ಕನ್ನಡ ಮಣ್ಣಿನ ಸರ್ವಾಂಗೀಣ ಕಲಾ ಪ್ರಕಾರವಾಗಿರುವ ಯಕ್ಷಗಾನವು ವಿಶ್ವಗಾನವಾಗುವತ್ತ ದೊಡ್ಡ ಹೆಜ್ಜೆ ಇಟ್ಟು ದಶಕಗಳೇ ಸಂದಿವೆ. ಕಾಲಕ್ಕೆ ಅನುಗುಣವಾಗಿ ಬದಲಾವಣೆಗಳಿಗೆ ತನ್ನನ್ನು ಒಡ್ಡಿಕೊಳ್ಳುತ್ತಾ, ಕ್ಷಣಿಕ ವಿಜೃಂಭಣೆಗೆ ಕಾರಣವಾಗುವ ಕೆಟ್ಟದ್ದನ್ನು ನಿಧಾನಕ್ಕೆ ದೂರೀಕರಿಸುತ್ತಾ, ಒಳ್ಳೆಯದನ್ನು ಸ್ವೀಕರಿಸುತ್ತಾ ಬೆಳೆಯುತ್ತಿದೆ. ಸರ್ವಮಾನ್ಯವಾಗುವತ್ತ ಹೊರಟಿರುವ ಯಕ್ಷಗಾನಕ್ಕೆ ಇಂಗ್ಲಿಷ್ ಹಾಡುಗಳು ತಕ್ಕುದಲ್ಲ ಎಂಬ ಕೊರತೆಯ ನುಡಿಯೊಂದು ಇನ್ನಿಲ್ಲವಾಗಿದೆ. ಆಂಗ್ಲ ನುಡಿಗಳೇ ಇರುವ ಶ್ರವಣಯೋಗ್ಯ ಹಾಡುಗಳು, ಉತ್ತಮ ಸಾಹಿತ್ಯದೊಂದಿಗೆ ಈಗ ಸದ್ದು ಮಾಡುತ್ತಿವೆ.
ಸಾಹಿತ್ಯ ಲೋಕಕ್ಕೆ ಯಕ್ಷಗಾನದ ಕೊಡುಗೆ
ಕನ್ನಡ ಯಕ್ಷಗಾನ ಪ್ರದರ್ಶನದಲ್ಲಿ ಕನ್ನಡವಷ್ಟೇ ಇರುತ್ತದೆ. ಹಾಸ್ಯಕ್ಕೆ ಒಂದಿಷ್ಟು ದೇಸೀ ಭಾಷೆಯನ್ನು ಮಿಶ್ರ ಮಾಡಲಾಗುತ್ತದೆಯೇ ಹೊರತು, ಇಂಗ್ಲಿಷ್ ಅಪ್ಪಿತಪ್ಪಿಯೂ ನುಸುಳುವಂತಿಲ್ಲ. ಇದು ಕನ್ನಡ ಸಾಹಿತ್ಯ ಲೋಕಕ್ಕೆ ತನ್ನದೇ ಕೊಡುಗೆ ನೀಡುತ್ತಾ ಬಂದಿರುವ ಯಕ್ಷಗಾನ ಹೆಗ್ಗಳಿಕೆ. ಇಂದು ಹೆಚ್ಚು ಪ್ರಚಲಿತ ಮತ್ತು ಜನಪ್ರಿಯ ಮಾಧ್ಯಮವಾಗಿರುವ ಸಿನಿಮಾ ರಂಗದಲ್ಲಿ, ಕನ್ನಡದ ಹೊರತಾದ ಸಾಕಷ್ಟು ಶಬ್ದಗಳು ನುಸುಳಬಲ್ಲವು. ಆದರೆ, ಯಕ್ಷಗಾನದಲ್ಲಿ ಹಾಗಿಲ್ಲ. ಕಲಾವಿದರು ಎಷ್ಟೇ ವಿದ್ಯಾವಂತರಾಗಿರಲಿ, ರಂಗವೇರಿದ ತಕ್ಷಣ ಅವರ ಮನಸ್ಸುಗಳು ಕನ್ನಡಕ್ಕೇ ತಿರುಗುತ್ತವೆ. ಅಪ್ಪಿ ತಪ್ಪಿ ಮಾತಿನ ಭರದಲ್ಲೇನಾದರೂ ಒಂದು ಆಂಗ್ಲ ಶಬ್ದ ನುಸುಳಿದರೆ, ಅದು ಅಪಚಾರ ಎಂದು ಭಾವಿಸುವ ಮನಸ್ಸುಗಳು ಇಲ್ಲಿವೆ. ಹೀಗಾಗಿ ಭಾಷಾ ಶುದ್ಧಿಯ ನಿಟ್ಟಿನಲ್ಲಿ ಯಕ್ಷಗಾನದ ಕೊಡುಗೆಗೆ ಸಾಟಿಯಿಲ್ಲ.
ಕರಾವಳಿ, ಮಲೆನಾಡಿನ ಕಲೆಯೊಂದು ಕೇವಲ ಕನ್ನಡದ ಮೂಲಕವೇ ಜಗದಗಲ ವ್ಯಾಪಿಸಿ, ಕನ್ನಡ ಮನಸ್ಸುಗಳನ್ನು ತಣಿಸಿವೆ. ಯಕ್ಷಗಾನಕ್ಕೆ ಅನ್ಯಭಾಷಿಗ ಹೊಸ ಪ್ರೇಕ್ಷಕರ ಸೆಳೆತಕ್ಕೆ ಕಾರಣವಾಗಬಲ್ಲ, ವೈವಿಧ್ಯಮಯ ಭಾಷೆಗಳ ಅಳವಡಿಕೆಯ ಪ್ರಯೋಗವೇನೂ ಹೊಸತಲ್ಲ. ಈಗಾಗಲೇ ವಿದ್ಯಾ ಕೋಳ್ಯೂರು ನೇತೃತ್ವದ ತಂಡವು ಹಿಂದಿ ಯಕ್ಷಗಾನವನ್ನು ದೇಶದ ವಿವಿಧೆಡೆ ಪ್ರದರ್ಶಿಸಿದೆ. ಇದರ ಹಾಡುಗಳು ಕೂಡ ಹಿಂದಿಗೆ ತರ್ಜುಮೆಗೊಂಡು, ಕನ್ನಡೇತರ ಪ್ರೇಕ್ಷಕರ ಮನ ಸೆಳೆದಿತ್ತು. ಅದೇ ರೀತಿ ತುಳು, ಸಂಸ್ಕೃತ, ಮಲಯಾಳಂ ಭಾಷೆಗಳಲ್ಲಿಯೂ ಯಕ್ಷಗಾನ ಪ್ರದರ್ಶನ ಕಂಡಿದೆ.
ಪಣಂಬೂರು ನಂದನೇಶ್ವರ ಯಕ್ಷಗಾನ ಬಳಗವೂ ಸೇರಿದಂತೆ ಹಲವಾರು ಹವ್ಯಾಸಿ ತಂಡಗಳು ಇಂಗ್ಲಿಷ್ ಮಾತುಗಾರಿಕೆಯುಳ್ಳ ಯಕ್ಷಗಾನ ಪ್ರದರ್ಶನಗಳನ್ನು ನೀಡಿದ್ದವು. ಆದರೆ, ಹಾಡು, ನೃತ್ಯ, ಮಾತುಗಾರಿಕೆ, ವೇಷಭೂಷಣ, ಭಾವಾಭಿನಯಗಳಿರುವ ರಮ್ಯಾದ್ಭುತ ಕಲೆಯ ಹಾಡುಗಳು ಇಂಗ್ಲಿಷ್‌ನಲ್ಲಿದ್ದುದು ಇಲ್ಲವೇ ಎಂಬಷ್ಟು ತೀರಾ ಅಪರೂಪ.
ಪಾಣಾಜೆ ಸಮೀಪದ ಬೆಟ್ಟಂಪಾಡಿಯ ಸದಾಶಿವ ಭಟ್ ಎಂಬವರು ಈ ಹಿಂದೆ ‘ಸ್ಲೇಯಿಂಗ್ ಆಫ್ ಸುಧನ್ವ’ ಎಂಬ ಪ್ರಸಂಗವನ್ನು ಇಂಗ್ಲಿಷಿನಲ್ಲಿ ರಚಿಸಿದ್ದರು. ಅಲ್ಲದೆ ಮರಾಠಿ, ಕರಾಡ್, ಕನ್ನಡ, ತುಳು, ಹವ್ಯಕ, ಕೊಂಕಣಿ, ಹಿಂದಿ -ಹೀಗೆ 9 ಭಾಷೆಗಳಲ್ಲಿ ವಿಭಿನ್ನ ಪ್ರಸಂಗಗಳನ್ನು ರಚಿಸಿದ್ದರು. ಆದರೆ ಇಂಗ್ಲಿಷಿನಲ್ಲಿರುವುದು ಚಾಲ್ತಿಯಲ್ಲಿರುವ ‘ಸುಧನ್ವ ಕಾಳಗ’ದ ಪ್ರಸಂಗವಲ್ಲ. ಜನಕರಾಜನ ಮಿಥಿಲಾ ಪಟ್ಟಣದ ಪಕ್ಕದ ಊರಿನ ರಾಜ ಸುಧನ್ವ ಎಂಬಾತ, ಸೀತೆಯ ಮೇಲೆ ಮನಸ್ಸು ಮಾಡಿ, ದಂಡೆತ್ತಿ ಬಂದು ಯುದ್ಧದಲ್ಲಿ ಸಾವನ್ನಪ್ಪುವ ಕಥೆಯದು. ಪ್ರಾಯೋಗಿಕವಾಗಿತ್ತು ಇದು. ಇದು ಆಕಾಶವಾಣಿಯಲ್ಲಿ ಪ್ರಸಾರವಾಗಿತ್ತೆಂಬ ಮಾಹಿತಿಯೂ ಇದೆ. ಇಂಗ್ಲಿಷ್ ಹಾಡುಗಳನ್ನು ಹಾಡಿದವರು ಬೆಳ್ತಂಗಡಿಯ ಚಿತ್ರ ಕಲಾವಿದರೂ, ಗಣಪತಿ ಮೂರ್ತಿ ತಯಾರಿಸುವಲ್ಲಿ ಸಿದ್ಧಹಸ್ತರೂ ಆಗಿರುವ ದಿವಾಕರ ಪಟವರ್ಧನ್.
ಜ.10ರಂದು ಸುಳ್ಯದ ಮನೆಯಲ್ಲಿ ಪೂರ್ಣಪ್ರಮಾಣದಲ್ಲಿ ಜರುಗಿದ ‘ಡಿಸ್‌ಗ್ರೇಸ್ಡ್ ಶ್ರೀ ಚಕ್ರ’ (ಸುದರ್ಶನ ಗರ್ವಭಂಗ) ಪ್ರಸಂಗದ ವಿಶೇಷತೆ ಎಂದರೆ, ಯಕ್ಷಗಾನವನ್ನು ಕಲಿತವರು, ತರಬೇತಿ ಪಡೆದು ಪೂರ್ಣ ಪ್ರಮಾಣದಲ್ಲಿ ವೇದಿಕೆಯಲ್ಲಿ ಆಂಗ್ಲ ಯಕ್ಷಗಾನವೊಂದನ್ನು ಪ್ರದರ್ಶಿಸಿರುವುದು. ಇಲ್ಲಿನ ಪದ್ಯ ಸಾಹಿತ್ಯದಲ್ಲಿ ಹೆಸರುಗಳು ಮಾತ್ರ ದೇಸೀ ಆಗಿವೆ. ಉಳಿದೆಲ್ಲ ಪದಗಳು ಇಂಗ್ಲಿಷಿನಲ್ಲಿ. ಸೂರಿಕುಮೇರು ಗೋವಿಂದ ಭಟ್ ರಚಿಸಿರುವ ‘ಮ್ಯಾಕ್‌ಬೆತ್’ ಪ್ರಸಂಗದಲ್ಲಿ ಹಾಡುಗಳು ಕನ್ನಡದಲ್ಲಿವೆಯಾದರೂ, ಪಾತ್ರಗಳ ಹೆಸರುಗಳನ್ನು ಮೂಲ ಕವಿ, ಆಂಗ್ಲ ನಾಟಕಕಾರ ಶೇಕ್ಸ್‌ಪಿಯರ್‌ನ ಕೃತಿಯಲ್ಲಿರುವಂತೆಯೇ ಉಳಿಸಿಕೊಳ್ಳಲಾಗಿದೆ.
ಇಂಗ್ಲಿಷಿನ ಅದೆಷ್ಟೋ ಕಥೆ-ಕಾದಂಬರಿಗಳು ರಾತ್ರಿಯಿಡೀ ನಡೆಯುವ ಯಕ್ಷಗಾನ ಪ್ರಸಂಗದ ರೂಪ ತಾಳಿವೆ. ಬಹುತೇಕ ಪ್ರಸಂಗಗಳಲ್ಲಿ ಹೆಸರುಗಳು ಕೂಡ ದೇಸೀ ರೂಪ ತಾಳಿವೆ. ದಿ. ಹೊಸ್ತೋಟ ಮಂಜುನಾಥ ಭಾಗವತರು ಇದೇ ಮ್ಯಾಕ್‌ಬೆತ್ ಅನ್ನು ‘ಮೇಘಕೇತ’ ಹೆಸರಿನಲ್ಲಿ ತಂದು, ಪಾತ್ರಗಳ ಹೆಸರುಗಳನ್ನೂ ದೇಸೀಕರಣ ಮಾಡಿದ್ದರು. ಅದೇ ರೀತಿ, ಶೇಕ್ಸ್‌ಪಿಯರ್‌ನ ಕಿಂಗ್ ಲಿಯರ್ ಕೃತಿಯಿಂದ ಪ್ರೇರಿತವಾಗಿ ಗುಣಸುಂದರಿ-ಪಾಪಣ್ಣ ವಿಜಯ ಹಾಗೂ ಚಂದ್ರಸೇನ ವಿಜಯ ಪ್ರಸಂಗಗಳು ರಚನೆಯಾಗಿವೆ. ಸೋಫೋಕ್ಲಿಸ್‌ನ ‘ಈಡಿಪಸ್ ರೆಕ್ಸ್’ ನಾಟಕವು ‘ರಾಜಾ ಆದಿಪಾಶ’ ಹೆಸರಲ್ಲಿ ಯಕ್ಷಗಾನಕ್ಕೆ ಬಂದಿತ್ತು. ಹ್ಯಾಮ್ಲೆಟ್ ‘ಗೆಂಡಸಂಪಿಗೆ’ಯಾಗಿ, ಆಲ್ ಇಸ್ ವೆಲ್ ದ್ಯಾಟ್ ಎಂಡ್ಸ್ ವೆಲ್ ಕೃತಿಯು ‘ಗುಣಪನ ಕಲ್ಯಾಣ’ವಾಗಿಯೂ, ಸೋಹ್ರಾಬ್ ಆ್ಯಂಡ್ ರುಸ್ತುಮ್ ಕೃತಿಯು ದಳವಾಯಿ ಮುದ್ದಣ್ಣ ಹೆಸರಿನಲ್ಲೂ ಯಕ್ಷಗಾನಕ್ಕೆ ಬಂದಿವೆ.
ಈಗಂತೂ ಕರಾವಳಿಯ ಬಹುತೇಕ ಶಾಲೆ, ಕಾಲೇಜುಗಳಲ್ಲಿ ಯಕ್ಷಗಾನ ಶಿಕ್ಷಣ ನೀಡಲಾಗುತ್ತದೆ. ತತ್ಪರಿಣಾಮವಾಗಿ ಹೊಸ ಪೀಳಿಗೆಯವರು ಈ ಕಲೆಗೆ ಮಾರುಹೋಗಿದ್ದಾರೆ ಮತ್ತು ಅದೆಷ್ಟೋ ಬಾಲ ಪ್ರತಿಭೆಗಳು ರಂಗದಲ್ಲಿ ರಾರಾಜಿಸುತ್ತಿವೆ. ಸುಳ್ಯದ ಪ್ರಜ್ಞಾ ಮಕ್ಕಳ ಯಕ್ಷಗಾನ ಮೇಳದ ತಂಡವು ಜ.10ರಂದು ಯಕ್ಷಗಾನ ತಾಳಮದ್ದಳೆಯನ್ನು (ವೇಷಭೂಷಣವಿಲ್ಲದೆ ಕುಳಿತಲ್ಲೇ ಪಾತ್ರೋಚಿತವಾಗಿ ಸಂವಾದ ನಡೆಸುವ ಯಕ್ಷಗಾನದ ಕವಲು) ಸಂಪೂರ್ಣವಾಗಿ ಇಂಗ್ಲಿಷ್ ಭಾಷೆಯಲ್ಲೇ ನಡೆಸಿಕೊಟ್ಟಿದೆ. ಅದು ಸುಳ್ಯದ ಕೊಡಿಯಾಲದ ಕುರಿಯಾಜೆ ಮನೆಯಲ್ಲಿ ನಡೆದ ಕಾರ್ಯಕ್ರಮ. ಪ್ರಸಂಗದ ಹೆಸರು ಡಿಸ್‌ಗ್ರೇಸ್ಡ್ ಶ್ರೀಚಕ್ರ (ಸುದರ್ಶನ ಗರ್ವಭಂಗ). ಇದರಲ್ಲಿ ಪಟಪಟನೆ ಆಂಗ್ಲಭಾಷೆಯಲ್ಲಿ ಮಾತನಾಡಬಲ್ಲ ಮಕ್ಕಳೇ ಅರ್ಥದಾರಿಗಳು; ಭಾಗವತರೂ ಆಂಗ್ಲ ಪದಗಳನ್ನೇ ಯಕ್ಷಗಾನದ ರಾಗ, ತಾಳ, ಲಯಗಳಿಗೆ ಅನುಸಾರವಾಗಿ ಹಾಡಿದ್ದಾರೆ.
ಈಗ, ಯಕ್ಷಗಾನದಲ್ಲಿ ಪ್ರಯೋಗಕ್ಕೆ ಹೆಸರಾಗಿದ್ದ ‘ಕಡಲತಡಿಯ ಭಾರ್ಗವ’ ದಿ.ಶಿವರಾಮ ಕಾರಂತರ ಪುತ್ತೂರಿನಲ್ಲಿರುವ ‘ಬಾಲವನ’ದಲ್ಲಿ ಜ.26ರಂದು ಸಂಜೆ 3 ಗಂಟೆಗೆ ಇದೇ ವಿದ್ಯಾರ್ಥಿಗಳ ತಂಡದಿಂದ ಇಂಗ್ಲಿಷ್ ಯಕ್ಷಗಾನ ತಾಳಮದ್ದಳೆ ನಡೆಯಲಿದೆ. ಪ್ರಕಾಶ ಮೂಡಿತ್ತಾಯ ಸುಳ್ಯ ಇವರ ಸಹನಿರ್ದೇಶನ ಮತ್ತು ಉದಯ ಶಂಕರ ಕುರಿಯಾಜೆ ಇವರ ಸಂಘಟನೆಯಲ್ಲಿ, ಭಾಗವತಿಕೆಯಲ್ಲಿ ಹೇಮ ಸ್ವಾತಿ ಕುರಿಯಾಜೆ ಮತ್ತು ರಚನಾ ಚಿದ್ಗಲ್, ಚೆಂಡೆ-ಮದ್ದಳೆಯಲ್ಲಿ ಶ್ರೀವತ್ಸ ಭಾರದ್ವಾಜ್, ಅಂಬಾ ತನಯಾ ಅರ್ನಾಡಿ, ಪ್ರಥಮ ಮೂಡಿತ್ತಾಯ ಭಾಗವಹಿಸುವರು. ಅರ್ಥದಾರಿಗಳಾಗಿ ವಿಕ್ರಮ ಚಂದ್ರ ಎನ್.ಆರ್., ಸೃಜನಾದಿತ್ಯ ಶೀಲ, ನವೀನ ಕೃಷ್ಣ ಉಪ್ಪಿನಂಗಡಿ, ಕೃತ ಸ್ವರ ದೀಪ್ತ, ಗೌತಮ್ ಪೇರಾಲು, ಶಾಂಭವಿ ದಡ್ಡಲಡ್ಕ, ದೇವಿಕಾ ಕುರಿಯಾಜೆ, ಹೇಮ ಸ್ವಾತಿ ಕುರಿಯಾಜೆ ಪ್ರತಿಭೆ ಪ್ರದರ್ಶಿಸಲಿದ್ದಾರೆ. ಫೆಬ್ರವರಿ 21ರಂದು ಸುಳ್ಯದಲ್ಲಿ ಇದು ಯಕ್ಷಗಾನ ಬಯಲಾಟ ರೂಪದಲ್ಲಿ ಪ್ರದರ್ಶನಗೊಳ್ಳಲಿದೆ.
ಪ್ರಸಂಗ ಸಾಹಿತ್ಯ ರಚಿಸಿ, ಮಕ್ಕಳಿಗೆ ಪಾತ್ರಗಳ ಅರ್ಥವನ್ನು ಬರೆದುಕೊಟ್ಟವರು ವೆಂಕಟರಾಮ ಭಟ್ ಸುಳ್ಯ. ಯಕ್ಷಗಾನ ಪ್ರಸಂಗ, ವಿಶೇಷವಾಗಿ ಕಥಾವಸ್ತುವಿಗೆ ಅಗತ್ಯವಿರುವ ಹಾಡುಗಳನ್ನು ಸಂದರ್ಭ ಸಹಿತವಾಗಿ ರಚಿಸುವುದೆಂದರೆ ಸುಲಭದ ಮಾತೇನಲ್ಲ. ಛಂದಸ್ಸು, ಮಾತ್ರಾಗಣಗಳ ಹೊಂದಿಕೆ, ರಾಗ, ತಾಳ, ಲಯ – ಇವುಗಳ ಅರಿವು ಇರಬೇಕಾಗುತ್ತದೆ. ಇದಕ್ಕೆ ಅನುಸಾರವಾಗಿಯೇ ಪದ್ಯಗಳನ್ನು ರಚಿಸಲಾಗಿದೆ, ಪ್ರಾಸಬದ್ಧವೂ ಆಗಿದೆ ಎಂದು ವಿವರಿಸಿದ್ದಾರೆ ವೆಂಕಟರಾಮ ಭಟ್.
ಉದಾಹರಣೆಗೆ, ಮುಖಾರಿ ಏಕತಾಳದಲ್ಲಿ ದೂತನ ಪದ್ಯ ‘ಲಾಲಿಸಬೇಕು ಜೀಯಾ’ ರೀತಿಯಲ್ಲೇ Pray on your feet Oh Master ಎಂಬ ಹಾಡಿದೆ.
ಅಂತೆಯೇ, ಸುದರ್ಶನ ಗರ್ವ ಭಂಗ ಪ್ರಸಂಗದಲ್ಲಿ ಬರುವ ಲಕ್ಷ್ಮೀ-ವಿಷ್ಣು ಸಂವಾದದ ‘ಏನ ಬಣ್ಣಿಪೆ ಪತಿಯೇ’ ಅಷ್ಟ ತಾಳದ ಹಾಡಿಗೆ ಸಮದಂಡಿಯಾಗಿ How shall you praise oh darling, so brave you are ಎಂಬ ಸಾಲುಗಳಿವೆ.
ಇದು ನೇರಾನೇರ ತರ್ಜುಮೆಯಲ್ಲ. ಪ್ರತ್ಯೇಕ ಸಾಹಿತ್ಯ ಸೃಷ್ಟಿಯಾಗಿದೆ ಮತ್ತು ಹಾಡಿನ ತಿರುಳು ಪ್ರಸಂಗಕ್ಕನುಗುಣವಾಗಿ ವಿಶಿಷ್ಟವಾಗಿ ಅಭಿವ್ಯಕ್ತವಾಗಿದೆ. ಷಟ್ಪದಿಗಳಿಗೆ ಆದಿಪ್ರಾಸ, ಅನ್ಯ ಹಾಡುಗಳಿಗೆ ಆದಿ ಪ್ರಾಸ ಮತ್ತು ಅಂತ್ಯ ಪ್ರಾಸ- ಹೀಗೆ ಯಕ್ಷಗಾನೀಯ ಛಂದೋಬದ್ಧತೆಯ ಹಾಡುಗಳು ಇಲ್ಲಿವೆ.
ಜ.10ರಂದು ನಡೆದ ಕಾರ್ಯಕ್ರಮದ ತುಣುಕು ಇಲ್ಲಿದೆ.
“ಪ್ರಕಾಶ ಮೂಡಿತ್ತಾಯರ ಸಲಹೆಯ ಮೇರೆಗೆ ಎರಡು ಹಾಡುಗಳನ್ನು ಮೊದಲು ಪ್ರಯತ್ನಿಸಿ ನೋಡಿದೆ. ಚೆನ್ನಾಗಿ ಬಂತು. ಇದರಿಂದಾಗಿ ಇಡೀ ಪ್ರಸಂಗಕ್ಕೆ ಬೇಕಾಗುವ 51 ಹಾಡುಗಳನ್ನೂ ರಚಿಸಿದೆ. ಇದರಲ್ಲಿ 3 ಗಣಪತಿ ಸ್ತುತಿ, ಹಾಗೂ ಪ್ರಸಂಗ ಶುರು ಮಾಡುವ ಭಾಮಿನಿ ಹಾಗೂ 2 ಮಂಗಳ ಪದಗಳು ಸೇರಿವೆ” ಎಂದು ವಿವರಿಸಿದ್ದಾರೆ ಪ್ರಸಂಗಕರ್ತೃ, ಪ್ರತಿಭಾ ವಿದ್ಯಾಲಯದ ಪ್ರಾಚಾರ್ಯರೂ ಆಗಿರುವ ಯಕ್ಷಗಾನ ವಿದ್ವಾಂಸ ವೆಂಕಟರಾಮ ಭಟ್ ಸುಳ್ಯ. ಪ್ರದರ್ಶನಗೊಳ್ಳುವ ಭಾಷೆಯಲ್ಲಿಯೇ ಪದ್ಯವೂ ಇದ್ದರೆ, ಯಕ್ಷಗಾನೀಯ ಕ್ರಮದಂತೆ, ಭಾಗವತರಿಗೆ ಪದ್ಯ ‘ಎತ್ತಿಕೊಡುವ’ ರೀತಿಯಲ್ಲಿ ಅರ್ಥ ಹೇಳುವುದು ಸುಲಭಸಾಧ್ಯ ಎಂಬುದು ಅವರ ಖಚಿತ ಅಭಿಪ್ರಾಯ.
ವೆಂಕಟರಾಮ ಭಟ್ಟರು ಛಂದಸ್ಸು ಹಾಗೂ ತಾಳ ಅಧ್ಯಯನ ಮಾಡಿರುವುದು ಪ್ರಸಂಗ ರಚನೆಗೆ ಪೂರಕವಾಯಿತು ಮತ್ತು ಮಕ್ಕಳಿಗೆ ಹಾಡುವ ವಿಧ, ಅರ್ಥಗಾರಿಕೆಯ ವಿಧಾನವನ್ನೂ ಅವರೇ ಹೇಳಿಕೊಟ್ಟು ವಿದ್ಯಾರ್ಥಿಗಳನ್ನು ಸಿದ್ಧಗೊಳಿಸಿದ್ದು, ವಿನೂತನ ಸಾಧ್ಯತೆಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಇನ್ನು ಕನ್ನಡೇತರರಿಗೂ ಕನ್ನಡದ ಹೆಮ್ಮೆಯ ಯಕ್ಷಗಾನ ಕಲೆಯು ಮತ್ತಷ್ಟು ಆಪ್ತವಾದೀತು.
ರಿಯಲ್‌ಮಿ 14 ಪ್ರೊ ಸರಣಿಯ 5ಜಿ ಫೋನ್, ಡ್ಯಾನಿಶ್ ಡಿಸೈನ್ ಸ್ಟುಡಿಯೋ ವ್ಯಾಲರ್ ಡಿಸೈನರ್ಸ್ ಮೂಲಕ ರೂಪುಗೊಂಡ ವಿಶ್ವದ ಮೊದಲ…
ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್ ಇರುವ ಬಹುನಿರೀಕ್ಷಿತ…
ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…
ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.
ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…
Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.
View Comments
Funny thing , I landed here through a comment you left in my blog some 15 years ago !! :-) Long long time ago :-)
https://bachodi.in/2006/10/06/kannada-namaskara/
ನಮಸ್ತೇ ಸರ್. 15 ವರ್ಷಗಳ ಬಳಿಕ ಪುನಃ ಭೇಟಿ. ಧನ್ಯವಾದಗಳು.