ನಿಮ್ಮ ಎಟಿಎಂ (ಡೆಬಿಟ್) ಅಥವಾ ಕ್ರೆಡಿಟ್ ಕಾರ್ಡ್ ನಿಮ್ಮ ಜೇಬಿನಲ್ಲೇ ಅಥವಾ ಮನೆಯೊಳಗೆ ಸುರಕ್ಷಿತ ಸ್ಥಳದಲ್ಲಿ ಭದ್ರವಾಗಿರುತ್ತದೆ. ಆದರೆ, ಫೋನ್‌ಗೆ ದಿಢೀರ್ ಸಂದೇಶ – ‘ನಿಮ್ಮ ಖಾತೆಯಿಂದ ಇಂತಿಷ್ಟು ಸಾವಿರ ರೂಪಾಯಿ ವಿತ್‌ಡ್ರಾ ಮಾಡಲಾಗಿದೆ’ ಅಂತ. ‘ಇಲ್ಲ, ಹಾಗಾಗಿರಲು ಸಾಧ್ಯವಿಲ್ಲ, ಎಟಿಎಂ ನನ್ನ ಕೈಯಲ್ಲೇ ಇದೆಯಲ್ಲ’ ಎಂದುಕೊಂಡು ಸುಮ್ಮನಾಗುತ್ತೀರಿ. ಪುನಃ ಮತ್ತೊಂದು ಸಂದೇಶ – ’30 ಸಾವಿರ ರೂ. ನಗದೀಕರಿಸಲಾಗಿದೆ’ ಅಂತ. ಸುಮ್ಮನಿದ್ದ ಪರಿಣಾಮ? ಬ್ಯಾಂಕ್ ಖಾತೆಯಲ್ಲಿದ್ದ ಹಣ ಪೂರ್ತಿ ಖಾಲಿ.
ಇದು ವಾಸ್ತವ ಘಟನೆ. ಎರಡು ವಾರಗಳ ಹಿಂದೆ ಬೆಂಗಳೂರಿನಲ್ಲಿ ಸುಮಾರು 200ರಷ್ಟು ಮಂದಿ ತಮ್ಮ ಖಾತೆಯಲ್ಲಿದ್ದ ಸುಮಾರು 10 ಲಕ್ಷಕ್ಕೂ ಹೆಚ್ಚು ಹಣವನ್ನು ಕಳೆದುಕೊಂಡಿದ್ದರು. ಇದು ಮಾಧ್ಯಮಗಳಲ್ಲೆಲ್ಲ ಸುದ್ದಿಯಾಯಿತು. ನಾವು-ನೀವು ನಿರ್ಲಕ್ಷಿಸಿದೆವು. ಯಾಕೆಂದರೆ, ‘ಬ್ಯಾಂಕ್ ಅಥವಾ ಭಾರತೀಯ ರಿಸರ್ವ್ ಬ್ಯಾಂಕ್ ನೀಡಿದ ಸೂಚನೆಯನ್ನು ನಾವು ಪಾಲಿಸುತ್ತಿದ್ದೇವೆ, ಯಾರಿಗೂ ನಮ್ಮ ಬ್ಯಾಂಕ್ ಖಾತೆಯ ಲಾಗಿನ್ ಐಡಿ, ಪಾಸ್‌ವರ್ಡ್, ಒಟಿಪಿ ಕೊಟ್ಟಿಲ್ಲ’ ಎಂಬುದು ನಮ್ಮ ವಿಶ್ವಾಸ.
ಇಷ್ಟು ಸುರಕ್ಷತೆ ವಹಿಸಿದರೂ ಹಣ ಖಾಲಿಯಾಗಿದ್ದು ಹೇಗೆ? ಎಟಿಎಂ ಕಾರ್ಡ್ ನಮ್ಮಲ್ಲೇ ಇದ್ದರೂ ಹಣ ಹೋಯಿತು ಹೇಗೆ ಅಂತ ಅಚ್ಚರಿ ಪಟ್ಟಿದ್ದೀರಾ?
ಇದೋ ಬಂದಿದೆ ಸ್ಕಿಮ್ಮರ್! ತಂತ್ರಜ್ಞಾನ ಎಷ್ಟು ಮುಂದುವರಿಯಿತೋ ಅದನ್ನು ದುರ್ಬಳಕೆ ಮಾಡಿಕೊಳ್ಳುವವರ ಬುದ್ಧಿವಂತಿಕೆಯೂ ಅದೇ ಮಟ್ಟದಲ್ಲಿರುತ್ತದೆ ಎಂಬುದಕ್ಕೆ ಇದು ಸಾಕ್ಷಿ.
ಏನಿದು ಕಾರ್ಡ್ ಸ್ಕಿಮ್ಮಿಂಗ್?
ಎಟಿಎಂ ಪಿನ್ ನಂಬರನ್ನು ಸುರಕ್ಷಿತವಾಗಿರಿಸಿ, ಯಾರಿಗೂ ತೋರಿಸದ ರೀತಿಯಲ್ಲಿ ಎಟಿಎಂ ಯಂತ್ರದಲ್ಲಿ ಪಿನ್ ನಂಬರ್ ಟೈಪ್ ಮಾಡಿ, ಕಾರ್ಡ್ ತೂರಿಸುವಲ್ಲಿ ಏನಾದರೂ ಗಮ್ ರೀತಿಯ ವಸ್ತು ಇದೆಯೇ, ಅಕ್ಕ ಪಕ್ಕದಲ್ಲಿ ಕ್ಯಾಮೆರಾ ಇದೆಯೇ ಅಂತೆಲ್ಲ ನೋಡಿಕೊಳ್ಳಿ, ಹಿಂಬದಿಯಿಂದ ಯಾರೂ ಇಣುಕದಂತೆ ನೋಡಿಕೊಳ್ಳಿ… ಈ ಎಲ್ಲ ಸಲಹೆಗಳನ್ನು ಮೀರಿ ಬೆಳೆದ ತಂತ್ರಜ್ಞಾನವಿದು.
ಪೆಟ್ರೋಲ್ ಬಂಕ್, ಮಾಲ್‌ಗಳು ಅಥವಾ ಬೇರಾವುದೇ ಮಳಿಗೆಗಳಲ್ಲಿ ಡೆಬಿಟ್/ಕ್ರೆಡಿಟ್ ಕಾರ್ಡ್ ಸ್ವೈಪ್ ಮಾಡಲು ಇರುವ ಪಿಒಎಸ್ (ಪಾಯಿಂಟ್ ಆಫ್ ಸೇಲ್ಸ್) ಯಂತ್ರಗಳಲ್ಲಿ ಮತ್ತು ಎಟಿಎಂ ಯಂತ್ರಗಳಲ್ಲಿ ಕಾರ್ಡ್ ತೂರಿಸುವ ಸ್ಲಾಟ್‌ನೊಳಗೆ ಬರಿಗಣ್ಣಿಗೆ ಕಾಣದಷ್ಟು ಪುಟ್ಟದಾದ ಸ್ಕಿಮ್ಮರ್ ಸಾಧನವನ್ನು ಇರಿಸಲಾಗುತ್ತದೆ. ಕ್ರೆಡಿಟ್/ಡೆಬಿಟ್ ಕಾರ್ಡ್‌ಗಳಲ್ಲಿ ಇರುವ ಕಪ್ಪನೆಯ ಅಯಸ್ಕಾಂತೀಯ ಪಟ್ಟಿಯಲ್ಲಿ (ಮ್ಯಾಗ್ನೆಟಿಕ್ ಸ್ಟ್ರೈಪ್) ನಿಮ್ಮ ಬ್ಯಾಂಕಿನ ಖಾತೆ, ಕಾರ್ಡ್ ಸಂಖ್ಯೆ ಮತ್ತಿತರ ವಿವರಗಳೆಲ್ಲವೂ ವಿದ್ಯುನ್ಮಾನ ದತ್ತಾಂಶ ರೂಪದಲ್ಲಿ ಸಂಗ್ರಹಿತವಾಗಿರುತ್ತವೆ. ಈ ಮಾಹಿತಿಯನ್ನು ನಕಲು ಮಾಡುವುದೇ ಸ್ಕಿಮ್ಮಿಂಗ್ ಅಥವಾ ಕ್ಲೋನಿಂಗ್ ತಂತ್ರಜ್ಞಾನ. ಅಂದರೆ ದತ್ತಾಂಶವನ್ನು ಈ ರೀತಿಯಾಗಿ ಸಂಗ್ರಹಿಸಿ ಎಟಿಎಂ/ಕ್ರೆಡಿಟ್ ಕಾರ್ಡುಗಳ ತದ್ರೂಪಿ ನಕಲು ಸೃಷ್ಟಿಸಿ ಹಣ ವಿತ್‌ಡ್ರಾ ಮಾಡುವುದು. ಎಟಿಎಂಗಳಲ್ಲಿ ಅಥವಾ ಪಿಒಎಸ್‌ಗಳಲ್ಲಿ ಕಾರ್ಡ್ ಬಳಸಿದಾಗ ಒಟಿಪಿ (ನಮ್ಮ ಮೊಬೈಲ್ ನಂಬರಿಗೆ ಬರುವ ಏಕಕಾಲಿಕ ಪಾಸ್‌ವರ್ಡ್) ಕೂಡ ಅಗತ್ಯವಿರುವುದಿಲ್ಲ. ಹೀಗಾಗಿ ಖದೀಮರಿಗೆ ಇದೊಂದು ಹೊಸ ಮಾರ್ಗ.
ಹೇಗೆ ಸಾಧ್ಯ?
ಇಂಥದ್ದೊಂದು ಖದೀಮರ ಗ್ಯಾಂಗ್, ಯಾರೂ ಇಲ್ಲದ ವೇಳೆಯಲ್ಲಿ ಎಟಿಎಂ ಮೆಷಿನ್‌ಗಳಲ್ಲಿ ತೆಳುವಾದ ಸ್ಕಿಮ್ಮರ್ ಅಳವಡಿಸಬಹುದು. ಅದೇ ರೀತಿ, ಎಟಿಎಂ ಕಾರ್ಡ್‌ನ ಪಿನ್ (ಪರ್ಸನಲ್ ಐಡೆಂಟಿಫಿಕೇಶನ್ ನಂಬರ್) ತಿಳಿದುಕೊಳ್ಳಲು ಅಕ್ಕಪಕ್ಕದಲ್ಲೇ ಎಲ್ಲೋ ಪುಟ್ಟ ಕ್ಯಾಮೆರಾವನ್ನು ಇರಿಸಬಹುದು. ಇಲ್ಲವೇ, ಅಲ್ಲಿರುವ ನಂಬರ್ ಪ್ಯಾಡ್ ಮೇಲೆಯೇ, ಮೇಲ್ನೋಟಕ್ಕೆ ಸುಲಭವಾಗಿ ಗೋಚರವಾಗದ ಅತ್ಯಂತ ತೆಳುವಾದ, ಪಾರದರ್ಶಕವಾದ ಶೀಟ್ ಒಂದನ್ನು ಇರಿಸಿ, ನೀವು ಒತ್ತುವ ಪಿನ್ ಸಂಖ್ಯೆಯನ್ನು ನಕಲು ಮಾಡಿಕೊಳ್ಳಬಹುದು. ಬಳಿಕ ಯಾರೂ ಇಲ್ಲದ ವೇಳೆ ಎಟಿಎಂ ಪ್ರವೇಶಿಸುವ ವಂಚಕರು, ಈ ಪುಟ್ಟ ಮಾಹಿತಿ ಸಂಚಯವನ್ನು ವಾಪಸ್ ಪಡೆದುಕೊಳ್ಳುತ್ತಾರೆ. ಈ ಸ್ಕಿಮ್ಮರ್ ಹಾಗೂ ತೆಳು ಹಾಳೆಯಿಂದ ದೊರೆತ ದತ್ತಾಂಶದ ಆಧಾರದಲ್ಲಿ ನಕಲಿ ಕಾರ್ಡ್ ತಯಾರಿಸಿ, ಬೇರಾವುದೇ ಎಟಿಎಂಗೆ ಹೋಗಿ ಹಣ ನಗದೀಕರಿಸಬಹುದು. ಬೇರೆಲ್ಲೋ ರಾಜ್ಯಗಳಿಂದಲೋ ವಹಿವಾಟು ನಡೆಸಿ ಹಣ ವಿತ್‌ಡ್ರಾ ಮಾಡಬಹುದು ಅಥವಾ ಯಾವುದೇ ತಾತ್ಕಾಲಿಕ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಿಕೊಳ್ಳಬಹುದು. ಎಟಿಎಂ ಕಾರ್ಡ್ ನಿಮ್ಮ ಕೈಯಲ್ಲೇ ಇದ್ದರೂ, ಹಣ ಹೋದ ಮೇಲೆಯೇ ವಂಚನೆ ನಮ್ಮ ಗಮನಕ್ಕೆ ಬರುತ್ತದೆ.
ಏನು ಮಾಡಬೇಕು…
* ಮೊದಲನೆಯದಾಗಿ, ಸೆಕ್ಯುರಿಟಿ ಗಾರ್ಡ್ ಇರುವ ಎಟಿಎಂಗಳನ್ನು ಮಾತ್ರವೇ ಬಳಸುವುದನ್ನು ರೂಢಿ ಮಾಡಿಕೊಳ್ಳಿ.
* ಪದೇ ಪದೇ ನಿಮ್ಮ ಬ್ಯಾಂಕ್ ಸ್ಟೇಟ್‌ಮೆಂಟ್ ಪರಿಶೀಲಿಸುತ್ತಾ ಇರಿ. ಎಷ್ಟೇ ಹಣ ವಿತ್‌ಡ್ರಾ ಮಾಡಿದರೂ ಎಸ್ಸೆಮ್ಮೆಸ್ ಬರುವಂತೆ ಬ್ಯಾಂಕಿನಲ್ಲೇ ಹೋಗಿ ನೋಂದಾಯಿಸಿಕೊಳ್ಳಿ.
* ಎಟಿಎಂನ ಒಳಗೆ ಹೋಗುವಾಗ ಬೇರೆಯವರು ಪ್ರವೇಶಿಸದಂತೆ ನೋಡಿಕೊಳ್ಳಿ.
* ಎಟಿಎಂ ಹೊಕ್ಕ ತಕ್ಷಣ ಕಾರ್ಡ್ ರೀಡರ್ ಸ್ಲಾಟ್, ಕೀಪ್ಯಾಡ್ ಮತ್ತು ಸುತ್ತಮುತ್ತ ಅಸಹಜವಾದ ಬದಲಾವಣೆಗಳು ಗೋಚರಿಸುತ್ತದೆಯೇ ಅಂತ ನೋಡಿಕೊಳ್ಳಿ. ಇಲ್ಲಂತೂ ಸಂಶಯಿಸುವ ಗುಣ ಬೇಕಾಗುತ್ತದೆ.
* ಕೀಪ್ಯಾಡ್ ಒತ್ತುವಿಕೆಯನ್ನು ತಿಳಿದುಕೊಳ್ಳುವ ರೀತಿಯಲ್ಲಿ ಎಟಿಎಂನೊಳಗೆ ಎಲ್ಲಾದರೂ ಪುಟ್ಟ ಗಾತ್ರದ ಕ್ಯಾಮೆರಾ ಅಳವಡಿಸಲಾಗಿದೆಯೇ ಎಂಬುದನ್ನು ಪರಿಶೀಲಿಸಿಕೊಳ್ಳಿ.
* ಸ್ಕಿಮ್ಮಿಂಗ್ ಯಂತ್ರ ಪತ್ತೆ ಮಾಡುವುದು ಕಷ್ಟ. ಆದರೂ ಪಾಸ್‌ವರ್ಡ್ ಟೈಪ್ ಮಾಡುವಾಗ ಬೇರೆಯವರಿಗೆ ಅಥವಾ ಕ್ಯಾಮೆರಾಕ್ಕೆ ಕಾಣದಂತೆ ಮತ್ತೊಂದು ಕೈ ಅಡ್ಡವಿಟ್ಟುಕೊಳ್ಳಿ. ಕೀಪ್ಯಾಡ್ ಮೇಲೆ ಏನಾದರೂ ತೆಳುವಾದ ಪದರವಿದೆಯೇ ಎಂದೂ ನೋಡಿಕೊಳ್ಳಿ.
* ಎಟಿಎಂ ಪಿನ್ ನಂಬರ್ ನಮೂದಿಸಲು ಇನ್ನೊಬ್ಬರ ಸಹಾಯ ಪಡೆಯುವುದನ್ನು ತಪ್ಪಿಸಿ.
* ಹಣ ಡ್ರಾ ಮಾಡಿದ ಬಳಿಕ ಬರುವ ರಶೀದಿಯನ್ನು ಅಲ್ಲೇ ಎಸೆಯಬೇಡಿ, ಅದರಲ್ಲಿ ಪ್ರಮುಖ ಮಾಹಿತಿ ಇರುತ್ತದೆ.
* ಅನಗತ್ಯ ಹಣ ವಿತ್‌ಡ್ರಾ ಆಗಿರುವುದು ಗಮನಕ್ಕೆ ಬಂದ ತಕ್ಷಣ ಬ್ಯಾಂಕಿಗೆ ತಿಳಿಸಿ. ಸಮಯ ಮೀರಿ ದೂರು ನೀಡಿದರೆ ಸಮಸ್ಯೆಯಾಗಬಹುದು.
ನಗರ ಪ್ರದೇಶಗಳಲ್ಲಾದರೆ, ತಿಂಗಳ ವೇತನ ಬ್ಯಾಂಕಿಗೆ ಜಮೆಯಾಗುವ ಮೊದಲ ವಾರದಲ್ಲಿ ಇಂಥ ವಂಚನೆಗಳು ಹೆಚ್ಚು ಘಟಿಸುತ್ತವೆ. ಗ್ರಾಮಾಂತರ ಪ್ರದೇಶಗಳಲ್ಲಿಯೂ ಈ ರೀತಿಯ ಖದೀಮರು ಸಕ್ರಿಯರಾಗಿರಬಹುದು. ಹೀಗಾಗಿ, ಯಾರೇ ಆದರೂ ನಿಮ್ಮ ಬ್ಯಾಂಕ್ ಖಾತೆ ನಂಬರ್ ಕೇಳಿದರೆ, ಒಂದೆರಡು ನಿಮಿಷಕ್ಕಾಗಿ ಎಟಿಎಂ ಕಾರ್ಡ್ ಕೊಡಿ ಅಂತ ಕೇಳಿದರೆ ಕೊಡಲೇಬೇಡಿ. ಮುಗ್ಧರನ್ನು ವಂಚಿಸುವವರಿದ್ದಾರೆ, ಎಚ್ಚರಿಕೆ.
ಭಾರತೀಯ ರಿಸರ್ವ್ ಬ್ಯಾಂಕ್ ಹಾಗೂ ಎಲ್ಲ ಬ್ಯಾಂಕುಗಳು ಸೇರಿಕೊಂಡು, ಸ್ಕಿಮ್ಮಿಂಗ್ ಹಿನ್ನೆಲೆಯಲ್ಲಿ ಎಟಿಎಂ ಭದ್ರತೆ ಬಗ್ಗೆ ಕಠಿಣ ಕ್ರಮ ಕೈಗೊಳ್ಳುವವರೆಗೆ ಅದರಿಂದ ಹಣ ವಿತ್‌ಡ್ರಾ ಮಾಡುವಾಗ ಆತಂಕವಿದ್ದೇ ಇರುತ್ತದೆ.
ಮಾಹಿತಿ@ತಂತ್ರಜ್ಞಾನ: ಅವಿನಾಶ್ ಬಿ. 17 ಜುಲೈ 2017, ವಿಜಯ ಕರ್ನಾಟಕ ಅಂಕಣ
iPhone 16e joins the iPhone 16 lineup, featuring the fast performance of the A18 chip,…
ರಿಯಲ್‌ಮಿ 14 ಪ್ರೊ ಸರಣಿಯ 5ಜಿ ಫೋನ್, ಡ್ಯಾನಿಶ್ ಡಿಸೈನ್ ಸ್ಟುಡಿಯೋ ವ್ಯಾಲರ್ ಡಿಸೈನರ್ಸ್ ಮೂಲಕ ರೂಪುಗೊಂಡ ವಿಶ್ವದ ಮೊದಲ…
ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್ ಇರುವ ಬಹುನಿರೀಕ್ಷಿತ…
ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…
ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.
ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…