ಒಪೆರಾ ಬ್ರೌಸರ್ ಸ್ಮಾರ್ಟ್ ಫೋನ್‌ಗಳಿಗೆ ಕೂಡ ಲಭ್ಯವಿದ್ದು, ಒಪೆರಾ ಮಿನಿ ಆವೃತ್ತಿಯು ಡೇಟಾ (ಇಂಟರ್ನೆಟ್ ವೆಚ್ಚ) ಉಳಿತಾಯ ಮಾಡಲು ಸಹಕಾರಿ ಎಂಬ ಬಗ್ಗೆ ಸಾಕಷ್ಟು ಪ್ರಚಾರವನ್ನು ಕೇಳಿರಬಹುದು. ಇದನ್ನು ಬಳಸಿ ನೋಡಿದವರು ಈ ಕುರಿತು ತೃಪ್ತಿಯನ್ನೂ ವ್ಯಕ್ತಪಡಿಸಿದ್ದಾರೆ.
ನಾನೀಗ ಡೆಸ್ಕ್‌ಟಾಪ್ ಕಂಪ್ಯೂಟರಲ್ಲಿ ಒಪೆರಾ ಬ್ರೌಸರ್ ಅಳವಡಿಸಿಕೊಂಡು ಬಳಸುತ್ತಿದ್ದೇನೆ. ಇದರ ಕೆಲವು ವೈಶಿಷ್ಟ್ಯಗಳಂತೂ ಅದ್ಭುತವಾಗಿದೆ. ಒಪೆರಾ ಯಾಕೆ ನಿಮಗೆ ಇಷ್ಟವಾಗಬಹುದು? ಮುಂದೆ ಓದಿ.
ಸೈಡ್‌ಬಾರ್: ಅದರ ಹೊಸ ವೈಶಿಷ್ಟ್ಯವೆಂದರೆ, ಬ್ರೌಸರ್ ತೆರೆದಾಕ್ಷಣ ಎಡಭಾಗದಲ್ಲಿ ಪುಟ್ಟ ಸೈಡ್ ಬಾರ್ ಇದೆ. ಅದರಲ್ಲಿ ವಾಟ್ಸಾಪ್, ಟೆಲಿಗ್ರಾಂ, ಫೇಸ್‌ಬುಕ್ ಮೆಸೆಂಜರ್, ಸ್ಕ್ರೀನ್ ಶಾಟ್ ತೆಗೆಯುವ ಬಟನ್, ಫೇವರಿಟ್ ಬಟನ್, ತಾಜಾ ಸುದ್ದಿಗಳ ಫೀಡ್, ಡೌನ್‌ಲೋಡ್ ಫೋಲ್ಡರ್‌ಗೆ ಹೋಗುವ ಶಾರ್ಟ್‌ಕಟ್‌ಗಳು ಗಮನ ಸೆಳೆಯುತ್ತವೆ.
ವಾಟ್ಸಾಪ್ ಮತ್ತು ಟೆಲಿಗ್ರಾಂ: ಕಂಪ್ಯೂಟರಿನಲ್ಲೇ ವಾಟ್ಸಾಪ್ ಅಥವಾ ಟೆಲಿಗ್ರಾಂ ಎಂಬ ಕಿರು ಸಾಮಾಜಿಕ ಜಾಲತಾಣದಲ್ಲಿ ಕೆಲಸ ಮಾಡಲು ಈ ಬ್ರೌಸರ್ ಸಾಕಾಗುತ್ತದೆ. ಒಂದು ಸಲ ಬ್ರೌಸರ್‌ನ ವಾಟ್ಸಾಪ್ ಬಟನ್ ಕ್ಲಿಕ್ ಮಾಡಿ, ಅದರ ಕ್ಯುಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿ, ಲಾಗಿನ್ ಆದರಾಯಿತು. ಇದರಲ್ಲಿ ವಾಟ್ಸಾಪ್ ಬಳಸುವ ಉಪಯೋಗವೆಂದರೆ, ಇಲ್ಲಿ ನಿಮ್ಮ ಸಿಸ್ಟಂಗೆ ಡೌನ್‌ಲೋಡ್ ಮಾಡಿಕೊಳ್ಳದೆಯೇ ಫೋಟೋ, ವೀಡಿಯೋ ಅಥವಾ ಜಿಫ್ ಫೈಲುಗಳನ್ನು, ಇತರ ಡಾಕ್ಯುಮೆಂಟ್‌ಗಳನ್ನು ನೋಡಬಹುದು. ಇಲ್ಲಿಂದ ಫೋಟೋ/ವೀಡಿಯೋ ಮೇಲೆ ಕ್ಲಿಕ್ ಮಾಡಿದರೆ ಲೋಡ್ ಆಗುತ್ತದೆಯೇ ಹೊರತು ನಮ್ಮ ಮೊಬೈಲ್‌ಗೆ ಅದು ಡೌನ್‌ಲೋಡ್ ಆಗುವುದಿಲ್ಲ. ಬೇಕಾದರೆ ಮಾತ್ರ ಡೌನ್‌ಲೋಡ್ ಮಾಡಿಕೊಳ್ಳಬಹುದು. ಹೀಗಾಗಿ ಮೊಬೈಲ್‌ನಲ್ಲಿ ಸ್ಟೋರೇಜ್ ಸ್ಪೇಸ್ ಉಳಿತಾಯವಾಗುತ್ತದೆ. ನಾನು ಗಮನಿಸಿದ ಮತ್ತೊಂದು ವಿಶೇಷವೆಂದರೆ, ಮೊಬೈಲ್‌ನಲ್ಲಿ ಒಮ್ಮೆ ಡೌನ್‌ಲೋಡ್ ಮಾಡಿಕೊಂಡು, ನಂತರ ಗ್ಯಾಲರಿಗೆ ಹೋಗಿ ಡಿಲೀಟ್ ಮಾಡಿದ ಫೈಲುಗಳನ್ನು ಒಪೆರಾ ಬ್ರೌಸರ್‌ನ ಕಿರು ತಂತ್ರಾಂಶದ ಮೂಲಕ ಮರಳಿ ನೋಡಬಹುದು. ಉದಾಹರಣೆಗೆ, ಗ್ಯಾಲರಿಗೆ ಹೋಗಿ ಫೋಟೋ ಡಿಲೀಟ್ ಮಾಡಿದರೆ, ಮೊಬೈಲ್‌ನಲ್ಲಿ ವಾಟ್ಸಾಪ್ ನೋಡಿದಾಗ ಆ ಫೋಟೋದ ಇಂಪ್ರೆಶನ್ ಮಾತ್ರ ಮಸುಕಾಗಿ ಕಾಣಿಸುತ್ತದೆ. ಅಲ್ಲಿ ಕ್ಲಿಕ್ ಮಾಡಿದರೆ, ‘ಈ ಫೈಲ್ ಇಲ್ಲ’ ಎಂಬ ಸಂದೇಶ ಬರುತ್ತದೆ, ಆದರೆ ಒಪೆರಾದಲ್ಲಿರುವ ವಾಟ್ಸಾಪ್ ಸೈಡ್‌ಬಾರ್ ಮೂಲಕ ಇದನ್ನೇ ನೋಡಿದರೆ, ಮತ್ತೆ ಅದೇ ಫೋಟೋ ಸರಿಯಾಗಿ ನೋಡಬಹುದು, ಡೌನ್‌ಲೋಡ್ ಮಾಡಬಹುದು. ಅಂದರೆ ಮೊಬೈಲಲ್ಲಿ ಅಪ್ಪಿ ತಪ್ಪಿ ಗ್ಯಾಲರಿಗೆ ಹೋಗಿ ನೀವೇನಾದರೂ ಫೋಟೋ ಡಿಲೀಟ್ ಮಾಡಿಬಿಟ್ಟರೆ, ಅದು ಮರಳಿ ಬೇಕೆಂದಾದರೆ ನೀವು ಈ ಬ್ರೌಸರ್‌ನ ವಾಟ್ಸಾಪ್ ತಂತ್ರಾಂಶದ ಮೂಲಕ ರಿಕವರ್ ಮಾಡಿಕೊಳ್ಳಬಹುದು. ಇದಲ್ಲದೆ, ಯಾವುದೇ ಸಂದೇಶ ಬಂದಾಗ ಡೆಸ್ಕ್‌ಟಾಪ್ ಮೇಲೆಯೇ ನೋಟಿಫಿಕೇಶನ್ ಕಾಣಿಸುವಂತೆಯೂ ಮಾಡಿಕೊಳ್ಳುವ ಆಯ್ಕೆ ಇಲ್ಲಿ ಇದೆ.
ಫೇಸ್‌ಬುಕ್ ಮೆಸೆಂಜರ್: ಮೊಬೈಲ್‌ನಲ್ಲಿರುವ ಆ್ಯಪ್‌ನಂತೆಯೇ ಇದು ಕೂಡ ಒಪೆರಾ ಬ್ರೌಸರ್‌ನ ಸೈಡ್‌ಬಾರ್‌ನಲ್ಲಿದೆ. ಫೇಸ್‌ಬುಕ್ ಪುಟ ತೆರೆದಿಟ್ಟುಕೊಳ್ಳುವ ಬದಲು ಮೆಸೆಂಜರ್‌ನಲ್ಲಿ ಮಾಡಬಹುದಾದ ಕೆಲಸಗಳನ್ನು ಸೈಡ್‌ಬಾರ್ ಮೂಲಕವೇ ಮುಗಿಸಬಹುದು.
ಸ್ನ್ಯಾಪ್ ಶಾಟ್: ಮತ್ತೊಂದು ಅತ್ಯುತ್ತಮ ಪ್ರಯೋಜನಕಾರಿ ಅಂಶವೆಂದರೆ, ಸ್ಕ್ರೀನ್ ಶಾಟ್ ತೆಗೆಯಲು ಸರಳವಾದ ಟೂಲ್ ಇದರೊಳಗಿದೆ. ಸೈಡ್‌ಬಾರ್‌ನಲ್ಲಿ ಕ್ಯಾಮೆರಾ ಐಕಾನ್ ಕ್ಲಿಕ್ ಮಾಡಿದ ತಕ್ಷಣ, ಒಪೆರಾ ಬ್ರೌಸರ್‌ನಲ್ಲಿರುವ ಯಾವುದೇ ಪುಟದ ಯಾವುದೇ ಭಾಗದ ಫೋಟೋ (ಸ್ಕ್ರೀನ್ ಶಾಟ್) ತೆಗೆದು ಸೇವ್ ಮಾಡಬಹುದು. ಮೌಸ್‌ನ ಕರ್ಸರ್‌ನಿಂದ ನಮಗೆ ಬೇಕಾದಷ್ಟೇ ಭಾಗವನ್ನು ಆಯ್ಕೆ ಮಾಡಿಕೊಂಡು ಸೇವ್ ಮಾಡಬಹುದಾಗಿದೆ.
ನ್ಯೂಸ್ ಫೀಡ್: ಕೆಲವು ಆನ್‌ಲೈನ್ ಸುದ್ದಿಯ ತಾಣಗಳಿಂದ ಬರುವ ಸುದ್ದಿಗಳೆಲ್ಲದರ ಮೇಲೆ ಕಣ್ಣಿರಿಸಲು ಇದು ಅತ್ಯುಪಯುಕ್ತ. ನಮಗೆ ಬೇಕಾದ ವೆಬ್ ಸೈಟನ್ನು ಸರ್ಚ್ ಮಾಡಿಕೊಂಡು ಸೇರಿಸುತ್ತಾ ಹೋದರೆ, ಎಲ್ಲವುಗಳಿಂದ ಬರುವ ತಾಜಾ ಸುದ್ದಿಗಳು ಇಲ್ಲಿ ಪಟ್ಟಿ ರೂಪದಲ್ಲಿ ಕಾಣಿಸುತ್ತಾ ಇರುತ್ತವೆ. ಬೇಕಾದ ಸುದ್ದಿ ಮೂಲಗಳನ್ನು ಸೇರಿಸಿಕೊಳ್ಳುವ ಆಯ್ಕೆಯೂ ಇದೆ.
ಕನ್ವರ್ಟರ್‌ಗಳು: ಯಾವುದೇ ಪುಟವನ್ನು ಬ್ರೌಸ್ ಮಾಡುವಾಗ ಅದರಲ್ಲಿರಬಹುದಾದ ಅನ್ಯ ದೇಶೀ ಕರೆನ್ಸಿಯ ಸಂಖ್ಯೆಯನ್ನು ಸೆಲೆಕ್ಟ್ ಮಾಡಿದರೆ, ಭಾರತೀಯ ರೂಪಾಯಿಗಳಿಗೆ ಪರಿವರ್ತಿಸಿ ತೋರಿಸುವ ವ್ಯವಸ್ಥೆಯು ಈ ಬ್ರೌಸರಿನಲ್ಲೇ ಲಭ್ಯ. ಅಂದರೆ ಇದು ಯಾವುದೇ ಕರೆನ್ಸಿಯನ್ನು ಭಾರತೀಯ ರೂಪಾಯಿಗೆ ಪರಿವರ್ತಿಸಿ ಪಾಪ್‌ಅಪ್ ತೋರಿಸುತ್ತದೆ. ಅದೇ ರೀತಿ ಇತರ ಅಳತೆಯ ಮೌಲ್ಯಗಳನ್ನು (ಇಂಚನ್ನು ಸೆಂಟಿಮೀಟರಿಗೆ, ಪೌಂಡ್‌ನಿಂದ ಕಿಲೋ, ಲಂಡನ್ ಸಮಯವನ್ನು ಭಾರತೀಯ ಸಮಯಕ್ಕೆ, ಮೈಲಿ ಇದ್ದದ್ದು ಕಿಲೋಮೀಟರಿಗೆ) ಮುಂತಾಗಿ ಭಾರತೀಯ ಮಾನದಂಡಕ್ಕೆ ಪರಿವರ್ತಿಸುವ ವ್ಯವಸ್ಥೆಯೂ ಸಂಬಂಧಿತ ಪಠ್ಯ ಭಾಗ ಸೆಲೆಕ್ಟ್ ಮಾಡಿದಾಗಲೇ ಕಾಣಿಸುತ್ತದೆ. ಸೆಲೆಕ್ಟ್ ಮಾಡಿದರಾಯಿತು, ಬೇರೇನೂ ಮಾಡಬೇಕಿಲ್ಲ ಮತ್ತು ಅದು ಸ್ಕ್ರೀನ್ ಮೇಲೆ ಗೋಚರಿಸುತ್ತದೆ.
ಉಳಿದಂತೆ, ಇದನ್ನು ಅಳವಡಿಸಿಕೊಂಡ ತಕ್ಷಣ, ಕ್ರೋಮ್ ಅಥವಾ ಫೈರ್‌ಫಾಕ್ಸ್ ಮುಂತಾದ ಬೇರೆ ಬ್ರೌಸರುಗಳಲ್ಲಿ ನೀವು ಮಾಡಿಟ್ಟುಕೊಂಡಿರುವ ಬುಕ್‌ಮಾರ್ಕ್‌ಗಳು (ಫೇವರಿಟ್ ಮಾಡಿಕೊಂಡಿರುವ ವೆಬ್ ಪುಟಗಳ ಮಾಹಿತಿ) ಸ್ವಯಂಚಾಲಿತವಾಗಿ ಒಪೆರಾ ಬ್ರೌಸರ್‌ಗೆ ಇಂಪೋರ್ಟ್ ಆಗಿರುತ್ತವೆ. ಅದೇ ರೀತಿ, ಬ್ರೌಸರ್ ತೆರೆದಾಕ್ಷಣ ನಾವು ಹೆಚ್ಚಾಗಿ ನೋಡುವ ವೆಬ್ ತಾಣಗಳ ಶಾರ್ಟ್‌ಕಟ್‌ಗಳು ಪಿನ್ ಆಗಿರುತ್ತವೆ, ಅವುಗಳನ್ನು ನಮಗೆ ಬೇಕಾದಂತೆ ಬದಲಾಯಿಸಿಕೊಳ್ಳಬಹುದು, ಡಿಲೀಟ್ ಮಾಡಬಹುದು, ಸೇರಿಸಿಕೊಳ್ಳಬಹುದು.
ನೆನಪಿಡಿ: ಒಂದಕ್ಕಿಂತ ಹೆಚ್ಚು ಬ್ರೌಸರ್ ಅಳವಡಿಸಿಕೊಂಡಾಗ, ಯಾವುದು ಡೀಫಾಲ್ಟ್ ಇರಬೇಕು (ಅಂದರೆ ಯಾವುದಾದರೂ ಲಿಂಕ್ ಕ್ಲಿಕ್ ಮಾಡಿದಾಗ ಯಾವ ಬ್ರೌಸರ್‌ನಲ್ಲಿ ವೆಬ್ ಪುಟ ತೆರೆದುಕೊಳ್ಳಬೇಕು) ಎಂದು ಹೊಂದಿಸಿಕೊಳ್ಳಬೇಕಾಗುತ್ತದೆ. ಒಂದು ಸಲ ಡೀಫಾಲ್ಟ್ ಮಾಡಿಟ್ಟರೆ, ನಾವು ಬೇರೆ ಕಡೆ (ಉದಾ. ಇಮೇಲ್) ಇರುವ ಯಾವುದೇ ಲಿಂಕ್ ಕ್ಲಿಕ್ ಮಾಡಿದರೆ ಈ ಬ್ರೌಸರಿನಲ್ಲೇ ತೆರೆದುಕೊಳ್ಳುತ್ತದೆ.
ಮಾಹಿತಿ@ತಂತ್ರಜ್ಞಾನ ಅಂಕಣ By ಅವಿನಾಶ್ ಬಿ. ವಿಜಯ ಕರ್ನಾಟಕ 16 ಅಕ್ಟೋಬರ್ 2017
ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…
ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.
ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…
Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.
ಹಾಡುಗಾರಿಕೆ, ಚೆಂಡೆ-ಮದ್ದಳೆಯ ಬಿಡಿತ-ಮುಕ್ತಾಯಗಳ ಬಳಿಕ, ಬಂದಿದ್ದ ಗಣ್ಯರು, ಒಂದೊಂದು ಹಾಡಿನಲ್ಲಿ ಅಡಕವಾಗಿರುವ ಮಂತ್ರ ಮಾಂಗಲ್ಯದ ಪ್ರತಿಜ್ಞಾಗುಚ್ಛವನ್ನು ವಿವರಿಸಿ, ವಧು-ವರರಿಗೆ ಬೋಧಿಸಿದರು
ಮುದ್ದಣನ ಕುಮಾರ ವಿಜಯದ ಸುಮಾರು 700ರಷ್ಟಿರುವ ಹಾಡುಗಳನ್ನು ಹಾಡಿದ್ದು ತೆಂಕು ತಿಟ್ಟಿನ ಬಲಿಪ ಶೈಲಿಯ ಪ್ರತಿಪಾದಕ ಭಾಗವತರೇ. ಏಳೆಂಟು ವರ್ಷಗಳ…