ಇಂಟರ್ನೆಟ್‌ನಲ್ಲಿ ಸಚಿನ್ ಹಿಟ್ ವಿಕೆಟ್!

ವಿಮಾ ಕಂಪನಿಯೊಂದರ ಪ್ರಚಾರಾರ್ಥವಾಗಿ ಕ್ರಿಕೆಟ್ ‘ದೇವರು’ ಸಚಿನ್ ತೆಂಡೂಲ್ಕರ್ ಮಾಡಿರುವ ಒಂದು ವೀಡಿಯೋ ಟ್ವೀಟ್ ಇಂಟರ್ನೆಟ್ ಜಗತ್ತಿನಲ್ಲಿ ಕೋಲಾಹಲವನ್ನೇ ಎಬ್ಬಿಸಿದೆ. ಇಷ್ಟಕ್ಕೂ ಅವರು ಮಾಡಿದ್ದೇನು? ದೈಹಿಕ ಕ್ಷಮತೆ (ಫಿಟ್ನೆಸ್) ಕಾಯ್ದುಕೊಳ್ಳುವ ಬಗ್ಗೆ ಹಲವಾರು ನೆವನಗಳನ್ನು ನೀಡುತ್ತಿರುವ ನಿಮ್ಮ ಸ್ನೇಹಿತರ ಫೋನ್ ನಂಬರನ್ನು #NoExcuses ಅಂತ ಬರೆದು ನನಗೆ ಟ್ವೀಟ್ ಮಾಡಿ. ನಾನವರಿಗೆ ಫಿಟ್ನೆಸ್ ಕಾಯ್ದುಕೊಳ್ಳಲು ಸಲಹೆ ನೀಡುತ್ತೇನೆ ಎಂದು ವೀಡಿಯೋ ಜಾಹೀರಾತು ಸಚಿವ ಟ್ವೀಟ್ ಮಾಡಿದ್ದು.

ಈಗಾಗಲೇ ನಮ್ಮ ಫೋನ್ ನಂಬರ್‌ಗೆ ಅನಗತ್ಯ ಕರೆಗಳು, ‘ನೀವು ಇಷ್ಟು ಕೋಟಿ ರೂ. ಗೆದ್ದಿದ್ದೀರಿ, ಅದನ್ನು ಪಡೆದುಕೊಳ್ಳಲು ನಿಮ್ಮ ಪೂರ್ಣ ಹೆಸರು, ಬ್ಯಾಂಕ್ ಖಾತೆ ಮುಂತಾದವನ್ನು ತಿಳಿಸಿ’ ಎಂಬಂಥಾ ಸ್ಪ್ಯಾಮ್ ಸಂದೇಶಗಳು, ಮಾರಾಟ ಸಂಬಂಧಿ ಕರೆಗಳ ಕಿರಿಕಿರಿ ತಡೆಯುವುದಕ್ಕಾಗಿ ಕೇಂದ್ರ ಸರಕಾರವು ಡು ನಾಟ್ ಡಿಸ್ಟರ್ಬ್ (ಡಿಎನ್‌ಡಿ) ಎಂಬ ಸೇವೆಯನ್ನೂ ಜಾರಿ ಮಾಡಿದೆ. ಇದಕ್ಕೆ ಪ್ರಧಾನ ಕಾರಣವೆಂದರೆ, ಅನಗತ್ಯ ಕರೆಗಳ ಕಿರಿಕಿರಿ ಕುರಿತಾಗಿ ಬಳಕೆದಾರರು ನೀಡಿದ ದೂರುಗಳ ಮಹಾಪೂರ.

ಮೇಲ್ನೋಟಕ್ಕೆ ಸಚಿನ್ ಮಾಡಿರುವ ಈ ಟ್ವೀಟ್‌ನಲ್ಲಿ ಯಾವುದೇ ತಪ್ಪು ಕಾಣಿಸುತ್ತಿಲ್ಲ. ಕ್ರಿಕೆಟ್ ಜಗತ್ತಿನ ಆರಾಧ್ಯ ದೇವರು ಕರೆ ಮಾಡಿದರೆ ಅದಕ್ಕಿಂತ ದೊಡ್ಡ ಸೌಭಾಗ್ಯ ಬೇರೆ ಬೇಕೇ? ಇದನ್ನು ಯೋಚಿಸಿದರೆ ಎಲ್ಲವೂ ಸರಿ ಇದೆ. ಆದರೆ, ನಮ್ಮ ಅಥವಾ ಬೇರೆ ಸ್ನೇಹಿತರ ಫೋನ್ ನಂಬರನ್ನು ಇಂಟರ್ನೆಟ್‌ನಲ್ಲಿ ಬಹಿರಂಗಪಡಿಸುವುದು ಎಷ್ಟು ಸರಿ? ಇದು ಮತ್ತೊಬ್ಬರ ಖಾಸಗಿತನಕ್ಕೆ ಭಂಗ ತಂದಂತೆ? ಈ ರೀತಿಯ ಬ್ರ್ಯಾಂಡ್‌ಗಳಿಗೆ ಸೆಲೆಬ್ರಿಟಿಗಳು ಮುಖವಾಣಿಯಾಗುವಾಗ ಎಚ್ಚರಿಕೆ ವಹಿಸಬೇಕಿತ್ತು.

ಕಾನೂನು ಏನು ಹೇಳುತ್ತದೆ?
ಫೋನ್ ನಂಬರ್ ಎಂಬುದು ಸೂಕ್ಷ್ಮ ಮತ್ತು ಖಾಸಗಿ ಮಾಹಿತಿಗಳಲ್ಲಿ ಒಂದು. ಈ ಪ್ರೈವೆಸಿ ಕುರಿತಾದ ಕಾನೂನು ಏನು ಹೇಳುತ್ತದೆಯೆಂದರೆ, ಯಾವುದೇ ವಿಚಾರಕ್ಕೆ ವ್ಯಕ್ತಿಯೊಬ್ಬನ ಖಾಸಗಿ ಮಾಹಿತಿಯನ್ನು ಸಂಗ್ರಹಿಸಬೇಕಿದ್ದರೆ ಮತ್ತು ಬಳಸಬೇಕಿದ್ದರೆ, ಅವರಿಂದ ಲಿಖಿತ ಅನುಮತಿ ಪಡೆಯಬೇಕು. 2011ರಲ್ಲಿ ಭಾರತ ಸರಕಾರ ಅಂಗೀಕರಿಸಿದ ಹೊಸ ಪ್ರೈವೆಸಿ ಕಾನೂನಿನ ಅಂಶಗಳಲ್ಲಿ ಇದೂ ಒಂದು. ಹೀಗಾಗಿ, ಬೇರೆಯವರ ಫೋನ್ ನಂಬರ್ (ಅವರ ಅನುಮತಿಯಿಲ್ಲದೆ) ಕೊಡುವುದು ಮತ್ತು ಅದಕ್ಕೆ ಕರೆ ಮಾಡುವುದು ಕಾನೂನು ರೀತ್ಯಾ ತಪ್ಪು.

ಮಾಹಿತಿ ತಂತ್ರಜ್ಞಾನ (ತಿದ್ದುಪಡಿ) ಕಾಯಿದೆ 2008ರ 43ಎ ಸೆಕ್ಷನ್ ಪ್ರಕಾರ, ಯಾರಿಂದಲಾದರೂ ಸಂಗ್ರಹಿಸುವ ವೈಯಕ್ತಿಕ ಮಾಹಿತಿ ಅಥವಾ ದತ್ತಾಂಶಕ್ಕೆ ಸಾಕಷ್ಟು ಭದ್ರತೆ ಒದಗಿಸಬೇಕು ಇಲ್ಲವಾದಲ್ಲಿ, ಬಾಧಿತ ವ್ಯಕ್ತಿಗೆ ನಷ್ಟ ಭರ್ತಿ ಮಾಡಿಕೊಡಬೇಕು.

ಅದೇ ಕಾಯಿದೆಯ ಸೆಕ್ಷನ್ 72 ಎ ಅನುಸಾರ, ಕಾನೂನುಬದ್ಧವಾದ ಗುತ್ತಿಗೆಯೊಂದರ ಅಡಿಯಲ್ಲಿ ಸೇವೆ ಒದಗಿಸುವಾಗ, ಬೇರೊಬ್ಬ ವ್ಯಕ್ತಿಯ ವೈಯಕ್ತಿಕ ಮಾಹಿತಿಯನ್ನು ಬಹಿರಂಗಪಡಿಸಿದಲ್ಲಿ ಸಂಭವನೀಯ ನಷ್ಟ ಅಥವಾ ಅಕ್ರಮವಾಗಿ ಲಾಭ ಉಂಟಾದರೆ, ಆ ವ್ಯಕ್ತಿಗೆ 3 ವರ್ಷಗಳವರೆಗಿನ ಜೈಲು ಶಿಕ್ಷೆ ಮತ್ತು/ಅಥವಾ 5 ಲಕ್ಷ ರೂ.ವರೆಗೆ ದಂಡ ವಿಧಿಸಬಹುದಾಗಿದೆ.

ಇಂಥ ಕಾನೂನಿರುವ ನಾಡಿನಲ್ಲಿ ಮತ್ತು ನಮ್ಮ ಫೋನ್ ನಂಬರನ್ನು ಬೇರೆಯವರಿಗೆ ಕೊಡುವುದಕ್ಕೆ ನಾವೇ ಹಿಂದೆ ಮುಂದೆ ನೋಡುವ ಈ ಕಾಲದಲ್ಲಿ, ಜತೆಗೆ ಫೋನ್ ನಂಬರ್ ಪಡೆದು, ಅಕ್ರಮವಾಗಿ ಆ ನಂಬರಿನ ಡೂಪ್ಲಿಕೇಟ್ ಸಿಮ್ ಕಾರ್ಡ್ ಮಾಡಿಸಿಕೊಂಡು ಬ್ಯಾಂಕ್ ಖಾತೆಗಳಿಗೂ ಕನ್ನ ಹಾಕುವ ವಂಚಕರ ಸುದ್ದಿಗಳನ್ನು ಪದೇ ಪದೇ ಕೇಳುತ್ತಿರುವ ಈ ಹಂತದಲ್ಲಿ, ಜವಾಬ್ದಾರಿಯುತ ಸ್ಥಾನದಲ್ಲಿರುವ ಸೆಲೆಬ್ರಿಟಿಗಳು ಈ ಪರಿಯ ಪ್ರಚಾರ ಮಾಡುವುದರ ಬಗ್ಗೆ ಅಂತರ್ಜಾಲದಲ್ಲಿ ಭಾರಿ ಆಕ್ರೋಶವೂ ವ್ಯಕ್ತವಾಗುತ್ತಿದೆ.

ಸಚಿನ್ ಮಾಡಿದ ಈ ಕ್ರಮವು, ಕಿರು ಸಾಮಾಜಿಕ ಜಾಲತಾಣ ಟ್ವಿಟರ್‌ನ ನಿಯಮದ ಉಲ್ಲಂಘನೆಯೂ ಆಗಿದೆ. ಟ್ವಿಟರ್‌ನ ನಿಯಮಗಳ ಪ್ರಕಾರ, ಕ್ರೆಡಿಟ್ ಕಾರ್ಡ್, ಸಾಮಾಜಿಕ ಭದ್ರತೆ ಅಥವಾ ಬೇರೆ ರಾಷ್ಟ್ರೀಯ ಗುರುತಿನ ಸಂಖ್ಯೆಗಳು, ಖಾಸಗಿ ಎಂದು ಪರಿಭಾವಿಸಬಹುದಾದ ವಿಳಾಸಗಳು ಅಥವಾ ಸ್ಥಳಗಳು, ಸಾರ್ವಜನಿಕವಲ್ಲದ ವೈಯಕ್ತಿಕ ಫೋನ್ ನಂಬರ್ ಹಾಗೂ ಇಮೇಲ್, ಅನ್ವಯಿಸುವ ಕಾನೂನಿನ ಪ್ರಕಾರ ಖಾಸಗಿ ಎಂದು ಪರಿಗಣಿಸಬಹುದಾದ ಚಿತ್ರಗಳು, ವೀಡಿಯೋಗಳನ್ನು ತೆಗೆಯುವುದು ಮತ್ತು ಹಂಚಿಕೊಳ್ಳುವುದೇ ಮುಂತಾಗಿ, ಅನ್ಯರ ಖಾಸಗಿ ಮತ್ತು ಸೂಕ್ಷ್ಮ ಮಾಹಿತಿಯನ್ನು ಹಂಚುವುದು ನಿಯಮದ ಉಲ್ಲಂಘನೆಯಾಗುತ್ತದೆ.

ಇದೀಗ ಸಚಿನ್ ಅವರು ವೀಡಿಯೋ ಸಹಿತವಾಗಿ ಮಾಡಿದ ಈ ಟ್ವೀಟ್ ಕಾಣಿಸುತ್ತಿಲ್ಲ. ಅಂದರೆ ಇದು ಸಾಮಾಜಿಕ ಜಾಲ ತಾಣಗಳಲ್ಲಿ ಸಾಕಷ್ಟು ಧೂಳೆಬ್ಬಿಸಿದ್ದರಿಂದ ಅವರೇ ಡಿಲೀಟ್ ಮಾಡಿಬಿಟ್ಟಿದ್ದಾರೆ. ಆದರೆ, ತಪ್ಪು ಆಗುವಷ್ಟರಲ್ಲಿ ಸಾಕಷ್ಟು ಹಾನಿಯನ್ನೂ ಮಾಡಿದೆ. ಯಾಕೆಂದರೆ ಸುಮಾರು 1.7 ಕೋಟಿ ಫಾಲೋವರ್‌ಗಳನ್ನು ಹೊಂದಿರುವ ಸಚಿನ್ ಜನಪ್ರಿಯತೆ ಚಿಕ್ಕದೇನಲ್ಲ. ಈ ಟ್ವೀಟ್ ಆಧಾರದಲ್ಲಿ ಕೆಲವರು ಆಗಲೇ ತಮ್ಮ ಸ್ನೇಹಿತರ ಫೋನ್ ನಂಬರನ್ನೂ ಶೇರ್ ಮಾಡಿದ್ದರು ಎಂದರೆ, ಭಾರತದಲ್ಲಿ ಪ್ರೈವೆಸಿ ಬಗ್ಗೆ ಜನರಲ್ಲಿ ಎಷ್ಟು ಜಾಗೃತಿ ಇದೆ ಎಂಬುದರ ಸೂಚಕವಿದು. ಆಧಾರ್ ಕಾರ್ಡ್ ಮಾಹಿತಿ ಸೋರಿಕೆಯಾಗುತ್ತದೆ ಎಂಬ ಆತಂಕ, ಜಿಯೋ ಸಿಮ್ ಮಾಹಿತಿಯೂ ಲೀಕ್ ಆಗಿದೆ ಎಂಬ ಭಯದ ಮಧ್ಯೆ ಸಚಿನ್ ಮಾಡಿರುವ ಈ ಟ್ವೀಟ್ ಹೊಸ ಆತಂಕವನ್ನೂ ಸೃಷ್ಟಿಸಿದ್ದು ಸುಳ್ಳಲ್ಲ.

ಕಾನೂನು ಕೂಡ ಕಠಿಣವಾಗಿಲ್ಲದಿರುವುದೇ ಇದಕ್ಕೆ ಕಾರಣವಾಗುತ್ತದೆ. ಜನ ಸಾಮಾನ್ಯರು ತಿಳಿದುಕೊಳ್ಳಬೇಕಿರುವ ಪರಮ ಸತ್ಯವೆಂದರೆ, ಬೇರೊಬ್ಬರ ವೈಯಕ್ತಿಕ/ಖಾಸಗಿ ಮಾಹಿತಿಯನ್ನು ಬಹಿರಂಗಪಡಿಸುವುದು ತಪ್ಪು ಮತ್ತು ಅಪರಾಧ.

ಸಚಿನ್ ಮಾಡಿದ ವೀಡಿಯೋ ಜಾಹೀರಾತು ಟ್ವೀಟ್‌ನಲ್ಲಿದ್ದ ಅಂಶ:
“Have friends with many excuses to not get fit? Tag them using #NoExcuses with their cities & mobile no & I may call to give them a pep talk!”
-Sachin Tendulkar

ಅವಿನಾಶ್ ಬೈಪಾಡಿತ್ತಾಯ, ವಿಜಯ ಕರ್ನಾಟಕದಲ್ಲಿ ಜು.12, 2017ರಂದು ಪ್ರಕಟ

Avinash B

Avinash B. Tech Writer, Columnist, Working as Online media Journalist for more than two decades. Passionate about Technology and Gadgets. Yakshagana and Music are passion.

Recent Posts

ರಿಯಲ್‌ಮಿ ನಾರ್ಜೋ 70 ಟರ್ಬೊ 5 ಜಿ, ರಿಯಲ್‌ಮಿ ಬಡ್ಸ್ ಎನ್‌1 ಬಿಡುಗಡೆ: ಬೆಲೆ, ವೈಶಿಷ್ಟ್ಯ ತಿಳಿಯಿರಿ

ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…

2 months ago

ಓದುವಿಕೆ, ಕಲಿಕೆ ಉತ್ತೇಜನಕ್ಕೆ ‘ರೀಡ್-ಅ-ಥಾನ್’: ದಾಖಲೆಯ ಗುರಿ

ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.

2 months ago

Realme 13 +, Realme 13 5ಜಿ ಫೋನ್ ಬಿಡುಗಡೆ: ವೇಗದ ಫೋನ್‌ನ ವೈಶಿಷ್ಟ್ಯಗಳು, ಬೆಲೆ ಇಲ್ಲಿ ತಿಳಿಯಿರಿ

ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…

3 months ago

e-ಯುಗದ ತನಿಖಾ ಪತ್ರಿಕೋದ್ಯಮ: ಫ್ಯಾಕ್ಟ್ ಚೆಕ್

Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.

4 months ago

ಯಕ್ಷ ಮಂತ್ರ ಮಾಂಗಲ್ಯ: ಕೀರ್ತನಾ ಪ್ರಸಾದ ಕಲ್ಯಾಣವು

ಹಾಡುಗಾರಿಕೆ, ಚೆಂಡೆ-ಮದ್ದಳೆಯ ಬಿಡಿತ-ಮುಕ್ತಾಯಗಳ ಬಳಿಕ, ಬಂದಿದ್ದ ಗಣ್ಯರು, ಒಂದೊಂದು ಹಾಡಿನಲ್ಲಿ ಅಡಕವಾಗಿರುವ ಮಂತ್ರ ಮಾಂಗಲ್ಯದ ಪ್ರತಿಜ್ಞಾಗುಚ್ಛವನ್ನು ವಿವರಿಸಿ, ವಧು-ವರರಿಗೆ ಬೋಧಿಸಿದರು

9 months ago

ಮುದ್ದಣನ ಕುಮಾರ ವಿಜಯ, ರತ್ನಾವತಿ ಕಲ್ಯಾಣ ಯಕ್ಷಗಾನ ಧ್ವನಿಮುದ್ರಿಕೆ

ಮುದ್ದಣನ ಕುಮಾರ ವಿಜಯದ ಸುಮಾರು 700ರಷ್ಟಿರುವ ಹಾಡುಗಳನ್ನು ಹಾಡಿದ್ದು ತೆಂಕು ತಿಟ್ಟಿನ ಬಲಿಪ ಶೈಲಿಯ ಪ್ರತಿಪಾದಕ ಭಾಗವತರೇ. ಏಳೆಂಟು ವರ್ಷಗಳ…

9 months ago