ನಮ್ಮದೇ ದೇಶದ ಆಡಿಯೋ ಸಿಸ್ಟಂ ಹಾಗೂ ಲೈಫ್‌ಸ್ಟೈಲ್ ಗ್ಯಾಜೆಟ್‌ಗಳ ತಯಾರಕ ಸಂಸ್ಥೆ ಜೆಬ್ರಾನಿಕ್ಸ್, ಈಗ ವಿದೇಶದ ಪ್ರೀಮಿಯಂ ಬ್ರ್ಯಾಂಡ್‌ಗಳಿಗೆ ನಿಧಾನವಾಗಿ ಸ್ಫರ್ಧೆ ನೀಡುತ್ತಿದೆ. 2020 ವರ್ಷದ ಕೊನೆಯಲ್ಲಿ ‘ಜೆಬ್ ಸೌಂಡ್ ಬಾಂಬ್ ಕ್ಯೂ ಪ್ರೊ’ ಎಂಬ ವೈರ್‌ಲೆಸ್ ಇಯರ್‌ಬಡ್‌ಗಳನ್ನು ಇದು ಬಿಡುಗಡೆ ಮಾಡಿದೆ. ಆಂಡ್ರಾಯ್ಡ್ ಮತ್ತು ಐಫೋನ್ ಎರಡರಲ್ಲೂ ಇದನ್ನು ಎರಡು ವಾರ ಬಳಸಿ ನೋಡಿದಾಗ ಹೇಗಿದೆ? ಇಲ್ಲಿದೆ ಮಾಹಿತಿ.
ವಿನ್ಯಾಸ
‘ಸೌಂಡ್ ಬಾಂಬ್’ ಶ್ರೇಣಿಯ ಹೊಸ ಸಾಧನವೇ ಜೆಬ್ ಸೌಂಡ್ ಬಾಂಬ್ ಕ್ಯೂ ಪ್ರೊ. ಚಿನ್ನದ ಬಣ್ಣದ ಬಟನ್‌ಗಳಿರುವ ಪ್ರೀಮಿಯಂ ಲುಕ್ ಇದೆ. ಆಕರ್ಷಕ ಪ್ಯಾಕೇಜ್‌ನಲ್ಲಿರುವ ಈ ಇಯರ್‌ಬಡ್‌ಗಳು ತೀರಾ ಹಗುರವಾಗಿದ್ದು, ಕೇವಲ ಟಚ್ ಬಟನ್‌ಗಳಷ್ಟೇ ಇವೆ. ಬಾಕ್ಸ್‌ನಲ್ಲಿ ಟೈಪ್-ಸಿ ಚಾರ್ಜಿಂಗ್ ಕೇಬಲ್ ಇದ್ದು, ಚಿನ್ನದ ಬಣ್ಣದ ಲೋಗೊ ಇರುವ ಚಾರ್ಜಿಂಗ್ ಕೇಸ್ ಇದೆ. ಅದರೊಳಗೆ ಇಟ್ಟುಬಿಟ್ಟರೆ ಇಯರ್‌ಬಡ್‌ಗಳು ಚಾರ್ಜ್ ಆಗುತ್ತವೆ. ಈ ಚಾರ್ಜಿಂಗ್ ಕೇಸನ್ನು ಪೂರ್ತಿಯಾಗಿ ಚಾರ್ಜ್ ಮಾಡಬೇಕಿದ್ದರೆ ಒಂದುವರೆ ಗಂಟೆ ಸಾಕಾಗುತ್ತದೆ. ಇಯರ್‌ಬಡ್‌ಗಳಿಗೆ ಇದರಿಂದ ಕನಿಷ್ಠ ನಾಲ್ಕು ಬಾರಿ ಚಾರ್ಜ್ ಮಾಡಬಹುದಾಗಿರುತ್ತದೆ. ಇದರಲ್ಲಿ IPX7, ಕ್ವಾಲ್‌ಕಾಂ ಆಪ್ಟ್ಎಕ್ಸ್, ವೈರ್‌ಲೆಸ್ ಚಾರ್ಜಿಂಗ್ ಮತ್ತಿತರ ಅತ್ಯಾಧುನಿಕ ವೈಶಿಷ್ಟ್ಯಗಳಿವೆ.
ಕಾರ್ಯಾಚರಣೆ ಹೇಗಿದೆ?
ಹೆಚ್ಚು ಬೇಸ್ (Bass) ಇರುವ ಹಾಡುಗಳನ್ನು ಆನಂದಿಸುವವರಿಗಂತೂ ಪುಟ್ಟ ಇಯರ್‌ಬಡ್‌ಗಳು ಹೇಳಿ ಮಾಡಿಸಿದಂತಿವೆ. ನಿರಂತರವಾಗಿ 7 ಗಂಟೆ ಕಾಲ ಹಾಡುಗಳನ್ನು ಕೇಳುತ್ತಾ ಇದ್ದರೂ ಬ್ಯಾಟರಿ ಚಾರ್ಜ್ ಖಾಲಿ ಆಗುವುದಿಲ್ಲ. ಚಾರ್ಜಿಂಗ್ ಕೇಸ್‌ನಲ್ಲಿ ನಾಲ್ಕು ಬಾರಿಗೆ ಚಾರ್ಜ್ ಮಾಡುವಷ್ಟು ಬ್ಯಾಟರಿ ಸಾಮರ್ಥ್ಯವಿದೆ. ಕ್ವಾಲ್‌ಕಾಂ ಆಪ್ಟ್ಎಕ್ಸ್ ಚಿಪ್ ಇರುವುದರಿಂದ ವೈರ್‌ಲೆಸ್ ಧ್ವನಿಯ ಗುಣಮಟ್ಟ ಚೆನ್ನಾಗಿದೆ.
ಕಿವಿಯೊಳಗೆ ಚೆನ್ನಾಗಿಯೇ ಕೂರುತ್ತದೆಯಾದುದರಿಂದ, ಬಾಹ್ಯ ಶಬ್ದಗಳನ್ನು ತಡೆಯುವುದು ಸಾಧ್ಯವಾಗಿದ್ದು, ಹಾಡುಗಳನ್ನು ಆನಂದಿಸಬಹುದು ಮತ್ತು ಕರೆಗಳ, ಹಾಡಿನ ಧ್ವನಿಯ ಗುಣಮಟ್ಟವೂ ಚೆನ್ನಾಗಿದೆ. ಐಪಿಎಕ್ಸ್7 ಜಲನಿರೋಧಕತೆ ಪ್ರಮಾಣೀಕೃತವಾಗಿರುವುದರಿಂದ ಮಳೆಯಲ್ಲಿ ಒದ್ದೆಯಾದರೂ ಏನೂ ಆಗುವುದಿಲ್ಲ. ವರ್ಕೌಟ್ ಅಥವಾ ವ್ಯಾಯಾಮ ಸಂದರ್ಭದಲ್ಲಿ ಬೆವರಿನಿಂದಲೂ ರಕ್ಷಣೆಯಿದೆ.
ವಾಲ್ಯೂಮ್ ಮತ್ತು ಹಾಡುಗಳನ್ನು ಕೇವಲ ಸ್ಪರ್ಶ ಮಾತ್ರದಿಂದಲೇ ನಿಯಂತ್ರಿಸಬಹುದು. ಒಂದು ಸಲ ಟ್ಯಾಪ್ ಮಾಡಿದರೆ ಪ್ಲೇ ಅಥವಾ Pause ಆಗುತ್ತದೆ. ಕರೆ ಸ್ವೀಕರಿಸಲು ಅಥವಾ ಪೂರ್ಣಗೊಳಿಸಲು ಕೂಡ ಒಂದು ಬಾರಿ ತಟ್ಟಿದರಾಯಿತು. ಕರೆ ಬಂದಾಗ ದೀರ್ಘ ಕಾಲ ಒತ್ತಿಹಿಡಿಯುವ ಮೂಲಕ ಕರೆ ನಿರಾಕರಿಸಬಹುದು.
ಎಡ ಭಾಗದ ಇಯರ್‌ಬಡ್ ಮೇಲೆ ಟ್ಯಾಪ್ ಮಾಡಿ ಹಿಡಿದರೆ ವಾಲ್ಯೂಮ್ ಕಡಿಮೆಯಾಗುತ್ತದೆ ಹಾಗೂ ಎರಡು ಬಾರಿ ತಟ್ಟಿದರೆ ಹಿಂದಿನ ಹಾಡನ್ನು ಕೇಳಬಹುದು. ಬಲ ಭಾಗದ ಇಯರ್‌ಬಡ್ ಒತ್ತಿ ಹಿಡಿದರೆ ವಾಲ್ಯೂಮ್ ಜಾಸ್ತಿಯಾಗುತ್ತದೆ ಹಾಗೂ ಕ್ಷಿಪ್ರವಾಗಿ ಎರಡು ಬಾರಿ ಟ್ಯಾಪ್ ಮಾಡಿದರೆ ಮುಂದಿನ ಹಾಡು ಆಲಿಸಬಹುದು.
ವೈರ್‌ಲೆಸ್ ಚಾರ್ಜಿಂಗ್ ಕೇಸ್ ಪುಟ್ಟದಾಗಿರುವುದರಿಂದ ಜೇಬಿನಲ್ಲಿಯೂ ಇಟ್ಟುಕೊಳ್ಳಬಹುದು. ಇದರ ವಿಶೇಷತೆಯೆಂದರೆ, ಈಗಿನ ದಿನಮಾನಕ್ಕೆ ಅನುಗುಣವಾದ ಟೈಪ್ ಸಿ ಚಾರ್ಜಿಂಗ್ ಕೇಬಲ್. ಚಾರ್ಜಿಂಗ್ ಕೇಸನ್ನು ವೈರ್‌ಲೆಸ್ ಚಾರ್ಜಿಂಗ್ ಪ್ಯಾಡ್ ಮೇಲೆ ಇರಿಸಿದರೂ ಚಾರ್ಜ್ ಆಗುತ್ತದೆ. ಚಾರ್ಜಿಂಗ್ ಕೇಸ್ ಚಾರ್ಜ್ ಆಗುತ್ತಿರುವಾಗ ನಾಲ್ಕು ಎಲ್‌ಇಡಿ ದೀಪಗಳು ಒಂದೊಂದಾಗಿ ಬ್ಲಿಂಕ್ ಆಗುತ್ತಿರುತ್ತವೆ. ಪೂರ್ಣವಾದಾಗ ನಾಲ್ಕೂ ದೀಪಗಳು ಬೆಳಗುತ್ತವೆ.
ಆ್ಯಪಲ್ ಅಥವಾ ಆಂಡ್ರಾಯ್ಡ್ ಫೋನ್‌ಗೆ ಇದನ್ನು ಪೇರ್ (Pair) ಮಾಡಿಕೊಂಡ ಬಳಿಕ, ಸತತ ಮೂರು ಬಾರಿ ಟ್ಯಾಪ್ ಮಾಡಿದರೆ, ಧ್ವನಿ ಸಹಾಯಕ (ಐಫೋನ್‌ನಲ್ಲಿ ಸಿರಿ ಅಥವಾ ಆಂಡ್ರಾಯ್ಡ್ ಫೋನ್‌ನಲ್ಲಾದರೆ ಗೂಗಲ್ ವಾಯ್ಸ್ ಅಸಿಸ್ಟೆಂಟ್) ಸಕ್ರಿಯವಾಗುತ್ತದೆ. ಧ್ವನಿಯಿಂದ ನಿಯಂತ್ರಿಸಬಹುದಾದ ಎಲ್ಲ ಕೆಲಸಗಳನ್ನೂ ಮಾಡಬಹುದು. ಇದರ ಬೆಲೆ 4,199 ರೂ.
ಒಟ್ಟಾರೆ ಹೇಗಿದೆ?
ಪುಟ್ಟದಾಗಿರುವುದರಿಂದ ಪ್ರಯಾಣದ ವೇಳೆ ಒಯ್ಯಲು ಸುಲಭ. ಧ್ವನಿಯ ಗುಣಮಟ್ಟ ಉತ್ತಮವಾಗಿದೆ. ದ್ವಿಚಕ್ರ ವಾಹನ ಓಡಿಸುವವರು ಹೆಲ್ಮೆಟ್ ಧರಿಸಿದಾಗ ಚೆನ್ನಾಗಿಯೇ ಕೂರುತ್ತದೆಯಾದರೂ, ಹೆಲ್ಮೆಟ್ ತೆಗೆಯುವಾಗ ಕೆಳಗೆ ಬೀಳುವ ಬಗ್ಗೆ ಎಚ್ಚರಿಕೆ ವಹಿಸಬೇಕಾಗುತ್ತದೆ. ಅದರಲ್ಲೇ ಕರೆಗಳಿಗೆ ಉತ್ತರಿಸುವಾಗ, ‘ಸರಿಯಾಗಿ ಕೇಳಿಸ್ತಾ ಇಲ್ಲ, ಜೋರಾಗಿ ಮಾತನಾಡಿ’ ಅಂತೆಲ್ಲ ಯಾರೂ ಹೇಳಿಲ್ಲ. ಹೀಗಾಗಿ ಕರೆಯ ಗುಣಮಟ್ಟವೂ ಚೆನ್ನಾಗಿದೆ. ವೈರ್‌ಲೆಸ್ ಕಾಲದಲ್ಲಿ 4 ಸಾವಿರ ರೂ. ಆಸುಪಾಸಿನ ಈ ಪುಟ್ಟ ಸಾಧನ ಗಮನ ಸೆಳೆಯುತ್ತದೆ.
iPhone 16e joins the iPhone 16 lineup, featuring the fast performance of the A18 chip,…
ರಿಯಲ್‌ಮಿ 14 ಪ್ರೊ ಸರಣಿಯ 5ಜಿ ಫೋನ್, ಡ್ಯಾನಿಶ್ ಡಿಸೈನ್ ಸ್ಟುಡಿಯೋ ವ್ಯಾಲರ್ ಡಿಸೈನರ್ಸ್ ಮೂಲಕ ರೂಪುಗೊಂಡ ವಿಶ್ವದ ಮೊದಲ…
ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್ ಇರುವ ಬಹುನಿರೀಕ್ಷಿತ…
ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…
ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.
ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…