ಏನಿದು ಗೂಗಲ್ ಅಸಿಸ್ಟೆಂಟ್?
ಇದೊಂದು ಅಗೋಚರ ಸಹಾಯಕನಿದ್ದಂತೆ. ಯಾಕಂದ್ರೆ ‘ಒಕೆ ಗೂಗಲ್’ ಅಥವಾ ‘ಹೇ ಗೂಗಲ್’ ಅಂತ ಹೇಳುತ್ತಾ, ನಮ್ಮ ಫೋನ್‌ಗೆ ಮುಖ ಮಾಡಿ ನಾವು ಮಾಡುವ ಆದೇಶವನ್ನು ಈ ಸಹಾಯಕನಂತೂ ವಿಧೇಯನಾಗಿ ಪಾಲಿಸುತ್ತಾನೆ. ಆದರೆ ಚಾಚೂ ತಪ್ಪದೆ ಪಾಲಿಸುತ್ತಾನೆ ಎನ್ನಲಾಗದು. ಯಾಕೆಂದರೆ, ಅದಕ್ಕೆ ಪೂರಕ ತಂತ್ರಜ್ಞಾನ, ಆ್ಯಪ್‌ಗಳು ಈ ಫೋನ್‌ನಲ್ಲಿ ಇರಬೇಕಾಗುತ್ತದೆ. ಇಲ್ಲವಾದರೆ, ಗೂಗಲ್ ಸರ್ಚ್ ಮಾಡಿ ಅದಕ್ಕೆ ಸಂಬಂಧಿಸಿದ ಮಾಹಿತಿಯನ್ನು ಆತ ನಿಮ್ಮ ಮುಂದೆ ಇಡುತ್ತಾನೆ.
ಗೂಗಲ್‌ನ ಪ್ಲೇ ಸ್ಟೋರ್ ಎಂಬ ಆ್ಯಪ್‌ಗಳ ತಾಣದಲ್ಲಿ ‘ಗೂಗಲ್ ಅಸಿಸ್ಟೆಂಟ್’ ಅಂತ ಸರ್ಚ್ ಮಾಡಿ, ಅದನ್ನು ಮೊದಲು ನಿಮ್ಮ ಸಾಧನಕ್ಕೆ ಅಳವಡಿಸಿಕೊಳ್ಳಿ. ಕೆಲವು ಹೈಎಂಡ್ ಸಾಧನಗಳಲ್ಲಿ ಅದು ಇನ್-ಬಿಲ್ಟ್ ಆಗಿ ಬಂದಿರುತ್ತದೆ. ಕೆಲವು ತಿಂಗಳ ಹಿಂದಷ್ಟೇ ಪ್ರಾಯೋಗಿಕವಾಗಿದ್ದ ಈ ಆ್ಯಪ್, ಇದೀಗ ಸಾಕಷ್ಟು ಸುಧಾರಣೆಗಳೊಂದಿಗೆ ಸರ್ವವ್ಯಾಪಿ ಆಗುತ್ತಿದೆ. ಮನೆಯ ಟಿವಿ, ಫ್ರಿಜ್, ವೈಫೈ, ಡೋರ್ ಬೆಲ್, ಕಾರು, ಸಿಸಿಟಿವಿ ಇತ್ಯಾದಿಗಳೆಲ್ಲವನ್ನೂ ಬೆಸೆಯುವ ಇಂಟರ್ನೆಟ್ ಆಫ್ ಥಿಂಗ್ಸ್ (ವಸ್ತುಗಳ ಅಂತರ್ಜಾಲ ಅಥವಾ ಸರ್ವವ್ಯಾಪಿ ಅಂತರ್ಜಾಲ) ವ್ಯವಸ್ಥೆಯು ವೇಗವಾಗಿ ಬೆಳೆಯುತ್ತಿರುವ ಈ ಹಂತದಲ್ಲಿ ಸಾಕಷ್ಟು ಕೆಲಸ ಇರುವುದು ಈ ಅಸಿಸ್ಟೆಂಟ್‌ಗೇ. ಏನೇ ಕೆಲಸವಾಗಬೇಕಿದ್ದರೂ ಒಂದು ಕಮಾಂಡ್ ಬೇಕಲ್ಲ. ಅದು ಬರೆಯುವ ಕೋಡ್ ಇರಬಹುದು ಅಥವಾ ಧ್ವನಿಯೂ ಇರಬಹುದು. ಈ ಕಮಾಂಡ್ ಅನುಸಾರ ಅಸಿಸ್ಟೆಂಟ್ ಕೆಲಸ ಮಾಡುತ್ತದೆ.
ಏನೆಲ್ಲ ಮಾಡಬಹುದು?
ಒಂದು ಸಲ ಅಸಿಸ್ಟೆಂಟನ್ನು ಅಳವಡಿಸಿಕೊಂಡು, ಅದನ್ನು ಎನೇಬಲ್ ಮಾಡಿಕೊಂಡ ಬಳಿಕ ಫೋನ್‌ನಲ್ಲಿ ನಿಮ್ಮ ಕೆಲಸ ಸುಲಭ ಸಾಧ್ಯವಾಗುತ್ತದೆ. ಅಲ್ಲಾದೀನ್ ದೀಪ ಸವರಿದಂತೆ, ಹೋಮ್ ಬಟನ್ (ಸ್ಕ್ರೀನ್ ಮೇಲಿರುವ ಪ್ರಧಾನ ಬಟನ್) ಒತ್ತಿ ಹಿಡಿದುಕೊಂಡ ತಕ್ಷಣ ‘ವಾಟ್ ಕ್ಯಾನ್ ಐ ಡೂ’ ಅಂತ ಅದು ನಿಮ್ಮನ್ನು ಕೇಳುತ್ತದೆ. ಮಾಡಬಹುದಾದ ಕೆಲಸಗಳ ಸಾಧ್ಯತೆಗಳು ಅಪಾರ. ನಿಮ್ಮ ಸ್ನೇಹಿತ ಎಕ್ಸ್ ಎಂಬಾತನಿಗೆ ಕರೆ ಮಾಡಬೇಕೆಂದಿದ್ದರೆ, ಆತನ ಹೆಸರು ನಿಮ್ಮ ಫೋನ್‌ನಲ್ಲಿ ಸೇವ್ ಆಗಿದ್ದರೆ, ಕಾಲ್ ಎಕ್ಸ್ ಅಂತ ಹೇಳಿಬಿಡಿ. ಕಾಂಟ್ಯಾಕ್ಟ್ಸ್‌ನಲ್ಲಿ ಹೆಸರು ಹುಡುಕಿ, ಡಯಲ್ ಬಟನ್ ಒತ್ತುವ ಕೆಲಸವೇ ಇರುವುದಿಲ್ಲ. ಡಯಲ್ ಆಗುತ್ತದೆ. ನೀವು ಫೋನನ್ನು ಕಿವಿಗಾನಿಸಿದರೆ ಸಾಕು.
ಬೇರೆ ಊರಿಗೆ ಹೋಗುವವರಿದ್ದೀರಿ. ಆ ದಿನ ಅಲ್ಲಿ ವಾತಾವರಣ ಹೇಗಿರುತ್ತದೆ, ಮಳೆ ಬರುತ್ತದೆಯೇ ಅಂತ ನೀವು ಅಸಿಸ್ಟೆಂಟನ್ನು ಕೇಳಬಹುದು. ‘ಒಕೆ ಗೂಗಲ್, ವಾಟ್ ಇಸ್ ದ ವೆದರ್ ಇನ್ ಬೆಂಗಳೂರು ಟುಮಾರೋ?’ ಅಂತ ಕೇಳಿದರೆ ಸಾಕು. ವೆದರ್ ರಿಪೋರ್ಟನ್ನೇ ಅದು ನಿಮ್ಮ ಮುಂದಿಡುತ್ತದೆ.
ಇನ್ನು, ಕಚೇರಿಯಲ್ಲಿ ತೀರಾ ವ್ಯಸ್ತರಾಗಿರುವ ನೀವು ಪತ್ನಿಗೆ ಏನೋ ತುರ್ತಾಗಿ ಸಂದೇಶ ಕಳುಹಿಸಬೇಕೆಂದುಕೊಳ್ಳುತ್ತೀರಿ. ಫೋನ್ ತೆಗೆದು ಟೈಪ್ ಮಾಡುವಷ್ಟು ಸಮಯವೂ, ವ್ಯವಧಾನವೂ ಇರುವುದಿಲ್ಲ. ಫೋನ್ ತೆಗೆದು, ‘ಒಕೆ ಗೂಗಲ್, ಸೆಂಡ್ ಟೆಕ್ಸ್ಟ್ ಮೆಸೇಜ್ ಟು ವೈಫ್’ ಅಂತ ಹೇಳಿದರೆ ಸಾಕು. ಏನು ಬರೆಯಬೇಕು ಅಂತ ಕೇಳುತ್ತದೆ. ನೀವು ಇಂಗ್ಲಿಷಿನಲ್ಲಿ ಹೇಳುತ್ತಾ ಹೋದದ್ದನ್ನು ಅದು ಟಿಪ್ಪಣಿ ತೆಗೆದುಕೊಳ್ಳುವ ಟೈಪಿಸ್ಟ್‌ನಂತೆ ಬರೆದು ತೋರಿಸುತ್ತದೆ. ಕಳುಹಿಸುವ ಮೊದಲು ಒಂದು ಸಲ ಓದಿ ನೋಡಿ. ಇಲ್ಲವಾದರೆ, ನಿಮ್ಮ ಧ್ವನಿಯನ್ನು, ಉಚ್ಚಾರಣೆಯನ್ನು ತಪ್ಪಾಗಿ ಅರ್ಥೈಸಿಕೊಳ್ಳುವ ಅಸಿಸ್ಟೆಂಟ್, ಏನೇನೋ ಬರೆದುಬಿಟ್ಟಿದ್ದಿರಬಹುದು! ಈ ಬಗ್ಗೆ ಎಚ್ಚರಿಕೆ ವಹಿಸಬೇಕಷ್ಟೆ.
ಇನ್ನು, ಯಾವುದೋ ನಗರಕ್ಕೆ ಹೋಗಿರುತ್ತೀರಿ. ಅಥವಾ ನೀವಿರುವ ಪಟ್ಟಣದಲ್ಲೇ ಹತ್ತು ಹಲವಾರು ರೆಸ್ಟೋರೆಂಟ್‌ಗಳಲ್ಲಿ ನಿಮಗೆ ಸಮೀಪವಿರುವ ಉತ್ತಮ ಗುಣಮಟ್ಟದ ಆಹಾರ ದೊರೆಯುವ ಹೋಟೆಲ್ ಯಾವುದೆಂದು ನಿರ್ಧರಿಸುವುದು ಕಷ್ಟವಾದರೆ, ಅಸಿಸ್ಟೆಂಟ್ ಇದೆಯಲ್ಲ. ಹೋಮ್ ಬಟನ್ ಒತ್ತಿ, ‘ಹೇ ಗೂಗಲ್, ವಿಚ್ ಇಸ್ ದ ಬೆಸ್ಟ್ ಹೋಟೆಲ್ ನಿಯರ್ ಮಿ?’ ಅಂತ ಕೇಳಿದರೆ ಸಾಕು. ಸಮೀಪದ ಹೋಟೆಲ್‌ಗಳ ಪಟ್ಟಿಯನ್ನು ಅದು ನಿಮ್ಮ ಮುಂದಿಡುತ್ತದೆ. ಉತ್ತಮ ಎಂದು ನಿರ್ಧರಿಸುವುದು ಹೇಗೆ? ಹೋಟೆಲ್‌ಗಳ ಆಹಾರದ ಗುಣಮಟ್ಟು, ಸಿಬ್ಬಂದಿಯ ನಡತೆ ಇತ್ಯಾದಿಗಳ ಆಧಾರದಲ್ಲಿ, ಅಲ್ಲಿ ಹೋದವರು, ಹೋಟೆಲ್‌ಗಳಿಗೆ ರೇಟಿಂಗ್ ನೀಡುವ ತಾಣಗಳಲ್ಲಿ ತಮ್ಮ ರಿವ್ಯೂ ದಾಖಲಿಸಿರುತ್ತಾರೆ. ರೇಟಿಂಗ್ ಕೂಡ ಕೊಟ್ಟಿರುತ್ತಾರೆ. 1ರಿಂದ 5 ಸ್ಟಾರ್‌ವರೆಗಿನ ರೇಟಿಂಗ್ ನೀಡಲಾಗುತ್ತದೆ. ಎಷ್ಟು ಮಂದಿ ರೇಟಿಂಗ್ ನೀಡಿರುತ್ತಾರೆ ಎಂಬ ಸಂಖ್ಯೆಯೂ ಕಾಣಿಸುತ್ತದೆ. ಹೆಚ್ಚು ಬಳಕೆದಾರರು ಹೆಚ್ಚು ಹೆಚ್ಚು ರೇಟಿಂಗ್ ಮಾಡಿದಂತೆ, ಅದರ ಗುಣಮಟ್ಟದ ನಿರ್ಧಾರವಾಗುತ್ತದೆ. ಅತ್ಯುತ್ತಮ ರೇಟಿಂಗ್ ಇರುವುದನ್ನು ನೀವೇ ಆಯ್ಕೆ ಮಾಡಿಕೊಂಡರೆ ಆಯಿತು. ಇದೆಲ್ಲ ಜನರ ಅಂದರೆ ಬಳಸಿ ನೋಡಿದವರ ಸಹಯೋಗದ ನೆರವಿನಿಂದ ಸಾಧ್ಯವಾಗಿದೆ.
ನಾಳೆ ಬೆಳಗ್ಗೆ ಬೇಗನೇ ಏಳಲು ಅಲಾರಂ ಇರಿಸುವುದಕ್ಕಾಗಿ ಕೂಡ ನೀವು ಅಸಿಸ್ಟೆಂಟ್ ಬಳಿ ಹೇಳಬಹುದು. ಹೋಮ್ ಬಟನ್ ಒತ್ತಿ, ‘ಫಿಕ್ಸ್ ದ ಅಲಾರಂ ಫಾರ್ ಟುಮಾರೋ ಮಾರ್ನಿಂಗ್’ ಅಂತ ಹೇಳಿದರೆ, ಯಾವ ಟೈಮ್‌ಗೆ ಅಂತ ಅದು ಕೇಳುತ್ತದೆ. ‘5 ಒಕ್ಲಾಕ್’ ಅಂದುಬಿಡಿ. ಇಂತಿಷ್ಟು ಗಂಟೆಗಳ ಬಳಿಕ ಅಲಾರಂ ಆಗುತ್ತದೆ ಅಂತ ನಿಮಗೆ ಅಲ್ಲೇ ತೋರಿಸಲಾಗುತ್ತದೆ ಮತ್ತು ಮರುದಿನ ಬೆಳಗ್ಗೆ 5 ಗಂಟೆಗೆ ಅಲಾರಂ ಸದ್ದು ಮಾಡುತ್ತದೆ.
ನಾಳೆ ಮಧ್ಯಾಹ್ನ ಕಚೇರಿಯ ಮೀಟಿಂಗಿಗೆ ಹಾಜರಾಗಬೇಕು. ಕೆಲಸದ ವ್ಯಸ್ತತೆ ನಡುವೆ ಮರೆತುಹೋಗುವ ಸಾಧ್ಯತೆಯಿದ್ದರೆ, ಅದಕ್ಕೊಂದು ಜ್ಞಾಪನೆ (ರಿಮೈಂಡರ್) ಇದ್ದರೆ ಒಳ್ಳೆಯದಲ್ಲವೇ? ಇದೆಯಲ್ಲ ಅಸಿಸ್ಟೆಂಟ್! ಹೇಳಿಬಿಡಿ. ‘ಒಕೆ ಗೂಗಲ್, ರಿಮೈಂಡ್ ಮಿ ಮೀಟಿಂಗ್ ಟುಮಾರೋ ಎಟ್ 12 ನೂನ್’ ಅಂತ. ಅದು ಬರೆದಿಟ್ಟುಕೊಳ್ಳುತ್ತದೆ. ಇನ್ನು ಇಂತಿಷ್ಟು ಸಮಯದಲ್ಲಿ ಜ್ಞಾಪಿಸುವುದಾಗಿಯೂ ನಿಮಗೆ ಸೂಚಿಸುತ್ತದೆ. ನೀವು ನಿಮ್ಮ ಕೆಲಸದಲ್ಲಿ ಮತ್ತೆ ವ್ಯಸ್ತವಾಗಿಬಿಡಬಹುದು!
ಇವಿಷ್ಟು ಮಾತ್ರವೇ ಅಲ್ಲ, ನಿಮ್ಮ ಆ್ಯಪ್ ಮೂಲಕ ಮೂವೀ ಟಿಕೆಟ್ ಬುಕ್ ಮಾಡುವ ವ್ಯವಸ್ಥೆಯೂ ಸಾಧ್ಯ. ಅದೇ ರೀತಿ ವೈಫೈ ಮೂಲಕ ಸಂಪರ್ಕಿಸಿರುವ ಎಲ್ಲ ಸ್ಮಾರ್ಟ್ ಉಪಕರಣಗಳನ್ನೂ ನೀವು ಈ ಅಸಿಸ್ಟೆಂಟ್ ಮೂಲಕ ನಿಭಾಯಿಸಬಹುದು.
ಮಾಹಿತಿ@ತಂತ್ರಜ್ಞಾನ ವಿಜಯ ಕರ್ನಾಟಕ ಅಂಕಣ for 28 ಮೇ 2018 by ಅವಿನಾಶ್ ಬಿ.
ರಿಯಲ್‌ಮಿ 14 ಪ್ರೊ ಸರಣಿಯ 5ಜಿ ಫೋನ್, ಡ್ಯಾನಿಶ್ ಡಿಸೈನ್ ಸ್ಟುಡಿಯೋ ವ್ಯಾಲರ್ ಡಿಸೈನರ್ಸ್ ಮೂಲಕ ರೂಪುಗೊಂಡ ವಿಶ್ವದ ಮೊದಲ…
ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್ ಇರುವ ಬಹುನಿರೀಕ್ಷಿತ…
ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…
ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.
ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…
Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.