ಕೋವಿಡ್-19 ಕಾಟದಿಂದ ನಾನು ಚೇತರಿಸಿಕೊಂಡ ಬಗೆ

ಇದೊಂದು ದೀರ್ಘ ಕಥೆ. ಓದಲು ಕಷ್ಟವೆಂದಾದರೆ, ಕೊನೆಯ ಮೂರು ಪ್ಯಾರಾಗಳನ್ನಾದರೂ ಓದಿದರೆ, ಕೋವಿಡ್‌ನಿಂದ ರಕ್ಷಣೆ ಪಡೆಯಲು ಅನುಕೂಲವಾದೀತು.

ನಾನೂ ನನ್ನ ಕುಟುಂಬವೂ ಕೋವಿಡ್-19 ಪಾಸಿಟಿವ್ ಆಗಿ, ಈಗಷ್ಟೇ ಚೇತರಿಸಿಕೊಂಡವರು. ಹೇಗೆ? ಎಂಬುದಕ್ಕೆ ಈ ದೇಶದ ಒಬ್ಬ ಸತ್ಪ್ರಜೆಯಾಗಿ, ಸರ್ಕಾರ ನೀಡಿದ ಮುನ್ನೆಚ್ಚರಿಕೆ ಕ್ರಮಗಳನ್ನು ಚಾಚೂ ತಪ್ಪದೆ ಪಾಲಿಸಿದ್ದು ಎಂಬುದು ಒಂದು ಉತ್ತರವಾಗಿದ್ದರೆ, ಮತ್ತೊಂದು ನಮ್ಮ ಜೀವನ ಶೈಲಿ ಎಂಬುದು ಹೆಚ್ಚು ಪರಿಣಾಮ ಬೀರಿದ ಮತ್ತು ಮುಖ್ಯವಾದ ಅಂಶ. ನಾನು ಅವಿನಾಶ್ ಬಿ. ಬೆಂಗಳೂರಿನಿಂದ.

ಬೆಂಗಳೂರಿನಲ್ಲಿ ಕೋವಿಡ್ ಪ್ರಸಾರ ಹೆಚ್ಚಾಗುತ್ತಿದೆ ಎಂದು ತಿಳಿದಾಗಲೇ ನಾವು ನಮ್ಮ ದೇಹದ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವ ಔಷಧಿ (ಡಾ. ಗಿರಿಧರ ಕಜೆಯವರ ಸಮತ್ವ) ತೆಗೆದುಕೊಳ್ಳಲಾರಂಭಿಸಿದ್ದು ಬಲುದೊಡ್ಡ ನೆರವಿಗೆ ಬಂತು.

ಇದು ತೆಗೆದುಕೊಳ್ಳಲು ಆರಂಭಿಸಿದ ನಾಲ್ಕೇ ದಿನಕ್ಕೆ ನಮಗೆ ಕೋವಿಡ್ ಬಂತು ಎಂದಾಕ್ಷಣ, ಹಾಗಿದ್ದರೆ ಕಜೆಯವರ ಔಷಧಿ ತೆಗೆದುಕೊಳ್ಳಬಾರದು ಅಂತ ನಾವು ಅಪಪ್ರಚಾರ ಮಾಡುವುದಿಲ್ಲ. ಈ ಮಾತ್ರೆಯೇ ನಮ್ಮನ್ನು ಹೆಚ್ಚಿನ ಅನಾಹುತದಿಂದ ತಪ್ಪಿಸಲು ಅದಾಗಲೇ ಕೆಲಸ ಮಾಡಲಾರಂಭಿಸಿತ್ತು ಎಂಬುದೇ ನನ್ನ ಅನುಭವದ ಸತ್ಯ.

ಹಾಗಿದ್ದರೆ ನಮಗೆ ಬಂದಿದ್ದು ಹೇಗೆ?
ಏನಿಲ್ಲ ಸ್ವಾಮೀ, ನಾವು-ನೀವು ತಲೆನೋವು-ಜ್ವರ ಬಂದ್ರೆ ಸಾಮಾನ್ಯವಾಗಿ ಏನು ಮಾಡ್ತೇವೆ? ಇದು ಮಾಮೂಲಿ ಜ್ವರ, ಒಂದು ಮಾತ್ರೆ ತೆಗೆದುಕೊಂಡರೆ ಸರಿ ಹೋಗುತ್ತದೆ, ಅಥವಾ ಮಾತ್ರೆಯೇ ಇಲ್ಲದೆ ಸುಮ್ಮನಿದ್ದರೆ ಮೂರು ದಿನದ ಬಳಿಕ ಹೋಗುತ್ತದೆ ಅಂತ ತಿಳಿದುಕೊಂಡವರು, ಊರಿಡೀ ಓಡಾಡಿದ್ದೇ ನಮಗೆ ಕೋವಿಡ್ ತಗುಲಲು ಪ್ರಧಾನ ಕಾರಣ.

ಯಾಕೆಂದರೆ, ನಮ್ಮ ಸುರಕ್ಷತೆಗಾಗಿ ನಾವು ಮನೆಯೊಳಗೇ ಇದ್ದವರು. ಹಾಗಿದ್ರೂ ಕೋವಿಡ್ ಬಂತು ಎಂದಾಕ್ಷಣ, ಅದೇನು ಗಾಳಿಯಲ್ಲಿ ಬಂತು ಅಂತ ನಾವು ಊರೆಲ್ಲಾ ಬಂಬಡಾ ಹೊಡಿಯಲಿಲ್ಲ. ಬಂದಿದ್ದು ಯಾರಿಂದ ಅಂತನೂ ಗೊತ್ತು. ಆದರೆ, ಗೊತ್ತಾದಾಗ ಸ್ವಲ್ಪ ಹೊತ್ತಾಗಿತ್ತಷ್ಟೇ.

ಇರಲಿ, ಹಾಗೇ ಒಂದು ದಿನ ನನ್ನ ಪತ್ನಿಗೆ ಮೊದಲು, ಆಕೆಗೆ ಕಡಿಮೆಯಾದ ಬಳಿಕ ನನಗೂ ಜ್ವರ ಬಂತು.

ನಾವೇನು ಮಾಡಿದೆವು?
ಹಿಂದಿನಿಂದಲೂ ಜ್ವರ ಬಂದ್ರೆ, ತಲೆನೋವಾದ್ರೆ, ವಾಂತಿ ಬರುವಂತಾದರೆ, ಹೊಟ್ಟೆನೋವು – ಮುಂತಾಗಿ ನಮ್ಮದೇ ಜೀವನ ಶೈಲಿಯ ಆಧಾರದಲ್ಲಿ (ಏನೇನೋ ತಿನ್ನುವುದು, ಎಷ್ಟೆಷ್ಟೋ ತಿನ್ನುವುದು, ಹೊತ್ತು ಗೊತ್ತಿಲ್ಲದೆ ತಿನ್ನುವುದು) ಬರುವ ಸಮಸ್ಯೆಗಳಿಗೆ ಯಾವತ್ತೂ ಮೆಡಿಕಲ್ಸ್‌ಗೆ ಹೋಗಿ ಸ್ವಯಂ ವೈದ್ಯ ಮಾಡಿಸುವ ಪದ್ಧತಿ ನಮ್ಮಲ್ಲಿರಲಿಲ್ಲ. ಏನಿದ್ದರೂ ಆಯುರ್ವೇದ ಔಷಧಿಯೇ ತೆಗೆದುಕೊಳ್ಳುವುದು ನಮ್ಮ ಕ್ರಮ. ಇದು ನಮ್ಮ ಚಿಕಿತ್ಸೆಯಲ್ಲಿ ಗಟ್ಟಿ ತಳಪಾಯ ಮಾಡಿಕೊಟ್ಟಿತು. ಮತ್ತು ಪ್ಯಾರಾಸಿಟೆಮಾಲ್ ಅನಿವಾರ್ಯವಾದಾಗ, ಅದು ತುಂಬ ಉತ್ತಮವಾಗಿ ಕೆಲಸ ಮಾಡಿತು.

ಹೀಗಾಗಿ, ಅದಾಗಲೇ ಆರಂಭಿಸಿದ್ದ ಸಮತ್ವದ ಹತ್ತು ದಿನದ ಕೋರ್ಸ್ ಮುಗಿಸಲೇಬೇಕೆಂದು ಹಠ ತೊಟ್ಟು ಆಯುರ್ವೇದ ಮಾತ್ರೆಗಳನ್ನು ತೆಗೆದುಕೊಳ್ಳುವುದನ್ನು ಮುಂದುವರಿಸಿದೆವು.

ಜೊತೆಗೆ, ಜ್ವರ, ಮೈಕೈನೋವಿಗೆ ಪ್ಯಾರಾಸಿಟೆಮಾಲ್ ಮಾತ್ರೆ. ಇದರ ಜೊತೆಗೆ, ಕ್ಯಾಲ್ಶಿಯಂ ಮತ್ತು ಝಿಂಕ್, ವಿಟಮಿನ್ ಮಾತ್ರೆಗಳನ್ನು ನಿಯಮಿತವಾಗಿ ಸೇವಿಸಲಾರಂಭಿಸಿದ್ದೆವು.

ಇದರೊಂದಿಗೆ, ಎರಡುಹೊತ್ತು ಹಬೆ (ಸ್ಟೀಮ್) ತೆಗೆದುಕೊಳ್ಳುತ್ತಿದ್ದೆವು. ಬಿಸಿ ನೀರನ್ನೇ (ಸುಮ್ನೇ ತಣ್ಣೀರನ್ನು ಕೊಂಚ ಬಿಸಿ ಮಾಡಿ, ಇದು ಬಿಸಿನೀರು ಅಂತ ಕುಡಿಯೋದಲ್ಲ, ಕುದಿಸಿ ಸ್ವಲ್ಪ ಆರಿಸಿದ ನೀರು) ಸೇವಿಸುತ್ತಿದ್ದೆವು. ಜೊತೆಗೆ ರಕ್ತದ ಆಕ್ಸಿಜನ್ ಪ್ರಮಾಣವನ್ನೂ ನನ್ನ ಆ್ಯಪಲ್ ವಾಚ್ ಮೂಲಕ ಆಗಾಗ್ಗೆ ಚೆಕ್ ಮಾಡಿಕೊಳ್ಳುತ್ತಿದ್ದೆವು. 79ರವರೆಗೂ ತೋರಿಸಿತ್ತು. ಗಾಬರಿ ಬೀಳಲಿಲ್ಲ. ಇನ್ನೂ ಒಂದೆರಡು ಸಲ ರೀಡಿಂಗ್ ತೆಗೆದುಕೊಂಡ ಬಳಿಕ 92ರ ಮೇಲೆಯೇ ತೋರಿಸುತ್ತಿತ್ತು. ಕೆಲವೊಮ್ಮೆ 97, 98, 100 ಕೂಡ ತೋರಿಸಿದ್ದು ನಮ್ಮ ಧೈರ್ಯಕ್ಕೆ ಪೂರಕವಾಗಿತ್ತು.

ಚಹಾ-ಕಾಫಿಯ ಚಟವೇನೂ ಇಲ್ಲದಿದ್ದರೂ, ಎಲ್ಲರೂ ಕುಡೀತಾರಲ್ಲಾಂತ ನಾವೂ ಕುಡಿಯುತ್ತಿದ್ದೆವು. ಈಗ ಆಯುಷ್ ಕ್ವಾಥ ಎಂಬ, ರೋಗನಿರೋಧಕ ಶಕ್ತಿ ಹೆಚ್ಚಿಸುವ ಕಷಾಯದ ಪುಡಿಯನ್ನು ಕುದಿಯುವ ನೀರಿಗೆ ಹಾಕಿ, ಲಿಂಬೆ ಹಣ್ಣು, ಬೆಲ್ಲ ಹಾಕಿ, ಕಾಫಿ-ಚಹಾವನ್ನು ರೀಪ್ಲೇಸ್ ಮಾಡಿದೆವು. ಇದು ಎರಡು ಹೊತ್ತು.

ಹೀಗೆಲ್ಲ ನಿರ್ಲಕ್ಷ್ಯ ಮಾಡಬೇಡಿ, ಡಾಕ್ಟರಲ್ಲಿಗೆ ಹೋಗಿ ಅಂತಲೋ; ಬಿಬಿಎಂಪಿ ಕಿಟ್‌ನಲ್ಲಿರೋ ಎಲ್ಲ ಮಾತ್ರೆಗಳನ್ನು ತರಿಸಿಕೊಂಡು ತಿನ್ನಿ ಅಂತಲೋ, ಅದು-ಮಾಡಿ ಇದು ಮಾಡಿ ಅಂತಲೋ ಸಾಮಾಜಿಕ ತಾಣಗಳಲ್ಲಿ ಏನೇನೋ ಬರೆದುಕೊಂಡು ತಾವೇ ಕೋವಿದರು, ಕೋವಿಡ್ ವಾರಿಯರ್‌ಗಳೆಂದು, ಸುಖಾ ಸುಮ್ಮನೆ ಫಾರ್ವರ್ಡ್ ಸಂದೇಶಗಳನ್ನು ಕಳುಹಿಸುವವರು ಸಾಕಷ್ಟಿದ್ದರು. ಅವುಗಳನ್ನೆಲ್ಲ ನಿರ್ಲಕ್ಷಿಸಿದೆವು.

ಸರ್ಕಾರದ ಧ್ಯೇಯ ವಾಕ್ಯ ಪರಿಪಾಲನೆ
ಮೊದಲನೆಯದಾಗಿ, ಸರ್ಕಾರವೇ ಹೇಳಿದಂತೆ, “ಭಯ ಬೇಡ, ಮನೆಯೊಳಗಿರಿ, ಸುರಕ್ಷಿತವಾಗಿರಿ” ಎಂಬುದೇ ನಮ್ಮ ಧ್ಯೇಯ ವಾಕ್ಯವಾಗಿತ್ತು. ಯಾಕೆಂದರೆ, ಈ ಜ್ವರ ಬರೇ ಜ್ವರವಲ್ಲ, ಕೋವಿಡ್ ಆಗಿರಬಹುದು ಅಂತ ಪ್ರಜ್ಞಾವಂತ ನಾಗರಿಕರು ಯೋಚಿಸುವ ಹಾಗೆಯೇ ನಾನೂ ಯೋಚಿಸಿದೆ. (ಯಾಕೆಂದರೆ, ವಿದ್ಯಾವಂತರೆಲ್ಲರೂ ಪ್ರಜ್ಞಾವಂತರಾಗಿರಲೇಬೇಕಿಲ್ಲ. ಜ್ವರ ಬಂದರೂ ನಂಗೇನೂ ಆಗಿಲ್ಲ ಅಂತ ಓಡಾಡಿದವರು ತಾವು ಊರಿಗೆಲ್ಲಾ ಕೋವಿಡ್ ಪ್ರಸಾರ ಹಂಚುತ್ತಿರಬಹುದು ಎಂಬುದನ್ನು ಅರಿತಿರುವುದಿಲ್ಲ.) ಹೀಗಾಗಿ ನಾವಂತೂ ಮನೆ ಬಿಟ್ಟು ಹೊರಗೆ ಹೋಗಲೇ ಇಲ್ಲ. ಯಾಕೆಂದರೆ, ನಮ್ಮಿಂದಾಗಿ ಇದು ಬೇರೊಬ್ಬರಿಗೆ ಹರಡಬಾರದೆಂಬ ಕಾಳಜಿ.

ಊರಿಗೆ ಹೋಗಬೇಕಿತ್ತು, ಊರಲ್ಲೊಂದು ಆಪ್ತ ಕುಟುಂಬಿಕರ ಗೃಹ ಪ್ರವೇಶ ಕಾರ್ಯಕ್ರಮವಿತ್ತು. ಹೋಗಲೇಬೇಕಾಗಿತ್ತು. ನಾವು ಇದು ಮಾಮೂಲಿ ಜ್ವರ ಅಂತಂದುಕೊಂಡು ಹೋಗಬಹುದಿತ್ತು. ಆದರೆ, ಹಾಗೆ ಮಾಡಲಿಲ್ಲ. ಕೋವಿಡ್ ಇರಬಹುದೆಂದುಕೊಂಡು, ನಮ್ಮಿಂದಾಗಿ ಬೇರೆಯವರಿಗೆ ಹರಡಬಾರದು ಅಂತ ಊರಿಗೆ ಹೋಗುವ ಪ್ರೋಗ್ರಾಂ ಕ್ಯಾನ್ಸಲ್ ಮಾಡಿಕೊಂಡೆವು.

ಬಿಬಿಎಂಪಿ ವಾರ್ ರೂಂ ಸಿಬ್ಬಂದಿಗಳ ವಿನಯದ ಕರೆ
ಜ್ವರ ಎಲ್ಲ ಬಿಟ್ಟು, ಕೊಂಚ ತ್ರಾಣ ಬಂದ ಮೇಲೆ ಕೋವಿಡ್ ಟೆಸ್ಟ್‌ಗೆ ಹೋದೆವು. ಎರಡು ದಿನದ ಬಳಿಕ 2021 ಏ.29ರಂದು ಪಾಸಿಟಿವ್ ರಿಪೋರ್ಟ್ ಬಂತು. ಬಂದ ತಕ್ಷಣ ಬಿಬಿಎಂಪಿ ಕೋವಿಡ್ ವಾರ್ ರೂಂ, ಬಿಬಿಎಂಪಿ ವೈದ್ಯರಿಂದ ಕರೆಗಳು ಬರಲಾರಂಭಿಸಿದವು.

ಯಾರೂ ಹೆದರಿಸಲಿಲ್ಲ. ನೀವು ಖಾಸಗಿಯಾಗಿ ಚಿಕಿತ್ಸೆ ಪಡೆಯುತ್ತೀರೋ ಅಥವಾ ಸರ್ಕಾರದ ಸಹಾಯ ಬೇಕೇ ಎಂದು ವಿನೀತವಾಗಿಯೇ ಕೇಳಿದರು. ಅಗತ್ಯವಿರುವವರಿಗೆ ಬೆಡ್ ಸೌಕರ್ಯ ಸಿಗುತ್ತಿಲ್ಲ ಎಂಬುದು ನೆನಪಾಗಿ, ಬೇಡ, ಖಾಸಗಿಯಾಗಿಯೇ ಚಿಕಿತ್ಸೆ ಪಡೀತೀವಿ ಎಂದು ಹೇಳಿದೆವು.

ನಂತರವೂ ಪ್ರತಿ ದಿನ ಕರೆ ಬರುತ್ತಿತ್ತು, ನಾಲ್ಕು ದಿನಗಳ ಬಳಿಕ ಆಟೋಮೇಟೆಡ್ ವಾಯ್ಸ್ ಕರೆ (IVR) ಬರಲಾರಂಭಿಸಿತು. ಎಲ್ಲದಕ್ಕೂ 2ನ್ನು ಒತ್ತಿದ ಬಳಿಕ, ಹತ್ತು ದಿನದ ಬಳಿಕ ಕರೆ ಬರುವುದು ನಿಂತು ಹೋಯಿತು. ನಿಮಗೆ ಕೋವಿಡ್‌ನ ಯಾವುದೇ ಲಕ್ಷಣಗಳಿಲ್ಲ ಎಂಬ ಎಸ್ಸೆಮ್ಮೆಸ್ ಬಂತು.

ಕೋವಿಡ್ ಪಾಸಿಟಿವ್ ರಿಪೋರ್ಟ್ ಬಂದ ಬಳಿಕ ಫೇಸ್‌ಬುಕ್‌ನಲ್ಲಿ “ಹುರ‍್ರೇ…. ನಾನೂ ಪಾಸಿಟಿವ್” ಅಂತ ಹಾಕಿದಾಗ ಹೊರ ಜಗತ್ತಿಗೆ ವಿಷಯ ಗೊತ್ತಾಯಿತು.

ಇಬ್ಬರನ್ನೂ ಜ್ವರವು ಹಿಂಡಿ ಹಿಪ್ಪೆ ಮಾಡಿಬಿಟ್ಟಿತ್ತು. ಮನೆಯಲ್ಲಿಬ್ಬರೇ ಇರೋದು. ಆಯಾಸ, ಸದಾ ನಿದ್ದೆಯ ಮಂಪರು… ಇದರ ನಡುವೆಯೇ ಬಿಸಿಬಿಸಿ ಗಂಜಿ, ಉಪ್ಪಿನ ಕಾಯಿಯೊಂದಿಗೆ ಜೀವನ ಸಾಗುತ್ತಿತ್ತು.

ಇದರ ಮಧ್ಯೆ, ಜ್ವರ ಬಿಟ್ಟ ವಾರದ ಬಳಿಕ ಮಡದಿಗೆ ಮೂಗು ಕಟ್ಟುವುದು, ಕಫ, ಕೆಮ್ಮಿನ ಸಮಸ್ಯೆ ಎದುರಾಯಿತು. ಉಸಿರಾಟಕ್ಕೂ ತೊಂದರೆಯಾಯಿತು. ನನಗೆ ಟಿವಿ ನೋಡಿ ನೋಡಿ, ಅದರಿಂದಾಗಿ ಸ್ವಲ್ಪ ಗಾಬರಿಯಾದದ್ದು ಸುಳ್ಳಲ್ಲ. ಆದರೆ, ತೋರ್ಪಡಿಸಿಕೊಳ್ಳಲಿಲ್ಲ. ನಾನು ಧೈರ್ಯಗೆಟ್ಟರೆ, ಆಕೆಯೂ ಧೈರ್ಯ ಕುಂದಿಸಿಕೊಂಡರೆ, ನಮ್ಮ ಜೀವಕೋಶಗಳೂ ಹೆದರಿ ಚೇತರಿಸಿಕೊಳ್ಳುವುದನ್ನೇ ಬಿಟ್ಟು ಬಿಟ್ಟರೆ?

ಹೀಗಾಗಿ ಧೈರ್ಯ “ಪ್ರದರ್ಶಿಸಿ”, ನಮ್ಮಜ್ಜಿ ಹಿಂದೆ ಕಫದ ಸಮಸ್ಯೆಯಾದಾಗ ಮಾಡುತ್ತಿದ್ದ ನಿಂಬೆ ರಸದ ಔಷಧಿ ನೆನಪಾಯಿತು. ಒಂದು ಡ್ರಾಪ್ (ದಿನಕ್ಕೊಂದೇ ಬಾರಿ) ಮೂಗಿಗೆ ಹಾಕಿದೆ. ಅದು ರಾಮಬಾಣದಂತೆ ಕೆಲಸ ಮಾಡಿತು. (ಅದಾಗಲೇ ಈ ಪರಮೌಷಧಿ ಬಗ್ಗೆ ಅಪಪ್ರಚಾರ ಆರಂಭವಾಗಿತ್ತು. ಅದು ಕೂಡ ಸಂಕೇಶ್ವರರು ‘ನಿಂಬೆ ರಸ ಹಾಕಿದ್ರೆ ಕೊರೊನಾ ಸತ್ತೇ ಹೋಗುತ್ತೆ’ ಅಂತ ಹೇಳಿದರೂಂತ ಹೇಳಿಕೊಂಡು ಬೈದಾಡಿದವರದೆಷ್ಟೋ ಮಂದಿ! 😀 ವಿಜಯ ಸಂಕೇಶ್ವರ ಹೇಳಿದ್ದು ನಿಂಬೆ ರಸ ಬಳಸಿದ್ರೆ ಕಫಕ್ಕೆ ಒಂದಷ್ಟು ಅನುಕೂಲವಾಗುತ್ತದೆ ಎಂದಷ್ಟೇ).

(ನಿಂಬೆ ರಸದ ಮೇಲೆ ನಂಬಿಕೆ ಇಲ್ಲದಿದ್ದರೆ ಇದನ್ನು ಅನುಸರಿಸಬೇಕಾಗಿಲ್ಲ. ಆದರೆ, ಅದರಲ್ಲಿ ಸಿಟ್ರಿಕ್ ಆ್ಯಸಿಡ್ ಇದೆ, ಅದನ್ನೇ ಯಾಕೆ ಸುರಿದುಕೊಳ್ತೀರಿ ಅಂತ ಹೇಳುವವರಿಂದ ದೂರವಿರಿ. ರಸದಲ್ಲಿ ಸಿಟ್ರಿಕ್ ಆ್ಯಸಿಡ್ ಪ್ರಮಾಣ ಇರೋದು ಪಾಯಿಂಟ್ ನಾಲ್ಕೈದು ಶೇಕಡಾ ಮಾತ್ರ. ಹಾಗಾಗಿ ಆ್ಯಸಿಡ್ ಹಾಕಿಕೊಂಡ ತಕ್ಷಣ ಮೂಗು, ಶ್ವಾಸಕೋಶ ಸುಟ್ಟುಹೋಗುತ್ತದೆ ಅಂತ ಹೆದರಬೇಕಾಗಿಲ್ಲ. ಹೇಗೆ ಹಾಕಿಕೊಳ್ಳಬೇಕೋ, ಹಾಗೆಯೇ ಹಾಕಿಕೊಳ್ಳಬೇಕು.)

ಅದು ಹಾಕಿದ ಬಳಿಕ ಅವಳಿಗೆ ಕೊಂಚ ಚೇತರಿಕೆಯಾಯಿತು. ಉಸಿರಾಟದ ಹಾದಿ ಸುಗಮವಾಯಿತು ಅನಿಸುತ್ತದೆ. ಸಾಕಷ್ಟು ಕಫ ಹೊರಗೆ ಹೋಯಿತು. ಆದರೂ, ಸಂಜೆಯ ವೇಳೆಗೆ ಆಯುರ್ವೇದ ಔಷಧಾಲಯದಿಂದ “ಕಸ ಸುಧಾಕಲ್ಪಂ” ಆಯುರ್ವೇದ ಔಷಧಿ (ಕಷಾಯ) ತರಿಸಿ ಕುಡಿಸಿದ, ಒಂದೇ ಗಂಟೆಯಲ್ಲಿ ಇಡೀ ದಿನ ಮಲಗಿದ್ದವಳು ಎದ್ದು ಕುಳಿತಳು. ಅಷ್ಟು ಹೊತ್ತಿಗೆ ಹೋದ ಜೀವ ಬಂದಂತಾಯಿತು.

ಮಡದಿಯ ಅಣ್ಣನಿಗೆ ವಿಷಯ ತಿಳಿಸಿದಾಗ, ಅವರು ಆನ್‌ಲೈನ್ ಮೂಲಕವೇ ಮಂಗಳೂರಿನ ವೈದ್ಯರ ಸಲಹೆ ಪಡೆಯಲು ವ್ಯವಸ್ಥೆ ಮಾಡಿದರು. ಹಾಗೆಯೇ ಕೆಎಂಸಿ ವೈದ್ಯರು ವಿಡಿಯೊ ಕರೆಯ ಮೂಲಕ ಬಂದು ಲಕ್ಷಣಗಳನ್ನೆಲ್ಲ ತಿಳಿದುಕೊಂಡು, ನನಗೆ ಏನೂ ಬೇಕಾಗಿಲ್ಲ ಎಂದರು ಮತ್ತು ಅವಳಿಗೆ ಒಂದು ಮಾತ್ರೆ, ಒಂದು ಸಿರಪ್ ಶಿಫಾರಸು ಮಾಡಿದರು. ಬಾವ ಆಗಾಗ್ಗೆ ಕರೆ ಮಾಡಿ ವಿಚಾರಿಸುತ್ತಲೇ ಇದ್ದರು.

ವೈದ್ಯರು ಹೇಳಿದಂತೆ ಐದು ದಿನದ ಆ ಕೋರ್ಸ್ ಮುಗಿದಾಗ ಅವಳೂ ಬಹುತೇಕ ಚೇತರಿಸಿಕೊಂಡಳು. ನಂತರ, ದೇಹಾಯಾಸ ಬಿಟ್ಟರೆ ಬೇರೇನೂ ಸಮಸ್ಯೆಯಿಲ್ಲ.

ಮಧ್ಯೆ ಮಧ್ಯೆ, ಸಹೋದ್ಯೋಗಿಗಳು ಮತ್ತು ಕಚೇರಿ ಕೆಲಸಕ್ಕೆ ಸಂಬಂಧಿಸಿದಂತೆ ಹೊರಗಿನವರು ಕೂಡ ಕರೆ ಮಾಡುತ್ತಲೇ ಇದ್ದರು. ಕೆಲವರಿಗೆ ನನ್ನ ಧ್ವನಿಯ ಕ್ಷೀಣತೆ ಕೇಳಿ, ಏನೋ ಆಗಿದೆ ಎಂಬ ಸುಳಿವು ಸಿಕ್ಕಿತ್ತು. ಕೆಲವರು ಎಂದಿನಂತೆ ಮಾತಾಡುತ್ತಲೇ ಇದ್ದರು. ಬಿಬಿಎಂಪಿಯಿಂದಲೂ ಪದೇ ಪದೇ ಬರುತ್ತಿದ್ದ ಕರೆಗಳು ಕಿರಿಕಿರಿ ಅಂತ ಅನ್ನಿಸಿದ್ದು ಸುಳ್ಳಲ್ಲ.

ಈಗ ಚೇತರಿಸಿಕೊಂಡಿದ್ದೇವೆ. ಕರೆ ಮಾಡಿದವರು ಕೂಡ, ಓಹ್, ನಿಮ್ಮ ಧ್ವನಿ ಮೊನ್ನೆಯಂತಿಲ್ಲ. ಈಗ ಗೆಲುವಾಗಿರುವಂತಿದೆ ಅಂತ ಗುರುತಿಸಿಬಿಟ್ಟರು. ಕರೆ ಮಾಡಿ, ಕರೆ ಮಾಡಿದರೆ ಕಿರಿಕಿರಿಯಾಗುತ್ತದೆ ಅಂದುಕೊಂಡು ಸಂದೇಶ ಕಳುಹಿಸಿ ಆರೋಗ್ಯ ವಿಚಾರಿಸಿದವರಿಗೆ, ಧೈರ್ಯ ತುಂಬಿದವರಿಗೆ ನಾವು ಋಣಿಗಳು. ವಿಶೇಷವಾಗಿ ಬಿಬಿಎಂಪಿ ವಾರ್ ರೂಂ ಸಿಬ್ಬಂದಿಗಳು ಅಷ್ಟು ಒತ್ತಡದ ಮಧ್ಯೆಯೂ, ಕಾಳಜಿ ತೋರಿಸಿದ್ದು (ನಾನು ಪ್ರಜಾವಾಣಿ ಪತ್ರಿಕೆಯವನು ಅಂತ ಅವರಿಗೆ ಹಂಡ್ರೆಂಡ್ ಪರ್ಸೆಂಟ್ ಗೊತ್ತಿಲ್ಲ) ನನ್ನ ಅನುಭವಕ್ಕೆ ಬಂದಾಗ, ಸರ್ಕಾರ ಏನೂ ಮಾಡುತ್ತಿಲ್ಲ ಅಂತೆಲ್ಲ ಅಪಪ್ರಚಾರವಾಗುತ್ತಿರುವುದನ್ನು ನೋಡಿ ಖೇದವಾಯಿತು.

ಈ ಸುದೀರ್ಘ ಕಥೆ ಒಟ್ಟಾರೆ ಓದಲು ಕಷ್ಟವೆಂದಾದರೆ, ಕೋವಿಡ್ ಬಂದರೇನು ಮಾಡಬೇಕು ಎಂಬುದಕ್ಕೆ ಕೆಳಗಿನ ಒಂದು ವಾಕ್ಯ ಸಾಕು ಅನಿಸುತ್ತದೆ.

ಮನೆಯೊಳಗಿರಿ
ಧೈರ್ಯ ಕೆಡಬೇಡಿ, ಜ್ವರ ಬಂದ್ರೆ, ಇದು ಕೋವಿಡ್ ಆಗಿರಬಹುದು ಅಂತಂದುಕೊಂಡು ಮನೆಯೊಳಗಿರಿ, ಹೊರಗೆ ಹೋಗಲೇಬೇಡಿ (ಅಂದರೆ ಕೋವಿಡ್ ಹರಡದಿರಿ). ಸರ್ಕಾರ ಹೇಳುವುದನ್ನು ನಾನು ಪಾಲಿಸುವುದಿಲ್ಲ ಎಂಬ ಹಠ ಬಿಡಿ. ಹೀಗೆ ಮಾಡಿದರೆ, ನೂರಾರು ಜೀವಗಳನ್ನು ಉಳಿಸಿದ ಪುಣ್ಯ ನಮ್ಮದಾಗುತ್ತದೆ!

ಕೋವಿಡ್ ಬಾರದಂತೆ ತಡೆಯಲು ಸಲಹೆ
ಆಯುರ್ವೇದದ ಕಷಾಯಗಳು, ಅಜ್ಜಿ ಕಷಾಯಗಳ ಮೂಲಕ ರೋಗ ನಿರೋಧಕತೆ ಹೆಚ್ಚಿಸಿಕೊಳ್ಳುವುದು, ನಮ್ಮ ಮನೆಯ ಬಾಗಿಲು ಅಥವಾ ಹೊರಗಿನಿಂದ ಬಂದಿರುವ ಏನನ್ನೇ ಮುಟ್ಟಿದರೂ ಕೂಡ ಸ್ಯಾನಿಟೈಸರ್ ಅಥವಾ ಸೋಪಿನ ಮೂಲಕ ಕೈತೊಳೆದುಕೊಳ್ಳುವುದು ಅತ್ಯಂತ ಮುಖ್ಯ. ಹಾಂ, ಮರೆಯಲೇಬಾರದ ಒಂದು ಸಂಗತಿಯೆಂದರೆ, ಮಾಸ್ಕ್ ಧರಿಸದೇ ಬಂದವರ ಜೊತೆ ಮಾತನ್ನೇ ಆಡಬೇಡಿ!

ಇನ್ನೊಂದು ಭಾರೀ ಸಲಹೆಯಿದೆ, ಅದೆಂದರೆ…
ಅನಗತ್ಯವಾಗಿ ಆ್ಯಂಟಿ ಬಯೋಟಿಕ್ ಟ್ಯಾಬ್ಲೆಟ್ ತೆಗೆದುಕೊಳ್ಳಲೇಬೇಡಿ. ವೈದ್ಯರೇನಾದರೂ ಅಳೆದು-ತೂಗಿ ಸಲಹೆ ನೀಡಿದರೆ ಮಾತ್ರ ತೆಗೆದುಕೊಳ್ಳಬಹುದು! ಯಾಕೆ? ಕೊರೊನಾ ಬರುವುದೇ ರೋಗ ನಿರೋಧಕ ಶಕ್ತಿ ಕಡಿಮೆ ಇರುವ ದೇಹಕ್ಕೆ. ಆ್ಯಟಿ ಬಯೊಟಿಕ್ ಎಂಬ ಕೃತಕವಾಗಿ ರೋಗ ನಿರೋಧಕತೆ ಹೆಚ್ಚಿಸುವ ಮಾತ್ರೆಯ ಪರಿಣಾಮ ಮುಗಿದ ಬಳಿಕ, ದೇಹದಲ್ಲಿ ರೋಗ ನಿರೋಧಕತೆ ಕಡಿಮೆಯಾಗುತ್ತದೆ – ಇದು ವೈದ್ಯರೇ ಹೇಳಿದ ಮಾತು.

-ಅವಿನಾಶ್ ಬೈಪಾಡಿತ್ತಾಯ, ಬೆಂಗಳೂರು, 16 ಮೇ 2021

Avinash B

Avinash B. Tech Writer, Columnist, Working as Online media Journalist for more than two decades. Passionate about Technology and Gadgets. Yakshagana and Music are passion.

Recent Posts

iPhone 16e: Best Features and Specs: ಹೊಸ ಐಫೋನ್ 16ಇ ಬಿಡುಗಡೆ

iPhone 16e joins the iPhone 16 lineup, featuring the fast performance of the A18 chip,…

4 days ago

ಚಳಿಯಲ್ಲಿ ಬಣ್ಣ ಬದಲಾಯಿಸುವ Realme 14 Pro ಸರಣಿ ಫೋನ್ ಬಿಡುಗಡೆ

ರಿಯಲ್‌ಮಿ 14 ಪ್ರೊ ಸರಣಿಯ 5ಜಿ ಫೋನ್, ಡ್ಯಾನಿಶ್ ಡಿಸೈನ್ ಸ್ಟುಡಿಯೋ ವ್ಯಾಲರ್ ಡಿಸೈನರ್ಸ್ ಮೂಲಕ ರೂಪುಗೊಂಡ ವಿಶ್ವದ ಮೊದಲ…

1 month ago

ಎಐ ವೈಶಿಷ್ಟ್ಯಗಳ realme GT 7 Pro ಬಿಡುಗಡೆ: ಬೆಲೆ ಎಷ್ಟು? ವೈಶಿಷ್ಟ್ಯಗಳೇನು? ಇಲ್ಲಿದೆ ಪೂರ್ಣ ಮಾಹಿತಿ

ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್‌ ಇರುವ ಬಹುನಿರೀಕ್ಷಿತ…

3 months ago

ರಿಯಲ್‌ಮಿ ನಾರ್ಜೋ 70 ಟರ್ಬೊ 5 ಜಿ, ರಿಯಲ್‌ಮಿ ಬಡ್ಸ್ ಎನ್‌1 ಬಿಡುಗಡೆ: ಬೆಲೆ, ವೈಶಿಷ್ಟ್ಯ ತಿಳಿಯಿರಿ

ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…

5 months ago

ಓದುವಿಕೆ, ಕಲಿಕೆ ಉತ್ತೇಜನಕ್ಕೆ ‘ರೀಡ್-ಅ-ಥಾನ್’: ದಾಖಲೆಯ ಗುರಿ

ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.

5 months ago

Realme 13 +, Realme 13 5ಜಿ ಫೋನ್ ಬಿಡುಗಡೆ: ವೇಗದ ಫೋನ್‌ನ ವೈಶಿಷ್ಟ್ಯಗಳು, ಬೆಲೆ ಇಲ್ಲಿ ತಿಳಿಯಿರಿ

ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…

6 months ago