ಅಸಲಿ ನಡುವೆ ನುಸುಳುವ ನಕಲಿ ಆ್ಯಪ್‌ಗಳು: ‘ಕಿಂಭೋ’ ನೀಡಿದ ಎಚ್ಚರಿಕೆ!

ಮಾಹಿತಿ ತಂತ್ರಜ್ಞಾನ ಕ್ರಾಂತಿಯ ಈ ಕಾಲದಲ್ಲಿ ಒಂದು ಸಂದೇಶವು ವಾಟ್ಸ್ಆ್ಯಪ್ ಗ್ರೂಪುಗಳ ಮೂಲಕ ಕಣ್ಣು ಮುಚ್ಚಿ ತೆರೆಯುವುದರೊಳಗೆ ಏನೇನೋ ರಾದ್ಧಾಂತವನ್ನು ಮಾಡಬಲ್ಲುದು. ಪ್ರಕೃತಿ ನಿಯಮದಂತೆ ಒಳ್ಳೆಯ ಸಂದೇಶಗಳು ಹರಡುವ ವೇಗಕ್ಕಿಂತ ತಪ್ಪು ಮತ್ತು ಕೆಟ್ಟ ಸಂದೇಶಗಳು ಬೇಗನೇ ಹರಡುತ್ತವೆ. ಕಳೆದ ವಾರ ಆಗಿದ್ದೂ ಇದೇ. ಜನರ ಅರಿವಿನ ಕೊರತೆಯನ್ನು ಮತ್ತು ತರಾತುರಿಯನ್ನು ತಮ್ಮ ಪ್ರಯೋಜನಕ್ಕೆ ಬಳಸಿಕೊಳ್ಳುವ, ಸಿಕ್ಕದ್ದನ್ನು ಬಾಚಿಕೊಳ್ಳುವ ಪ್ರಯತ್ನಗಳು ನಡೆಯುತ್ತಲೇ ಇವೆ ಎಂಬುದಕ್ಕೆ ಉದಾಹರಣೆ, ಕಿಂಭೋ ಎಂಬ ಪತಂಜಲಿಯ ಆ್ಯಪ್. ಇದು ಸ್ವದೇಶೀ ಸಂದೇಶ ವಿನಿಮಯ ಆ್ಯಪ್, ವಾಟ್ಸ್ಆ್ಯಪ್‌ಗೆ ಸೆಡ್ಡು ಹೊಡೆಯಲು ಬಂದಿದೆ, ಇನ್ನು ನಮ್ಮ ಮಾಹಿತಿಯೆಲ್ಲವೂ ನಮ್ಮ ದೇಶದ ಸರ್ವರ್‌ನಲ್ಲೇ ಭದ್ರವಾಗಿರುತ್ತದೆ, ಎಲ್ಲರೂ ದೇಶೀ ಉತ್ಪನ್ನವನ್ನೇ ಬಳಸಿ, ಬೆಳೆಸಿ ಎಂದೆಲ್ಲ ಮಾಹಿತಿಗಳು ಹರಿದಾಡಿದ್ದೇ ಹರಿದಾಡಿದ್ದು.

ವಾಸ್ತವ ಏನು…
ಹೌದು, ಈಗಾಗಲೇ ವೇಗವಾಗಿ ಮಾರಾಟವಾಗುವ ಗ್ರಾಹಕ ಉತ್ಪನ್ನಗಳ (ಎಫ್ಎಂಸಿಜಿ) ವಲಯದಲ್ಲಿ ಬಾಬಾ ರಾಮದೇವ್ ಅವರ ಪತಂಜಲಿ ಉತ್ಪನ್ನಗಳು ಸದ್ದು ಮಾಡಿವೆ ಮತ್ತು ಇತ್ತೀಚೆಗೆ ಬಿಎಸ್ಸೆನ್ನೆಲ್ ಸಹಯೋಗದಲ್ಲಿ ಪತಂಜಲಿ ಸಿಮ್ ಕಾರ್ಡ್‌ಗಳೂ ಬಿಡುಗಡೆಯಾಗಲಿವೆ ಎಂಬ ಸುದ್ದಿಯೂ ಹೊರಬಂದಿದೆ. ಇಂಥ ಸಮಯದಲ್ಲಿ, ‘ಸ್ವದೇಶೀ’ ಪ್ರಜ್ಞೆಯ ಬಗ್ಗೆ ಕಾಳಜಿ ಉಳ್ಳವರಿಗೆ ಹೊಸ ಆಕರ್ಷಣೆಯಾಗಿದ್ದು ಕಿಂಭೋ ಎಂಬ ಚಾಟಿಂಗ್ ಆ್ಯಪ್. ಈ ಹಿಂದೆ, ‘ಟೆಲಿಗ್ರಾಂ ನಮ್ಮ ಭಾರತದ್ದು, ವಾಟ್ಸ್ಆ್ಯಪ್ ಬದಲು ಅದನ್ನೇ ಬಳಸಿ’ ಅಂತ ಸುಳ್ಳು ಸಂದೇಶ ಹರಿದಾಡಿದ್ದು ಇಲ್ಲಿ ನೆನಪಿಗೆ ಅರ್ಹ. ಈಗ ಕಿಂಭೋ ಆ್ಯಪ್‌ನ ಪ್ರಾಯೋಗಿಕ ಆವೃತ್ತಿ ಬಿಡುಗಡೆಯಾಗಿದ್ದು ಹೌದು. ಇದು ವಾಟ್ಸ್ಆ್ಯಪ್‌ನ ತದ್ರೂಪಿ. ಪತಂಜಲಿ ವಕ್ತಾರರು ಕಳೆದ ವಾರ ಈ ಬಗ್ಗೆ ಟ್ವೀಟ್ ಮಾಡಿ, ‘ಇನ್ನು ಭಾರತವೇ ಮಾತನಾಡುತ್ತದೆ’ ಎಂದು ಸಂದೇಶ ಹಾಕಿದ್ದರು. ಅಲ್ಲಿಂದ ಶುರು… ಕಿಂಭೋ ಎಂಬ ಪದ ಇಂಟರ್ನೆಟ್‌ನಲ್ಲಿ ವೈರಲ್ ಆಗಿಹೋಯಿತು. ಮೇ 30ರಂದು ಈ ಆ್ಯಪ್ ಕಾಣಿಸಿಕೊಂಡ ಇಪ್ಪತ್ತನಾಲ್ಕು ಗಂಟೆಗಳಲ್ಲಿ 1 ಲಕ್ಷಕ್ಕೂ ಹೆಚ್ಚು ಮಂದಿ ಡೌನ್‌ಲೋಡ್ ಮಾಡಿಯೇಬಿಟ್ಟರು. ಅದರ ವೆಬ್‌ಸೈಟ್‌ಗೆ ಭೇಟಿ ನೀಡುವವರ ಸಂಖ್ಯೆಯೂ ಜಾಸ್ತಿಯಾಗಿ, ‘ಸಿಕ್ಕಾಪಟ್ಟೆ ಬಳಕೆದಾರರಿಂದಾಗಿ ಸರ್ವರ್ ಅಪ್‌ಗ್ರೇಡ್ ಮಾಡಬೇಕಾಗಿದೆ. ಹೀಗಾಗಿ ಈ ವೆಬ್ ತಾಣ ಸದ್ಯ ಲಭ್ಯವಿಲ್ಲ’ ಎಂದು ವೆಬ್ ಸೈಟಿನಲ್ಲಿ ಪ್ರಕಟಿಸಲಾಯಿತು.

ಆ ಬಳಿಕ ಆಗಿದ್ದೇನೆಂದರೆ, ಈ ಕಿಂಭೋ ಎಂಬ ಪತಂಜಲಿ ಕಮ್ಯುನಿಕೇಶನ್ಸ್ ಸಂಸ್ಥೆಯ ಮೂಲಕ ಬಿಡುಗಡೆ ಮಾಡಲಾದ ಆ್ಯಪ್, ಗೂಗಲ್‌ನ ಪ್ಲೇ ಸ್ಟೋರ್‌ನಿಂದಲೇ ಮಾಯ. ಅಷ್ಟು ಹೊತ್ತಿಗೆ ‘ಕಿಂಭೋ’ ಭಾರಿ ಸದ್ದು ಮಾಡಿತ್ತಲ್ಲಾ, ಈ ಪ್ರಸಿದ್ಧಿಯ ಲಾಭ ಪಡೆಯಲು ಅದೆಷ್ಟೋ ಆ್ಯಪ್ ಡೆವಲಪರ್‌ಗಳು ತಕ್ಷಣವೇ ಕಾರ್ಯಪ್ರವೃತ್ತರಾದರು. ಅದೇ ಹೆಸರಿನಲ್ಲಿ ನೂರಾರು ಆ್ಯಪ್‌ಗಳನ್ನು ತಯಾರಿಸಿ ಗೂಗಲ್ ಪ್ಲೇ ಸ್ಟೋರ್‌ಗೆ ಹಾಕಿಯೇಬಿಟ್ಟರು. ಜನರಂತೂ ತಮಗೆ ಕಂಡಿದ್ದನ್ನು ಡೌನ್‌ಲೋಡ್ ಮಾಡಿ ಅಳವಡಿಸಿಕೊಂಡು ಬಿಟ್ಟರು. ಅದೇ ರೀತಿಯ ಹಸಿರು ಹಿನ್ನೆಲೆಯಲ್ಲಿ ಶಂಖ ಇರುವ ಲೋಗೋ, ಅದರ ಮೇಲೆ ‘ಒರಿಜಿನಲ್’ ಎಂಬ ಮುದ್ರೆಯನ್ನೂ, ಬಾಬಾ ರಾಮದೇವ್ ಚಿತ್ರವನ್ನೂ ಅಳವಡಿಸಿದ ಟೆಕ್ ಪಂಡಿತರಂತೂ ವೈವಿಧ್ಯಮಯವಾಗಿ ಆ್ಯಪ್‌ಗಳನ್ನು ಹರಿಯಬಿಟ್ಟರು, ತಮ್ಮದೇ ನಿಜವಾದ ಆ್ಯಪ್ ಅಂತ ಜನರನ್ನು ನಂಬಿಸುವ ಪ್ರಯತ್ನವಿದು. ಜನರು ನಂಬಿದರು, ಕೆಲವರು ಯಾವುದನ್ನು ಇನ್‌ಸ್ಟಾಲ್ ಮಾಡಿಕೊಳ್ಳಬೇಕು ಎಂದುಕೊಂಡು ಗೊಂದಲದಲ್ಲಿ ಸಿಲುಕಿದರು. ಮತ್ತೆ ಕೆಲವರು ತಾನು ಅಳವಡಿಸಿಕೊಂಡಿದ್ದೇ ನಿಜವಾದ ಕಿಂಭೋ ಎಂದುಕೊಂಡು ಹೆಮ್ಮೆಯಿಂದ ಬೀಗತೊಡಗಿದರು.

ಕಿಂಭೋ ಎಂಬುದು ಸಂಸ್ಕೃತದ ಶಬ್ದ. ಇಂಗ್ಲಿಷಿನಲ್ಲಿ ‘ಹೌ ಆರ್ ಯು’ ಎಂಬ ಪದಕ್ಕೆ ಸಂವಾದಿಯಾಗಿ ‘ವಾಟ್ಸಪ್?’ ಅಂತ ಕೇಳುವುದು ವಾಡಿಕೆ. ಅದರ ಸಂಸ್ಕೃತ ರೂಪವೇ ‘ಕಿಂಭೋ’ ಅಂದರೆ ‘ಹೇಗಿದ್ದೀರಿ?’ ಅಂತ. ‘ಸ್ವದೇಶೀ ಬಳಸಿ, ವಾಟ್ಸ್ಆ್ಯಪ್ ಬಹಿಷ್ಕರಿಸಿ’ ಅಂತ ನೇರವಾಗಿಯೇ ಸ್ಫರ್ಧೆಗಿಳಿದ ಪತಂಜಲಿ ಸಂಸ್ಥೆಯು ಪ್ಲೇಸ್ಟೋರ್‌ನಲ್ಲಿ ಅಳವಡಿಸಿದ ತಕ್ಷಣ ‘ಇದರಲ್ಲಿ ಸೆಕ್ಯುರಿಟಿ ಸಮಸ್ಯೆಯಿದೆ’ ಎಂಬ ಹುಯಿಲು ಮತ್ತೊಂದು ಕಡೆಯಿಂದ ಎದ್ದಿತು. ಈಲಿಯಟ್ ಆಲ್ಡರ್ಸನ್ ಎಂಬ ಫ್ರೆಂಚ್ ಸೆಕ್ಯುರಿಟಿ ತಜ್ಞರೊಬ್ಬರು ಟ್ವೀಟ್ ಮಾಡಿ, ‘ವೆರಿಫಿಕೇಶನ್ ವಿಧಾನವನ್ನೇ ತಪ್ಪಿಸಿ ಕಿಂಭೋ ಬಳಸಬಲ್ಲೆ ಮತ್ತು ಅದರ ಎಲ್ಲ ಚಾಟ್‌ಗಳನ್ನೂ ನೋಡಬಲ್ಲೆ’ ಎಂದು ಹೇಳಿದರು. ಡೇಟಾ ಸೆಕ್ಯುರಿಟಿ ಕುರಿತು ಆನ್‌ಲೈನ್ ಚರ್ಚೆ ಜೋರಾದ ತಕ್ಷಣ ಪತಂಜಲಿಯು ಕಿಂಭೋ ಆ್ಯಪ್ ಅನ್ನೇ ಹಿಂತೆಗೆದುಕೊಂಡಿತು. ಇದೇ ವೇಳೆ, ‘ನೂರಾರು ಕಿಂಭೋ ಆ್ಯಪ್‌ಗಳಿವೆ, ಇವುಗಳು ನಕಲಿಯಾಗಿದ್ದು, ಅಳವಡಿಸಿಕೊಂಡರೆ ನಾವು ಜವಾಬ್ದಾರರಲ್ಲ. ಶೀಘ್ರದಲ್ಲೇ ಕೆಲವೊಂದು ತಾಂತ್ರಿಕ ಸಮಸ್ಯೆಗಳನ್ನು ಸರಿಪಡಿಸಿ ಅಧಿಕೃತ ಆ್ಯಪ್ ಬಿಡುಗಡೆಗೊಳಿಸುತ್ತೇವೆ’ ಅಂತ ಕಿಂಭೋ ಆ್ಯಪ್ ವಿಭಾಗದಿಂದ ಟ್ವೀಟ್ ಕೂಡ ಬಂದಿತು. ಕಿಂಭೋ ಬಳಕೆದಾರರಿಗೆ ಕಳುಹಿಸಲಾದ ಸಂದೇಶದಲ್ಲಿ, ‘ನಾವು ಈ ಟ್ರಯಲ್ ಆ್ಯಪ್ ಅನ್ನು ಸದ್ಯಕ್ಕೆ ಹಿಂತೆಗೆದುಕೊಂಡಿದ್ದೇವೆ, ಪುನಃ ಸಕ್ರಿಯರಾದಾಗ ನಿಮಗೆ ಮಾಹಿತಿ ನೀಡುತ್ತೇವೆ’ ಎಂದು ಎಸ್ಸೆಮ್ಮೆಸ್ ಮೂಲಕ ತಿಳಿಸಲಾಯಿತು. ನೆನಪಿಡಿ. ಅದರ ಅಸಲಿ ಆ್ಯಪ್‌ನ ಡೆವಲಪರ್ ‘ಪತಂಜಲಿ ಕಮ್ಯುನಿಕೇಶನ್ಸ್’. ಉಳಿದ ಹೆಸರಿನಲ್ಲಿ ಪ್ರಕಟವಾಗಿರುವ ಎಲ್ಲ ಕಿಂಭೋ ಆ್ಯಪ್‌ಗಳು ನಕಲಿ.

ಇದಿಷ್ಟು ಕಿಂಭೋ ಕತೆ. ಈಗ ವಿಷಯಕ್ಕೆ ಬರೋಣ. ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಇರುವ ಎಲ್ಲ ಆ್ಯಪ್‌ಗಳು ಅಸಲಿ ಅಲ್ಲ. ಯಾರು ಬೇಕಿದ್ದರೂ ಸುಲಭವಾಗಿ ಪ್ಲೇ ಸ್ಟೋರ್‌ನಲ್ಲಿ ಆ್ಯಪ್ ಅಳವಡಿಸಿ, ಜನರನ್ನು ವಂಚಿಸಬಹುದು. ವಂಚಿಸುವುದು ಹೇಗೆ? ಆ್ಯಪ್ ಇನ್‌ಸ್ಟಾಲ್ ಮಾಡಿಕೊಳ್ಳುವಾಗ ನಿಮ್ಮ ಮೊಬೈಲ್ ಸಾಧನದ ಐಡಿ, ಫೋನ್ ನಂಬರ್, ಎಸ್ಸೆಮ್ಮೆಸ್ ಸಂದೇಶ, ಗ್ಯಾಲರಿ ಇತ್ಯಾದಿ ಎಲ್ಲವನ್ನು ಆ್ಯಕ್ಸೆಸ್ ಮಾಡಲು ಅನುಮತಿ ಕೋರಲಾಗುತ್ತದೆಯಲ್ಲವೇ? ಎಲ್ಲದಕ್ಕೂ ನಾವು ‘ಯಸ್ ಯಸ್’ ಅಂತ ಕ್ಲಿಕ್ ಮಾಡುತ್ತಾ ಹೋಗುತ್ತೇವೆ. ಇದುವೇ ನಿಮ್ಮ ಪ್ರೈವೇಟ್ ಅಂದರೆ ಖಾಸಗಿ ಡೇಟಾವನ್ನು ಅನಗತ್ಯವಾಗಿ ಕದಿಯುವುದು. ಅಂದರೆ, ಕಿಂಭೋ ರೀತಿಯಲ್ಲಿಯೇ ಅಸಲಿ ಆ್ಯಪ್‌ಗಳನ್ನೇ ಹೋಲುವ ಅದೆಷ್ಟೋ ನಕಲಿ ಆ್ಯಪ್‌ಗಳನ್ನು ಪ್ಲೇ ಸ್ಟೋರ್‌ಗೆ ಬಿಟ್ಟು, ಅದರಲ್ಲಿ ಬಳಕೆದಾರರ ಡೇಟಾವನ್ನು ಅಪಹರಿಸುವುದೇ ಈ ಟ್ರ್ಯಾಕರ್‌ಗಳ ದಂಧೆ. ಅಥವಾ ಸ್ವದೇಶೀಗೆ ಸೆಡ್ಡು ಹೊಡೆದು, ಈ ಆ್ಯಪ್ ಅನ್ನು ವಿಫಲಗೊಳಿಸುವ ತಂತ್ರವೂ ಇರಬಹುದೇನೋ…

ಒಟ್ಟಿನಲ್ಲಿ, ಸರಕಾರದ ಆಧಾರ್ ಕಾರ್ಡ್‌ಗೆ ಎಲ್ಲ ಖಾಸಗಿ ಮಾಹಿತಿ ನೀಡುವ ಬಗ್ಗೆ ಸೊಲ್ಲೆತ್ತುವ ನಾವು, ಈ ಆ್ಯಪ್‌ಗಳಿಗೆಲ್ಲ ಕಣ್ಣು ಮುಚ್ಚಿ ನಮ್ಮ ಮಾಹಿತಿಯನ್ನು ಧಾರೆ ಎರೆಯುತ್ತೇವೆ. ಹ್ಯಾಕರ್‌ಗಳು ಕಾದು ಕುಳಿತಿರುತ್ತಾರೆ. ಹೀಗಾಗಿ, ಕಿಂಭೋ ಒಂದು ನೆಪ ಮಾತ್ರವಷ್ಟೇ. ಯಾವುದೇ ಆ್ಯಪ್ ಅಳವಡಿಸಿಕೊಳ್ಳುವ ಬದಲು, ಅದು ವಿಶ್ವಾಸಾರ್ಹ ಸಂಸ್ಥೆಯದ್ದೇ? ಅದರ ಡೆವಲಪರ್‌ಗಳು ಯಾರು? ಅಂತ ಸರಿಯಾಗಿ ನೋಡಿಕೊಂಡು ನಂತರವಷ್ಟೇ ಇನ್‌ಸ್ಟಾಲ್ ಮಾಡಿಕೊಳ್ಳುವುದು ಅತ್ಯಂತ ಅವಶ್ಯಕ.

ಮಾಹಿತಿ@ತಂತ್ರಜ್ಞಾನ ವಿಜಯ ಕರ್ನಾಟಕ ಅಂಕಣ for 04 ಜೂನ್ 2018 by ಅವಿನಾಶ್ ಬಿ.

Avinash B

Avinash B. Tech Writer, Columnist, Working as Online media Journalist for more than two decades. Passionate about Technology and Gadgets. Yakshagana and Music are passion.

Recent Posts

iPhone 16e: Best Features and Specs: ಹೊಸ ಐಫೋನ್ 16ಇ ಬಿಡುಗಡೆ

iPhone 16e joins the iPhone 16 lineup, featuring the fast performance of the A18 chip,…

4 days ago

ಚಳಿಯಲ್ಲಿ ಬಣ್ಣ ಬದಲಾಯಿಸುವ Realme 14 Pro ಸರಣಿ ಫೋನ್ ಬಿಡುಗಡೆ

ರಿಯಲ್‌ಮಿ 14 ಪ್ರೊ ಸರಣಿಯ 5ಜಿ ಫೋನ್, ಡ್ಯಾನಿಶ್ ಡಿಸೈನ್ ಸ್ಟುಡಿಯೋ ವ್ಯಾಲರ್ ಡಿಸೈನರ್ಸ್ ಮೂಲಕ ರೂಪುಗೊಂಡ ವಿಶ್ವದ ಮೊದಲ…

1 month ago

ಎಐ ವೈಶಿಷ್ಟ್ಯಗಳ realme GT 7 Pro ಬಿಡುಗಡೆ: ಬೆಲೆ ಎಷ್ಟು? ವೈಶಿಷ್ಟ್ಯಗಳೇನು? ಇಲ್ಲಿದೆ ಪೂರ್ಣ ಮಾಹಿತಿ

ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್‌ ಇರುವ ಬಹುನಿರೀಕ್ಷಿತ…

3 months ago

ರಿಯಲ್‌ಮಿ ನಾರ್ಜೋ 70 ಟರ್ಬೊ 5 ಜಿ, ರಿಯಲ್‌ಮಿ ಬಡ್ಸ್ ಎನ್‌1 ಬಿಡುಗಡೆ: ಬೆಲೆ, ವೈಶಿಷ್ಟ್ಯ ತಿಳಿಯಿರಿ

ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…

5 months ago

ಓದುವಿಕೆ, ಕಲಿಕೆ ಉತ್ತೇಜನಕ್ಕೆ ‘ರೀಡ್-ಅ-ಥಾನ್’: ದಾಖಲೆಯ ಗುರಿ

ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.

5 months ago

Realme 13 +, Realme 13 5ಜಿ ಫೋನ್ ಬಿಡುಗಡೆ: ವೇಗದ ಫೋನ್‌ನ ವೈಶಿಷ್ಟ್ಯಗಳು, ಬೆಲೆ ಇಲ್ಲಿ ತಿಳಿಯಿರಿ

ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…

6 months ago