Down-to-Earth P.B.ಶ್ರೀನಿವಾಸ್

ಚೆನ್ನೈಯಲ್ಲಿ ಗಾಯನ ಲೋಕದ ಮಾಂತ್ರಿಕನ ಜತೆ ಎರಡು ಗಂಟೆ ಹರಟೆ

ಪಿ.ಬಿ.ಶ್ರೀನಿವಾಸ್!

ದಕ್ಷಿಣ ಭಾರತೀಯ ಚಿತ್ರರಂಗ ಮಾತ್ರವಲ್ಲದೆ, ದೇಶ ವಿದೇಶದಲ್ಲಿ ಅದೆಷ್ಟೋ ಅಭಿಮಾನಿಗಳನ್ನು ತಮ್ಮ ಕಂಠದಿಂದಲೇ ಸೆಳೆಯುತ್ತಾ ಮನೆ ಮಾತಾಗಿರುವ ಪಿ.ಬಿ.ಶ್ರೀನಿವಾಸ್.

ಇಲ್ಲ… ಇಲ್ಲ… ಅವರ ಕುರಿತಾಗಿ ಹೇಳುವುದಕ್ಕಿಂತ ಏನನ್ನೂ ಹೇಳದಿರುವುದೇ ಮೇಲು ಅನಿಸುತ್ತದೆ. ಯಾಕೆಂದರೆ ಹೇಳಿದರೆ ಏನನ್ನು ಹೇಳದಿರುತ್ತೇನೋ ಎಂಬ ಒಳಮನಸ್ಸಿನ ಆತಂಕ. ಹೇಳಿದರೆ ಎಲ್ಲರಿಗೂ ತಿಳಿದಿರುವ ವಿಷಯವನ್ನು ಮತ್ತೆ ಮತ್ತೆ ಅರ್ಧಂಬರ್ಧ ಕೊರೆಯುತ್ತೇನೋ ಎಂಬ ದುಗುಡ.

ಇದನ್ನು ಯಾಕೆ ಹೇಳಬೇಕಾಯಿತೆಂದರೆ… ಕಳೆದ ವಾರ ಅಂದರೆ ದೀಪಾವಳಿಗೆ ಮುನ್ನಾ ದಿನ (ಅ.19ರಂದು) ಅವರನ್ನು ಜೀವನದಲ್ಲೇ ಮೊದಲ ಬಾರಿಗೆ ಭೇಟಿ ಮಾಡಿದ ಸುಯೋಗ ನನ್ನದಾಗಿತ್ತು.

ಚೆನ್ನೈ ನುಂಗಂಬಾಕ್ಕಂನಲ್ಲಿರುವ ವುಂಡ್‌ಲ್ಯಾಂಡ್ಸ್ ಡ್ರೈವ್ ಇನ್ ರೆಸ್ಟೋರೆಂಟಿನಲ್ಲಿ ಅವರೊಂದಿಗೆ ಲೋಕಾಭಿರಾಮವಾಗಿ ಮಾತನಾಡುವ ಅವಕಾಶ.

ಈ ಮಹಾನ್ ಗಾಯಕ ಹಾಗಿರುತ್ತಾರೆ, ಹೀಗಿರುತ್ತಾರೆ, ದೊಡ್ಡ ಮನುಷ್ಯ ಎಂದೆಲ್ಲಾ ಕಲ್ಪಿಸಿಕೊಂಡಿದ್ದ ನನಗೆ ಅವರನ್ನು ಕಂಡ ಕೂಡಲೇ ಹೊಳೆದ ತಕ್ಷಣದ ವಾಕ್ಯ ಏನು ಗೊತ್ತೇ? “Down to earth ಎಂಬ ಪದಕ್ಕೆ ಅದ್ಭುತ ಅರ್ಥ ಕಲ್ಪಿಸಿದವರು!”.
ನಿಜಕ್ಕೂ ಹಾಗಿತ್ತು ಅವರ ನಡವಳಿಕೆ.

ಹೇಗಿದ್ದರವರು?….

ಕೈಯಲ್ಲೊಂದು ಉದ್ದ ಹಿಡಿತದ ಕೊಡೆ,(ಅದೂ ಮಳೆಯಿಲ್ಲದ ಚೆನ್ನೈಯಲ್ಲಿ!), ತಲೆಗೆ ಜರಿತಾರಿ ಮೈಸೂರು ಪೇಟ, ಅಂಗಿಯ ಜೇಬಿನ ತುಂಬೆಲ್ಲಾ ಪೆನ್ನುಗಳೇ ಪೆನ್ನುಗಳು (ಕನಿಷ್ಠ 15 ಇದ್ದಿರಬಹುದು), ಕೈಯಲ್ಲೊಂದು ದೊಡ್ಡ ಚೀಲ.

ನಾವು ಹೋದಾಗ ಏನು ಮಾಡುತ್ತಿದ್ದರು?

ಆ ಹೋಟೆಲ್ ಟೇಬಲ್ ಮೇಲೆ, ತಮ್ಮ ಆಲೋಚನೆಗಳನ್ನು ಪುಸ್ತಕಕ್ಕಿಳಿಸುತ್ತಿದ್ದರವರು. ಹೇಗಿದ್ದರೂ ಸರಸ್ವತಿಯ ವರಪುತ್ರನಲ್ಲವೇ? ಗಣಪತಿಯ ಭಕ್ತರೂ ಆಗಿರುವ ಅವರು ಆಗ ಗಣಪತಿ ಮೇಲೊಂದು ಪದ್ಯ ರಚಿಸುತ್ತಿದ್ದರು. ನಾನು ಹೋದಾಗ, ಅಲ್ಲಿಂದಲೇ ಕೈಯೆತ್ತಿ ಕುಳಿತುಕೊಳ್ಳುವಂತೆ ಸೂಚಿಸಿದರು.

ಪದ್ಯದ ಕೊನೆಯ ಸಾಲು ಮುಗಿಸಿದಾಗ ತಲೆಯೆತ್ತಿದರು. ನಮಸ್ಕಾರ ಎಂದೆ. ಪರಿಚಯ ಹೇಳಿಕೊಂಡೆ. ಪ್ರತಿ ನಮಸ್ಕಾರ ಹೇಳಿದ ಅವರು, ತಾನೇನು ಬರೆದಿದ್ದೇನೆ ಎಂಬುದನ್ನು ವ್ಯಾಖ್ಯಾನ ಮಾಡಲಾರಂಭಿಸಿದರು.

ಅದು ತಮಿಳಿನಲ್ಲಿ ಬರೆದ ಪದ್ಯ. ಜಗತ್ತಿಗೇ ಸುತ್ತುಬರಲು ಷಣ್ಮುಖ ಮತ್ತು ಗಣಪತಿ ಅನುಸರಿಸಿದ ಮಾರ್ಗ ಕೇಂದ್ರೀಕೃತವಾಗಿಸಿಕೊಂಡು ಗಣಪತಿಯನ್ನು ಭುಜಿಸುವ ಪದವದು. ಅದನ್ನು ಅಲ್ಲೇ ರಾಗ, ತಾಳ ಸಹಿತ ಹಾಡಿಯೂ ತೋರಿಸಿದರು! ಹೇಗಿದೆ ಕೇಳಿದರು. ತಲೆದೂಗಲೇಬೇಕಾಯಿತು. ಅವಿರತ ಸರಸ್ವತಿಯ ಸೇವೆ.

ಮಾತಿನ ಮಧ್ಯೆ, ಯಾರನ್ನೋ ಹೋಟೆಲಿಗೆ ಕರೆದುಕೊಂಡು ಬಂದ ರಿಕ್ಷಾ ಚಾಲಕನಿಂದ ನಮಸ್ಕಾರ. ಇವರಿಂದ ಪ್ರತಿ ನಮಸ್ಕಾರ. ಹೇಗಿದ್ದೀರಿ ಅಂತ ರಿಕ್ಷಾ ಚಾಲಕನನ್ನು ಹತ್ತಿರಕ್ಕೆ ಕರೆದು ಮತ್ತಷ್ಟು ಆತ್ಮೀಯತೆಯ, ಸಲುಗೆಯ ಮಾತುಕತೆ. ನಿಮ್ಮ ಸಂಘಟನೆಯಲ್ಲಿ ನಿಮ್ಮಂಥವರು ಕೆಲವರು ಮಾತ್ರ ಇರುತ್ತಾರೆ. ಚೆನ್ನೈ ರಿಕ್ಷಾ ಚಾಲಕರು ದಾರ್ಷ್ಟ್ಯಕ್ಕೆ ಹೆಸರು ಮಾಡಿದ್ದಾರೆ. ನೀವೆಲ್ಲಾ ಸಭೆ ನಡೆಸಿ ಮೀಟರ್ ಅಳವಡಿಸುವುದನ್ನು ಕಡ್ಡಾಯ ಮಾಡಲು ಒಪ್ಪಬೇಕು. ಇದರಿಂದ ಪ್ರಯಾಣಿಕರು ಅಸಮಾಧಾನಗೊಂಡು ಕೂಗಾಡುವುದು ತಪ್ಪಬಹುದು ಎಂಬ ಹಿತವಚನ.

ಮಾತು ಸಾಗಿದರೆ ಮುಗಿಯುವುದೇ ಇಲ್ಲ. ಅನುಭವದ ಕೊಡ. ಅಬ್ಬಾ… ಎಷ್ಟೊಂದು ಜೀವನಾನುಭವಗಳನ್ನು ಅವರು ತಮ್ಮೊಳಗೆ ಹುದುಗಿಸಿಟ್ಟುಕೊಂಡಿದ್ದಾರೆ!
ಅವರಿಗೂ ಇನ್ನಷ್ಟನ್ನು ತಿಳಿಯಪಡಿಸಬೇಕೆಂಬ ಅಗಾಧ ಚಡಪಡಿಕೆ. ಸಮಯ ಇಲ್ಲವಲ್ಲಾ… ಮತ್ತೊಮ್ಮೆ ಬನ್ನಿ, ಆರಾಮವಾಗಿ ಕೂತು ಮಾತಾಡೋಣ ಎಂಬ ಆತ್ಮೀಯತೆಯ ಆಹ್ವಾನ.

ನಿಜಕ್ಕೂ Down to Earth ವ್ಯಕ್ತಿತ್ವ.

ಮಹಾಪುರುಷರ ಸಾಲಿಗೆ ಸೇರಲು ಅರ್ಹತೆ ಪಡೆದ ಈ ಗಾಯಕ, ಹೃದಯಕ್ಕೆ ಹತ್ತಿರವಾದರು. ಈ ಸವಿನೆನಪಿನ ಮತ್ತಷ್ಟು ಮೆಲುಕುಗಳು, ಅವರ ಅನುಭವಾಮೃತಗಳು ಮುಂದಿನ ದಿನಗಳಲ್ಲಿ ಬರೆಯುವೆ.

Avinash B

Avinash B. Tech Writer, Columnist, Working as Online media Journalist for more than two decades. Passionate about Technology and Gadgets. Yakshagana and Music are passion.

View Comments

  • ಅವೀ,
    ಪಿಬಿಎಸ್ ಸಂದರ್ಶಿಸುವ ಅವಕಾಶ ಸಿಗ್ತೆ..ಅಭಿನಂದನೆಗಳು !

    ಅಣ್ಣಾವ್ರ ಹಿಂದಿನ ಆ ಸುಂದರ ಕಂಠದ ಒಡೆಯನ ಬಗ್ಗೆ ನಿಮ್ಮ ಲೇಖನ ತುಂಬಾ ಹಿತವೆನಿಸಿತು..ಅಷ್ಟೊಂದು down to earth ವ್ಯಕ್ತಿಯೇ!!

    ನಿಮ್ಮ-ಅವರ ಮಾತುಕತೆಯನ್ನು ತೋರುವ ಲೇಖನವನ್ನು ಎದುರು ನೋಡುತ್ತಿದ್ದೇನೆ

  • ಓ... ಶಿವ್ ಅವರೆ,
    ಊರಿಗೆ ಹೋಗಿದ್ರಂತ ಕೇಳಿದ್ದೆ.... ತುಂಬಾ ಅಪರೂಪವಾಗಿಬಿಟ್ರಲ್ಲಾ...

    ಪಿಬಿಎಸ್ ಸಂದರ್ಶನ ಅನ್ನುವುದಕ್ಕಿಂತಲೂ ಅವರದೇ ಸ್ವಯಂ ವಿಶ್ವರೂಪದರ್ಶನ ಎನ್ನಬಹುದು.
    ಯಾಕೆಂದರೆ, ನಾನಂತೂ ಮಾತುಗಾರನಲ್ಲ... ಕೇಳುಗ ಮಾತ್ರ. ಹಾಗಾಗಿ ಅವರು ಹೇಳುತ್ತಾ ಹೋದರು, ನಾನು ಕೇಳುತ್ತಾ ಕುಳಿತೆ.
    ಅದೊಂದು ಅದ್ಭುತ ಅನುಭವ.

    ಸ್ವಲ್ಪ busy ಇರೋದ್ರಿಂದ ನಿಧಾನಿಸುತ್ತಿದ್ದೇನೆ.
    ಧನ್ಯವಾದ.

  • ಡಾ|| ರಾಜ್ ಅವರ ಶರೀರಕ್ಕೆ ತಕ್ಕಂತಹ ಶಾರೀರ ಕೊಡುತ್ತಿದ್ದ ಡಾ|| ಪಿಬಿಎಸ್ ಚತುರ್ಭಾಷೆಗಳಲ್ಲಿ ಹಾಡಿ ಹೆಸರಾಗಿದ್ದಾರೆ. ಅದಲ್ಲದೇ ಅವರೇ ಸ್ವಂತ ಹಲವಾರು ಕೃತಿಗಳನ್ನೂ ರಚಿಸಿದ್ದಾರೆ. ವೃತ್ತಿಯಲ್ಲಿ ಅಕೌಂಟೆಂಟ್ ಆಗಿ, ಚೆನ್ನೈನ ತ್ಯಾಗರಾಯನಗರದ ವಾಸಿ, ಕನ್ನಡ ನಾಡಿನ ಮನೆ ಮನಗಳನ್ನು ತುಂಬಿದ ದೊಡ್ಡ ಮನಸ್ಸಿನ ವ್ಯಕ್ತಿ. ಇಂತಹ ಧೀಮಂತರ ಸನಿಹದಲ್ಲಿ ಕುಳಿತು, ಅವರ ಮಾತುಗಳನ್ನು ಆಲಿಸಿದ ನೀವೇ ಭಾಗ್ಯವಂತರು.

    ಕೇಳುಗರಾಗಿ ಕೇಳಿ, ಬರಹಗಾರರಾಗಿ ಸುಂದರವಾಗಿ ಬರೆದು ನಮ್ಮ ಮುಂದೆ ಇಟ್ಟಿದ್ದಕ್ಕೆ ಹೃದಯ ತುಂಬಿದ ಧನ್ಯವಾದಗಳನ್ನು ಅರ್ಪಿಸುತ್ತಿರುವೆ.

    ಒಳ್ಳೆಯದಾಗಲಿ

  • ಶ್ರೀನಿವಾಸರೆ,
    ಅವರು ಮತ್ತೆ ಕರೆದಿದ್ದಾರೆ, ಹೋಗಬೇಕು. ಅವರಿಗೆ ಮತ್ತಷ್ಟು ಹೇಳಬೇಕೆಂಬಾಸೆ, ನನಗೂ ಕೇಳಬೇಕೆಂಬಾಸೆ... ಆದರೆ ಸಮಯವೇ ತಡೆಗೋಡೆಯಾಗುತ್ತಿದೆ.

Recent Posts

iPhone 16e: Best Features and Specs: ಹೊಸ ಐಫೋನ್ 16ಇ ಬಿಡುಗಡೆ

iPhone 16e joins the iPhone 16 lineup, featuring the fast performance of the A18 chip,…

4 days ago

ಚಳಿಯಲ್ಲಿ ಬಣ್ಣ ಬದಲಾಯಿಸುವ Realme 14 Pro ಸರಣಿ ಫೋನ್ ಬಿಡುಗಡೆ

ರಿಯಲ್‌ಮಿ 14 ಪ್ರೊ ಸರಣಿಯ 5ಜಿ ಫೋನ್, ಡ್ಯಾನಿಶ್ ಡಿಸೈನ್ ಸ್ಟುಡಿಯೋ ವ್ಯಾಲರ್ ಡಿಸೈನರ್ಸ್ ಮೂಲಕ ರೂಪುಗೊಂಡ ವಿಶ್ವದ ಮೊದಲ…

1 month ago

ಎಐ ವೈಶಿಷ್ಟ್ಯಗಳ realme GT 7 Pro ಬಿಡುಗಡೆ: ಬೆಲೆ ಎಷ್ಟು? ವೈಶಿಷ್ಟ್ಯಗಳೇನು? ಇಲ್ಲಿದೆ ಪೂರ್ಣ ಮಾಹಿತಿ

ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್‌ ಇರುವ ಬಹುನಿರೀಕ್ಷಿತ…

3 months ago

ರಿಯಲ್‌ಮಿ ನಾರ್ಜೋ 70 ಟರ್ಬೊ 5 ಜಿ, ರಿಯಲ್‌ಮಿ ಬಡ್ಸ್ ಎನ್‌1 ಬಿಡುಗಡೆ: ಬೆಲೆ, ವೈಶಿಷ್ಟ್ಯ ತಿಳಿಯಿರಿ

ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…

5 months ago

ಓದುವಿಕೆ, ಕಲಿಕೆ ಉತ್ತೇಜನಕ್ಕೆ ‘ರೀಡ್-ಅ-ಥಾನ್’: ದಾಖಲೆಯ ಗುರಿ

ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.

5 months ago

Realme 13 +, Realme 13 5ಜಿ ಫೋನ್ ಬಿಡುಗಡೆ: ವೇಗದ ಫೋನ್‌ನ ವೈಶಿಷ್ಟ್ಯಗಳು, ಬೆಲೆ ಇಲ್ಲಿ ತಿಳಿಯಿರಿ

ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…

6 months ago