ಅವಸರದ ಕಾಲವಿದು. ಅಚಾತುರ್ಯಗಳು ಸಹಜ. ಹತ್ತಾರು ಮೆಸೇಜ್ ಗ್ರೂಪುಗಳು, ಒಂದರಲ್ಲಿ ಬಂದಿದ್ದು ಮತ್ತೊಂದಕ್ಕೆ ಫಾರ್ವರ್ಡ್ ಮಾಡುವ ಧಾವಂತ. ಆದರೆ, ಕೆಲವು ಗ್ರೂಪುಗಳಿಗೆ ಅದರದ್ದೇ ಆದ ಲಿಖಿತ/ಅಲಿಖಿತ ನಿಯಮಗಳಿರುತ್ತವೆ. ಹೀಗಾಗಿ ನಿಯಮ ಮೀರಿ, ಧಾವಂತದಲ್ಲಿ ಸಂದೇಶವನ್ನು ಫಾರ್ವರ್ಡ್ ಮಾಡಿಬಿಟ್ಟರೆ? ಕಚೇರಿಗೆ ಸಂಬಂಧಿಸಿದ ಗ್ರೂಪಿಗೆ ಕೌಟುಂಬಿಕ ಗ್ರೂಪಿನ ಮೆಸೇಜುಗಳನ್ನೂ ಹಾಕಿಬಿಟ್ಟರೆ? ಅಥವಾ ಏನೋ ತರಾತುರಿಯಲ್ಲೋ, ಕೋಪದಲ್ಲೋ ಸಂದೇಶ ಹಾಕಿಯಾಗಿದೆ, ಅದನ್ನು ಹಾಗೆ ಮಾಡಬಾರದಿತ್ತು ಎಂದು ಪಶ್ಚಾತ್ತಾಪವಾಗುತ್ತದೆ. ಇಂಥ ಸಂದರ್ಭಕ್ಕಾಗಿಯೇ, ವಾಟ್ಸ್ಆ್ಯಪ್, ಇನ್‌ಸ್ಟಾಗ್ರಾಂ, ಟೆಲಿಗ್ರಾಂ ಮುಂತಾದ ಕಿರು ಸಾಮಾಜಿಕ ಜಾಲ ತಾಣಗಳಲ್ಲಿ ಕಳುಹಿಸಿದ ಸಂದೇಶವನ್ನು ಡಿಲೀಟ್ ಮಾಡುವ ಆಯ್ಕೆ ನೀಡಲಾಗಿದೆ. ಇದಕ್ಕೆ ಇತ್ತೀಚಿನ ಹೊಸ ಸೇರ್ಪಡೆ ಫೇಸ್‌ಬುಕ್ ಮೆಸೆಂಜರ್.
ಕಳುಹಿಸಿದ ಸಂದೇಶವನ್ನು ಅಳಿಸುವ ವೈಶಿಷ್ಟ್ಯದ ಬಗ್ಗೆ ಕೆಲವರಿಗಷ್ಟೇ ತಿಳಿದಿದೆ. ಹೆಚ್ಚಿನವರಿಗೆ ಇದನ್ನು ಹೇಗೆ ಮಾಡಬೇಕೆಂಬುದರ ಅರಿವಿಲ್ಲ. ಹೀಗಾಗಿಯೇ, ಗ್ರೂಪುಗಳಲ್ಲಿ ಬಂದ ಸಂದೇಶಗಳಲ್ಲಿ, “ಕ್ಷಮಿಸಿ, ತಿಳಿಯದೇ ಫಾರ್ವರ್ಡ್ ಮಾಡಿಬಿಟ್ಟೆ” ಎಂಬ ಸಂದೇಶಗಳು ಬರುತ್ತಿವೆಯಾದರೂ, ಕಳುಹಿಸಿದ್ದನ್ನು ಡಿಲೀಟ್ ಮಾಡಬಹುದು ಅಥವಾ ಅಂಥದ್ದೊಂದು ಆಯ್ಕೆ ಇದೆ ಎಂಬುದು ಅವರ ಗಮನಕ್ಕೆ ಬಂದಂತಿಲ್ಲ. ಯಾವುದಾದರೂ ಮೆಸೆಂಜರ್, ವಾಟ್ಸ್ಆ್ಯಪ್, ಟೆಲಿಗ್ರಾಂ, ಇನ್‌ಸ್ಟಾಗ್ರಾಂ ಮುಂತಾದ ಗ್ರೂಪುಗಳಲ್ಲಿ ನಿಮಗೂ ಇಂಥ ಅನುಭವವಾಗಿದ್ದರೆ, ಅವರೆಲ್ಲರಿಗೆ ತಿಳಿಯಪಡಿಸಲು ಈ ಮಾಹಿತಿಯನ್ನು ಹಂಚಿಕೊಳ್ಳಿ.
ಅಳಿಸುವುದು ಹೇಗೆ?: ವಾಟ್ಸ್ಆ್ಯಪ್‌ನಲ್ಲಾದರೆ, ಯಾವುದೇ ಗ್ರೂಪಿಗೆ ಅಥವಾ ವೈಯಕ್ತಿಕವಾಗಿ ತಪ್ಪು ಸಂದೇಶ ಕಳುಹಿಸಿದ್ದರೆ ಅದನ್ನು ಡಿಲೀಟ್ ಮಾಡಲು ಒಂದು ಗಂಟೆ ಸಮಯಾವಕಾಶವಿದೆ. ಆ ಸಂದೇಶವನ್ನು ಬೆರಳಿನಿಂದ ಒತ್ತಿ ಹಿಡಿದಾಗ (ಟಚ್ ಆ್ಯಂಡ್ ಹೋಲ್ಡ್) ಸಂದೇಶವು ಆಯ್ಕೆಯಾಗುತ್ತದೆ. ಮೇಲ್ಭಾಗದಲ್ಲಿ ಕಾಣಿಸುವ ಡಿಲೀಟ್ ಬಟನ್ ಒತ್ತಿದಾಗ, ‘ಡಿಲೀಟ್ ಫಾರ್ ಯುವರ್‌ಸೆಲ್ಫ್’ ಹಾಗೂ ‘ಡಿಲೀಟ್ ಫಾರ್ ಎವ್ರಿವನ್’ ಎಂಬ ಎರಡು ಆಯ್ಕೆಗಳಿರುತ್ತವೆ. ಎರಡನೆಯದನ್ನು ಒತ್ತಿದರೆ, ಗ್ರೂಪಿನಲ್ಲಿರುವ ಯಾರಿಗೂ ನೀವು ಕಳುಹಿಸಿದ ಸಂದೇಶವು ಕಾಣಿಸುವುದಿಲ್ಲ. ಬದಲಾಗಿ ‘ದಿಸ್ ಮೆಸೇಜ್ ವಾಸ್ ಡಿಲೀಟೆಡ್’ ಅಂತಷ್ಟೇ ಗೋಚರಿಸುತ್ತದೆ. ಇಲ್ಲಿ ಗಮನಿಸಬೇಕಾದ ಎರಡು ಅಂಶಗಳಿವೆ. ಒಂದನೆಯದು, ನೀವು ಡಿಲೀಟ್ ಮಾಡುವ ಮುನ್ನ ಗ್ರೂಪಿನಲ್ಲಿದ್ದವರು ಅಥವಾ ನಿಮ್ಮಿಂದ ಸಂದೇಶ ಸ್ವೀಕರಿಸಿದವರು ಓದಿಬಿಟ್ಟರೆ, ನಿಮ್ಮ ಡಿಲೀಟ್ ಪ್ರಕ್ರಿಯೆಗೆ ಬೆಲೆ ಇರುವುದಿಲ್ಲ. ಹಾಗಿರುವಾಗ ತಪ್ಪಾಗಿ ಸಂದೇಶ ಹಾಕಿದ್ದಕ್ಕೆ ನೀವು ಕ್ಷಮೆ ಯಾಚಿಸುವುದೇ ಸೂಕ್ತ. ಎರಡನೇ ವಿಚಾರವೆಂದರೆ, ವಾಟ್ಸ್ಆ್ಯಪ್ ಕಿರು ತಂತ್ರಾಂಶವು (ಆ್ಯಪ್) ಉಭಯರ ಮೊಬೈಲ್ ಫೋನ್‌ಗಳಲ್ಲಿಯೂ ಇತ್ತೀಚಿನ ಆವೃತ್ತಿಗೆ ಅಪ್‌ಡೇಟ್ ಆಗಿದ್ದರೆ ಮಾತ್ರವೇ ಇದು ಪರಿಣಾಮಕಾರಿಯಾಗಿರುತ್ತದೆ ಎಂಬುದು ಗಮನದಲ್ಲಿರಲಿ. ಮೂರನೇ ವಿಚಾರವೂ ಇದೆ. ಇತ್ತೀಚೆಗೆ ಸ್ಮಾರ್ಟ್‌ವಾಚ್‌ಗಳು ಕೂಡ ಬಂದಿವೆಯಲ್ಲ. ಮೆಸೇಜ್ ಬಂದ ತಕ್ಷಣ ಅದನ್ನು ಸ್ಮಾರ್ಟ್‌ವಾಚ್‌ನಲ್ಲೇ ನೋಡಬಹುದು. ನೀವು ಡಿಲೀಟ್ ಮಾಡುವ ಮುನ್ನವೇ ಅದು ತಲುಪಬೇಕಾದವರಿಗೆ ತಲುಪಿರಲೂಬಹುದು. ಹೀಗಾಗಿ, ಮೆಸೇಜ್ ಹಾಕುವ ಮುನ್ನ ಎಚ್ಚರಿಕೆ ವಹಿಸುವುದೇ ಸೂಕ್ತ.
ಫೇಸ್‌ಬುಕ್ ಮೆಸೆಂಜರ್‌ನಲ್ಲಿ ಕೂಡ ಕಳುಹಿಸಿದ ಸಂದೇಶವನ್ನು ಒತ್ತಿ ಹಿಡಿದಾಗ, ಎಲ್ಲರಿಗೂ ಡಿಲೀಟ್ ಮಾಡಬೇಕೇ, ಅಥವಾ ನಿಮ್ಮ ಫೋನ್‌ನಲ್ಲಿ ಮಾತ್ರವೇ ಡಿಲೀಟ್ ಆದರೆ ಸಾಕೇ ಎಂಬ ಆಯ್ಕೆಯೂ ಇದೆ. ಮೊಬೈಲ್ ಫೋನ್‌ನಲ್ಲಿ ಆ್ಯಪ್ ಮೂಲಕ ಮಾತ್ರವಲ್ಲದೆ, ಕಂಪ್ಯೂಟರ್ ಸಿಸ್ಟಂಗಳಲ್ಲಿ ನಾವು ಮೆಸೆಂಜರ್ ಬಳಸುತ್ತಿದ್ದರೆ ಕೂಡ ಸಂದೇಶ ಅಳಿಸಬಹುದು. ಅದಕ್ಕಾಗಿ, ಆ ಸಂದೇಶದ ಬಳಿಯ ಮೂರು ಚುಕ್ಕಿಗಳನ್ನು ಕ್ಲಿಕ್ ಮಾಡಿದರೆ, ರಿಮೂವ್ ಎಂಬ ಆಯ್ಕೆ ಗೋಚರಿಸುತ್ತದೆ. ಅದನ್ನು ಒತ್ತಿದರಾಯಿತು. ಜತೆಗೆ ಸಂದೇಶವನ್ನು ಫಾರ್ವರ್ಡ್ ಮಾಡುವ ಆಯ್ಕೆಯನ್ನೂ ನೀಡಲಾಗಿದೆ.
ಗಮನಿಸಬೇಕಾದ ಅಂಶವೆಂದರೆ, ಎಲ್ಲ ರೀತಿಯ ಆ್ಯಪ್‌ಗಳಲ್ಲಿ, ಬೇರೆಯವರ ಸಂದೇಶವನ್ನು ಡಿಲೀಟ್ ಮಾಡಲು ನಮಗೆ ಸಾಧ್ಯವಾಗುವುದಿಲ್ಲ. ಡಿಲೀಟ್ ಮಾಡಲು ಸಾಧ್ಯ ಅಂದುಕೊಂಡು ಡಿಲೀಟ್ ಮಾಡಿದರೂ, ಅದು ನಮ್ಮ ಫೋನ್‌ನಲ್ಲಷ್ಟೇ ಡಿಲೀಟ್ ಆಗಿರುತ್ತದೆ ಹೊರತು, ಗ್ರೂಪಿನಲ್ಲಿರುವ ಇತರರಿಗಂತೂ ಕಾಣಿಸುತ್ತದೆ.
ಮಾಹಿತಿ@ತಂತ್ರಜ್ಞಾನ: ಅವಿನಾಶ್ ಬಿ. ವಿಜಯ ಕರ್ನಾಟಕ ಅಂಕಣ, 11 ಫೆಬ್ರವರಿ 2019
ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್ ಇರುವ ಬಹುನಿರೀಕ್ಷಿತ…
ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…
ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.
ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…
Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.
ಹಾಡುಗಾರಿಕೆ, ಚೆಂಡೆ-ಮದ್ದಳೆಯ ಬಿಡಿತ-ಮುಕ್ತಾಯಗಳ ಬಳಿಕ, ಬಂದಿದ್ದ ಗಣ್ಯರು, ಒಂದೊಂದು ಹಾಡಿನಲ್ಲಿ ಅಡಕವಾಗಿರುವ ಮಂತ್ರ ಮಾಂಗಲ್ಯದ ಪ್ರತಿಜ್ಞಾಗುಚ್ಛವನ್ನು ವಿವರಿಸಿ, ವಧು-ವರರಿಗೆ ಬೋಧಿಸಿದರು