ್ರವೇ ಮಂತ್ರ ಮಾಂಗಲ್ಯ ಎಂಬ ವಿವಾಹ ವ್ಯವಸ್ಥೆ. ಈ ಮಾದರಿಯ ವಿವಾಹದಲ್ಲಿ, ಸಾಂಪ್ರದಾಯಿಕ ವಿವಾಹ ವಿಧಿಗಳಿರುವುದಿಲ್ಲ. ಹೆಚ್ಚೆಂದರೆ ಒಂದು ತಾಳಿ ಕಟ್ಟಿಸಿಕೊಳ್ಳುವ ಪ್ರಕ್ರಿಯೆ, ಇದರ ಹೊರತಾಗಿ, ಗಂಡು-ಹೆಣ್ಣು ತಮ್ಮ ನಡುವೆ ಯಾವುದೇ ಭೇದವಿಲ್ಲ ಎನ್ನುತ್ತಾ, ಗರಿಷ್ಠ 200ಕ್ಕಿಂತ ಕಡಿಮೆ ಸಂಖ್ಯೆಯ ಬಂಧು-ಬಾಂಧವರ ನಡುವೆ ಮನೆಯಲ್ಲೇ ಸರಳವಾಗಿ ವಿವಾಹವಾಗುವುದು. ಇದಕ್ಕೆ 21 ಪ್ರತಿಜ್ಞಾ ವಿಧಿಗಳಿರುತ್ತವೆ, ಅವುಗಳನ್ನು ಸ್ವೀಕರಿಸಿ, ಬಳಿಕ ವಿವಾಹ ರಿಜಿಸ್ಟರ್ ಮಾಡಿಸಿಕೊಳ್ಳುವುದು.

ಕಾಲಕ್ಕೆ ತಕ್ಕಂತೆ ಒಂದಿಷ್ಟು ಮಾರ್ಪಾಟುಗಳನ್ನು ಕೂಡ ಮಾಡಿಕೊಳ್ಳಬಹುದೆಂಬ ಸೂಚನೆಯೂ ಇದ್ದುದರಿಂದಾಗಿ, ಅದರ ಮಾರ್ಪಡಿತ ರೂಪವು ಯಕ್ಷ ಮಂತ್ರ ಮಾಂಗಲ್ಯ ಹೆಸರಿನಲ್ಲೀಗ ನಡೆದಿದೆ. ಈ ಮೂಲಕ 1966ರಲ್ಲಿ ಕುವೆಂಪು ಪುತ್ರ ಪೂರ್ಣಚಂದ್ರ ತೇಜಸ್ವಿ-ರಾಜೇಶ್ವರಿ ಅವರ ವಿವಾಹದಿಂದಾರಂಭಿಸಿ, ತೀರಾ ಇತ್ತೀಚೆಗೆ ನಟಿ ಪೂಜಾ ಗಾಂಧಿ, ಚಾಮರಾಜ ನಗರ ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಮುಂತಾದವರ ಸಾಲಿನಲ್ಲಿ ಈ ನೂತನ ವಧು ವರರೂ ತಮ್ಮ ವೈವಾಹಿಕ ಬದುಕಿಗೆ ಕಾಲಿಟ್ಟರು.

ಯಕ್ಷ ಮಂತ್ರ ಮಾಂಗಲ್ಯ ಹೇಗೆ
ಶತಮಾನಗಳ ಇತಿಹಾಸವಿರುವ ಯಕ್ಷಗಾನ ಕ್ಷೇತ್ರದಲ್ಲಿ ಈಗಾಗಲೇ ಅಪಾರವಾದ ಸಮೃದ್ಧ ಕನ್ನಡ ಸಾಹಿತ್ಯ ಲೋಕವೊಂದು ಸೃಷ್ಟಿಯಾಗಿದೆ. ಇದಕ್ಕೆ ಹೊಸ ಸೇರ್ಪಡೆ ಎಂದರೆ ಮಂತ್ರಮಾಂಗಲ್ಯ ವಿವಾಹಕ್ಕೆ ನಿಗದಿಪಡಿಸಿರುವ 21 ಪ್ರತಿಜ್ಞಾ ವಿಧಿಗಳು 9 ರೀತಿಯಲ್ಲಿ ರಾಗ, ತಾಳ, ಛಂದಸ್ಸುಗಳ ಸಹಿತವಾಗಿ ಯಕ್ಷಗಾನ ಹಾಡುಗಳ ರೂಪ ತಳೆದಿವೆ. ಈ ಮಂತ್ರಮಾಂಗಲ್ಯದ ಪ್ರತಿಜ್ಞೆಗಳನ್ನೇ ಪದ್ಯರೂಪಕ್ಕೆ ಪರಿವರ್ತಿಸಿ, ಮಟ್ಟು ನಿರ್ಣಯಿಸಿ ಸಾಹಿತ್ಯ ಬರೆದವರು ಛಾಂದಸ ಕವಿ ಗಣೇಶ್ ಕೊಲೆಕಾಡಿ. ತೀರಾ ಅನಾರೋಗ್ಯದಲ್ಲಿದ್ದರೂ ತಮ್ಮ ಶಿಷ್ಯರಿಬ್ಬರ ಮೇಲಿನ ಪ್ರೀತಿಯಿಂದ ಈ ಮಂತ್ರ ಮಾಂಗಲ್ಯದ ಹಾಡುಗಳನ್ನು ರಚಿಸಿ ಕೊಟ್ಟಿದ್ದಾರೆ. ಇದನ್ನು ಮದುವೆಯ ರಂಗಸ್ಥಳದಲ್ಲಿ ಹಾಡಿ ತೋರಿಸಿದವರು ಪ್ರಸಾದ್ ಚೇರ್ಕಾಡಿ ಅವರ ಯಕ್ಷಗಾನ – ರಂಗ ತರಬೇತಿ ಶಾಲೆಯಾದ ‘ಕಥೆಗಾರರು’ ಸಮೂಹದ ವಿದ್ಯಾರ್ಥಿಗಳು.

ಹಾಡುಗಾರಿಕೆ, ಚೆಂಡೆ-ಮದ್ದಳೆಯ ಬಿಡಿತ-ಮುಕ್ತಾಯಗಳ ಬಳಿಕ, ಬಂದಿದ್ದ ಗಣ್ಯರು, ಒಂದೊಂದು ಹಾಡಿನಲ್ಲಿ ಅಡಕವಾಗಿರುವ ಮಂತ್ರ ಮಾಂಗಲ್ಯದ ಪ್ರತಿಜ್ಞಾಗುಚ್ಛವನ್ನು ವಿವರಿಸಿ, ವಧು-ವರರಿಗೆ ಬೋಧಿಸಿದರು. ಒಂದು ರೀತಿಯಲ್ಲಿ ಯಕ್ಷಗಾನದ ಮತ್ತೊಂದು ರೂಪವಾಗಿರುವ ತಾಳಮದ್ದಳೆಯಂತೆಯೇ ಇದು ಭಾಸವಾಯಿತು. ಯಕ್ಷ ಮಂತ್ರ ಮಾಂಗಲ್ಯ ಆರಂಭಕ್ಕೆ ಮುನ್ನ, ಯಕ್ಷಗಾನದ ಚೌಕಿಯಲ್ಲಿ ಸಾಂಪ್ರದಾಯಿಕವಾಗಿ ‘ಗಜಮುಖದವಗೆ ಗಣಪಗೆ’ ಎಂಬ ಯಕ್ಷಗಾನದ ಸ್ತುತಿ ಪದ್ಯದ ಬಳಿಕ, ಯಕ್ಷಗಾನದ ವಿದ್ಯಾರ್ಥಿಗಳೆಲ್ಲರೂ ಮದುಮಕ್ಕಳನ್ನು ‘ಧಿಮಿತಕಿಟ ತದ್ದಿಮಿತ ದಿಂಧತ್ತೈ’ ಪರಂಪರೆಯ ನಡೆಯ ‘ದಿಬ್ಬಣದ’ ಮೂಲಕ ಚೆಂಡೆ-ಮದ್ದಳೆ ನುಡಿತದೊಂದಿಗೆ ವಿವಾಹ ನಡೆಯುವ ರಂಗಸ್ಥಳಕ್ಕೆ ಕರೆತಂದರು. ಬಾಲಗೋಪಾಲ ಹಾಗೂ ಡೌರು ವೇಷಧಾರಿಗಳು ಜೊತೆಯಾಗಿದ್ದರು. ಇದಕ್ಕೆ ‘ಮುಕ್ತಾಯ’ ನುಡಿಸಿದ ಬಳಿಕ, ಪ್ರಸಾದ್-ಕೀರ್ತನಾ ಕಲ್ಯಾಣ!

ಇಡೀ ಕಾರ್ಯಕ್ರಮವನ್ನು ರಂಗಕರ್ಮಿ ನಾಗೇಶ್ ಉದ್ಯಾವರ ನಿರ್ವಹಿಸಿದರೆ, ಅವರೊಂದಿಗೆ ಯಕ್ಷಗಾನ ಗುರು ಕರ್ಗಲ್ಲು ವಿಶ್ವೇಶ್ವರ ಭಟ್, ಆಳ್ವಾಸ್ ಪ್ರತಿಷ್ಠಾನದ ಎಂ. ಮೋಹನ್ ಆಳ್ವ, ಕಲಾವಿದ ಪೇತ್ರಿ ಮಾಧವ ನಾಯ್ಕ್, ರಂಗ ಕಲಾವಿದೆ ಶರಣ್ಯಾ ರಾಂಪ್ರಕಾಶ್, ರಾಜ್ಯದ ಮೊದಲ ಲಿಂಗತ್ವ ಅಲ್ಪಸಂಖ್ಯಾತ ರಿಕ್ಷಾ ಚಾಲಕಿ ಕಾವೇರಿ ಮೇರಿ ಡಿಸೋಜ, ಸ್ಥಳೀಯ ಹಿರಿಯಜ್ಜಿ ವಿಮಲಾ ದೊಡ್ಡಯ್ಯ, ಕೀರ್ತನಾರ ಹೆತ್ತವರಾದ ಸುನಂದಾ ಮತ್ತು ಕುಶಲ, ಪ್ರಸಾದರ ತಾಯಿ ಸುಶೀಲಾ – ಇವರೆಲ್ಲರೂ ಹಾಡುಗಳಿಗೆ ಅರ್ಥ ಹೇಳುವ ರೀತಿಯಲ್ಲಿ ಪ್ರತಿಜ್ಞಾ ವಿಧಿಗಳನ್ನು ಬೋಧಿಸಿದರು.

ಮದುವೆ ಎಂದರೆ ಬಜೆಟ್ ಎಷ್ಟು ಎಂಬಲ್ಲಿಂದ, ಪ್ರೀ ವೆಡ್ಡಿಂಗ್ ಶೂಟ್, ಪೋಸ್ಟ್ ವೆಡ್ಡಿಂಗ್ ಶೂಟ್, ಪ್ರೀ ವೆಡ್ಡಿಂಗ್ ಪ್ರವಾಸ, ಹನಿಮೂನ್‌ಗೆ ವಿದೇಶ ಪ್ರವಾಸ – ಇವೆಲ್ಲ ಅನಿವಾರ್ಯ ಎಂಬಷ್ಟರ ಮಟ್ಟಿಗೆ ಸಾಮಾಜಿಕ ಬದಲಾವಣೆ ಆಗಿಬಿಟ್ಟಿದೆ. ಉಳ್ಳವರಿಗಿದು ಅಂತಸ್ತು ತೋರಿಸುವ ಹಂಬಲ. ಇಂಥ ಸಂದರ್ಭದಲ್ಲಿ ಸ್ವತಃ ಪ್ರಧಾನಿಯವರೇ ಈ ದೇಶದಲ್ಲೇ ಮದುವೆಯಾಗಿ ಅಂತ ಕರೆ ನೀಡುವವರೆಗೂ ವೈವಾಹಿಕ ಉದ್ಯಮವು ಬೃಹತ್ತಾಗಿ ಬೆಳೆದುಬಿಟ್ಟಿದೆ. ಮನೆಯಲ್ಲೇ ಮದುವೆಯಾಗುವುದೇ? ಎಂಬ ಪ್ರಶ್ನೆ ಕೇಳುವವರೇ ಇರುವವರ ನಡುವೆ ಯುವ ಜನಾಂಗವು ಅದ್ದೂರಿತನ ಪ್ರದರ್ಶಿಸದಿರುವ ಮತ್ತು ಬದುಕಿಗೆ ಅನಿವಾರ್ಯವಾಗಿರುವ ನೀತಿ ಸೂತ್ರಗಳೊಂದಿಗೆ ಸರಳ ವಿವಾಹದತ್ತ ಆಕರ್ಷಿತರಾಗುತ್ತಿರುವುದು ಈ ಕಾಲದ ಬದಲಾವಣೆ.

ಮದುವೆ ಮಾಡುವುದೆಂದರೆ, ಬಜೆಟ್, ಹಾಲ್ ಬಾಡಿಗೆ, ಚಿನ್ನ… ಬಂಧುಮಿತ್ರರಿಗೆ ಭರ್ಜರಿ ಭೋಜನ – ಇಷ್ಟೆಲ್ಲ ಮಾಡುವಾಗ ಸಾಲ ಮಾಡಿ ಹೈರಾಣಾದ, ಸಾಲ ತೀರಿಸುವುದಕ್ಕಾಗಿ ಜೀವನಪೂರ್ತಿ ದುಡಿಯಬೇಕಾದ ಹಲವು ಕುಟುಂಬಗಳನ್ನು ನೋಡುತ್ತಲೇ ಬೆಳೆದ ನನಗೆ, ಕುವೆಂಪು ಸಾಹಿತ್ಯದ ಓದಿನ ವೇಳೆ ಈ ಸರಳ ಮದುವೆಯು ವಿಶೇಷ ಗಮನ ಸೆಳೆದಿತ್ತು. ನಮ್ಮಿಬ್ಬರ ಮನಸ್ಸುಗಳೂ ಒಂದೇ ರೀತಿ ಯೋಚಿಸಿದವು. ಆರಂಭದಲ್ಲಿ ಬಂಧುಗಳಿಂದ ಅಪಸ್ವರ ಬಂದಿದ್ದರೂ, ಮದುವೆಯ ವೇಳೆಗೆ ಅವೆಲ್ಲವೂ ಪರಿಹಾರ ಕಂಡಿದ್ದವು.
-ಪ್ರಸಾದ್ ಚೇರ್ಕಾಡಿ

ಸಂಪ್ರದಾಯ, ಆಚರಣೆ ಮುಂತಾದವುಗಳ ಬಗೆಗೆ ನನಗೆ ನನ್ನದೇ ಆದ ನಿಲುವುಗಳಿವೆ. ಆಡಂಬರಕ್ಕೆ ವಿರೋಧ ಇದ್ದೇ ಇದೆ. ಇಬ್ಬರೂ ಯಕ್ಷಗಾನ ಹಾಗೂ ಇತರ ಕಲೆಗಳ ಆರಾಧಕರು. ಹೀಗಾಗಿ ಇಬ್ಬರ ಮನಸ್ಸುಗಳೂ ಒಂದೇ ರೀತಿಯಲ್ಲಿ ಸಾಗಿದವು. ಹೆತ್ತವರಿಗೆ ಭಾರವಾಗದೆ, ಸ್ವಂತ ದುಡಿಮೆಯಿಂದಲೇ ಮದುವೆಯಾಗಬೇಕೆಂಬುದು ನನ್ನ ಆಸೆ ಈಡೇರಿದೆ.
-ಕೀರ್ತನಾ ಉದ್ಯಾವರ

Article by Avinash B published in Prajavani on 11 Feb 2024

Avinash B

Avinash B. Tech Writer, Columnist, Working as Online media Journalist for more than two decades. Passionate about Technology and Gadgets. Yakshagana and Music are passion.

Recent Posts

ಎಐ ವೈಶಿಷ್ಟ್ಯಗಳ realme GT 7 Pro ಬಿಡುಗಡೆ: ಬೆಲೆ ಎಷ್ಟು? ವೈಶಿಷ್ಟ್ಯಗಳೇನು? ಇಲ್ಲಿದೆ ಪೂರ್ಣ ಮಾಹಿತಿ

ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್‌ ಇರುವ ಬಹುನಿರೀಕ್ಷಿತ…

4 days ago

ರಿಯಲ್‌ಮಿ ನಾರ್ಜೋ 70 ಟರ್ಬೊ 5 ಜಿ, ರಿಯಲ್‌ಮಿ ಬಡ್ಸ್ ಎನ್‌1 ಬಿಡುಗಡೆ: ಬೆಲೆ, ವೈಶಿಷ್ಟ್ಯ ತಿಳಿಯಿರಿ

ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…

3 months ago

ಓದುವಿಕೆ, ಕಲಿಕೆ ಉತ್ತೇಜನಕ್ಕೆ ‘ರೀಡ್-ಅ-ಥಾನ್’: ದಾಖಲೆಯ ಗುರಿ

ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.

3 months ago

Realme 13 +, Realme 13 5ಜಿ ಫೋನ್ ಬಿಡುಗಡೆ: ವೇಗದ ಫೋನ್‌ನ ವೈಶಿಷ್ಟ್ಯಗಳು, ಬೆಲೆ ಇಲ್ಲಿ ತಿಳಿಯಿರಿ

ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…

3 months ago

e-ಯುಗದ ತನಿಖಾ ಪತ್ರಿಕೋದ್ಯಮ: ಫ್ಯಾಕ್ಟ್ ಚೆಕ್

Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.

4 months ago

ಮುದ್ದಣನ ಕುಮಾರ ವಿಜಯ, ರತ್ನಾವತಿ ಕಲ್ಯಾಣ ಯಕ್ಷಗಾನ ಧ್ವನಿಮುದ್ರಿಕೆ

ಮುದ್ದಣನ ಕುಮಾರ ವಿಜಯದ ಸುಮಾರು 700ರಷ್ಟಿರುವ ಹಾಡುಗಳನ್ನು ಹಾಡಿದ್ದು ತೆಂಕು ತಿಟ್ಟಿನ ಬಲಿಪ ಶೈಲಿಯ ಪ್ರತಿಪಾದಕ ಭಾಗವತರೇ. ಏಳೆಂಟು ವರ್ಷಗಳ…

10 months ago