ನಿಮ್ಮ ಖಾಸಗಿ ಮಾಹಿತಿಗೆ ಕನ್ನ ಹಾಕುತ್ತಿರುವ Artificial Intelligence

ಹೀಗೊಂದು ಸಂದರ್ಭವನ್ನು ಕಲ್ಪಿಸಿಕೊಳ್ಳಿ. ಉತ್ತಮ ಫರ್ನಿಚರ್‌ಗಳನ್ನು ಕೊಳ್ಳಬೇಕೆಂಬ ಮನಸ್ಸಾಗಿದೆ ನಿಮಗೆ. ಕಂಪ್ಯೂಟರ್ ಆನ್ ಇದೆ, ಅದರಲ್ಲಿ ಜಿಮೇಲ್ ಖಾತೆ ಸದಾ ಓಪನ್ ಇರುತ್ತದೆ. ಯಾಕೆಂದರೆ ಇಮೇಲ್ ಆಗಾಗ್ಗೆ ಚೆಕ್ ಮಾಡುತ್ತಲೇ ಇರಬೇಕಾಗುತ್ತದೆ. ಮತ್ತೊಂದು ಬ್ರೌಸರ್ ಟ್ಯಾಬ್ ತೆರೆದು, ನಿಮಗೆ ಬೇಕಾದ ಫರ್ನಿಚರ್‌ಗಳ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯಲು ಇಚ್ಛಿಸುತ್ತೀರಿ, ಜಾಲಾಡುತ್ತೀರಿ. ಕೆಲಸ ಆಯಿತು. ಅದನ್ನು ಕ್ಲೋಸ್ ಮಾಡಿಯೂ ಆಯಿತು. ಸ್ವಲ್ಪ ಹೊತ್ತಿನ ಬಳಿಕ ನಿಮ್ಮ ಆಂಡ್ರಾಯ್ಡ್ ಮೊಬೈಲ್ ಫೋನ್ ತೆರೆಯುತ್ತೀರಿ. ಅದರಲ್ಲಿ ಯಾವುದೋ ವೆಬ್ ಸೈಟ್ ಅಥವಾ ಆ್ಯಪ್ ತೆರೆಯುತ್ತೀರಿ. ನಮಗೆ ಇಷ್ಟವಾದ ವೈವಿಧ್ಯಮಯ ಫರ್ನಿಚರ್‌ಗಳ ಜಾಹೀರಾತುಗಳು ಕಾಣಲಾರಂಭಿಸುತ್ತವೆ. ಅರೆ! ನಿಮಗೆ ಫರ್ನಿಚರ್ ಇಷ್ಟವಾಗಿದೆ ಅಂತ ಈ ಫೋನ್‌ಗೆ ಹೇಗೆ ಗೊತ್ತಾಯಿತು? ನಾವು ಅಮೆಜಾನ್, ಸ್ನ್ಯಾಪ್‌ಡೀಲ್, ಫ್ಲಿಪ್‌ಕಾರ್ಟ್ ಮುಂತಾದ ಇ-ಕಾಮರ್ಸ್ ಜಾಲತಾಣಗಳಲ್ಲಿ ಹುಡುಕಾಡಿದ ವಿಷಯಗಳು ಬೇರೆ ಯಾವುದೇ ವೆಬ್ ತಾಣಗಳನ್ನು ತೆರೆದರೂ ಜಾಹೀರಾತು ರೂಪದಲ್ಲಿ ಕಾಣಿಸಿಕೊಳ್ಳುತ್ತವೆಯಲ್ಲ, ಇದು ಹೇಗೆ?

ಇದುವೇ ಆರ್ಟಿಫಿಷಿಯಲ್ ಇಂಟಲಿಜೆನ್ಸ್ (ಎಐ) ಅಂದರೆ ಕೃತಕ ಬುದ್ಧಿಮತ್ತೆ. ನೀವು ನಿಮ್ಮ ಜಿಮೇಲ್ ಖಾತೆಗೆ ಲಾಗಿನ್ ಆಗಿದ್ದುದರಿಂದ ಮತ್ತು ಆಂಡ್ರಾಯ್ಡ್‌ನಲ್ಲಿ ಯಾವತ್ತೂ ಜಿಮೇಲ್‌ಗೆ ಲಾಗಿನ್ ಆಗಿಯೇ ಇರುವುದರಿಂದ, ಒಂದೇ ಖಾತೆಯ ಮಾಹಿತಿ ಮತ್ತೊಂದರಲ್ಲಿ ಗೋಚರಿಸಿದ ಬಗೆ ಇದು. ಈ ಆರ್ಟಿಫಿಷಿಯಲ್ ಇಂಟಲಿಜಿನ್ಸ್ ಇತ್ತೀಚಿನ ದಿನಗಳಲ್ಲಿ ಬೆಳೆದ ಬಗೆ ಅಗಾಧ. ಈ ತಂತ್ರಜ್ಞಾನವೇ ಆನ್‌ಲೈನ್‌ನಲ್ಲಿ ಪ್ರತಿದಿನ ಕೋಟ್ಯಂತರ ರೂಪಾಯಿ ಮೊತ್ತದ ಜಾಹೀರಾತು ವಹಿವಾಟಿಗೆ ಕಾರಣವಾಗುತ್ತಿದೆ. ಯೂಟ್ಯೂಬ್ ವೀಡಿಯೋ ನೋಡುವಾಗಲೂ ಇಂಥ ಜಾಹೀರಾತುಗಳು ಕಾಣಿಸಿಕೊಳ್ಳುತ್ತವೆ. ಹೀಗಾಗಿ, ನೀವೇನೋ ನಿಮಗೆ ಬೇಕಾದ ವೀಡಿಯೋ ನೋಡಿದೆವೆಂದುಕೊಂಡು ಸುಮ್ಮನಿರುತ್ತೀರಿ; ಆದರೆ ನೀವು ನೋಡಿದ ಒಂದು ವೀಡಿಯೋದಿಂದ ಬೇರೊಂದು ಕಡೆಯಿಂದ ಹಲವು ಜಾಹೀರಾತುದಾರರಿಗೆ ನಿಮ್ಮ ಈ ವೀಕ್ಷಣೆಯಿಂದಲೋ, ಅಪ್ಪಿ ತಪ್ಪಿ ನೀವು ಕ್ಲಿಕ್ ಮಾಡಿರುವುದರಿಂದಲೋ… ಲಾಭವಾಗಿಬಿಡುತ್ತದೆ. ಇದಕ್ಕಾಗಿಯೇ ಕೃತಕ ಬುದ್ಧಿಮತ್ತೆಯಿಂದ ಪ್ರೇರಿತವಾಗಿರುವ ಆಟೋ ಸಜೆಸ್ಟ್ (ಸ್ವಯಂಚಾಲಿತವಾಗಿ ಶಿಫಾರಸು ಮಾಡುವ) ಜಾಹೀರಾತುಗಳ ಪ್ರಮಾಣವೂ ಇತ್ತೀಚೆಗೆ ಹೆಚ್ಚಾಗಿರುವುದು.

ಇನ್ನೂ ಒಂದಿದೆ. ಯೂಟ್ಯೂಬ್‌ನಲ್ಲಿ ನೀವು ಯಕ್ಷಗಾನದ ವೀಡಿಯೋ ನೋಡಿದರೆ, ಯಕ್ಷಗಾನದ್ದೇ ಹೆಚ್ಚು ಹೆಚ್ಚು ವೀಡಿಯೋಗಳನ್ನು ನಿಮಗೆ ಶಿಫಾರಸು ಮಾಡಲಾಗುತ್ತದೆ. ಅದೇ ರೀತಿ, ಕನ್ನಡ ಸಿನಿಮಾ ಹಾಡುಗಳು ಇಷ್ಟವಾದರೆ, ಮತ್ತಷ್ಟು ಹಾಡುಗಳನ್ನೇ ನೀವು ಕ್ಲಿಕ್ ಮಾಡುವಂತೆ ಪ್ರೇರೇಪಿಸಲಾಗುತ್ತದೆ. ಅಂದರೆ ಅದು ನಿಮ್ಮ ಮನಸ್ಸನ್ನು ಅರಿತುಕೊಂಡು, ನಿಮಗೆ ಬೇಕಾದುದನ್ನು ನೀಡುವಂತೆ ಪೋಸ್ ಕೊಡುತ್ತದೆ! ಅಂದರೆ, ನಾವು ಯಾವುದರಲ್ಲಿ ಆಸಕ್ತಿ ತೋರಿಸುತ್ತೇವೆಯೋ, ಅದಕ್ಕೆ ಅನುಗುಣವಾದ ವಿಷಯಗಳನ್ನೇ ನಮಗೆ ಫೀಡ್ ಮಾಡಲಾಗುತ್ತದೆ.

ತನ್ನ ಸರ್ಚ್ ಎಂಜಿನ್‌ಗಾಗಿಯೇ ಎಲ್ಲರ ಮನೆಯಲ್ಲೂ, ಎಲ್ಲರ ಮೊಬೈಲಲ್ಲಿಯೂ ಇರುವ ಗೂಗಲ್ ಎಂಬ ಅಂತರ್ಜಾಲ ದಿಗ್ಗಜ ಕಂಪನಿ, ನಮ್ಮ ಬಗ್ಗೆ ನಾವು ತಿಳಿದುಕೊಂಡಿರುವುದಕ್ಕಿಂತಲೂ ಹೆಚ್ಚು ವಿಷಯಗಳನ್ನು ತಿಳಿದುಕೊಂಡಿರುತ್ತದೆ ಎಂಬುದು ನಿಮಗೆ ಗೊತ್ತೇ? ಇಂಟರ್ನೆಟ್ ಬಳಸುತ್ತಿರುವ ಎಲ್ಲರೂ ಗಮನಿಸಬೇಕಾದ ವಿಚಾರವಿದು. ಯಾಕೆಂದರೆ ಗೂಗಲ್ ಎಂಬುದು ಇಂಟರ್ನೆಟ್ ಬಳಕೆದಾರರ, ವಿಶೇಷವಾಗಿ ಆಂಡ್ರಾಯ್ಡ್ ಫೋನ್ ಬಳಕೆದಾರರ ಜೀವನವನ್ನು ಯಾವ ರೀತಿ ಆವರಿಸಿಕೊಂಡುಬಿಟ್ಟಿದೆಯೆಂದರೆ, ನಾವು ಎಲ್ಲಿಗೆ ಹೋಗಿದ್ದೇವೆ, ಏನನ್ನು ನೋಡಿದ್ದೇವೆ, ಇಂಟರ್ನೆಟ್‌ನಲ್ಲಿ ನಮಗೆ ಯಾವುದು ಇಷ್ಟ, ನಾವೇನನ್ನು ನೋಡಿದ್ದೇವೆ, ಇಂಟರ್ನೆಟ್‌ನಲ್ಲಿ ನಾವೇನು ಮಾಡಿದ್ದೇವೆ ಎಂಬ ಮಾಹಿತಿಯೆಲ್ಲವೂ ಗೊತ್ತಿರುತ್ತದೆ. ಆಧಾರ್ ಕಾರ್ಡ್‌ಗೆ ನಮ್ಮ ಬೆರಳಚ್ಚು, ಕಣ್ಣಿನ ಪಾಪೆಯ ಅಚ್ಚು ಹಾಗೂ ನಮ್ಮ ಕುರಿತ ಮಾಹಿತಿ ನೀಡುವಲ್ಲಿ ಹಿಂದುಮುಂದು ನೋಡುತ್ತೇವೆ. ಆದರೆ ಈ ಪರಿಯ ಪ್ರೈವೆಸಿ ಬಗ್ಗೆ ತಲೆಕೆಡಿಸಿಕೊಂಡವರು ಗೂಗಲ್ ನಮ್ಮನ್ನು ಹೋದಲ್ಲೆಲ್ಲಾ ಟ್ರ್ಯಾಕ್ ಮಾಡುತ್ತಿದೆ ಎಂಬ ಬಗ್ಗೆ ಅಷ್ಟೇನೂ ಗಮನ ಹರಿಸುವುದಿಲ್ಲ. ಯಾಕೆಂದರೆ ಇದು ಅನಿವಾರ್ಯ ಅನ್ಇಷ್ಟ!

ಇದು ಹೇಗೆ ಸಾಧ್ಯ ಎಂದುಕೊಳ್ಳುತ್ತೀರಾ? ಇಂಟರ್ನೆಟ್ ಜಾಲಾಡಲು ನಾವು ಗೂಗಲ್‌ನದ್ದೇ ಆಗ ಕ್ರೋಮ್ ಬ್ರೌಸರ್ ಬಳಸುತ್ತೇವೆ. ಕಂಪ್ಯೂಟರಿನಲ್ಲಾದರೆ ಗೂಗಲ್ ಮ್ಯಾಪ್ ಕೂಡ ಕ್ರೋಮ್ ಮೂಲಕವೇ ಜಾಲಾಡುತ್ತೇವೆ. ಅದೇ ಬ್ರೌಸರಿನಲ್ಲಿ ನಮಗೆ ಬೇಕಾದ ವೆಬ್ ತಾಣಗಳಿಗೆ ಭೇಟಿ ನೀಡುತ್ತೇವೆ, ಯೂಟ್ಯೂಬ್ ವೀಡಿಯೋಗಳನ್ನು ನೋಡುತ್ತೇವೆ, ಇಮೇಲ್ ಕಳುಹಿಸುತ್ತೇವೆ ಮತ್ತು ನಮಗೆ ಅಗತ್ಯವಿರುವ ಯಾವುದಾದರೂ ಮಾಹಿತಿಯನ್ನು, ಉದಾಹರಣೆಗೆ ಉತ್ತಮ ಮೊಬೈಲ್ ಫೋನ್ ಯಾವುದು, ನಾವಿರುವ ಸ್ಥಳದಲ್ಲಿ ಚೆನ್ನಾಗಿರುವ ಹೋಟೆಲ್ ಯಾವುದು, ಪಕ್ಕದಲ್ಲೇ ಯಾವ ಸಿನಿಮಾ ಗೃಹದಲ್ಲಿ ಯಾವ ಚಲನಚಿತ್ರ ಓಡುತ್ತಿದೆ ಎಂದೆಲ್ಲಾ ಹುಡುಕುತ್ತೇವೆ. ಕ್ರೋಮ್‌ನ ಬ್ರೌಸರ್‌ಗೂ ಗೂಗಲ್‌ನ ಸರ್ಚ್ ಎಂಜಿನ್‌ಗೂ ಗಳಸ್ಯ ಕಂಠಸ್ಯ ನಂಟು ಇರುವುದರಿಂದ ನಮ್ಮ ಸರ್ಚ್ ಹಿಸ್ಟರಿ (ಹುಡುಕಾಟದ ಇತಿಹಾಸ) ಗೂಗಲ್‌ನ ಸರ್ವರ್‌ನಲ್ಲಿ ದಾಖಲಾಗುತ್ತದೆ.

ಕಂಪ್ಯೂಟರ್ ಅಥವಾ ಆಂಡ್ರಾಯ್ಡ್ ಫೋನ್‌ಗಳಲ್ಲಿ ಕೂಡ ನೀವು ಏನನ್ನು ನೋಡಿದಿರಿ ಎಂಬುದೆಲ್ಲಾ ಗೂಗಲ್‌ಗೆ ತಿಳಿಯುತ್ತದೆ. ಅದರಲ್ಲಿರುವ ಜಿಪಿಎಸ್ (ಗ್ಲೋಬಲ್ ಪೊಸಿಶನಿಂಗ್ ಸಿಸ್ಟಂ) ಎಂಬ ತಂತ್ರಜ್ಞಾನವು ವಿಶೇಷವಾಗಿ ಮ್ಯಾಪ್ ಬಳಸಲು ಅತ್ಯಂತ ಅನಿವಾರ್ಯ. ಅದು ಆನ್ ಆಗಿರುವುದರಿಂದ, ನೀವು ಎಲ್ಲಿ ಹೋದಿರಿ ಎಂಬುದೂ ಗೂಗಲ್‌ಗೆ ತಿಳಿಯುತ್ತದೆ. ಅದಕ್ಕಾಗಿಯೇ, ‘ನೀವು ಇಂಥ ರೆಸ್ಟೋರೆಂಟ್‌ನಲ್ಲಿದ್ದೀರಿ, ಅದರ ಬಗ್ಗೆ ಫೋಟೋ ಅಪ್‌ಲೋಡ್ ಮಾಡಿ’ ಎಂದೋ, ‘ನೀವೀಗ ಬೇಲೂರಿನಲ್ಲಿದ್ದೀರಿ, ಇಲ್ಲಿನ ಪ್ರೇಕ್ಷಣೀಯ ಸ್ಥಳದ ಫೋಟೋ ಹಂಚಿಕೊಳ್ಳಿ’ ಅಂತಲೋ ನಿಮ್ಮ ಆಂಡ್ರಾಯ್ಡ್ ಫೋನ್‌ನಲ್ಲಿ ಧುತ್ತನೇ ನೋಟಿಫಿಕೇಶನ್ ಒಂದು ಬರಬಹುದು. ಯಾವುದಾದರೂ ಊರಿಗೆ ಹೋಗಬೇಕಿದ್ದರೆ ರಸ್ತೆಯ ಮಾಹಿತಿಗಾಗಿ ಗೂಗಲ್ ಮ್ಯಾಪ್ ಬಳಸುವವರಿಗಂತೂ ಈ ಅನುಭವ ಆಗಿಯೇ ಇರುತ್ತದೆ.

ಪರಿಹಾರವೇನು: ನಾವು ಅಂತರ್ಜಾಲದಲ್ಲಿ ಏನು ನೋಡಿದೆವೆಂಬುದನ್ನು ಗೂಗಲ್ ಟ್ರ್ಯಾಕ್ ಮಾಡಬಾರದು ಅಂದುಕೊಳ್ಳುವವರಿಗೆ ಅತ್ಯುತ್ತಮ ಪರಿಹಾರವೆಂದರೆ ಕ್ರೋಮ್ ಬ್ರೌಸರ್‌ನಲ್ಲಿ ‘ಇನ್‌ಕಾಗ್ನಿಟೋ’ ವಿಂಡೋ ಬಳಸುವುದು. ಇದು ಮೊಬೈಲ್‌ನಲ್ಲಿರುವ ಕ್ರೋಮ್ ಬ್ರೌಸರ್‌ನಲ್ಲೂ ಲಭ್ಯವಿರುತ್ತದೆ. ಬ್ರೌಸರ್‌ನ ಬಲಮೇಲ್ಭಾಗದಲ್ಲಿರುವ ಮೂರು ಚುಕ್ಕಿಗಳ ಮೆನು ಬಟನ್ ಕ್ಲಿಕ್ ಮಾಡಿದಾಗ, ಇನ್‌ಕಾಗ್ನಿಟೋ ವಿಂಡೋ ಅಂತ ಕ್ಲಿಕ್ ಮಾಡಿ, ಅದರಲ್ಲೇ ವೆಬ್ ಜಾಲಾಡುವುದು ಸೂಕ್ತ. ತನ್ನಿಂತಾನಾಗಿ ಟ್ರ್ಯಾಕ್ ಆಗುವುದು ನಿಲ್ಲುತ್ತದೆ. ಆದರೆ, ಆಂಡ್ರಾಯ್ಡ್ ಫೋನ್‌ನಲ್ಲಿ ನೀವು ಲಾಗಿನ್ ಆಗಿಯೇ ಇರುವುದರಿಂದ, ಕ್ರೋಮ್ ಹೊರತಾಗಿ ಬೇರೆ ಆ್ಯಪ್ ಬಳಸುವಾಗ ಅದರ ಹೆಜ್ಜೆಗುರುತುಗಳು ಗೂಗಲ್‌ನಲ್ಲಿ ದಾಖಲಾಗಿಯೇಬಿಡುತ್ತವೆ. ಇದಕ್ಕಾಗಿ https://myactivity.google.com ಎಂಬಲ್ಲಿ ಹೋಗಿ. ಅಲ್ಲಿ, ಮೊಬೈಲ್‌ನೊಳಗಿನ ನಮ್ಮ ಚಲನವಲನಗಳು ಟ್ರ್ಯಾಕ್ ಆಗದಂತೆ ಸೆಟ್ ಮಾಡಿಕೊಳ್ಳುವ ಆಯ್ಕೆಗಳು ಗೋಚರಿಸುತ್ತವೆ. ಅದೇ ರೀತಿ, ಅಲ್ಲೇ ನಮ್ಮ ಚಟುವಟಿಕೆಗಳ ಚರಿತ್ರೆಯನ್ನು ಡಿಲೀಟ್ ಮಾಡುವುದೂ ಸಾಧ್ಯ. ಇದಕ್ಕೆ ‘ಕ್ಲಿಯರ್ ಹಿಸ್ಟರಿ’ ಬಟನ್ ಒತ್ತಿದರಾಯಿತು.

ಗಮನಿಸಿ: ನಮಗಿಷ್ಟದ ವಿಷಯಗಳ ಕುರಿತು ಧುತ್ತನೇ ಪಾಪ್-ಅಪ್ ವಿಂಡೋಗಳಲ್ಲಿ ಕಾಣಿಸಿಕೊಳ್ಳುವ ಯಾವುದೇ ಲಿಂಕ್‌ಗಳನ್ನು ಕ್ಲಿಕ್ ಮಾಡುವ ಮುನ್ನ ಹತ್ತು ಬಾರಿ ಯೋಚಿಸಿ. ಇವು ಅನಗತ್ಯ ಮಾಲ್‌ವೇರ್‌ಗಳು ಕೂಡ ಆಗಿರಬಹುದು. ನಿಮ್ಮನ್ನು ಬೆದರಿಸುವ (ವೈರಸ್ ಅಟ್ಯಾಕ್ ಆಗಿದೆ, ತಕ್ಷಣ ಕ್ಲೀನ್ ಮಾಡಿ ಎಂಬಂತೆ) ಸಂದೇಶಗಳೂ ಇರಬಲ್ಲವು. ಸಂದೇಹವಿದ್ದರೆ, ಇಂಟರ್ನೆಟ್ (ಡೇಟಾ) ಆಫ್ ಮಾಡಿದ ಬಳಿಕವೇ ಕ್ಲಿಕ್ ಮಾಡಿದರೆ, ಇಂಥವು ನಿಜಕ್ಕೂ ನಿಮ್ಮದೇ ಮೊಬೈಲ್ ಫೋನ್‌ನ ಸೆಟ್ಟಿಂಗ್‌ನಿಂದ ಬಂದ ಸಂದೇಶವೇ ಎಂಬುದನ್ನು ಖಚಿತಪಡಿಸಿಕೊಳ್ಳಬಹುದು.

ಮಾಹಿತಿ@ತಂತ್ರಜ್ಞಾನ ಅಂಕಣ for 29 ಜನವರಿ 2018 by ಅವಿನಾಶ್ ಬಿ.

Avinash B

Avinash B. Tech Writer, Columnist, Working as Online media Journalist for more than two decades. Passionate about Technology and Gadgets. Yakshagana and Music are passion.

Recent Posts

ಎಐ ವೈಶಿಷ್ಟ್ಯಗಳ realme GT 7 Pro ಬಿಡುಗಡೆ: ಬೆಲೆ ಎಷ್ಟು? ವೈಶಿಷ್ಟ್ಯಗಳೇನು? ಇಲ್ಲಿದೆ ಪೂರ್ಣ ಮಾಹಿತಿ

ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್‌ ಇರುವ ಬಹುನಿರೀಕ್ಷಿತ…

3 weeks ago

ರಿಯಲ್‌ಮಿ ನಾರ್ಜೋ 70 ಟರ್ಬೊ 5 ಜಿ, ರಿಯಲ್‌ಮಿ ಬಡ್ಸ್ ಎನ್‌1 ಬಿಡುಗಡೆ: ಬೆಲೆ, ವೈಶಿಷ್ಟ್ಯ ತಿಳಿಯಿರಿ

ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…

3 months ago

ಓದುವಿಕೆ, ಕಲಿಕೆ ಉತ್ತೇಜನಕ್ಕೆ ‘ರೀಡ್-ಅ-ಥಾನ್’: ದಾಖಲೆಯ ಗುರಿ

ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.

3 months ago

Realme 13 +, Realme 13 5ಜಿ ಫೋನ್ ಬಿಡುಗಡೆ: ವೇಗದ ಫೋನ್‌ನ ವೈಶಿಷ್ಟ್ಯಗಳು, ಬೆಲೆ ಇಲ್ಲಿ ತಿಳಿಯಿರಿ

ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…

4 months ago

e-ಯುಗದ ತನಿಖಾ ಪತ್ರಿಕೋದ್ಯಮ: ಫ್ಯಾಕ್ಟ್ ಚೆಕ್

Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.

5 months ago

ಯಕ್ಷ ಮಂತ್ರ ಮಾಂಗಲ್ಯ: ಕೀರ್ತನಾ ಪ್ರಸಾದ ಕಲ್ಯಾಣವು

ಹಾಡುಗಾರಿಕೆ, ಚೆಂಡೆ-ಮದ್ದಳೆಯ ಬಿಡಿತ-ಮುಕ್ತಾಯಗಳ ಬಳಿಕ, ಬಂದಿದ್ದ ಗಣ್ಯರು, ಒಂದೊಂದು ಹಾಡಿನಲ್ಲಿ ಅಡಕವಾಗಿರುವ ಮಂತ್ರ ಮಾಂಗಲ್ಯದ ಪ್ರತಿಜ್ಞಾಗುಚ್ಛವನ್ನು ವಿವರಿಸಿ, ವಧು-ವರರಿಗೆ ಬೋಧಿಸಿದರು

10 months ago