Poco M5 Review: ಬಜೆಟ್ ಬೆಲೆಯಲ್ಲಿ ಗೇಮಿಂಗ್‌ಗೂ ಸೂಕ್ತವಾಗಬಲ್ಲ ಹೊಸ ಫೋನ್

Poco M5 ರಿವ್ಯೂ: ಸ್ಫರ್ಧಾತ್ಮಕ ಯುಗದಲ್ಲಿ ಎಲ್ಲ ರೀತಿಯಲ್ಲಿಯೂ ಭಾರತೀಯ ಮಾರುಕಟ್ಟೆಯಲ್ಲಿ ಪಾಲು ಗಿಟ್ಟಿಸಿಕೊಳ್ಳುವ ತವಕದಲ್ಲಿರುವ ಚೀನಾ ಕಂಪನಿಗಳ ಸಾಲಿನಲ್ಲಿ ಶವೊಮಿ ಪ್ರಮುಖ ಹೆಸರು. ಅದರದ್ದೇ ಉಪ ಬ್ರ್ಯಾಂಡ್ ಆಗಿರುವ ‘ಪೋಕೊ (POCO)’ ಇದೀಗ ಎಂ5 ಹೆಸರಿನ ವಿನೂತನ ಸ್ಮಾರ್ಟ್‌ಫೋನನ್ನು ಸೆ.5ರಂದು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಪ್ರಜಾವಾಣಿಗೆ ರಿವ್ಯೂಗೆ ದೊರೆತ ಪೋಕೊ ಎಂ 5 (6ಜಿಬಿ/128ಜಿಬಿ) ಮಾದರಿಯ ಬಜೆಟ್ ಫೋನ್ ಹೇಗಿದೆ? ಇಲ್ಲಿದೆ ಮಾಹಿತಿ.

  • ಪ್ರಮುಖ ವೈಶಿಷ್ಟ್ಯಗಳು
  • ಡಿಸ್‌ಪ್ಲೇ (ಸ್ಕ್ರೀನ್): 6.58-ಇಂಚು 90Hz FHD+ IPS LCD ಪ್ಯಾನೆಲ್
  • ಪ್ರೊಸೆಸರ್: ಮೀಡಿಯಾಟೆಕ್ ಹೀಲಿಯೊ G99
  • RAM: 4GB/6GB
  • ಸ್ಟೋರೇಜ್: 64GB/128GB
  • ಕಾರ್ಯಾಚರಣಾ ವ್ಯವಸ್ಥೆ: ಆಂಡ್ರಾಯ್ಡ್ 12 ಆಧಾರಿತ MIUI 13
  • ಪ್ರಧಾನ ಕ್ಯಾಮೆರಾ: 50MP + 2MP (ಡೆಪ್ತ್) + 2MP (ಮ್ಯಾಕ್ರೋ)
  • ಸೆಲ್ಫೀ ಕ್ಯಾಮೆರಾ: 5MP
  • ಬ್ಯಾಟರಿ: 5000mAh, 18W ವೇಗದ ಚಾರ್ಜಿಂಗ್ ಬೆಂಬಲ
  • ಬೆಲೆ: 4GB+64GB: ₹12,499
  • 6GB+128GB: ₹14,499

ವಿನ್ಯಾಸ
ಹಳದಿ, ನೀಲ ಹಾಗೂ ಕಪ್ಪು – ಹೀಗೆ ಮೂರು ಬಣ್ಣಗಳಲ್ಲಿ ಬರುವ ಪೋಕೊ ಎಂ 5ನ ರಿವ್ಯೂ ಸಾಧನವು ನೀಲ ಬಣ್ಣದ್ದು. ಹಿಂಬದಿಯಲ್ಲಿ ಬೇರೆ ಫೋನ್‌ಗಳಿಗಿಂತ ಭಿನ್ನವಾಗಿ, ಗಾಜು ಅಥವಾ ಪಾಲಿಕಾರ್ಬೊನೇಟ್ ಬಳಸದೆಯೇ, ಸಿಂಥೆಟಿಕ್ (ಫಾಕ್ಸ್) ಚರ್ಮದ ಕವರ್ ಆಕರ್ಷಕವಾಗಿಯೂ ವಿಶಿಷ್ಟವಾಗಿಯೂ ಕಾಣಿಸುತ್ತದೆ. ಅದರ ಮಧ್ಯೆ, ಮೂರು ಲೆನ್ಸ್‌ಗಳಿರುವ ಕ್ಯಾಮೆರಾ ಮಾಡ್ಯೂಲ್ ಗಾಜಿನ ಲೇಪನದಂತಿದ್ದು, ಈ ಬೆಲೆಯ ಶ್ರೇಣಿಯಲ್ಲಿ ವಿನೂತನ ವಿನ್ಯಾಸ ನೀಡಿರುವುದು ವಿಶೇಷ. ಕೆಳಭಾಗದಲ್ಲಿ ಯುಎಸ್‌ಬಿ ಟೈಪ್ ಸಿ ಚಾರ್ಜಿಂಗ್ ಪೋರ್ಟ್ ಹಾಗೂ ಮೇಲ್ಭಾಗದಲ್ಲಿ 3.5 ಮಿಮೀ ಜ್ಯಾಕ್ ಇದೆ. 6.58 ಇಂಚಿನ ಸ್ಕ್ರೀನ್ ಇದ್ದರೂ 204 ಗ್ರಾಂ ತೂಕವಷ್ಟೇ ಇದೆ. ಎಲ್‌ಸಿಡಿ ಪ್ಯಾನೆಲ್‌ನಲ್ಲಿ ಕಡಿಮೆ ಬೆಝೆಲ್ (ಸ್ಕ್ರೀನ್ ಸುತ್ತಲಿನ ಖಾಲಿ ಭಾಗ) ಇದ್ದು, 90Hz ರೀಫ್ರೆಶ್ ರೇಟ್ ಇದೆ. ರಿವ್ಯೂ ಸಾಧನವು ಆಭರಣ ಪೆಟ್ಟಿಗೆಯಂತಹ ದೊಡ್ಡ, ಹಳದಿ ಬಣ್ಣದ ಆಕರ್ಷಕ ಬಾಕ್ಸ್‌ನೊಳಗೆ ಬಂದಿದೆ.

ಕ್ಯಾಮೆರಾ

ಪೋಕೊ ಎಂ5: ರಾತ್ರಿ ವೇಳೆ ಮೆಟ್ರೋ ಸ್ಟೇಶನ್ ಹೊರಗಿನ ಪಾರ್ಕಿಂಗ್ ಜಾಗದಲ್ಲಿ ತೆಗೆದ ಚಿತ್ರ


ಪ್ರಧಾನ ಕ್ಯಾಮೆರಾದ ಆಕರ್ಷಕ ಮಾಡ್ಯೂಲ್‌ನಲ್ಲಿ 50MP + 2MP (ಡೆಪ್ತ್ ಸೆನ್ಸರ್) + 2MP (ಮ್ಯಾಕ್ರೋ ಸೆನ್ಸರ್) ಲೆನ್ಸ್‌ಗಳಿವೆ. ಚಿತ್ರಗಳು ಅತ್ಯುತ್ತಮ ಎಂದು ಹೇಳಲಾಗದಿದ್ದರೂ, ಈ ಬೆಲೆಗೆ ಅನುಗುಣವಾಗಿ ಪರಿಣಾಮಕಾರಿ ಚಿತ್ರಗಳು ಸೆರೆಯಾಗುತ್ತವೆ. ಉತ್ತಮ ಬೆಳಕಿರುವಲ್ಲಿ ಒಳ್ಳೆಯ ಚಿತ್ರಗಳು, ಹೆಚ್ಚು ನಿಖರವಾದ ಡೀಟೇಲ್ಸ್‌ನೊಂದಿಗೆ ಸೆರೆಯಾಗುತ್ತವೆ. ಮಂದ ಬೆಳಕಿನಲ್ಲಿ ಅಷ್ಟೊಂದು ಸ್ಪಷ್ಟತೆ (ಶಾರ್ಪ್‌ನೆಸ್) ಕಾಣಸಿಗುವುದಿಲ್ಲವಾದರೂ, ಕೃತಕ ಬೆಳಕಿದ್ದರೆ ಗುಣಮಟ್ಟದಲ್ಲಿ ಸುಧಾರಣೆ ಕಾಣಿಸುತ್ತದೆ. ಬಣ್ಣಗಳ ಸಹಜತೆಯೂ ಇರುತ್ತದೆ. ಸೆಲ್ಫೀ ಚಿತ್ರಗಳಲ್ಲಿ ಕೂಡ ಕೃತಕ ಸುಂದರೀಕರಣ (ಬ್ಯೂಟಿಫಿಕೇಶನ್) ಪರಿಣಾಮ ಅತಿ ಎನ್ನಿಸುವಷ್ಟಿಲ್ಲ. ಹಲವಾರು ಫಿಲ್ಟರ್‌ಗಳನ್ನೂ ನೀಡಲಾಗಿದ್ದು, ಇಷ್ಟಕ್ಕೆ ತಕ್ಕಂತೆ ಬಳಸಿಕೊಳ್ಳಬಹುದು. ನೈಟ್ ಮೋಡ್‌ನಲ್ಲಿ ಈ ಸರಣಿಯ ಫೋನ್‌ಗಳಲ್ಲಿ ಆಶ್ಚರ್ಯ ಎನಿಸುವಷ್ಟರ ಮಟ್ಟಿಗೆ ಚಿತ್ರಗಳ ಗುಣಮಟ್ಟವಿದೆ. ಮಂದ ಬೆಳಕಿನಲ್ಲಿ ಪ್ರಖರತೆಯನ್ನು ಹೆಚ್ಚಿಸಿ, ಬಣ್ಣಗಳು ಕೂಡ ಸಹಜಕ್ಕೆ ಹತ್ತಿರವಾಗಿರುವಂತೆ ಮೂಡಿಬರುತ್ತವೆ. ಪೋರ್ಟ್ರೇಟ್ ಮೋಡ್ (ಹಿನ್ನೆಲೆ ಮಸುಕಾಗಿಸುವ) ಹೊರಾವರಣವನ್ನು ಸ್ವಲ್ಪ ಅಸಹಜವಾಗೆಂಬಂತೆ ಮೂಡಿಸುತ್ತದೆಯಾದರೂ, ಹೊಂದಿಸಿಕೊಳ್ಳುವ ವ್ಯವಸ್ಥೆ ನೀಡಿರುವುದರಿಂದ ನೋಡಿಕೊಂಡು ಸರಿಪಡಿಸಿಕೊಂಡು ಫೋಟೋ ಕ್ಲಿಕ್ ಮಾಡಬಹುದು.

ಕಾರ್ಯನಿರ್ವಹಣೆ
ಪೋಕೊ ಎಂ5ನಲ್ಲಿ ಹೀಲಿಯೊ ಜಿ99 ಚಿಪ್‌ಸೆಟ್ ಇದ್ದು 6GB RAM ಇದೆ. ಜೊತೆಗೆ, RAM ಅನ್ನು 2GB ಯಷ್ಟು ಹೆಚ್ಚಿಸಬಲ್ಲ, ಈಗಿನ ಫೋನ್‌ಗಳಲ್ಲಿ ಸಾಮಾನ್ಯ ಎನಿಸಬಹುದಾದ RAM ವಿಸ್ತರಿಸುವ ವೈಶಿಷ್ಟ್ಯವೂ ಅಡಕವಾಗಿದೆ. ಇದು ಗೇಮಿಂಗ್‌ಗೆ ತುಂಬ ಅನುಕೂಲ. 90Hz ರಿಫ್ರೆಶ್ ರೇಟ್ ಇರುವುದು ಗೇಮ್ ಆಡುವ ವೇಳೆ ತುಂಬ ಉಪಯುಕ್ತವಾಗಿದೆ. ಈ ಬೆಲೆಯ ವ್ಯಾಪ್ತಿಯಲ್ಲಿ ಹೇಳುವುದಾದರೆ, ಗೇಮಿಂಗ್‌ಗೆ ಈ ಫೋನ್ ಹೆಚ್ಚು ಹೊಂದಿಕೊಳ್ಳುತ್ತದೆ ಎನ್ನಬಹುದು. ಆದರೆ, ಸಾಕಷ್ಟು ಬ್ಲಾಟ್‌ವೇರ್‌ಗಳು (ಅನಗತ್ಯ ಎನಿಸಬಹುದಾದ ಆ್ಯಪ್‌ಗಳು) ಇದರಲ್ಲಿ ಅಂತರ್ಗತವಾಗಿ ಬಂದಿರುತ್ತವೆ. ಇವುಗಳಲ್ಲಿ ಕೆಲವನ್ನು ನಿಷ್ಕ್ರಿಯಗೊಳಿಸಬಹುದು (ಡಿಸೇಬಲ್) ಅಥವಾ ಅನ್‌ಇನ್‌ಸ್ಟಾಲ್ ಮಾಡಬಹುದು. ದೈನಂದಿನ ಕೆಲಸ ಕಾರ್ಯಗಳ ಸಂದರ್ಭದಲ್ಲಿ ಫೋನ್‌ನಲ್ಲಿ ಯಾವುದೇ ಸ್ಥಾಗಿತ್ಯದ ಅನುಭವವಾಗಿಲ್ಲ. ಆ್ಯಪ್‌ಗಳನ್ನು ಬದಲಾಯಿಸಿದಾಗ ಒಂದರೆಕ್ಷಣದ ವಿಳಂಬವಿದ್ದು, ಬಹುಶಃ ಮುಂದಿನ ಅಪ್‌ಡೇಟ್‌ನಲ್ಲಿ ಈ ಸಣ್ಣ ಸಮಸ್ಯೆಗೆ ಪರಿಹಾರ ದೊರೆಯಬಹುದು.

ಇದರ ಪವರ್/ಲಾಕ್ ಬಟನ್‌ನಲ್ಲೇ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಇದೆ. ವೇಗವಾಗಿಯೇ ಇದು ಕೆಲಸ ಮಾಡುತ್ತಿದ್ದು, ಫೇಸ್ ಅನ್‌ಲಾಕ್ ವ್ಯವಸ್ಥೆಯಲ್ಲೂ ಯಾವುದೇ ಸಮಸ್ಯೆಯಾಗಿಲ್ಲ.

ಬ್ಯಾಟರಿ
ಪೋಕೊ ಎಂ5 ಸಾಧನದಲ್ಲಿ 5000mAh ಸಾಮರ್ಥ್ಯದ ಬ್ಯಾಟರಿ ಅಳವಡಿಸಲಾಗಿದೆ. ಈಗಿನ ಫೋನ್‌ಗಳಿಗೆ ಮತ್ತು ಈಗಿನ ಬಳಕೆಯ ವಿಧಾನಕ್ಕೆ ಇಷ್ಟು ಸಾಮರ್ಥ್ಯ ಅನಿವಾರ್ಯ ಎಂದಾಗಿಬಿಟ್ಟಿದೆ. ಗರಿಷ್ಠ ಬಳಕೆಯಲ್ಲಿ ಕೂಡ ಒಂದು ದಿನದ ಚಾರ್ಜ್‌ಗೆ ಅಡ್ಡಿಯಿಲ್ಲ. ಸಾಮಾನ್ಯ ಕೆಲಸಗಳಿಗೆ ಮಾತ್ರ ಬಳಸಿದರೆ, ಎರಡು ದಿನಕ್ಕೆ ಸಮಸ್ಯೆಯಾಗಿಲ್ಲ. ಜೊತೆಗೆ 22.5W ವೇಗದ ಚಾರ್ಜರ್ ನೀಡಲಾಗಿರುವುದು ವಿಶೇಷ. ಆದರೆ ಫೋನ್ ಬೆಂಬಲಿಸುವುದು 18W ಚಾರ್ಜಿಂಗ್ ವೇಗವನ್ನು. ಶೂನ್ಯದಿಂದ ಪೂರ್ಣವಾಗಿ ಚಾರ್ಜ್ ಆಗುವುದಕ್ಕೆ ಒಂದುವರೆ ಗಂಟೆ ಬೇಕಾಗುತ್ತದೆ.

ಒಟ್ಟಾರೆ ಹೇಗಿದೆ?
ಪೋಕೊ ಎಂ5 ನೋಡಲು ಆಕರ್ಷಕವಾಗಿದೆ. ಬೆಲೆಗೆ ಹೋಲಿಸಿದರೆ ಪ್ರೀಮಿಯಂ ನೋಟವೇ ಇದರ ಪ್ರಧಾನ ಆಕರ್ಷಣೆ. ಬ್ಯಾಟರಿ ಚೆನ್ನಾಗಿದ್ದು, ಗೇಮಿಂಗ್ ಪ್ರಿಯರಿಗೆ ಇಷ್ಟವಾಗುವ ಫೋನ್ ಇದು. ಬೆಲೆ 4GB+64GB ಮಾದರಿಗೆ ₹12,499 ಹಾಗೂ 6GB+128GB ಮಾದರಿಗೆ ₹14,499.

Gadget Review by Avinash B in Prajavani on 17 Sept 2022

Avinash B

Avinash B. Tech Writer, Columnist, Working as Online media Journalist for more than two decades. Passionate about Technology and Gadgets. Yakshagana and Music are passion.

Recent Posts

Realme 13 +, Realme 13 5ಜಿ ಫೋನ್ ಬಿಡುಗಡೆ: ವೇಗದ ಫೋನ್‌ನ ವೈಶಿಷ್ಟ್ಯಗಳು, ಬೆಲೆ ಇಲ್ಲಿ ತಿಳಿಯಿರಿ

ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…

1 week ago

e-ಯುಗದ ತನಿಖಾ ಪತ್ರಿಕೋದ್ಯಮ: ಫ್ಯಾಕ್ಟ್ ಚೆಕ್

Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.

1 month ago

ಯಕ್ಷ ಮಂತ್ರ ಮಾಂಗಲ್ಯ: ಕೀರ್ತನಾ ಪ್ರಸಾದ ಕಲ್ಯಾಣವು

ಹಾಡುಗಾರಿಕೆ, ಚೆಂಡೆ-ಮದ್ದಳೆಯ ಬಿಡಿತ-ಮುಕ್ತಾಯಗಳ ಬಳಿಕ, ಬಂದಿದ್ದ ಗಣ್ಯರು, ಒಂದೊಂದು ಹಾಡಿನಲ್ಲಿ ಅಡಕವಾಗಿರುವ ಮಂತ್ರ ಮಾಂಗಲ್ಯದ ಪ್ರತಿಜ್ಞಾಗುಚ್ಛವನ್ನು ವಿವರಿಸಿ, ವಧು-ವರರಿಗೆ ಬೋಧಿಸಿದರು

7 months ago

ಮುದ್ದಣನ ಕುಮಾರ ವಿಜಯ, ರತ್ನಾವತಿ ಕಲ್ಯಾಣ ಯಕ್ಷಗಾನ ಧ್ವನಿಮುದ್ರಿಕೆ

ಮುದ್ದಣನ ಕುಮಾರ ವಿಜಯದ ಸುಮಾರು 700ರಷ್ಟಿರುವ ಹಾಡುಗಳನ್ನು ಹಾಡಿದ್ದು ತೆಂಕು ತಿಟ್ಟಿನ ಬಲಿಪ ಶೈಲಿಯ ಪ್ರತಿಪಾದಕ ಭಾಗವತರೇ. ಏಳೆಂಟು ವರ್ಷಗಳ…

7 months ago

ಒಂದೇ ಫೋನ್‌ನಲ್ಲಿ ಎರಡು WhatsApp ಖಾತೆ ಬಳಸುವುದು ಹೇಗೆ?

ಕಳೆದ ಅಕ್ಟೋಬರ್ 19ರಂದು ಮೆಟಾ ಒಡೆತನದ WhatsApp ಸಂಸ್ಥೆಯೇ ತನ್ನ ಆ್ಯಪ್‌ಗೆ ಹೊಸ ಅಪ್‌ಡೇಟ್ ನೀಡಿದ್ದು, ಎರಡು ವಾಟ್ಸ್ಆ್ಯಪ್ ಖಾತೆಗಳನ್ನು…

9 months ago

AI Images: Text ಬಳಸಿ ಚಿತ್ರ ತಯಾರಿಸುವುದು ಹೇಗೆ?

AI Images: ನಮ್ಮ ಕಲ್ಪನೆಯನ್ನು ಎಐ ಎಂಜಿನ್‌ಗೆ ಟೆಕ್ಸ್ಟ್ (ಪಠ್ಯ) ಮೂಲಕ ಊಡಿಸಿದರೆ ಸಾಕು, ಕ್ಷಣ ಮಾತ್ರದಲ್ಲಿ ನೀವಂದುಕೊಂಡ ಚಿತ್ರವೊಂದು…

9 months ago