ಅದೊಂದು ಕಾಲವಿತ್ತು. ಕರ್ನಾಟಕ ಶಾಸ್ತ್ರೀಯ ಸಂಗೀತ ಜಗತ್ತನ್ನು ಪುರುಷರೇ ಆಳುತ್ತಿದ್ದರು. ಮಹಿಳಾ ಕಲಾವಿದರು ತೀರಾ ಖಾಸಗಿ, ಮನೆ ಸಮಾರಂಭದ ಹಾಡುಗಾರಿಕೆಗೆ ಮಾತ್ರವೇ ಸೀಮಿತವಾಗಿದ್ದ ಕಾಲವದು. ಅಂಥ ಸಂದರ್ಭದಲ್ಲಿ ಈ ಪುರುಷ ಪ್ರಾಧಾನ್ಯ ಕ್ಷೇತ್ರದಲ್ಲಿ ಮಹಿಳಾ ಪಾರುಪತ್ಯಕ್ಕೆ ಮುನ್ನುಡಿ ಹಾಡಿದವರು ಡಿ.ಕೆ.ಪಟ್ಟಮ್ಮಾಳ್. ಅಂಥ ಮಹಾನ್ ಕಲಾವಿದೆ, ಸಂಗೀತ ಸರಸ್ವತಿ ಗುರುವಾರ ಚೆನ್ನೈಯ ಕೊಟ್ಟೂರುಪುರಂನಲ್ಲಿರುವ ತಮ್ಮ ನಿವಾಸದಲ್ಲಿ ಜೀವನದ ಸಂಗೀತ ಕಛೇರಿಗೆ ಮಂಗಳ ಹಾಡಿದ್ದಾರೆ.
ಕರ್ನಾಟಕ ಸಂಗೀತದ ಪಿತಾಮಹ ಎಂದೇ ಕರೆಯಲಾಗುವ ದಿವಂಗತ ಸೆಮ್ಮಂಗುಡಿ ಶ್ರೀನಿವಾಸ್ ಅಯ್ಯರ್ ಅವರೇ ಒಂದೊಮ್ಮೆ “ಪಟ್ಟಮ್ಮಾಳ್ ಕರ್ನಾಟಕ ಸಂಗೀತ ಕ್ಷೇತ್ರಕ್ಕೆ ಕಾಲಿಟ್ಟ ಮೊದಲ ಮಹಿಳೆ” ಎಂದಿರುವುದು ಅವರ ಸಾಧನೆಗೆ ಸಾಕ್ಷಿ.
ಶತಮಾನದ ಅಧಿಕಾಂಶ ಭಾಗದಲ್ಲಿ ಸಂಗೀತ ರಸಿಕರ ಮನ ತುಂಬಿ, ಮನೆಯೊಳಗೂ ಕ್ಯಾಸೆಟ್‌ಗಳ ಮೂಲಕ ಸದಾ ಅನುರಣಿಸುತ್ತಿರುವ ಎಂ.ಎಸ್.ಸುಬ್ಬುಲಕ್ಷ್ಮಿ, ಎಂ.ಎಲ್.ವಸಂತಕುಮಾರಿ ಅವರೊಂದಿಗೆ ಪಟ್ಟಮ್ಮಾಳ್ ಕೂಡ ಸೇರಿಕೊಂಡು ಕರ್ನಾಟಕ ಸಂಗೀತದ “ತ್ರಿದೇವಿಯರು” ಎಂದೇ ಜನಜನಿತರಾಗಿ ಮೆರೆದವರು..
ಸಂಗೀತಗಾರ ಕುಟುಂಬದಲ್ಲಿ ಜನಿಸದಿದ್ದರೂ ಅಂದರೆ ರಕ್ತದಲ್ಲಿ ಸಂಗೀತ ಇಲ್ಲದಿದ್ದರೂ, ಅಲ್ಲಿ ಸಂಗೀತದ ನಾದವಿತ್ತು, ಸುವಾಸನೆಯಿತ್ತು. ತಂದೆ ತಾಯಿ ಸಂಗೀತ ಪ್ರೇಮಿಗಳಾಗಿದ್ದರು. ಅದುವೇ ಡಿ.ಕೆ.ಪಟ್ಟಮ್ಮಾಳ್ ಅವರಿಗೆ ಯಶಸ್ಸಿನ ಉತ್ತುಂಗವೇರುವ ಏಣಿಯ ಮೊದಲ ಮೆಟ್ಟಿಲಾಯಿತು. ದಿನಂಪ್ರತಿ ಪೂಜೆ ಸಂದರ್ಭ ತಮ್ಮ ತಂದೆ ಉಚ್ಚರಿಸುತ್ತಿದ್ದ ಸಂಸ್ಕೃತ ಮತ್ತು ತಮಿಳು ಶ್ಲೋಕಗಳತ್ತ ಗಮನವಿಟ್ಟು ಕೇಳುತ್ತಿದ್ದ ಪಟ್ಟಮ್ಮಾಳ್ ಅವರಲ್ಲಿ ಅದಾಗಲೇ ಸಂಗೀತ ಪ್ರತಿಭೆಯೊಂದು ಅರಳುತ್ತಿತ್ತು.
ಸಂಕೀರ್ಣವಾದ ಪಲ್ಲವಿಗಳನ್ನು, ಅದಕ್ಕೂ ಹೆಚ್ಚಾಗಿ ಸಂಗೀತದ ಲಯವನ್ನು ಆವಾಹಿಸಿಕೊಂಡರು. ಸಂಸ್ಕೃತ ಮತ್ತು ತೆಲುಗು ಮೇಲಿನ ಹಿಡಿತವು ಅವರ ಭಕ್ತಿ ಗೀತೆಗಳಿಗೆ ಮತ್ತಷ್ಟು ಭಕ್ತಿಯ ರಸವನ್ನು ನೀಡಿತು ಮತ್ತು ಭಕ್ತಿಯ ಸಾಗರದಲ್ಲಿ ಮಿಂದು, ಅನುಭವಿಸಿ ಹಾಡಲು ಕಲಿತರು ಪಟ್ಟಮ್ಮಾಳ್.
ಕಾಂಚಿಪುರಂ ರೇಷ್ಮೆ ಸೀರೆ, ಹಣೆಯಲ್ಲಿ ಕೆಂಪು ಬೊಟ್ಟು, ವಜ್ರದ ಮೂಗುತಿ ಮತ್ತು ಕಿವಿಯೋಲೆಗಳು- ಪಕ್ಕಾ ಮದ್ರಾಸಿ ಸಾಂಪ್ರದಾಯಿಕ ಮಹಿಳೆಯಾಗಿ ಸಂಗೀತ ಲೋಕದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ ಪಟ್ಟಮ್ಮಾಳ್.
ಅಲಮೇಲು ಪಾಟ್ಟ್ ಅಮ್ಮಾಳ್ ಆಗಿದ್ದು ಹೇಗೆ?
1919ರ ಮಾರ್ಚ್ 28ರಂದು ಕಾಂಚಿಪುರದ ಸಂಪ್ರದಾಯವಾದಿ ಬ್ರಾಹ್ಮಣ ಕುಟುಂಬದ ಸಂಗೀತ ಪ್ರೇಮಿ ತಂದೆ ದಮಲ್ ಕೃಷ್ಣಸ್ವಾಮಿ ದೀಕ್ಷಿತರ್ ಹಾಗೂ ತಾಯಿ, ಸ್ವತಃ ಹಾಡುಗಾರ್ತಿಯಾಗಿದ್ದ ಕಾಂತಿಮತಿಗೆ ಜನಿಸಿದ್ದ ಪಟ್ಟಮ್ಮಾಳ್, 1939ರಲ್ಲಿ ಈಶ್ವರನ್ ಅಯ್ಯರ್‌ರನ್ನು ವಿವಾಹವಾದರು. ಕರ್ನಾಟಕ ಸಂಗೀತ ಲೋಕಕ್ಕೆ ಅಧಿಕಾರಯುತವಾಗಿ ಕಾಲಿರಿಸಿದ ಮೊದಲ ಮಹಿಳೆ ಎಂದು ಕರ್ನಾಟಕ ಸಂಗೀತದ ಮೇರು ಕಲಾವಿದ, ದಿವಂಗತ ಸೆಮ್ಮಂಗುಡಿ ಶ್ರೀನಿವಾಸ ಅಯ್ಯರ್ ಅವರಿಂದ ಕರೆಸಿಕೊಂಡಿದ್ದರು.
10ರ ಹರೆಯದಲ್ಲೇ ಮೊದಲ ಬಾರಿಗೆ ರೇಡಿಯೋದಲ್ಲಿ (ಅಂದಿನ ಮದ್ರಾಸ್ ಕಾರ್ಪೊರೇಶನ್ ರೇಡಿಯೋ, ಈಗ ಆಲ್ ಇಂಡಿಯಾ ರೇಡಿಯೋ) ಕಛೇರಿ ನೀಡಿದ್ದ ಅವರು, ಮೂರು ವರ್ಷದ ಬಳಿಕ ಅಂದರೆ 1932ರಲ್ಲಿ ಅವರು ಮದ್ರಾಸ್ ರಸಿಕ ರಂಜನಿ ಸಭಾದಲ್ಲಿ ಮೊದಲ ಸಾರ್ವಜನಿಕ ಕಛೇರಿ ನೀಡಿದರು. ಬಳಿಕ ಚೆನ್ನೈಗೇ ತಮ್ಮ ನಿವಾಸ ಬದಲಾಯಿಸಿದ ಅವರು, ಮೊದಲ ಬಾರಿ ಚೆನ್ನೈ ಎಗ್ಮೋರ್ ಲೇಡಿಸ್ ಕ್ಲಬ್‌ನ ‘ಮಹಿಳಾ ಸಮಾಜಂ’ನಲ್ಲಿ ಮೊದಲ ಕಛೇರಿ ನೀಡಿದರು.
ಆ ಕಾಲದಲ್ಲಿ ತಾಯಿ ಕಾಂತಿಮತಿಗೆ ಕೂಡ ಬಹಿರಂಗವಾಗಿ ಹಾಡುವ ಅವಕಾಶವಿರಲಿಲ್ಲ. ಅಷ್ಟೊಂದು ಸಂಪ್ರದಾಯವಾದಿ ಕುಟುಂಬವಾಗಿತ್ತದು. ಆದರೆ ಸಹೋದರರಾದ ಡಿ.ಕೆ.ಜಯರಾಮನ್ ಮತ್ತು ಡಿ.ಕೆ. ರಂಗನಾಥನ್ ಅವರೊಂದಿಗೆ ತಾವೂ ಒಬ್ಬ ಸಂಗೀತ ಪ್ರತಿಭೆಯಾಗಿ ಬೆಳೆದ ಅಲಮೇಲು ಅವರಿಗೆ ಕಾಲಾನಂತರದಲ್ಲಿ ಪಾಟ್ಟ್ (ಹಾಡುವ) ಅಮ್ಮಾಳ್ (ಅಮ್ಮ-ದೇವತೆ ಎಂಬರ್ಥದಲ್ಲಿ) ಎಂದು ಹೆಸರಿಟ್ಟದ್ದು ಬೇರಾರೂ ಅಲ್ಲ, ತಮಿಳಿನ ಖ್ಯಾತ ಕವಿ ಮತ್ತು ಗೀತೆ ರಚನೆಕಾರ ವೈರಮುತ್ತು.
ಕರ್ನಾಟಕ ಸಂಗೀತದಲ್ಲಿ ಅತ್ಯಂತ ಕ್ಲಿಷ್ಟಕರವಾಗಿದ್ದ “ರಾಗಂ, ತಾನಂ, ಪಲ್ಲವಿ”ಯನ್ನು ಸಂಗೀತ ಕಛೇರಿಗಳಲ್ಲಿ ಬಳಸಿದ ಮೊದಲ ಮಹಿಳಾರತ್ನ ಎಂಬ ಹೆಗ್ಗಳಿಕೆಯೂ ಪಟ್ಟಮ್ಮಾಳ್ ಅವರಿಗಿದೆ ಮಾತ್ರವಲ್ಲದೆ ಕ್ಲಿಷ್ಟ ತಾಳಗಳ ಸಂಕೀರ್ಣ ಪಲ್ಲವಿಗಳನ್ನು ಹಾಡುವಲ್ಲಿನ ನೈಪುಣ್ಯತೆಯು ಪುರುಷ ವಿದ್ವಾಂಸರೂ ಮೂಗಿಗೆ ಬೆರಳಿಡುವಂತೆ ಮಾಡಿತ್ತು.
ಸಂಗೀತ ಲೋಕದಲ್ಲಿ ಭೈರವಿ ರಾಗದ ಅದ್ಭುತ ಸ್ವರ ಸಂಚಾರ, ಸ್ವರವಿಸ್ತಾರಗಳಿಗೆ ಪ್ರಸಿದ್ಧಿ ಪಡೆದಿದ್ದರು ಪಟ್ಟಮ್ಮಾಳ್. ಆಂಧ್ರ ಪ್ರದೇಶದ ವಿಜಯವಾಡದಲ್ಲಿ ಅವರು ವಿಶೇಷವಾಗಿ ಭೈರವಿ ರಾಗದಲ್ಲಿಯೇ ನೀಡಿದ ಅದ್ಭುತ ಕಛೇರಿಯು ಆಕೆಗೆ ಭೈರವಿ ರಾಗದ ಮೇಲಿದ್ದ ಹಿಡಿತಕ್ಕೆ ಸಾಕ್ಷಿಯಾಯಿತು.
ಸಂಗೀತದ ಸಂಪ್ರದಾಯಕ್ಕೆ ಒಂದಿನಿತೂ ಚ್ಯುತಿ ಬಾರದಂತೆ, ಜನ ರಂಜನೆಗಾಗಿ ಯಾವುದೇ ಪ್ರಯೋಗಗಳಿಗೆ ತಮ್ಮ ಗಾಯನವನ್ನು ಒಡ್ಡಿಕೊಳ್ಳದೆ, ಗುಣಮಟ್ಟದ ಮತ್ತು ಶುದ್ಧ, ಪಾರಂಪರಿಕ ಶಾಸ್ತ್ರೀಯ ಸಂಗೀತಕ್ಕೆ ಒತ್ತು ನೀಡಿದವರು ಅವರು. ಮುತ್ತುಸ್ವಾಮಿ ದೀಕ್ಷಿತರ್, ಪಾಪನಾಶಂ ಶಿವಂ ಮುಂತಾದವರ ಕೃತಿಗಳಿಗೆ ರಾಗ ರಸ ಸೇರಿಸಿ ಅವರು ಸಂಗೀತ ರಸಿಕರಿಗೆ ಉಣಬಡಿಸಿದವರು. ಸ್ಪಷ್ಟ ಉಚ್ಛಾರ, ಸಾಹಿತ್ಯಕ್ಕೆ ಚ್ಯುತಿಯಾಗದ ಗಾಯನ, ಲಯದ ಮೇಲಿನ ಅದ್ಭುತ ಹಿಡಿತ ಇವು ಪಟ್ಟಮ್ಮಾಳ್‌ಗೆ ಅನನ್ಯತೆ ತಂದುಕೊಟ್ಟ ವಿಷಯಗಳು.
ಕೃತಿ ರಚನೆಕಾರ ಪಾಪನಾಶಂ ಶಿವಂ ಅವರು ಪಟ್ಟಮ್ಮಾಳ್‌ರನ್ನು ಚಲನಚಿತ್ರ ರಂಗಕ್ಕೂ ಪರಿಚಯಿಸಿದರು. ಆದರೆ ಆಕೆ ಒಪ್ಪಿಕೊಂಡದ್ದು ಭಕ್ತಿ ಸಂಗೀತ ಮತ್ತು ದೇಶಭಕ್ತಿ ಗಾಯನಗಳನ್ನು ಹಾಡುವುದಕ್ಕೆ ಮಾತ್ರ. ತ್ಯಾಗ ಭೂಮಿ ಮತ್ತು ನಾಮ್ ಇರುವರ್ ಚಿತ್ರಗಳಲ್ಲಿ ಹಾಡಿದ್ದ ಪಟ್ಟಮ್ಮಾಳ್, ಸುಬ್ರಹ್ಮಣ್ಯ ಭಾರತಿ ಅವರ ದೇಶಭಕ್ತಿ ಹುಟ್ಟಿಸುವ ಗಾಯನಗಳನ್ನೂ ಜನಪ್ರಿಯಗೊಳಿಸಿ, ಬ್ರಿಟಿಷ್ ಆಡಳಿತದ ಅವಧಿಯಲ್ಲಿ ಬ್ರಿಟಿಷರ ಕೆಂಗಣ್ಣಿಗೂ ಗುರಿಯಾಗಿದ್ದರು.
ಮೊದಲ ಹೆಜ್ಜೆ:
ತಂದೆ ಹೇಳಿಕೊಟ್ಟ ಸಂಸ್ಕೃತ ಶ್ಲೋಕಗಳನ್ನು ರಾಗವತ್ತಾಗಿ ಹಾಡುತ್ತಿದ್ದ ಅಲಮೇಲು ಒಳಗಿದ್ದ ಕಲಾವಿದೆಯನ್ನು ಗುರುತಿಸಿದ್ದು ಅವರ ಶಾಲೆಯ ಮುಖ್ಯೋಪಾಧ್ಯಾಯಿನಿ. ಶಾಲೆಯ ನಾಟಕವೊಂದರಲ್ಲಿ ಆಕೆಗೂ ಒಂದು ಪಾತ್ರ ನೀಡಿದ್ದರು. ಹಾಡುವ ಪಾತ್ರವಾಗಿತ್ತದು. ಈ ಬಾಲಕಿ ವೇದಿಕೆಯಲ್ಲಿ ಹಾಡುತ್ತಿದ್ದರೆ, ಅಲ್ಲೇ ಇದ್ದ ಪ್ರೇಕ್ಷಕರೊಬ್ಬರು ಎಷ್ಟು ಪ್ರಭಾವಿತರಾದರೆಂದರೆ, ಅವರು ತಕ್ಷಣವೇ ಎದ್ದು ನಿಂತು ಈ ಹುಡುಗಿಗೆ ಚಿನ್ನದ ಪದಕ ಕೊಡುವುದಾಗಿ ಘೋಷಿಸಿದರು. ಮರು ದಿನ ಆತ ಚಿನ್ನದ ಪದಕದೊಂದಿಗೆ ಬಂದಾಗ, ಮುಖ್ಯೋಪಾಧ್ಯಾಯಿನಿಯಂತೂ ಸಂತಸಭರಿತರಾಗಿ, ಪತ್ರಿಕೆಗಳಿಗೂ ಮಾಹಿತಿ ನೀಡಿದರು. ಹಿಂದು ಪತ್ರಿಕೆಯು ಪಟ್ಟಮ್ಮಾಳ್ ಫೋಟೋ ಸಹಿತ ಮುಖಪುಟದಲ್ಲಿ ಸುದ್ದಿ ಪ್ರಕಟಿಸಿಬಿಟ್ಟಿತು.
ಇದು ತಂದೆ ಕೃಷ್ಣಸ್ವಾಮಿ ದೀಕ್ಷಿತರಿಗೆ ಚಿಂತೆಯ ವಿಷಯವಾಗಿತ್ತು. ಇನ್ನು ನನ್ನ ಮಗಳನ್ನು ಯಾರು ಮದುವೆಯಾಗುತ್ತಾರೆ ಎಂಬುದು ಚಿಂತೆ. ನನ್ನ ಮಗಳ ಜೀವನ ಹಾಳು ಮಾಡಿದಿರಿ ಅಂತ ಮುಖ್ಯೋಪಾಧ್ಯಾಯಿನಿಯನ್ನು ತರಾಟೆಗೂ ತೆಗೆದುಕೊಂಡು ಬಿಟ್ಟರು. ಕೊನೆಗೂ ಮುಖ್ಯೋಪಾಧ್ಯಾಯಿನಿ ಮತ್ತು ಸ್ಥಳೀಯ ಕಾಂಗ್ರೆಸ್ ಮುಖಂಡರಾಗಿದ್ದ ಡಾ.ಡಿ.ಪಿ.ಶ್ರೀನಿವಾಸನ್ ಎಂಬವರು ತಂದೆಯ ಮನವೊಲಿಸಿದರು. ಅಷ್ಟು ಹೊತ್ತಿಗೆ ಈ ಬಾಲ ಪ್ರತಿಭೆಗೆ ಪ್ರಚಾರ ಸಿಕ್ಕಿತ್ತು. ಕೊಲಂಬಿಯಾ ಗ್ರಾಮಾಫೋನ್ ಕಂಪನಿಯವರು ಈಕೆಯ ಹಾಡುಗಳನ್ನು ರೆಕಾರ್ಡ್ ಮಾಡಲೆಂದು ಕಾಂಚಿಪುರಕ್ಕೆ ಬಾಲ ಪ್ರತಿಭೆಯನ್ನು ಹುಡುಕಿಕೊಂಡು ಬಂದರು. ತಂದೆ ಮತ್ತೆ ಬೆಚ್ಚಿದರು, ಬೆದರಿದರು. ಆಗ ಶ್ರೀನಿವಾಸನ್, ನೀವು ನಿಮ್ಮ ಮಗಳ ಭವಿಷ್ಯದ ಬಗ್ಗೆ ಅಷ್ಟೊಂದು ಹೆದರುತ್ತೀರಾದರೆ, ಭಯ ಬೇಡ. ಅವಳಿಗೆ ಪ್ರಾಪ್ತ ವಯಸ್ಸಾದಾಗ ನಾನೇ ನನ್ನ ಸಹೋದರಿಯ ಮಗನಿಗೆ ಮದುವೆ ಮಾಡಿಸುತ್ತೇನೆ ಎಂದು ವಾಗ್ದಾನ ನೀಡಿದರು. ಅಂತೆಯೇ ಅಲಮೇಲುಗೆ 20 ವರ್ಷವಾದಾಗ ಶ್ರೀನಿವಾಸನ್ ಅವರ ಸೋದರ ಸಂಬಂಧಿ ಈಶ್ವರನ್ ಅಯ್ಯರ್ ಜೊತೆಗೆ ವಿವಾಹವೂ ಆಯಿತು.
ಈಶ್ವರನ್ ಅಯ್ಯರ್ ಅವರು ಪತ್ನಿಯ ಸಂಗೀತಕ್ಕೆ ಭರ್ಜರಿ ಪ್ರೋತ್ಸಾಹ ನೀಡಿದರು. ಸಂಪ್ರದಾಯವಾದಿಗಳಿಗೆ ಬೆಲೆ ಕೊಡಲಿಲ್ಲ. ತಮ್ಮ ಉದ್ಯೋಗಕ್ಕೂ ತಿಲಾಂಜಲಿ ನೀಡಿ ಪತ್ನಿಯ ಕಾರ್ಯಕ್ರಮಗಳ ಮ್ಯಾನೇಜರ್ ಆಗಿ ಕೆಲಸ ಮಾಡಲಾರಂಭಿಸಿದರು.
1961ರ ಸಂಗೀತ ನಾಟಕ ಅಕಾಡೆಮಿ ಪುರಸ್ಕಾರ ಪಡೆದ ಪಟ್ಟಮ್ಮಾಳ್‌ಗೆ ‘ಸಂಗೀತ ಸರಸ್ವತಿ’ ಎಂಬ ಅನ್ವರ್ಥ ಬಿರುದು ಲಭ್ಯವಾಗಿದೆ. ಅದೇ ರೀತಿ, 1971ರಲ್ಲಿ ಪದ್ಮಭೂಷಣ, 1998ರಲ್ಲಿ ದೇಶದ 2ನೇ ಅತ್ಯಂತ ಶ್ರೇಷ್ಠ ಪೌರ ಪ್ರಶಸ್ತಿಯಾದ ಪದ್ಮ ವಿಭೂಷಣ, ಸಂಗೀತ ಸಾಗರ ರತ್ನ, ಸಂಗೀತ ಕಲಾನಿಧಿ ಬಿರುದುಗಳು ಅವರನ್ನು ಅಲಂಕರಿಸಿವೆ.
ಕೊನೆಯುಸಿರಿರುವವರೆಗೂ ಹಾಡಬೇಕೆಂಬ ಮಹದಾಸೆ ಹೊಂದಿದ್ದ ಅವರು ಅದೊಮ್ಮೆ ನೋವಿನಿಂದ ಹೇಳಿದ್ದರು: “ಇಂದು ಸಂಗೀತವನ್ನು ಉದ್ಯೋಗವಾಗಿಸಿಕೊಳ್ಳುವುದು ಬಹಳ ಸುಲಭ, ಕಛೇರಿಯ ಶುಲ್ಕಗಳು ಕೂಡ ಗಗನಕ್ಕೇರಿವೆ. ಆದರೆ ಗುಣಮಟ್ಟ ಕುಸಿಯುತ್ತಿದೆ. ಸಾಧನೆ ಇಲ್ಲ, ರಾಗ, ತಾಳ, ಲಯಗಳ ಜ್ಞಾನದ ಆರ್ಜನೆಯ ಹಪಹಪಿ ಇಲ್ಲ. ಎಲ್ಲವೂ ಇಂದು ಮಾರುಕಟ್ಟೆಯಲ್ಲಿ ಸುಲಭವಾಗಿಯೇ ಸಿಗುತ್ತದೆ”.
ಸತತ ಸಂಗೀತಾಭ್ಯಾಸ ನಿರತರಾಗಿದ್ದ ಅವರು ಪ್ರತಿಯೊಂದು ಕಛೇರಿಗೆ ಮುನ್ನ ಸಾಕಷ್ಟು ಅಭ್ಯಾಸ ಮಾಡಿಕೊಳ್ಳುತ್ತಿದ್ದರು. ಅದೇ ರೀತಿ ಹಲವಾರು ಶಿಷ್ಯರಿಗೂ ತಮ್ಮ ಪ್ರತಿಭೆ ಧಾರೆಯೆರೆದ ಅವರ ಶಿಷ್ಯ ವರ್ಗದಲ್ಲಿ ಸಹೋದರ ಡಿ.ಕೆ.ಜಯರಾಮನ್ ಮತ್ತು ಮೊಮ್ಮಗಳು ನಿತ್ಯಶ್ರೀ ಮಹದೇವನ್ ಹೆಚ್ಚು ಪ್ರಸಿದ್ಧಿ ಪಡೆದಿದ್ದಾರೆ. ಇತರ ಪ್ರಸಿದ್ಧ ಶಿಷ್ಯರೆಂದರೆ, ಲಲಿತಾ ಶಿವಕುಮಾರ್, ಗೀತಾ ರಾಜಶೇಖರ್, ಭವದಾರಿಣಿ ಅನಂತರಾಮನ್ ಮತ್ತು ಖ್ಯಾತ ಭರತನಾಟ್ಯ ಕಲಾವಿದೆ, ಚಿತ್ರ ಕಲಾವಿದೆ ವೈಜಯಂತಿಮಾಲಾ ಬಾಲಿ.
ದೇಶ ವಿದೇಶಗಳಲ್ಲಿ ಸಂಗೀತ ಸುಧೆ ಹರಿಸಿ ಕಲಾ ರಸಿಕರ ಮನದಲ್ಲಿ ಅಚ್ಚಳಿಯದ ಸ್ಥಾನ ಸೃಷ್ಟಿಸಿ, ಹಾಡುವ ದೇವಿಯೇ ಆಗಿ ತಮ್ಮದೇ ಅನನ್ಯತೆ ಉಳಿಸಿ ಹೋದ ಈ “ಸಂಗೀತ ಸರಸ್ವತಿ”ಗೆ ಹೃದಯ ತುಂಬಿದ ಶ್ರದ್ಧಾಂಜಲಿ.
(ವೆಬ್‌ದುನಿಯಾ)
ರಿಯಲ್‌ಮಿ 14 ಪ್ರೊ ಸರಣಿಯ 5ಜಿ ಫೋನ್, ಡ್ಯಾನಿಶ್ ಡಿಸೈನ್ ಸ್ಟುಡಿಯೋ ವ್ಯಾಲರ್ ಡಿಸೈನರ್ಸ್ ಮೂಲಕ ರೂಪುಗೊಂಡ ವಿಶ್ವದ ಮೊದಲ…
ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್ ಇರುವ ಬಹುನಿರೀಕ್ಷಿತ…
ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…
ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.
ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…
Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.