ಫೇಸ್‌ಬುಕ್‌ನಲ್ಲಿ Trusted Contacts: ಏನಿದರ ಪ್ರಯೋಜನ, ಬಳಕೆ ಹೇಗೆ?

ಖಾಸಗಿ ಮಾಹಿತಿ ಸೋರಿಕೆಯ ಕುರಿತಾಗಿ ಭಾರಿ ಸುದ್ದಿ ಕೇಳಿ ಬಂದ ಬಳಿಕ ಪ್ರೈವೆಸಿ ಬಗ್ಗೆ ಬಹುತೇಕರು ಹೆಚ್ಚು ಎಚ್ಚರಿಕೆ ವಹಿಸುತ್ತಿದ್ದಾರೆ. ನನ್ನ ಲೇಖನಗಳಲ್ಲಿ ಪದೇ ಪದೇ ಹೇಳುತ್ತಿರುವಂತೆ, ಯಾವುದೇ ಅನಗತ್ಯ ಮತ್ತು ಸಂದೇಹಾಸ್ಪದ ಲಿಂಕ್‌ಗಳನ್ನು ಕುತೂಹಲಕ್ಕಾಗಿಯೂ ಕ್ಲಿಕ್ ಮಾಡುವ ಮುನ್ನ ಎರಡೆರಡು ಬಾರಿ ದೃಢಪಡಿಸಿಕೊಳ್ಳಿ ಎಂಬ ಮಾತನ್ನು ಈಗಲೂ ಹೇಳುತ್ತಿದ್ದೇನೆ. ಇದು ನಮ್ಮ ಮಾಹಿತಿಯ ಸುರಕ್ಷತೆಗಾಗಿ. ಈ ಆನ್‌ಲೈನ್ ರಕ್ಷಣೆಯ ಮತ್ತೊಂದು ರೂಪವೆಂದರೆ, ಪದೇ ಪದೇ ಪಾಸ್‌ವರ್ಡ್ ಬದಲಾಯಿಸುವುದು.

ಆಗಾಗ್ಗೆ ಪಾಸ್‌ವರ್ಡ್ ಬದಲಿಸಬೇಕಾಗಿರುವುದು ಒಳ್ಳೆಯ ವ್ಯವಸ್ಥೆಯಾದರೂ, ಈಗಾಗಲೇ ಫೇಸ್‌ಬುಕ್, ಟ್ವಿಟರ್, ಆಫೀಸ್ ಇಮೇಲ್, ಖಾಸಗಿ ಇಮೇಲ್, ಬ್ಯಾಂಕ್ ಖಾತೆ, ಇನ್‌ಸ್ಟಾಗ್ರಾಂ… ಹೀಗೆ ಸಾಕಷ್ಟು ಪಾಸ್‌ವರ್ಡ್‌ಗಳಿವೆ. ಕೆಲವಂತೂ ಮೂರು ತಿಂಗಳಿಗೊಮ್ಮೆ ಕಡ್ಡಾಯವಾಗಿ ಬದಲಾಯಿಸಬೇಕಾಗುತ್ತದೆ. ಎಲ್ಲವುಗಳನ್ನೂ ನೆನಪಿಟ್ಟುಕೊಳ್ಳುವ ಉಸಾಬರಿಯೇ ಬೇಡ ಅಂತಂದುಕೊಂಡು ಎಲ್ಲದಕ್ಕೂ ಒಂದೇ ಪಾಸ್‌ವರ್ಡ್ ಕೊಟ್ಟರೆ? ಖಂಡಿತಾ ಇದು ಸರಿಯಲ್ಲ. ಯಾಕೆಂದರೆ, ಎಲ್ಲಾದರೂ ಒಂದು ಆನ್‌ಲೈನ್ ಖಾತೆಗೆ ಹ್ಯಾಕರ್‌ಗಳು ಕನ್ನ ಹಾಕಿದರೆ, ನಿಮ್ಮ ಉಳಿದೆಲ್ಲ ಖಾತೆಗಳನ್ನೂ ಹ್ಯಾಕ್ ಮಾಡಬಹುದಾದ ಸಾಧ್ಯತೆ ಹೆಚ್ಚಾಗುತ್ತದೆ. ಹೀಗಾಗಿ ಪ್ರತ್ಯೇಕ ಪಾಸ್‌ವರ್ಡ್ ಇಟ್ಟುಕೊಳ್ಳುವುದು ಉಚಿತವಾದ ಕ್ರಮ.

ಈ ಪಾಸ್‌ವರ್ಡ್‌ಗಳ ಭರಾಟೆಯಲ್ಲಿ ಪ್ರತಿಯೊಂದನ್ನೂ ನೆನಪಿಟ್ಟುಕೊಳ್ಳುವುದು ಕಷ್ಟವಾಗಿರುವಾಗ, ಅದರಲ್ಲೂ ವಿಶೇಷವಾಗಿ ತುಂಬಾ ತುರ್ತು ಸಂದರ್ಭದಲ್ಲಿ ಅದು ಮರೆತುಹೋಗುವುದೇ ಹೆಚ್ಚು. ಕೆಲವು ಖಾತೆಗಳು, ವಿಶೇಷತಃ ಬ್ಯಾಂಕ್ ಖಾತೆಗಳು ನಿರ್ದಿಷ್ಟ ಬಾರಿ ವಿಫಲ ಪ್ರಯತ್ನ ನಡೆಸಿದ ಬಳಿಕ ಬ್ಲಾಕ್ ಆಗಿಬಿಡುತ್ತವೆ. ನಮಗಿದು ಕಿರಿಕಿರಿಯಾದರೂ ಹೆಚ್ಚುವರಿ ಸುರಕ್ಷತೆ ನೀಡುವುದಂತೂ ಹೌದು. ಹೀಗಾಗಿ ಇದನ್ನು ನಾವು ದೂರುವಂತಿಲ್ಲ. ಈಗ ಫೇಸ್‌ಬುಕ್‌ನಲ್ಲಿ ಕೂಡ ತಿಳಿದೋ ತಿಳಿಯದೆಯೋ ಹಲವು ಬಾರಿ ತಪ್ಪು ಪಾಸ್‌ವರ್ಡ್ ನಮೂದಿಸಿದಾಗ, ಯಾರೋ ಈ ಖಾತೆಯನ್ನು ಹ್ಯಾಕ್ ಮಾಡಲೆತ್ನಿಸುತ್ತಿದ್ದಾರೆ ಎಂದು ಕೃತಕ ಬುದ್ಧಿಮತ್ತೆಯ ಮೂಲಕ ಅರಿತುಕೊಳ್ಳುವ ಫೇಸ್‌ಬುಕ್, ಅಂತಹಾ ಖಾತೆಯನ್ನು ಬ್ಲಾಕ್ ಮಾಡಿಬಿಡಬಹುದು. ಇತ್ತೀಚೆಗೆ ಓದುಗರೊಬ್ಬರು ಕರೆ ಮಾಡಿ ಈ ಸಮಸ್ಯೆ ಬಗ್ಗೆ ಹೇಳಿಕೊಂಡರು. ಈ ರೀತಿ ಬ್ಲಾಕ್ ಆದರೆ, ಅದನ್ನು ಅನ್‌ಬ್ಲಾಕ್ ಮಾಡಲು ನಿರ್ದಿಷ್ಟ ಸಮಯ ಕಾಯಬೇಕಾಗುತ್ತದೆ ಮತ್ತು ಕೆಲವೊಮ್ಮೆ ಫೇಸ್‌ಬುಕ್‌ನಿಂದ ನಮ್ಮ ಮನವಿಗೆ ಸ್ಪಂದನೆ ಸಿಗುವುದು ಕೂಡ ತಡವಾದೀತು.

ಈ ರೀತಿಯ ಸನ್ನಿವೇಶಗಳನ್ನು ತಪ್ಪಿಸಲು ಫೇಸ್‌ಬುಕ್ ನಮಗೆ ಈಗಾಗಲೇ ಎರಡು ಹಂತದ ಲಾಗಿನ್ ದೃಢೀಕರಣದ (2 ಫ್ಯಾಕ್ಟರ್ ಆಥೆಂಟಿಕೇಶನ್) ಆಯ್ಕೆಯನ್ನು ನೀಡಿದೆ. ಅಂದರೆ, ಒಂದನೆಯದು ನಿಮ್ಮ ಮಾಮೂಲಿ ಪಾಸ್‌ವರ್ಡ್, ಎರಡನೆಯದು ನಿಮ್ಮ ಮೊಬೈಲ್ ಫೋನ್‌ಗೆ ಕೋಡ್ ಬರುವಂತೆ ಹೊಂದಿಸಿಟ್ಟುಕೊಳ್ಳುವುದು. ಆದರೆ ಪಾಸ್‌ವರ್ಡ್ ಮರೆತಾಗ ಏನು ಮಾಡಬೇಕು? ಲಾಗಿನ್ ಆಗುವ ಪುಟದಲ್ಲೇ ‘ಫರ್ಗಾಟ್ ಪಾಸ್‌ವರ್ಡ್’ ಎಂಬ ಲಿಂಕ್ ಇರುತ್ತದೆ. ಅಲ್ಲಿ, ನೀವು ನಮೂದಿಸಿರುವ ಮೊಬೈಲ್ ಫೋನ್ ಸಂಖ್ಯೆ ಅಥವಾ ಇಮೇಲ್ ಐಡಿ ಮೂಲಕ ಪಾಸ್‌ವರ್ಡ್ ರಿಕವರ್ ಮಾಡಿಕೊಳ್ಳುವ ಆಯ್ಕೆ ಇರುತ್ತದೆ. ಅದರ ಮೂಲಕ ಪಾಸ್‌ವರ್ಡ್ ರೀಸೆಟ್ ಮಾಡಿಕೊಳ್ಳಬಹುದು.

ಆದರೆ, ಹಲವು ಬಾರಿ ತಪ್ಪಾಗಿ ಪಾಸ್‌ವರ್ಡ್ ನಮೂದಿಸಿದ ಕಾರಣವೋ ಅಥವಾ ಇನ್ಯಾವುದೇ ಕಾರಣದಿಂದಲೋ ನಿಮ್ಮ ಫೇಸ್‌ಬುಕ್ ಖಾತೆಯೇ ಬ್ಲಾಕ್ ಆಗಿದ್ದರೆ? ಈ ಹಂತವನ್ನೂ ನಾವಾಗಿಯೇ ನಿಭಾಯಿಸಲೆಂದು ಫೇಸ್‌ಬುಕ್ ನಮಗೆ ಮಗದೊಂದು ಟೂಲ್ ಒದಗಿಸಿದೆ. ಅದರ ಅರಿವು ಹೆಚ್ಚಿನವರಿಗೆ ಇರುವುದಿಲ್ಲವಾದ್ದರಿಂದ, ಗೊತ್ತಿಲ್ಲದವರು ಇದನ್ನು ಈಗಲೇ ಸೆಟ್ ಮಾಡಿಕೊಳ್ಳಲು ಈ ಲೇಖನ ಸಹಾಯ ಮಾಡಬಹುದು.

ಮೂರನೆಯ ವಿಧಾನವೇ ನಿಮ್ಮ ವಿಶ್ವಸನೀಯ ಸ್ನೇಹಿತರ ಮೊರೆ ಹೋಗುವುದು. ನಿಮಗೆ ಅತ್ಯಂತ ಆತ್ಮೀಯರಾದ 3ರಿಂದ 5 ಮಂದಿ ಸ್ನೇಹಿತರನ್ನು ಆಯ್ಕೆ ಮಾಡಿಕೊಂಡು, ಅವರನ್ನು ನಿಮ್ಮ ‘ಟ್ರಸ್ಟೆಡ್ ಕಾಂಟ್ಯಾಕ್ಟ್ಸ್’ ಅಂತ ಸೇರಿಸಿಕೊಂಡುಬಿಟ್ಟರೆ ಪಾಸ್‌ವರ್ಡ್ ರೀಕವರ್ ಮಾಡಿಕೊಳ್ಳುವುದು ಸುಲಭವಾಗುತ್ತದೆ. ಇದು ಸ್ವಲ್ಪ ಸಂಕೀರ್ಣ ಕೆಲಸವಾದರೂ, ಉಪಯೋಗಕ್ಕೆ ಬರಬಹುದು.

ಪ್ರಯೋಜನ: ಅನಿವಾರ್ಯ ಪರಿಸ್ಥಿತಿಯಲ್ಲಿ ತಕ್ಷಣ ಲಾಗಿನ್ ಆಗಿ ಸಂಪರ್ಕದಲ್ಲಿರಬಹುದಾದಂತಹಾ ಸ್ನೇಹಿತರನ್ನೇ ಆಯ್ಕೆ ಮಾಡಿಕೊಳ್ಳಿ. ಯಾಕೆಂದರೆ ನಿಮ್ಮ ಖಾತೆ ಬ್ಲಾಕ್ ಆದಾಗ, ಪಾಸ್‌ವರ್ಡ್ ರಿಕವರ್ ಮಾಡಬೇಕಾದ ಸಂದರ್ಭದಲ್ಲಿ, ಅವರಿಗೆ ಫೇಸ್‌ಬುಕ್ ಒಂದು ಕೋಡ್ ಲಭ್ಯವಾಗುವ ಯುಆರ್‌ಎಲ್ ಕಳುಹಿಸುತ್ತದೆ. ನಿಮ್ಮ ಖಾತೆ ಬ್ಲಾಕ್ ಆದ ಸಂದರ್ಭದಲ್ಲಿ, ಫೇಸ್‌ಬುಕ್ ಲಾಗಿನ್ ಪುಟಕ್ಕೆ ಹೋಗಿ, ‘ಫರ್ಗಾಟ್ ಪಾಸ್‌ವರ್ಡ್’ ಕ್ಲಿಕ್ ಮಾಡಿ. ಅಲ್ಲಿ ಇಮೇಲ್ ವಿಳಾಸ, ಫೋನ್ ನಂಬರ್ ಆಯ್ಕೆ ಬಳಿಕ, ಟ್ರಸ್ಟೆಡ್ ಕಾಂಟ್ಯಾಕ್ಟ್‌ಗಳಿಂದ ಸಿಗುವ ಕೋಡ್ ಅನ್ನು ನಮೂದಿಸುವ ಬಾಕ್ಸ್‌ಗಳಿರುತ್ತವೆ. ಸ್ನೇಹಿತರಿಂದ ತಿಳಿದುಕೊಂಡ ಎಲ್ಲ ಕೋಡ್‌ಗಳನ್ನೂ ಸರಿಯಾಗಿ ನಮೂದಿಸಿದರೆ, ಬ್ಲಾಕ್ ಆದ ಫೇಸ್‌ಬುಕ್ ಖಾತೆಯನ್ನು ಅನ್‌ಬ್ಲಾಕ್ ಮಾಡಲಾಗುತ್ತದೆ. ಇದಕ್ಕಾಗಿ ಮೊದಲೇ ನೀವು ನಿಮ್ಮ ವಿಶ್ವಸನೀಯ ಸ್ನೇಹಿತರ ಪೂರ್ಣ ಹೆಸರು ನಮೂದಿಸಿಕೊಂಡಿರಬೇಕು. ಅಂಥ ಸಂದರ್ಭ ಬಂದರೆ, ಕರೆ ಮಾಡಿ, ಫೇಸ್‌ಬುಕ್ ಅವರಿಗೆ ಕಳುಹಿಸಿರುವ ಯುಆರ್‌ಎಲ್‌ನಲ್ಲಿ ಲಾಗಿನ್ ಆಗಿ, ಕೋಡ್ ತಿಳಿಸುವಂತೆ ಕೇಳಿಕೊಳ್ಳಿ. ಗಮನಿಸಿ, ಫೋನ್ ಮೂಲಕ ಅಥವಾ ನೇರವಾಗಿ ಭೇಟಿಯಾಗಿಯೇ ಈ ಕೋಡ್ ಪಡೆದುಕೊಳ್ಳುವುದು ಸೂಕ್ತ.

ವಿಶ್ವಸನೀಯ ಸ್ನೇಹಿತರ ಹೆಸರು ಸೆಟ್ ಮಾಡುವುದು: ನಿಮ್ಮ ಫೇಸ್‌ಬುಕ್ ಖಾತೆಯ ಸೆಟ್ಟಿಂಗ್ಸ್‌ನಲ್ಲಿ ಎಡಮೇಲ್ಭಾಗದಲ್ಲಿ ಸೆಕ್ಯುರಿಟಿ ಮತ್ತು ಲಾಗಿನ್ ಎಂಬ ಲಿಂಕ್ ಕ್ಲಿಕ್ ಮಾಡಿದರೆ, ಸ್ವಲ್ಪ ಕೆಳಗೆ Setting up extra security ಎಂಬ ವಿಭಾಗ ಇರುತ್ತದೆ. ಅದರಲ್ಲಿ ಎರಡನೆಯದು Choose 3 to 5 friends to contact if you are locked out ಎಂಬ ಲಿಂಕ್ ಕ್ಲಿಕ್ ಮಾಡಿ, ಎಡಿಟ್ ಬಟನ್ ಕ್ಲಿಕ್ ಮಾಡಿ, ನಿಮ್ಮ 3ರಿಂದ 5 ಮಂದಿ ಸ್ನೇಹಿತರ ಹೆಸರನ್ನು ಸೇರಿಸಿ. ಅವರಿಂದ ಒಪ್ಪಿಗೆಯನ್ನೂ ಪಡೆದುಕೊಳ್ಳಿ. ಇದರಿಂದ ನಿಮಗೆ ಅಥವಾ ಅವರಿಗೆ ಪ್ರೈವೆಸಿ ಸಮಸ್ಯೆಯಾಗುವುದಿಲ್ಲ.

ಮಾಹಿತಿ@ತಂತ್ರಜ್ಞಾನ ವಿಜಯ ಕರ್ನಾಟಕ ಅಂಕಣ for 14 ಮೇ 2018 by ಅವಿನಾಶ್ ಬಿ.

Avinash B

Avinash B. Tech Writer, Columnist, Working as Online media Journalist for more than two decades. Passionate about Technology and Gadgets. Yakshagana and Music are passion.

Recent Posts

iPhone 16e: Best Features and Specs: ಹೊಸ ಐಫೋನ್ 16ಇ ಬಿಡುಗಡೆ

iPhone 16e joins the iPhone 16 lineup, featuring the fast performance of the A18 chip,…

4 days ago

ಚಳಿಯಲ್ಲಿ ಬಣ್ಣ ಬದಲಾಯಿಸುವ Realme 14 Pro ಸರಣಿ ಫೋನ್ ಬಿಡುಗಡೆ

ರಿಯಲ್‌ಮಿ 14 ಪ್ರೊ ಸರಣಿಯ 5ಜಿ ಫೋನ್, ಡ್ಯಾನಿಶ್ ಡಿಸೈನ್ ಸ್ಟುಡಿಯೋ ವ್ಯಾಲರ್ ಡಿಸೈನರ್ಸ್ ಮೂಲಕ ರೂಪುಗೊಂಡ ವಿಶ್ವದ ಮೊದಲ…

1 month ago

ಎಐ ವೈಶಿಷ್ಟ್ಯಗಳ realme GT 7 Pro ಬಿಡುಗಡೆ: ಬೆಲೆ ಎಷ್ಟು? ವೈಶಿಷ್ಟ್ಯಗಳೇನು? ಇಲ್ಲಿದೆ ಪೂರ್ಣ ಮಾಹಿತಿ

ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್‌ ಇರುವ ಬಹುನಿರೀಕ್ಷಿತ…

3 months ago

ರಿಯಲ್‌ಮಿ ನಾರ್ಜೋ 70 ಟರ್ಬೊ 5 ಜಿ, ರಿಯಲ್‌ಮಿ ಬಡ್ಸ್ ಎನ್‌1 ಬಿಡುಗಡೆ: ಬೆಲೆ, ವೈಶಿಷ್ಟ್ಯ ತಿಳಿಯಿರಿ

ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…

5 months ago

ಓದುವಿಕೆ, ಕಲಿಕೆ ಉತ್ತೇಜನಕ್ಕೆ ‘ರೀಡ್-ಅ-ಥಾನ್’: ದಾಖಲೆಯ ಗುರಿ

ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.

5 months ago

Realme 13 +, Realme 13 5ಜಿ ಫೋನ್ ಬಿಡುಗಡೆ: ವೇಗದ ಫೋನ್‌ನ ವೈಶಿಷ್ಟ್ಯಗಳು, ಬೆಲೆ ಇಲ್ಲಿ ತಿಳಿಯಿರಿ

ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…

6 months ago