ಅನಿವಾರ್ಯ ಸಂದರ್ಭದಲ್ಲಿ ನಿಮ್ಮ ಜಿಮೇಲ್ ಖಾತೆಯನ್ನು ಬೇರೆಯವರೊಂದಿಗೆ ಶೇರ್ ಮಾಡಿಕೊಳ್ಳಬೇಕಾಗಿ ಬಂದರೆ ಗೂಗಲ್ ಒಂದು ವ್ಯವಸ್ಥೆಯನ್ನು ಒದಗಿಸಿದೆ. ಅದುವೇ ಜಿಮೇಲ್ ಡೆಲಿಗೇಟ್ ಎಂಬ ವೈಶಿಷ್ಟ್ಯ. ಅಂದರೆ, ನಿಮ್ಮ ಪಾಸ್‌ವರ್ಡ್ ಹೇಳದೆಯೇ, ಮತ್ತೊಬ್ಬರು ನಿಮ್ಮ ಜಿಮೇಲ್ ಖಾತೆಯನ್ನು ಆ್ಯಕ್ಸೆಸ್ ಮಾಡಬಹುದು. ಪ್ರಾಜೆಕ್ಟ್ ಒಂದನ್ನು ತಂಡವಾಗಿ, ಸ್ನೇಹಿತರು ಗುಂಪಾಗಿ ಸೇರಿಕೊಂಡು ಪೂರ್ಣಗೊಳಿಬೇಕಾದ ಸಂದರ್ಭದಲ್ಲಿ ಇದು ಉಪಯುಕ್ತವಾಗಬಹುದು. ಸಾಮಾನ್ಯ ಜಿಮೇಲ್ ಖಾತೆಗೆ 10 ಡೆಲಿಗೇಟ್‌ಗಳನ್ನು ಸೇರಿಬಹುದು. ಅಂದರೆ 10 ಮಂದಿ ಸ್ನೇಹಿತರು ಒಂದೇ ಜಿಮೇಲ್ ಖಾತೆಗೆ, ತಮ್ಮ ತಮ್ಮ ಜಿಮೇಲ್ ಖಾತೆಯ ಪಾಸ್‌ವರ್ಡ್ ಮೂಲಕವೇ ಪ್ರವೇಶಿಸಬಹುದು. ಈ ಆ್ಯಕ್ಸೆಸ್ (ಪ್ರವೇಶಾನುಮತಿ) ಉಳ್ಳವರು ಆ ಜಿಮೇಲ್ ಖಾತೆಗೆ ಬರುವ ಮೇಲ್‌ಗಳನ್ನು ಓದಬಹುದು, ಮೇಲ್ ಕಳುಹಿಬಹುದು ಮತ್ತು ಸಂದೇಶಗಳನ್ನು ಅಳಿಸಬಹುದು. ಆದರೆ ನಿಮ್ಮ ಪಾಸ್‌ವರ್ಡ್ ಬದಲಿಸುವುದೇ ಮುಂತಾದ ಜಿಮೇಲ್‌ನ ಪ್ರಮುಖ ಸೆಟ್ಟಿಂಗ್‌ಗಳನ್ನು ಬದಲಾಯಿಸುವುದು ಅವರಿಗೆ ಸಾಧ್ಯವಾಗುವುದಿಲ್ಲ. ಗೂಗಲ್ ಹ್ಯಾಂಗೌಟ್ಸ್ ಮೂಲಕ ನಿಮ್ಮ ಹೆಸರಲ್ಲಿ ಬೇರೆಯವರೊಂದಿಗೆ ಚಾಟ್ ಮಾಡಬಹುದು. ಅದೇ ರೀತಿ, ಡೆಲಿಗೇಟ್‌ಗಳು (ನಿಯೋಜಿತರು) ಈ ಜಿಮೇಲ್‌ನಿಂದ ಇಮೇಲ್ ಕಳುಹಿಸುವಾಗ, ಅವರ ಇಮೇಲ್ ವಿಳಾಸವೂ ಕಾಣಿಸುತ್ತದೆ ಎಂಬುದು ನೆನಪಿರಲಿ.
ಅದೇ ರೀತಿ, ನಮ್ಮ ಸಹಾಯಕರಿಗೆ ನಮ್ಮ ಇಮೇಲ್ ಖಾತೆಗೆ ಆ್ಯಕ್ಸೆಸ್ ನೀಡುವುದಕ್ಕೋ, ಸ್ನೇಹಿತರು ಸೇರಿ ಒಂದು ಪ್ರಾಜೆಕ್ಟ್ ಮಾಡುವಾಗ ಪರಸ್ಪರ ಸಂವಹನಕ್ಕೋ ಅಥವಾ ಒಂದು ಪುಟ್ಟ ಕಂಪನಿಯ ಕಸ್ಟಮರ್ ಸಂಪರ್ಕದ ಇಮೇಲ್ ಖಾತೆಯನ್ನು ಸೃಷ್ಟಿಸಿ, ಅದಕ್ಕೆ ಕಂಪನಿಯ ಹಲವರಿಗೆ ಆ್ಯಕ್ಸೆಸ್ ನೀಡಿದರೆ, ತ್ವರಿತವಾಗಿ ಉತ್ತರಿಸುವುದಕ್ಕೋ ಈ ವೈಶಿಷ್ಟ್ಯವನ್ನು ಬಳಸಬಹುದಾಗಿದೆ.
ಡೆಲಿಗೇಟ್ ಮಾಡುವುದು ಹೇಗೆ?
ಡೆಲಿಗೇಟ್ ಮಾಡಬೇಕಾದ ನಿಮ್ಮ ಜಿಮೇಲ್ ಖಾತೆಗೆ ಲಾಗಿನ್ ಆಗಿ. ಬಲ ಮೇಲ್ಭಾಗದಲ್ಲಿರುವ ಸೆಟ್ಟಿಂಗ್ಸ್ (‘ಗೇರ್’ ಐಕಾನ್) ಕ್ಲಿಕ್ ಮಾಡಿದಾಗ, ಸೆಟ್ಟಿಂಗ್ಸ್ ಎಂದು ಬರೆದಿರುವುದು ಕಾಣಿಸುತ್ತದೆ. ಕ್ಲಿಕ್ ಮಾಡಿದಾಗ ಗೋಚರಿಸುವ ಪುಟದಲ್ಲಿ ನಾಲ್ಕನೇ ಟ್ಯಾಬ್ ‘ಅಕೌಂಟ್ಸ್ ಆ್ಯಂಡ್ ಇಂಪೋರ್ಟ್’ ಎಂಬುದು ಗೋಚರಿಸುತ್ತದೆ. ಕ್ಲಿಕ್ ಮಾಡಿ, ಸ್ವಲ್ಪ ಕೆಳಭಾಗದಲ್ಲಿ ನೋಡಿದರೆ, ‘ಗ್ರ್ಯಾಂಟ್ ಆ್ಯಕ್ಸೆಸ್ ಟು ಯುವರ್ ಅಕೌಂಟ್’ ಎಂಬುದು ಕಾಣಿಸುತ್ತದೆ. ‘ಆ್ಯಡ್ ಅಕೌಂಟ್’ ಎಂದು ಬರೆದಿರುವುದನ್ನು ಕ್ಲಿಕ್ ಮಾಡಿದಾಗ, ಪಾಪ್ ಅಪ್ ಸ್ಕ್ರೀನ್ ಕಾಣಿಸುತ್ತದೆ. ನಿಮಗೆ ಬೇಕಾದವರಿಗೆ ಆ್ಯಕ್ಸೆಸ್ ನೀಡಲು, ಅದರಲ್ಲಿರುವ ಬಾಕ್ಸ್‌ನಲ್ಲಿ ಅವರ ಜಿಮೇಲ್ ವಿಳಾಸವನ್ನು ನಮೂದಿಸಿಬಿಡಿ. ‘ನೆಕ್ಸ್ಟ್’ ಎಂಬ ಬಟನ್ ಮೇಲೆ ಕ್ಲಿಕ್ ಮಾಡಿದಾಗ ನಿಮ್ಮಿಂದ ಮತ್ತೊಮ್ಮೆ ದೃಢೀಕರಣ ಕೇಳಲಾತ್ತದೆ. ಅಂದರೆ, ಆ ವ್ಯಕ್ತಿಗೆ ಈ ಕುರಿತು ಸಂದೇಶ ಕಳುಹಿಸಲು ಒಂದು ಇಮೇಲ್ ಕಳುಹಿಸಲಾಗುತ್ತದೆ. ‘ಸೆಂಡ್ ಇಮೇಲ್ ಟು ಗ್ರ್ಯಾಂಟ್ ಆ್ಯಕ್ಸೆಸ್’ ಅಂತ ಬರೆದಿರುವಲ್ಲಿ ಕ್ಲಿಕ್ ಮಾಡಿಬಿಡಿ.
ಆ್ಯಕ್ಸೆಸ್ ಪಡೆದವರು ಏನು ಮಾಡಬೇಕು
ಆ್ಯಕ್ಸೆಸ್ ಯಾರಿಗೆ ನೀಡಲಾಗಿದೆಯೋ, ಅವರಿಗೆ ಜಿಮೇಲ್ ತಂಡದಿಂದ ಲಿಂಕ್ ಇರುವ ಇಮೇಲ್ ಹೋಗುತ್ತದೆ. ಅದನ್ನು ಸ್ವೀಕರಿಸುವ ಅಥವಾ ನಿರಾಕರಿಸುವ ಲಿಂಕ್‌ಗಳು ಅದರಲ್ಲಿರುತ್ತವೆ. ಸ್ವೀಕರಿಸುವ ಲಿಂಕ್ ಕ್ಲಿಕ್ ಮಾಡಿ ದೃಢೀಕರಿಸಿದ ಸುಮಾರು 30 ನಿಮಿಷಗಳ ತರುವಾಯ, ಆ್ಯಕ್ಸೆಸ್ ದೊರೆಯುತ್ತದೆ. ಅದರ ಬಗ್ಗೆ ಯಾವುದೇ ದೃಢೀಕರಣ ಸಂದೇಶವೇನೂ ಬರುವುದಿಲ್ಲ. ಅರ್ಧ ಗಂಟೆಯ ಬಳಿಕ ನಿಮ್ಮದೇ ಜಿಮೇಲ್‌ಗೆ ಲಾಗಿನ್ ಆದರೆ, ಬಲ ಮೇಲ್ಭಾಗದಲ್ಲಿರುವ ಪ್ರೊಫೈಲ್ ಚಿತ್ರ ಕ್ಲಿಕ್ ಮಾಡಿದಾಗ ಹೊಸ ಖಾತೆಯನ್ನು ಅಲ್ಲೇ ಕೆಳಗೆ ತೋರಿಸಲಾಗುತ್ತದೆ. ಹೊಸ ಪ್ರೊಫೈಲ್ ಮೇಲೆ ಕ್ಲಿಕ್ ಮಾಡಿದರೆ, ಬೇರೊಂದು ವಿಂಡೋದಲ್ಲಿ ಆ ಪ್ರಧಾನ ಜಿಮೇಲ್ ಖಾತೆ ತೆರೆದುಕೊಳ್ಳುತ್ತದೆ.
ಅನುಮತಿ ರದ್ದುಗೊಳಿಸುವುದು
ಯಾವುದೇ ಕ್ಷಣದಲ್ಲಿ ಈ ಅನುಮತಿಯನ್ನು ರದ್ದುಗೊಳಿಸಬಹುದು. ‘ಗ್ರ್ಯಾಂಟ್ ಆ್ಯಕ್ಸೆಸ್ ಟು ಯುವರ್ ಅಕೌಂಟ್’ ವಿಭಾಗಕ್ಕೆ ಹೋದಾಗ, ‘ಡಿಲೀಟ್’ ಎಂಬ ಆಯ್ಕೆ ಕಾಣಿಸುತ್ತದೆ. ಅದನ್ನು ಕ್ಲಿಕ್ ಮಾಡಿದರಾಯಿತು.
ಡೆಲಿಗೇಟ್ ಮಾಡುವುದೆಂದರೆ, ‘ಪಾಸ್‌ವರ್ಡ್ ಕೊಟ್ಟಿಲ್ಲ, ತೊಂದರೆಯಿಲ್ಲ’ ಅಂತ ಸುಮ್ಮನಿರುವಂತಿಲ್ಲ. ನಮ್ಮ ಖಾಸಗಿತನಕ್ಕೆ ಇಲ್ಲಿ ರಕ್ಷಣೆಯಿರುವುದಿಲ್ಲ. ಅಂದರೆ ಆ್ಯಕ್ಸೆಸ್ ಉಳ್ಳವರಿಗೆ ಇಮೇಲ್ ಖಾತೆಯಲ್ಲಿ ಏನಾಗುತ್ತದೆ ಎಂಬುದು ತಿಳಿಯುತ್ತದೆಯೆನ್ನುವುದು ನೆನಪಿರಲಿ. ಅತ್ಯಂತ ವಿಶ್ವಾಸವುಳ್ಳವರಿಗೆ ಮಾತ್ರವೇ ಈ ರೀತಿಯ ಆ್ಯಕ್ಸೆಸ್ ನೀಡಬಹುದು ಎಂಬುದು ಕೂಡ ಗಮನದಲ್ಲಿರಲಿ. ಅದೇ ರೀತಿ, ಆ್ಯಕ್ಸೆಸ್ ಉಳ್ಳವರು ಕಳುಹಿಸಿದ ಇಮೇಲ್‌ನಲ್ಲಿ, ಕಳುಹಿಸಿದವರ ಹೆಸರು ದಾಖಲಾಗುತ್ತದೆಯಾದುದರಿಂದ ಇಮೇಲ್ ಕಳುಹಿಸುವಾಗ ಎಚ್ಚರಿಕೆ ವಹಿಸಬೇಕಾಗುತ್ತದೆ.
ಮಾಹಿತಿ@ತಂತ್ರಜ್ಞಾನ, ವಿಜಯ ಕರ್ನಾಟಕ ಅಂಕಣ By ಅವಿನಾಶ್ ಬಿ. For 11 ಡಿಸೆಂಬರ್ 2017
ರಿಯಲ್‌ಮಿ 14 ಪ್ರೊ ಸರಣಿಯ 5ಜಿ ಫೋನ್, ಡ್ಯಾನಿಶ್ ಡಿಸೈನ್ ಸ್ಟುಡಿಯೋ ವ್ಯಾಲರ್ ಡಿಸೈನರ್ಸ್ ಮೂಲಕ ರೂಪುಗೊಂಡ ವಿಶ್ವದ ಮೊದಲ…
ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್ ಇರುವ ಬಹುನಿರೀಕ್ಷಿತ…
ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…
ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.
ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…
Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.