ಮೊಬೈಲ್‌ನಲ್ಲಿ ನೀವು ಹೇಳಿದ್ದನ್ನು ‘ಟೈಪ್’ ಮಾಡಬಲ್ಲ ಕೀಬೋರ್ಡ್ – ಲಿಪಿಕಾರ್

ತಂತ್ರಜ್ಞಾನ ಬೆಳವಣಿಗೆಯ ಯುಗದಲ್ಲಿ ಇಂಗ್ಲಿಷ್ ಭಾಷೆಯೇನೋ ಎಲ್ಲೂ ಸಲ್ಲುವಂತಾಯಿತು. ಆದರೆ ಇಂಗ್ಲಿಷ್‌ನಂತಿಲ್ಲದ, ಒತ್ತಕ್ಷರಗಳುಳ್ಳ ಹಾಗೂ ಮಾತಿನ ಧ್ವನಿಯ ರೀತಿಯೇ ಬರೆಯಬಲ್ಲ ಕ್ಲಿಷ್ಟಾಕ್ಷರಗಳಿರುವ ಭಾರತೀಯ ಭಾಷೆಗಳಿಗೆ ಮೊಬೈಲ್ ಅಥವಾ ಕಂಪ್ಯೂಟರಿನಲ್ಲಿ ಟೈಪಿಂಗ್ ದೊಡ್ಡ ಸಮಸ್ಯೆಯಾಗಿ ಕಾಡುತ್ತಿತ್ತು. ಈಗಲೂ ಮೊಬೈಲ್ ಫೋನ್‌ಗಳ ಪುಟ್ಟ ಕೀಬೋರ್ಡ್‌ನಲ್ಲಿ ಕನ್ನಡ ಅಕ್ಷರಗಳನ್ನು ಮೂಡಿಸುವುದಕ್ಕಿಂತಲೂ, ಇಂಗ್ಲಿಷಿನಲ್ಲಿಯೇ ಕನ್ನಡವನ್ನು (ಕಂಗ್ಲಿಷ್ ಎನ್ನಲಾಗುತ್ತಿದೆ) ಬರೆಯುವವರೇ ಹೆಚ್ಚು. ಆದರೆ ಅದನ್ನು ಓದುವವರಿಗೆ ಎಷ್ಟು ಕಷ್ಟವಾಗುತ್ತದೆ ಎಂಬ ಅರಿವು ಅವರಿಗಿರುವುದಿಲ್ಲ. ಇದಕ್ಕೆ ಸೂಕ್ತ ಮಾಹಿತಿಯ ಕೊರತೆಯೂ ಒಂದು ಕಾರಣ. ಟೈಪಿಂಗ್ ಕಷ್ಟವಾಗಿರುವವರಿಗೆ ಮಾತನ್ನೇ ಪಠ್ಯವಾಗಿ ಪರಿವರ್ತಿಸಬಲ್ಲ (ಸ್ಪೀಚ್ ಟು ಟೆಕ್ಸ್ಟ್) ಈಗಾಗಲೇ ಹಲವಾರು ಭಾಷೆಗಳಿಗೆ ಬಂದಿವೆ. ಜತೆಗೆ ಕನ್ನಡಕ್ಕೂ ಇತ್ತೀಚೆಗೆ ಇದು ಸಾಧ್ಯವಾಗುತ್ತಿದೆ.

ಈ ನಿಟ್ಟಿನಲ್ಲಿ ಈಗ ಸದ್ದು ಮಾಡಿರುವುದು ಲಿಪಿಕಾರ್ ಎಂಬ ಕೀಬೋರ್ಡ್ ಆ್ಯಪ್. ಆಂಡ್ರಾಯ್ಡ್ ಫೋನುಗಳಿಗೆ ಉಚಿತವಾಗಿ ಲಭ್ಯವಿರುವ ಈ ಕೀಬೋರ್ಡ್ ಅಳವಡಿಸಿಕೊಂಡರೆ, ನೀವು ಹೇಳಿದ ಮಾತನ್ನು ಅದು ಕೇಳಿಸಿಕೊಂಡು, ಅಕ್ಷರ ರೂಪಕ್ಕೆ ಪರಿವರ್ತಿಸುತ್ತದೆ. ಅದನ್ನು ನೀವು ವಾಟ್ಸಾಪ್, ಎಸ್ಸೆಮ್ಮೆಸ್ ಸಂದೇಶ ಕಳುಹಿಸಲು ಮತ್ತು ಫೇಸ್‌ಬುಕ್/ಟ್ವಿಟರ್ ಪೋಸ್ಟ್ ಮಾಡಲು ಕೂಡ ಬಳಸಬಹುದು. ಅಂತರ್ಜಾಲದಲ್ಲಿ ವಿಹರಿಸುತ್ತಿರುವ ಬಹುತೇಕರಿಗೆ ಈ ಕುರಿತು ಮಾಹಿತಿ ಇದೆ. ಬಳಸಿ ನೋಡಿದಾಗ, ತಂತ್ರಜ್ಞಾನದ ಕುರಿತು ಅಷ್ಟೇನೂ ಮಾಹಿತಿಯಿಲ್ಲದಿರುವ ಜನಸಾಮಾನ್ಯರಿಗೂ, ಕನ್ನಡ ಟೈಪಿಂಗ್ ಸುಲಭವಾಗಬಹುದು ಎಂಬ ಕಾರಣಕ್ಕೆ ಇಲ್ಲಿ ಮಾಹಿತಿ ಹಂಚಿಕೊಳ್ಳುತ್ತಿದ್ದೇನೆ. ಜತೆಗೆ ಇದರಲ್ಲೇ ಇರುವ ಕನ್ನಡ ಕೀಬೋರ್ಡ್ ಕೂಡ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ತಿಳಿದುಕೊಳ್ಳೋಣ.

ಮೊದಲು ಗೂಗಲ್ ಪ್ಲೇ ಸ್ಟೋರ್‌ನಿಂದ Lipikaar Kannada ಅಂತ ಸರ್ಚ್ ಮಾಡಿ, ಕನ್ನಡ (ಬೇಕಿದ್ದರೆ ಬೇರೆ ಭಾಷೆಗಳಲ್ಲಿಯೂ) ಕೀಬೋರ್ಡ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಿ. ಇನ್‌ಸ್ಟಾಲ್ ಆದ ಮೇಲೆ ಆ ಆ್ಯಪ್ ಐಕಾನ್ ಕ್ಲಿಕ್ ಮಾಡಿದಾಗ, ಅದನ್ನು ನಿಮ್ಮ ಫೋನಿಗೆ ಹೇಗೆ ಅಳವಡಿಸಿಕೊಳ್ಳುವುದು ಅಂತ ಮೊಬೈಲೇ ನಿಮ್ಮನ್ನು ಹಂತ ಹಂತವಾಗಿ ಕರೆದೊಯ್ಯುತ್ತದೆ. ಪ್ರತ್ಯೇಕವಾಗಿ ಯಾವುದೇ ಸೆಟ್ಟಿಂಗ್ಸ್ ಬಗ್ಗೆ ನೀವು ಆಲೋಚಿಸಬೇಕಾಗಿಲ್ಲ. ಹಂತಗಳನ್ನು ಓದುತ್ತಾ, ಕ್ಲಿಕ್ ಮಾಡುತ್ತಾ ಹೋದರಾಯಿತು.

ಕೀಬೋರ್ಡ್ ಅಳವಡಿಸಿಕೊಂಡ ಬಳಿಕ, ಏನಾದರೂ ಟೈಪ್ ಮಾಡಲು ಹೊರಟಾಗ (ಅಂದರೆ ತತ್ಸಂಬಂಧಿತ ಮೆಸೇಜಸ್, ವಾಟ್ಸಾಪ್, ಫೇಸ್‌ಬುಕ್, ಬ್ರೌಸರ್ ಮುಂತಾದ ಆ್ಯಪ್‌ಗಳನ್ನು ಓಪನ್ ಮಾಡಿರಬೇಕು), ಕಾಣಿಸಿಕೊಳ್ಳುವ ವರ್ಚುವಲ್ ಕೀಬೋರ್ಡ್‌ನಲ್ಲಿ ಒಂದು ಕಡೆ ಇಂಗ್ಲಿಷ್ ಹಾಗೂ ಪಕ್ಕದಲ್ಲೇ ಕನ್ನಡ ಅಂತ ಬರೆದಿರುತ್ತದೆ. ಕನ್ನಡ ಬರೆದಿರುವುದರ ಮೇಲೆ ಒತ್ತಿ, ಬಳಿಕ ಪಕ್ಕದಲ್ಲೇ ಇರುವ ಮೈಕ್ ಐಕಾನ್ ಮೇಲೆ ಒತ್ತಿದಾಗ, ‘ಕೇಳುತ್ತಿದ್ದೇನೆ’ ಅಂತ ತೋರಿಸುತ್ತದೆ. ನೀವು ಟೈಪ್ ಮಾಡಬೇಕಾದ ಸಂದೇಶವನ್ನು ಕನ್ನಡದಲ್ಲೇ ಹೇಳಿ. ಸಂದೇಶ ಹೇಳಿದ ಬಳಿಕ Done ಬಟನ್ ಒತ್ತಿ. ‘ಪ್ರಕ್ರಿಯೆ ಜಾರಿಯಲ್ಲಿದೆ’ ಅಂತ ತೋರಿಸಿ, ಕೆಲವೇ ಕ್ಷಣಗಳಲ್ಲಿ ನಿಮ್ಮ ಸಂದೇಶ ಅಲ್ಲಿ ಕಾಣಿಸಿಕೊಳ್ಳುತ್ತದೆ. ಕಳುಹಿಸುವ/ಪೋಸ್ಟ್ ಮಾಡುವ ಮುನ್ನ, ಅದನ್ನು ಕೀಬೋರ್ಡ್ ಮೂಲಕ ತಿದ್ದುಪಡಿ ಮಾಡಿಕೊಳ್ಳಬಹುದು. ಇಂಗ್ಲಿಷ್ ಆಯ್ಕೆ ಮಾಡಿದ್ದರೆ, ಇಂಗ್ಲಿಷಿನಲ್ಲಿ ಹೇಳಿದ್ದನ್ನು ಅದು ಅಕ್ಷರವಾಗಿ ಮೂಡಿಸುತ್ತದೆ.

ನೆನಪಿಡಿ. ಒಮ್ಮೆಗೆ 14 ಸೆಕೆಂಡುಗಳ ಕಾಲ ಮಾತ್ರ ಈ ಧ್ವನಿ ಕೀಬೋರ್ಡನ್ನು ಬಳಸಬಹುದು. ಅಂದರೆ, 14 ಸೆಕೆಂಡಿನ ಬಳಿಕ, ಪುನಃ ಮೈಕ್ ಬಟನ್ ಒತ್ತಬೇಕಾಗುತ್ತದೆ. ಹೀಗಾಗಿ ಉದ್ದ ಭಾಷಣವನ್ನೋ, ಲೇಖನವನ್ನೋ ಅಕ್ಷರ ರೂಪಕ್ಕೆ ಮೂಡಿಸಲು ನೀವು ಒಂದಿಷ್ಟು ಕಷ್ಟ ಪಡಬೇಕಾಗುತ್ತದೆ.

ಸಾಧಕ -ಬಾಧಕ: ಇಂಟರ್ನೆಟ್ ಸಂಪರ್ಕ ಇಲ್ಲದಿದ್ದರೆ, ದುರ್ಬಲ ಕನೆಕ್ಷನ್ ಇದ್ದರೂ ಧ್ವನಿಯನ್ನು ಅಕ್ಷರಕ್ಕೆ ಪರಿವರ್ತಿಸುವ ವ್ಯವಸ್ಥೆಯು ಇಲ್ಲಿ ಕೆಲಸ ಮಾಡುವುದಿಲ್ಲ. ಹೀಗಾಗಿ ಇಂಟರ್ನೆಟ್ ಸಂಪರ್ಕ ಇರುವಲ್ಲಿಯೇ ಬಳಸಬೇಕಾಗುತ್ತದೆ. ಜತೆಗೆ, ವಾಕ್ಯಗಳಲ್ಲಿ ವಿರಾಮ ಚಿಹ್ನೆಗಳನ್ನು ನಾವೇ ಟೈಪ್ ಮಾಡಿ ಸೇರಿಸಬೇಕಾಗುತ್ತದೆ. ದೊಡ್ಡ ದೊಡ್ಡ ಲೇಖನಗಳನ್ನು ಬರೆಯಬೇಕಿದ್ದರೆ, ನಿರಂತರವಾಗಿ ಸಾಧ್ಯವಾಗದು. ಪ್ರತೀ 14 ಸೆಕೆಂಡುಗಳಿಗೊಮ್ಮೆ ಮೈಕ್ ಕೀ ಪ್ರೆಸ್ ಮಾಡಬೇಕಾಗುತ್ತದೆ.

ಮತ್ತೊಂದು ಸಮಸ್ಯೆಯೆಂದರೆ, ಇದರ ಕೀಬೋರ್ಡ್‌ನಲ್ಲಿ ಟೈಪ್ ಮಾಡುವುದು ತೀರಾ ಕಷ್ಟ. ಒಂದು ಕೀಯಲ್ಲಿ ನಾಲ್ಕೈದು ಅಕ್ಷರಗಳಿರುವುದರಿಂದಾಗಿ, ವಿಶೇಷವಾಗಿ ಸ್ವರಾಕ್ಷರಗಳನ್ನು ಟೈಪ್ ಮಾಡಲು ಜಾಸ್ತಿ ಕೀಲಿಗಳನ್ನು ಪ್ರೆಸ್ ಮಾಡಬೇಕಾಗುತ್ತದೆ. ಇದು ಆರಂಭಿಕ ಹಂತದಲ್ಲಿರುವುದರಿಂದ, ಕೀಬೋರ್ಡ್ ಡೆವಲಪರ್‌ಗಳು ಈ ಸಮಸ್ಯೆಗಳ ಮೇಲೆ ಗಮನ ಹರಿಸಿ, ಆ್ಯಪ್ ಅಪ್‌ಡೇಟ್ ಮಾಡಬಹುದು ಎಂಬುದು ಕನ್ನಡಿಗರ ನಿರೀಕ್ಷೆ.

ನಿಧಾನವಾಗಿ ಮತ್ತು ಸ್ಪಷ್ಟವಾಗಿ ಉಚ್ಚರಿಸಿದರೆ ಇದರಲ್ಲಿ ಮೂಡಿಬರುವ ಅಕ್ಷರಗಳಿಗೆ ಬಹುತೇಕ ಪರ್ಫೆಕ್ಷನ್ ಇದೆ. ಟೈಪ್ ಮಾಡುವುದು ಕಷ್ಟ ಅಂದುಕೊಳ್ಳುವವರಿಗೆ ಅತ್ಯುಪಯುಕ್ತ ಇದು. ಜತೆಗೆ, ಈಗಾಗಲೇ ಜಸ್ಟ್ ಕನ್ನಡ ಎಂಬ, ನಮ್ಮ ಕನ್ನಡಿಗರೇ ರೂಪಿಸಿದ ಆ್ಯಪ್ ಬಳಸುವುದು ಅತ್ಯಂತ ಸುಲಭವಾಗಿದ್ದು, ಈ ಆ್ಯಪ್ ಡೆವಲಪರ್ ಇಂಥದ್ದೇ ಸ್ಪೀಚ್ ಟು ಟೆಕ್ಸ್ಟ್ ತಂತ್ರಜ್ಞಾನವನ್ನು ‘ಜಸ್ಟ್ ಕನ್ನಡ’ಕ್ಕೂ ಅಳವಡಿಸಿದರೆ ಕನ್ನಡಿಗರಿಗೆ ಅದಕ್ಕಿಂತ ದೊಡ್ಡ ಭಾಗ್ಯ ಬೇರಿಲ್ಲ.

ಇನ್ನು, ಆನ್‌ಲೈನ್‌ನಲ್ಲಿ ಕೂಡ ಲಿಪಿಕಾರ್ ಕನ್ನಡ ಕೀಬೋರ್ಡ್ ಇದೆ. ಅಂದರೆ, ಕಂಪ್ಯೂಟರಲ್ಲಿ ಕನ್ನಡ ಟೈಪ್ ಮಾಡುವುದಕ್ಕಾಗಿ http://www.lipikaar.com/online-editor/kannada-typing ಎಂಬಲ್ಲಿ ಹೋದರೆ, ನೀವು ಇಂಗ್ಲಿಷಲ್ಲಿ ಬೆರಳಚ್ಚಿಸಿದ್ದನ್ನು ಅದು ಕನ್ನಡಕ್ಕೆ ಪರಿವರ್ತಿಸುತ್ತದೆ. ಅಲ್ಲಿಂದ ಕಟ್-ಪೇಸ್ಟ್ ಮಾಡಿಕೊಳ್ಳಬಹುದು. ಇದಕ್ಕೆ ಇಂಟರ್ನೆಟ್ ಸಂಪರ್ಕ ಬೇಕಾಗುತ್ತದೆ. ಇಂಟರ್ನೆಟ್ ಇಲ್ಲದೆಯೇ ಟೈಪ್ ಮಾಡಬೇಕಿದ್ದರೆ, ಸ್ವಲ್ಪ ಹಣ ಕೊಟ್ಟು ಕೀಬೋರ್ಡ್ ತಂತ್ರಾಂಶ ಖರೀದಿಸಿ ನಮ್ಮ ಕಂಪ್ಯೂಟರಿಗೆ ಅಳವಡಿಸಿಕೊಳ್ಳಬೇಕಾಗುತ್ತದೆ.

ಆತಂಕ: ಈ ಕೀಬೋರ್ಡ್ ಅಳವಡಿಸಿಕೊಳ್ಳುವಾಗ, ನೀವು ಟೈಪ್ ಮಾಡುವ ಪಾಸ್‌ವರ್ಡ್‌ಗಳನ್ನು, ಕ್ರೆಡಿಟ್ ಕಾರ್ಡ್ ನಂಬರ್‌ಗಳನ್ನು ಅದು ಸಂಗ್ರಹಿಸಿಕೊಳ್ಳುತ್ತದೆ ಅನ್ನುವ ಸೂಚನೆ ಕಾಣಿಸುತ್ತದೆ. ಪ್ರೈವೆಸಿ ಬಗ್ಗೆ ತೀರಾ ಆಸ್ಥೆ ವಹಿಸುವವರಿಗೆ, ಹೌದು, ಕೀಬೋರ್ಡ್ ಆ್ಯಪ್ ಯಾಕೆ ನಮ್ಮ ಪಾಸ್‌ವರ್ಡ್ ಸಂಗ್ರಹಿಸಿಕೊಂಡಿರಬೇಕು ಎಂಬ ಶಂಕೆ ಬರುವುದು ಸಹಜ. ಪಾಸ್‌ವರ್ಡ್ ಟೈಪ್ ಮಾಡುವುದಕ್ಕೆ ನೀವು ಅವರ ಕೀಬೋರ್ಡ್ ಬಳಸುತ್ತಿದ್ದೀರಲ್ಲವೇ? ಇಂಟರ್ನೆಟ್ ಸಂಪರ್ಕದ ಮೂಲಕ ಅವರ ಸರ್ವರ್‌ಗೆ ಕನೆಕ್ಟ್ ಆಗುವಾಗ, ನಮ್ಮ ವೈಯಕ್ತಿಕ ಮಾಹಿತಿ ಅಲ್ಲಿ ಸೋರಿ ಹೋಗುತ್ತದೆ ಎಂಬುದು ಆತಂಕ. ಎಲ್ಲ ಕೀಬೋರ್ಡ್ ಆ್ಯಪ್‌ಗಳು ನಾವು ಟೈಪ್ ಮಾಡಿದ್ದನ್ನು ನೋಡುತ್ತವೆಯಾದರೂ, ಆ ಮಾಹಿತಿಯನ್ನು ಸಂಗ್ರಹಿಸಿಟ್ಟುಕೊಳ್ಳಬಹುದು ಎಂಬ ಸೂಚನೆ ಬಹುತೇಕ ಎಲ್ಲ ಕೀಬೋರ್ಡ್‌ಗಳನ್ನು ಅಳವಡಿಸಿಕೊಳ್ಳುವಾಗಲೂ ಕಾಣಿಸಿಕೊಳ್ಳುತ್ತದೆ. ಅವರ ಸರ್ವರ್‌ನಲ್ಲಿರುವ ಮಾಹಿತಿ ಸೋರಿಕೆಯಾಗದು ಮತ್ತು ದುರ್ಬಳಕೆಯಾಗದು ಎಂಬ ವಿಶ್ವಾಸದಿಂದಲೇ ಅವುಗಳನ್ನು ಬಳಸಬೇಕಾಗುತ್ತದೆ. ಇಲ್ಲವಾದಲ್ಲಿ, ಇನ್-ಬಿಲ್ಟ್ ಕೀಬೋರ್ಡೇ ಸೂಕ್ತ.

ಮಾಹಿತಿ@ತಂತ್ರಜ್ಞಾನ: ಅವಿನಾಶ್ ಬಿ. (ವಿಜಯ ಕರ್ನಾಟಕ ಅಂಕಣ 31 ಜುಲೈ 2017)

Avinash B

Avinash B. Tech Writer, Columnist, Working as Online media Journalist for more than two decades. Passionate about Technology and Gadgets. Yakshagana and Music are passion.

Recent Posts

ಎಐ ವೈಶಿಷ್ಟ್ಯಗಳ realme GT 7 Pro ಬಿಡುಗಡೆ: ಬೆಲೆ ಎಷ್ಟು? ವೈಶಿಷ್ಟ್ಯಗಳೇನು? ಇಲ್ಲಿದೆ ಪೂರ್ಣ ಮಾಹಿತಿ

ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್‌ ಇರುವ ಬಹುನಿರೀಕ್ಷಿತ…

3 weeks ago

ರಿಯಲ್‌ಮಿ ನಾರ್ಜೋ 70 ಟರ್ಬೊ 5 ಜಿ, ರಿಯಲ್‌ಮಿ ಬಡ್ಸ್ ಎನ್‌1 ಬಿಡುಗಡೆ: ಬೆಲೆ, ವೈಶಿಷ್ಟ್ಯ ತಿಳಿಯಿರಿ

ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…

3 months ago

ಓದುವಿಕೆ, ಕಲಿಕೆ ಉತ್ತೇಜನಕ್ಕೆ ‘ರೀಡ್-ಅ-ಥಾನ್’: ದಾಖಲೆಯ ಗುರಿ

ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.

3 months ago

Realme 13 +, Realme 13 5ಜಿ ಫೋನ್ ಬಿಡುಗಡೆ: ವೇಗದ ಫೋನ್‌ನ ವೈಶಿಷ್ಟ್ಯಗಳು, ಬೆಲೆ ಇಲ್ಲಿ ತಿಳಿಯಿರಿ

ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…

4 months ago

e-ಯುಗದ ತನಿಖಾ ಪತ್ರಿಕೋದ್ಯಮ: ಫ್ಯಾಕ್ಟ್ ಚೆಕ್

Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.

5 months ago

ಯಕ್ಷ ಮಂತ್ರ ಮಾಂಗಲ್ಯ: ಕೀರ್ತನಾ ಪ್ರಸಾದ ಕಲ್ಯಾಣವು

ಹಾಡುಗಾರಿಕೆ, ಚೆಂಡೆ-ಮದ್ದಳೆಯ ಬಿಡಿತ-ಮುಕ್ತಾಯಗಳ ಬಳಿಕ, ಬಂದಿದ್ದ ಗಣ್ಯರು, ಒಂದೊಂದು ಹಾಡಿನಲ್ಲಿ ಅಡಕವಾಗಿರುವ ಮಂತ್ರ ಮಾಂಗಲ್ಯದ ಪ್ರತಿಜ್ಞಾಗುಚ್ಛವನ್ನು ವಿವರಿಸಿ, ವಧು-ವರರಿಗೆ ಬೋಧಿಸಿದರು

10 months ago