Captcha ಎಂದರೇನು? ಇದನ್ನೇಕೆ ನಾವು ಬಳಸಬೇಕು?

ಗೂಗಲ್ ಅಥವಾ ಸಾಮಾಜಿಕ ಜಾಲ ತಾಣಗಳ ಖಾತೆ ತೆರೆಯುವ ಸಂದರ್ಭ, ಬ್ಯಾಂಕಿಂಗ್ ತಾಣಗಳಿಗೆ ಲಾಗಿನ್ ಮಾಡುವಾಗ ಅಥವಾ ಯಾವುದಾದರೂ ಜಾಲತಾಣಗಳಿಗೆ ಕಾಮೆಂಟ್ ಹಾಕುವ ಸಂದರ್ಭದಲ್ಲಿ ನೀವು ಈ Captcha ಎಂಬ ಪದವನ್ನು ನೋಡಿದ್ದಿರಬಹುದು. ಅಂಕಗಣಿತದ ಸುಲಭ ಲೆಕ್ಕವನ್ನು ಬಿಡಿಸುವುದು, ತಿರುಚಿದ ವಿನ್ಯಾಸವಿರುವ ಇಂಗ್ಲಿಷ್ ಅಕ್ಷರ ಗುರುತಿಸುವುದು, ಅಕ್ಷರಗಳು-ಅಂಕಿಗಳನ್ನು ನಮೂದಿಸುವುದು, ಚಿತ್ರಗಳನ್ನು ಪತ್ತೆ ಮಾಡುವುದು – ಈ ರೀತಿಯ ಸುಲಭ ಒಗಟುಗಳಿರುತ್ತವೆ.

ಕ್ಯಾಪ್ಚಾ ತುಂಬಿಸುವುದು ಕಷ್ಟದ ಕೆಲಸವಲ್ಲ. ಆದರೂ ಇದೊಂದು ದೊಡ್ಡ ಕಿರಿಕಿರಿ ಅಂತ ಭಾವಿಸಬೇಕಿಲ್ಲ. ವಿಶ್ವವ್ಯಾಪಿ ಜಾಲ (ವರ್ಲ್ಡ್ ವೈಡ್ ವೆಬ್) ಬಳಸುತ್ತಿರುವ ನಮಗೆ, ನಮ್ಮ ಖಾಸಗಿತನಕ್ಕೆ ಎಲ್ಲೆಡೆಯಿಂದಲೂ ಸೈಬರ್ ವಂಚಕರಿಂದ ಸಮಸ್ಯೆ ಎದುರಾಗುತ್ತಲೇ ಇರುತ್ತದೆ. ಇವರು ವ್ಯವಸ್ಥೆಯನ್ನೇ ಬುಡಮೇಲು ಮಾಡಬಲ್ಲರು ಅಥವಾ ನಿರುಪಯುಕ್ತ ವಿಷಯಗಳನ್ನು (ಸ್ಪ್ಯಾಮ್) ಕಳುಹಿಸುತ್ತಾ ವಿಘ್ನಸಂತೋಷಿಗಳಾಗಬಲ್ಲರು.

ಈ ಬಾಟ್ (Bot) ಎಂಬ ಸ್ವಯಂಚಾಲಿತ ಕೆಲಸ ಮಾಡಬಲ್ಲ ಅದರಲ್ಲಿಯೂ ತೊಂದರೆಯುಂಟು ಮಾಡಬಲ್ಲ, ಮಾನವನೇ ರೂಪಿಸಿದ ತಂತ್ರಾಂಶದಿಂದ ರಕ್ಷಣೆ ಪಡೆಯಲು ಇರುವುದೇ ಈ ಕ್ಯಾಪ್ಚಾ.

Captcha ಎಂದರೇನು?
Completely Automated Public Turing test to tell Computers and Humans Apart ಎಂಬುದರ ಹೃಸ್ವರೂಪ ಕ್ಯಾಪ್ಚಾ. ಎಂದರೆ, ಕಂಪ್ಯೂಟರ್‌ಗಳೇ (ಬಾಟ್) ಬೇರೆ, ಮನುಷ್ಯರೇ ಬೇರೆ ಎಂಬುದನ್ನು ಸ್ವಯಂಚಾಲಿತವಾಗಿ ಗುರುತಿಸುವ ಟ್ಯೂರಿಂಗ್ ಪರೀಕ್ಷಾ ವಿಧಾನವಿದು. ಆಧುನಿಕ ಕಂಪ್ಯೂಟಿಂಗ್ ಜಗತ್ತಿನ ಪಿತಾಮಹ ಅಲೆನ್ ಟ್ಯೂರಿಂಗ್ ಪರಿಕಲ್ಪನೆಯ ಪರೀಕ್ಷೆಯಿದು. ಹೀಗಾಗಿ ಅವರ ಹೆಸರು.

ಹೇಗೆ ಕೆಲಸ ಮಾಡುತ್ತದೆ?
ಈಗಾಗಲೇ ಅಕ್ಷರಗಳು, ಅಂಕಿಗಳನ್ನು ಗುರುತಿಸಿ ಓದಬಲ್ಲ ಒಸಿಆರ್ (ಆಪ್ಟಿಕಲ್ ಕ್ಯಾರೆಕ್ಟರ್ ರೆಕಗ್ನಿಷನ್) ತಂತ್ರಜ್ಞಾನ ಅಭಿವೃದ್ಧಿಯಾಗಿದೆ. ಆದರೆ, ಯಂತ್ರಗಳು ಗುರುತಿಸಲಾಗದಂತೆ ಮಾಡಿದರಷ್ಟೇ, ಬಾಟ್‌ಗಳ ಹಾವಳಿ, ಸ್ಪ್ಯಾಮ್ ಅಥವಾ ಸ್ವಯಂಚಾಲಿತ ಮಾಹಿತಿ ರವಾನೆಯಿಂದ ತಪ್ಪಿಸಬಹುದು. ಈ ಕಾರಣಕ್ಕೆ, ಯಂತ್ರಗಳು ಗುರುತಿಸಲಾಗದ, ಮನುಷ್ಯರಷ್ಟೇ ಗುರುತಿಸಬಲ್ಲ ಅಕ್ಷರ ತಂತ್ರಜ್ಞಾನವನ್ನು ರೂಪಿಸಲಾಯಿತು. ಇದು ಅಂಕಿಗಳ ಸಂಕಲನವಿರಬಹುದು, ವ್ಯವಕಲನವಿರಬಹುದು, ಅಂಕಿ-ಅಕ್ಷರಗಳ ಸಂಯೋಗವಿರಬಹುದು, ಚಿತ್ರಗಳನ್ನು ಗುರುತಿಸುವುದಿರಬಹುದು. ಇವೆಲ್ಲವೂ ಒಂದು ಬಾರಿಗೆ ಮಾತ್ರ ಬಳಕೆಯಾಗುವಂಥವು. ಮುಂದಿನ ಬಾರಿ ಏನಾದರೂ ವೆಬ್ ಫಾರ್ಮ್ ತುಂಬಿಸಬೇಕಿದ್ದರೆ, ಹೊಸದಾಗಿ ಬೇರೆಯೇ ಕ್ಯಾಪ್ಚಾ ಎದುರಿಸಬೇಕಾಗುತ್ತದೆ. ಈಗಿನ ಹೊಸ ವಿಧಾನದಲ್ಲಿ ‘ನಾನು ರೋಬೋ ಅಲ್ಲ’ ಅಂತ ಖಚಿತಪಡಿಸಲು ಚೆಕ್ ಬಾಕ್ಸ್ ಒಂದಕ್ಕೆ ಟಿಕ್ ಗುರುತು ಹಾಕುವ ಕ್ಯಾಪ್ಚಾ ಬಂದಿದೆ.

ಕ್ಯಾಪ್ಚಾದಿಂದೇನು ಲಾಭ?
ರೈಲು, ಬಸ್ಸು, ಸಿನಿಮಾ ಶೋ… ಹೀಗೆ ಆನ್‌ಲೈನ್‌ನಲ್ಲಿ ಯಾವುದೋ ಒಂದು ಟಿಕೆಟ್ ಬುಕ್ ಮಾಡಬೇಕಿರುತ್ತದೆ. ಅಥವಾ ಹೊಸ ಖಾತೆ ತೆರೆಯಬೇಕಾಗಿರುತ್ತದೆ. ಪೂರ್ವನಿರ್ದೇಶಿತ ಬಾಟ್‌ಗಳು ಕೇವಲ ಸೆಕೆಂಡುಗಳಲ್ಲಿ ನೂರಾರು ಟಿಕೆಟ್‌ಗಳನ್ನು ಬುಕ್ ಮಾಡಬಹುದು ಇಲ್ಲವೇ ಖಾತೆಗಳನ್ನು ತೆರೆಯಬಹುದು. ಆನ್‌ಲೈನ್ ಪೋಲ್ ಅಥವಾ ಜನಾಭಿಪ್ರಾಯ ಗಣನೆಯಲ್ಲೂ ಅವು ಲೆಕ್ಕಾಚಾರವನ್ನೇ ಬುಡಮೇಲು ಮಾಡಬಲ್ಲವು. ಇದನ್ನು ತಡೆಯುವ ಮಾರ್ಗವೇ ಕ್ಯಾಪ್ಚಾ. ಮನುಷ್ಯ ಆ ಒಂದು ಕ್ಯಾಪ್ಚಾವನ್ನು ಬಿಡಿಸಿದರಷ್ಟೇ ಮುಂದುವರಿಯಬಹುದು. ಹೀಗೆ, ಯಾವುದೇ ವೆಬ್ ಪುಟದಲ್ಲಿ ಸ್ವಯಂಚಾಲಿತವಾಗಿ ಕಾಮೆಂಟ್‌ಗಳು ದಾಖಲಾಗದಂತೆ, ಯಂತ್ರಮಾನವರ ಮೂಲಕ ನಮ್ಮ ಮಾಹಿತಿಯನ್ನು ಕದಿಯದಂತೆ ತಡೆಯುವಲ್ಲಿ ಈ ಕ್ಯಾಪ್ಚಾಗಳು ಯಶಸ್ವಿಯಾಗಿವೆ.

ಸುಲಭವಾಗಿ ಹೇಳುವುದಿದ್ದರೆ, ಆನ್‌ಲೈನ್ ಮತದಾನದಲ್ಲಿ ವಂಚನೆಯಾಗದಂತೆ, ಟಿಕೆಟ್ ಬುಕಿಂಗ್ ವ್ಯವಸ್ಥೆಯನ್ನು ಹೈಜಾಕ್ ಮಾಡದಂತೆ ಅಥವಾ ಕಾರ್ಯಕ್ರಮದ ನೋಂದಣಿ ವ್ಯವಸ್ಥೆಯನ್ನು ಮಿತಿಗೊಳಿಸಲು ಹಾಗೂ ವೆಬ್ ತಾಣಗಳಲ್ಲಿ ಸ್ವಯಂಚಾಲಿತ ಕಾಮೆಂಟ್‌ಗಳು ದಾಖಲಾಗದಂತೆ, ಬಾಟ್‌ಗಳು ಮಾನವರ ಖಾತೆಗಳಿಗೆ ಲಾಗಿನ್ ಆಗದಂತೆ ತಡೆಯುವುದು ಈ ಕ್ಯಾಪ್ಚಾದ ಉದ್ದೇಶ.

ಹೀಗಿರುವಾಗ, ನಮ್ಮ ರಕ್ಷಣೆಗಾಗಿಯೇ ಇರುವ ಈ ಕ್ಯಾಪ್ಚಾಗಳ ಬಗ್ಗೆ ಅಸಹನೆ ಬೇಡ. ಅರ್ಥವಾಗದಿದ್ದರೆ, ಹೊಸ ಕ್ಯಾಪ್ಚಾ ಪಡೆಯುವ (ರಿಫ್ರೆಶ್ ಬಟನ್) ಆಯ್ಕೆಯೂ ಇರುತ್ತದೆ. ನಮ್ಮದೇ ಸುರಕ್ಷತೆಗಾಗಿ ಇರುವ ಕ್ಯಾಪ್ಚಾ ಬಗ್ಗೆ ತಾಳ್ಮೆಯಿಂದ ಮುಂದುವರಿಯುವುದು ವಿಹಿತ.

My Article Published in Prajavani on 18/19 May 2021

Avinash B

Avinash B. Tech Writer, Columnist, Working as Online media Journalist for more than two decades. Passionate about Technology and Gadgets. Yakshagana and Music are passion.

Recent Posts

ಒಂದೇ ಫೋನ್‌ನಲ್ಲಿ ಎರಡು WhatsApp ಖಾತೆ ಬಳಸುವುದು ಹೇಗೆ?

ಕಳೆದ ಅಕ್ಟೋಬರ್ 19ರಂದು ಮೆಟಾ ಒಡೆತನದ WhatsApp ಸಂಸ್ಥೆಯೇ ತನ್ನ ಆ್ಯಪ್‌ಗೆ ಹೊಸ ಅಪ್‌ಡೇಟ್ ನೀಡಿದ್ದು, ಎರಡು ವಾಟ್ಸ್ಆ್ಯಪ್ ಖಾತೆಗಳನ್ನು…

6 months ago

AI Images: Text ಬಳಸಿ ಚಿತ್ರ ತಯಾರಿಸುವುದು ಹೇಗೆ?

AI Images: ನಮ್ಮ ಕಲ್ಪನೆಯನ್ನು ಎಐ ಎಂಜಿನ್‌ಗೆ ಟೆಕ್ಸ್ಟ್ (ಪಠ್ಯ) ಮೂಲಕ ಊಡಿಸಿದರೆ ಸಾಕು, ಕ್ಷಣ ಮಾತ್ರದಲ್ಲಿ ನೀವಂದುಕೊಂಡ ಚಿತ್ರವೊಂದು…

6 months ago

ಬ್ರಾಡ್‌ಬ್ಯಾಂಡ್ ವೇಗ: ಎಂಬಿಪಿಎಸ್ ಎಂದರೆ ಏನು? ನೀವು ಯಾಮಾರುವುದು ಎಲ್ಲಿ?

ಹಾರ್ಡ್ ಡ್ರೈವ್ ಅಥವಾ ಸ್ಟೋರೇಜ್ ಡ್ರೈವ್‌ಗಳಲ್ಲಿರುವ ಫೈಲ್‌ಗಳ ವಿನಿಮಯದ ಸಂದರ್ಭದಲ್ಲಿ ಬಳಸುವುದು ಮೆಗಾಬೈಟ್ಸ್ ಎಂಬ ಪ್ರಮಾಣವನ್ನು. ಇಂಟರ್ನೆಟ್ ವೇಗವನ್ನು ಅಳೆಯುವುದು…

7 months ago

Apple iPhone 15 Plus Review: ಪ್ರೊ ಮಾದರಿಗಳ ವೈಶಿಷ್ಟ್ಯವಿರುವ ಐಫೋನ್ 15 ಪ್ಲಸ್

Apple iPhone 15 Plus Review: ಲೈಟ್ನಿಂಗ್ ಪೋರ್ಟ್ ಬದಲು ಟೈಪ್ ಸಿ ಚಾರ್ಜಿಂಗ್ ಪೋರ್ಟ್, ಡೈನಮಿಕ್ ಐಲೆಂಡ್, ಹೊಸ…

7 months ago

Type in Kannada: ಐಫೋನ್, ಆಂಡ್ರಾಯ್ಡ್ ಫೋನ್‌ಗಳಲ್ಲಿ ಕನ್ನಡ ಟೈಪಿಂಗ್ ಈಗ ಮತ್ತಷ್ಟು ಸುಲಭ

Type in Kannada: ಗೂಗಲ್‌ನ ಆಂಡ್ರಾಯ್ಡ್ ಹಾಗೂ ಆ್ಯಪಲ್‌ನ ಐಫೋನ್ ಸ್ಮಾರ್ಟ್‌ಫೋನ್‌ಗಳಲ್ಲಿ ಕನ್ನಡ ಟೈಪಿಂಗ್ ಸುಲಭವಾಗಿಸುವ ಸಾಕಷ್ಟು ಖಾಸಗಿ ಕೀಬೋರ್ಡ್…

8 months ago

iPhone 15 Pro Max Review: ಗೇಮರ್‌ಗಳಿಗೆ ಹಬ್ಬ – ಆ್ಯಪಲ್‌ನ ಶಕ್ತಿಶಾಲಿ, ಐಷಾರಾಮಿ ಸಾಧನ

iPhone 15 Pro Max Review: ವಿನೂತನವಾದ ಟೈಟಾನಿಯಂ ಚೌಕಟ್ಟು ಐಷಾರಾಮದ ಅನುಭವ. ಲೈಟ್ನಿಂಗ್ ಪೋರ್ಟ್ ಬದಲು ಯುಎಸ್‌ಬಿ ಸಿ…

8 months ago