ಇತ್ತೀಚೆಗೆ ಸ್ಪೈ ಕ್ಯಾಮೆರಾ ಅಳವಡಿಸಿ ಸಿಕ್ಕಿಬಿದ್ದ ಬಗ್ಗೆ ಸುದ್ದಿಗಳನ್ನು ನಾವು ಓದಿದ್ದೇವೆ. ಇದು ತಂತ್ರಜ್ಞಾನದ ದುರ್ಬಳಕೆಯ ಮಗ್ಗುಲಷ್ಟೇ. ಆದರೆ, ಈ ಸ್ಪೈ ಕ್ಯಾಮೆರಾಗಳಿಂದ ಏನು ಲಾಭವಿದೆ? ನಿಮ್ಮದೇ ಕಂಪನಿಯೊಂದಿದ್ದರೆ ಉದ್ಯೋಗಿಗಳು ಏನು ಮಾಡುತ್ತಾರೆ, ಹೇಗೆ ಕೆಲಸ ಮಾಡುತ್ತಾರೆ ಎಂಬುದನ್ನು ತಿಳಿದುಕೊಳ್ಳಲು, ಮನೆಯಲ್ಲಿ ಮನೆ ಕೆಲಸದಾಳುಗಳು ಅಥವಾ ಅನ್ಯರು ಒಳ ಬಂದು ಏನಾದರೂ ಸಮಸ್ಯೆಯುಂಟು ಮಾಡುತ್ತಾರೆಯೇ ಎಂದು ತಿಳಿದುಕೊಳ್ಳಲು, ಅಮೂಲ್ಯ ವಸ್ತುಗಳ ಕಳ್ಳತನ ತಡೆಯಲು, ಮನೆಯಲ್ಲಿ ಪುಟ್ಟ ಮಕ್ಕಳನ್ನು ಲಾಲಿಸಲು-ಪಾಲಿಸಲು ನೇಮಿಸಿಕೊಂಡಿರುವ ಆಯಾ ಹೇಗೆ ಮಗುವನ್ನು ನೋಡಿಕೊಳ್ಳುತ್ತಾಳೆ ಎಂದು ಕಚೇರಿಯಲ್ಲೇ ಕುಳಿತು ತಿಳಿದುಕೊಳ್ಳುವುದಕ್ಕೆ, ಕಳ್ಳರ ಪತ್ತೆಗೆ, ಅತಿಕ್ರಮಣಕಾರರ ಗುರುತು ಹಿಡಿಯಲು… ಹೀಗೆ ನಾನಾ ಕಾರ್ಯಗಳಿಗೆ ಸಿಸಿಟಿವಿ ಹಾಗೂ ಸ್ಪೈ ಕ್ಯಾಮೆರಾಗಳು ಉಪಯುಕ್ತ. ಆದರೆ, ಇಂತಹಾ ತಂತ್ರಜ್ಞಾನವನ್ನು ಬಾತ್‌ರೂಮ್‌ನಲ್ಲಿಯೋ, ಉಡುಪಿನ ಮಳಿಗೆಯಲ್ಲಿರುವ ಉಡುಗೆ ಟ್ರಯಲ್ ರೂಮ್‌ನಲ್ಲಿಯೋ ಇರಿಸಿರುವುದು ಗಮನಕ್ಕೆ ಬಂದು ಸಾಕಷ್ಟು ರಾದ್ಧಾಂತ ಆಗಿರುವ ಸುದ್ದಿಯೂ ನಾವು ಓದಿದ್ದೇವೆ.
ಸಿಸಿಟಿವಿ ಕ್ಯಾಮೆರಾಗಳು ಕಣ್ಣಿಗೆ ಕಾಣಿಸಬಲ್ಲವು. ಆದರೆ ಸ್ಪೈ ಕ್ಯಾಮೆರಾಗಳು ಹಾಗಲ್ಲ, ಕಣ್ಣಿಗೆ ಗೋಚರಿಸದಷ್ಟು ಪುಟ್ಟದಾಗಿರುತ್ತವೆ. ಹೀಗಿರುವಾಗ ಅವು ಎಲ್ಲಿ, ಹೇಗೆ ಇರಬಲ್ಲವು, ಅವುಗಳ ಇರುವಿಕೆ ಪತ್ತೆ ಮಾಡುವುದು ಹೇಗೆ ಎಂಬುದರ ಮಾಹಿತಿ ಈ ವಾರದ ಅಂಕಣದಲ್ಲಿ.
ಎಲ್ಲೋ ದೂರದಲ್ಲಿ ಕುಳಿತು ಮನೆಯಲ್ಲೇನಾಗುತ್ತಿದೆ ಎಂಬುದನ್ನು ಮಾನಿಟರ್ ಮಾಡುವುದಕ್ಕಾಗಿ ಸಾವಿರಾರು ರೂಪಗಳಲ್ಲಿ ಸ್ಪೈ ಕ್ಯಾಮೆರಾಗಳನ್ನು ವಿನ್ಯಾಸಪಡಿಸಲಾಗಿರುತ್ತದೆ. ಅದು ಯಾರ ಕಣ್ಣಿಗೂ ಕಾಣದಂತಿದ್ದರೆ ಮಾತ್ರವಷ್ಟೇ ಅದರ ಉದ್ದೇಶ ಸಫಲವಾಗುತ್ತದೆ. ಸಿಸಿಟಿವಿ ತಂತ್ರಜ್ಞಾನದಲ್ಲಾದರೆ, ಕ್ಯಾಮೆರಾಗಳು ಎಲ್ಲಿವೆ ಎಂದು ತಿಳಿದುಕೊಂಡು ಅದರ ಕಣ್ಣಿಗೆ ಬೀಳದಂತೆಯೋ, ಕ್ಯಾಮೆರಾಕ್ಕೆ ಯಾವುದಾದರೂ ವಸ್ತುವನ್ನು ಅಡ್ಡ ಇಟ್ಟೋ ಕುಕೃತ್ಯ ಎಸಗುವ ಕಳ್ಳಕಾಕರ ಬಗ್ಗೆ ನಮಗೆ ಗೊತ್ತು. ಆದರೆ, ಸ್ಪೈ ಕ್ಯಾಮೆರಾ ಹಾಗಲ್ಲ. ನಾವು ಮಾಡುವ ತಪ್ಪುಗಳನ್ನು ಕಂಡುಹಿಡಿಯಲು ಅದನ್ನು ಎಲ್ಲಿ ಇರಿಸುತ್ತಾರೆ ಎಂಬುದನ್ನು ಪತ್ತೆ ಹಚ್ಚುವುದೇ ಕಷ್ಟ. ಅಷ್ಟು ಪುಟ್ಟ ಗಾತ್ರದಲ್ಲಿರುತ್ತದೆ. ಆದರೆ ಅದರ ಸಾಮರ್ಥ್ಯ ಅಗಾಧ.
ಯಾಕೆಂದರೆ ತಂತ್ರಜ್ಞಾನ ಅಷ್ಟು ಮುಂದುವರಿದಿದೆ. ಸ್ಪೈ ಕ್ಯಾಮೆರಾ ಹಾಗೂ ರೆಕಾರ್ಡ್ ಮಾಡಿಕೊಂಡು ಅದರ ವೀಡಿಯೋ ಸಂಗ್ರಹಿಸಿಟ್ಟುಕೊಳ್ಳಬಲ್ಲ ಮೈಕ್ರೋಚಿಪ್ ಅನ್ನು ಒಂದು ಕೀಚೈನ್‌ನಲ್ಲಿಯೋ ಅಥವಾ ಪೆನ್‌ನ ಟಾಪ್‌ನಲ್ಲೋ (ಮುಚ್ಚಳ) ಇರಿಸಬಹುದಾಗಿದೆ. ಅದೆಷ್ಟೋ ತನಿಖಾ ವರದಿಗಾರರು ಇಂತಹಾ ಸ್ಪೈ ಕ್ಯಾಮೆರಾಗಳ ಮೂಲಕ ಲಂಚ ಸ್ವೀಕಾರ, ಲೈಂಗಿಕ ಹಗರಣ ಮುಂತಾದ ಕುಕೃತ್ಯಗಳನ್ನು ಬಯಲಿಗೆಳೆದು ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿದ ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ.
ಯಾವುದರಲ್ಲೆಲ್ಲಾ ಇರಬಹುದು?: ಪೆನ್ನಿನ ಕ್ಯಾಪ್‌ನಲ್ಲಿರುವ ಕ್ಲಿಪ್‌ನ ತುದಿಯಲ್ಲಿ, ಅಂಗಿಯ ಬಟನ್‌ನಲ್ಲಿ, ಡೆಸ್ಕ್ ಮೇಲಿರುವ ಪೆನ್ ಸ್ಟ್ಯಾಂಡ್, ಗೊಂಬೆಗಳ ಕಣ್ಣು, ಗಡಿಯಾರದ ಮುಳ್ಳು, ವಾಹನದ ಕೀಚೈನ್, ಪರ್ಸ್, ಡಿವಿಡಿ ಕೇಸ್, ಏರ್‌ಫಿಲ್ಟರ್, ಟಿವಿ ಮೇಲಿಡುವ ಫೋಟೋ ಫ್ರೇಮ್, 3 ಪಿನ್ (ಮಲ್ಟಿ) ಪ್ಲಗ್, ಹೂದಾನಿ… ಹೀಗೆ ಸ್ಪೈ ಕ್ಯಾಮೆರಾಗಳನ್ನು ಇರಿಸಬಹುದಾದ ಸಾಧ್ಯತೆಗಳು ಹಲವಾರು. ಇದರ ತಂತ್ರಜ್ಞಾನ ಹೇಗಿದೆ ಎಂದರೆ, ಒಂದು ರಿಮೋಟ್ ಕಂಟ್ರೋಲ್ ಮೂಲಕ, 2ರಿಂದ 8 ಗಂಟೆಯವರೆಗಿನ ಚಲನವಲನಗಳ ವೀಡಿಯೋ ರೆಕಾರ್ಡ್ ಮಾಡಬಹುದು, ಅದು ಅತ್ಯಂತ ಪುಟ್ಟದಾದ ಮೈಕ್ರೋಚಿಪ್‌ನಲ್ಲಿ ಸೇವ್ ಆಗಬಲ್ಲುದು ಇಲ್ಲವೇ, ವೈರ್‌ಲೆಸ್ ಮೂಲಕ ಲೈವ್ ಆಗಿ ಸ್ಟ್ರೀಮಿಂಗ್ ಮಾಡುವುದೂ ಸಾಧ್ಯ.
ಇದನ್ನು ಹೇಗೆ ಕಂಡುಹಿಡಿಯಬಹುದು?: ಈ ಪರಿಯ ಕ್ಯಾಮೆರಾಗಳನ್ನು ಪತ್ತೆ ಮಾಡಲು ವೈರ್‌ಲೆಸ್ ಕ್ಯಾಮೆರಾ ಡಿಟೆಕ್ಟರ್ ಎಂಬ ಸಾಧನಗಳು ಆನ್‌ಲೈನ್‌ನಲ್ಲಿ ಲಭ್ಯ. ಕೆಲವೊಮ್ಮೆ ವೈಫೈ ಅನಲೈಸರ್ ಎಂಬ ಆ್ಯಪ್ ಮೂಲಕವೂ ವೈಫೈ ಇರುವ ಕಳ್ಳ ಕ್ಯಾಮೆರಾಗಳನ್ನು ಪತ್ತೆ ಮಾಡಬಹುದು. ಅಲ್ಲದೆ, ನಿಮ್ಮಲ್ಲಿರುವ ಮೊಬೈಲ್ ಫೋನ್‌ನಿಂದಲೂ ಹೆಚ್ಚಿನ ಸ್ಪೈ ಕ್ಯಾಮೆರಾಗಳನ್ನು ಕಂಡುಹಿಡಿಯಬಹುದು. ಇದು ಸುಲಭದ ವಿಧಾನ. ಇದಕ್ಕೂ ನೆರವಿಗೆ ಬರುವುದು ತಂತ್ರಜ್ಞಾನವೇ. ಯಾಕೆಂದರೆ ಈ ಸಾಧನಗಳು ರೇಡಿಯೋ ಫ್ರೀಕ್ವೆನ್ಸಿಯನ್ನು ಬಳಸಿ ಕೆಲಸ ಮಾಡುತ್ತವೆ. ನಮ್ಮಲ್ಲಿರುವ ಮೊಬೈಲ್ ಫೋನ್‌ಗಳು ಕೂಡ ಕರೆ ಮಾಡಿದಾಗ ಅದರಲ್ಲಿ ರೇಡಿಯೋ ತರಂಗಾಂತರಗಳು ಹೊರಬರುತ್ತವೆ. ಪಕ್ಕದಲ್ಲೇ ಇರುವ ಎರಡೂ ಬಗೆಯ ರೇಡಿಯೋ ಫ್ರೀಕ್ವೆನ್ಸಿಗಳು ಪರಸ್ಪರ ಘರ್ಷಿಸಿದಾಗ, ನಮ್ಮಲ್ಲಿರುವ ಮೊಬೈಲ್ ಫೋನ್‌ನಲ್ಲಿ ಸ್ಪೀಕರ್ ಇರುವುದರಿಂದ, ಫೋನ್‌ನಲ್ಲಿ ವಿಚಿತ್ರವಾದ ಕರ್ಕಶ ಸದ್ದು ಕೇಳುತ್ತದೆ. ಹೀಗಾಗಿ, ಯಾರಿಗಾದರೂ ಕರೆ ಮಾಡುತ್ತಾ, ನಿಮಗೆ ಸಂದೇಹ ಬಂದ ಸ್ಪಾಟ್‌ನಲ್ಲಿ ನಿಮ್ಮ ಮೊಬೈಲ್ ಫೋನನ್ನು ಆಡಿಸಿದಾಗ ಈ ರೀತಿಯ ಸದ್ದು ಕೇಳಿದರೆ ಅಲ್ಲಿ ಕಳ್ಳಗಣ್ಣು ಇರುವ ಸಾಧ್ಯತೆಗಳು ಅಧಿಕ. ಡ್ರೆಸ್ ಚೇಂಜ್ ಮಾಡುವ ಟ್ರಯಲ್ ರೂಮ್ ಅಥವಾ ರೆಸ್ಟ್ ರೂಮ್ ಮುಂತಾದೆಡೆ ಇರಬಹುದಾದ ಸ್ಪೈ ಕ್ಯಾಮೆರಾಗಳನ್ನು ಈ ರೀತಿ ಸುಲಭವಾಗಿ ಪತ್ತೆ ಮಾಡಬಹುದು.
ಆದರೆ, ಇವನ್ನೆಲ್ಲ ಅಕ್ರಮವಾಗಿ ಇರಿಸಲಾಗಿದೆ, ಪ್ರೈವೆಸಿಗೆ ಧಕ್ಕೆಯಾಗಿದೆ ಎಂಬುದೆಲ್ಲಾ ಖಚಿತವಾಗಿದ್ದರೆ, ಸಂಬಂಧಪಟ್ಟ ಸ್ಥಳದ ಮಾಲೀಕರು ಅಥವಾ ಅಲ್ಲಿನ ಸೆಕ್ಯುರಿಟಿ ಸಿಬ್ಬಂದಿಯ ಬದಲಾಗಿ ಮೊದಲು ಪೊಲೀಸರಿಗೇ ನೇರವಾಗಿ ಮಾಹಿತಿ ನೀಡುವುದು ಒಳಿತು.
ರಿಯಲ್‌ಮಿ 14 ಪ್ರೊ ಸರಣಿಯ 5ಜಿ ಫೋನ್, ಡ್ಯಾನಿಶ್ ಡಿಸೈನ್ ಸ್ಟುಡಿಯೋ ವ್ಯಾಲರ್ ಡಿಸೈನರ್ಸ್ ಮೂಲಕ ರೂಪುಗೊಂಡ ವಿಶ್ವದ ಮೊದಲ…
ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್ ಇರುವ ಬಹುನಿರೀಕ್ಷಿತ…
ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…
ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.
ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…
Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.