ಈಗಾಗಲೇ ಚೀನಾದ ಸ್ಮಾರ್ಟ್‌ಫೋನ್‌ಗಳಿಗೆ ಸೆಡ್ಡು ಹೊಡೆಯಲು ಮರಳಿ ಹೊಸ ಅವತಾರದೊಂದಿಗೆ ಬಂದಿರುವ ದೇಶೀಯ ಗ್ಯಾಜೆಟ್ ಉತ್ಪಾದನಾ ಕಂಪನಿ ಮೈಕ್ರೋಮ್ಯಾಕ್ಸ್, ಜನಪ್ರಿಯವಾಗುತ್ತಿರುವ ಇಯರ್‌ಬಡ್ ಕ್ಷೇತ್ರಕ್ಕೂ ಕಾಲಿಟ್ಟಿದೆ. ಜುಲೈ ತಿಂಗಳಾಂತ್ಯದಲ್ಲಿ ಏರ್ ಫಂಕ್ 1 ಹಾಗೂ ಏರ್ ಫಂಕ್ 1 ಪ್ರೋ ಎಂಬ ಎರಡು ಇಯರ್ ಬಡ್ಸ್ ಮಾದರಿಗಳನ್ನು (ಕಿವಿಯೊಳಗೆ ಇರಿಸಬಹುದಾದ ಇಯರ್ ಫೋನ್‌ಗಳು) ಬಿಡುಗಡೆ ಮಾಡಿದೆ. ಮೈಕ್ರೋಮ್ಯಾಕ್ಸ್ ಏರ್ ಫಂಕ್ 1 ‘ಪ್ರೊ’ ಸ್ಟೀರಿಯೋ ಇಯರ್ ಬಡ್ಸ್ ಹೇಗೆ ಕೆಲಸ ಮಾಡುತ್ತದೆ? ಇಲ್ಲಿದೆ ಮಾಹಿತಿ.
ವಿನ್ಯಾಸ
ಆ್ಯಪಲ್‌ನ ಏರ್ ಪಾಡ್ಸ್‌ನಂತೆಯೇ ಆಕರ್ಷಕ ನೋಟ, ವಿನ್ಯಾಸ ಹೊಂದಿರುವ ಮೈಕ್ರೋಮ್ಯಾಕ್ಸ್ ಏರ್ ಫಂಕ್ 1 ಪ್ರೊ ಇಯರ್ ಬಡ್ಸ್, ಗುಣಮಟ್ಟದ ಮೇಲ್ಮೈ ಹೊಂದಿದೆ. ಚಾರ್ಜ್ ಮಾಡಲು ಆಕರ್ಷಕ ಚಾರ್ಜಿಂಗ್ ಕೇಸ್ ಕೂಡ ಇದ್ದು, ಕೈಯಲ್ಲಿ ಹಿಡಿದುಕೊಳ್ಳುವುದು ಸುಲಭ. ಈಗಿನ ಟೈಪ್ ಸಿ ಚಾರ್ಜರ್ ಮೂಲಕ ಚಾರ್ಜ್ ಮಾಡಬಹುದಾಗಿದ್ದು, ಟೈಪ್ ಸಿ ಕೇಬಲ್ ನೀಡಲಾಗಿದೆ. ಚಾರ್ಜಿಂಗ್ ಕೇಸ್‌ನೊಳಗಿನ ಕುಳಿಗಳಲ್ಲಿ ಇಯರ್ ಬಡ್‌ಗಳನ್ನು ಇರಿಸಿದಾಗ ಅವುಗಳು ಚಾರ್ಜ್ ಆಗುತ್ತವೆ. ಚಾರ್ಜಿಂಗ್ ಮುಕ್ತಾಯವಾದಾಗ ನಸುನೀಲಿ ಎಲ್ಇಡಿ ಬೆಳಕು ಆಫ್ ಆಗುತ್ತದೆ. ಇಯರ್ ಬಡ್‌ಗಳಲ್ಲಿ ಸುತ್ತಮುತ್ತಲಿನ ಸದ್ದನ್ನು ಇಯರ್ ಫೋನ್‌ನೊಳಗೆ ಬಾರದಂತೆ ತಡೆಯುವ ವ್ಯವಸ್ಥೆ ಚೆನ್ನಾಗಿದೆ. ತುದಿಯಲ್ಲಿ ಮೈಕ್ ಕೂಡ ಇದೆ.
ಪ್ರಮುಖ ಅಂಶಗಳು
ಅತ್ಯಾಧುನಿಕ ಬ್ಲೂಟೂತ್ 5.2 ಸಂಪರ್ಕ ವ್ಯವಸ್ಥೆಯಿದೆ. ಸತತ 7 ಗಂಟೆಗಳ ಕಾಲ ಹಾಡುಗಳನ್ನು ಆಲಿಸುವಷ್ಟು ಅಥವಾ ಐದಾರು ಗಂಟೆ ಮಾತನಾಡುವಷ್ಟು ಬ್ಯಾಟರಿ ಸಾಮರ್ಥ್ಯ ಇದೆ. ಚಾರ್ಜಿಂಗ್ ಕೇಸ್ ಜೊತೆಗಿದ್ದರೆ, 32 ಗಂಟೆಗಳ ಸಂಗೀತ ಆಲಿಸಲು ಸಾಕಾಗುತ್ತದೆ. ಚಾರ್ಜಿಂಗ್ ಕೇಸ್ ಪೂರ್ತಿ ಚಾರ್ಜ್ ಆಗಲು ಸುಮಾರು ಒಂದೂಕಾಲು ಗಂಟೆ ಬೇಕಿದ್ದು, ಇದರಿಂದ ಎರಡು-ಮೂರು ಬಾರಿ ಇಯರ್‌ಬಡ್‌ಗಳನ್ನು ಚಾರ್ಜ್ ಮಾಡಬಹುದು.
ಇಯರ್‌ಬಡ್ಸ್ ಜಲ ಹಾಗೂ ಧೂಳು ನಿರೋಧಕವಾಗಿದ್ದು, ಕೇವಲ 4 ಗ್ರಾಂ ತೂಕವಿದೆ. ಕ್ವಾಲ್‌ಕಾಂ QCC3040 ಪ್ರೊಸೆಸರ್ ಇದ್ದು, ಬಾಹ್ಯ ಸದ್ದು ಕೇಳಿಸದಂತೆ ತಡೆಯುವ ವ್ಯವಸ್ಥೆ ಚೆನ್ನಾಗಿದೆ. ಕಿವಿಯ ಗಾತ್ರಕ್ಕೆ ಅನುಗುಣವಾಗಿ ವಿವಿಧ ಗಾತ್ರದ ಗುಣಮಟ್ಟದ ರಬ್ಬರ್ ಇಯರ್‌ಟಿಪ್‌ಗಳನ್ನೂ ಹೆಚ್ಚುವರಿಯಾಗಿ ಕೊಡಲಾಗಿದ್ದು, ಮಕ್ಕಳು ಅಥವಾ ದೊಡ್ಡ ಕಿವಿಯವರಿಗೆ ಬೇಕಾಗಿರುವುದನ್ನು ಬಳಸಿಕೊಳ್ಳಬಹುದು.
ಹೇಗಿದೆ?
ಏರ್ ಫಂಕ್ 1 ಪ್ರೊ ಇಯರ್‌ಬಡ್‌ಗಳು ಕಿವಿಗಳೊಳಗೆ ಸಮರ್ಪಕವಾಗಿ ಕೂರುತ್ತವೆ. ಪವರ್ ಚಾರ್ಜಿಂಗ್ ಕೇಸ್‌ನಿಂದ ಎರಡೂ ಇಯರ್‌ಬಡ್‌ಗಳನ್ನು ಹೊರತೆಗೆದಾಕ್ಷಣ ಅವು ಆನ್ ಆಗಿ, ಪರಸ್ಪರ ಬೆಸೆದುಕೊಳ್ಳುತ್ತವೆ (Pair). ಇಯರ್‌ಬಡ್‌ಗಳು ಗೂಗಲ್ ಅಸಿಸ್ಟೆಂಟ್ ಹಾಗೂ ಸಿರಿ ಎರಡನ್ನೂ ಬೆಂಬಲಿಸುವುದರಿಂದ, ಐಒಎಸ್ (ಆ್ಯಪಲ್) ಹಾಗೂ ಆಂಡ್ರಾಯ್ಡ್ – ಎರಡೂ ಸಾಧನಗಳಲ್ಲಿ ಬಳಸಬಹುದಾಗಿದೆ. ನಂತರ ಬ್ಲೂಟೂತ್ ಮೂಲಕ ಫೋನ್‌ಗೆ ಸಂಪರ್ಕಿಸಬೇಕು. ಫೋನ್‌ನ ಬ್ಲೂಟೂತ್ ಆನ್ ಮಾಡಿ, AirFunk 1 Pro ಎಂಬುದನ್ನು ಹುಡುಕಿ ಒತ್ತಿದಾಗ ಅವುಗಳು ಪರಸ್ಪರ ಬೆಸೆದುಕೊಳ್ಳುತ್ತವೆ.
ಇಯರ್‌ಬಡ್‌ಗಳನ್ನು ಚಾರ್ಜಿಂಗ್ ಕೇಸ್‌ನಿಂದ ಹೊರಗೆ ತೆಗೆದರೆ ಅವು ಆನ್ ಆಗುತ್ತವೆ. ತೆಗೆದಿಟ್ಟು ತುಂಬಾ ಹೊತ್ತಾದರೆ ಎರಡೂ ಬಡ್‌ಗಳ ಕಾಂಡಕ್ಕೆ (ಸ್ಟೆಮ್) ಏಕಕಾಲಕ್ಕೆ 3 ಸೆಕೆಂಡ್ ಮೃದುವಾಗಿ ಒತ್ತಿಹಿಡಿದರಾಯಿತು. ಇಲ್ಲವೇ, ಮತ್ತೆ ಚಾರ್ಜಿಂಗ್ ಕೇಸ್‌ನೊಳಗೆ ಇಟ್ಟು ಹೊರತೆಗೆದರಾಯಿತು. ಆಫ್ ಮಾಡಬೇಕಿದ್ದರೆ, ಚಾರ್ಜಿಂಗ್ ಕೇಸ್‌ನೊಳಗೆ ಇರಿಸಿದರೆ ಆಫ್ ಆಗುತ್ತವೆ. ಅಥವಾ ಎರಡೂ ಇಯರ್‌ಬಡ್‌ಗಳ ಹಿಂಭಾಗದ ಸ್ಪರ್ಶ ಸಂವೇದೀ ಜಾಗದಲ್ಲಿ 5 ಸೆಕೆಂಡ್ ಒತ್ತಿಹಿಡಿದರಾಯಿತು.
ಮೃದುವಾದ ತಟ್ಟುವಿಕೆ
ಇಯರ್‌ಬಡ್‌ನ ಹಿಂಭಾಗದಲ್ಲಿರುವ ಸ್ಪರ್ಶ ಸಂವೇದೀ ಪ್ರದೇಶದಲ್ಲಿ ಸತತ ಎರಡು ಬಾರಿ ಬೆರಳಿನಿಂದ ಮೃದುವಾಗಿ ತಟ್ಟಿದರೆ ಪೇರ್ ಆಗಿರುವ ಫೋನ್‌ನಲ್ಲಿರುವ ಹಾಡು ಪ್ಲೇ ಆಗುತ್ತದೆ. ನಿಲ್ಲಿಸುವುದಕ್ಕೂ ಸತತ ಎರಡು ಬಾರಿ ತಟ್ಟಿದರಾಯಿತು. ಎಡಕಿವಿಯ ಇಯರ್‌ಬಡ್ ಮೇಲೆ ಸತತ ಮೂರು ಬಾರಿ ತಟ್ಟಿದರೆ ಹಿಂದಿನ ಹಾಡು, ಬಲ ಕಿವಿಯ ಇಯರ್‌ಬಡ್ ಮೇಲೆ ಸತತ ಮೂರು ಬಾರಿ ತಟ್ಟಿದರೆ ಮುಂದಿನ ಹಾಡು ಪ್ಲೇ ಆಗುತ್ತದೆ. ವಾಲ್ಯೂಮ್ ಕಡಿಮೆ ಮಾಡಲು ಎಡ ಇಯರ್‌ಬಡ್ ಮೇಲೆ ಒಂದೊಂದು ಬಾರಿ ನಿಧಾನವಾಗಿ ತಟ್ಟುತ್ತಾ ಹೋಗಬೇಕು. ಹೆಚ್ಚಿಸಲು ಬಲ ಇಯರ್‌ಬಡ್‌ನಲ್ಲಿ ಹೀಗೆಯೇ ಮಾಡಬೇಕು. ಅದೇ ರೀತಿ, ಕರೆ ಬಂದಾಗ ಸ್ವೀಕರಿಸಬೇಕಿದ್ದರೆ ಒಮ್ಮೆ ತಟ್ಟಿದರೆ ಸಾಕು. ಎರಡು ಬಾರಿ ತಟ್ಟಿ ಕರೆ ಮುಕ್ತಾಯಗೊಳಿಸಬಹುದು. ಕರೆಯನ್ನು ನಿರಾಕರಿಸಬೇಕಿದ್ದರೆ, ಯಾವುದಾದರೂ ಒಂದು ಇಯರ್‌ಬಡ್‌ನ ಹಿಂಭಾಗವನ್ನು 2 ಸೆಕೆಂಡ್ ಒತ್ತಿಹಿಡಿದರಾಯಿತು.
ಸದ್ದು ಮತ್ತು ಪ್ರತಿಧ್ವನಿಯ ಸದ್ದನ್ನು ಕಡಿಮೆ ಮಾಡುವ (ನಾಯ್ಸ್ ಕ್ಯಾನ್ಸಲೇಶನ್) ಕ್ವಾಲ್‌ಕಾಂ ಸಿವಿಸಿ 8.0 ತಂತ್ರಜ್ಞಾನ ಬಳಸಿರುವುದರಿಂದ, ನಾವು ಸ್ವಲ್ಪಮಟ್ಟಿಗೆ ಗದ್ದಲವಿರುವ ಪ್ರದೇಶದಲ್ಲಿದ್ದರೂ ನಮ್ಮ ಧ್ವನಿಯು ಫೋನ್‌ನ ಇನ್ನೊಂದು ತುದಿಯಲ್ಲಿರುವವರಿಗೆ ಸ್ಪಷ್ಟವಾಗಿ ಕೇಳಿಸುತ್ತದೆ. 25 ಡೆಸಿಬೆಲ್‌ನಷ್ಟು ಪ್ರಮಾಣದ ಸುತ್ತಲಿನ ಸದ್ದನ್ನು ಹೀರಿಕೊಳ್ಳುವುದರಿಂದ ಇನ್ನೊಂದು ತುದಿಯಿಂದ ಮಾತನಾಡುವವರ ಧ್ವನಿಯೂ ನಮಗೆ ಸ್ಪಷ್ಟವಾಗಿ ಕೇಳುವಂತಾಗುತ್ತದೆ.
ಹಾಡು ಕೇಳುವಾಗ ತುಂಬ ಸ್ಪಷ್ಟತೆ ಇತ್ತು. ಜೊತೆಗೆ, ನಾವು ವಿಶೇಷವಾಗಿ ಭಾರತೀಯ ಸಂಗೀತಪ್ರಿಯರು ಹೆಚ್ಚು ಇಷ್ಟಪಡುವ ಬೇಸ್ ಧ್ವನಿಯೂ ಉತ್ತಮವಾಗಿ ಕೇಳಿಸುತ್ತದೆ. ಎರಡು ಇಯರ್‌ಬಡ್‌ಗಳನ್ನು ಎರಡೂ ಕಿವಿಗಳಿಗೆ ಇರಿಸಿಕೊಂಡರೆ ಸ್ಟೀರಿಯೋ ಧ್ವನಿಯೊಂದಿಗೆ ಸಂಗೀತ ಆಲಿಸಬಹುದು. ಒಂದನ್ನೇ ಇರಿಸಿಕೊಂಡರೆ ಮೋನೋ ಸ್ಪೀಕರ್ ಕೆಲಸ ಮಾಡುತ್ತದೆ ಮತ್ತು ಕರೆಗಳಿಗೆ ಉತ್ತರಿಸಬಹುದು.
ದ್ವಿಚಕ್ರದಲ್ಲಿ ಸಾಗುವವರು ಹೆಲ್ಮೆಟ್ ಧರಿಸಬೇಕಾಗಿರುವುದರಿಂದ, ಕಿವಿಯೊಳಗೆ ಕೂರುವ ಇಯರ್‌ಬಡ್ಸ್ ಮೂಲಕ ಕರೆ ಸ್ವೀಕರಿಸಲು ಬಟನ್ ಅದುಮುವುದು ಕಷ್ಟ. ಚತುಶ್ಚಕ್ರ ವಾಹನಗಳಲ್ಲಾದರೆ ಈ ಸಮಸ್ಯೆ ಇರುವುದಿಲ್ಲ.
ಬೆಲೆ
ಆ್ಯಪಲ್ ಏರ್ ಪಾಡ್‌ಗಳ ಬೆಲೆಗಿಂತ ಸುಮಾರು ಹತ್ತು ಪಟ್ಟು ಕಡಿಮೆಯಿರುವ ಮೈಕ್ರೋಮ್ಯಾಕ್ಸ್ ಏರ್ ಫಂಕ್ 1 ‘ಪ್ರೊ’ ಮಾದರಿಯ ಬೆಲೆ ₹2499. ಇದರ ಸಾಮಾನ್ಯ ಆವೃತ್ತಿ (ಏರ್ ಫಂಕ್ 1) ಬೆಲೆ ಕೇವಲ ₹1299 ಆಗಿದ್ದು, ವಿನ್ಯಾಸದಲ್ಲಿ ಕೊಂಚ ವ್ಯತ್ಯಾಸದ ಜೊತೆಗೆ ಪುರುಷ ಅಥವಾ ಸ್ತ್ರೀ ಧ್ವನಿ ಬದಲಾವಣೆಯ ವೈಶಿಷ್ಟ್ಯವಿದೆ.
ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್ ಇರುವ ಬಹುನಿರೀಕ್ಷಿತ…
ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…
ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.
ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…
Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.
ಹಾಡುಗಾರಿಕೆ, ಚೆಂಡೆ-ಮದ್ದಳೆಯ ಬಿಡಿತ-ಮುಕ್ತಾಯಗಳ ಬಳಿಕ, ಬಂದಿದ್ದ ಗಣ್ಯರು, ಒಂದೊಂದು ಹಾಡಿನಲ್ಲಿ ಅಡಕವಾಗಿರುವ ಮಂತ್ರ ಮಾಂಗಲ್ಯದ ಪ್ರತಿಜ್ಞಾಗುಚ್ಛವನ್ನು ವಿವರಿಸಿ, ವಧು-ವರರಿಗೆ ಬೋಧಿಸಿದರು