ಆಂಡ್ರಾಯ್ಡ್ ಕಾರ್ಯಾಚರಣಾ ವ್ಯವಸ್ಥೆಯುಳ್ಳ ಮೊಬೈಲ್ ಫೋನ್ ಒಡೆಯರಿಗೆ ಈಗಂತೂ ಕನ್ನಡ ಕೀಬೋರ್ಡ್‌ಗಳ ಸುಗ್ಗಿ. ಈಗಾಗಲೇ ಕೆಲವು ಸಾಮಾಜಿಕ ಜಾಲತಾಣಗಳ ಆ್ಯಪ್‌ಗಳಲ್ಲಿಯೂ ಕನ್ನಡ ಟೈಪಿಸುವ ಅವಕಾಶ ನೀಡುತ್ತಿದೆ. ಆಯಾ ಆ್ಯಪ್‌ಗಳಿಗಷ್ಟೇ ಸೀಮಿತವಾಗಿ ಅದರಲ್ಲಿ ಕನ್ನಡ ನುಡಿಯ ಪಡಿ ಮೂಡಿಸಬಹುದು. ಆದರೆ, ಪ್ರತ್ಯೇಕ ಆ್ಯಪ್ ಅಳವಡಿಸಿಕೊಂಡರಂತೂ ನಮಗೆ ಬೇಕುಬೇಕಾದ ಎಲ್ಲ ಆ್ಯಪ್‌ಗಳಲ್ಲಿಯೂ, ವೆಬ್ ತಾಣಗಳಲ್ಲಿಯೂ ಕನ್ನಡದಲ್ಲಿಯೇ ಟೈಪ್ ಮಾಡಬಹುದಾಗಿದೆ. ಇಷ್ಟಲ್ಲದೆ, ಕನ್ನಡದ ಜಾಣ ಜಾಣೆಯರ ಅಂತರ್ಜಾಲ ಪ್ರೇಮವನ್ನು ಸರಿಯಾಗಿಯೇ ಅರ್ಥೈಸಿಕೊಂಡಿರುವ ಜಗತ್ತಿನ ಪ್ರಮುಖ ಸ್ಮಾರ್ಟ್ ಫೋನ್ ಕಂಪನಿಗಳು, ಕನ್ನಡ ಕೀಬೋರ್ಡನ್ನು ತನ್ನದೇ ‘ಲ್ಯಾಂಗ್ವೇಜ್ ಆ್ಯಂಡ್ ಕೀಬೋರ್ಡ್’ ಸೆಟ್ಟಿಂಗ್ಸ್‌ನಲ್ಲೇ ಅಳವಡಿಸಲಾರಂಭಿಸಿವೆ. ಇವೆಲ್ಲ ಲಾಭಗಳೊಂದಿಗೆ, ವೈವಿಧ್ಯಮಯ ಆ್ಯಪ್‌ಗಳ ಭಂಡಾರವಾಗಿರುವ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಹೋಗಿ, ಸರ್ಚ್ ಬಟನ್‌ನಲ್ಲಿ Kannada+Keyboard ಅಂತ ಬರೆದು ಸರ್ಚ್ ಮಾಡಿದರೆ, ನಿಮಗೇ ಅಚ್ಚರಿಯಾಗುವಷ್ಟು ಕನ್ನಡ ಕೀಬೋರ್ಡ್ ಆ್ಯಪ್‌ಗಳು ಧುತ್ತನೇ ನಿಮ್ಮ ಕಣ್ಮುಂದೆ ಗೋಚರಿಸುತ್ತದೆ. ಅವುಗಳಲ್ಲಿ ಪ್ರಮುಖವಾದವು ಇಲ್ಲಿವೆ:
ಜಸ್ಟ್ ಕನ್ನಡ: ಕನ್ನಡ ಕೀಬೋರ್ಡ್‌ಗಳನ್ನು ಹುಡುಕಿದಾಗ ಕಂಡುಬರುವ ಫಲಿತಾಂಶಗಳಲ್ಲಿ ನಂ.1 ಸ್ಥಾನದಲ್ಲಿರುವುದು ಜಸ್ಟ್ ಕನ್ನಡ ಎಂಬ ಆ್ಯಪ್. ಅದನ್ನು ಅಳವಡಿಸಿಕೊಂಡವರು ಆ್ಯಪ್ ಸೃಷ್ಟಿಕರ್ತರಿಗೆ ಧನ್ಯವಾದ ಹೇಳುತ್ತಲೇ ಇದ್ದಾರೆ. ಆರಂಭದಿಂದಲೂ ಕಾಲ ಕಾಲಕ್ಕೆ ಪರಿಷ್ಕರಣೆಗೊಳ್ಳುತ್ತಲೇ ಬಂದಿರುವ ಈ ಕೀಬೋರ್ಡ್ ಆ್ಯಪ್‌ನಲ್ಲಿ ಹಳೆಗನ್ನಡದ ‘ಳ’ ಅಕ್ಷರ, ಕನ್ನಡದ್ದೇ ಅಂಕಿಗಳನ್ನು ಕೂಡ ಪಡಿಮೂಡಿಸಬಹುದು. ಹೊಸ ಬೆಳವಣಿಗೆ ಎಂದರೆ, ಇದರಲ್ಲಿ ಗೆಸ್ಚರ್ ಇನ್‌ಪುಟ್ ವ್ಯವಸ್ಥೆ ಇದೆ. ಅಂದರೆ, ಆನ್‌ಲೈನ್ ಕೀಬೋರ್ಡ್ ಮೇಲೆ ಕೈಬೆರಳಾಡಿಸುತ್ತಲೇ (ಒಂದು ಪದದ ಮುಂದಿನ ಅಕ್ಷರಗಳನ್ನು ಜೋಡಿಸಲು) ನಾವು ಟೈಪ್ ಮಾಡಬಹುದು.ಈ ಆ್ಯಪ್‌ನ ಅಳವಡಿಕೆಯ ಪ್ರಮಾಣ 10 ರಿಂದ 50 ಲಕ್ಷದಷ್ಟು. ಅಂದರೆ, ಅಷ್ಟು ಮಂದಿ ಈ ಆ್ಯಪ್ ಅಳವಡಿಸಿಕೊಂಡಿದ್ದಾರೆ.
ಲಿಪಿಕಾರ್: ಕನ್ನಡ ಕೀಬೋರ್ಡ್ ಲೋಕದಲ್ಲಿ ಇತ್ತೀಚೆಗೆ ಅಕ್ಷರಶಃ ಸದ್ದು ಮಾಡಿರುವುದು ಲಿಪಿಕಾರ್ ಕೀಬೋರ್ಡ್. ಇದನ್ನು ಅಳವಡಿಸಿಕೊಂಡರೆ ಕನ್ನಡದಲ್ಲಿ ಟೈಪ್ ಮಾಡುವುದಷ್ಟೇ ಅಲ್ಲದೆ, ನಾವು ಕನ್ನಡದಲ್ಲಿ ಹೇಳಿದ್ದನ್ನೂ ಅಕ್ಷರವಾಗಿ ಮೂಡಿಸಿ ತೋರಿಸುತ್ತದೆ. ಇದಕ್ಕೆ ‘ಸ್ಪೀಚ್ ಟು ಟೆಕ್ಸ್ಟ್’ (ಧ್ವನಿಯಿಂದ ಪಠ್ಯ) ತಂತ್ರಜ್ಞಾನ ಅನ್ನುತ್ತಾರೆ. ಇದು ಈಗಷ್ಟೇ ಪ್ರವರ್ಧಮಾನಕ್ಕೆ ಬರುತ್ತಿರುವ ವಿನೂತನ ತಂತ್ರಜ್ಞಾನವಾಗಿದ್ದು, ಕನ್ನಡದ ನಿಖರತೆಗೆ ತೀರಾ ಹತ್ತಿರವಾಗಿದೆ.
ಸ್ವರಚಕ್ರ: ಇದು ಹೊಸದಾಗಿ ಕನ್ನಡ ಟೈಪಿಂಗ್ ಕಲಿಯುವವರಿಗೆ ಸೂಕ್ತವಾಗಬಹುದಾದ ಆ್ಯಪ್. ಅಳವಡಿಸಿಕೊಂಡ ಬಳಿಕ, ಯಾವುದೇ ಪಠ್ಯವನ್ನು ಟೈಪ್ ಮಾಡಬೇಕಿದ್ದರೆ ಕಾಣಿಸಿಕೊಳ್ಳುವ ಆನ್‌ಸ್ಕ್ರೀನ್ ಕೀಬೋರ್ಡ್‌ನಲ್ಲಿ, ನಿರ್ದಿಷ್ಟ ಅಕ್ಷರದ ಮೇಲೆ ಒತ್ತಿದರೆ, ಆ ವ್ಯಂಜನಕ್ಕೆ ಸಂಬಂಧಿಸಿದ ಸ್ವರಾಕ್ಷರಗಳ ಸಂಯೋಗ ಸರಣಿಯ ಅಕ್ಷರಗಳನ್ನು ತೋರಿಸುತ್ತದೆ. ಹಲವು ಭಾಷೆಗಳಲ್ಲಿ ಲಭ್ಯವಿದೆ.
ಇಷ್ಟೇ ಅಲ್ಲದೆ, ಪದ ಕನ್ನಡ, ಸ್ಪರ್ಶ ಕನ್ನಡ, ಕನ್ನಡ ಕೀಬೋರ್ಡ್ (ಈ ಹೆಸರಿನಲ್ಲೇ ಹತ್ತಕ್ಕೂ ಹೆಚ್ಚು ಕನ್ನಡ ಕೀಲಿಮಣೆ ಆ್ಯಪ್‌ಗಳಿವೆ), ಕನ್ನಡ ಈಝೀ ಪ್ಯಾಡ್, ಪಾಣಿನಿ ಕೀಬೋರ್ಡ್, ಕನ್ನಡ ಕೀ, ಅಕ್ಷರ ಕನ್ನಡ, ಎನಿಸಾಫ್ಟ್ ಕನ್ನಡ, ಜಿಬೋರ್ಡ್ (ಗೂಗಲ್‌ನ ಮತ್ತೊಂದು ಕೀಬೋರ್ಡ್ ಗುಚ್ಛ), ಟೈಪ್ ಇನ್ ಕನ್ನಡ, ಕನ್ನಡ ನೋಟ್‌ಪ್ಯಾಡ್, ಕನ್ನಡ ಎಡಿಟರ್ ಮುಂತಾದ ನೂರಾರು ಕನ್ನಡ ಕೀಬೋರ್ಡ್ ಆ್ಯಪ್‌ಗಳಿವೆ.
ಇನ್ನೇಕೆ ತಡ? ಕಂಗ್ಲಿಷ್ ಬಿಡಿರಿ, ಕನ್ನಡ ಹಿಡಿಯಿರಿ!
ಕನ್ನಡ ಕೀಲಿಮಣೆ ಅಳವಡಿಸಿಕೊಳ್ಳುವುದು ಹೇಗೆ?:
ಆಂಡ್ರಾಯ್ಡ್ ಇತ್ತೀಚಿನ ಆವೃತ್ತಿಯ ಫೋನ್‌ಗಳಲ್ಲಿ ಎರಡು ಹಂತಗಳನ್ನು ಅನುಸರಿಸುವ ಮೂಲಕ ಕನ್ನಡ ಕೀಬೋರ್ಡ್ ಅಳವಡಿಸಿಕೊಳ್ಳಬಹುದು. ನಂತರ ಅದನ್ನು ಎನೇಬಲ್ ಮಾಡಿಕೊಳ್ಳಬೇಕಾಗುತ್ತದೆ.
ಹಂತ 1: ಕೀಬೋರ್ಡ್ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಅಳವಡಿಸಿಕೊಳ್ಳಿ. ಆ್ಯಪ್ ಕ್ಲಿಕ್ ಮಾಡಿದರೆ, ಮುಂದೇನು ಮಾಡಬೇಕೆಂದು ಅದುವೇ ನಿಮ್ಮನ್ನು ಕರೆದೊಯ್ಯುತ್ತದೆ. ಓದಿ ನೋಡಿ, ಕ್ಲಿಕ್ ಮಾಡುತ್ತಾ ಮುಂದುವರಿಯಿರಿ. ಅಥವಾ ಸೆಟ್ಟಿಂಗ್ಸ್‌ನಲ್ಲಿ, ಲ್ಯಾಂಗ್ವೇಜ್ ಆ್ಯಂಡ್ ಇನ್‌ಪುಟ್ ಎಂಬ ವಿಭಾಗಕ್ಕೆ ಹೋಗಿ, ಡೀಫಾಲ್ಟ್ ಕೀಬೋರ್ಡ್ ಎಂಬಲ್ಲಿ ಹೋದರೆ, ಪಟ್ಟಿಯಲ್ಲಿ ನೀವು ಅಳವಡಿಸಿಕೊಂಡ ಕೀಬೋರ್ಡ್ ಆ್ಯಪ್‌ಗಳು ಕಾಣಿಸುತ್ತವೆ. ನಿಮಗೆ ಬೇಕಾಗಿರುವುದನ್ನು ಡೀಫಾಲ್ಟ್ ಕೀಬೋರ್ಡ್ ಆಗಿ ಆಯ್ಕೆ ಮಾಡಿಕೊಳ್ಳಿ.
ಹಂತ 2: Settings > Language & Input ತೆರೆಯಿರಿ. “KEYBOARD & INPUT METHODS” ವಿಭಾಗ ನೋಡಿ, ನಂತರ Current Keyboard > Choose Keyboards ಎಂಬಲ್ಲಿ ನೀವು ಅಳವಡಿಸಿಕೊಂಡ ಕೀಬೋರ್ಡ್ ಹೆಸರು ಕಾಣಿಸುತ್ತದೆ. ಅದನ್ನು ಆಯ್ಕೆ ಮಾಡಿಕೊಂಡರಾಯಿತು.
ವಿಜಯ ಕರ್ನಾಟಕದಲ್ಲಿ ಮಾಹಿತಿ@ತಂತ್ರಜ್ಞಾನ ಅಂಕಣ: ಅವಿನಾಶ್ ಬಿ., 31 ಅಕ್ಟೋಬರ್ 2017, ಮಂಗಳವಾರ
ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…
ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.
ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…
Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.
ಹಾಡುಗಾರಿಕೆ, ಚೆಂಡೆ-ಮದ್ದಳೆಯ ಬಿಡಿತ-ಮುಕ್ತಾಯಗಳ ಬಳಿಕ, ಬಂದಿದ್ದ ಗಣ್ಯರು, ಒಂದೊಂದು ಹಾಡಿನಲ್ಲಿ ಅಡಕವಾಗಿರುವ ಮಂತ್ರ ಮಾಂಗಲ್ಯದ ಪ್ರತಿಜ್ಞಾಗುಚ್ಛವನ್ನು ವಿವರಿಸಿ, ವಧು-ವರರಿಗೆ ಬೋಧಿಸಿದರು
ಮುದ್ದಣನ ಕುಮಾರ ವಿಜಯದ ಸುಮಾರು 700ರಷ್ಟಿರುವ ಹಾಡುಗಳನ್ನು ಹಾಡಿದ್ದು ತೆಂಕು ತಿಟ್ಟಿನ ಬಲಿಪ ಶೈಲಿಯ ಪ್ರತಿಪಾದಕ ಭಾಗವತರೇ. ಏಳೆಂಟು ವರ್ಷಗಳ…