ಇದು ಇಂಟರ್ನೆಟ್ ಕ್ರಾಂತಿ ಮತ್ತು ಡಿಜಿಟಲ್ ಇಂಡಿಯಾ ಯುಗ. ಸಣ್ಣ ಪುಟ್ಟ ಉದ್ಯಮಿಗಳಲ್ಲದೆ, ಜನಸಾಮಾನ್ಯರೂ ತಮ್ಮ ಸ್ವಂತ ವೆಬ್‌ಸೈಟ್ ಹೊಂದಬಹುದು. ಟ್ರಾವೆಲ್ ಏಜೆನ್ಸಿ, ಹೋಟೆಲ್, ವಿನ್ಯಾಸಭರಿತ ಹೊಲಿಗೆ ಕಸುಬು ಮಾಡುವವರು, ಉತ್ತಮ ಅಡುಗೆ ಮಾಡುವವರು, ತಿಂಡಿ ತಯಾರಿಸಿ ಮಾರಾಟ ಮಾಡುವವರು.. ಹೀಗೆ ಎಲ್ಲರೂ ಕೂಡ ತಮ್ಮದೇ ವೆಬ್ ಸೈಟನ್ನು ಮಾಡತೊಡಗಿದ್ದಾರೆ. ನಾವೂ ಯಾಕೆ ಡಿಜಿಟಲ್ ಆಗಬಾರದು? ವರ್ಷಕ್ಕೆ ಕೇವಲ ಒಂದು ಸಾವಿರ ರೂ. ಆಸುಪಾಸು ವ್ಯಯಿಸಿದರೆ ಸಾಕು. ಬ್ಲಾಗ್ ತಾಣಗಳಾದರೆ ಉಚಿತ. ವೆಬ್ ಸೈಟ್ ರೂಪಿಸುವುದೂ ಇಷ್ಟು ಸುಲಭವೇ? ಅಂತ ನಿಮಗೂ ಸಂಶಯ ಬಂದಿರಬಹುದು. ಅದಕ್ಕೆ ಉತ್ತರ ಹೌದು. ಒಂದು ಸಾಮಾನ್ಯ ವೆಬ್ ತಾಣ ರೂಪಿಸುವುದು ತೀರಾ ಸುಲಭ. ಅದಕ್ಕೆ ನಮಗೆ ಕೋಡಿಂಗ್ ಏನೂ ಗೊತ್ತಿರಬೇಕಿಲ್ಲ. ಬ್ಲಾಗ್ ಮಾಡಿ ಅನುಭವವಿದ್ದವರಿಗಂತೂ ಇದು ಸುಲಭಾತಿಸುಲಭ. ಸ್ವಲ್ಪ ಅತ್ಯಾಧುನಿಕ ಶೈಲಿ, ವಿನ್ಯಾಸ ಬೇಕಾಗುತ್ತದೆಯೆಂದಾದರೆ ಮಾತ್ರ ವೆಬ್ ಡಿಸೈನರುಗಳಿಗೆ ನಾಲ್ಕೈದು ಸಾವಿರ ರೂ. ಕೊಡಬೇಕಾಗುತ್ತದೆ. ಇದರ ನಿರ್ವಹಣೆಯೂ ಬ್ಲಾಗ್ ಮಾಡಿದಷ್ಟೇ ಸುಲಭ.
ಏನು ಬೇಕು?: ನಮ್ಮ ಹೆಸರಲ್ಲಿಯೋ ಅಥವಾ ನಮ್ಮ ಪುಟ್ಟದೊಂದು ಕಂಪನಿಯ ಹೆಸರಲ್ಲೋ ಒಂದೊಂದು ವೆಬ್ ತಾಣ ಹೊಂದಲು ಎರಡು ವಿಚಾರಗಳು ಅತ್ಯಗತ್ಯ. ಒಂದು ಡೊಮೇನ್ ಹೆಸರು, ಎರಡನೆಯದು ವೆಬ್ ಹೋಸ್ಟಿಂಗ್ ಸೇವೆ. ಇವೆರಡಕ್ಕೆ ಮಾತ್ರ ವಾರ್ಷಿಕ ಹಣ ಪಾವತಿ ಮಾಡುತ್ತಿರಬೇಕಾಗುತ್ತದೆ. ಜತೆಗೆ ಮೂಲಭೂತ ಆವಶ್ಯಕತೆಗಳಾದ ಕಂಪ್ಯೂಟರ್, ಇಂಟರ್ನೆಟ್ ಸಂಪರ್ಕ, ಫೇಸ್‌ಬುಕ್, ಟ್ವಿಟರ್ ಮುಂತಾದ ಸಾಮಾಜಿಕ ಜಾಲತಾಣ (ಇದು ನಮ್ಮ ವೆಬ್ ತಾಣದ ಪ್ರಚಾರಕ್ಕಾಗಿ) ಪುಟಗಳು, ಇಷ್ಟಿದ್ದರೆ ಸಾಕು.
ಡೊಮೇನ್ ಹೆಸರು: ಇದು ನಾವು ರೂಪಿಸಬೇಕೆಂದಿರುವ ವೆಬ್ ತಾಣದ ಅಡ್ರೆಸ್ ಅಥವಾ ಯುಆರ್‌ಎಲ್. ಉದಾಹರಣೆಗೆ, ನಮ್ಮ ಪತ್ರಿಕೆಯದು Vijaykarnataka.com ಅಂತ ಇದೆ. ಇದು ಡೊಮೇನ್ ಹೆಸರು. ಡಾಟ್ ಕಾಂ ಮಾತ್ರವಲ್ಲದೆ ಈಗ ವೈವಿಧ್ಯಮಯ ಡೊಮೇನ್‌ಗಳು ಇವೆ. ಭಾರತಕ್ಕೆ ಸಂಬಂಧಿಸಿದವು .in, ಸರಕಾರದ್ದಾದರೆ, .gov.in, ವಾಣಿಜ್ಯಾತ್ಮಕ ಸೈಟುಗಳಿಗೆ .com, ಸಂಸ್ಥೆಗಳಾದರೆ .org, ಶೈಕ್ಷಣಿಕ ಸಂಸ್ಥೆಯಾದರೆ .edu, ಸುದ್ದಿ ನೀಡುವುದಾದರೆ, .news, ಕಂಪನಿಯ ಬಗ್ಗೆ ಮಾಹಿತಿ ನೀಡುವಂಥವಾದರೆ .info, ಮೊಬೈಲ್‌ಗೆ ಸಂಬಂಧಿಸಿದ್ದಾದರೆ .mobi, ಟಿವಿ ಚಾನೆಲ್ ಆಗಿದ್ದರೆ .tv ಮುಂತಾದ ಡೊಮೇನ್‌ಗಳಿವೆ. ಇಂಥದ್ದೇ ಆಗಬೇಕೆಂಬ ಕಡ್ಡಾಯ ಇಲ್ಲ. ಒಂದೊಂದು ಡೊಮೇನ್‌ಗಳಿಗೆ ಒಂದೊಂದು ರೀತಿಯ ವಾರ್ಷಿಕ ಶುಲ್ಕ ಇರುತ್ತದೆ. ಇದು 99 ರೂಪಾಯಿಯಿಂದ ಲಕ್ಷಾಂತರ ರೂಪಾಯಿವರೆಗೂ ಇರಬಲ್ಲುದು. ನಮಗೆ ಸಾಮಾನ್ಯವಾಗಿ ಬೇಕಾಗಿರುವುದಕ್ಕೆ 500ರಿಂದ 700 ರೂ. ವಾರ್ಷಿಕ ಶುಲ್ಕ ಇರುತ್ತದೆ.
ನಮ್ಮದೇ ಹೆಸರಲ್ಲಿಯೂ ಒಂದು ತಾಣವನ್ನು ತೆರೆಯಲು ಡೊಮೇನ್ ಹೆಸರನ್ನು ನಾವು ನೋಂದಾಯಿಸಿಕೊಂಡಿರಬೇಕು. ನಮ್ಮ ಹೆಸರಿನದೇ ಯುಆರ್‌ಎಲ್ ನಮಗೆ ಸಿಗುವುದು ಈಗ ತೀರಾ ಕಷ್ಟ. ಯಾಕೆಂದರೆ, ಒಂದೇ ಹೆಸರಿನವರು ಸಾಕಷ್ಟು ಮಂದಿ ಇರುವುದರಿಂದ, ಬೇರೆಯವರು ಮುಂಚಿತವಾಗಿ ಆ ಡೊಮೇನ್‌ಗಳನ್ನು ತಮ್ಮ ಹೆಸರಿಗೆ ಮಾಡಿಕೊಂಡಿರಬಹುದು. ಉದಾಹರಣೆಗೆ, ಎಬಿಸಿಡಿ ಡಾಟ್ ಕಾಂ ಸಿಗಲಿಲ್ಲವೆಂದರೆ, ಡಾಟ್ ಇನ್/ಡಾಟ್ ನೆಟ್/ಆರ್ಗ್ ಮುಂತಾದ ಡೊಮೇನ್‌ಗಳಲ್ಲಿ ಪ್ರಯತ್ನಿಸಬಹುದು. ಇಲ್ಲವೆಂದಾದರೆ ಹೆಸರಿಗೊಂದು ಅಕ್ಷರ ಸೇರಿಸಿಕೊಂಡು ಪ್ರಯತ್ನಿಸಬಹುದು.
ಎಲ್ಲಿ, ಹೇಗೆ?: ಭಾರತಕ್ಕೆ ಸಂಬಂಧಿಸಿದ .in ಡೊಮೇನ್‌ಗಳನ್ನು ಅಧಿಕೃತವಾಗಿ ಮಾರಾಟ ಮಾಡುವ ತಾಣಗಳನ್ನು registry.in ಎಂಬ ತಾಣದಲ್ಲಿ ಪಟ್ಟಿ ಮಾಡಲಾಗಿದೆ. ಅಲ್ಲಿ ನೋಡಿದರೆ, ನಿಮಗೆ ಬೇಕಾದ ಯುಆರ್‌ಎಲ್ ಸರ್ಚ್ ಮಾಡಲು ಆಯ್ಕೆ ಸಿಗುತ್ತದೆ. ಅದೇ ರೀತಿ, ಮೇಲ್ಭಾಗದಲ್ಲಿ ರಿಜಿಸ್ಟ್ರಾರ್ಸ್ ಎಂಬ ಟ್ಯಾಬ್ ಕ್ಲಿಕ್ ಮಾಡಿದರೆ, ಡೊಮೇನ್ ಮಾರಾಟ ಮಾಡುವ ಅಧಿಕೃತ ಜಾಲ ತಾಣಗಳ ಪಟ್ಟಿಯೂ ಸಿಗುತ್ತದೆ. ಆಯಾ ತಾಣಗಳಿಗೆ ಹೋಗಿ, ನಮಗೆ ಬೇಕಾದ ಹೆಸರಿನ ಡೊಮೇನ್ ಸರ್ಚ್ ಮಾಡಿದಾಗ, ಅದು ಅಲಭ್ಯವೆಂದಾದರೆ ಆ ಹೆಸರಿಗೆ ಸಮೀಪದ ಬೇರೆ ತಾಣಗಳ ಯುಆರ್‌ಎಲ್‌ಗಳನ್ನೂ ಅದುವೇ ನಿಮಗೆ ತೋರಿಸುತ್ತದೆ. ಆಯ್ಕೆ ಮಾಡಿಕೊಳ್ಳಿ. ಆರಂಭಿಕ ವರ್ಷಕ್ಕೆ ಅತ್ಯಂತ ಕಡಿಮೆ (ಉದಾ. 99 ರೂ.) ಹಣಕ್ಕೆ ಡೊಮೇನ್ ಲಭ್ಯವಿದ್ದರೆ, ಮುಂದಿನ ವರ್ಷದಿಂದ ಜಾಸ್ತಿ ಇರುತ್ತದೆ. ಗಮನಿಸಿಕೊಳ್ಳಿ. ಏಕ ಕಾಲದಲ್ಲಿ ಹೆಚ್ಚು ವರ್ಷಗಳಿಗೆ ಮಾಡಿಕೊಂಡರೂ ರಿಯಾಯಿತಿ ಇರುತ್ತದೆ.
ಹೋಸ್ಟಿಂಗ್: ಇನ್ನು ನಮ್ಮ ವೆಬ್ ತಾಣಕ್ಕೆ ನಾವು ಸೇರಿಸುವ ಪಠ್ಯ, ಫೋಟೋ, ವೀಡಿಯೋಗಳನ್ನೆಲ್ಲ, ಸದಾ ಕಾಲ ಚಾಲ್ತಿಯಲ್ಲಿರುವಂತೆ ಕೇಂದ್ರೀಕೃತ ಸರ್ವರ್‌ನಲ್ಲಿ ಶೇಖರಿಸಿಡಬೇಕಾಗುತ್ತದೆ. ಈ ಹೋಸ್ಟಿಂಗ್ ಸೇವೆಗಳನ್ನು ಕೂಡ ವಿವಿಧ ಕಂಪನಿಗಳು ಒದಗಿಸುತ್ತವೆ. ಡೊಮೇನ್ ರಿಜಿಸ್ಟರ್ ಮಾಡಿದಾಗಲೇ ಯಾವೆಲ್ಲ ಪ್ಲ್ಯಾನ್‌ಗಳಿವೆ ಅಂತ ನಮಗೆ ತೋರಿಸಿ, ಅದಕ್ಕೆ ತಕ್ಕಂತೆ ಶುಲ್ಕ ವಿಧಿಸುತ್ತವೆ. ಸಾಮಾನ್ಯವಾಗಿ ವರ್ಷಕ್ಕೆ ಸಾವಿರ ರೂ. ಆಸುಪಾಸಿನಲ್ಲಿ ಸಣ್ಣ ವೆಬ್ ತಾಣವನ್ನು ರೂಪಿಸಿಕೊಳ್ಳಬಹುದು. ಹೆಚ್ಚು ಕಂಟೆಂಟ್ (ಫೋಟೋ, ವೀಡಿಯೋ ಜಾಸ್ತಿ) ಎಂದಾದರೆ ವರ್ಷಕ್ಕೆ 5 ಜಿಬಿ, 10 ಜಿಬಿ ಸಾಮರ್ಥ್ಯದ ಹೋಸ್ಟಿಂಗ್ ಆಯ್ದುಕೊಳ್ಳಬೇಕಾಗುತ್ತದೆ. ಅದಕ್ಕನುಗುಣವಾಗಿ ಶುಲ್ಕವೂ ಏರುತ್ತದೆ.
ಹೋಸ್ಟಿಂಗ್‌ಗೆ ಹಣ ಪಾವತಿಸಿದ ಬಳಿಕ ನಮ್ಮ ಲಾಗಿನ್‌ಗೆ ಕಂಟ್ರೋಲ್ ಪ್ಯಾನೆಲ್ ದೊರೆಯುತ್ತದೆ. ಸಾಮಾನ್ಯ ವೆಬ್ ಸೈಟ್ ವಿನ್ಯಾಸ ಮಾಡಿಕೊಳ್ಳಲು ಅದರೊಳಗೆ ಟೆಂಪ್ಲೆಟ್‌ಗಳು ಕೂಡ ಉಚಿತವಾಗಿ ದೊರೆಯುತ್ತವೆ. ಮತ್ತಷ್ಟು ಚೆಂದದ ವಿನ್ಯಾಸ ಬೇಕೆಂದರೆ, ವೆಬ್ ಡಿಸೈನ್ ಸೇವೆ ನೀಡುವ ಏಜೆನ್ಸಿಗಳು ಸಾಕಷ್ಟಿವೆ. ಅವರಿಗೆ ಹಣ ಪಾವತಿಸಿ ನಿಮ್ಮ ವೆಬ್ ತಾಣ ರೂಪಿಸಿಕೊಳ್ಳಬಹುದು.
ಜನ ಸಾಮಾನ್ಯರಿಗಾಗಿ ಮಾಹಿತಿ@ತಂತ್ರಜ್ಞಾನ ಅಂಕಣ: ಅವಿನಾಶ್ ಬಿ. ವಿಜಯ ಕರ್ನಾಟಕ, ಆಗಸ್ಟ್ 14, 2017
ಮುಂದಿನ ವಾರ: ಹೋಸ್ಟಿಂಗ್ ಅಗತ್ಯವಿಲ್ಲದೆ, ಐನೂರು ರೂ. ವಾರ್ಷಿಕ ಶುಲ್ಕದ ಆಸುಪಾಸಿನಲ್ಲಿ ಸ್ವಂತ ವೆಬ್‌ಸೈಟ್ ಹೊಂದುವುದು ಹೇಗೆ?
iPhone 16e joins the iPhone 16 lineup, featuring the fast performance of the A18 chip,…
ರಿಯಲ್‌ಮಿ 14 ಪ್ರೊ ಸರಣಿಯ 5ಜಿ ಫೋನ್, ಡ್ಯಾನಿಶ್ ಡಿಸೈನ್ ಸ್ಟುಡಿಯೋ ವ್ಯಾಲರ್ ಡಿಸೈನರ್ಸ್ ಮೂಲಕ ರೂಪುಗೊಂಡ ವಿಶ್ವದ ಮೊದಲ…
ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್ ಇರುವ ಬಹುನಿರೀಕ್ಷಿತ…
ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…
ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.
ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…
View Comments