ಚೀನಾ ಮೂಲದ ಒಪ್ಪೋ ಸ್ಮಾರ್ಟ್ ಮೊಬೈಲ್ ತಯಾರಕ ಕಂಪನಿಯು ಎಫ್19 ಎಂಬ ವಿನೂತನ ಮೊಬೈಲ್ ಫೋನನ್ನು ಈ ತಿಂಗಳ ಆರಂಭದಲ್ಲಿ ಮಾರುಕಟ್ಟೆಗೆ ಬಿಡುಗಡೆಗೊಳಿಸಿದ್ದು, ಎರಡು ವಾರ ಬಳಸಿ ನೋಡಿದಾಗ ಅದು ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಮೊದಲ ನೋಟ
ಒಪ್ಪೋ ಎಫ್19 – ಇದು 5000 mAh ಭರ್ಜರಿ ಸಾಮರ್ಥ್ಯದ ಮೊಬೈಲ್ ಆಗಿದ್ದರೂ, ಸ್ಲೀಕ್ ಆಗಿ ಗಮನ ಸೆಳೆಯಿತು. ಕೇವಲ 175 ಗ್ರಾಂ ತೂಕ ಹಾಗೂ 7.95 ಮಿಮೀ ದಪ್ಪ ಇದೆ. ಮೊದಲು ನೋಡಿದ್ದೇ, ಕ್ಯಾಮೆರಾ ಗುಣಮಟ್ಟವನ್ನು. ಚಿತ್ರದ ಗುಣಮಟ್ಟವಂತೂ ಅತ್ಯುತ್ತಮವಾಗಿತ್ತು.
ವಿನ್ಯಾಸ
ಮೊದಲೇ ಹೇಳಿದಂತೆ ಹಗುರ ತೂಕದ, 6.43 ಇಂಚಿನ ಸ್ಕ್ರೀನ್‌ನಲ್ಲಿ ಸೆಲ್ಫೀ ಕ್ಯಾಮೆರಾ ಇರುವ ಜಾಗ ಎಡ ಮೇಲ್ಭಾಗದಲ್ಲಿದೆ. ಸ್ಕ್ರೀನ್ ಮೇಲಿರುವ ಫಿಂಗರ್‌ಪ್ರಿಂಟ್ ಸ್ಕ್ಯಾನರ್‌ನ ಗ್ರಾಫಿಕ್ ವಿನ್ಯಾಸವನ್ನೂ ನಮಗೆ ಬೇಕಾದಂತೆ ಬದಲಿಸಬಹುದು. ಜೊತೆಗೇ, ವೈಯಕ್ತೀಕರಣ ಸೆಟ್ಟಿಂಗ್‌ನಲ್ಲಿ ಫಾಂಟ್ ಗಾತ್ರ, ವಿನ್ಯಾಸ, ಬಣ್ಣ, ಆ್ಯಪ್ ಲೇಔಟ್ ಹಾಗೂ ಆಕಾರವನ್ನು ಕೂಡ ಬದಲಿಸಿಕೊಳ್ಳಬಹುದು. AMOLED FHD+ ಡಿಸ್‌ಪ್ಲೇ ಇದ್ದು, ಪಂಚ್ ಹೋಲ್ ವಿನ್ಯಾಸದಲ್ಲಿ ಸೆಲ್ಫೀ ಕ್ಯಾಮೆರಾ ಇದೆ.
ಹಾರ್ಡ್‌ವೇರ್
ಒಕ್ಟಾ ಕೋರ್ ಕ್ವಾಲ್‌ಕಂ ಸ್ನ್ಯಾಪ್‌ಡ್ರ್ಯಾಗನ್ 662 ಪ್ರೊಸೆಸಿಂಗ್ ಚಿಪ್ ಜೊತೆಗೆ 6 ಜಿಬಿ RAM ಹಾಗೂ 128 ಜಿಬಿ ಸ್ಟೋರೇಜ್ ಸಾಮರ್ಥ್ಯ ಇದರಲ್ಲಿದೆ. ವೇಗದ ಗೇಮ್‌ಗಳು, ತೂಕದ 4ಕೆ ಸಾಮರ್ಥ್ಯದ ವಿಡಿಯೋ ಪ್ಲೇ ಆಗುವುದಕ್ಕೆ ಯಾವುದೇ ರೀತಿಯಲ್ಲೂ ತೊಡಕಾಗಲಿಲ್ಲ. ಇದರಲ್ಲಿರುವ ಮತ್ತೊಂದು ವೈಶಿಷ್ಟ್ಯವೆಂದರೆ, ಡ್ಯುಯಲ್ ಚಾನೆಲ್ ನೆಟ್ವರ್ಕ್. ಇದು ವೈಫೈ ಹಾಗೂ ಮೊಬೈಲ್ ಡೇಟಾ ಆನ್ ಇದ್ದರೆ, ಯಾವುದಾದರೊಂದರ ಸಿಗ್ನಲ್ ಸಾಮರ್ಥ್ಯ ಕಡಿಮೆ ಇದ್ದಾಗ, ಎರಡೂ ಒಟ್ಟಾಗಿ ಕಾರ್ಯನಿರ್ವಹಿಸುತ್ತಾ, ಡೌನ್‌ಲೋಡ್ ವೇಗವನ್ನು ಹೆಚ್ಚಿಸುತ್ತದೆ. 2 ನ್ಯಾನೋ ಸಿಮ್ ಕಾರ್ಡ್‌ಗಳನ್ನು ಇದರಲ್ಲಿ ಬಳಸಬಹುದು.
ಬ್ಯಾಟರಿ
ಈಗಿನ ಪರಿಸ್ಥಿತಿಯಲ್ಲಿ ಮೊಬೈಲ್ ಫೋನ್ ಹೆಚ್ಚಿನ ಬಳಕೆಗೆ ಅನಿವಾರ್ಯವಿರುವಂತೆ, 5000 mAh ಚಾರ್ಜಿಂಗ್ ಸಾಮರ್ಥ್ಯದ ಬ್ಯಾಟರಿ ಇದೆ. ಜೊತೆಗೆ 33W ಫ್ಲ್ಯಾಶ್ ಚಾರ್ಜರ್ ಕೂಡ ಇದ್ದು, ವೇಗವಾಗಿ ಚಾರ್ಜ್ ಆಗುತ್ತದೆ. ಚಾರ್ಜಿಂಗ್ ಪೋರ್ಟ್ ಯುಎಸ್‌ಬಿ ಟೈಪ್ ಸಿ. ಇದರಲ್ಲಿ ಮತ್ತೊಂದು ವಿಶೇಷವೆಂದರೆ, ರಾತ್ರಿಯಿಡೀ ಚಾರ್ಜಿಂಗ್‌ಗೆ ಇಡಬಾರದು ಬ್ಯಾಟರಿ ಸವಕಳಿ ಜಾಸ್ತಿ ಮತ್ತು ಬಾಳಿಕೆ ಕಡಿಮೆಯಾಗುತ್ತದೆ ಎಂಬ ಆತಂಕಕ್ಕೆ ಇಲ್ಲಿ ಕಡಿವಾಣ ಹಾಕಲಾಗಿದೆ. ಹೇಗೆಂದರೆ, ರಾತ್ರಿ ಚಾರ್ಜಿಂಗ್‌ಗೆ ಇಟ್ಟು ಮಲಗಿದರೆ ಅದು ಶೇ.80ರವರೆಗೆ ಮಾತ್ರವೇ ಚಾರ್ಜ್ ಆಗುತ್ತದೆ. ಮತ್ತು ಮೊದಲೇ ಮೊಬೈಲ್‌ನಲ್ಲಿ ಹೊಂದಿಸಿಟ್ಟಂತೆ ಏಳುವ ಸಮಯದ ಒಂದು ಗಂಟೆಗೆ ಮೊದಲು ಪುನಃ ಚಾರ್ಜಿಂಗ್ ತಾನಾಗಿ ಆರಂಭವಾಗುತ್ತದೆ.
ಕ್ಯಾಮೆರಾ
ಹಿಂಭಾಗದಲ್ಲಿ 48 ಮೆಗಾಪಿಕ್ಸೆಲ್ ಪ್ರಧಾನ ಸೆನ್ಸರ್, 2MP ಡೆಪ್ತ್ ಸೆನ್ಸರ್ ಹಾಗೂ 2MP ಮ್ಯಾಕ್ರೋ ಸೆನ್ಸರ್ ಇರುವ ಕ್ಯಾಮೆರಾ ಸೆಟಪ್ ಅತ್ಯುತ್ತಮವಾಗಿ ಫೋಟೊಗಳನ್ನು ಸೆರೆಹಿಡಿಯುತ್ತದೆ. ಆಟೋ-ಫೋಕಸ್ ವ್ಯವಸ್ಥೆ ಇದ್ದು, ಚಿತ್ರಗಳು ಸ್ಫುಟವಾಗಿ ಮೂಡಿಬಂದಿವೆ. ಮ್ಯಾಕ್ರೋ ವ್ಯವಸ್ಥೆಯ ಮೂಲಕ ಅತ್ಯಂತ ಸಮೀಪದಿಂದ ತೆಗೆದ ಚಿತ್ರಗಳು (ತಾವರೆ ಎಲೆಗಳ ಚಿತ್ರ ನೋಡಿ) ಸ್ಪಷ್ಟವಾಗಿ ಸೆರೆಯಾಗಿವೆ. ಅದೇ ರೀತಿ 16MP ಸಾಮರ್ಥ್ಯದ ಸೆಲ್ಫೀ ಕ್ಯಾಮೆರಾ ಕೂಡ ಉತ್ತಮ ಫಲಿತಾಂಶ ನೀಡಿದೆ.
ಸುರಕ್ಷತೆ
ಒಪ್ಪೋ ಎಫ್19 ಆಂಡ್ರಾಯ್ಡ್ 11 ಆಧಾರಿತ, ಕಲರ್ ಒಎಸ್ 11.1 ಮೂಲಕ ಕಾರ್ಯಾಚರಿಸುತ್ತದೆ. ಈ ಕಾರ್ಯಾಚರಣಾ ವ್ಯವಸ್ಥೆಯಲ್ಲಿ ಪ್ರೈವೆಸಿಗೆ ಹಾಗೂ ಸೆಕ್ಯುರಿಟಿಗೆ ಹೆಚ್ಚು ಒತ್ತು ನೀಡಲಾಗಿದ್ದು, ಆ್ಯಪ್‌ಗಳನ್ನು ಲಾಕ್ ಮಾಡುವ ಆಯ್ಕೆಯಿದೆ ಹಾಗೂ ಖಾಸಗಿ ಫೋಲ್ಡರ್‌ಗಳನ್ನು ಗೌಪ್ಯವಾಗಿರಿಸಲು ‘ಪ್ರೈವೇಟ್ ಸೇಫ್’ ವ್ಯವಸ್ಥೆಯಿದೆ. ಇಷ್ಟಲ್ಲದೆ, ಕಿಡ್ ಸ್ಪೇಸ್ ಎಂಬ ಆಯ್ಕೆಯೊಂದಿದೆ. ಅದನ್ನು ತೆರೆದು, ನಿರ್ದಿಷ್ಟ ಆ್ಯಪ್‌ಗಳನ್ನಷ್ಟೇ ಮಕ್ಕಳು ನೋಡುವಂತೆ ಹಾಗೂ ಇಂತಿಷ್ಟು ಸಮಯ ಮಾತ್ರವೇ ಮೊಬೈಲ್ ಬಳಸುವಂತೆ ಅವರನ್ನು ನಿರ್ಬಂಧಿಸಬಹುದು.
ಅದೇ ರೀತಿ, ಹೆಚ್ಚು ಹೊತ್ತು ಸ್ಕ್ರೀನ್ ನೋಡಿದರೆ ಕಣ್ಣುಗಳಿಗೆ ಆಗಬಹುದಾದ ಹಾನಿಯ ಪ್ರಮಾಣ ತಗ್ಗಿಸಲು ಐ ಕಂಫರ್ಟ್ ಹಾಗೂ ಡಾರ್ಕ್ ಮೋಡ್‌ಗಳಿವೆ. ಪ್ರಿಸಂ ಬ್ಲ್ಯಾಕ್ (ಕಪ್ಪು) ಹೀಗೂ ಮಿಡ್‌ನೈಟ್ ಬ್ಲೂ (ನೀಲಿ) – ಹೀಗೆ ಎರಡು ಬಣ್ಣಗಳಲ್ಲಿ ಲಭ್ಯವಿರುವ ಇದರ ಬೆಲೆ ರೂ.18,999.
ಒಟ್ಟಾರೆ ಹೇಗಿದೆ?
ಸ್ಲೀಕ್, ಹಗುರ ಮತ್ತು ಉತ್ತಮ ವೇಗದ ಚಾರ್ಜಿಂಗ್, ಒಳ್ಳೆಯ ಬ್ಯಾಟರಿ ಜೊತೆಗೆ ಅತ್ಯುತ್ತಮ ಕ್ಯಾಮೆರಾ – ಇವು ಈ ಆಂಡ್ರಾಯ್ಡ್ ಫೋನ್‌ನ ಪ್ಲಸ್ ಪಾಯಿಂಟ್‌ಗಳು. ಇನ್ನಷ್ಟೇ ಆರಂಭವಾಗಬೇಕಿರುವ 5ಜಿ ಬೆಂಬಲ ಇದರಲ್ಲಿಲ್ಲ.
iPhone 16e joins the iPhone 16 lineup, featuring the fast performance of the A18 chip,…
ರಿಯಲ್‌ಮಿ 14 ಪ್ರೊ ಸರಣಿಯ 5ಜಿ ಫೋನ್, ಡ್ಯಾನಿಶ್ ಡಿಸೈನ್ ಸ್ಟುಡಿಯೋ ವ್ಯಾಲರ್ ಡಿಸೈನರ್ಸ್ ಮೂಲಕ ರೂಪುಗೊಂಡ ವಿಶ್ವದ ಮೊದಲ…
ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್ ಇರುವ ಬಹುನಿರೀಕ್ಷಿತ…
ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…
ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.
ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…