ನಮ್ಮ ಆಧಾರ್ ಸಂಖ್ಯೆ ಸುರಕ್ಷಿತವಾಗಿಟ್ಟುಕೊಳ್ಳುವುದು ಹೇಗೆ?

ದೇಶದಲ್ಲಿ ಡಿಜಿಟಲ್ ಕ್ರಾಂತಿ ನಿಧಾನವಾಗಿ ವ್ಯಾಪಕವಾಗುತ್ತಿರುವಂತೆಯೇ ನಮ್ಮ ಸಮಸ್ತ ಮಾಹಿತಿಯನ್ನು ಒಳಗೊಂಡಿರುವ ಆಧಾರ್ ಕಾರ್ಡ್ ಬಗ್ಗೆ ಇತ್ತೀಚೆಗೆ ಸಾಕಷ್ಟು ನಕಾರಾತ್ಮಕ ಸುದ್ದಿಗಳನ್ನು ಕೇಳುತ್ತಿದ್ದೇವೆ. ಆಧಾರ್ ಮಾಹಿತಿ ಸೋರಿಕೆಯಾಗಿರುವುದನ್ನು ವರದಿ ಮಾಡಿದ ಪತ್ರಕರ್ತರ ವಿರುದ್ಧವೂ ಎಫ್ಐಆರ್ ದಾಖಲಾಗಿರುವುದು ಮತ್ತೊಂದು ಬೆಳವಣಿಗೆ. ಈ ಮಧ್ಯೆ, ಆಧಾರ್ ಬಗ್ಗೆ ಜನರಲ್ಲಿ ಕೆಟ್ಟ ಭಾವನೆ ಮೂಡಿಸಲು ವ್ಯವಸ್ಥಿತ ಪಿತೂರಿಯೊಂದು ನಡೆಯುತ್ತಿದೆ ಎಂದು ಆಧಾರ್ ವಿತರಿಸುವ ಯುಐಡಿಎಐ ಮಾಜಿ ಮುಖ್ಯಸ್ಥ ನಂದನ್ ನಿಲೇಕಣಿ ಕೂಡ ಆತಂಕ ವ್ಯಕ್ತಪಡಿಸಿದ್ದಾರೆ. ವಿಭಿನ್ನ ಸೇವೆ ಒದಗಿಸುವ ಕೆಲವೊಂದು ಕಂಪನಿಗಳು ದೃಢೀಕರಣಕ್ಕಾಗಿ ಆಧಾರ್ ನಂಬರನ್ನು ಕೇಳಿ ಪಡೆಯುತ್ತಿವೆ. ನಮ್ಮ ಆಧಾರ್ ಸಂಖ್ಯೆಯನ್ನು ಸುರಕ್ಷಿತವಾಗಿಟ್ಟುಕೊಳ್ಳುವುದು ನಮ್ಮ ಕೈಯಲ್ಲೇ ಇದೆಯಾದರೂ, ಅಗತ್ಯವಾಗಿ ಈ ಸಂಖ್ಯೆಯ ಉಪಯೋಗವಿದೆ ಎಂದಾದಾಗ, 16 ಅಂಕಿಗಳ ಒಂದು ಕಾಲ್ಪನಿಕ ಐಡಿಯೊಂದನ್ನು ರಚಿಸಿ, ಅದನ್ನೇ ನೀಡಬಹುದು ಎಂದು ಕೇಂದ್ರ ಸರಕಾರವು ಈಗಾಗಲೇ ಘೋಷಿಸಿದೆ. ಇದನ್ನೇ ವರ್ಚುವಲ್ ಐಡಿ (ವಿಐಡಿ) ಎಂದು ಕರೆಯಲಾಗುತ್ತಿದ್ದು, ಕಳೆದ ವಾರವಿಡೀ ಇದರದ್ದೇ ಸುದ್ದಿ.

ವರ್ಚುವಲ್ ಐಡಿ ಎಂದರೆ ಮತ್ತೇನಲ್ಲ, ದೃಢೀಕರಣ ಕೇಳುವ ಯಾವುದೇ ಕಂಪನಿಗೆ ನಾವು ಅಧಿಕೃತವಾಗಿ ನೀಡಬಹುದಾದ ಒಂದು ಕಾಲ್ಪನಿಕ ಅಥವಾ ತತ್ಕಾಲೀನ ಪಿನ್ ನಂಬರ್ ಇದ್ದಂತೆ. ಉದಾಹರಣೆಗೆ, ಬ್ಯಾಂಕಿಂಗ್ ವಹಿವಾಟು ನಡೆಸುವಾಗಲೋ ಅಥವಾ ಲಾಗಿನ್‌ಗಾಗಿಯೋ ಒನ್ ಟೈಮ್ ಪಾಸ್‌ವರ್ಡ್ (ಒಟಿಪಿ) ಎಂಬುದನ್ನು ನೀವು ಕೇಳಿದ್ದೀರಿ. ಆಧಾರ್ ವರ್ಚುವಲ್ ಐಡಿ ಕೂಡ ಒಟಿಪಿ ಮಾದರಿಯಲ್ಲೇ ಇರುತ್ತದೆ. ಇದನ್ನು ಒಮ್ಮೆ ಮಾತ್ರವೇ ಬಳಸಬಹುದು. ಬೇರೆಡೆ ಆಧಾರ್ ನಂಬರ್ ಬೇಕೆಂದು ಕೇಳಿದಾಗ, ನೀವು ಪುನಃ ವರ್ಚುವಲ್ ಐಡಿ ರಚಿಸಿ, ಅವರಿಗೆ ನೀಡಿದರಾಯಿತು. ಆದರೆ ಪ್ರತಿ ಬಾರಿಯೂ ವರ್ಚುವಲ್ ಐಡಿ ಬದಲಾಗುತ್ತಿರುತ್ತದೆ.

ಯಾವಾಗ: ಈ ವ್ಯವಸ್ಥೆ ಇನ್ನೂ ಆರಂಭವಾಗಿಲ್ಲ. ಮುಂದಿನ ಮಾರ್ಚ್ ತಿಂಗಳ ವೇಳೆಗೆ ಈ ವ್ಯವಸ್ಥೆಯನ್ನು ಆಧಾರ್‌ನ ವೆಬ್‌ಸೈಟ್‌ನಲ್ಲೇ ಒದಗಿಸುವುದಾಗಿ ಕೇಂದ್ರ ಸರಕಾರ ಭರವಸೆ ನೀಡಿದೆ. ಇದು ನಮ್ಮ ಗೋಪ್ಯತೆ ಮತ್ತು ಸುರಕ್ಷತೆಯ ದೃಷ್ಟಿಯಿಂದ ಅತ್ಯುತ್ತಮ ಕ್ರಮಗಳಲ್ಲೊಂದು. 16 ಅಂಕಿಗಳ ಈ ವಿಐಡಿ ನಿಮ್ಮ 12 ಅಂಕಿಗಳ ಆಧಾರ್ ಸಂಖ್ಯೆಗೆ ಮ್ಯಾಪ್ ಆಗಿರುತ್ತದೆ. ಆದರೆ ವಿಐಡಿ ಬಳಸಬೇಕೇ ಅಥವಾ ಆಧಾರ್ ಸಂಖ್ಯೆಯನ್ನೇ ನೀಡಬಹುದೇ ಎಂಬುದು ನಮ್ಮ ನಮ್ಮ ಇಚ್ಛೆಗೆ ಬಿಟ್ಟ ವಿಷಯ.

ಬಯೋಮೆಟ್ರಿಕ್ ಲಾಕ್ ಮಾಡಿ: ನಮ್ಮ ಬಯೋಮೆಟ್ರಿಕ್ಸ್ (ಬೆರಳಚ್ಚು, ಕಣ್ಣು ಪಾಪೆಯ ಗುರುತು, ಮುಖ) ಮಾಹಿತಿಯನ್ನು ಲಾಕ್ ಮಾಡಿಡುವ ವ್ಯವಸ್ಥೆ ಈಗಾಗಲೇ ಆಧಾರ್ ವೆಬ್ ತಾಣ ಹಾಗೂ ಇ-ಆಧಾರ್ ಎಂಬ ಆ್ಯಪ್‌ನಲ್ಲಿದೆ. ಅದನ್ನು ಲಾಕ್ ಮಾಡಿಕೊಳ್ಳಿ. ಲಾಕ್ ಮಾಡಲು ಅಥವಾ ಅಗತ್ಯವಿರುವಾಗ ಮಾತ್ರ ಅನ್‌ಲಾಕ್ ಮಾಡಲು ನಿಮಗೆ ಒಟಿಪಿ ಕಳುಹಿಸಲಾಗುತ್ತದೆ. ಆಧಾರ್‌ಗೆ ಯಾವ ಮೊಬೈಲ್ ನಂಬರ್ ಲಿಂಕ್ ಮಾಡಿದ್ದೀರೋ, ಆ ಸಿಮ್ ಕಾರ್ಡ್ ಇರುವ ಮೊಬೈಲ್ ಫೋನ್‌ನಲ್ಲಿ ಮಾತ್ರವೇ ಇ-ಆಧಾರ್ ಆ್ಯಪ್ ಕೆಲಸ ಮಾಡುತ್ತದೆ ಎಂಬುದು ನೆನಪಿರಲಿ.

ಯಾರಿಗೂ ಹೇಳಬೇಡಿ: ಅತ್ಯಂತ ಮುಖ್ಯ ವಿಚಾರವೆಂದರೆ, ಜನರಲ್ಲಿ ಆಧಾರ್ ಹೆಸರು ಕೇಳಿದ ತಕ್ಷಣ ಭಯ ಬಂದು ಬಿಟ್ಟಿದೆ. ಹೀಗಾಗಿ ಯಾರೋ ಒಬ್ಬರು ನಾವು ಇಂಥ ಬ್ಯಾಂಕಿಂದ ಕರೆ ಮಾಡ್ತಿದೀವಿ ಅಂತಲೋ, ಮೊಬೈಲ್ ಕಂಪನಿಯಿಂದ ಅಂತಲೋ ಕೇಳಿದಾಗ ಯೋಚನೆ ಮಾಡದೆ ಕೊಟ್ಟುಬಿಡುತ್ತೇವೆ. ನಮ್ಮನ್ನು ಮೂರ್ಖರನ್ನಾಗಿಸಿ, ನಮ್ಮಿಂದ ಆಧಾರ್ ನಂಬರ್ ತಿಳಿದುಕೊಳ್ಳುವ ವಂಚಕರ ಪ್ರಯತ್ನವಿದು. ಯಾವುದೇ ಕಂಪನಿಗಳು ಅಥವಾ ಅಧಿಕಾರಿಗಳು ಮೊಬೈಲ್ ಫೋನ್ ಮೂಲಕ ಅಥವಾ ಎಸ್ಸೆಮ್ಮೆಸ್ ಸಂದೇಶದ ಮೂಲಕ ಆಧಾರ್ ಸಂಖ್ಯೆ ಅಥವಾ ಒಟಿಪಿ ಇತ್ಯಾದಿಯನ್ನು ಕೇಳುವುದೇ ಇಲ್ಲ. ಏನಿದ್ದರೂ ಬ್ಯಾಂಕ್ ಶಾಖೆಯನ್ನೋ, ಕಂಪನಿಗಳ ಕಚೇರಿಯನ್ನೋ ಸಂಪರ್ಕಿಸಿ ಅಗತ್ಯವೆಂದಾದರೆ ಅಲ್ಲಿನ ಅಧಿಕಾರಿಗಳಲ್ಲಿ ಮಾತ್ರವೇ ಆಧಾರ್ ನಂಬರ್ ನೀಡಿ. ಈ ಕುರಿತು ಶೈಕ್ಷಣಿಕವಾಗಿ ಕೆಳ ಸ್ತರದಲ್ಲಿರುವವರು, ಗ್ರಾಮೀಣ ಪ್ರದೇಶದಲ್ಲಿರುವವರಿಗೆ ಜಾಗೃತಿ ಮೂಡಿಸುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ.

ಮಾಹಿತಿಯ ಪ್ರಕಾರ, ದೇಶದಲ್ಲಿ ಈಗಾಗಲೇ 119 ಕೋಟಿ ಮಂದಿ ಆಧಾರ್ ಕಾರ್ಡ್ ಮಾಡಿಸಿದ್ದಾರೆ ಮತ್ತು ಸುಮಾರು 55 ಕೋಟಿಯಷ್ಟು ಮಂದಿ ಈ ಕಾರ್ಡನ್ನು ತಮ್ಮ ಬ್ಯಾಂಕ್ ಖಾತೆಗೆ ಲಿಂಕ್ ಮಾಡಿದ್ದಾರೆ. ಬ್ಯಾಂಕ್ ಖಾತೆ, ವಿಮಾ ಪಾಲಿಸಿ, ಮೊಬೈಲ್ ಫೋನ್ ಇತ್ಯಾದಿಗಳಿಗೆ ಆಧಾರ್ ಲಿಂಕ್ ಮಾಡಲೇಬೇಕೆಂಬ ಸೂಚನೆ ನೀಡಲಾಗಿದೆ ಮತ್ತು ಇದಕ್ಕೆ ಮಾರ್ಚ್ 31ರ ಗಡುವನ್ನೂ ವಿಧಿಸಲಾಗಿದೆ. ಆದರೆ, ಸರಕಾರ ಇಷ್ಟೆಲ್ಲ ಕಟ್ಟು ನಿಟ್ಟು ಮಾಡುವಾಗ, ಕೆಲವೆಡೆ ಆಧಾರ್ ಕಾರ್ಡ್ ಮಾಡಿಸುವಲ್ಲಿನ ತೊಡಕುಗಳ ಬಗ್ಗೆಯೂ ಗಮನ ಹರಿಸಬೇಕಿತ್ತು ಎಂಬುದರಲ್ಲಿ ಎರಡು ಮಾತಿಲ್ಲ. ಸರ್ವರ್ ಸಂಪರ್ಕವಾಗುತ್ತಿಲ್ಲ ಎಂದೋ, ಬಯೋಮೆಟ್ರಿಕ್ ಯಂತ್ರ ಕೆಲಸ ಮಾಡುತ್ತಿಲ್ಲ ಅಂತಲೋ ನಾಳೆ-ನಾಡಿದ್ದು ಬನ್ನಿ ಅಂತ ಅಧಿಕಾರಿಗಳು ಜನರನ್ನು ವಾಪಸ್ ಕಳಿಸುತ್ತಿದ್ದಾರೆ ಎಂಬ ಬಗ್ಗೆ ಜನರಲ್ಲಿ ಅಸಮಾಧಾನವೂ ಇದೆ. ಆಧಾರ್ ಕಾರ್ಡ್ ಮಾಡಿಸಲೆಂದು ಜನಸಾಮಾನ್ಯರಿಗೆ ಗಡುವು ವಿಧಿಸಿದಂತೆಯೇ, ಆಧಾರ್ ಕಾರ್ಡ್ ವಿತರಣಾ ಕೇಂದ್ರಗಳಲ್ಲಿನ ಸಮಸ್ಯೆಗಳಿಗೂ ನಿರ್ದಿಷ್ಟ ವ್ಯಕ್ತಿಗಳನ್ನು ಉತ್ತರದಾಯಿಯಾಗಿ ಮಾಡಿದರೆ, ಆಧಾರ್ ಎಂಬ ಕ್ರಾಂತಿ ಯಶಸ್ವಿಯಾಗುವುದರಲ್ಲಿ ಸಂದೇಹವಿಲ್ಲ. ಅದೇ ರೀತಿಯಾಗಿ, ತೀರಾ ಗ್ರಾಮೀಣ ಪ್ರದೇಶಗಳಲ್ಲಿ ಆಧಾರ್ ಕಾರ್ಡ್ ಕುರಿತಾಗಿ ಸಮರ್ಪಕ ಮಾಹಿತಿಯ ಕೊರತೆಯಿದೆ, ಅರಿವು ಮೂಡಿಸುವ ಕಾರ್ಯಕ್ರಮ ಸಮರ್ಪಕ ಆಗಿಲ್ಲ ಎಂಬುದನ್ನು ಸಾಕಷ್ಟು ಮಂದಿ ನನ್ನಲ್ಲೇ ಹೇಳಿದ್ದಾರೆ. ಆಧಾರ್ ಕಾರ್ಡ್ ಮಾಡಿಸಲು ನಾವು ತಯಾರಿದ್ದರೂ, ಸಮಸ್ಯೆಗಳಿದ್ದಾವಲ್ಲ? ಎಂಬುದು ಅವರು ಕೇಳುವ ಪ್ರಶ್ನೆ. ಸಂಬಂಧ ಪಟ್ಟವರು ಗಮನ ಹರಿಸಲಿ.

ಮಾಹಿತಿ@ತಂತ್ರಜ್ಞಾನ ಅಂಕಣ By ಅವಿನಾಶ್ ಬಿ. for 16 ಜನವರಿ 2018

Avinash B

Avinash B. Tech Writer, Columnist, Working as Online media Journalist for more than two decades. Passionate about Technology and Gadgets. Yakshagana and Music are passion.

Recent Posts

ರಿಯಲ್‌ಮಿ ನಾರ್ಜೋ 70 ಟರ್ಬೊ 5 ಜಿ, ರಿಯಲ್‌ಮಿ ಬಡ್ಸ್ ಎನ್‌1 ಬಿಡುಗಡೆ: ಬೆಲೆ, ವೈಶಿಷ್ಟ್ಯ ತಿಳಿಯಿರಿ

ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…

2 months ago

ಓದುವಿಕೆ, ಕಲಿಕೆ ಉತ್ತೇಜನಕ್ಕೆ ‘ರೀಡ್-ಅ-ಥಾನ್’: ದಾಖಲೆಯ ಗುರಿ

ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.

2 months ago

Realme 13 +, Realme 13 5ಜಿ ಫೋನ್ ಬಿಡುಗಡೆ: ವೇಗದ ಫೋನ್‌ನ ವೈಶಿಷ್ಟ್ಯಗಳು, ಬೆಲೆ ಇಲ್ಲಿ ತಿಳಿಯಿರಿ

ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…

3 months ago

e-ಯುಗದ ತನಿಖಾ ಪತ್ರಿಕೋದ್ಯಮ: ಫ್ಯಾಕ್ಟ್ ಚೆಕ್

Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.

4 months ago

ಯಕ್ಷ ಮಂತ್ರ ಮಾಂಗಲ್ಯ: ಕೀರ್ತನಾ ಪ್ರಸಾದ ಕಲ್ಯಾಣವು

ಹಾಡುಗಾರಿಕೆ, ಚೆಂಡೆ-ಮದ್ದಳೆಯ ಬಿಡಿತ-ಮುಕ್ತಾಯಗಳ ಬಳಿಕ, ಬಂದಿದ್ದ ಗಣ್ಯರು, ಒಂದೊಂದು ಹಾಡಿನಲ್ಲಿ ಅಡಕವಾಗಿರುವ ಮಂತ್ರ ಮಾಂಗಲ್ಯದ ಪ್ರತಿಜ್ಞಾಗುಚ್ಛವನ್ನು ವಿವರಿಸಿ, ವಧು-ವರರಿಗೆ ಬೋಧಿಸಿದರು

9 months ago

ಮುದ್ದಣನ ಕುಮಾರ ವಿಜಯ, ರತ್ನಾವತಿ ಕಲ್ಯಾಣ ಯಕ್ಷಗಾನ ಧ್ವನಿಮುದ್ರಿಕೆ

ಮುದ್ದಣನ ಕುಮಾರ ವಿಜಯದ ಸುಮಾರು 700ರಷ್ಟಿರುವ ಹಾಡುಗಳನ್ನು ಹಾಡಿದ್ದು ತೆಂಕು ತಿಟ್ಟಿನ ಬಲಿಪ ಶೈಲಿಯ ಪ್ರತಿಪಾದಕ ಭಾಗವತರೇ. ಏಳೆಂಟು ವರ್ಷಗಳ…

9 months ago