ಈಗೇನಿದ್ದರೂ ಸ್ಮಾರ್ಟ್ ಟಿವಿಗಳ ಕಾಲ. ಅದರಲ್ಲಿಯೂ ಮನೆಯಿಂದಲೇ ಕೆಲಸ ಮಾಡುತ್ತಿರುವ ಸಂದರ್ಭ, ಯೂಟ್ಯೂಬ್ ಇಲ್ಲವೇ ಬೇರೆ ಪ್ಲ್ಯಾಟ್‌ಫಾರ್ಮ್‌ಗಳ ಮೂಲಕ ನಡೆಯುತ್ತಿರುವ ಆನ್‌ಲೈನ್ ಮನರಂಜನಾ ಕಾರ್ಯಕ್ರಮಗಳು, ಜೊತೆಗೆ ಮಕ್ಕಳ ಆನ್‌ಲೈನ್ ತರಗತಿಗಳು – ಇವುಗಳಿಗೆಲ್ಲ ಪೂರಕವಾಗಿ ಸ್ಮಾರ್ಟ್ ಟಿವಿಗಳೂ ಬೆಳೆಯುತ್ತಿವೆ. ಗಗನಕ್ಕೇರುತ್ತಿರುವ ಚಾನೆಲ್‌ಗಳ ಚಂದಾದಾರಿಕೆ ಶುಲ್ಕಕ್ಕೂ, ಮಳೆ ಬಂದರೆ ಕಾರ್ಯಕ್ರಮಗಳನ್ನು ನೋಡಲಾಗದು ಎಂಬ ಕೊರತೆಗಳಿಗೂ ಇಂಟರ್ನೆಟ್ ಮೂಲಕ ಪರಿಹಾರ ರೂಪವಾಗಿ ದೊರೆತಿದ್ದು ಈ ಸ್ಮಾರ್ಟ್ ಟಿವಿಗಳು.
ಫ್ರಾನ್ಸ್‌ನ ಪ್ರಮುಖ ಟಿವಿ ತಯಾರಿಕಾ ಸಂಸ್ಥೆ ಥಾಮ್ಸನ್ ಭಾರತದ ಆನ್‌ಲೈನ್ ಮಾರುಕಟ್ಟೆಯಲ್ಲಿ ನಿಧಾನವಾಗಿ ಬೆಳೆಯುತ್ತಿದ್ದು, ಇತ್ತೀಚೆಗೆ ಕೈಗೆಟಕುವ ಬೆಲೆಯಲ್ಲಿ ಐಷಾರಾಮಿ ಸೌಕರ್ಯಗಳಿರುವ ಓಥ್ ಪ್ರೋ ಸರಣಿಯ ಆಂಡ್ರಾಯ್ಡ್ ಸ್ಮಾರ್ಟ್ ಟಿವಿಗಳನ್ನು ಬಿಡುಗಡೆ ಮಾಡಿದೆ. 43, 55, 65 ಹಾಗೂ 75 ಇಂಚುಗಳ ಟಿವಿ ಲಭ್ಯವಿದ್ದು, ಫ್ಲಿಪ್‌ಕಾರ್ಟ್ ತಾಣದಲ್ಲಿ ಖರೀದಿಸಬಹುದು. OATH Pro 2000 ಮಾದರಿಯ 43 ಇಂಚು (108 ಸೆ.ಮೀ.) ಪರದೆಯ ಟಿವಿ ಹೇಗಿದೆ? ಎಂಐ ಹಾಗೂ ಒನ್‌ಪ್ಲಸ್ ಟಿವಿಯ ಮಾದರಿಗಳಿಗೆ ನೇರ ಪ್ರತಿಸ್ಫರ್ಧಿ ಎನ್ನಲಾಗುತ್ತಿರುವ ಟಿವಿಯ ವಿವರ ಇಲ್ಲಿದೆ.
ವಿನ್ಯಾಸ
ಟಿವಿಗಳು ಸ್ಮಾರ್ಟ್ ಆದಷ್ಟೂ ಇಕ್ಕಟ್ಟಿನ ಮನೆಯಲ್ಲಿ ಸ್ಥಳಾವಕಾಶಕ್ಕೂ, ದೊಡ್ಡ ಮನೆಗಳಲ್ಲಿ ಸೌಂದರ್ಯಕ್ಕೂ ಅನುಕೂಲಕರ. ಇದನ್ನು ಸಮರ್ಥವಾಗಿ ಬಳಸಿಕೊಂಡಿರುವ ಥಾಮ್ಸನ್ ಟಿವಿ, ಮೇಲೆ ಮತ್ತು ಪಾರ್ಶ್ವ ಅಂಚುಗಳಲ್ಲಿ ಬೆಝೆಲ್-ಲೆಸ್ (ಖಾಲಿ ಬಿಟ್ಟ ಅಂಚುಗಳಿಲ್ಲದ) ಹಾಗೂ ಕೆಳ ಭಾಗದಲ್ಲಿ ತೆಳ್ಳಗಿನ, ಚಿನ್ನದ ಬಣ್ಣದ ಬೆಝೆಲ್ ಹೊಂದಿದ್ದು, ಪ್ರೀಮಿಯಂ ನೋಟದಿಂದ ಥಟ್ಟನೇ ಗಮನ ಸೆಳೆಯುತ್ತದೆ. ಆಂಡ್ರಾಯ್ಡ್ 9.0 (ಪೈ) ಕಾರ್ಯಾಚರಣಾ ವ್ಯವಸ್ಥೆಯಿದ್ದು, ಹಗುರ ತೂಕದ್ದಾಗಿದೆ. ಅಲ್ಟ್ರಾ HD (4K) ಸ್ಪಷ್ಟತೆಯ LED ಸ್ಕ್ರೀನ್, ಕಂಡೂ ಕಾಣದಂತಿರುವ ಡಾಲ್ಬಿ ಡಿಜಿಟಲ್ ಪ್ಲಸ್ ಟ್ರೂಸರೌಂಡ್ ಡಿಟಿಎಸ್ ಸ್ಪೀಕರ್ ಸೌಂಡ್ ಬಾರ್ ರೀತಿಯಲ್ಲಿದೆ. ಪಾರ್ಶ್ವಭಾಗದಲ್ಲಿ 3 HDMI, 2 USB ಪೋರ್ಟ್‌ಗಳಿದ್ದರೆ, RF ಸಂಪರ್ಕ ಹಾಗೂ ಆಡಿಯೋ ಔಟ್‌ಪುಟ್‌ಗಳಿವೆ. ಗೋಡೆಯಲ್ಲಿ ಅಳವಡಿಸಲು ಹಾಗೂ ಟೇಬಲ್ ಮೇಲೆ ನಿಲ್ಲಿಸುವ ಪರಿಕರಗಳು ಬಾಕ್ಸ್‌ನೊಳಗಿವೆ.
ವೈಶಿಷ್ಟ್ಯಗಳು
ಅಲ್ಟ್ರಾ ಹೆಚ್‌ಡಿ (4ಕೆ ರೆಸೊಲ್ಯುಶನ್) ಸ್ಪಷ್ಟತೆಯ ಪ್ಯಾನೆಲ್ 3840×2160 ಪಿಕ್ಸೆಲ್ ಇದ್ದು ಎಲ್‌ಇಡಿ ಬ್ಯಾಕ್ ಲೈಟಿಂಗ್ ಇದೆ. ಕಣ್ಣುಗಳಿಗೆ ಹೆಚ್ಚಿನ ಹಾನಿಯಾಗದಂತೆ ಇದು ಪೂರಕ. CA53 ಕ್ವಾಡ್ ಕೋರ್ ಪ್ರೊಸೆಸರ್ ಜೊತೆಗೆ ಮಾಲಿ 450 ಗ್ರಾಫಿಕ್ ಪ್ರೊಸೆಸರ್ ಇದ್ದು, 1.75 ಜಿಬಿ RAM ಹಾಗೂ 8 ಜಿಬಿ ಸ್ಟೋರೇಜ್ ಇದೆ. ಮೊಬೈಲ್ ಮೂಲಕ ಅಥವಾ ಆನ್‌ಲೈನ್ ತಾಣಗಳಿಂದ ವಿಡಿಯೊ ಸ್ಟ್ರೀಮಿಂಗ್‌ಗೆ ಈ ಪ್ರೊಸೆಸರ್ ಉತ್ತಮ ವೇಗ ನೀಡುತ್ತದೆ. ಈ ಸ್ಪೆಸಿಫಿಕೇಶನ್‌ನಿಂದಾಗಿ ಸಾಮಾನ್ಯ ಇಂಟರ್ನೆಟ್ ಸಂಪರ್ಕವಿದ್ದಾಗ ಸ್ಟ್ರೀಮಿಂಗ್‌ನಲ್ಲಿ ಯಾವುದೇ ವಿಳಂಬ (ಲ್ಯಾಗಿಂಗ್) ಅನುಭವ ಆಗಿಲ್ಲ. ವೇಗದ ಚಲನೆಯುಳ್ಳ ಚಲನಚಿತ್ರ, ಅಬ್ಬರದ ಗೇಮ್‌ಗಳನ್ನು ಆಡುವಾಗಲೂ ಲ್ಯಾಗಿಂಗ್ ಅನುಭವ ಆಗಿಲ್ಲ. ಸಂಪರ್ಕ ವ್ಯವಸ್ಥೆಯ ಬಗ್ಗೆ ನೋಡಿದರೆ, ಕ್ರೋಮ್‌ಕಾಸ್ಟ್ ಅಂತರ್‌ನಿರ್ಮಿತವಾಗಿದ್ದು, ಬ್ಲೂಟೂತ್ 5.0, ಯುಎಸ್‌ಬಿ 3.0, ಹೆಚ್‌ಡಿಎಂಐ ಪೋರ್ಟ್‌ಗಳಿವೆ.
ಸಾಕಷ್ಟು ಮನರಂಜನಾ ತಾಣಗಳ ಆ್ಯಪ್‌ಗಳು ಅಳವಡಿಸಿಯೇ ಬಂದಿದ್ದು, ಗೂಗಲ್ ಪ್ಲೇ ಸ್ಟೋರ್‌ನಿಂದಲೂ ನೇರವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ವೈರ್‌ಲೆಸ್ ರಿಮೋಟ್ ಕಂಟ್ರೋಲ್‌ನಲ್ಲಿ ನೆಟ್‌ಫ್ಲಿಕ್ಸ್, ಯೂಟ್ಯೂಬ್, ಪ್ರೈಮ್ ವಿಡಿಯೊ, ಗೂಗಲ್ ಪ್ಲೇ ಹಾಟ್ ಕೀಗಳಿವೆ. ರಿಮೋಟ್ ಕಂಟ್ರೋಲರ್ ಕೂಡ ಚಿನ್ನದ ಬಣ್ಣದಲ್ಲಿ ಆಕರ್ಷಕವಾಗಿದೆ ಮತ್ತು ಕನಿಷ್ಠ ಕೀಗಳು ಇರುವುದರಿಂದ ಕಾರ್ಯಾಚರಣೆಯೂ ಸುಲಭವಾಗಿದೆ. ಇದರಲ್ಲಿಯೇ ಗೂಗಲ್ ಅಸಿಸ್ಟೆಂಟ್ ಕೀ ಇದ್ದು, ಅದನ್ನು ಒತ್ತಿ ಕುಳಿತಲ್ಲಿಂದಲೇ ನಮಗೆ ಬೇಕಾದ ಚಾನೆಲ್ ತೋರಿಸುವಂತೆ ಆದೇಶಿಸಬಹುದಾಗಿದೆ. ಇಷ್ಟೇ ಅಲ್ಲ, ಇಂಟರ್ನೆಟ್ ಸರ್ಚ್ ಮಾಡಿ, ನಮಗೆ ಬೇಕಾದ ವಿಷಯಗಳನ್ನೂ ಈ ಸ್ಮಾರ್ಟ್ ಟಿವಿ ತೋರಿಸಬಲ್ಲುದು. ಎಲ್ಲ ಆದೇಶಗಳನ್ನೂ ಅದು ಆಲಿಸಿ, ಸೂಕ್ತ ಸರ್ಚ್ ಫಲಿತಾಂಶಗಳನ್ನು ತೋರಿಸಬಲ್ಲುದು. ಆದರೆ, ಹೆಚ್ಚು ಗದ್ದಲವಿರುವಾಗ ಧ್ವನಿಯನ್ನು ಸ್ಪಷ್ಟವಾಗಿ ಕೇಳಿಸಿಕೊಳ್ಳಲಾರದು.
ವಿಡಿಯೊ, ಆಡಿಯೊ ಗುಣಮಟ್ಟ
ಕೆಳಗಿನ ಬೆಝೆಲ್ ಭಾಗದಲ್ಲಿ ಸೌಂಡ್ ಬಾರ್‌ನಂತೆ ಅಡಗಿರುವ ಡ್ಯುಯಲ್ ಸ್ಪೀಕರ್‌ಗಳು 30 ವ್ಯಾಟ್ಸ್ ಆಡಿಯೋ ಔಟ್‌ಪುಟ್ ನೀಡುತ್ತವೆ. ಹೀಗಾಗಿ ಪೂರ್ಣ ವಾಲ್ಯೂಮ್‌ನಲ್ಲಿ ಕೇಳುವಾಗ ಸರೌಂಡ್ ಸೌಂಡ್ ಅನುಭವ ಚೆನ್ನಾಗಿದೆ. ಡಿಟಿಎಸ್ ಡಾಲ್ಬಿ ಡಿಜಿಟಲ್ ಪ್ಲಸ್ ಸ್ಪೀಕರ್‌ಗಳು ವಿಶೇಷವಾಗಿ ಸ್ಟೀರಿಯೊ ಧ್ವನಿಯ ಯಾವುದೇ ವಿಡಿಯೊ ವೀಕ್ಷಣೆ ವೇಳೆ ಸಿನಿಮಾ ಹಾಲ್ ಅನುಭವ ನೀಡುತ್ತದೆ. ಯುಎಸ್‌ಬಿ ಪೆನ್ ಡ್ರೈವ್ ಅಳವಡಿಸಿ ಅದರಿಂದಲೂ ಟಿವಿಯಲ್ಲಿ ಆಡಿಯೊ ಆನಂದಿಸಬಹುದು. ಎಲ್ಲ ಪ್ರಮುಖ ಆಡಿಯೋ ಫಾರ್ಮ್ಯಾಟ್‌ಗಳನ್ನು ಅದು ಬೆಂಬಲಿಸುತ್ತದೆ. ವಿಡಿಯೊ ಡಾಲ್ಬಿ ವಿಷನ್ 4ಕೆ ಗುಣಮಟ್ಟದ್ದಾಗಿದ್ದು, HDR10 ಸಾಮರ್ಥ್ಯವಿದೆ. ಇಂಟರ್ನೆಟ್‌ನಲ್ಲಿ ಲಭ್ಯವಿರುವ 4ಕೆ ರೆಸೊಲ್ಯುಶನ್‌ನ ವಿಡಿಯೊ, ಚಲನಚಿತ್ರಗಳು ಯಾವುದೇ ಲ್ಯಾಗ್ (ವಿಳಂಬ) ಇಲ್ಲದೆ ಪ್ಲೇ ಆಗುತ್ತವೆ. ಉತ್ತಮ ಗುಣಮಟ್ಟದ ಚಿತ್ರ ಗೋಚರಿಸುತ್ತದೆ. MEMC (ಅಂದಾಜು ಚಲನೆ, ಪೂರಕ ಚಲನೆ) ತಂತ್ರಜ್ಞಾನದ ಜೊತೆಗೆ 60Hz ರಿಫ್ರೆಶ್ ರೇಟ್ ಸಾಮರ್ಥ್ಯವಿರುವುದರಿಂದ ಚಿತ್ರ, ವಿಡಿಯೊ ಫ್ರೇಮ್‌ಗಳು ಸುಲಲಿತವಾಗಿ ಮೂಡಿಬರುತ್ತವೆ.
ಸ್ಮಾರ್ಟ್ ಟಿವಿಗಳ ಸಾಮಾನ್ಯ ವೈಶಿಷ್ಟ್ಯವಾಗಿರುವ ಸ್ಕ್ರೀನ್ ಮಿರರಿಂಗ್ ಸೆಟ್ಟಿಂಗ್ ಸ್ವಲ್ಪ ಗೊಂದಲಕಾರಿಯಾದರೂ, ಹೋಮ್ ಬಟನ್ ಒತ್ತಿದ ಬಳಿಕ, ಮೀಡಿಯಾ ಎಂಬ ಬಟನ್ ಒತ್ತಿದ ನಂತರ ಪೇರಿಂಗ್ ಸುಲಭವಾಗುತ್ತದೆ. ಈ ವ್ಯವಸ್ಥೆಯ ಮೂಲಕ ಮೊಬೈಲ್ ಫೋನ್‌ನಲ್ಲೇನು ಆಗುತ್ತಿದೆಯೋ, ಎಲ್ಲವನ್ನೂ ದೊಡ್ಡ ಪರದೆಯಲ್ಲಿ ನೋಡಬಹುದು.
ಫ್ಲಿಪ್‌ಕಾರ್ಟ್ ವಾಣಿಜ್ಯ ತಾಣದಲ್ಲಿ 24,999 ರೂ.ಗೆ ಲಭ್ಯವಿರುವ 108 ಸೆ.ಮೀ. (43 ಇಂಚು) ಪರದೆಯ ಥಾಮ್ಸನ್ ಓಥ್ ಪ್ರೋ ಟಿವಿ, ಕಡಿಮೆ ಬೆಲೆಗೆ ಲಭ್ಯವಿರುವ ಉತ್ತಮ ತಂತ್ರಜ್ಞಾನದ ಸ್ಮಾರ್ಟ್ ಆಂಡ್ರಾಯ್ಡ್ ಟಿವಿ ಬೇಕೆಂದುಕೊಂಡವರು ಪರಿಗಣಿಸಬಹುದು. ಇದೇ ಶ್ರೇಣಿಯ ಬಹುತೇಕ ಆಂಡ್ರಾಯ್ಡ್ ಸ್ಮಾರ್ಟ್ ಟಿವಿಗಳ ಬೆಲೆಯಲ್ಲೂ ಸ್ವಲ್ಪವೇ ವ್ಯತ್ಯಾಸವಿದ್ದರೂ, ಬ್ರ್ಯಾಂಡ್ ಹೆಸರು ಮತ್ತು ಯೂರೋಪ್ ದೇಶಗಳಲ್ಲಿ ಗುಣಮಟ್ಟಕ್ಕಿರುವ ಹೆಸರು ಥಾಮ್ಸನ್‌ಗೆ ಪ್ಲಸ್ ಪಾಯಿಂಟ್.
ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…
ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.
ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…
Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.
ಹಾಡುಗಾರಿಕೆ, ಚೆಂಡೆ-ಮದ್ದಳೆಯ ಬಿಡಿತ-ಮುಕ್ತಾಯಗಳ ಬಳಿಕ, ಬಂದಿದ್ದ ಗಣ್ಯರು, ಒಂದೊಂದು ಹಾಡಿನಲ್ಲಿ ಅಡಕವಾಗಿರುವ ಮಂತ್ರ ಮಾಂಗಲ್ಯದ ಪ್ರತಿಜ್ಞಾಗುಚ್ಛವನ್ನು ವಿವರಿಸಿ, ವಧು-ವರರಿಗೆ ಬೋಧಿಸಿದರು
ಮುದ್ದಣನ ಕುಮಾರ ವಿಜಯದ ಸುಮಾರು 700ರಷ್ಟಿರುವ ಹಾಡುಗಳನ್ನು ಹಾಡಿದ್ದು ತೆಂಕು ತಿಟ್ಟಿನ ಬಲಿಪ ಶೈಲಿಯ ಪ್ರತಿಪಾದಕ ಭಾಗವತರೇ. ಏಳೆಂಟು ವರ್ಷಗಳ…