ಇದು ಸಾಕಷ್ಟು ದಿನಗಳ ಮುಂಚಿತವಾಗಿ ಪ್ರಯಾಣದ ಸೀಟು ಕಾಯ್ದಿರಿಸುವವರಿಗಾಯಿತು. ಆದರೆ, ದಿಢೀರನೇ ರೈಲಲ್ಲಿ ಪ್ರಯಾಣಿಸಬೇಕಿದ್ದವರಿಗೆ ಮತ್ತು ದಿನಂಪ್ರತಿ ಓಡಾಡುವವರಿಗೆ, ಮಾಸಿಕ, ವಾರ್ಷಿಕ ರೈಲ್ವೇ ಪ್ರಯಾಣದ ಪಾಸ್ (ಸೀಸನ್ ಟಿಕೆಟ್) ಮಾಡಿಕೊಳ್ಳುವ ಜನ ಸಾಮಾನ್ಯರಿಗೆ ಅನುಕೂಲವಾಗಲು ಇತ್ತೀಚೆಗೆ ರೈಲ್ವೇ ಮಾಹಿತಿ ವ್ಯವಸ್ಥೆ ಕೇಂದ್ರ (ಸಿಆರ್‌ಐಎಸ್) ಇತ್ತೀಚೆಗೆ ಹೊಸದಾದ ಆ್ಯಪ್ ಒಂದನ್ನು ಅಭಿವೃದ್ಧಿಪಡಿಸಿ, ಗೂಗಲ್ ಪ್ಲೇ ಸ್ಟೋರ್, ವಿಂಡೋಸ್ ಸ್ಟೋರ್‌ನಲ್ಲಿ ಬಳಕೆಗೆ ಒದಗಿಸಿದೆ. UTS ಅಂತ ಆ್ಯಪ್ ಸ್ಟೋರ್‌ಗಳಲ್ಲಿ ಹುಡುಕಿ ಅಳವಡಿಸಿಕೊಳ್ಳಬಹುದು. ಇದು ಅನ್-ರಿಸರ್ವ್‌ಡ್ (ಮುಂಗಡ ಕಾಯ್ದಿರಿಸದ) ಟಿಕೆಟ್ ಪಡೆಯಲು ಅತ್ಯುತ್ತಮ. ಸಮಾಜದ ಕೆಳಸ್ತರದ ಮಂದಿಯನ್ನೂ ಈ ಡಿಜಿಟಲ್ ಕ್ರಾಂತಿಯು ತಲುಪಬೇಕೆನ್ನುವುದು ಇದರ ಉದ್ದೇಶವಾಗಿದ್ದು, ಶೀಘ್ರದಲ್ಲೇ ದೇಶದ ಎಲ್ಲ ರೈಲ್ವೇ ವಲಯಗಳಲ್ಲಿಯೂ ಈ ಆ್ಯಪ್ ಕಾರ್ಯಾಚರಿಸಲಿದೆ ಎಂದು ವಿವರಿಸಿದ್ದಾರೆ ಬೆಂಗಳೂರಿನ ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕರಾದ ಶ್ರೀಧರಮೂರ್ತಿ ಎಂ.ಎಸ್.
ಈ ಆ್ಯಪ್‌ನ ಉಪಯೋಗವೇನು?
ತುರ್ತಾಗಿ ರೈಲಿನಲ್ಲಿ ಯಾವುದೋ ಊರಿಗೆ ಪ್ರಯಾಣಿಸಬೇಕಾಗುತ್ತದೆ. ಇನ್ನೊಂದು ಗಂಟೆಯಲ್ಲಿ ರೈಲು ಹೊರಡುತ್ತದೆ. ಅಥವಾ ರೈಲಿನಲ್ಲಿ ಬಂದವರನ್ನು ಎದುರುಗೊಳ್ಳಲು ಹೋಗುವಾಗ ತಡವಾಗಿದೆ, ಪ್ಲ್ಯಾಟ್‌ಫಾರ್ಮ್ ಟಿಕೆಟ್ ಕೊಳ್ಳಲು ಇಲ್ಲವೇ ರೈಲ್ವೇ ಟಿಕೆಟ್ ಕೊಳ್ಳಲು ಸರದಿಯಲ್ಲಿ ನಿಲ್ಲುವುದು ಆಗದ ಹೋಗದ ಮಾತು. ಅಷ್ಟುದ್ದ ಕ್ಯೂ ಇದೆ. ಇಂಥ ಸಮಯಕ್ಕೆ ಉಪಯೋಗಕ್ಕೆ ಬರುತ್ತದೆ ಯುಟಿಎಸ್ ಆ್ಯಪ್.
ಇದರಲ್ಲಿ ಪೇಪರ್‌ಲೆಸ್ (ಅಂದರೆ ಮುದ್ರಿತ ಟಿಕೆಟ್-ರಹಿತ) ಪ್ರಯಾಣ ವ್ಯವಸ್ಥೆಯೂ ಇದೆ. ಅಂದರೆ, ಈ ಆ್ಯಪ್ ಮೂಲಕ ಟಿಕೆಟ್ ತೋರಿಸಿದರೆ ಸಾಕಾಗುತ್ತದೆ. ಸದ್ಯಕ್ಕೆ ಇರುವ ವ್ಯವಸ್ಥೆಯ ಪ್ರಕಾರ, ಯಾವುದೇ ಸ್ಟೇಶನ್‌ನ ಐದು ಕಿಲೋಮೀಟರ್ ವ್ಯಾಪ್ತಿಯಲ್ಲಿ, ಸ್ಟೇಶನ್ ಹೊರಗೆ ಅಥವಾ ಹಳಿಗಳ ಸಮೀಪ ನೀವಿದ್ದರೆ, ಜಿಪಿಎಸ್ ತಂತ್ರಜ್ಞಾನವನ್ನು ಆಧರಿಸಿ, ಆ ಸ್ಟೇಶನ್‌ನಿಂದಲೇ ಗಮ್ಯ ಸ್ಟೇಶನ್‌ಗೆ ಕ್ಷಿಪ್ರವಾಗಿ ಟಿಕೆಟ್ ಖರೀದಿಸಬಹುದು. ಇದಕ್ಕೆ ಇಂಟರ್ನೆಟ್ ಸಂಪರ್ಕ ಬೇಕಿರುವುದು ಮೂಲಭೂತ ಅಗತ್ಯ. ಸದ್ಯಕ್ಕೆ ನೈಋತ್ಯ ರೈಲ್ವೇ ವ್ಯಾಪ್ತಿಯಲ್ಲಿ ಮಾತ್ರ ಇದು ಜಾರಿಯಲ್ಲಿದೆ. ಉಳಿದೆಡೆ ಟಿಕೆಟ್ ಮುದ್ರಣ ಮಾಡಬೇಕಿದೆ.
ಆ್ಯಪ್ ತೆರೆದು, ನಾರ್ಮಲ್ ಬುಕಿಂಗ್ ವಿಭಾಗದಲ್ಲಿ ಈ ಆ್ಯಪ್ ಮೂಲಕ ಟಿಕೆಟ್ ಬುಕ್ ಮಾಡಿದರೆ, ರೈಲು ನಿಲ್ದಾಣಗಳಲ್ಲಿರುವ ಟಿಕೆಟ್ ವೆಂಡಿಂಗ್ ಯಂತ್ರಗಳ ಮೂಲಕ ಟಿಕೆಟಿನ ಪ್ರಿಂಟ್ ತೆಗೆದುಕೊಂಡು ರೈಲು ಏರಬಹುದು. ಇದರಿಂದ ಟಿಕೆಟ್‌ಗಾಗಿ ಸರದಿಯಲ್ಲಿ ಕಾದು ನಿಲ್ಲುವುದು ತಪ್ಪುತ್ತದೆ. ಪ್ಲ್ಯಾಟ್‌ಫಾರ್ಮ್ ಟಿಕೆಟನ್ನೂ ಇದೇ ವಿಧಾನದಲ್ಲಿ ಖರೀದಿಸಬಹುದು. ಜತೆಗೆ ಸೀಸನ್ ಟಿಕೆಟ್ (ಪಾಸ್) ನವೀಕರಣವನ್ನೂ ಮಾಡಬಹುದು, ಹೊಸದಾಗಿಯೂ ಖರೀದಿಸಬಹುದು. ಆದರೆ ಗಮನಿಸಬೇಕಾದ ಅಂಶವೆಂದರೆ, ಇದು ಸೀಟನ್ನು ಮುಂಗಡವಾಗಿ ಕಾಯ್ದಿರಿಸುವುದಕ್ಕಾಗಿ ಅಲ್ಲ. ದಿಢೀರ್ ಪ್ರಯಾಣಕ್ಕೆ ಮತ್ತು ಕಾಯ್ದಿರಿಸದ (ಜನರಲ್) ಕಂಪಾರ್ಟ್‌ಮೆಂಟ್‌ಗಳಲ್ಲಿ ಪ್ರಯಾಣಕ್ಕಾಗಿ ಟಿಕೆಟ್ ಖರೀದಿಗೆ ಅವಕಾಶ ಮಾಡಿಕೊಡುತ್ತದಷ್ಟೆ. ರೈಲೇರಿದ ಬಳಿಕ ಟಿಕೆಟ್ ಪರಿವೀಕ್ಷಕರೊಂದಿಗೆ ಮಾತನಾಡಿ ಸೀಟು ಇದ್ದರೆ ಟಿಕೆಟನ್ನು ಅಪ್‌ಗ್ರೇಡ್ ಮಾಡಿಕೊಳ್ಳಬಹುದು.
ಟಿಕೆಟ್ ಖರೀದಿಗಾಗಿ ರೈಲ್ವೇ ವ್ಯಾಲೆಟ್ ಹೆಸರಿನ ಆನ್‌ಲೈನ್ ಪರ್ಸ್‌ಗೆ ನೋಂದಾಯಿಸಿಕೊಳ್ಳಬಹುದು ಅಥವಾ ಬೇರೆ ಪಾವತಿ ಗೇಟ್‌ವೇಗಳ ಮೂಲಕ ಪೇಟಿಎಂ, ಮೊಬಿಕ್ವಿಕ್, ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಇಲ್ಲವೇ ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಹಣ ಪಾವತಿಸಬಹುದು.
ಈ ಆ್ಯಪ್ ವಿಶೇಷವಾಗಿ ಜನ ಸಾಮಾನ್ಯರಿಗೆ, ನಿತ್ಯ ರೈಲು ಪ್ರಯಾಣಿಕರಿಗೆ ಹೆಚ್ಚು ಅನುಕೂಲಕರ. ಪ್ರಸ್ತುತ ನೈಋತ್ಯ ರೈಲ್ವೇ ವಲಯದಲ್ಲಿ ಟಿಕೆಟ್‌ಲೆಸ್ (ಟಿಕೆಟ್ ಮುದ್ರಿಸಬೇಕಾದ ಅನಿವಾರ್ಯತೆಯಿಲ್ಲದ ವ್ಯವಸ್ಥೆ) ಜಾರಿಗೊಳಿಸಲಾಗಿದೆ. ಕರ್ನಾಟಕದ ರೈಲ್ವೇ ಸಂಪರ್ಕ ವ್ಯವಸ್ಥೆಯಿರುವ ದಕ್ಷಿಣ ರೈಲ್ವೇ, ದಕ್ಷಿಣ ಮಧ್ಯ ರೈಲ್ವೇ, ಮಧ್ಯ ರೈಲ್ವೇ, ಕೊಂಕಣ ರೈಲ್ವೇಗಳಲ್ಲಿಯೂ ಇದು ಶೀಘ್ರದಲ್ಲೇ ಜಾರಿಗೆ ಬರಲಿದೆ. ಹೀಗಾಗಿ ಈ ಭಾಗಗಳಲ್ಲಿರುವವರು ಟಿಕೆಟ್ ಬುಕ್ ಮಾಡಿದ ತಕ್ಷಣ, ಬಹುತೇಕ ಎಲ್ಲ ಪ್ರಮುಖ ರೈಲು ನಿಲ್ದಾಣಗಳಲ್ಲಿ ಲಭ್ಯವಿರುವ ಟಿಕೆಟ್ ವಿತರಣಾ ಯಂತ್ರಗಳ ಮೂಲಕ ಮೊಬೈಲ್ ಸಂಖ್ಯೆ ಹಾಗೂ ಬುಕಿಂಗ್ ಐಡಿಯ ದಾಖಲಿಸಿ, ಪ್ರಿಂಟ್ ತೆಗೆದುಕೊಂಡು ಪ್ರಯಾಣ ಮುಂದುವರಿಸಬಹುದು. ಟಿಕೆಟ್ ಮುದ್ರಣವಾದ ಬಳಿಕ ಮೂರು ಗಂಟೆಗಳೊಳಗೆ ಪ್ರಯಾಣ ಆರಂಭಿಸಬೇಕಾಗುತ್ತದೆ. ಪ್ಲ್ಯಾಟ್‌ಫಾರ್ಮ್ ಟಿಕೆಟಿಗೆ 2 ಗಂಟೆ ಮಾನ್ಯತೆ ಇದೆ. ಮತ್ತೊಂದು ನೆನಪಿಟ್ಟುಕೊಳ್ಳಬೇಕಾದ ಅಂಶವೆಂದರೆ, ಈ ಆ್ಯಪ್ ನಿರ್ದಿಷ್ಟ ಮೊಬೈಲ್‌ಗೆ ಲಿಂಕ್ ಆಗಿರುತ್ತದೆ. ನೀವು ಮೊಬೈಲ್ ಹ್ಯಾಂಡ್‌ಸೆಟ್ ಬದಲಿಸಿದ ಬಳಿಕ ಆ್ಯಪ್ ಅಳವಡಿಸಿಕೊಳ್ಳಬೇಕಿದ್ದರೆ, ಅದರಲ್ಲಿರುವ ‘ಚೇಂಜ್ ಹ್ಯಾಂಡ್‌ಸೆಟ್’ ಎಂಬುದನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ.
ಈ ಆ್ಯಪ್ ಉಪಯೋಗಕ್ಕೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆಗಳು ಎದುರಾದರೆ ಕಸ್ಟಮರ್ ಕೇರ್ ಸಂಖ್ಯೆ 8861309572 ಗೆ ಕರೆ ಮಾಡಬಹುದು. ಅದೇ ರೀತಿ ಸಲಹೆಗಳಿದ್ದಲ್ಲಿ ಟ್ವಿಟರ್ ಮೂಲಕ @SrDcmSBC ಸಂಪರ್ಕಿಸಬಹುದು.
ಈ ಆ್ಯಪ್‌ನಿಂದ ಏನೆಲ್ಲ ಸಾಧ್ಯ?
* ತಕ್ಷಣದ ಟಿಕೆಟ್ ಬುಕಿಂಗ್
* ಟಿಕೆಟ್ ರದ್ದು
* ಸೀಸನ್ ಟಿಕೆಟ್ ಖರೀದಿ/ನವೀಕರಣ
* ಪ್ಲ್ಯಾಟ್‌ಫಾರಂ ಟಿಕೆಟ್
* ಆರ್-ವ್ಯಾಲೆಟ್‌ನಲ್ಲಿ ಹಣ ತುಂಬಿದ್ದರೆ ಬುಕಿಂಗ್ ಸುಲಭ
ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್ ಇರುವ ಬಹುನಿರೀಕ್ಷಿತ…
ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…
ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.
ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…
Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.
ಹಾಡುಗಾರಿಕೆ, ಚೆಂಡೆ-ಮದ್ದಳೆಯ ಬಿಡಿತ-ಮುಕ್ತಾಯಗಳ ಬಳಿಕ, ಬಂದಿದ್ದ ಗಣ್ಯರು, ಒಂದೊಂದು ಹಾಡಿನಲ್ಲಿ ಅಡಕವಾಗಿರುವ ಮಂತ್ರ ಮಾಂಗಲ್ಯದ ಪ್ರತಿಜ್ಞಾಗುಚ್ಛವನ್ನು ವಿವರಿಸಿ, ವಧು-ವರರಿಗೆ ಬೋಧಿಸಿದರು