ನಿಮ್ಮ ಆಂಡ್ರಾಯ್ಡ್ ಫೋನ್ ಲುಕ್ ಬದಲಿಸಿಕೊಳ್ಳಬೇಕೇ? ಹೀಗೆ ಮಾಡಿ…

ಅಮೆರಿಕದಲ್ಲಿ ಆ್ಯಪಲ್ ಐಫೋನ್‌ಗಳು ಹೆಚ್ಚು ಜನಪ್ರಿಯವಾಗಿದ್ದರೆ, ಭಾರತದಲ್ಲಿ ಆಂಡ್ರಾಯ್ಡ್ ಫೋನ್‌ಗಳು ಹೆಚ್ಚು ಪ್ರಸಿದ್ಧಿ ಹಾಗೂ ಜನಾದರ ಗಳಿಸಿವೆ. ಇದಕ್ಕೆ ಪ್ರಧಾನ ಕಾರಣವೆಂದರೆ, ಈ ಫೋನ್‌ನ ನೋಟವನ್ನು, ಸ್ಕ್ರೀನ್ ವಿನ್ಯಾಸವನ್ನು ನಮಗೆ ಬೇಕಾದಂತೆ ಬದಲಾಯಿಸಿಕೊಳ್ಳಬಹುದು ಮತ್ತು ಈ ಬದಲಾವಣೆ ಮಾಡಿಕೊಳ್ಳಲು ಇರುವ ಆ್ಯಪ್‌ಗಳ ಆಯ್ಕೆಗಳು ಅಗಾಧ, ಅಗ್ಗವೂ ಕೂಡ. ಸಾಧನವನ್ನು ವೈಯಕ್ತೀಕರಿಸುವ ಪ್ರಕ್ರಿಯೆಗೆ ಕಸ್ಟಮೈಸೇಶನ್ ಎನ್ನುತ್ತಾರೆ. ನಮ್ಮ ಬಳಕೆಯ ಅಭ್ಯಾಸಕ್ಕೆ ಮತ್ತು ಆದ್ಯತೆಗಳಿಗೆ ಅನುಸಾರವಾಗಿ ಸ್ಕ್ರೀನ್‌ನಲ್ಲಿ ಆಮೂಲಾಗ್ರವಾಗಿ ಬದಲಾವಣೆಗಳನ್ನು ಮಾಡಬಹುದಾಗಿದೆ. ಸುಲಭವಾಗಿ ಹೇಳುವುದಾದರೆ ಆಂಡ್ರಾಯ್ಡ್ ಫೋನನ್ನು ವಿಂಡೋಸ್ ಫೋನ್‌ನಂತೆ ಮಾತ್ರವಲ್ಲದೆ ಐಫೋನ್‌ನಂತೆ ಕೂಡ ತೋರಿಸಬಹುದು. ಯಾವೆಲ್ಲ ರೀತಿಯಲ್ಲಿ ಅತ್ಯಂತ ಮುಖ್ಯವಾಗಿ ನಮಗೆ ಬೇಕಾದುದನ್ನು ಬದಲಾಯಿಸಿಕೊಳ್ಳಬಹುದು ಎಂಬುದರ ಮಾಹಿತಿ ಇಲ್ಲಿದೆ. ಎಲ್ಲದಕ್ಕೂ ಮೂಲಾಧಾರ ಗೂಗಲ್‌ನ ಪ್ಲೇ ಸ್ಟೋರ್ ಎಂಬ ಆ್ಯಪ್‌ಗಳ (ಅಪ್ಲಿಕೇಶನ್ ಅಥವಾ ಕಿರು ತಂತ್ರಾಂಶಗಳ) ಸಾಗರ. ಏನೆಲ್ಲಾ ಮಾಡಬಹುದು?

ವಾಲ್‌ಪೇಪರ್‌ಗಳು:
ಇದು ಬಹುತೇಕರಿಗೆ ಗೊತ್ತು. ನಾವು ತೆಗೆದ ಫೋಟೋವನ್ನೇ ನಮ್ಮ ಸಾಧನದ ಹೋಂಸ್ಕ್ರೀನ್‌ನ ಹಿನ್ನೆಲೆಯಾಗಿ (ಬ್ಯಾಕ್‌ಗ್ರೌಂಡ್) ಸೆಟ್ ಮಾಡಬಹುದು. ಗೊತ್ತಿಲ್ಲದವರು ಹೀಗೆ ಮಾಡಿ. ನಿಮ್ಮ ಗ್ಯಾಲರಿಗೆ ಹೋಗಿ (ಅಥವಾ ಇಂಟರ್ನೆಟ್‌ನಿಂದ ನಮಗೆ ಇಷ್ಟವಾದ ಫೋಟೋವನ್ನು ಡೌನ್‌ಲೋಡ್ ಮಾಡಿಕೊಳ್ಳಲೂಬಹುದು), ಅಲ್ಲಿಂದ ಬೇಕಾದ ಫೋಟೋ ಆಯ್ಕೆ ಮಾಡಿಕೊಂಡು, ಅದನ್ನು ಒತ್ತಿ ಹಿಡಿದುಕೊಂಡಾಗ ಆಯ್ಕೆಗಳು ಗೋಚರಿಸುತ್ತವೆ. ಅದರಲ್ಲಿ ‘Set As’ ಅಂತ ಇರುವುದನ್ನು ಒತ್ತಿದಾಗ, ಹೋಂ ಸ್ಕ್ರೀನ್ ವಾಲ್‌ಪೇಪರ್ ಹಾಗೂ ಲಾಕ್ ಸ್ಕ್ರೀನ್ ಆಗಿ ಹೊಂದಿಸಿಕೊಳ್ಳುವ ಆಯ್ಕೆಗಳು ಗೋಚರಿಸುತ್ತವೆ. ಇದರಲ್ಲಿ ಲಂಬವಾಗಿ (ಪೋರ್ಟ್ರೇಟ್) ಹಾಗೂ ಲ್ಯಾಂಡ್‌ಸ್ಕೇಪ್ (ಅಡ್ಡವಾಗಿ) ಇರುವ ಫೋಟೋಗಳನ್ನು ಹೊಂದಿಸಿಕೊಳ್ಳಬಹುದು. ಅಗಲ ಜಾಸ್ತಿ ಇದ್ದ ಫೋಟೋಗಳು ಹೋಂನಲ್ಲಿ ಎಷ್ಟು ಸ್ಕ್ರೀನ್‌ಗಳನ್ನು ನಾವು ಕಾಣಿಸುತ್ತೇವೆಯೋ, ಅಷ್ಟಕ್ಕೂ ಲ್ಯಾಂಡ್‌ಸ್ಕೇಪ್ ಮಾದರಿಯಲ್ಲಿ ವ್ಯಾಪಿಸಿಕೊಳ್ಳುತ್ತವೆ. ಲಂಬವಾದ ಫೋಟೋಗಳು ಎಲ್ಲ ಸ್ಕ್ರೀನ್‌ಗಳಲ್ಲೂ ಒಂದೇ ಗೋಚರಿಸುತ್ತವೆ. ನೀವೇ ತೆಗೆದ ಫೋಟೋಗಳ ಹೊರತಾಗಿ, ಬೇಕು ಬೇಕಾದ ವಾಲ್‌ಪೇಪರ್‌ಗಳು ಎಲ್ಲಿ ಸಿಗುತ್ತವೆ ಗೊತ್ತೇ? ಪ್ಲೇ ಸ್ಟೋರ್‌ನಲ್ಲಿ ವಾಲ್‌ಪೇಪರ್ ಅಂತ ಹುಡುಕಾಟ ಮಾಡಿದರೆ, ಲಕ್ಷಾಂತರ ಉಚಿತ ಆ್ಯಪ್‌ಗಳು ಸಿಗುತ್ತವೆ. ಗೂಗಲ್‌ನದ್ದೇ ವಾಲ್‌ಪೇಪರ್ ಆ್ಯಪ್ ಕೂಡ ಇದೆ. ಇವುಗಳ ಚಿತ್ರಗಳು ಆಗಾಗ್ಗೆ ಬದಲಾಗುತ್ತಾ (ಇಂಟರ್ನೆಟ್ ಸಂಪರ್ಕಕ್ಕೆ ಅನುಗುಣವಾಗಿ) ಅದ್ಭುತವಾಗಿ ಕಾಣಿಸುತ್ತವೆ.

ಇದಲ್ಲದೆ, ಕೆಲವೊಂದು ‘ಲೈವ್ ವಾಲ್‌ಪೇಪರ್’ ಅಂತಲೂ ಸಿಗುತ್ತವೆ. ಇವೇನು ಅಂತ ಹಲವರು ಕೇಳಿದ್ದಾರೆ. ಇವು ಆ್ಯನಿಮೇಶನ್ ಇರುವ ವಾಲ್‌ಪೇಪರ್‌ಗಳು. ಅಂದರೆ, ಉದಾಹರಣೆಗೆ, ಮೀನಿನ ತೊಟ್ಟಿಯ ವಾಲ್‌ಪೇಪರ್ ಇದ್ದರೆ, ಅದರಲ್ಲಿ ಬಣ್ಣ ಬಣ್ಣದ ಮೀನುಗಳು ಅತ್ತಿಂದಿತ್ತ ಸರಿದಾಡುತ್ತಿರುವುದನ್ನು ನಿಮ್ಮ ಸ್ಕ್ರೀನ್‌ನಲ್ಲೇ ನೋಡಬಹುದು. ಆದರೆ ನೆನಪಿಡಬೇಕಾದ ವಿಷಯ ಎಂದರೆ, ಇಂಥ ವಾಲ್‌ಪೇಪರ್‌ಗಳು ಹೆಚ್ಚು ಬ್ಯಾಟರಿ ಚಾರ್ಜನ್ನು ಬಳಸಿಕೊಳ್ಳುತ್ತವೆ ಹಾಗೂ ಮೊಬೈಲ್ ಸಾಧನದ ಕಾರ್ಯಾಚರಣೆಯ ವೇಗವನ್ನು ಅಲ್ಪಪ್ರಮಾಣದಲ್ಲಿ ಕೊಂಚ ಪ್ರಮಾಣದಲ್ಲಿ ತಗ್ಗಿಸಬಹುದು. ಇದಕ್ಕಾಗಿ ತೀರಾ ಕಡಿಮೆ ಭಾರವಿರುವ (ಕಡಿಮೆ ಎಂಬಿ) ವಾಲ್‌ಪೇಪರ್ ಆ್ಯಪ್‌ಗಳನ್ನು ಬಳಸಿಕೊಳ್ಳುವುದು ಸೂಕ್ತ.

ನಿಮ್ಮದೇ ವಿನ್ಯಾಸದಲ್ಲಿ ನೀವಾಗಿಯೇ ವಾಲ್‌ಪೇಪರ್ ರಚಿಸಿಕೊಂಡು ಅಳವಡಿಸಿಕೊಳ್ಳುವಾಸೆಯಿದ್ದರೆ Tapet ಎಂಬ ಒಂದು ಆ್ಯಪ್ ಇದೆ. ವೈವಿಧ್ಯಮಯ ವಿನ್ಯಾಸಗಳನ್ನು, ವರ್ಣವೈವಿಧ್ಯವನ್ನು ನಾವಿದರಲ್ಲಿ ಕಾಣಬಹುದು. ಉಚಿತ ಆವೃತ್ತಿಯಿದೆ. ಹೆಚ್ಚುವರಿ ಆಯ್ಕೆಗಳು ಬೇಕಿದ್ದರೆ ಹಣ ಪಾವತಿಸಿ ಖರೀದಿಸುವ ಪ್ರೀಮಿಯಂ ಆವೃತ್ತಿಯೂ ಲಭ್ಯವಿದೆ.

ಐಕಾನ್‌ಗಳು
ನಿಮ್ಮ ಮೊಬೈಲ್ ಸಾಧನದಲ್ಲಿರುವ ವೈವಿಧ್ಯಮಯ ಆ್ಯಪ್‌ಗಳನ್ನು ನೀವು ಗುರುತಿಸುವುದು ಅವುಗಳ ಕಿರುಚಿತ್ರ ಅಂದರೆ ಐಕಾನ್‌ಗಳ ಮೂಲಕ. ಈ ಐಕಾನ್‌ಗಳ ವಿನ್ಯಾಸವನ್ನು ಕೂಡ ಬದಲಾಯಿಸಲು ಆಂಡ್ರಾಯ್ಡ್‌ನಲ್ಲಿ ವ್ಯವಸ್ಥೆಯಿದೆ. ಅದೆಷ್ಟೋ ಐಕಾನ್ ಪ್ಯಾಕ್‌ಗಳು ಉಚಿತವಾಗಿ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಲಭ್ಯ ಇವೆ. ಕೆಲವು ಪ್ರೀಮಿಯಂ (ಹಣ ಕೊಟ್ಟು ಖರೀದಿಸಬಹುದಾದ) ಆ್ಯಪ್‌ಗಳು ಕೆಲವೊಮ್ಮೆ ಕೊಡುಗೆಯ ರೂಪದಲ್ಲಿ ಉಚಿತವಾಗಿಯೂ ಲಭ್ಯವಾಗುತ್ತವೆ. ಇನ್ನು, ಹೆಚ್ಚಿನ ಐಕಾನ್ ಪ್ಯಾಕ್‌ಗಳು ವಾಲ್‌ಪೇಪರ್‌ಗಳ ಸಹಿತವಾಗಿಯೇ ಬರುವುದರಿಂದ ಬ್ಯಾಕ್‌ಗ್ರೌಂಡ್‌ಗೆ ಪ್ರತ್ಯೇಕ ಆ್ಯಪ್ ಬೇಕಾಗಿರುವುದಿಲ್ಲ. Icon Pack Studio ಎಂಬ ಆ್ಯಪ್ ಮೂಲಕ ನಿಮಗೆ ಬೇಕಾದ ರೀತಿಯಲ್ಲಿ ಆ್ಯಪ್‌ನ ಐಕಾನ್‌ಗಳನ್ನು ವಿನ್ಯಾಸಗೊಳಿಸಿ ಬಳಸಬಹುದು.

ಲಾಂಚರ್‌ಗಳು
ಲಾಂಚರ್‌ಗಳು ನಿಮ್ಮ ಇಡೀ ಫೋನ್‌ನ ವಿನ್ಯಾಸವನ್ನು ಆಮೂಲಾಗ್ರವಾಗಿ ಬದಲಾಯಿಸಬಲ್ಲವು. ಹೋಂ ಸ್ಕ್ರೀನ್‌ನಿಂದ ತೊಡಗಿ, ಐಕಾನ್ ಸೇರಿಸಲು, ಹಲವಾರು ಸ್ಕ್ರೀನ್ ಪುಟಗಳನ್ನು ರಚಿಸಲು, ವಿಜೆಟ್‌ಗಳನ್ನು ರೂಪಿಸಲು ನೆರವಾಗುತ್ತವೆ. ಅಂದರೆ, ಆಂಡ್ರಾಯ್ಡ್ ಇಂಟರ್ಫೇಸ್ ಅನ್ನೇ ನಮಗೆ ಬೇಕಾದಂತೆ ಬದಲಾಯಿಸುವ ಸಾಮರ್ಥ್ಯ ಉಳ್ಳವು ಈ ಲಾಂಚರ್‌ಗಳು. ಫೋನ್ ಜತೆಗೇ ಬಂದಿರುವ ಲಾಂಚರ್‌ಗಳಿಗೆ ನೀವು ಹೊಂದಿಕೊಂಡುಬಿಟ್ಟಿದ್ದರೂ, ಅದನ್ನೇ ನೋಡಿ ನೋಡಿ ಸಾಕಾಗಿದೆ, ಬದಲಾವಣೆ ಬೇಕು ಅಂದುಕೊಳ್ಳುವವರಿಗೆ ಈ ಲಾಂಚರ್‌ಗಳು ನೆರವಿಗೆ ಬರುತ್ತವೆ. ಇದರಲ್ಲಿ ಒಂದಿಷ್ಟು ಕೆಲಸ ಮಾಡಿದರೆ, ನಮ್ಮ ಫೋನನ್ನು ನಮಗೇ ಗುರುತು ಹಿಡಿಯಲಾರದಷ್ಟು ಬದಲಾವಣೆ ಮಾಡಬಹುದು. ಈ ಲಾಂಚರ್‌ಗಳನ್ನು ಅಳವಡಿಸಿಕೊಂಡರೆ, ಐಕಾನ್ ಪ್ಯಾಕ್‌ಗಳನ್ನು ಅಳವಡಿಸಿಕೊಳ್ಳುವುದು (ಕೆಲವೊಮ್ಮೆ) ಸಾಧ್ಯವಾಗಲಾರದು. ಯಾಕೆಂದರೆ, ಇದರಲ್ಲಿ ವಾಲ್‌ಪೇಪರ್ ಹಾಗೂ ಐಕಾನ್‌ಗಳೂ ಬದಲಾಗಬಲ್ಲವು. ನಾನು ಬಳಸಿ ನೋಡಿದಂತೆ, ನೋವಾ ಲಾಂಚರ್ ಹಾಗೂ ಆ್ಯಕ್ಷನ್ ಲಾಂಚರ್‌ಗಳು ಚೆನ್ನಾಗಿವೆ. ಪ್ಲೇ ಸ್ಟೋರ್‌ನಲ್ಲಿ ಸಾಕಷ್ಟು ಇತರ ಲಾಂಚರ್‌ಗಳೂ ಇವೆ. ಬಳಸಿ ನೋಡಬಹುದು, ಬೇಡವೆಂದಾದರೆ ಅನ್‌ಇನ್‌ಸ್ಟಾಲ್ ಮಾಡಬಹುದು. ಪ್ಲೇಸ್ಟೋರ್‌ನಲ್ಲಿ ನಿಮಗೆ ಮೈಕ್ರೋಸಾಫ್ಟ್ ಲಾಂಚರ್ (ವಿಂಡೋಸ್ ಮೊಬೈಲ್ ರೀತಿ), ಐಫೋನ್ ಲಾಂಚರ್‌ಗಳೂ ಸಿಗುತ್ತವೆ. ಲಾಂಚರ್ ಅಳವಡಿಸಿಕೊಳ್ಳುವಾಗಲೇ ಸ್ವಲ್ಪ ಎಚ್ಚರಿಕೆಯಿಂದ, ಸೂಚನೆಗಳನ್ನು ಓದಿ ನೋಡುತ್ತಾ ಕ್ಲಿಕ್ ಮಾಡಬೇಕಾಗುತ್ತದೆ. ನಂತರವೂ ಒಂದಿಷ್ಟು ಸಮಯ ವ್ಯಯಿಸಿದರೆ ನಮಗೆ ಬೇಕಾದ ರೀತಿಯಲ್ಲಿ ಸೆಟ್ಟಿಂಗ್‌ಗಳನ್ನು ಬದಲಾಯಿಸಿಕೊಳ್ಳಬಹುದು.

ವಿಜೆಟ್‌ಗಳು
ಮೊಬೈಲ್ ಸಾಧನಗಳಲ್ಲಿ ಆ್ಯಪ್ಸ್ ಹಾಗೂ ವಿಜೆಟ್ಸ್ ಅಂತ ನೋಡಿರಬಹುದು. ಆ್ಯಪ್‌ಗಳ ಮಾಹಿತಿ ಹೇಗೆ ಪ್ರದರ್ಶನಗೊಳ್ಳಬೇಕೆಂಬುದಕ್ಕೆ ವಿಜೆಟ್ಸ್‌ಗಳೆಂಬ ಕಿರು ತಂತ್ರಾಂಶಗಳು ಸಹಕರಿಸುತ್ತವೆ. ಇವುಗಳನ್ನು ಹೋಂ ಸ್ಕ್ರೀನ್‌ನಲ್ಲಿ ಶಾರ್ಟ್‌ಕಟ್ ರೂಪದಲ್ಲಿ ಬಳಸಬಹುದು. ಅಂದರೆ ಹೆಚ್ಚಿನ ಆ್ಯಪ್‌ಗಳನ್ನು ಇನ್‌ಸ್ಟಾಲ್ ಮಾಡುವಾಗಲೇ ಅವುಗಳ ವಿಜೆಟ್‌ಗಳೂ ಜತೆಗಿರುತ್ತವೆ. ಇವುಗಳು ಕೂಡ ತಮ್ಮದೇ ಆದ ರೀತಿಯಲ್ಲಿ ನಮಗೆ ಉಪಯುಕ್ತ. ಉದಾಹರಣೆಗೆ, ಜಿಮೇಲ್ ಅಥವಾ ವಾಟ್ಸಾಪ್ ವಿಜೆಟ್ ಬಳಸಿದರೆ, ಯಾವೆಲ್ಲ ಸಂದೇಶಗಳು ಬಂದವೆಂಬುದನ್ನು ಹೋಂ ಸ್ಕ್ರೀನ್‌ನಿಂದಲೇ ನೋಡಬಹುದು. ವಿಜಯ ಕರ್ನಾಟಕ ಆ್ಯಪ್‌ನ ವಿಜೆಟ್ ಕೂಡ ಇದೆ. ತಾಜಾ ಸುದ್ದಿಗಳು ಹೋಂ ಸ್ಕ್ರೀನ್‌ನಲ್ಲಿ ಕಾಣಿಸುತ್ತಲೇ ಇರುತ್ತವೆ.

ಇವನ್ನು ಸದುಪಯೋಗಪಡಿಸಿಕೊಳ್ಳಿ, ನಿಮ್ಮ ಮೊಬೈಲ್ ಫೋನ್‌ನ ಲುಕ್ ಬದಲಾಯಿಸಿಕೊಳ್ಳಿ!

ಮಾಹಿತಿ@ತಂತ್ರಜ್ಞಾನ ಅಂಕಣ for 05 ಫೆಬ್ರವರಿ 2018 by ಅವಿನಾಶ್ ಬಿ.

Avinash B

Avinash B. Tech Writer, Columnist, Working as Online media Journalist for more than two decades. Passionate about Technology and Gadgets. Yakshagana and Music are passion.

Recent Posts

ಎಐ ವೈಶಿಷ್ಟ್ಯಗಳ realme GT 7 Pro ಬಿಡುಗಡೆ: ಬೆಲೆ ಎಷ್ಟು? ವೈಶಿಷ್ಟ್ಯಗಳೇನು? ಇಲ್ಲಿದೆ ಪೂರ್ಣ ಮಾಹಿತಿ

ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್‌ ಇರುವ ಬಹುನಿರೀಕ್ಷಿತ…

4 weeks ago

ರಿಯಲ್‌ಮಿ ನಾರ್ಜೋ 70 ಟರ್ಬೊ 5 ಜಿ, ರಿಯಲ್‌ಮಿ ಬಡ್ಸ್ ಎನ್‌1 ಬಿಡುಗಡೆ: ಬೆಲೆ, ವೈಶಿಷ್ಟ್ಯ ತಿಳಿಯಿರಿ

ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…

3 months ago

ಓದುವಿಕೆ, ಕಲಿಕೆ ಉತ್ತೇಜನಕ್ಕೆ ‘ರೀಡ್-ಅ-ಥಾನ್’: ದಾಖಲೆಯ ಗುರಿ

ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.

3 months ago

Realme 13 +, Realme 13 5ಜಿ ಫೋನ್ ಬಿಡುಗಡೆ: ವೇಗದ ಫೋನ್‌ನ ವೈಶಿಷ್ಟ್ಯಗಳು, ಬೆಲೆ ಇಲ್ಲಿ ತಿಳಿಯಿರಿ

ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…

4 months ago

e-ಯುಗದ ತನಿಖಾ ಪತ್ರಿಕೋದ್ಯಮ: ಫ್ಯಾಕ್ಟ್ ಚೆಕ್

Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.

5 months ago

ಯಕ್ಷ ಮಂತ್ರ ಮಾಂಗಲ್ಯ: ಕೀರ್ತನಾ ಪ್ರಸಾದ ಕಲ್ಯಾಣವು

ಹಾಡುಗಾರಿಕೆ, ಚೆಂಡೆ-ಮದ್ದಳೆಯ ಬಿಡಿತ-ಮುಕ್ತಾಯಗಳ ಬಳಿಕ, ಬಂದಿದ್ದ ಗಣ್ಯರು, ಒಂದೊಂದು ಹಾಡಿನಲ್ಲಿ ಅಡಕವಾಗಿರುವ ಮಂತ್ರ ಮಾಂಗಲ್ಯದ ಪ್ರತಿಜ್ಞಾಗುಚ್ಛವನ್ನು ವಿವರಿಸಿ, ವಧು-ವರರಿಗೆ ಬೋಧಿಸಿದರು

11 months ago