ಹಲೋ 2019, ನಾನು ಒಳಗೆ ಬರಲೇ?

ಅವಿನಾಶ್ ಬಿ.

“ಎಲ್ಲರಿಗೂ ಹಲೋ!
ನಾನು ಇಂಗ್ಲಿಷ್ ಕೃತಕ ಬುದ್ಧಿಮತ್ತೆಯ ಆ್ಯಂಕರ್.
ಇದು ಝಿನುವಾ ಸುದ್ದಿ ಸಂಸ್ಥೆಯಲ್ಲಿ ನನ್ನ ಚೊಚ್ಚಲ ದಿನ.
ನನ್ನ ಧ್ವನಿ ಮತ್ತು ರೂಪವು ಸುದ್ದಿ ಸಂಸ್ಥೆಯ ನಿಜವಾದ ವಾರ್ತಾವಾಚಕ ಝಾಂಗ್ ಜಾವೊರನ್ನು ಹೋಲುತ್ತದೆ”

ಹೀಗಂತ 2018ರ ನವೆಂಬರ್ 27ರಂದು ಚೀನಾದ ವುಝೆನ್‌ನಲ್ಲಿ ನಡೆದ ವಿಶ್ವ ಇಂಟರ್ನೆಟ್ ಸಮಾವೇಶದಲ್ಲಿ ಆ ದೇಶದ ಝಿನುವಾ (Xinhua) ಸುದ್ದಿ ಸಂಸ್ಥೆಯು ಸುದ್ದಿ ಓದುವ ಹೊಸ ಆ್ಯಂಕರ್ ಅನ್ನು ಪರಿಚಯಿಸಿದಾಗ, ಇಡೀ ಜಗತ್ತೇ ಅಚ್ಚರಿಪಟ್ಟರೆ, ಮಾಧ್ಯಮ ಲೋಕವೂ ಬೆರಗಾಗಿಬಿಟ್ಟಿತು. ವಾಹಿನಿ ಲೋಕದ ವಾರ್ತಾವಾಚಕ ವಲಯದಲ್ಲಿ ಇದು ತಲ್ಲಣವನ್ನೂ ಸೃಷ್ಟಿಸಿದ್ದು ಸುಳ್ಳಲ್ಲ.

ಪಕ್ಕಾ ಮನುಷ್ಯನನ್ನೇ ಹೋಲುವ ರೀತಿಯಲ್ಲಿ ರೋಬೋ ಒಂದು ಎದುರಿನ ಸ್ಕ್ರೀನ್ ಮೇಲೆ ಹಾದು ಹೋಗುತ್ತಿದ್ದ ಸುದ್ದಿಯನ್ನು ಓದಿದ್ದು ಈ ಯಂತ್ರಮಾನವ. ಅಮೆರಿಕದ ನ್ಯೂಜೆರ್ಸಿಯಿಂದ ಕಳೆದ ವಾರ, ಗಣಿತಕ್ಕೆ ಉತ್ತರ ಹೇಳಲು, ತನ್ನ ಸ್ವಂತ ಮೆದುಳು ಉಪಯೋಗಿಸದೆ, ಸ್ಮಾರ್ಟ್ ಸಾಧನದ ಸಹಾಯ ಪಡೆದ ಮಗುವಿನ ಕಥೆಯೊಂದು ಸುದ್ದಿ ಮಾಡಿತು. ನಮ್ಮಲ್ಲೂ ಕೆಲವರಾದರೂ ಇದನ್ನು ಗಮನಿಸಿರಬಹುದು. ಅಮ್ಮ ಕೇಳಿದ ಪ್ರಶ್ನೆಗೆ, ‘ಅಲೆಕ್ಸಾ, 5 ಮೈನಸ್ 2 ಎಷ್ಟು’ ಅಂತ ಕೇಳಿ, ಆ ಸ್ಮಾರ್ಟ್ ಸಾಧನದಿಂದ ಸರಿಯುತ್ತರ ಪಡೆದುಕೊಂಡು, ಅಮ್ಮನಿಗೆ ಒಪ್ಪಿಸುವ ಮಕ್ಕಳು ಕೂಡ ಸ್ಮಾರ್ಟ್ ಆಗುತ್ತಿದ್ದಾರೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಅಥವಾ ಕೃತಕ ಬುದ್ಧಿಮತ್ತೆ ಎಂಬ ವಿನೂತನವೂ, ನಿತ್ಯನೂತನವೂ ಆದ ತಂತ್ರಜ್ಞಾನವು ನಮ್ಮ ಜಗತ್ತನ್ನು ಆವರಿಸಿಕೊಳ್ಳುವ ಬಗೆಯಿದು.

ಅದಿರಲಿ, ಕಂಪ್ಯೂಟರ್ ಹಾಗೂ ಮೊಬೈಲ್ ಫೋನ್‌ಗಳಲ್ಲಿ ನಾಳೆ ಸೋಮವಾರ ಮಧ್ಯರಾತ್ರಿಯ ಹೊತ್ತಿಗೆ, ದಿನಾಂಕದ ಜತೆಗೆ ಇಸವಿಯೂ ಬದಲಾಗುತ್ತದೆ. ಇದು ನಾವು-ನೀವು ಕಷ್ಟಪಟ್ಟು ಮಾಡುವ ಸಂಗತಿಯೇ? ಅಲ್ಲ. ಕಂಪ್ಯೂಟರ್ ಮತ್ತು ಅದರ ಕಿರು ರೂಪವಾದ ಮೊಬೈಲ್ ಫೋನೆಂಬ ಡಿಜಿಟಲ್ ಸಾಧನವು ತಾನೇ ತಾನಾಗಿ ಮಾಡಿಕೊಳ್ಳುತ್ತಿರುವ ಬದಲಾವಣೆ. ಈ ರೀತಿ ಅದಕ್ಕೆ ಗೊತ್ತಾಗುವುದಾದರೂ ಹೇಗೆ? ಕಂಪ್ಯೂಟರಿನ ಕೃತಕ ಮೆದುಳಿಗೆ ನಾವು ಪ್ರೋಗ್ರಾಮಿಂಗ್ ಮೂಲಕ ದಿನಾಂಕ ಮತ್ತು ಸಮಯದ ಕುರಿತ ದತ್ತಾಂಶವನ್ನು (ಡೇಟಾ) ಮೊದಲೇ ಊಡಿಸಿರುತ್ತೇವೆ. ಅದನ್ನು ಈ ಕಂಪ್ಯೂಟರೆಂಬ ಸಿಸ್ಟಮ್ಮು ಚಾಚೂತಪ್ಪದೆ ಪಾಲಿಸುತ್ತಾ, ಅನುಸರಿಸುತ್ತಾ ಇರುತ್ತದೆ. ಇದು ಮೆಶಿನ್ ಲರ್ನಿಂಗ್ ಅಥವಾ ಯಾಂತ್ರಿಕ ಕಲಿಕೆ (ML). ಇದು ಈಗ ಜನ ಸಾಮಾನ್ಯರವರೆಗೆ ತಲುಪಿರುವ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI – ಕೃತಕ ಬುದ್ಧಿಮತ್ತೆ) ಎಂಬ ತಂತ್ರಜ್ಞಾನದ ಒಂದು ಅಂಗ. ಊಡಿಸಿದ ದತ್ತಾಂಶದ ಆಧಾರದಲ್ಲಿ ಯಂತ್ರವೇ ಕಲಿತುಕೊಳ್ಳುತ್ತಾ ಮುಂದೆ ಸಾಗುವುದು ಮೆಶಿನ್ ಲರ್ನಿಂಗ್.

ತಾನಾಗಿ ಮಾನವನಂತೆ ಚಿಂತಿಸಿ, ಅರ್ಥ ಮಾಡಿಕೊಂಡು ಸಮಸ್ಯಾ ಪರಿಹಾರ ನೀಡುವುದು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್. ಪರದೆ ಮುಂದೆ ಸ್ಕ್ರಾಲ್ ಆಗುತ್ತಿದ್ದ ಪದಗುಚ್ಛಗಳನ್ನು ಆ ಯಂತ್ರಮಾನವ ಓದುತ್ತಾ ಹೋಗುತ್ತಿತ್ತು. ನಾವೇನೇ ಬರೆದರೂ ಓದುವ ಮಟ್ಟಿಗೆ ಅದು ಕೃತಕ ಜಾಣ್ಮೆಯನ್ನು ಬೆಳೆಸಿಕೊಂಡಿತ್ತು. ಜನಸಾಮಾನ್ಯರು ಕೂಡ ಆರ್ಟಿಫಿಶಿಯಲ್ ಇಂಟೆಲಿಜನ್ಸನ್ನೇ ಬಳಸುತ್ತಿದ್ದೇವೆ. ಹೇಗೆ? ಮೊಬೈಲ್ ಫೋನ್‌ನಲ್ಲಿ ಅಥವಾ ಗೂಗಲ್ ಸರ್ಚ್ ಬಾಕ್ಸ್‌ನಲ್ಲಿ ಟೈಪ್ ಮಾಡುತ್ತೇವೆ. ‘ಕನ್’ ಅಂತ ಬರೆದ ತಕ್ಷಣ ಅದು ನಿಮಗೆ ‘ಕನ್ನಡ’ ಅನ್ನೋ ಪದವನ್ನು ಎದ್ದುಗಾಣಿಸುತ್ತದೆ. ಕೆಳಗೆ ಕನ್ನಡ ವ್ಯಾಕರಣ, ಕನ್ನಡ ಮೂವಿ, ಕನ್ನಡ ಹಾಡುಗಳು…. ಹೀಗೆ ಸಾಲು ಸಾಲು ಸಲಹೆಗಳು ನಿಮ್ಮ ಮುಂದೆ ಧುತ್ತನೇ ಕಾಣಿಸಿಕೊಂಡು, ನಮ್ಮ ಹುಡುಕಾಟವನ್ನು ಸುಲಭಗೊಳಿಸುತ್ತದೆ. ಮೆಶಿನ್ ಲರ್ನಿಂಗ್ ಮೂಲಕ ಗೂಗಲ್ ತನ್ನ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಅನ್ನು ಸುಧಾರಿಸಿಕೊಂಡಿದೆ. ನಮ್ಮೆಲ್ಲ ಚಟುವಟಿಕೆಗಳ ಜಾಡು ಹಿಡಿದು, ಈ ವ್ಯಕ್ತಿಗೆ ಇದು ಇಷ್ಟ ಅಂತ ಅರಿತುಕೊಂಡು, ಅದಕ್ಕೆ ಪೂರಕವಾದುದನ್ನೇ ತೋರಿಸುತ್ತಿರುತ್ತದೆ.

ಬಹುಶಃ ಆಂಡ್ರಾಯ್ಡ್ ಫೋನ್ ಹೊಂದಿರುವವರಿಗೆ ಮತ್ತೊಂದು ವಿಚಾರವು ಅನುಭವಕ್ಕೆ ಬಂದಿರಬಹುದು. ಫೋನ್‌ನಲ್ಲಿ ಬಂದಿರುವ ಯಾವುದಾದರೂ ನೋಟಿಫಿಕೇಶನ್ ಅನ್ನು ನಾವು ಸ್ವೈಪ್ ಮಾಡುವ (ಬೆರಳಿನಿಂದ ಎಡ ಅಥವಾ ಬಲಕ್ಕೆ ತಳ್ಳುವ) ಮೂಲಕ ಮರೆಯಾಗಿಸುತ್ತೇವೆಯಲ್ಲವೇ? ಆಗ ‘ನಿಮಗೆ ಈ ನೋಟಿಫಿಕೇಶನ್ ಇಷ್ಟವಾಯಿತೇ? ಇಂಥವನ್ನು ತೋರಿಸಬೇಕೇ, ಬೇಡವೇ?’ ಅಂತ ಗೂಗಲ್ ನಮ್ಮನ್ನು ಕೇಳುತ್ತದೆ. ಕೇಳಿ ಕೇಳಿ ನಮ್ಮ ಇಷ್ಟಾನಿಷ್ಟಗಳನ್ನು ತಿಳಿದುಕೊಳ್ಳುತ್ತಾ ಹೋಗುತ್ತದೆ.

ಇದು ಕೃತಕ ಬುದ್ಧಿಮತ್ತೆಯ ಕಾಲ. ಮಾನವನನ್ನು ಮೀರಿಸುವ ಈ ತಂತ್ರಜ್ಞಾನ 2018ರಲ್ಲಿ ಈಗಾಗಲೇ ನಮ್ಮ ಮೊಬೈಲ್ ಫೋನ್‌ಗಳಲ್ಲಿ ಬಂದು ಕುಳಿತುಕೊಂಡುಬಿಟ್ಟಿದೆ. ಹೊಸ ವರ್ಷ ಹಾಗೂ ಮುಂದಿನ ವರ್ಷಗಳಲ್ಲಿ ಈ ತಂತ್ರಜ್ಞಾನವು ಪ್ರತಿಕ್ಷಣವೂ ಜನ ಸಾಮಾನ್ಯರ ಒಡನಾಡಿಯಾಗುವ ಕಾಲ ಬಹಳ ದೂರವಿಲ್ಲ. ಈಗಾಗಲೇ ಆರೋಗ್ಯ ಕ್ಷೇತ್ರದಲ್ಲಿಯೂ ಇದು ಸುದ್ದಿ ಮಾಡುತ್ತಿದೆ. ಇತ್ತೀಚೆಗೆ ಸ್ತನ ಕ್ಯಾನ್ಸರ್‌ನ ಸಾಧ್ಯತೆಯನ್ನು ಪತ್ತೆ ಹಚ್ಚಬಲ್ಲ ಮ್ಯಾಮೋ ಅಸಿಸ್ಟ್ ಎಂಬ ತಂತ್ರಜ್ಞಾನವನ್ನು ಬೆಂಗಳೂರಿನಲ್ಲಿ ಪರಿಚಯಿಸಲಾಯಿತು. ಮ್ಯಾಮೋಗ್ರಾಮ್ ಸೇರಿದಂತೆ ಬಾಧಿತ ವ್ಯಕ್ತಿಯ ವೈದ್ಯಕೀಯ ದಾಖಸಲೆಗಳನ್ನು ವಿಶ್ಲೇಷಿಸಿ, ಕ್ಯಾನ್ಸರ್ ಅನ್ನು ಆರಂಭಿಕ ಅವಧಿಯಲ್ಲೇ ಪತ್ತೆ ಮಾಡಲು ಮ್ಯಾಮೋ ಅಸಿಸ್ಟ್ ನೆರವಾಗುತ್ತದೆ. ಈ ತಂತ್ರಜ್ಞಾನವು ಬೆಳೆದುಬಿಟ್ಟರೆ ರೇಡಿಯಾಲಜಿಸ್ಟ್‌ಗಳ ಕೆಲಸ ಹೋಗುತ್ತದೆ ಎಂಬ ಆತಂಕವೂ ಒಂದೆಡೆ ವ್ಯಕ್ತವಾಯಿತು.

ಅದೇ ರೀತಿ, ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಮಹಿಳೆಯೊಬ್ಬಳ ವೈದ್ಯಕೀಯ ವರದಿ, ಆರೋಗ್ಯದ ಚರಿತ್ರೆ, ಲಿಂಗ, ವಯಸ್ಸು, ದೈಹಿಕ ಸ್ಥಿತಿಗತಿಯೆಲ್ಲವನ್ನೂ ವಿಶ್ಲೇಷಿಸಿದ ಗೂಗಲ್, ಆಕೆಯ ಸಾವಿನ ದಿನವನ್ನೂ ನಿಖರವಾಗಿ ಹೇಳಿತ್ತು. ಗೂಗಲ್‌ನ ಮೆಡಿಕಲ್ ಬ್ರೈನ್ ಟೀಮ್‌ನ ಚಮತ್ಕಾರವಿದು. ಕೃತಕ ಬುದ್ಧಿಮತ್ತೆಯು ಬೃಹದಾಕಾರವಾಗಿ ಬೆಳೆಯುತ್ತಿರುವ ಬಗೆಯನ್ನು ನಾವು ಇದರಿಂದ ಊಹಿಸಿಕೊಳ್ಳಬಹುದು.

ಮಾನವನ ಬುದ್ಧಿವಂತಿಕೆಯನ್ನು ಆರ್ಜಿಸಿಕೊಳ್ಳುವ ಯಂತ್ರಗಳು ಮಾನವನ ಉದ್ಯೋಗವನ್ನೇ ಕಸಿದುಕೊಳ್ಳಲಿವೆಯೇ? ಆಟೋಮೇಶನ್ ಅಥವಾ ಸ್ವಯಂಚಾಲಿತ ತಂತ್ರಜ್ಞಾನದಿಂದಾಗಿ ಕಸ್ಟಮರ್ ಕೇರ್‌ನಲ್ಲಿ (ಗ್ರಾಹಕ ಸೇವಾ ಸಂಪರ್ಕ ಕೇಂದ್ರಗಳು) ಉದ್ಯೋಗ ಕಡಿಮೆಯಾಗಿದೆ. ಗ್ರಾಹಕ ಸೇವಾ ಕೇಂದ್ರಕ್ಕೆ ಕರೆ ಮಾಡಿದರೆ, ಒಂದನ್ನು ಒತ್ತಿ, ಎರಡನ್ನು ಒತ್ತಿ ಎಂಬ ಪೂರ್ವ-ದಾಖಲಿತ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದೇವೆ. ಗೂಗಲ್ ಟ್ರಾನ್ಸ್‌ಲೇಟ್ ಎಂಬೊಂದು ಆನ್‌ಲೈನ್ ಟೂಲ್ ಮೂಲಕ, ಜಗತ್ತಿನ ಯಾವುದೇ ಭಾಷೆಯನ್ನೂ ನಮ್ಮ ಭಾಷೆಗೆ ನಾವು ಅನುವಾದಿಸಿಕೊಂಡು, ಅರ್ಥ ಮಾಡಿಕೊಳ್ಳಬಹುದು. ನಮ್ಮ ಕೈಯಲ್ಲಿರುವ ಆಂಡ್ರಾಯ್ಡ್ ಸಾಧನದ ಮೂಲಕವೇ, ‘ಒಕೆ ಗೂಗಲ್, ಕಾಲ್ ಅಮ್ಮ’ ಅಂತ ಹೇಳಿದರೆ, ಅಮ್ಮನ ಹೆಸರಿನಲ್ಲಿ ಸೇವ್ ಮಾಡಿಟ್ಟುಕೊಂಡ ಫೋನ್‌ಗೆ ನಮ್ಮ ಫೋನ್ ಕರೆ ಮಾಡಿಬಿಡುತ್ತದೆ. ಅಥವಾ ‘ಒಕೆ ಗೂಗಲ್, ಸಮೀಪದಲ್ಲಿ ಒಳ್ಳೆಯ ಹೋಟೆಲ್ ಯಾವುದಿದೆ’ ಅಂತ ಕೇಳಿದರೆ, ನೀವು ಇರುವ ಸ್ಥಳದಲ್ಲಿರುವ ಹೋಟೆಲ್‌ಗಳ ಪಟ್ಟಿಯನ್ನು ನಮ್ಮ ಮೊಬೈಲ್ ಸ್ಕ್ರೀನ್ ಮೇಲೆ ತೋರಿಸುತ್ತದೆ. ಈಗಾಗಲೇ ಸ್ವಯಂಚಾಲಿತ ಕಾರುಗಳ ತಯಾರಿಯ ಮಾತುಗಳು ಕೇಳಿಬರುತ್ತಿವೆ. ಯಾಂತ್ರಿಕ ಜಗತ್ತಿನಲ್ಲಿ ಭಾವನೆಗಳಿಗೆ ಬೆಲೆ ಇಲ್ಲ ಎಂಬ ಮಾತುಗಳು ಕೇಳಿಬರುತ್ತಿರುವ ಮಧ್ಯೆಯೇ, ನಮ್ಮ ಭಾವನೆಗಳನ್ನು ಅರ್ಥಮಾಡಿಕೊಳ್ಳಬಲ್ಲ ಮತ್ತು ನಮಗೆ ಗೆಳೆಯನಾಗಬಲ್ಲ ರೋಬೋಗಳು ಸಿದ್ಧವಾಗುತ್ತಿವೆ. ಕೈಯಲ್ಲಿ ನಾವು ಹೇಳಿದ್ದನ್ನು ಕೇಳುವ ಗೂಗಲ್ ಅಸಿಸ್ಟೆಂಟ್, ಸಿರಿ, ಅಲೆಕ್ಸಾ ಹಾಗೂ ಕೋರ್ಟನಾ ಎಂಬ ಕಿರು ತಂತ್ರಾಂಶಗಳಿವೆ. ಆಧುನಿಕ ಗೇಮ್ಸ್ ಕೂಡ ಇದೇ ಕೃತಕ ಬುದ್ಧಿಮತ್ತೆಯ ಶಿಶುಗಳು. ಜತೆಗೆ ಫೋಟೋದಲ್ಲಿರುವ ಅಕ್ಷರಗಳನ್ನು ಬೇರ್ಪಡಿಸುವ ಒಸಿಆರ್, ಮಾತನ್ನು ಅಕ್ಷರಕ್ಕಿಳಿಯುವ ತಂತ್ರಜ್ಞಾನಗಳೂ ಬಂದಿವೆ.

ಇವೆಲ್ಲವೂ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಮೆಶಿನ್ ಲರ್ನಿಂಗ್ ಮತ್ತು ಅದರ ಸುಧಾರಿತ ರೂಪವಾಗಿರುವ ಡೀಪ್ ಲರ್ನಿಂಗ್ ಎಂಬ ತಂತ್ರಜ್ಞಾನಗಳು ನಮ್ಮನ್ನು ಆವರಿಸಿಕೊಳ್ಳುತ್ತಿರುವ ಬಗೆ. ಹೊಸ ವರ್ಷದಲ್ಲಿ ಈ ತಂತ್ರಜ್ಞಾನಗಳದ್ದೇ ಮೇಲುಗೈಯಾಗಲಿದೆ, ಸಂಕೀರ್ಣ ಮಾನವೀಯ ಶ್ರಮ ಮತ್ತಷ್ಟು ಸರಳವಾಗಲಿದೆ. ಈ ಕ್ಷೇತ್ರದ ಕಲಿಕೆಯಲ್ಲಿ, ಸಂಶೋಧನೆಯಲ್ಲಿ ಸಾಕಷ್ಟು ಅವಕಾಶಗಳೂ ತೆರೆದುಕೊಳ್ಳಲಿವೆ. ಟೆಲಿಕಾಂ, ಹಣಕಾಸು, ಟೆಕ್ನಾಲಜಿ, ಆರೋಗ್ಯ ಕ್ಷೇತ್ರಗಳಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಈಗಾಗಲೇ ಹೆಜ್ಜೆಯಿಟ್ಟಿದೆ.

ನಾವೇ ಸೃಷ್ಟಿಸಿದ ತಂತ್ರಜ್ಞಾನವು ನಮ್ಮನ್ನೇ ಬದಿಗೆ ತಳ್ಳುವಷ್ಟರ ಮಟ್ಟಿಗೆ ಮುಂದುವರಿಯುವುದೇ? ವರ ಕೊಟ್ಟ ಈಶ್ವರನನ್ನೇ ಸುಡಲು ಬಂದ ಭಸ್ಮಾಸುರನಂತೆ ಮೆರೆಯುವುದೇ? ಈ ಆತಂಕ ಜಗತ್ತನ್ನೇ ಕಾಡಿದ್ದು ಸುಳ್ಳಲ್ಲ. ಆದರೆ, ಈ ಆತಂಕವೇ ಬೇಕಾಗಿಲ್ಲ ಎಂಬುದು ಇತ್ತೀಚೆಗೆ ಸಮೀಕ್ಷೆಯೊಂದರಿಂದ ವ್ಯಕ್ತವಾದ ಅಂಶ. ಅಮೆರಿಕದಲ್ಲಿ ಮೆಟ್‌ಲೈಫ್ ನಡೆಸಿದ ಅಧ್ಯಯನ ಸಮೀಕ್ಷೆಯೊಂದರಲ್ಲಿ ಪಾಲ್ಗೊಂಡ ಶೇ.56 ಮಂದಿ, ‘ಉದ್ಯೋಗ ಅಭದ್ರತೆಯ ಬಗ್ಗೆ ಆತಂಕವಿಲ್ಲ’ ಎಂದು ಅಭಿಪ್ರಾಯಪಟ್ಟರೆ, ಕೇವಲ ಶೇ.20 ಮಂದಿ ಮಾತ್ರ ಭಯ ವ್ಯಕ್ತಪಡಿಸಿದ್ದಾರೆ.

ಪ್ರತಿಯೊಂದಕ್ಕೂ ಗೂಗಲ್ಲನ್ನು ಅವಲಂಬಿಸಿದರೆ, ನಮ್ಮ ಮೆದುಳಿಗೆ ಕೆಲಸ ಇರುವುದಿಲ್ಲ. ಚಾಕುವನ್ನು ಹರಿತ ಮಾಡಿದರಷ್ಟೇ ತರಕಾರಿ ಸುಲಭವಾಗಿ ಕತ್ತರಿಸಬಹುದು, ಗೂಗಲ್ ಅವಲಂಬನೆ ಕಡಿಮೆಗೊಳಿಸಿ ಮೆದುಳನ್ನು ಬಳಸಿದರಷ್ಟೇ ನವೀನ ಆವಿಷ್ಕಾರಗಳು ರೂಪುಗೊಳ್ಳಬಹುದು. ಈ ನಿಟ್ಟಿನಲ್ಲಿ, ಯಂತ್ರಗಳು ನಮ್ಮನ್ನು ಮೀರಿಸುವ ಮೊದಲು ನಮ್ಮ ಮೆದುಳನ್ನು ಮತ್ತಷ್ಟು ಚುರುಕುಗೊಳಿಸಬೇಕಾದ ಅನಿವಾರ್ಯತೆಯಿದೆ ಎಂಬುದನ್ನಂತೂ ನಿರಾಕರಿಸಲಾಗದು.

ಬದಲಾವಣೆ ಜಗದ ನಿಯಮ. ಬದಲಾವಣೆಗೆ ಒಗ್ಗಿಕೊಳ್ಳುತ್ತಾ ಪ್ರಗತಿ ಸಾಧಿಸಬಹುದು. ಹಿಂದೆ ವಿಜ್ಞಾನಿ ಚಾರ್ಲ್ಸ್ ಡಾರ್ವಿನ್ ಹೇಳಿದ್ದು, Survival of the Fittest ಅಂತ. ಆದರೆ, ಇಂಟರ್ನೆಟ್‌ನಲ್ಲಿ ಹರಿದಾಡುತ್ತಿರುವ ಮತ್ತೊಂದು ಹೇಳಿಕೆ ಈಗ ಪ್ರಸ್ತುತವಾಗುತ್ತದೆ:

It is not the strongest of the species that survives,
nor the most intelligent that survives.
It is the one that is most adaptable to change!

ವಿಜಯ ಕರ್ನಾಟಕ ಸಾಪ್ತಾಹಿಕದಲ್ಲಿ ಅಗ್ರ ಲೇಖನ

Avinash B

Avinash B. Tech Writer, Columnist, Working as Online media Journalist for more than two decades. Passionate about Technology and Gadgets. Yakshagana and Music are passion.

Recent Posts

ಚಳಿಯಲ್ಲಿ ಬಣ್ಣ ಬದಲಾಯಿಸುವ Realme 14 Pro ಸರಣಿ ಫೋನ್ ಬಿಡುಗಡೆ

ರಿಯಲ್‌ಮಿ 14 ಪ್ರೊ ಸರಣಿಯ 5ಜಿ ಫೋನ್, ಡ್ಯಾನಿಶ್ ಡಿಸೈನ್ ಸ್ಟುಡಿಯೋ ವ್ಯಾಲರ್ ಡಿಸೈನರ್ಸ್ ಮೂಲಕ ರೂಪುಗೊಂಡ ವಿಶ್ವದ ಮೊದಲ…

5 days ago

ಎಐ ವೈಶಿಷ್ಟ್ಯಗಳ realme GT 7 Pro ಬಿಡುಗಡೆ: ಬೆಲೆ ಎಷ್ಟು? ವೈಶಿಷ್ಟ್ಯಗಳೇನು? ಇಲ್ಲಿದೆ ಪೂರ್ಣ ಮಾಹಿತಿ

ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್‌ ಇರುವ ಬಹುನಿರೀಕ್ಷಿತ…

2 months ago

ರಿಯಲ್‌ಮಿ ನಾರ್ಜೋ 70 ಟರ್ಬೊ 5 ಜಿ, ರಿಯಲ್‌ಮಿ ಬಡ್ಸ್ ಎನ್‌1 ಬಿಡುಗಡೆ: ಬೆಲೆ, ವೈಶಿಷ್ಟ್ಯ ತಿಳಿಯಿರಿ

ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…

4 months ago

ಓದುವಿಕೆ, ಕಲಿಕೆ ಉತ್ತೇಜನಕ್ಕೆ ‘ರೀಡ್-ಅ-ಥಾನ್’: ದಾಖಲೆಯ ಗುರಿ

ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.

4 months ago

Realme 13 +, Realme 13 5ಜಿ ಫೋನ್ ಬಿಡುಗಡೆ: ವೇಗದ ಫೋನ್‌ನ ವೈಶಿಷ್ಟ್ಯಗಳು, ಬೆಲೆ ಇಲ್ಲಿ ತಿಳಿಯಿರಿ

ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…

5 months ago

e-ಯುಗದ ತನಿಖಾ ಪತ್ರಿಕೋದ್ಯಮ: ಫ್ಯಾಕ್ಟ್ ಚೆಕ್

Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.

6 months ago