ಮೊದಲು ಆ್ಯಪ್ ಅಪ್‌ಡೇಟ್ ಮಾಡಿಕೊಳ್ಳಿ: ಮೊದಲು ನೀವು ಮಾಡಬೇಕಾದ ಕೆಲಸವೆಂದರೆ, ನಿಮ್ಮ ಸ್ಮಾರ್ಟ್ ಫೋನ್‌ನಲ್ಲಿರುವ ವಾಟ್ಸಾಪ್ ಮೆಸೆಂಜರ್ ಆ್ಯಪ್ ಅನ್ನು ಹೊಸ ಆವೃತ್ತಿಗೆ ಅಪ್‌ಡೇಟ್ ಮಾಡಿಕೊಳ್ಳುವುದು. ಇಂಟರ್ನೆಟ್ ಆನ್ ಮಾಡಿಕೊಂಡು, ಗೂಗಲ್ ಪ್ಲೇ ಸ್ಟೋರ್‌ಗೆ ಹೋಗಿ, ಎಡ ಮೇಲ್ಭಾಗದಲ್ಲಿರುವ ಮೂರು ಅಡ್ಡಗೆರೆ ಸ್ಪರ್ಶಿಸಿದಾಗ ಕಾಣಿಸಿಕೊಳ್ಳುವ ಮೆನುವಿನಿಂದ ‘ಮೈ ಆ್ಯಪ್ಸ್ ಆ್ಯಂಡ್ ಗೇಮ್ಸ್’ ಒತ್ತಿಬಿಡಿ. ಆಗ, ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿರುವ ವಿಭಿನ್ನ ಆ್ಯಪ್‌ಗಳಿಗೆ ‘ಅಪ್‌ಡೇಟ್’ (ಅಂದರೆ ಅವುಗಳ ಪರಿಷ್ಕೃತ ಆವೃತ್ತಿ) ಲಭ್ಯವಿದೆಯೇ ಎಂದು ಫೋನ್ ತಾನಾಗಿ ಪರೀಕ್ಷಿಸುತ್ತದೆ. ಪರಿಷ್ಕೃತ ಆವೃತ್ತಿ ಇರುವ ಆ್ಯಪ್‌ಗಳ ಪಟ್ಟಿ ಕಾಣಿಸಿಕೊಳ್ಳುತ್ತದೆ. ಇಂಟರ್ನೆಟ್ ಡೇಟಾ ಪ್ಯಾಕೇಜ್ ಇದ್ದರೆ, ‘ಅಪ್‌ಡೇಟ್ ಆಲ್’ ಒತ್ತಿಬಿಡಿ. ಇಲ್ಲವೆಂದಾದರೆ ನಿಮಗೆ ಬೇಕಾದ ಆ್ಯಪ್ ಮಾತ್ರ ಅಪ್‌ಡೇಟ್ ಮಾಡಿಕೊಳ್ಳಬಹುದು. ಈ ಮೂಲಕ ವಾಟ್ಸಾಪ್ ಅಪ್‌ಡೇಟ್ ಮಾಡಿಕೊಳ್ಳಿ.
ಕನ್ನಡ ಸೆಟ್ ಮಾಡಿಕೊಳ್ಳುವುದು: ಲೇಟೆಸ್ಟ್ ಆ್ಯಪ್ ಇನ್‌ಸ್ಟಾಲ್ ಮಾಡಿದ ಬಳಿಕ ವಾಟ್ಸಾಪ್ ಓಪನ್ ಮಾಡಿ. ಬಲ ಮೇಲ್ಭಾಗದಲ್ಲಿರುವ ಮೂರು ಚುಕ್ಕೆಗಳ ಬಟನ್ ಒತ್ತಿದಾಗ ಅದರ ಮೆನುಗಳು ಕಾಣಿಸುತ್ತವೆ. ‘ಸೆಟ್ಟಿಂಗ್ಸ್’ನಲ್ಲಿ ‘ಚಾಟ್ಸ್’ ಒತ್ತಿ. ಮೇಲ್ಭಾಗದಲ್ಲಿ ‘ಆ್ಯಪ್ ಲ್ಯಾಂಗ್ವೇಜ್’ ಅಂತ ಇರುವುದನ್ನು ಒತ್ತಿ. ಆಗ ಭಾರತದ ವಿವಿಧ ಭಾಷೆಗಳ ಆಯ್ಕೆಗಳು ಗೋಚರಿಸುತ್ತದೆ. ಕನ್ನಡ ಆಯ್ಕೆ ಮಾಡಿಕೊಂಡರಾಯಿತು. ಸರ್ವಂ ಕನ್ನಡಮಯಂ!
ಸದ್ಯಕ್ಕೆ ಕನ್ನಡದಲ್ಲಿ ಮಾತ್ರವಲ್ಲದೆ ಹಿಂದಿ, ಬಂಗಾಳಿ, ಪಂಜಾಬಿ, ತೆಲುಗು, ಮರಾಠಿ, ತಮಿಳು, ಉರ್ದು, ಗುಜರಾತಿ ಹಾಗೂ ಮಲಯಾಳಂ ಸಹಿತ 10 ಭಾಷೆಗಳಲ್ಲಿ ವಾಟ್ಸಾಪ್ ಲಭ್ಯವಿದೆ. ಆದರೆ ಒಂದು ವಿಚಾರ ಗಮನಿಸಿ. ಇತ್ತೀಚಿನ ಮೊಬೈಲ್ ಹ್ಯಾಂಡ್‌ಸೆಟ್‌ಗಳು ಕೂಡ ಎಲ್ಲವನ್ನೂ ಕನ್ನಡ ಸಹಿತ ಪ್ರಮುಖ ಭಾರತೀಯ ಭಾಷೆಗಳಲ್ಲೇ ತೋರಿಸುವ ಆಯ್ಕೆಯನ್ನು ನೀಡುತ್ತಿವೆ. ಹೆಚ್ಚಿನವರು ಗಮನಿಸಿರಬಹುದು. ಈಗಾಗಲೇ ನಿಮ್ಮ ಹ್ಯಾಂಡ್‌ಸೆಟ್‌ನ ಯೂಸರ್ ಇಂಟರ್‌ಫೇಸ್ (ಯುಐ) ಅಂದರೆ ಎಲ್ಲ ಮೆನು, ಸೆಟ್ಟಿಂಗ್‌ಗಳು, ಡಿಸ್‌ಪ್ಲೇ ಆಗುವ ಭಾಷೆ ಕನ್ನಡ ಆಗಿದ್ದರೆ, ವಾಟ್ಸಾಪ್‌ನಲ್ಲಿ ಪ್ರತ್ಯೇಕವಾಗಿ ಮೇಲೆ ಹೇಳಿದ ಸೆಟ್ಟಿಂಗ್ ಮಾಡಿಕೊಳ್ಳಬೇಕಾಗಿಲ್ಲ. ಅದು ಕೂಡ ಸ್ವಯಂಚಾಲಿತವಾಗಿ ಕನ್ನಡದಲ್ಲೇ ಕಾಣಿಸುತ್ತದೆ.
ಹ್ಯಾಂಡ್‌ಸೆಟ್ಟನ್ನೇ ಕನ್ನಡಕ್ಕೆ ಬದಲಾಯಿಸಿ: ನಿಮ್ಮ ಇಡೀ ಹ್ಯಾಂಡ್‌ಸೆಟ್ಟನ್ನೇ ಕನ್ನಡದಲ್ಲೇ ನೋಡಲು ಮತ್ತು ಕನ್ನಡದಲ್ಲೇ ಉಪಯೋಗಿಸಲು ಬದಲಾಯಿಸಿಕೊಳ್ಳಬೇಕೆಂದಿದ್ದರೆ, ಅದಕ್ಕಾಗಿ ನೀವು ಅನುಸರಿಸಬೇಕಾದ ಹಂತಗಳು ಇಂತಿವೆ:
ಆಂಡ್ರಾಯ್ಡ್ ಮೊಬೈಲ್ ಹ್ಯಾಂಡ್‌ಸೆಟ್‌ನ ಸೆಟ್ಟಿಂಗ್ಸ್ ಆ್ಯಪ್ ತೆರೆಯಿರಿ. ಇಲ್ಲವೇ, ಹೋಂ ಸ್ಕ್ರೀನ್ ಮೇಲ್ಭಾಗದಿಂದ ಕೆಳಕ್ಕೆ ಬೆರಳಿನಿಂದ ಸ್ವೈಪ್ ಮಾಡಿದಾಗ, ‘ಗೇರ್’ ಐಕಾನ್ ಕಾಣಿಸುತ್ತದೆ. ಅದನ್ನು ಒತ್ತಿ. ಅದು ನೇರವಾಗಿ ಸೆಟ್ಟಿಂಗ್ಸ್ ಮೆನುವನ್ನು ತೋರಿಸುತ್ತದೆ. ಇತ್ತೀಚಿನ ತಂತ್ರಾಂಶವಿರುವ ಫೋನ್ ಆಗಿದ್ದರೆ ‘ಜನರಲ್ ಮ್ಯಾನೇಜ್‌ಮೆಂಟ್’ ಎಂಬುದನ್ನು ಕ್ಲಿಕ್ ಮಾಡಬೇಕು. ಇಲ್ಲವೆಂದಾದರೆ, ‘ಲ್ಯಾಂಗ್ವೇಜ್ ಆ್ಯಂಡ್ ಇನ್‌ಪುಟ್’ ಅಂತ ಸರ್ಚ್ ಬಟನ್ ಮೂಲಕ ನೇರವಾಗಿ ಹುಡುಕಲೂಬಹುದು. ‘ಲ್ಯಾಂಗ್ವೇಜ್ ಆ್ಯಂಡ್ ಇನ್‌ಪುಟ್’ ಒತ್ತಿದಾಗ, ಮೊದಲು ಕಾಣಿಸುವ ಬಟನ್ ಒತ್ತಿ. ಅಲ್ಲಿ ಡೀಫಾಲ್ಟ್ ಇಂಗ್ಲಿಷ್ ಇರುತ್ತದೆ. ಕೆಲವು ಫೋನ್‌ಗಳಲ್ಲಿ, ಲಭ್ಯವಿರುವ ಭಾಷೆಗಳ ಪಟ್ಟಿ ನೇರವಾಗಿ ಕಾಣಿಸುತ್ತದೆ. ಇತ್ತೀಚಿನ ಆವೃತ್ತಿಗಳಲ್ಲಾದರೆ, ‘ಆ್ಯಡ್ ಲ್ಯಾಂಗ್ವೇಜ್’ ಎಂಬ ಬಟನ್ ಒತ್ತಬೇಕಾಗುತ್ತದೆ. ಅಲ್ಲಿ ಕನ್ನಡ ಆಯ್ದುಕೊಳ್ಳಿ.
ಆರಂಭದಲ್ಲಿ ಇಡೀ ಫೋನ್‌ಗೆ ಆ ಭಾಷೆ ಅನ್ವಯವಾಗಬೇಕಾಗಿರುವುದರಿಂದ ಫೋನ್ ಕೆಲವು ಕ್ಷಣ ನಿಧಾನವಾದಂತಹಾ ಅನುಭವವಾಗಬಹುದು. ಇದು ಆರಂಭದಲ್ಲಿ ಒಂದು ಬಾರಿಗೆ ಮಾತ್ರ. ನಂತರ ಫೋನ್ ವೇಗವಾಗಿಯೇ ಕಾರ್ಯಾಚರಿಸುತ್ತದೆ.
ಕನ್ನಡ ಕೀಬೋರ್ಡ್: ಬಹುತೇಕ ಎಲ್ಲ ಮೊಬೈಲ್ ತಯಾರಿಕಾ ಕಂಪನಿಗಳು ಭಾರತೀಯರ ಮನಸ್ಸುಗಳಿಗೆ ಸ್ಪಂದಿಸುತ್ತಿವೆ. ಆಯಾ ಭಾಷೆಗಳಲ್ಲಿ ಸೇವೆ ನೀಡದಿದ್ದರೆ, ಮಾರುಕಟ್ಟೆಯಲ್ಲಿಯೂ ಉಳಿಗಾಲವಿಲ್ಲ ಎಂಬುದು ಬಹುತೇಕ ಎಲ್ಲ ಕಂಪನಿಗಳಿಗೂ ಅರಿವಾಗಿವೆ. ಇಂಟರ್ನೆಟ್ ಜಗತ್ತಿನಲ್ಲಿ ಕೂಡ ಈಗಂತೂ ಇಂಗ್ಲಿಷ್ ಮಾತ್ರವೇ ಅಲ್ಲ, ಭಾರತೀಯ ಭಾಷೆಗಳೇ ಪ್ರಧಾನ ಪಾತ್ರವಹಿಸಲಿವೆ ಎಂಬುದು ಸಾಕಷ್ಟು ಸಮೀಕ್ಷೆಗಳಿಂದಲೂ ದೃಢಪಟ್ಟಿದೆ. ಹೀಗಿರುವಾಗ ಯೂಸರ್ ಇಂಟರ್‌ಫೇಸ್ ಮಾತ್ರವಲ್ಲದೆ, ಅದರಲ್ಲೇ ಟೈಪ್ ಮಾಡಲು ಅನುವಾಗುವಂತೆ ಕೀಬೋರ್ಡ್‌ಗಳನ್ನೂ ಅಳವಡಿಸಿಯೇ ನೀಡುತ್ತಿವೆ. ಅದನ್ನು ಎನೇಬಲ್ ಮಾಡಿಕೊಳ್ಳಲು ನಮಗೆ ತಿಳಿದಿರಬೇಕಷ್ಟೆ. ಈ ಕೀಬೋರ್ಡ್ ಕನ್ನಡದದ್ದಾದರೂ, ಅದನ್ನು ಇನ್‌ಪುಟ್ ಮಾಡುವ ವಿಧಾನಗಳು ಬೇರೆಬೇರೆ ಇರುತ್ತವೆ. ಉದಾಹರಣೆಗೆ, ನುಡಿ, ಬರಹ, ಕೆ.ಪಿ.ರಾವ್, ಇನ್‌ಸ್ಕ್ರಿಪ್ಟ್ ಅಂತೆಲ್ಲ ಕೇಳಿರಬಹುದು. ಗೊಂದಲವಿದ್ದವರು ಜಸ್ಟ್ ಕನ್ನಡ ಎಂಬ ಅನುಕೂಲಕರ ಕೀಬೋರ್ಡ್ (ಇಂಗ್ಲಿಷ್‌ನಲ್ಲಿಂತೆಯೇ ಟೈಪ್ ಮಾಡಿದರೆ ಕನ್ನಡ ಅಕ್ಷರಗಳು ಮೂಡುತ್ತವೆ) ಅಳವಡಿಸಿಕೊಂಡು ಎನೇಬಲ್ ಮಾಡಿಕೊಳ್ಳಬಹುದು. ಇಲ್ಲದಿದ್ದರೆ ಸಾಕಷ್ಟು ಕನ್ನಡ ಟೈಪಿಂಗ್ ಕೀಲಿಮಣೆಗಳ ಆ್ಯಪ್‌ಗಳು ದೊರೆಯುತ್ತವೆ. ಇಷ್ಟು ಮಾಡಿಕೊಂಡರೆ, ಇಡೀ ಫೋನ್ ಕನ್ನಡಮಯವಾಗಿಬಿಡುತ್ತದೆ.
ಮಾಹಿತಿ@ತಂತ್ರಜ್ಞಾನ ವಿಜಯ ಕರ್ನಾಟಕ ಅಂಕಣ for 30 ಏಪ್ರಿಲ್ 2018 by ಅವಿನಾಶ್ ಬಿ.
iPhone 16e joins the iPhone 16 lineup, featuring the fast performance of the A18 chip,…
ರಿಯಲ್‌ಮಿ 14 ಪ್ರೊ ಸರಣಿಯ 5ಜಿ ಫೋನ್, ಡ್ಯಾನಿಶ್ ಡಿಸೈನ್ ಸ್ಟುಡಿಯೋ ವ್ಯಾಲರ್ ಡಿಸೈನರ್ಸ್ ಮೂಲಕ ರೂಪುಗೊಂಡ ವಿಶ್ವದ ಮೊದಲ…
ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್ ಇರುವ ಬಹುನಿರೀಕ್ಷಿತ…
ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…
ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.
ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…