Photo by Lisa on Pexels.com
Facebook Profile Lock: ಫೇಸ್‌ಬುಕ್ ಜಾಲತಾಣದಲ್ಲಿ ಇತ್ತೀಚೆಗೆ ನಾವು ಸಾಕಷ್ಟು ಪೋಸ್ಟ್‌ಗಳನ್ನು ಕಂಡಿರುತ್ತೇವೆ. ಪ್ರೊಫೈಲ್ ಲಾಕ್ ಮಾಡಿ ಫ್ರೆಂಡ್ ರಿಕ್ವೆಸ್ಟ್ ಕಳುಹಿಸುವವರ ಸ್ನೇಹದ ಕೋರಿಕೆಯನ್ನು ಸ್ವೀಕರಿಸಲಾಗುವುದಿಲ್ಲ ಎಂಬ ಒಕ್ಕಣೆ. ಅಂದರೆ, ಯಾರೋ ಫ್ರೆಂಡ್ ರಿಕ್ವೆಸ್ಟ್ (ಸ್ನೇಹದ ಕೋರಿಕೆ) ಕಳುಹಿಸುತ್ತಾರೆ, ಕೋರಿಕೆ ಸ್ವೀಕರಿಸುವ ಮುನ್ನ ಅವರ ಹಿನ್ನೆಲೆ ಏನು, ಅವರು ಯಾರು ಅಂತೆಲ್ಲ ತಿಳಿದುಕೊಳ್ಳಬೇಕಿದ್ದರೆ, ಪ್ರೊಫೈಲ್ ಲಾಕ್ ಆಗಿರುವುದು ಅಡ್ಡಿಯಾಗುತ್ತದೆ. ಹೀಗಾಗಿ, ಸ್ವೀಕರಿಸಬೇಕೋ, ನಿರಾಕರಿಸಬೇಕೋ ಎಂಬುದು ಸಂದಿಗ್ಧ ಸ್ಥಿತಿ.
ಇದರ ಜೊತೆಗೆ, ಮತ್ತೊಂದು ಸನ್ನಿವೇಶ. ಇತ್ತೀಚೆಗೆ ಸಾಕಷ್ಟು ಸ್ನೇಹಿತರನ್ನು ಹೊಂದಿರುವವರಿಂದ ಮತ್ತು ನಮ್ಮ ಫೇಸ್‌ಬುಕ್ ಸ್ನೇಹಿತರಿಂದಲೇ ಮತ್ತೊಮ್ಮೆ ಫ್ರೆಂಡ್ ರಿಕ್ವೆಸ್ಟ್ ಬರುತ್ತದೆ. ಅರೆ, ಇಷ್ಟು ಪರಿಚಿತರು, ನಾವಿನ್ನೂ ಫೇಸ್‌ಬುಕ್ ಫ್ರೆಂಡ್ಸ್ ಆಗಿಲ್ವೇ? ಅಂತ ನಾವೂ ಕೋರಿಕೆಯನ್ನು ಮನ್ನಿಸುತ್ತೇವೆ. ವಾಸ್ತವವಾಗಿ ಅವರು ಫ್ರೆಂಡ್ಸ್ ಪಟ್ಟಿಯಲ್ಲಿರುವುದು ನಮಗೆ ಮರೆತೇಹೋಗಿರುತ್ತದೆ!
ಮೂರನೇ ಸನ್ನಿವೇಶ. ನಿಮ್ಮ ಸ್ನೇಹಿತರಿಂದಲೇ, ‘ಹಾಯ್, ಸ್ವಲ್ಪ ತುರ್ತಾಗಿ ಹಣ ಬೇಕಿತ್ತು. ಸ್ವಲ್ಪ ಗೂಗಲ್ ಪೇ ಅಥವಾ ಫೋನ್‌ಪೇ ಮೂಲಕ ಕಳುಹಿಸುತ್ತೀಯಾ? ನಾಳೆನೇ ವಾಪಸ್ ಮಾಡ್ತೀನಿ’ ಅಂತ ಸ್ವಲ್ಪ ಆಚೀಚೆಯ ಪದ ಗುಚ್ಛಗಳೊಡನೆ ನಿಮಗೆ ಮೆಸೆಂಜರ್ ಅಥವಾ ವಾಟ್ಸ್ಆ್ಯಪ್ ಮೂಲಕ ಸಂದೇಶ ಬಂದಿರುತ್ತದೆ.
ಇಷ್ಟು ಹೊತ್ತಿಗೆ, ‘ಫ್ರೆಂಡ್ಸ್, ನನ್ನ ಹೆಸರಿನ ಫೇಕ್ ಖಾತೆ ಸೃಷ್ಟಿಯಾಗಿದೆ, ಹಣ ಕೇಳಿದರೆ ಕೊಡಬೇಡಿ’ ಅಂತಲೋ ಅಥವಾ ‘ನನ್ನ ಖಾತೆ ಹ್ಯಾಕ್ ಆಗಿದೆ’ ಅಂತಲೋ ಕೆಲವು ಪೋಸ್ಟ್‌ಗಳನ್ನು ಈಗಾಗಲೇ ನೋಡಿರುತ್ತೀರಿ.
ಈ ಎಲ್ಲ ನಾಲ್ಕೂ ಘಟನೆಗಳಿಗೆ ಪಾರಸ್ಪರಿಕ ಸಂಬಂಧವಿದೆ. ಈಗ ಮುನ್ನೆಲೆಗೆ ಬರುವುದೇ ಪ್ರೊಫೈಲ್ ಲಾಕ್ ಎಂಬ ಎರಡು ಪದಗಳು.
ಏನಿದು Facebook Profile Lock?
ನೇರವಾಗಿ ಸಮಾಜದಲ್ಲಿ ಬೆರೆಯಲು ಸಮಯವಿಲ್ಲದವರಿಗೆ ‘ಆನ್‌ಲೈನ್ ಸಮಾಜ’ ಸೃಷ್ಟಿ ಮಾಡಿಕೊಟ್ಟಿರುವ ಫೇಸ್‌ಬುಕ್ ಜಾಲತಾಣದಲ್ಲಿ ಸಕ್ರಿಯವಾಗಿ ಇರುವವರೆಲ್ಲರೂ ತಮ್ಮ ತಮ್ಮ ಪರಿಚಯದ (ಪ್ರೊಫೈಲ್) ಖಾತೆ ಹೊಂದಿರುತ್ತಾರಲ್ಲವೇ? ಅದರಲ್ಲಿರುವ ಚಿತ್ರ, ನಮ್ಮ ಕುರಿತಾದ ಮಾಹಿತಿ, ಪ್ರೊಫೈಲ್‌ನ ಹಿನ್ನೆಲೆಯಲ್ಲಿರುವ ಕವರ್ ಚಿತ್ರ ಇತ್ಯಾದಿಗಳು ಮೂಲತಃ ಎಲ್ಲರಿಗೂ ಕಾಣಿಸುತ್ತದೆ ಮತ್ತು ಅದನ್ನು ಸುಲಭವಾಗಿ ಡೌನ್‌ಲೋಡ್ ಮಾಡಿಕೊಂಡು, ನಿಮ್ಮ ಪ್ರೊಫೈಲನ್ನೇ ಹೋಲುವ ಮತ್ತೊಂದು ಖಾತೆಯನ್ನು ತೆರೆಯಬಹುದು. ಹೀಗೆ ನಮ್ಮದೇ ಹೆಸರಿನಲ್ಲಿ ಖಾತೆಯೊಂದನ್ನು ಸೃಷ್ಟಿಸಿ, ಅದರಲ್ಲಿರುವ ಸ್ನೇಹಿತರಿಗೆಲ್ಲರಿಗೆ ಪುನಃ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿ, ಹಣ ‘ಯಾಚಿಸುವ’ ವಂಚಕರ ಹಾವಳಿ ಹೆಚ್ಚಾದಂತೆ, ಜನರು ಫೇಸ್‌ಬುಕ್ ನೀಡಿರುವ ಈ ಆಯ್ಕೆಯನ್ನು ಬಳಸಿಕೊಳ್ಳಲಾರಂಭಿಸಿದ್ದಾರೆ. ಹೀಗೆ ಮಾಡಿದರೆ, ನಮ್ಮ ಪ್ರೊಫೈಲ್ (ಪೂರ್ಣ ಗುಣಮಟ್ಟದ) ಚಿತ್ರ, ನಮ್ಮ ಸ್ನೇಹಿತರ ಪಟ್ಟಿ, ಹಾಗೂ ನಮ್ಮ ಕುರಿತಾಗಿನ ಯಾವುದೇ ಮಾಹಿತಿಯನ್ನು ಫೇಸ್‌ಬುಕ್ ಸ್ನೇಹಿತರಲ್ಲದವರಿಗೆ ನಕಲು ಮಾಡುವುದು, ನೋಡುವುದು ಸಾಧ್ಯವಾಗದು.
ಹೇಗೆ ಲಾಕ್ ಮಾಡುವುದು?
ಮೊಬೈಲ್ ಫೋನ್‌ನಲ್ಲಿ ಫೇಸ್‌ಬುಕ್ ಆ್ಯಪ್ ತೆರೆದು, ಅದರ ಸೆಟ್ಟಿಂಗ್ಸ್‌ಗೆ ಹೋಗಿ, ಪ್ರೊಫೈಲ್ ಸೆಟ್ಟಿಂಗ್ಸ್ ಎಂಬಲ್ಲಿ, ಪ್ರೊಫೈಲ್ ಲಾಕಿಂಗ್ ಮಾಡುವ ಆಯ್ಕೆ ಕಾಣಿಸುತ್ತದೆ. ಲಾಕ್ ಮಾಡಿದ ಬಳಿಕ ಅಲ್ಲೇ, ಅನ್‌ಲಾಕ್ ಮಾಡುವ ಆಯ್ಕೆಯೂ ಕಾಣಿಸುತ್ತದೆ. ವೆಬ್ ಬ್ರೌಸರ್‌ನಲ್ಲಾದರೆ (ಕಂಪ್ಯೂಟರ್), ನಮ್ಮ ಪ್ರೊಫೈಲ್‌ಗೆ ಹೋಗಿ, ಬಲ ಭಾಗದಲ್ಲಿರುವ ಮೂರು ಚುಕ್ಕಿಗಳ ಮೆನು ಕ್ಲಿಕ್ ಮಾಡಿದಾಗ, ಕೆಳಭಾಗದಲ್ಲಿ ಪ್ರೊಫೈಲ್ ಲಾಕ್ ಮಾಡುವ ಆಯ್ಕೆ ಗೋಚರಿಸುತ್ತದೆ.
ಲಾಕ್ ಮಾಡಿದರೆ ಏನಾಗುತ್ತದೆ?
ಲಾಕ್ ಮಾಡಿದರೆ ನಿಮ್ಮ ಸ್ನೇಹಿತರ ಪಟ್ಟಿಯಲ್ಲಿರುವವರು ಮಾತ್ರವೇ ನೀವು ಹಂಚಿಕೊಳ್ಳುವ ವಿಷಯಗಳು, ನಿಮ್ಮ ಕುರಿತಾಗಿನ ವಿವರ (About) ನೋಡಬಹುದು ಮತ್ತು ನಿಮ್ಮ ಪೂರ್ಣ ಗುಣಮಟ್ಟದ ಪ್ರೊಫೈಲ್ ಚಿತ್ರವನ್ನು ಅಥವಾ ಕವರ್ ಫೊಟೋ ಡೌನ್‌ಲೋಡ್ ಮಾಡಿಕೊಳ್ಳಬಹುದು. ಸ್ನೇಹಿತರ ಪಟ್ಟಿಯಲ್ಲಿ ಇಲ್ಲದವರಿಗೆ ಇದು ಸಾಧ್ಯವಾಗದು. ಆದರೆ ಲಾಕ್ ಮಾಡದೇ ಇದ್ದರೆ, ಇದು ಎಲ್ಲರಿಗೂ ಮುಕ್ತವಾಗಿ ಸಿಗುವಂತಾಗುತ್ತದೆ. ಆದರೆ ಸಮಸ್ಯೆಯೆಂದರೆ, ಪ್ರೊಫೈಲ್ ಲಾಕ್ ಮಾಡಿದ್ದರೆ ನೀವು ಹೊಸದಾಗಿ ಫ್ರೆಂಡ್ ರಿಕ್ವೆಸ್ಟ್ ಕಳುಹಿಸುವಾಗ, ನಿಮ್ಮ ವಿವರವು ಅವರಿಗೆ ಗೊತ್ತಾಗುವುದಿಲ್ಲ. ಇದಕ್ಕೆ ಸದ್ಯಕ್ಕೆ ಪರಿಹಾರ ಇಲ್ಲ. ತಾತ್ಕಾಲಿಕ ಪರಿಹಾರವಾಗಿ, ಅವರು ನಿಮ್ಮ ಸ್ನೇಹದ ಕೋರಿಕೆ ಒಪ್ಪಿಕೊಳ್ಳುವವರೆಗೆ ಅನ್-ಲಾಕ್ ಮಾಡಿ, ಸ್ವೀಕರಿಸಿದ ಬಳಿಕ ಪುನಃ ಲಾಕ್ ಮಾಡಬಹುದು.
ಏನೇ ಆದರೂ, ಇವೆಲ್ಲ ನಮ್ಮ ಆನ್‌ಲೈನ್ ಸಾಮಾಜಿಕ ಬದುಕನ್ನು ಮತ್ತಷ್ಟು ಸಂಕೀರ್ಣವಾಗಿಸುವ ಮತ್ತು ನಾವು ಸುರಕ್ಷಿತರು ಎಂಬ ಭಾವನೆ ಮೂಡಿಸುವ ಕಾರ್ಯಗಳಷ್ಟೇ. ಸಾಮಾಜಿಕ ಜಾಲತಾಣ ಪ್ರವೇಶಿಸಿದರೆ, ಅಷ್ಟೇಕೆ, ನಮ್ಮ ಇಮೇಲ್ ವಿಳಾಸವನ್ನು ಸೃಷ್ಟಿಸಿದರೂ ಸಾಕು; ಪ್ರೈವೆಸಿ ಅಥವಾ ಗೋಪ್ಯತೆ ಕುರಿತಾಗಿನ ಕಾಳಜಿಯ ಬಗ್ಗೆ ಆತಂಕ ಪಡುವುದನ್ನು ಬಿಡಬೇಕಾಗುತ್ತದೆ. ಹೀಗಾಗಿ, ಇಮೇಲ್ ವಿಳಾಸ, ಫೋನ್ ನಂಬರ್, ವಿಳಾಸ, ಎಲ್ಲೆಲ್ಲಿ ಹೋದೆವು, ಏನು ಮಾಡಿದೆವು ಎಂಬುದನ್ನೆಲ್ಲ ಹಂಚಿಕೊಳ್ಳುವ ಮುನ್ನ ಮತ್ತೊಮ್ಮೆ ಯೋಚಿಸಬೇಕು. ಎಷ್ಟು ಬೇಕೋ ಅಷ್ಟೇ ಮಾಹಿತಿಯನ್ನು ಸಾಮಾಜಿಕ ಮಾಧ್ಯಮ ಖಾತೆಗಳಿಗೆ ನೀಡುವ ಕುರಿತು ಎಚ್ಚರಿಕೆಯಿಂದಿರುವುದಷ್ಟೇ ನಮ್ಮನ್ನು ಆನ್‌ಲೈನ್‌ನಲ್ಲಿ ಬಹುತೇಕ ಸಮಯದಲ್ಲಿ (ಎಲ್ಲ ಕಾಲದಲ್ಲಿಯೂ ಅಲ್ಲ) ರಕ್ಷಿಸುವ ಏಕಮಾತ್ರ ಸೂತ್ರ.
My Tech Tips published in Prajavani on 21/22 Jun 2022
iPhone 16e joins the iPhone 16 lineup, featuring the fast performance of the A18 chip,…
ರಿಯಲ್‌ಮಿ 14 ಪ್ರೊ ಸರಣಿಯ 5ಜಿ ಫೋನ್, ಡ್ಯಾನಿಶ್ ಡಿಸೈನ್ ಸ್ಟುಡಿಯೋ ವ್ಯಾಲರ್ ಡಿಸೈನರ್ಸ್ ಮೂಲಕ ರೂಪುಗೊಂಡ ವಿಶ್ವದ ಮೊದಲ…
ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್ ಇರುವ ಬಹುನಿರೀಕ್ಷಿತ…
ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…
ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.
ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…