ಆನ್‌ಲೈನ್‌ನಲ್ಲಿಯೂ ಮಕ್ಕಳ ರಕ್ಷಣೆ: ಪೋಷಕರಿಗೆ ಹೆಚ್ಚುವರಿ ಜವಾಬ್ದಾರಿ

ಕಳೆದ ವಾರ ಬೆಂಗಳೂರಲ್ಲೇ ನಡೆದ ಒಂದು ಘಟನೆ. ಇನ್‌ಸ್ಟಾಗ್ರಾಂನಲ್ಲಿ ಪರಿಚಯವಾದ ಮುಂಬಯಿಯ ‘ಸ್ನೇಹಿತ’ನೊಬ್ಬ ಕಿರುಕುಳ ನೀಡುತ್ತಿದ್ದಾನೆ, ಕಾಲೇಜಿಗೆ ಬಂದು ಪೀಡಿಸಿದ್ದಾನೆ, ಫೋಟೋಗಳನ್ನು ತಿದ್ದುಪಡಿ ಮಾಡಿ ಬೆದರಿಸುತ್ತಿದ್ದಾನೆ ಅಂತ ಬೆಂಗಳೂರಿನ ಪಿಯು ವಿದ್ಯಾರ್ಥಿನಿಯೊಬ್ಬಳು ಪೊಲೀಸರಿಗೆ ದೂರು ನೀಡುತ್ತಾಳೆ. ಇದು ತೀರಾ ಇತ್ತೀಚಿನ ಘಟನೆ. ಸಾಮಾಜಿಕ ಜಾಲ ತಾಣದಲ್ಲಿ ಬೆಳ್ಳಗಿರುವುದೆಲ್ಲವೂ ಹಾಲಲ್ಲ ಎಂಬುದನ್ನು ಅರಿಯದ ಮುಗ್ಧ ಯುವ ಜನಾಂಗವಿಂದು, ಸೂಕ್ತ ಮಾರ್ಗದರ್ಶನವಿಲ್ಲದೆ ಇಂಟರ್ನೆಟ್ ಲೋಕದಲ್ಲಿ ದಾರಿ ತಪ್ಪುತ್ತಿದೆ ಮತ್ತು ಕಡೆಗೆ ಕಿರುಕುಳವನ್ನೂ ಅನುಭವಿಸುತ್ತಿದೆ. ಇದು ತಂತ್ರಜ್ಞಾನ ಯುಗದಲ್ಲಿ ಪೋಷಕರಿಗೆ ಹೆಚ್ಚುವರಿ ಜವಾಬ್ದಾರಿಯೊಂದು ಹುಟ್ಟಿಕೊಂಡಿದೆ ಎಂಬುದರ ಸ್ಪಷ್ಟ ಸೂಚನೆ.

ಸಾಮಾಜಿಕ ಜಾಲತಾಣಗಳಲ್ಲಿ ಏನು ಬರೆದುಕೊಳ್ಳಬೇಕು, ಯಾವುದನ್ನೆಲ್ಲ ಬಹಿರಂಗವಾಗಿ ಕಾಣಿಸುವಂತೆ ಸೆಟ್ ಮಾಡಿಟ್ಟುಕೊಳ್ಳಬೇಕು, ಯಾರನ್ನು ನಂಬಬೇಕು, ಎಂಥವರು ಇರುತ್ತಾರೆ, ಅದರಲ್ಲಿರುವ ಎಲ್ಲ ಸಂದೇಶಗಳೂ ನಿಜವೇ ಆಗಿರಬೇಕಿಲ್ಲ… ಹೀಗೆಲ್ಲ ನಮ್ಮ ಅನುಭವದ ಮಾತುಗಳನ್ನು ಎಳೆಯ ಗೆಳೆಯರಿಗೆ ತಿಳಿಹೇಳಬೇಕಾಗುತ್ತದೆ. ಅಭಿವ್ಯಕ್ತಿ ಸ್ವಾತಂತ್ರ್ಯ ಇದೆ ಎಂದ ಮಾತ್ರಕ್ಕೆ ಏನೇನೆಲ್ಲ ಬರೆದರೆ, ಜೈಲು ಪಾಲಾಗುವ ಸಾಧ್ಯತೆಗಳೂ ಇವೆ. ಅನಗತ್ಯ ನಿಂದನೆ, ಕಿರುಕುಳ, ಸುಳ್ಳು ಸುದ್ದಿಗಳ ಫಾರ್ವರ್ಡ್, ಅಶ್ಲೀಲ, ಜನರನ್ನು ಕೆರಳಿಸುವ, ಆತಂಕಕ್ಕೀಡುಮಾಡುವ ಸಂದೇಶ…. ಇವೆಲ್ಲಕ್ಕೂ ಸೈಬರ್ ಕ್ರೈಮ್ ಇಲಾಖೆಯಲ್ಲಿ ಮದ್ದು ಇದೆ ಎಂಬ ಕುರಿತು ಕಾನೂನಿನ ಅರಿವನ್ನೂ ಅವರಲ್ಲಿ ಮೂಡಿಸಬೇಕಾಗುತ್ತದೆ. ಇತ್ತೀಚೆಗೆ ಪತ್ರಿಕೆಗಳಲ್ಲಿ ಮತ್ತು ಇತರ ಮಾಧ್ಯಮಗಳಲ್ಲಿ ವಾಟ್ಸ್ಆ್ಯಪ್ ಪರವಾಗಿ, ಜನ ಜಾಗೃತಿ ಮೂಡಿಸಬಲ್ಲ ಸಾಕಷ್ಟು ಜಾಹೀರಾತುಗಳನ್ನು ನಾವು ಓದಿದ್ದೇವಲ್ಲವೇ?

ಈಗಷ್ಟೇ ಮೊಬೈಲ್ ಫೋನ್‌ನ ಸಂಗಕ್ಕೆ ಹಪಹಪಿಸುತ್ತಿರುವ ಯುವ ಪೀಳಿಗೆಯಲ್ಲಿ ಆನ್‌ಲೈನ್ ಜಾಗೃತಿ ಅಗತ್ಯ. ಇದು ಪಾಲಕರು ಮತ್ತು ಶಿಕ್ಷಕರಿಗೆ ಈಗಿನ ಹೆಚ್ಚುವರಿ ಜವಾಬ್ದಾರಿ. ಮಕ್ಕಳು ಮಾಡುವ ಸಾಧನೆಗಳಿಗೆ ಪಾಲಕರು-ಪೋಷಕರು ಮತ್ತು ಶಿಕ್ಷಕರು ಹೇಗೆ ಹೊಣೆಗಾರರೋ, ಅವರ ತಪ್ಪುಗಳಿಗೂ ಅವರೇ ಅಲ್ಲವೇ ಜವಾಬ್ದಾರರು?

ಫೇಸ್‌ಬುಕ್, ವಾಟ್ಸ್ಆ್ಯಪ್, ಇನ್‌ಸ್ಟಾಗ್ರಾಂ ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ, ಫ್ರೆಂಡ್ ರಿಕ್ವೆಸ್ಟ್‌ಗೆ ಸ್ಪಂದಿಸುವಾಗ ಅತ್ಯಂತ ಎಚ್ಚರಿಕೆ ವಹಿಸುವಂತೆ ಮಕ್ಕಳಿಗೆ ತಿಳಿಹೇಳಬೇಕಾಗಿದೆ. ಯಾಕೆಂದರೆ, ವಂಚಕರ ಫೇಸ್‌ಬುಕ್ ಪ್ರೊಫೈಲ್ ನೋಡಿದರೆ ಯಾರು ಬೇಕಿದ್ದರೂ ಸೂಪರ್ ಅನ್ನಲೇಬೇಕು, ಅಷ್ಟು ಚೆನ್ನಾಗಿರಬಹುದು. ಆದರೆ, ಕಣ್ಣಾರೆ ಕಂಡರೂ ಪರಾಂಬರಿಸಿನೋಡಬೇಕಾದ ಈ ಕಾಲದಲ್ಲಿ, ಯಾವತ್ತೂ ನೋಡಿರದ ವ್ಯಕ್ತಿಗಳಲ್ಲಿ ಸ್ನೇಹ ಬೆಳೆಸುವಾಗ ಎಚ್ಚರಿಕೆ ವಹಿಸದಿದ್ದರೆ ಹೇಗೆ? ನಯ ಮಾತಿನಿಂದ, ಆಪ್ತಭಾವ ಮೂಡಿಸುವ ಸಂದೇಶಗಳ ಮೂಲಕ, ಇನ್ನೂ ಲೋಕಜ್ಞಾನ ಮೂಡಿರದ ಮಕ್ಕಳು, ಯುವ ಪೀಳಿಗೆಯ ಮಂದಿಯನ್ನು ಮರುಳು ಮಾಡುವುದು ಸುಲಭ.

ಸಾಮಾಜಿಕ ಜಾಲತಾಣಗಳಲ್ಲಿ ಬೇಕಾದ್ದು-ಬೇಡವಾದ್ದೆಲ್ಲವೂ ಬರೆದುಕೊಳ್ಳುವ ಅಭಿವ್ಯಕ್ತಿ ಸ್ವಾತಂತ್ರ್ಯ ನಮಗೆ ಇದೆಯಾದರೂ, ನಾವು ಮಾಡುವ ಪೋಸ್ಟ್‌ಗಳು, ಕಾಮೆಂಟ್‌ಗಳು, ಚಿತ್ರ-ವೀಡಿಯೊಗಳು ಅನ್ಯರಿಗೆ ತೊಂದರೆಯುಂಟು ಮಾಡುವಂತಿದ್ದರೆ, ಅವರನ್ನು ನಿಂದಿಸುವಂತಿದ್ದರೆ, ಮಾನಹಾನಿಕರವಾಗಿದ್ದರೆ, ಅವಮಾನಿಸುವಂತಿದ್ದರೆ, ಈ ಕುರಿತು ನೇರವಾಗಿ ಸೈಬರ್ ಕ್ರೈಮ್ ಇಲಾಖೆಗೆ ಅಥವಾ ಪೊಲೀಸ್ ಠಾಣೆಗೆ ದೂರು ನೀಡಬಹುದು. ಅಭಿವ್ಯಕ್ತಿ ಸ್ವಾತಂತ್ರ್ಯವಿದೆ ಎಂದುಕೊಂಡ ಮಾತ್ರಕ್ಕೆ ಏನೇನೆಲ್ಲ ಬರೆದುಕೊಂಡು ಅದೆಷ್ಟೋ ಮಂದಿ ಜೈಲು ಪಾಲಾಗಿರುವ ಹಲವು ಸುದ್ದಿಗಳನ್ನು ನಾವು ನೀವೆಲ್ಲರೂ ಓದಿದ್ದೇವೆ. ಅದೇ ರೀತಿ, ವಾಟ್ಸ್ಆ್ಯಪ್‌ನಂತಹಾ ಸಂದೇಶ ಸಂವಹನ ಮಾಧ್ಯಮದಲ್ಲಿಯೂ ನಕಲಿ ಸುದ್ದಿಗಳನ್ನು ಫಾರ್ವರ್ಡ್ ಮಾಡುವುದು, ಅವಮಾನಕಾರಿ ಸಂದೇಶಗಳನ್ನು ರವಾನಿಸುವುದು, ಅಶ್ಲೀಲ ಚಿತ್ರಗಳನ್ನು ಹಂಚಿಕೊಳ್ಳುವುದು… ಮುಂತಾದೆಲ್ಲವೂ ಅಪರಾಧವೇ.

ಐಡೆಂಟಿಟಿ: ಆನ್‌ಲೈನ್ ಮಾಧ್ಯಮದಲ್ಲಿ ನಮಗರಿವಿಲ್ಲದಂತೆಯೇ ನಮ್ಮ ಐಡೆಂಟಿಟಿಯೊಂದು ರೂಪುಗೊಂಡಿರುತ್ತದೆ. ಅಲ್ಲಿ ಏನನ್ನು ಬರೆದುಕೊಳ್ಳುತ್ತೇವೋ, ಅದುವೇ ನಮ್ಮ ವ್ಯಕ್ತಿತ್ವವನ್ನು ಅಳೆಯುವ ಬಾಹ್ಯ ಮಾನದಂಡವಾಗುತ್ತದೆ. ಹಲವಾರು ಕಂಪನಿಗಳು ಈಗಾಗಲೇ ಉದ್ಯೋಗ ನೇಮಕಾತಿ ವೇಳೆ ಅವರ ಸಾಮಾಜಿಕ ಜಾಲತಾಣಗಳ ಅಸ್ತಿತ್ವವನ್ನು ಕೂಲಂಕಷವಾಗಿ ಪರಿಶೀಲನೆಗೊಳಪಡಿಸುತ್ತಿದ್ದಾರೆ ಅನ್ನುವುದನ್ನೂ ಮಕ್ಕಳಿಗೆ ತಿಳಿಹೇಳಬೇಕಿದೆ.

ಕೆಲವರು ಪ್ರಾಮಾಣಿಕವಾಗಿದ್ದರೂ, ಹಲವರು ಗೋಮುಖ ವ್ಯಾಘ್ರರು ಎಂಬುದು ಸಾಕಷ್ಟು ಪ್ರಕರಣಗಳಲ್ಲಿ ಸಾಬೀತಾಗಿದೆ. ಈಗಂತೂ ಫೇಸ್‌ಬುಕ್ ಮೂಲಕ ಪರಿಚಯವಾಗಿ ಬಳಿಕ ಲೈಂಗಿಕ ದೌರ್ಜನ್ಯಕ್ಕೀಡಾದ ಅದೆಷ್ಟೋ ಪ್ರಕರಣಗಳು ಪ್ರತಿದಿನವೆಂಬಂತೆ ವರದಿಯಾಗುತ್ತಿರುವುದರಿಂದ ಈ ಎಚ್ಚರಿಕೆ. ಸೈಬರ್ ಕ್ರೈಮ್ (ಆನ್‌ಲೈನ್ ಅಪರಾಧ) ಕುರಿತಾದ ದೂರುಗಳಿದ್ದಲ್ಲಿ ವೆಬ್ ಮೂಲಕವೇ ನೀಡಬಹುದಾದ ವ್ಯವಸ್ಥೆಯನ್ನು ಕೇಂದ್ರ ಸರಕಾರವೂ ಜಾರಿಗೆ ತಂದಿದೆ. ಅದರ ವೆಬ್ ವಿಳಾಸ ಇಲ್ಲಿದೆ: cybercrime.gov.in . ಇದರಲ್ಲಿ ಸದ್ಯಕ್ಕೆ ಮಕ್ಕಳ ಮೇಲಿನ ಲೈಂಗಿಕ ಕಿರುಕುಳ, ಚೈಲ್ಡ್ ಪೋರ್ನೋಗ್ರಫಿ ಹಾಗೂ ಲೈಂಗಿಕ ವಿಷಯಗಳು, ಅತ್ಯಾಚಾರ ಕುರಿತು ದೂರು ಸಲ್ಲಿಸಬಹುದು. ಹೆಸರು ಗೌಪ್ಯವಾಗಿಟ್ಟು ದೂರು ನೀಡುವ ವಿಧಾನವೂ ಇಲ್ಲಿದೆ. ಇದರ ಸದುಪಯೋಗ ಮಾಡಿಕೊಳ್ಳೋಣ.

ಮಾಹಿತಿ@ತಂತ್ರಜ್ಞಾನ: ಅವಿನಾಶ್ ಬಿ. ವಿಜಯ ಕರ್ನಾಟಕ ಅಂಕಣ, 24 ಡಿಸೆಂಬರ್ 2018

Avinash B

Avinash B. Tech Writer, Columnist, Working as Online media Journalist for more than two decades. Passionate about Technology and Gadgets. Yakshagana and Music are passion.

Recent Posts

iPhone 16e: Best Features and Specs: ಹೊಸ ಐಫೋನ್ 16ಇ ಬಿಡುಗಡೆ

iPhone 16e joins the iPhone 16 lineup, featuring the fast performance of the A18 chip,…

4 days ago

ಚಳಿಯಲ್ಲಿ ಬಣ್ಣ ಬದಲಾಯಿಸುವ Realme 14 Pro ಸರಣಿ ಫೋನ್ ಬಿಡುಗಡೆ

ರಿಯಲ್‌ಮಿ 14 ಪ್ರೊ ಸರಣಿಯ 5ಜಿ ಫೋನ್, ಡ್ಯಾನಿಶ್ ಡಿಸೈನ್ ಸ್ಟುಡಿಯೋ ವ್ಯಾಲರ್ ಡಿಸೈನರ್ಸ್ ಮೂಲಕ ರೂಪುಗೊಂಡ ವಿಶ್ವದ ಮೊದಲ…

1 month ago

ಎಐ ವೈಶಿಷ್ಟ್ಯಗಳ realme GT 7 Pro ಬಿಡುಗಡೆ: ಬೆಲೆ ಎಷ್ಟು? ವೈಶಿಷ್ಟ್ಯಗಳೇನು? ಇಲ್ಲಿದೆ ಪೂರ್ಣ ಮಾಹಿತಿ

ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್‌ ಇರುವ ಬಹುನಿರೀಕ್ಷಿತ…

3 months ago

ರಿಯಲ್‌ಮಿ ನಾರ್ಜೋ 70 ಟರ್ಬೊ 5 ಜಿ, ರಿಯಲ್‌ಮಿ ಬಡ್ಸ್ ಎನ್‌1 ಬಿಡುಗಡೆ: ಬೆಲೆ, ವೈಶಿಷ್ಟ್ಯ ತಿಳಿಯಿರಿ

ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…

5 months ago

ಓದುವಿಕೆ, ಕಲಿಕೆ ಉತ್ತೇಜನಕ್ಕೆ ‘ರೀಡ್-ಅ-ಥಾನ್’: ದಾಖಲೆಯ ಗುರಿ

ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.

5 months ago

Realme 13 +, Realme 13 5ಜಿ ಫೋನ್ ಬಿಡುಗಡೆ: ವೇಗದ ಫೋನ್‌ನ ವೈಶಿಷ್ಟ್ಯಗಳು, ಬೆಲೆ ಇಲ್ಲಿ ತಿಳಿಯಿರಿ

ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…

6 months ago