ಏನು ಲಾಭ…
Tez ಎಂಬ ಗೂಗಲ್ ಆ್ಯಪ್, ಆಂಡ್ರಾಯ್ಡ್ ಹಾಗೂ ಆ್ಯಪಲ್ ಸಾಧನಗಳ ಆ್ಯಪ್ ಸ್ಟೋರ್‌ನಲ್ಲಿ ಉಚಿತವಾಗಿ ಲಭ್ಯ. ಅದನ್ನು ಇನ್‌ಸ್ಟಾಲ್ ಮಾಡಿಕೊಂಡರೆ, ತತ್‌ಕ್ಷಣದಲ್ಲಿ ನಿಮ್ಮ ಖಾತೆಗೆ 51 ರೂಪಾಯಿ ದೊರೆಯುತ್ತದೆ. ಈ ಪರಿಚಯಾತ್ಮಕ ಕೊಡುಗೆಯ ಅನುಸಾರ, ನೀವು ನಿಮ್ಮ ಸ್ನೇಹಿತರನ್ನು ಈ ಆ್ಯಪ್ ಬಳಸುವಂತೆ ಅವರಿಗೆ ಲಿಂಕ್ ಕಳುಹಿಸಿದರೆ, ಅವರು ಕೂಡ ಆ ಲಿಂಕ್ ಮೂಲಕ ಆ್ಯಪ್ ಅಳವಡಿಸಿಕೊಂಡು, ಮೊದಲ ಪಾವತಿ ಮಾಡಿದರೆ, ನಿಮಗಿಬ್ಬರಿಗೂ ತಲಾ 51 ರೂ. ಬೋನಸ್ ದೊರೆಯುತ್ತದೆ. ಇಷ್ಟೇ ಅಲ್ಲದೆ, ನೀವು ಈ ಆ್ಯಪ್ ಮೂಲಕ ನಡೆಸುವ ಪ್ರತಿ ಹಣಕಾಸು ವರ್ಗಾವಣೆ ಪ್ರಕ್ರಿಯೆಗೂ ಸ್ಕ್ರಾಚ್ ಕಾರ್ಡ್ ಕಾಣಿಸುತ್ತದೆ. ಪ್ರತೀ 150 ರೂ. ವಹಿವಾಟಿಗೆ ಒಂದು ಸ್ಕ್ರಾಚ್ ಕಾರ್ಡ್ ಹಾಗೂ 500 ರೂ. ಮೇಲ್ಪಟ್ಟ ಒಟ್ಟು ವಹಿವಾಟಿಗೆ ಪ್ರತೀ ಶುಕ್ರವಾರ ಒಂದು ಬೋನಸ್ ಸ್ಕ್ರಾಚ್ ಕಾರ್ಡ್ ಇರುತ್ತದೆ. ಅದನ್ನು ಉಜ್ಜಿದರೆ, ಹೆಚ್ಚಿನ ಸಮಯದಲ್ಲಿ ‘ಮುಂದಿನ ಬಾರಿ ಪ್ರಯತ್ನಿಸಿ’ ಅಂತ ಸೂಚನೆ ಬರುತ್ತದೆಯಾದರೂ, ಆಗಾಗ್ಗೆ ಸಾವಿರ ರೂ.ವರೆಗೂ ನಗದು ಗೆಲ್ಲುವ ಅವಕಾಶವಿದೆ. ಈ ಕೊಡುಗೆಯು 2018 ಏಪ್ರಿಲ್ 1ರವರೆಗೆ ಚಾಲ್ತಿಯಲ್ಲಿರುತ್ತದೆ ಮತ್ತು ವರ್ಷಕ್ಕೆ ಒಬ್ಬರಿಗೆ 9 ಸಾವಿರ ರೂ. ಗೆಲ್ಲುವ ಗರಿಷ್ಠ ಮಿತಿಯೂ ಇದೆ. ಇದರಲ್ಲಿ ವಹಿವಾಟು ನಡೆಸಿ ನೋಡಿದ ಬಳಿಕ ಇದು ನಮ್ಮ ಓದುಗರಿಗೂ ಇಷ್ಟವಾದೀತು ಎಂದು ಅನ್ನಿಸಿತು. ಹೀಗಾಗಿ ಮತ್ತಷ್ಟು ಮಾಹಿತಿ. ಇದು ಸಿಂಗಲ್ ನಂಬರ್ ಲಾಟರಿ ಆಡಿದಂತೆ ಚಾಳಿ ಹುಟ್ಟಿಸುವ ಗೇಮ್‌ನಂತೆ ಇದೆಯಾದರೂ, ವರ್ಷಕ್ಕೆ 9 ಸಾವಿರ ರೂ. ಮಿತಿ ಇದೆ ಎಂಬುದು ನೆನಪಿರಲಿ.
ಪ್ರಸ್ತುತ ಬಸ್ ಟಿಕೆಟ್ ಬುಕ್ ಮಾಡುವ ರೆಡ್‌ಬಸ್, ಪಿಜ್ಜಾ ಒದಗಿಸುವ ಡೊಮಿನೋಸ್, ಸಿನಿಮಾ ಟಿಕೆಟ್ ಬುಕ್ ಮಾಡುವ ಪಿವಿಆರ್ ಮುಂತಾದ ಕಂಪನಿಗಳಿಗೆ ಆನ್‌ಲೈನ್ ಪಾವತಿಗೆ ತೇಜ್ ಬಳಸಬಹುದು. ಶೀಘ್ರದಲ್ಲೇ ಮತ್ತಷ್ಟು ಆನ್‌ಲೈನ್ ಮಾರುಕಟ್ಟೆಯ ತಾಣಗಳು ಸೇರ್ಪಡೆಯಾಗಲಿವೆ. ಈ ಸ್ಕ್ರಾಚ್ ಕಾರ್ಡ್ ಕೊಡುಗೆಯು ಗೂಗಲ್‌ನ ವಿಶಿಷ್ಟ ಪ್ರಚಾರ ತಂತ್ರವಾಗಿದ್ದು, ಮತ್ತಷ್ಟು ಕಂಪನಿಗಳು ಸೇರಿಕೊಂಡರೆ ಆ ಕಂಪನಿಗಳಿಂದಲೇ ತೇಜ್‌ಗೆ ಕಮಿಶನ್ ರೂಪದಲ್ಲಿ ಆದಾಯ ಬರಬಹುದೆಂಬ ಮುಂದಾಲೋಚನೆ. ಇದು ಉಳಿದೆಲ್ಲ ವ್ಯಾಲೆಟ್‌ಗಳಿಗೆ ಈಗಾಗಲೇ ಆತಂಕ ಹುಟ್ಟಿಸಿರುವುದಂತೂ ಸುಳ್ಳಲ್ಲ.
ಬೇರೆ ವ್ಯಾಲೆಟ್‌ಗಿಂತ ಹೇಗೆ ಭಿನ್ನ?
ಈ ವ್ಯಾಲೆಟ್‌ಗೆ ಹಣ ತುಂಬಬೇಕಾಗಿಲ್ಲ. ಇದು ನಿಮ್ಮ ಬ್ಯಾಂಕ್ ಖಾತೆಗೆ ಒಂದು ಗೇಟ್-ವೇ ಇದ್ದಂತೆ. ತೇಜ್‌ನಿಂದ ಕಳುಹಿಸುವ ಅಥವಾ ಸ್ವೀಕರಿಸುವ ಹಣವು ನಿರ್ದಿಷ್ಟ ಬ್ಯಾಂಕ್ ಖಾತೆಗೇ ನೇರವಾಗಿ ಹೋಗುತ್ತದೆ. ಲಾಗಿನ್ ಆಗಲು ಎರಡು ಹಂತದ ಸೆಕ್ಯುರಿಟಿ ವಾಲ್ ಕೂಡ ಇರುವುದರಿಂದ ಇದು ಸುರಕ್ಷಿತ. ಅಂದರೆ ನಿಮ್ಮ ಮೊಬೈಲ್ ಫೋನ್‌ನ ಅನ್‌ಲಾಕ್ (ಪಿನ್, ಪ್ಯಾಟರ್ನ್ ಅಥವಾ ಫಿಂಗರ್‌ಪ್ರಿಂಟ್) ವ್ಯವಸ್ಥೆ ಹಾಗೂ ಬ್ಯಾಂಕಿನ ಯುಪಿಐ (ಯೂನಿಫೈಡ್ ಪೇಮೆಂಟ್ ಇಂಟರ್ಫೇಸ್) ಪಾಸ್‌ವರ್ಡ್ ನೀಡಿಯೇ ಮುಂದುವರಿಯಬೇಕಾಗುತ್ತದೆ. ಯಾರಿಗಾದರೂ ಹಣ ಕಳುಹಿಸಬೇಕಿದ್ದರೆ, ಬೇರೆಯವರ ಬ್ಯಾಂಕ್ ಖಾತೆ, ಅದರ ಐಎಫ್‌ಎಸ್‌ಸಿ ಕೋಡ್ ಇತ್ಯಾದಿ ಬೇಕಾಗಿಲ್ಲ. ಹಾಗೂ ಅವರ ಬ್ಯಾಂಕ್ ಖಾತೆ ಸಂಖ್ಯೆ ಸೇರಿಸಿ 24 ಗಂಟೆ ಕಾಯುವ ಶ್ರಮವೂ ಇಲ್ಲ. ತೇಜ್ ಖಾತೆಗೆ ಕಳುಹಿಸಿದರೆ ಸಾಕು. ಇದು ಇಂಟರ್ನೆಟ್ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿರುವ ಐಎಂಪಿಎಸ್ (ಇಮೀಡಿಯೇಟ್ ಪೇಮೆಂಟ್ ಸರ್ವಿಸ್) ರೀತಿಯಲ್ಲೇ ಕೆಲಸ ಮಾಡುತ್ತದೆ. ಈ ಆ್ಯಪ್ ಮೂಲಕ ಹಣಕಾಸು ವಹಿವಾಟು ನಡೆಸಿದರೆ ಯಾವುದೇ ಶುಲ್ಕವೂ ಇರುವುದಿಲ್ಲ. ಇನ್ನೂ ಒಂದಿದೆ. ಇದರಲ್ಲಿರುವ ‘ಕ್ಯಾಶ್ ಮೋಡ್’ ಬಳಸಿದರೆ, ಪರಸ್ಪರ ಸಮೀಪ ಇರುವ ಮೊಬೈಲ್ ಫೋನ್‌ಗಳಿಗೆ ತೇಜ್ ಆ್ಯಪ್ ಮೂಲಕ ಹಣವನ್ನು ವರ್ಗಾಯಿಸಬಹುದು! ಇದುವರೆಗೆ ಆದ ಎಲ್ಲ ವಹಿವಾಟುಗಳ ಪಟ್ಟಿಯೂ ಚಾಟ್ ಮಾದರಿಯಲ್ಲಿ ಆ್ಯಪ್‌ನಲ್ಲಿ ಕಾಣಿಸುತ್ತದೆ.
ಹೇಗೆ…
ಬಹುತೇಕ ಎಲ್ಲ ಪ್ರಮುಖ ಬ್ಯಾಂಕ್‌ಗಳೂ ಗೂಗಲ್ ತೇಜ್ ಜತೆಗೆ ಒಡಂಬಡಿಕೆ ಹೊಂದಿವೆ. ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರೇ ಈ ಆ್ಯಪ್ ಬಿಡುಗಡೆ ಮಾಡಿರುವುದರಿಂದ ವಿಶ್ವಾಸಾರ್ಹತೆ ಹೆಚ್ಚು. ಇದನ್ನು ಗೂಗಲ್ ಪ್ಲೇ ಸ್ಟೋರ್‌ನಿಂದ ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಿ. ಆ್ಯಪ್ ತೆರೆಯಿರಿ. ಕನ್ನಡದ ಇಂಟರ್‌ಫೇಸ್ ಆಯ್ಕೆ ಮಾಡಿಕೊಳ್ಳುವ ಅವಕಾಶವೂ ಇದೆ. ನಂತರ ನಿಮ್ಮ ಫೋನ್ ನಂಬರ್ ಸೇರಿಸಿ (ಅದು ಬ್ಯಾಂಕ್ ಖಾತೆಗೆ ನೋಂದಾವಣೆಯಾಗಿರಬೇಕು). ಆಂಡ್ರಾಯ್ಡ್ ಆಗಿರುವುದರಿಂದ ಮುಂದಿನ ಸ್ಕ್ರೀನ್‌ನಲ್ಲಿ ನಿಮ್ಮ ನಂಬರ್ ಹಾಗೂ ಜಿಮೇಲ್ ಖಾತೆಯೂ ಪ್ರದರ್ಶನವಾಗುತ್ತದೆ. ಕಂಟಿನ್ಯೂ ಎಂದು ಒತ್ತಿದಾಗ, ಒಟಿಪಿ (ಒನ್ ಟೈಮ್ ಪಿನ್) ಬರುತ್ತದೆ, ತಾನೇ ತಾನಾಗಿ ಒಟಿಪಿ ಓದಿಕೊಳ್ಳುತ್ತದೆ. ಸುರಕ್ಷತೆಯ ದೃಷ್ಟಿಯಿಂದ ಗೂಗಲ್ ಖಾತೆಗೊಂದು 4 ಅಂಕಿಯ ಪಿನ್ ನಂಬರ್ ನೀಡಿ. ಇದನ್ನು ನೆನಪಿಟ್ಟುಕೊಳ್ಳಬೇಕಾಗುತ್ತದೆ. ಎರಡು ಬಾರಿ ಆ ನಂಬರ್ ನಮೂದಿಸುವ ಮೂಲಕ ದೃಢೀಕರಿಸಿಕೊಳ್ಳಿ. ನಂತರ ನಿಮ್ಮ ಬ್ಯಾಂಕ್ ಖಾತೆ ಸೇರಿಸಬೇಕಾಗುತ್ತದೆ. ಡ್ಯುಯಲ್ ಸಿಮ್ ಫೋನ್ ಆಗಿದ್ದರೆ, ಯಾವ ಸಿಮ್ ಅಂತ ಆಯ್ಕೆ ಮಾಡಿಕೊಳ್ಳಬೇಕು. ಪಟ್ಟಿಯಲ್ಲಿರುವ ಬ್ಯಾಂಕುಗಳಿಂದ ನಿಮ್ಮ ಬ್ಯಾಂಕ್ ಆಯ್ಕೆ ಮಾಡಿಕೊಳ್ಳಿ. ಯಾವ ಬ್ಯಾಂಕಿನ ಜತೆ ನಿಮ್ಮ ಫೋನ್ ನಂಬರ್ ನೋಂದಣಿಯಾಗಿದೆಯೋ, ಆ ಖಾತೆಯ ವಿವರಗಳು ಫೆಚ್ ಆಗುತ್ತವೆ. ನಂತರ ಬ್ಯಾಂಕ್ ಖಾತೆಯ ಎಂ-ಪಿನ್ ಅಥವಾ ಯುಪಿಐ ಪಿನ್ ದಾಖಲಿಸಬೇಕು. (ಯುಪಿಐಗೆ ಖಾತೆಯನ್ನು ನೋಂದಾಯಿಸಿಕೊಂಡಿರಬೇಕು). ಅಲ್ಲಿಗೆ ತೇಜ್ ಆ್ಯಪ್ ಜತೆ ನಿಮ್ಮ ಬ್ಯಾಂಕ್ ಖಾತೆ ಲಿಂಕ್ ಆದಂತೆ. ನಿಮ್ಮ ಫೋನ್‌ನಲ್ಲಿರುವ ಸಂಪರ್ಕ ಸಂಖ್ಯೆಗಳನ್ನು ಹುಡುಕಾಡುವ ತೇಜ್, ಯಾರೆಲ್ಲ ಈ ಆ್ಯಪ್ ಹೊಂದಿದ್ದಾರೆ ಅಂತ ತಿಳಿಸುತ್ತದೆ.
ಮಾಹಿತಿ@ತಂತ್ರಜ್ಞಾನ: ವಿಜಯ ಕರ್ನಾಟಕ ಅಂಕಣ by ಅವಿನಾಶ್ ಬಿ. for 20 ನವೆಂಬರ್ 2017
ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್ ಇರುವ ಬಹುನಿರೀಕ್ಷಿತ…
ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…
ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.
ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…
Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.
ಹಾಡುಗಾರಿಕೆ, ಚೆಂಡೆ-ಮದ್ದಳೆಯ ಬಿಡಿತ-ಮುಕ್ತಾಯಗಳ ಬಳಿಕ, ಬಂದಿದ್ದ ಗಣ್ಯರು, ಒಂದೊಂದು ಹಾಡಿನಲ್ಲಿ ಅಡಕವಾಗಿರುವ ಮಂತ್ರ ಮಾಂಗಲ್ಯದ ಪ್ರತಿಜ್ಞಾಗುಚ್ಛವನ್ನು ವಿವರಿಸಿ, ವಧು-ವರರಿಗೆ ಬೋಧಿಸಿದರು