ರಂಗಮಂಟಪವಿಲ್ಲದಿದ್ದರೇನಂತೆ, ‘ಮಾತಿನ ಮಂಟಪ’ಕ್ಕೆ ಬಂದಿದ್ದಾರೆ ಯಕ್ಷಗಾನ ಕಲಾವಿದರು

ಯಕ್ಷಗಾನ ಅಕಾಡೆಮಿಯ ಕಲಾವಿದರೊಂದಿಗೆ ಆನ್‌ಲೈನ್ ಸಂವಾದಕ್ಕೆ 50ರ ಗಡಿ ತಲುಪಿದಾಗ ಬರೆದ ಲೇಖನ

ಹೊತ್ತು ಮುಳುಗುವ ಹೊತ್ತಿನಲ್ಲಿ ರಂಗ ಮಂಟಪದಲ್ಲಿ ಮಿಂಚಿ ಮೆರೆದಾಡಬೇಕಿದ್ದ ಯಕ್ಷಗಾನ ಕಲಾವಿದರಿಗೆ ದುಡಿಮೆಯಿಲ್ಲದೆ ಈಗ ಮನೆಯಲ್ಲೇ ಕುಳಿತಿರಬೇಕಾದ ಪರಿಸ್ಥಿತಿ. ಇಂಥ ಕಷ್ಟಕಾಲದಲ್ಲಿ ರಂಗ ಮಂಟಪದ ಬದಲು ಅವರನ್ನು ಮಾತಿನ ಮಂಟಪದಲ್ಲಿ ಕೂರಿಸಿ ಅವರ ನೊಂದ ಮನಸ್ಸುಗಳಿಗೊಂದಿಷ್ಟು ಆತ್ಮವಿಶ್ವಾಸ ತುಂಬಿದರೆ ಹೇಗೆ? ಜೊತೆಜೊತೆಗೇ ಯಕ್ಷಗಾನವು ಬೆಳೆದು ಬಂದ ಬಗೆ, ಅದರೊಳಗಿನ ಒಳಿತು-ಕೆಡುಕುಗಳು, ಮೌಲ್ಯವರ್ಧನೆಯ ಐಡಿಯಾಗಳು – ಇವುಗಳನ್ನೆಲ್ಲಾ ಅನುಭವಿಗಳ ಮನದ ಮೂಲೆಯಿಂದ ಬಗೆದು ತೆಗೆದು ದಾಖಲಿಸಿದರೆ ಹೇಗೆ?

ಕೋವಿಡ್ ಸಂಕಷ್ಟದ ಅನಿವಾರ್ಯತೆಗೆ ಸಿಲುಕಿ ಯಕ್ಷಗಾನ ಮೇಳಗಳು ತಿರುಗಾಟ ನಿಲ್ಲಿಸಬೇಕಾದ ಸಂದರ್ಭದಲ್ಲಿ ಇಂಥ ಯೋಚನೆಯೊಂದಿಗೆ ತಂತ್ರಜ್ಞಾನವನ್ನು ಸದುಪಯೋಗಪಡಿಸಿಕೊಂಡ ಕರ್ನಾಟಕ ಯಕ್ಷಗಾನ ಅಕಾಡೆಮಿಯು, ಪ್ರತಿದಿನ ಸಂಜೆ ಆನ್‌ಲೈನ್ ಮೂಲಕವೇ ಕಲಾವಿದರನ್ನು ಮಾತಿನ ಮಂಟಪಕ್ಕೆಳೆದು ಮಾತನಾಡಿಸಲಾರಂಭಿಸಿತು. ಅವರ ಸಂಕಷ್ಟವನ್ನು, ಅವರ ಸಾಧನೆಗಳನ್ನು, ಯಾರಿಗೂ ಗೊತ್ತಿಲ್ಲದ ವಿಚಾರಗಳನ್ನು ಹಂಚಿಕೊಳ್ಳಲು ವೇದಿಕೆಯೊದಗಿಸಿತು. ‘ನಮ್ಮನ್ನು ಯಾರೂ ಕೇಳುವವರಿಲ್ಲವಲ್ಲಾ’ ಎಂಬ ಕೊರಗು ನಿವಾರಿಸಿತು. ಈ ಫೇಸ್‌ಬುಕ್ ಲೈವ್ ಅಭಿಯಾನಕ್ಕೆ ಇಂದು (ಅ.17) 50ನೇ ಸಂಚಿಕೆಯ ಸಂಭ್ರಮ.

‘ಕೋವಿಡ್ ಇದೆ, ಏನೂ ಮಾಡಲಾಗುವುದಿಲ್ಲ’ ಅಂತಂದುಕೊಂಡು ಸುಮ್ಮನೇ ಕೈಕಟ್ಟಿ ಕುಳಿತುಕೊಳ್ಳದ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ಪ್ರೊ.ಎಂ.ಎ.ಹೆಗಡೆ ಅವರು ಇದನ್ನೇ ಸದುಪಯೋಗಪಡಿಸಿಕೊಳ್ಳಲು ನಿರ್ಧರಿಸಿದರು. ಇದರ ಫಲವಾಗಿ, ದಿನಕ್ಕೊಬ್ಬ ವೃತ್ತಿಪರ ಹಾಗೂ ಅನುಭವಿ ನಿವೃತ್ತ ಕಲಾವಿದರನ್ನು ಆನ್‌ಲೈನ್‌ಗೆ ಕರೆದು, ಅವರನ್ನು ಯಕ್ಷಗಾನ ಅಭಿಮಾನಿಗಳ ಮುಂದೆ ಮಾತನಾಡಿಸಿ, ಅವರಿಂದ ಅನುಭವದ ಬುತ್ತಿಯನ್ನು ಬಿಚ್ಚಿಸಿ, ಅವರ ಕಷ್ಟಗಳಿಗೆ ಕಿವಿಯಾಗಿ, ಕುಂದಿ ಹೋದ ಕಲಾವಿದರ ಮನಸ್ಸುಗಳಿಗೆ ಆತ್ಮವಿಶ್ವಾಸ ತುಂಬುವುದರೊಂದಿಗೆ, ಕೊಂಚ ಮಟ್ಟಿಗಾದರೂ ಆಸರೆಯಾಗಬಲ್ಲ ಕಾರ್ಯವನ್ನು ಮಾಡಿದೆ ಅಕಾಡೆಮಿ.

ಈ ಮಾತಿನ ಮಂಟಪದಲ್ಲಿ ಅಕಾಡೆಮಿ ಅಧ್ಯಕ್ಷರಲ್ಲದೆ ಸದಸ್ಯರು ಕೂಡ ಕಲಾವಿದರ ಮಾತಿಗೆ ಕಿವಿಯಾಗುತ್ತಾರೆ. ಮೇಳಗಳು ಆರಂಭವಾಗಿದ್ದಿದ್ದರೆ ಸಂಜೆ 7 ಗಂಟೆಯಾಯಿತೆಂದರೆ ರಂಗಮಂಟಪವು ಜಗಮಗಿಸಲಾರಂಭಿಸುವ ಹೊತ್ತು. ಆ ಹೊತ್ತಿಗೇ ಕಲಾವಿದರು ಯಕ್ಷಗಾನ ಅಕಾಡೆಮಿಯ ಫೇಸ್‌ಬುಕ್ ಪುಟದಲ್ಲಿ ತಮ್ಮ ಅನುಭವ ಮಂಟಪದಲ್ಲಿ ಕುಳಿತಿರುತ್ತಾರೆ. ಒಂದು ಗಂಟೆಗೆ ಸೀಮಿತ ಅಂತಂದುಕೊಂಡರೂ, ಅನುಭವಿಗಳ ಮನದಾಳದಿಂದ ಮೂಡಿಬರುವ ಯಕ್ಷಗಾನ ಇತಿಹಾಸವನ್ನು ಕೇಳುತ್ತಿದ್ದರೆ, ಸಮಯ ಹೋಗಿದ್ದೇ ತಿಳಿಯುವುದಿಲ್ಲ. ಎರಡು ಗಂಟೆಗೂ ಮೀರಿ ವಿಸ್ತರಿಸಿದ ಸಂವಾದ ಕಾರ್ಯಕ್ರಮಗಳೂ ಇವೆ.

ಆಗಸ್ಟ್ 29ರ ಶನಿವಾರ ಭಾಗವತರಾದ ಪುತ್ತೂರು ರಮೇಶ್ ಭಟ್ ಅವರಿಂದಾರಂಭ. ಲಿಂಕ್ ಇಲ್ಲಿದೆ.

ಮೇರು ಕಲಾವಿದರಾದ ತೀರ್ಥಹಳ್ಳಿ ಗೋಪಾಲಾಚಾರಿ, ದಿನೇಶ ಅಮ್ಮಣ್ಣಾಯ, ಹರಿನಾರಾಯಣ ಬೈಪಾಡಿತ್ತಾಯ, ಮೂರೂರು ರಮೇಶ ಭಂಡಾರಿ, ಗಣೇಶ್ ಕುಮಾರ್ ಹೆಬ್ರಿ, ಪ್ರಸನ್ನ ಭಟ್ ಬಾಳ್ಕಲ್, ವಿದ್ಯಾಧರ ಜಲವಳ್ಳಿ, ಅಶೋಕ್ ಭಟ್ ಸಿದ್ದಾಪುರ, ಕೆ.ಹೆಚ್.ದಾಸಪ್ಪ ರೈ, ಜನ್ಸಾಲೆ ರಾಘವೇಂದ್ರ ಆಚಾರ್ಯ, ಮವ್ವಾರು ಬಾಲಕೃಷ್ಣ ಮಣಿಯಾಣಿ, ಈಶ್ವರ ನಾಯ್ಕ ಮಂಕಿ, ಮೋಹನದಾಸ ಶೆಣೈ ಆರ್ಗೋಡು, ಪುತ್ತೂರು ಗಂಗಾಧರ ಜೋಗಿ, ಉಜಿರೆ ನಾರಾಯಣ ಹಾಸ್ಯಗಾರ, ಆಜ್ರಿ ಗೋಪಾಲ ಗಾಣಿಗ, ಪೂರ್ಣೇಶ ಆಚಾರ್ಯ, ಪುತ್ತಿಗೆ ರಘುರಾಮ ಹೊಳ್ಳ, ಪಾತಾಳ ಅಂಬಾಪ್ರಸಾದ, ಪೂಕಳ ಲಕ್ಷ್ಮೀನಾರಾಯಣ ಭಟ್, ಮೋಹನ ಅಮ್ಮುಂಜೆ, ನೀಲ್ಕೋಡು ಶಂಕರ ಹೆಗಡೆ, ಹಳ್ಳಾಡಿ ಜಯರಾಮ ಶೆಟ್ಟಿ, ರಮೇಶ್ ಭಟ್ ಬಾಯಾರು, ಎಂ.ಕೆ.ರಮೇಶಾಚಾರ್ಯ, ಸಬ್ಬಣಕೋಡಿ ರಾಮ ಭಟ್, ವಸಂತ ಗೌಡ ಕಾಯರ್ತಡ್ಕ, ಎ.ಪಿ.ಪಾಠಕ್, ಎನ್.ಜಿ.ಹೆಗಡೆ, ಚಂದ್ರಶೇಖರ ಧರ್ಮಸ್ಥಳ, ಬಂಟ್ವಾಳ ಜಯರಾಮ ಆಚಾರ್ಯ, ಮಹೇಶ ಮಣಿಯಾಣಿ, ಮುಂತಾದವರಲ್ಲದೆ ಪ್ರಸಾಧನ ಕಲಾವಿದ ರಾಘವದಾಸ್ ಮುಂತಾದವರು ಇಲ್ಲಿ ಮಾತನಾಡಿದ್ದಾರೆ. ಮೂಡಲಪಾಯದ ಯಕ್ಷಗಾನದಲ್ಲಿ ಅಳಿವಿನಂಚಿನಲ್ಲಿರುವ ಮುಖವೀಣೆಯನ್ನು ನುಡಿಸುವ ಹಿರಿಯ ಕಲಾವಿದ ರಾಜಣ್ಣ ಬಿ. ಅವರೂ ಬಂದು ಮಾತನಾಡಿದ್ದಾರೆ. ಇನ್ನು ಮುಂದೆಯೂ ಹಿರಿಯ ಅನುಭವಿ ಕಲಾವಿದರು ಮಾತನಾಡಲಿದ್ದಾರೆ.

ಕಟೀಲು ಮೇಳದ ಭಾಗವತರಾದ ಪುತ್ತೂರು ರಮೇಶ್ ಭಟ್ ಅವರಿಂದ ಆಗಸ್ಟ್ 29ರಂದು ಆರಂಭವಾಗಿತ್ತು ಈ ಸಂವಾದ ಸರಣಿ. ಈ ಕಾಲದಲ್ಲಿ ಬೆಳಗುತ್ತಿರುವ ಯಕ್ಷಗಾನವನ್ನು ಉತ್ತುಂಗಕ್ಕೇರಿಸುವಲ್ಲಿ ಆ ಕಾಲದಲ್ಲಿ ದಣಿವರಿಯದೇ ದುಡಿದ, ಪೆಟ್ಟಿಗೆ ಹೊತ್ತು ಊರಿಂದೂರು ಅಲೆದಾಡಿ ಪ್ರದರ್ಶನ ನೀಡಿದ, ನಂತರ ಹೊಸ ಕಲಾವಿದರನ್ನು ಸೃಷ್ಟಿಸಿದ ಹಿರಿಯ ಕಲಾವಿದರು ಪಟ್ಟ ಪರಿಶ್ರಮ ಮುಂತಾದವುಗಳನ್ನು ದಾಖಲಿಸುವ ಪ್ರಯತ್ನವೂ ಹೌದು ಎನ್ನುತ್ತಾರೆ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪ್ರೊ.ಎಂ.ಎ.ಹೆಗಡೆ ದಂಟಕಲ್.

ಕಲಾವಿದರಿಗಾಗಿ ಏನಾದರೂ ಮಾಡಬೇಕಲ್ಲಾ ಎಂಬ ತುಡಿತವಿರುವ ಎಂ.ಎ.ಹೆಗಡೆ, ತಮ್ಮ ತಂಡದೊಂದಿಗೆ ಸೇರಿ ಚರ್ಚಿಸುತ್ತಿದ್ದಾಗ, ಸದಸ್ಯೆ ಆರತಿ ಪಟ್ರಮೆ ಹಾಗೂ ಇತರರ ಸಲಹೆಗೆ ಮತ್ತಷ್ಟು ಹೊಳಪು ಕೊಟ್ಟ ಪರಿಣಾಮ ಸಿದ್ಧಗೊಂಡಿದ್ದೇ ಈ ಮಾತಿನ ಮಂಟಪ. ಕಲಾವಿದರು ಸಂಕಷ್ಟದಲ್ಲಿದ್ದಾರೆ, ಕಾರ್ಯಕ್ರಮಗಳಿಲ್ಲ, ಸಂಪಾದನೆಯೂ ಇಲ್ಲ. ಅಂಥವರಿಗೆ ಆತ್ಮವಿಶ್ವಾಸ ಮೂಡಿಸುವ ಕೆಲಸವೂ ಆಗಬೇಕಾಗಿದೆ. ಕನಿಷ್ಠ ನೂರು ಕಲಾವಿದರನ್ನು ಮಾತನಾಡಿಸಬೇಕೆಂದು ನಿರ್ಧಾರವಾಗಿದೆಯಾದರೂ, ಈ ಕಾರ್ಯಕ್ರಮಕ್ಕೆ ಸಿಕ್ಕಿದ ಜನಸ್ಪಂದನೆಯಿಂದ, ಇದು ಮುಂದುವರಿಯಲಿದೆ ಎಂಬ ಸೂಚನೆ ನೀಡಿದರು ಅವರು.

ಇದು ಇಂದು ಕಟ್ಟಿ ನಾಳೆ ಬಿಚ್ಚಿ ಬೇರೆಡೆ ಸಾಗುವಂತಹಾ ರಂಗ ಮಂಟಪವಾಗದೆ, ತಲೆ ತಲಾಂತರಕ್ಕೂ ಯಕ್ಷಗಾನವೆಂಬ ಪರಿಪೂರ್ಣ ರಂಗ ಕಲೆಯೊಂದು ಬಾಳಿ ಬೆಳಗಿದ ಇತಿಹಾಸವನ್ನು ದಾಖಲಿಸುವ ಪ್ರಯತ್ನವೂ ಆಯಿತು. ಯಕ್ಷಗಾನವಿಂದು ವಿಜೃಂಭಿಸುವಂತೆ ಮಾಡುವಲ್ಲಿ ನಾಲ್ಕೈದು ದಶಕಗಳ ಹಿಂದೆ ಕಲಾವಿದರ ಸ್ಥಿತಿಗತಿ ಹೇಗಿತ್ತು? ಅವರು ಹೊಟ್ಟೆಪಾಡಿಗಾಗಿ ಅವಲಂಬಿಸಿದ್ದ ಕಲೆಯನ್ನು ಉಳಿಸಲು, ಬೆಳೆಸಲು ಹೇಗೆಲ್ಲಾ ಶ್ರಮ ಪಡುತ್ತಿದ್ದರು, ಅವರಿಂದ ರೂಪುಗೊಂಡ ಕಿರಿಯರು, ತಮ್ಮ ಅನುಭವವನ್ನು ಮತ್ತೊಂದು ಪೀಳಿಗೆಗೆ ದಾಟಿಸಿದ ಪರಿ… ಇವೆಲ್ಲವೂ ಇಂದಿನ ಮತ್ತು ಮುಂದಿನ ಕಲಾವಿದರಿಗೆ, ಕಲೋತ್ಸಾಹಿಗಳಿಗೆ ದಾರಿದೀಪವಾಗಲಿ ಎಂಬ ಆಶಯದೊಂದಿಗೆ ಈ ಮಾತಿನ ಮಂಟಪವು ಎದ್ದು ನಿಂತಿತು. ಕಲೆ-ಕಲಾವಿದರನ್ನು ಆನ್‌ಲೈನ್‌ನಲ್ಲೇ ಬೆಸೆಯುತ್ತಾ ಹೋಯಿತು.

ರಾತ್ರಿಯನ್ನು ಬೆಳಗಿಸುವ ಕಲಾವಿದರನ್ನು ಪ್ರೇಕ್ಷಕರು ರಂಗದಲ್ಲಿ ಮಾತ್ರ ನೋಡಿರುತ್ತಾರೆ, ನಿಜ ಜೀವನದಲ್ಲಿ ನೋಡಿರುವುದಿಲ್ಲ. ವೀಕ್ಷಕರ ಈ ಕುತೂಹಲವೂ ತಣಿಯುತ್ತದೆ. ಇದಲ್ಲದೆ, ಹಲವು ಕಲಾವಿದರು ತೃಪ್ತಿ ವ್ಯಕ್ತಪಡಿಸಿದ್ದಷ್ಟೇ ಅಲ್ಲ, ‘ನಮ್ಮನ್ನೂ ಕೇಳುವವರಿದ್ದಾರೆ, ಕುಸಿದು ಹೋಗಿದ್ದ ಆತ್ಮಬಲ ವೃದ್ಧಿಯಾಗಿದೆ’ ಎನ್ನುತ್ತಾ ಭಾವುಕರಾದ ಕಲಾವಿದರು ದೂರವಾಣಿ ಮೂಲಕ ಸಂಪರ್ಕಿಸಿ ಆಡಿದ ಮಾತುಗಳನ್ನು ಸಾರ್ಥಕ್ಯ ಭಾವದಿಂದ ನೆನಪಿಸಿಕೊಂಡಿದ್ದಾರೆ ಪ್ರೊ.ಹೆಗಡೆ.

ಅಕಾಡೆಮಿಯಿಂದ ಕಲಾವಿದರಿಗೆ ನೇರವಾಗಿ ಧನ ಸಹಾಯ ಮಾಡುವ ಅಧಿಕಾರ ಇಲ್ಲ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ನೆರವು ದೊರಕಿಸಲಾಗುತ್ತದೆ. ವಿಚಾರ ಸಂಕಿರಣವೋ, ತಾಳಮದ್ದಳೆಯೋ, ಆಟವೋ ಏರ್ಪಡಿಸುವ ಬದಲಾಗಿ ಅದೇ ಹಣವನ್ನು ಕಷ್ಟದಲ್ಲಿದ್ದವರಿಗೆ ಹಂಚುವುದು ಸೂಕ್ತ. ಇದಕ್ಕಾಗಿ ಮಾತಿನ ಮಂಟಪ ಏರ್ಪಡಿಸಿ, ಕಷ್ಟದಲ್ಲಿರುವ ಕಲಾವಿದರಿಗೆ ನೀಡಲಾಗುವ ಗೌರವ ಸಂಭಾವನೆಯಿಂದ ಕೊಂಚವಾದರೂ ನೆರವಾದೀತೆಂಬ ಉದ್ದೇಶವೂ ಇಲ್ಲಿದೆ.

ಮಾತಿನ ಮಂಟಪದ ಮೂಲಕ ಅಕಾಡೆಮಿಯು ಮನೆಮನೆಗೆ ತಲುಪಿದಂತಾಗಿದೆ. ಯಕ್ಷಗಾನ ಕಲೆಯ ಬಗ್ಗೆ ಅರಿವು, ಅನುಭವ ಇರುವವರೇ ಅಕಾಡೆಮಿಯಲ್ಲಿರುವುದರಿಂದ ಕಲಾವಿದರನ್ನು ತಲುಪುವುದು, ಸ್ಪಂದಿಸುವುದು ಸಾಧ್ಯವಾಗುತ್ತಿದೆ ಎನ್ನುವುದು ಅಧ್ಯಕ್ಷ ಎಂ.ಎ.ಹೆಗಡೆಯವರ ಅಭಿಮಾನದ ನುಡಿ. ರಂಗದಾಚೆಗೆ ಕಲಾವಿದರ ಬದುಕಿನ ಕಥನ ಕೇಳುವ ಕುತೂಹಲದಿಂದ ವೀಕ್ಷಕರ ಸಂಖ್ಯೆಯೂ ದಿನೇದಿನೇ ಏರುತ್ತಿರುವುದು ತಮಗೆ ಹೊಸ ಹುರುಪು ಮೂಡಿಸಿದೆ ಎನ್ನುತ್ತಾರವರು.

ಎಂ.ಎ.ಹೆಗಡೆಯವರ ಮಾತನ್ನೇ ಧ್ವನಿಸುತ್ತಾರೆ ‘ಮಾತಿನ ಮಂಟಪ’ದಲ್ಲಿ ಕಲಾವಿದರನ್ನು ಮಾತನಾಡಿಸುತ್ತಿರುವ ಆರತಿ ಪಟ್ರಮೆ. ಲೈವ್ ಕಾರ್ಯಕ್ರಮದಲ್ಲಿ ಹೇಗೆ ಬರುವುದೆಂಬ ಬಗ್ಗೆ ಕಲಾವಿದರಿಗೆ ತಾಂತ್ರಿಕ ವಿವರಣೆಯನ್ನೂ ನೀಡಿ, ಅವರನ್ನು ಸಜ್ಜುಗೊಳಿಸುತ್ತಿರುವ ಆರತಿ, ಸ್ವತಃ ಕಲಾವಿದೆಯೂ ಹೌದು. ಮಾತಿನ ಮಂಟಪಕ್ಕೆ ಸಿದ್ಧತೆ ನಡೆಸಿದ್ದ ಬಡಗು ಪ್ರಸಾಧನ ಕಲಾವಿದ ವಿಶ್ವನಾಥ ಹಾರ್ಸಿಕಟ್ಟ ಹಾಗೂ ಭಾಗವತ ತಿರುಮಲೇಶ್ವರ ಶಾಸ್ತ್ರಿಯವರ ಅಗಲಿಕೆಯಿಂದಾಗಿ, ಅವರನ್ನು ಮಾತನಾಡಿಸಲಾಗಲಿಲ್ಲವಲ್ಲವೆಂಬ ಕೊರಗು ಅವರದು.

ಈ ಅನುಭವಿಗಳನ್ನು ಮಾತನಾಡಿಸಿದಾಗ, ವಿದ್ಯೆಗೆ ವಿನಯವೇ ಭೂಷಣ ಎಂಬ ಮಾತು ತನಗೆ ಮನದಟ್ಟಾಯಿತು ಎನ್ನುತ್ತಾರೆ ಅವರು. ಈ ಕಲಾವಿದರು ಏರಿರುವ ಎತ್ತರವೇನು, ಆದರೂ ಅಷ್ಟೊಂದು ವಿನಯದಿಂದ, ಮುಗ್ಧತೆಯಿಂದ ಮನಬಿಚ್ಚಿ ಮಾತನಾಡುತ್ತಾರೆ. ಇದನ್ನು ಕೇಳುವುದೇ ಅಂದ. ಕೆಲವರಿಗೆ ವಿದ್ಯೆಯಿಲ್ಲದಿದ್ದರೂ ಅನುಭವ ಸಂಪನ್ನರು. ಅವರ ಮಾತುಗಳು ಖಂಡಿತವಾಗಿಯೂ ಯಕ್ಷಗಾನದ ಇತಿಹಾಸ ಅರಿಯುವಲ್ಲಿ, ಮುಂದಿನ ಪೀಳಿಗೆಗೂ ತಲುಪಿಸುವಲ್ಲಿ ದಾರಿದೀಪ ಎನ್ನುತ್ತಾರೆ ಆರತಿ.

ಕಲಾವಿದರ ತುಂಬು ಮನಸ್ಸಿನ ಭಾಗವಹಿಸುವಿಕೆಯಿಂದಾಗಿ, ಅದೇ ರೀತಿ ಲೈವ್ ನೋಡುತ್ತಿರುವ ಯಕ್ಷಾಭಿಮಾನಿಗಳಿಂದಾಗಿ ಮಾತಿನ ಮಂಟಪಕ್ಕೆ ಒಂದು ವಿಶೇಷ ಮಾನ್ಯತೆ ದೊರೆತಂತಾಗಿದೆ. ಇದರಲ್ಲಿ ಭಾಗವಹಿಸುವುದು ಕೂಡ ಪ್ರತಿಷ್ಠೆ ಎಂಬ ಭಾವನೆ ಬರತೊಡಗಿದೆ. ಯಕ್ಷಗಾನದ ಚರಿತ್ರೆ ದಾಖಲಿಸುವ ನಿಟ್ಟಿನಲ್ಲಿ, ಇದನ್ನು ಕೋವಿಡ್ ಸಂಕಷ್ಟ ಕಾಲದ ಸದುಪಯೋಗ ಎನ್ನಲೂಬಹುದು. ಯಕ್ಷಗಾನ ಕ್ಷೇತ್ರದ ಹೊರಗಿರುವವರು ಏನೇ ಸಲಹೆ ನೀಡಬಹುದು, ಆದರೆ ಯಕ್ಷಗಾನ ರಂಗದ ಅನುಭವಿಗಳ ಮಾತು ಕೇಳಿದರೆ, ವಾಸ್ತವ ಮತ್ತು ಅಳವಡಿಸಿಕೊಳ್ಳಬಹುದಾದ ಸಲಹೆಗಳು ದೊರೆಯುತ್ತವೆ ಎಂಬುದು ಅಕಾಡೆಮಿಯ ನಿರೀಕ್ಷೆ.

My article Published in Prajavani on 16 Oct 2020 as PV Web Exclusive

Avinash B

Avinash B. Tech Writer, Columnist, Working as Online media Journalist for more than two decades. Passionate about Technology and Gadgets. Yakshagana and Music are passion.

Recent Posts

ಎಐ ವೈಶಿಷ್ಟ್ಯಗಳ realme GT 7 Pro ಬಿಡುಗಡೆ: ಬೆಲೆ ಎಷ್ಟು? ವೈಶಿಷ್ಟ್ಯಗಳೇನು? ಇಲ್ಲಿದೆ ಪೂರ್ಣ ಮಾಹಿತಿ

ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್‌ ಇರುವ ಬಹುನಿರೀಕ್ಷಿತ…

3 weeks ago

ರಿಯಲ್‌ಮಿ ನಾರ್ಜೋ 70 ಟರ್ಬೊ 5 ಜಿ, ರಿಯಲ್‌ಮಿ ಬಡ್ಸ್ ಎನ್‌1 ಬಿಡುಗಡೆ: ಬೆಲೆ, ವೈಶಿಷ್ಟ್ಯ ತಿಳಿಯಿರಿ

ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…

3 months ago

ಓದುವಿಕೆ, ಕಲಿಕೆ ಉತ್ತೇಜನಕ್ಕೆ ‘ರೀಡ್-ಅ-ಥಾನ್’: ದಾಖಲೆಯ ಗುರಿ

ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.

3 months ago

Realme 13 +, Realme 13 5ಜಿ ಫೋನ್ ಬಿಡುಗಡೆ: ವೇಗದ ಫೋನ್‌ನ ವೈಶಿಷ್ಟ್ಯಗಳು, ಬೆಲೆ ಇಲ್ಲಿ ತಿಳಿಯಿರಿ

ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…

4 months ago

e-ಯುಗದ ತನಿಖಾ ಪತ್ರಿಕೋದ್ಯಮ: ಫ್ಯಾಕ್ಟ್ ಚೆಕ್

Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.

5 months ago

ಯಕ್ಷ ಮಂತ್ರ ಮಾಂಗಲ್ಯ: ಕೀರ್ತನಾ ಪ್ರಸಾದ ಕಲ್ಯಾಣವು

ಹಾಡುಗಾರಿಕೆ, ಚೆಂಡೆ-ಮದ್ದಳೆಯ ಬಿಡಿತ-ಮುಕ್ತಾಯಗಳ ಬಳಿಕ, ಬಂದಿದ್ದ ಗಣ್ಯರು, ಒಂದೊಂದು ಹಾಡಿನಲ್ಲಿ ಅಡಕವಾಗಿರುವ ಮಂತ್ರ ಮಾಂಗಲ್ಯದ ಪ್ರತಿಜ್ಞಾಗುಚ್ಛವನ್ನು ವಿವರಿಸಿ, ವಧು-ವರರಿಗೆ ಬೋಧಿಸಿದರು

10 months ago