ಫೇಸ್‌ಬುಕ್‌ನಲ್ಲಿ ಸಾಕಷ್ಟು ಸ್ನೇಹಿತರೂ ಇರುತ್ತಾರೆ ಮತ್ತು ನಾವು ಸ್ನೇಹಿತರ ಸಂಖ್ಯೆಯನ್ನು ಹೆಚ್ಚಿಸಿಕೊಂಡಂತೆಯೇ ಮಾರುಕಟ್ಟೆ ಮಾಡುವುದೂ ಸುಲಭವಾಗುತ್ತದೆ. ಯಾರು ಕೂಡ ತಮ್ಮಲ್ಲಿರುವ ವಸ್ತುಗಳನ್ನು ಮಾರಾಟ ಮಾಡಲು ಬಯಸಿದರೆ, ಮಾರ್ಕೆಟ್‌ಪ್ಲೇಸ್ ಎಂಬ ಟ್ಯಾಬ್ ಮೂಲಕ ಕೆಲಸ ಮುಗಿಸಬಹುದು. ಇದನ್ನು ನಮ್ಮ ಸ್ಮಾರ್ಟ್‌ಫೋನ್‌ನ ಆ್ಯಪ್ ಮೂಲಕವೂ ಮಾಡಬಹುದಾಗಿರುವುದು ವಿಶೇಷ. ಇದಕ್ಕಾಗಿ ಬೇರೆಯೇ ವೆಬ್ ತಾಣಕ್ಕೆ ಹೋಗಬೇಕಾಗಿಲ್ಲ, ಮತ್ತೊಂದು ಆ್ಯಪ್ ಅಳವಡಿಸಿಕೊಳ್ಳಬೇಕಿಲ್ಲ ಹಾಗೂ ಮಗದೊಂದು ಅಕೌಂಟ್ ರಚಿಸಬೇಕಾಗಿಲ್ಲ. ಫೇಸ್‌ಬುಕ್ ಮೂಲಕ ಇವೆಲ್ಲವೂ ಸಾಧ್ಯ.
ಕಂಪ್ಯೂಟರಿನಲ್ಲಿ ನೀವು ಫೇಸ್‌ಬುಕ್ ಬಳಸುತ್ತಿದ್ದರೆ, ಲಾಗಿನ್ ಆದ ತಕ್ಷಣ ನಿಮ್ಮ ನ್ಯೂಸ್ ಫೀಡ್‌ನ ಎಡ ಮೇಲ್ಭಾಗದಲ್ಲಿ ‘ಫೇಸ್‌ಬುಕ್ ಮಾರ್ಕೆಟ್ ಪ್ಲೇಸ್’ ಎಂದು ಬರೆದಿರುವುದು ಕಾಣಿಸುತ್ತದೆ. ಅದರಲ್ಲಿ ನಿರ್ದಿಷ್ಟ ವಿಭಾಗಗಳಲ್ಲಿ ಫಿಲ್ಟರ್ ಮಾಡುವ ಆಯ್ಕೆಗಳಿವೆ. ಟಿವಿ, ಫ್ರಿಜ್, ಕಾರು, ಬೈಕು, ಮೊಬೈಲ್ ಫೋನ್, ಸೀರೆ, ಗಿಟಾರು, ಹೆಲ್ಮೆಟ್, ಸೈಕಲ್ಲು… ಇತ್ಯಾದಿಗಳೆಲ್ಲವೂ ಇಲ್ಲೇ ಲಭ್ಯ. ನಿಮಗೆ ಬೇಕಾದಂತೆ ಫಿಲ್ಟರ್ ಮಾಡಿಕೊಂಡು, ಇಲ್ಲಿ ಹುಡುಕಾಡಬಹುದು. ಫೇಸ್‌ಬುಕ್‌ಗೆ ನಾವು ನಮ್ಮ ಸ್ಥಳವನ್ನು ಟ್ರ್ಯಾಕ್ ಮಾಡಲು ಅನುಮತಿ ಕೊಟ್ಟಿರುತ್ತೇವಾದುದರಿಂದ, ನಮ್ಮ ಊರಿನ ಸುತ್ತಮುತ್ತ ಸುಮಾರು 60 ಕಿ.ಮೀ. ವ್ಯಾಪ್ತಿಯಲ್ಲಿರುವ ವಸ್ತುಗಳನ್ನು ಫೇಸ್‌ಬುಕ್ ತೋರಿಸುತ್ತದೆ. ಮತ್ತು ಎಡಭಾಗದಲ್ಲಿ ನೋಡಿದರೆ, ನಾವಿರುವ ಸ್ಥಳದ ಎಷ್ಟು ಅಂತರದಿಂದ ಮಾರಾಟಕ್ಕಿರುವ ವಸ್ತುಗಳನ್ನು ತೋರಿಸಬೇಕು ಅಂತ ನಾವೇ ಹೊಂದಿಸಬಹುದು. ಅಲ್ಲಿ ಊರುಗಳನ್ನು ಬದಲಾಯಿಸಿಕೊಳ್ಳುವ ಆಯ್ಕೆಯೂ ಇದೆ. ಇದೇ ರೀತಿ, ಗೃಹ ಬಳಕೆ ವಸ್ತುಗಳು, ಮನರಂಜನೆ, ಉಡುಪು, ಎಲೆಕ್ಟ್ರಾನಿಕ್ಸ್, ವಾಹನಗಳು… ಹೀಗೆ ಅನೇಕ ವರ್ಗಗಳಲ್ಲಿಯೂ ಮಾರಾಟಕ್ಕಿಟ್ಟ ವಸ್ತುಗಳನ್ನು ಫಿಲ್ಟರ್ ಮಾಡಿ ನೋಡಬಹುದು.
ಯಾವುದೇ ಮಧ್ಯವರ್ತಿಗಳಿಲ್ಲದೆಯೇ ಇಲ್ಲಿ ನಾವು ಸೆಕೆಂಡ್ ಹ್ಯಾಂಡ್ ಐಟಂಗಳನ್ನು ಪಡೆಯಬಹುದು, ಮನೆಗಳನ್ನೂ ಬಾಡಿಗೆಗೆ ಪಡೆಯಬಹುದಾಗಿದೆ. ಯಾವುದೇ ವಸ್ತುವಿನ ಫೋಟೋ ಕ್ಲಿಕ್ ಮಾಡಿದರೆ, ಮಾರಾಟ ಮಾಡುವ ವ್ಯಕ್ತಿಯನ್ನು ಫೇಸ್‌ಬುಕ್ ಸಂದೇಶದ ಮೂಲಕ ಸಂಪರ್ಕಿಸುವ ಅವಕಾಶವಿದೆ. ಅಂತೆಯೇ, ಗೃಹಿಣಿಯರಾದರೆ ಮನೆಯಲ್ಲಿ ಕಸೂತಿ, ಕುಶಲಕಲೆ, ಫ್ಯಾಶನ್ ಉಡುಪು ಇತ್ಯಾದಿಗಳನ್ನು ಹೊಲಿದು, ಫೇಸ್‌ಬುಕ್ ಮಾರ್ಕೆಟ್ ಪ್ಲೇಸ್‌ನಲ್ಲಿ ಮಾರಾಟ ಮಾಡಬಹುದು.
ಇಲ್ಲಿ ನೇರ ಸಂವಹನವಾಗಿದ್ದರೂ, ಫೇಕ್ ಖಾತೆಗಳ ಬಗ್ಗೆ ಎಚ್ಚರ ವಹಿಸಲೇಬೇಕಾಗುತ್ತದೆ. ವ್ಯವಹರಿಸುವ ಮುನ್ನ ಎರಡೆರಡು ಬಾರಿ ಯೋಚಿಸಿ ಹೆಜ್ಜೆ ಮುಂದಿಡಿ. ಈ ಫೇಸ್‌ಬುಕ್ ಮಾರುಕಟ್ಟೆಯಲ್ಲಿ ಹೊಚ್ಚಹೊಸ ಐಟಂಗಳೂ ಸಿಗುತ್ತವೆ. ಕೆಲವು ಬ್ರ್ಯಾಂಡೆಡ್ ವಸ್ತುಗಳೂ ಇವೆಯಾದರೂ, ಸರಿಯಾಗಿ ಪರಿಶೀಲಿಸಿಯೇ ಮುಂದಡಿಯಿಡುವುದು ಉಚಿತ.
ಒಎಲ್ಎಕ್ಸ್, ಕ್ವಿಕರ್ ಮುಂತಾದೆಡೆಗಳಲ್ಲೆಲ್ಲ ಸೆಕೆಂಡ್ ಹ್ಯಾಂಡ್ ವಸ್ತುಗಳ ಖರೀದಿಗಿದ್ದ ಅತಿದೊಡ್ಡ ತೊಡಕು ಎಂದರೆ ವಸ್ತುಗಳ ವಿಶ್ವಾಸಾರ್ಹತೆ. ಇಲ್ಲಿ ಪ್ರತಿಯೊಬ್ಬರ ಪರಿಚಯ ಇರುವುದರಿಂದ ನಂಬಿಕೆ ಒಂದಿಷ್ಟು ಹೆಚ್ಚು ಇದೆಯಾದರೂ, ಫೇಕ್ ಫ್ರೆಂಡ್ಸ್ ಇರುವಾಗ ಫೇಕ್ (ನಕಲಿ) ಐಟಂಗಳು ಇರುವ ಸಾಧ್ಯತೆಗಳೂ ಇದ್ದೇ ಇದೆ. ಯಾಕೆಂದರೆ, ಇಲ್ಲಿ ಕೂಡ 1 ರೂಪಾಯಿಗೆ ಒಂದು ಬೈಕ್, 50 ರೂಪಾಯಿಗೆ ಸೀರೆ… ಹೀಗೆ ಕೆಲವರು ಮಾರಾಟಕ್ಕಿಟ್ಟಿದ್ದಾರೆ. ಇಂಥವುಗಳು ವಿಶ್ವಾಸಾರ್ಹವಾಗಿರಲಾರವು. ಹೀಗಾಗಿ ಫೇಸ್‌ಬುಕ್ ತನ್ನ ಮಾರುಕಟ್ಟೆ ತಾಣದಲ್ಲಿ ವಸ್ತುಗಳ ಮಾರಾಟಕ್ಕೆ ಅಷ್ಟೇನೂ ಕಠಿಣವಾದ ನಿಯಮಗಳನ್ನು ರೂಪಿಸಿದಂತಿಲ್ಲ. ನಮ್ಮ ಎಚ್ಚರದಲ್ಲಿ ನಾವಿದ್ದರಾಯಿತು.
ಇಲ್ಲಿ ಮಾರಾಟ ಮಾಡುವುದು ಹೇಗೆ?
ಫೇಸ್‌ಬುಕ್ ಲಾಗಿನ್ ಆಗಿ, ಎಡಭಾಗದಲ್ಲಿ ಮಾರ್ಕೆಟ್‌ಪ್ಲೇಸ್ ಎಂಬುದನ್ನು ಕ್ಲಿಕ್ ಮಾಡಿ. ಆಗ ಮಾರಾಟಕ್ಕಿರುವ ಎಲ್ಲ ವಸ್ತುಗಳೂ ಕಾಣಿಸಿಕೊಳ್ಳುತ್ತವೆ. ಎಡಭಾಗದಲ್ಲಿಯೇ ‘ವಾಟ್ ಆರ್ ಯೂ ಲಿಸ್ಟಿಂಗ್’ ಎಂದು ಬರೆದಿರುವಲ್ಲಿ ಕ್ಲಿಕ್ ಮಾಡಿ, ನೀವು ಮಾರಾಟ ಮಾಡಬೇಕಿರುವ ವಸ್ತುವಿನ ವಿವರ ನೀಡಿ, ಫೋಟೋ ಕೂಡ ಅಪ್‌ಲೋಡ್ ಮಾಡಿ. ಎಲ್ಲ ವಿವರಗಳನ್ನೂ ದಾಖಲಿಸಿ ಪೋಸ್ಟ್ ಮಾಡಿದರಾಯಿತು. ನಮ್ಮಲ್ಲಿರುವ ವಸ್ತುಗಳನ್ನು ಮಾರಾಟ ಮಾಡುವುದು ಫೇಸ್‌ಬುಕ್ ಪೋಸ್ಟ್ ಮಾಡಿದಷ್ಟೇ ಸುಲಭ.
ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್ ಇರುವ ಬಹುನಿರೀಕ್ಷಿತ…
ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…
ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.
ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…
Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.
ಹಾಡುಗಾರಿಕೆ, ಚೆಂಡೆ-ಮದ್ದಳೆಯ ಬಿಡಿತ-ಮುಕ್ತಾಯಗಳ ಬಳಿಕ, ಬಂದಿದ್ದ ಗಣ್ಯರು, ಒಂದೊಂದು ಹಾಡಿನಲ್ಲಿ ಅಡಕವಾಗಿರುವ ಮಂತ್ರ ಮಾಂಗಲ್ಯದ ಪ್ರತಿಜ್ಞಾಗುಚ್ಛವನ್ನು ವಿವರಿಸಿ, ವಧು-ವರರಿಗೆ ಬೋಧಿಸಿದರು