ರಂಗ ನಡೆಗಳ ಸಹಿತ ಎಲ್ಲ ಹಾಡುಗಳ ರಸಗವಳ
ಕನ್ನಡದ ಕಮನೀಯ ಕಲೆ ಯಕ್ಷಗಾನಕ್ಕೆ ಸಂಬಂಧಿಸಿದಂತೆ ಪ್ರಸಂಗದ ನಡೆ, ಪದ್ಯಗಳ ಹಾಡುವಿಕೆ, ಮಟ್ಟುಗಳ ಪ್ರಸ್ತುತಿ, ರಂಗ ನಡೆಗಳು, ಧಿತ್ತ-ಧೀಂಗ್ಣ ಎಲ್ಲಿ ಯಾವಾಗ ಎಂಬೆಲ್ಲ ಮಾಹಿತಿ ಇದುವರೆಗೆ ದಾಖಲಾಗದೇ ಇರುವುದು ಯಕ್ಷಗಾನೀಯತೆಯ ಉಳಿವಿಗೆ ದೊಡ್ಡ ತೊಡಕಾಗಿದೆ. ಈ ಕಾರಣದಿಂದಾಗಿಯೇ ಈ ದಿನಗಳಲ್ಲಿ ಯಕ್ಷಗಾನದಲ್ಲಿ ಸಾಕಷ್ಟು ಅಪಸವ್ಯಗಳಾಗುತ್ತಿವೆ.
ಇವೆಲ್ಲ ದಾಖಲಿಸಿದರೆ ಮುಂದಿನ ಪೀಳಿಗೆಗೆ ನಿಜವಾದ ಯಕ್ಷಗಾನದ ಪರಂಪರೆಯನ್ನು ದಾಟಿಸುವ ಸಾರ್ಥಕ ಕೆಲಸವಾದೀತು. ಇಂಥದ್ದೊಂದು ಕಾರ್ಯಕ್ಕೆ ಕೈಜೋಡಿಸಿದ್ದಾರೆ ಮುದ್ದಣ ಪ್ರಕಾಶನದ ನಂದಳಿಕೆ ಬಾಲಚಂದ್ರ ರಾವ್ ಮತ್ತು ಬಲಿಪ ಗಾನ ಯಾನ ತಂಡ.
ಕನ್ನಡದ ಸಾರಸ್ವತ ಲೋಕಕ್ಕೆ ಯಕ್ಷಗಾನದ ಕೊಡುಗೆ ಅಪಾರವಾಗಿದ್ದರೂ ಸಾಹಿತ್ಯ ಲೋಕದ ಮುಖ್ಯವಾಹಿನಿಯಲ್ಲಿ ಅದಿನ್ನೂ ಬೆರೆಯಬೇಕಷ್ಟೆ. ನಂದಳಿಕೆಯ ಪ್ರಖ್ಯಾತ ಕವಿ, ಆಧುನಿಕ ಕನ್ನಡ ಸಾಹಿತ್ಯದ ಮುಂಗೋಳಿ ಎಂದೇ ಕರೆಯಲಾಗುವ, ನಂದಳಿಕೆ ಲಕ್ಷ್ಮೀನಾರಾಯಣಪ್ಪ ಅಥವಾ ಮುದ್ದಣ – ಈತನ ಸಾಹಿತ್ಯ ಕೃತಿಗಳು ಒಂದಕ್ಕಿಂತ ಒಂದು ಮಿಗಿಲು. ಮುದ್ದಣ ರಚಿಸಿದ ಯಕ್ಷಗಾನ ಕೃತಿಗಳಾದ ಕುಮಾರ ವಿಜಯ ಮತ್ತು ರತ್ನಾವತಿ ಕಲ್ಯಾಣ – ಇವೆರಡೂ ಕಾವ್ಯ ಸಾಹಿತ್ಯದ ವೈಭವವನ್ನು ವಿವರಿಸುವಂಥವು ಮತ್ತು ಯಕ್ಷಗಾನದ ಪ್ರಾತಿನಿಧಿಕ ಕೃತಿಗಳು ಎಂದರೂ ತಪ್ಪಲ್ಲ. ಈ ಹಾಡುಗಳನ್ನು ಯಕ್ಷಗಾನದ ರಾಗ-ಕ್ರಮಗಳಲ್ಲಿ ಆಲಿಸುವುದೇ ಚಂದ.
ಒಂದು ಯಕ್ಷಗಾನದ ಪ್ರಸಂಗವನ್ನು ಸುಮಾರು ಎಂಟು ಗಂಟೆಗಳ ಕಾಲ ಅಂದರೆ ಇಡೀ ರಾತ್ರಿಯ ಅವಧಿಗೆ ಪ್ರದರ್ಶಿಸುವುದಾದರೆ ಬೇಕಿರುವುದು ಸುಮಾರು 250ರಿಂದ 300ರಷ್ಟು ಪದ್ಯಗಳು. ರಾಗ, ತಾಳ, ಮಟ್ಟು, ಛಂದಸ್ಸು ಮೊದಲಾದವುಗಳಿಗೆ ಒಳಪಟ್ಟಿರುವ ಅದ್ಭುತ ಸಾಹಿತ್ಯವಿರುವ ಹಾಡುಗಳು ಪ್ರಸಂಗವೊಂದರ ಕಥೆಯ ನಡೆಯನ್ನು ಹೆಣೆದುಕೊಡುತ್ತವೆ. ಬಹುತೇಕ ಪ್ರಸಂಗಗಳಲ್ಲಿ ಕವಿಯು ಲೆಕ್ಕಕ್ಕಿಂತ ಹೆಚ್ಚು ಪದ್ಯಗಳನ್ನೇ ರಚಿಸಿರುತ್ತಾನೆ. ಉದಾಹರಣೆಗೆ, ಕುಮಾರ ವಿಜಯ ಪ್ರಸಂಗದಲ್ಲಿಯೇ 700ರಷ್ಟು ಪದ್ಯಗಳಿವೆ. ಇವೆಲ್ಲವೂ ಯಕ್ಷಗಾನ ಪ್ರದರ್ಶನ ಅಥವಾ ತಾಳಮದ್ದಳೆಯ ಪ್ರಸ್ತುತಿಗೆ ಬಳಕೆಯಾಗುವುದಿಲ್ಲ. ಶೇ.50ಕ್ಕಿಂತಲೂ ಹೆಚ್ಚಿನ ಪದ್ಯಗಳನ್ನು ಬಿಟ್ಟುಬಿಡಲಾಗುತ್ತದೆ. ರಂಗಸ್ಥಳದಲ್ಲಿ ಕಥಾ ನಿರೂಪಣೆಗೆ ಲೋಪವಾಗದಂತೆ, ಭಾಗವತರು ಅರ್ಥಾತ್ ಯಕ್ಷಗಾನದ ನಿರ್ದೇಶಕರು ನಿರ್ದಿಷ್ಟ ಪದಗಳನ್ನಷ್ಟೇ ಹಾಡುತ್ತಾರೆ. ಉಳಿದ ಪದ್ಯಗಳ ನಿರೂಪಣೆಯು ಅಥವಾ ಕಥೆಯು ಬೇರೆ ಪಾತ್ರಧಾರಿಗಳ ಮಾತಿನ ಮೂಲಕ ಪ್ರೇಕ್ಷಕರಿಗೆ ತಿಳಿಯುತ್ತದೆ. ಪಾತ್ರಧಾರಿಗಳ ಸಂಖ್ಯಾಮಿತಿಯೂ, ಕಾಲಮಿತಿಯೂ ಇದಕ್ಕೆ ಪ್ರಧಾನ ಕಾರಣ. ಹೀಗಿರುವಾಗ, ಪ್ರಸಂಗವೊಂದರಲ್ಲಿರುವ ಎಲ್ಲ ಪದ್ಯಗಳನ್ನು, ಅದರ ಸಾಹಿತ್ಯದ ಸವಿಯನ್ನು ಯಕ್ಷಗಾನದ ಅಭಿಮಾನಿಗಳು ಮತ್ತು ಅಭ್ಯಾಸಿಗಳು ಸವಿಯುವುದು ಹೇಗೆ?
ಈಗಾಗಲೇ ಬಲಿಪ ಭಾಗವತರ ಸಂಪ್ರದಾಯಬದ್ಧ ಯಕ್ಷಗಾನ ಹಾಡುಗಾರಿಕೆಯನ್ನು ‘ಬಲಿಪ ಗಾನ ಯಾನ’ ಎಂಬ ಮನೆ ಮನೆ ಅಭಿಯಾನದ ಮೂಲಕ ಪ್ರಚುರ ಪಡಿಸಿರುವ, ಸ್ವತಃ ಹಿಮ್ಮೇಳ ವಾದಕರೂ ಆಗಿರುವ ಚಂದ್ರಶೇಖರ ಭಟ್ ಕೊಂಕಣಾಜೆ ಅವರ ಬೆಂಬಲದೊಂದಿಗೆ, ಮುದ್ದಣನ ಪರಮ ಆರಾಧಕರಾಗಿರುವ ನಂದಳಿಕೆ ಬಾಲಚಂದ್ರ ರಾವ್ ಹಲವಾರು ವರ್ಷಗಳಿಂದ ಇಂಥದ್ದೊಂದು ದಾಖಲೀಕರಣ ಕೈಂಕರ್ಯಕ್ಕಿಳಿದವರು. ಪರಿಣಾಮವಾಗಿ, ಕುಮಾರ ವಿಜಯ ಹಾಗೂ ರತ್ನಾವತಿ ಕಲ್ಯಾಣ ಕೃತಿಗಳ ಅಷ್ಟೂ ಹಾಡುಗಳಲ್ಲಿ ಒಂದನ್ನೂ ಬಿಡದೆ, ಚೆಂಡೆ-ಮದ್ದಳೆ ಸಾಂಗತ್ಯದೊಂದಿಗೆ ದಾಖಲೀಕರಣಗೊಂಡಿವೆ. ವಿಶೇಷವೆಂದರೆ, ಪ್ರತಿಯೊಂದು ಪದ (ಹಾಡು) ಕೂಡ, ಯಕ್ಷಗಾನದ ಎಲ್ಲ ರಂಗನಡೆಗಳ ಸಮೇತವಾಗಿ, ಉದಾಹರಣೆಗೆ, ಧಿತ್ತ, ಧೀಂಗ್ಣ, ತೈತತಕತ, ಅಟ್ಟಹಾಸ, ಪ್ರವೇಶ, ಒಡ್ಡೋಲಗ ಇತ್ಯಾದಿ ಎಲ್ಲ ರೀತಿಯ ಯಕ್ಷಗಾನ ಕ್ರಮಗಳನ್ನು ಕೂಡ ಒಳಗೊಂಡಿವೆ. ಇದು ಯಕ್ಷಗಾನ ಲೋಕದಲ್ಲಿ ಹಿಂದೆಂದೂ ಆಗಿರದ ಪ್ರಯತ್ನ.
ಕುಮಾರ ವಿಜಯದ ಸುಮಾರು 700ರಷ್ಟಿರುವ ಹಾಡುಗಳನ್ನು ಹಾಡಿದ್ದು ತೆಂಕು ತಿಟ್ಟಿನ ಬಲಿಪ ಶೈಲಿಯ ಪ್ರತಿಪಾದಕ ಭಾಗವತರೇ. ಏಳೆಂಟು ವರ್ಷಗಳ ಪರಿಶ್ರಮವು ಇದೀಗ ಧ್ವನಿಮುದ್ರಿಕೆಯ ಮೂಲಕ ಲೋಕಮುಖಕ್ಕೆ ಪರಿಚಯವಾಗುತ್ತಿದೆ. ಧ್ವನಿ ನೀಡಿದ್ದ ಬಲಿಪ ನಾರಾಯಣ ಭಾಗವತರು ಮತ್ತು ಪುತ್ರ ಬಲಿಪ ಪ್ರಸಾದ ಭಾಗವತರು ಈಗ ನಮ್ಮೊಂದಿಗಿಲ್ಲ. ಬಲಿಪ ಪರಂಪರೆಯನ್ನು ಮುಂದುವರಿಸುತ್ತಿರುವ ಮತ್ತೊಬ್ಬ ಪುತ್ರ ಬಲಿಪ ಶಿವಶಂಕರ ಭಟ್ ಹಾಗೂ ಸೋದರಳಿಯ ಪುಂಡಿಕಾಯಿ ಗೋಪಾಲಕೃಷ್ಣ ಭಟ್ ಅವರು ಕೂಡ ಪರಂಪರೆಯ, ಬಲಿಪ ಶೈಲಿಯ ಹಾಡುಗಳೊಂದಿಗೆ ಈ ಪ್ರಸಂಗಕ್ಕೆ ಮೆರುಗು ನೀಡಿದ್ದಾರೆ. ಚೆಂಡೆ-ಮದ್ದಳೆಯಲ್ಲಿ ನುರಿತ ಕಲಾವಿದರಾದ ಪದ್ಯಾಣ ಶಂಕರನಾರಾಯಣ ಭಟ್, ಪದ್ಮನಾಭ ಉಪಾಧ್ಯಾಯ ಹಾಗೂ ಕೊಂಕಣಾಜೆ ಚಂದ್ರಶೇಖರ ಭಟ್ ಜೊತೆಯಾಗಿದ್ದಾರೆ.
ಅದೇ ರೀತಿ, 400ಕ್ಕೂ ಹೆಚ್ಚು ಪದ್ಯ ಸಾಹಿತ್ಯವುಳ್ಳ ರತ್ನಾವತಿ ಕಲ್ಯಾಣ ಪ್ರಸಂಗವು ಸಂಪೂರ್ಣವಾಗಿ ಬಡಗು ತಿಟ್ಟಿನಲ್ಲಿ ಪ್ರಸ್ತುತಿಗೊಂಡಿದೆ. ಇದರಲ್ಲಿ ಹಾಡುಗಳನ್ನು ಭಾಗವತರಾದ ವಿದ್ವಾನ್ ಗಣಪತಿ ಭಟ್ ಮತ್ತು ಹೇರಂಜಾಲು ಗೋಪಾಲ ಗಾಣಿಗರು ಹಾಡಿದ್ದರೆ, ಮದ್ದಳೆಯಲ್ಲಿ ರಾಘವೇಂದ್ರ ಹೆಗಡೆ ಯಲ್ಲಾಪುರ ಹಾಗೂ ಚೆಂಡೆಯಲ್ಲಿ ರವೀಂದ್ರ ಆಚಾರ್ಯ ಕಾಡೂರು ಪ್ರತಿಭೆ ಪ್ರದರ್ಶಿಸಿದ್ದಾರೆ.
ನಾಂದಿ ಪದ್ಯದಿಂದ ಹಿಡಿದು ಕೊನೆಯ ಮಂಗಳ ಪದ್ಯದವರೆಗೆ, ಯಕ್ಷಗಾನ ಪ್ರಸಂಗದ ಸಮಗ್ರ ಹಾಡುಗಳ ದಾಖಲೀಕರಣ ಇದಾಗಿದ್ದು, ಯಕ್ಷಗಾನದ ಅಭ್ಯಾಸಿಗಳಿಗಂತೂ ಎಲ್ಲ ರೀತಿಯ ಮಟ್ಟುಗಳು, ರಾಗ-ತಾಳ ಮತ್ತು ರಂಗ ಕ್ರಮಗಳ ಬಗೆಗೆ ಮಾಹಿತಿ ದೊರೆಯುವುದರಲ್ಲಿ ಸಂದೇಹವಿಲ್ಲ. ದೀರ್ಘ ಪಠ್ಯ, ಪಾಂಡಿತ್ಯಪೂರ್ಣವಾದ ಛಂದಸ್ಸು, ಪ್ರಾಸಗಳಿಂದ ಕೂಡಿದ ಸಾಹಿತ್ಯ, ಪ್ರೌಢ ಕಾವ್ಯಾಲಂಕಾರಗಳು ಮಿಳಿತವಾಗಿರುವ ಮುದ್ದಣನ ಕುಮಾರ ವಿಜಯ ಪ್ರಸಂಗವು, ಕಲಿಕಾಭ್ಯಾಸಿಗಳಿಗೂ ಅತ್ಯಂತ ಸೂಕ್ತವಾದ ಪ್ರಸಂಗ. ಕಾವ್ಯಾತ್ಮಕ ವೈಶಿಷ್ಟ್ಯಗಳನ್ನು, ಕನ್ನಡ ಛಂದಸ್ಸಿನ ಅನೇಕಾನೇಕ ಗುಣಲಕ್ಷಣಗಳನ್ನು ಈ ಎರಡೂ ಪ್ರಸಂಗಗಳ ಪದಗಳಲ್ಲಿ ಕಾಣಬಹುದಾಗಿದೆ.
ಪದ್ಯಗಳ ಭಾಗವತಿಕೆಗೆ ಮೊದಲು ಅದರ ಏನು-ಎತ್ತ ಕುರಿತಾಗಿರುವ ಬಲಿಪರ ರಂಗ ಟಿಪ್ಪಣಿ ಎಂಬ ಕೃತಿಯೂ ಈ ಧ್ವನಿಮುದ್ರಿಕೆಯ ಜೊತೆಗೆ ಹೊರಬರುತ್ತಿದೆ. ಪದ್ಯವನ್ನು ಯಾವ ಲಯದಲ್ಲಿ ಹಾಡಬೇಕು, ರಂಗಕ್ರಿಯೆ ಹೇಗಿರಬೇಕು, ಪಠ್ಯದಲ್ಲಿರುವ ರಾಗ-ತಾಳಕ್ಕಿಂತ ಭಿನ್ನವಾದ ಬೇರೆ ರಾಗ-ತಾಳಗಳನ್ನು ಹೇಗೆ ಬಳಸಬಹುದು – ಇತ್ಯಾದಿ ಮಾಹಿತಿಯೂ ಟಿಪ್ಪಣಿಯಲ್ಲಿದೆ. ಭಾಮಿನಿ, ವಾರ್ಧಕ, ಕಂದ ಪದ್ಯಗಳಿಗೆ ಮೂಲತಃ ನಿರ್ದಿಷ್ಟ ರಾಗವನ್ನು ಸೂಚಿಸಲಾಗಿರುವುದಿಲ್ಲ. ಆದರೆ ರಂಗಟಿಪ್ಪಣಿಯಲ್ಲಿ ಇದನ್ನೂ ಸೂಚಿಸಲಾಗಿದೆ. ಯಕ್ಷಗಾನ ಸಾಹಿತ್ಯ ಲೋಕದಲ್ಲಂತೂ ಇದೊಂದು ಅನುಪಮವಾದ ಅನನ್ಯ ಮಹತ್ಕಾರ್ಯವೇ ಹೌದು. ಅಜ್ಜನಿಗೆ (ಹಿರಿಯ ಬಲಿಪ ನಾರಾಯಣ ಭಾಗವತರಿಗೆ) ಈ ಏಳುನೂರರಷ್ಟು ಪದ್ಯಗಳು ಕೂಡ ಕಂಠಪಾಠವಾಗಿಬಿಟ್ಟಿದ್ದವು ಎಂಬುದನ್ನು ಅವರ ಮೊಮ್ಮಗ, ಕಿರಿಯ ಬಲಿಪ ನಾರಾಯಣ ಭಾಗವತರು ನೆನಪಿಸಿಕೊಳ್ಳುತ್ತಿದ್ದರು.
ತನ್ನೂರಿನ ಮಹಾಕವಿ ಮುದ್ದಣನ ಬಗೆಗೆ ಅಮೋಘ ಭಕ್ತಿ-ಶ್ರದ್ಧೆಯಿಟ್ಟುಕೊಂಡಿರುವ ನಂದಳಿಕೆ ಬಾಲಚಂದ್ರ ರಾವ್ ಅವರ ಇಚ್ಛಾಶಕ್ತಿಯ ಫಲವಾಗಿ ಇಂಥದ್ದೊಂದು ಅಮೂಲ್ಯವಾದ ಧ್ವನಿಮುದ್ರಿಕೆಯು ಯಕ್ಷಗಾನ ಲೋಕಕ್ಕೆ ದೊರೆಯುತ್ತಿರುವುದು ಯಕ್ಷಗಾನದ ಮಟ್ಟಿಗೆ ದೊಡ್ಡ ಕೊಡುಗೆ. ರಾಗ-ತಾಳ-ಮಟ್ಟುಗಳನ್ನೂ ಕಾಪಿಡುವ, ಯಕ್ಷಗಾನ ಅಭ್ಯಾಸಿಗಳಿಗೂ ಆಕರ ಕೃತಿಯಾಗುವ, ಮುಂದಿನ ಪೀಳಿಗೆಗೆ ಯಕ್ಷಗಾನವನ್ನು ದಾಟಿಸುವ ಈ ಕಾಯಕ, ರಂಗಕ್ಕೊಂದು ದೊಡ್ಡ ಆಸ್ತಿ ದೊರೆತಂತೆ.
Article by Avinash Baipadithaya in Prajavani on 10/11 Feb 2024
ರಿಯಲ್‌ಮಿ 14 ಪ್ರೊ ಸರಣಿಯ 5ಜಿ ಫೋನ್, ಡ್ಯಾನಿಶ್ ಡಿಸೈನ್ ಸ್ಟುಡಿಯೋ ವ್ಯಾಲರ್ ಡಿಸೈನರ್ಸ್ ಮೂಲಕ ರೂಪುಗೊಂಡ ವಿಶ್ವದ ಮೊದಲ…
ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್ ಇರುವ ಬಹುನಿರೀಕ್ಷಿತ…
ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…
ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.
ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…
Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.