ಇದೇ ರೀತಿ, ನಮಗೆ ಯಾವುದಾದರೂ ಫೋಟೋ ಬೇಕಿದ್ದರೆ, ಗೂಗಲ್ ಸರ್ಚ್ ಪುಟದಲ್ಲಿಯೇ Images ಎಂಬ ಟ್ಯಾಬ್ ಕ್ಲಿಕ್ ಮಾಡಿ, ವೀಡಿಯೋ ಬೇಕಿದ್ದರೆ Videos ಎಂಬ ಟ್ಯಾಬ್ ಕ್ಲಿಕ್ ಮಾಡಿ ಹುಡುಕುತ್ತೇವೆ. ಇದಲ್ಲದೆ ಇನ್ನೊಂದು ಆಯ್ಕೆ ಇರುವುದು ಹೆಚ್ಚಿನವರಿಗೆ ಗೊತ್ತಿಲ್ಲ. ಅದೇನೆಂದರೆ, ನಮ್ಮಲ್ಲಿರುವ ಯಾವುದಾದರೂ ಫೋಟೋ ಅಥವಾ ಯಾವುದಾದರೂ ವೆಬ್ ತಾಣದಲ್ಲಿ ನಾವು ನೋಡಿದ ಫೋಟೋವನ್ನು ಗೂಗಲ್‌ನಲ್ಲಿ ಹಾಕಿದರೆ, ಅಂದರೆ ಅಪ್‌ಲೋಡ್ ಮಾಡಿದರೆ, ಅದಕ್ಕೆ ಸಂಬಂಧಿಸಿದ ಮಾಹಿತಿ, ಆ ಫೋಟೋದ ಮೂಲ, ಅದೇ ಫೋಟೋವನ್ನು ಹೋಲುವ ಬೇರೆ ಫೋಟೋಗಳು ಕಾಣಸಿಗುತ್ತವೆ.
ಇಂಟರ್ನೆಟ್‌ನಲ್ಲಿ ಜಾಲಾಡುತ್ತಿರುವಾಗ ಯಾವುದೋ ಒಂದು ಚಿತ್ರ ಕಾಣಿಸುತ್ತದೆ. ಆ ಚಿತ್ರದ ಮೂಲ ಯಾವುದು ಅಂತ ನಿಮಗೆ ತಿಳಿದುಕೊಳ್ಳಬೇಕಿದ್ದರೆ, ನಿಮ್ಮಲ್ಲಿರುವ ಚಿತ್ರವೊಂದರ ಗರಿಷ್ಠ ಗುಣಮಟ್ಟದ (ಹೈ ರೆಸೊಲ್ಯುಶನ್) ಬೇರೆ ಚಿತ್ರ ಬೇಕಿದ್ದರೆ, ಅಥವಾ ನಿಮ್ಮಲ್ಲಿರುವ ಚಿತ್ರವನ್ನು ಯಾರಾದರೂ ಯಾವತ್ತಾದರೂ ಇಂಟರ್ನೆಟ್‌ನ ತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆಯೇ ಎಂಬುದನ್ನು ತಿಳಿಯಲು ಗೂಗಲ್‌ನ ಈ ವ್ಯವಸ್ಥೆಯನ್ನು ಬಳಸಬಹುದು. ಇಷ್ಟೇ ಅಲ್ಲ, ಫೇಸ್‌ಬುಕ್, ವಾಟ್ಸಾಪ್‌ನಲ್ಲಿ ಬರುತ್ತಿರುವ ಚಿತ್ರಗಳು ಸಾಚಾವೇ? ಅದರ ಸೋರ್ಸ್ ಯಾವುದು ಅಂತ ತಿಳಿಯುವುದಕ್ಕೂ ಗೂಗಲ್‌ನ ಈ ಆನ್‌ಲೈನ್ ಟೂಲ್ ಬಳಸಿಕೊಳ್ಳಬಹುದು. ಇನ್ನೊಂದು ಉಪಯೋಗವಿದೆ, ನೀವೊಂದು ಅಂದವಾದ ಕಪಾಟು, ಟೇಬಲ್ ಅಥವಾ ಬೇರಾವುದೇ ವಸ್ತುವನ್ನು ನೋಡಿರುತ್ತೀರಿ. ಅಂಥದ್ದೇ ನಿಮಗೂ ಬೇಕು ಅಂತ ಅನ್ನಿಸುತ್ತದೆ. ಎಲ್ಲಿ ಸಿಗುತ್ತದೆ? ಅಂತ ತಿಳಿದುಕೊಳ್ಳಲು ಕೂಡ ಈ ಚಿತ್ರ ಹುಡುಕುವ ಟೂಲ್ ನೆರವಿಗೆ ಬರುತ್ತದೆ.
ಇದು ಗೂಗಲ್‌ನ ‘ಸರ್ಚ್ ಬೈ ಇಮೇಜ್’ ಎಂಬ ಟೂಲ್. ಇದು ಎಲ್ಲಿರುತ್ತದೆ? ಡೆಸ್ಕ್‌ಟಾಪ್ ಅಥವಾ ಲ್ಯಾಪ್‌ಟಾಪ್ ಕಂಪ್ಯೂಟರ್ ಬಳಸುತ್ತೀರಾದರೆ, ಸಾಮಾನ್ಯವಾಗಿ ಚಿತ್ರಗಳ ಹುಡುಕಾಟಕ್ಕೆ ಬಳಸುವ https://images.google.com ತಾಣಕ್ಕೆ ಹೋಗಿ. ಅಥವಾ ಗೂಗಲ್ ಪುಟಕ್ಕೆ ಹೋಗಿ ಯಾವುದಾದರೂ ವಿಷಯದ ಸರ್ಚ್ ಮಾಡಿದಾಗ, ಮೇಲ್ಭಾಗದಲ್ಲಿ Images ಟ್ಯಾಬ್ ಗೋಚರಿಸುತ್ತದೆ. ಅಲ್ಲಿ ಕ್ಲಿಕ್ ಮಾಡಿ. ಸರ್ಚ್ ಬಾಕ್ಸ್‌ನಲ್ಲಿ ಒಂದು ಕ್ಯಾಮೆರಾದ ಐಕಾನ್ ಗೋಚರಿಸುತ್ತದೆ. ಕ್ಲಿಕ್ ಮಾಡಿ. ಆಗ ಇನ್ನೊಂದು ಪುಟ್ಟ ವಿಂಡೋ ಪಾಪ್-ಅಪ್ ಆಗುತ್ತದೆ. ನೀವು ಯಾವುದಾದರೂ ವೆಬ್ ತಾಣದಲ್ಲಿ ನೋಡಿದ ಚಿತ್ರದ ಕುರಿತಾಗಿ ಮತ್ತಷ್ಟು ಮಾಹಿತಿ ತಿಳಿದುಕೊಳ್ಳಬೇಕಿದ್ದರೆ ಹಾಗೂ ಅದರ ರೀತಿಯದ್ದೇ ಫೋಟೋಗಳನ್ನು ಹುಡುಕಬೇಕಿದ್ದರೆ, ಆ ಫೋಟೋದ ಯುಆರ್‌ಎಲ್ (ವೆಬ್ ವಿಳಾಸವನ್ನು) ಅಲ್ಲಿ ಕಾಣಿಸಿಕೊಳ್ಳುವ ‘Paste image URL’ ಎಂಬ ಟ್ಯಾಬ್‌ನ ಬಾಕ್ಸ್‌ನಲ್ಲಿ ಪೇಸ್ಟ್ ಮಾಡಿ. ಸರ್ಚ್ ಬಟನ್ ಒತ್ತಿಬಿಡಿ.
ನಿಮ್ಮ ಕಂಪ್ಯೂಟರಿನಲ್ಲಿರುವ ಚಿತ್ರದ ಮಾದರಿಯ ಫೋಟೋಗಳ ಮಾಹಿತಿ, ಮೂಲ, ಹೋಲಿಕೆಯ ಚಿತ್ರಗಳ ಹುಡುಕಾಟಕ್ಕೆ ಮತ್ತೊಂದು ಟ್ಯಾಬ್ ‘Upload an image’ ಅಂತ ಇರುತ್ತದೆ. ಅದನ್ನು ಕ್ಲಿಕ್ ಮಾಡಿದರೆ, ಫೈಲ್ ಆಯ್ಕೆ ಮಾಡುವ ವಿಂಡೋ ಕಾಣಸಿಗುತ್ತದೆ. ನಿಮ್ಮ ಕಂಪ್ಯೂಟರಿನಿಂದ ಚಿತ್ರವನ್ನು ಅಪ್‌ಲೋಡ್ ಮಾಡಿಬಿಡಿ. ಆ ಚಿತ್ರವನ್ನೇ ಹೋಲುವ ಒಂದಷ್ಟು ಚಿತ್ರಗಳನ್ನು ಗೂಗಲ್ ಪುಟವು ತಂದು ನಿಮ್ಮೆದುರು ತೋರಿಸುತ್ತದೆ. ಜತೆಗೆ, ಈ ಚಿತ್ರವು ಎಲ್ಲೆಲ್ಲಾ ಬಳಕೆಯಾಗಿದೆ ಎಂಬುದನ್ನು ತಿಳಿಸುವ ಲಿಂಕ್‌ಗಳು ಗೋಚರಿಸುತ್ತವೆ. ನೀವೇ ತೆಗೆದಿರುವ ಚಿತ್ರಗಳು ಎಲ್ಲೆಲ್ಲ ಬಳಕೆಯಾಗಿದೆ ಅಂತನೂ ತಿಳಿದುಕೊಳ್ಳಬಹುದು.
ನೆನಪಿಡಿ: ನಾವು ಗೂಗಲ್‌ನಲ್ಲಿ ಸರ್ಚ್ ಮಾಡಿ ಅದನ್ನು ಡೌನ್‌ಲೋಡ್ ಮಾಡಿಕೊಂಡು ನಮ್ಮ ಉಪಯೋಗಕ್ಕೆ ಬೇಕಾಬಿಟ್ಟಿ ಬಳಸಿಕೊಳ್ಳುವುದು ಕೃತಿಸ್ವಾಮ್ಯ ಎಂಬೊಂದು ಕಾನೂನಿನ ಪ್ರಕಾರ ತಪ್ಪು. ಎಲ್ಲಿಂದ ಫೋಟೋ ಬಳಸಿದಿರಿ ಅಂತ ಕೇಳಿದರೆ, ‘ಉಚಿತವಾಗಿಯೇ ಸಿಗೋ ಗೂಗಲ್‌ನಿಂದ’ ಎನ್ನುವುದು ತಪ್ಪು. ಗೂಗಲ್ ಎಂಬುದು ಸರ್ಚ್ ಎಂಜಿನ್ ಮಾತ್ರ. ಅದು ಜಗತ್ತಿನಾದ್ಯಂತವಿರುವ ವೆಬ್ ತಾಣಗಳಿಂದ ನಿಮಗೆ ನೀವು ಕೇಳಿದ ಮಾಹಿತಿಯನ್ನು, ಫೋಟೋಗಳನ್ನು, ವೀಡಿಯೋಗಳನ್ನು ತಂದು ತೋರಿಸುತ್ತದೆಯಷ್ಟೇ. ಆ ಲಿಂಕ್ ಕ್ಲಿಕ್ ಮಾಡಿದರಷ್ಟೇ ಅದು ನಿಮಗೆ ಸಿಗಬಲ್ಲುದು. ಅದರ ಒಡೆತನ ಗೂಗಲ್ ಬಳಿ ಇರುವುದಿಲ್ಲ, ಆಯಾ ವೆಬ್ ಸೈಟುಗಳ ಕೈಯಲ್ಲಿರುತ್ತದೆ. ಹೀಗಾಗಿ ಚಿತ್ರಕೃಪೆ ಅಥವಾ ಮಾಹಿತಿ ಕೃಪೆ ‘ಗೂಗಲ್’ ಅಂತ ಹಾಕಿ ಕೈತೊಳೆದುಕೊಳ್ಳುವುದು ತಪ್ಪು. ಫೋಟೋ, ವೀಡಿಯೋ ಅಥವಾ ಯಾವುದೇ ವಿಷಯಗಳನ್ನು ಆಯಾ ವೆಬ್ ತಾಣಗಳಿಂದಲೇ ಅನುಮತಿ ಪಡೆದು ಬಳಸಿಕೊಳ್ಳುವುದು ಉಚಿತ. ಇಲ್ಲವಾದಲ್ಲಿ, ಕೃತಿ ಚೌರ್ಯದ ಬಲೆಯಲ್ಲಿ ಸಿಲುಕಬೇಕಾಗುತ್ತದೆ. ಈ ರೀತಿಯಾಗದಂತೆ ತಡೆಯುವುದಕ್ಕಾಗಿಯೇ ಹಲವಾರು ವೆಬ್ ತಾಣಗಳು ಚಿತ್ರ ಹಾಗೂ ವೀಡಿಯೋಗಳಿಗೆ ‘ವಾಟರ್ ಮಾರ್ಕ್’ (ಅಸ್ಪಷ್ಟವಾಗಿ ಗೋಚರಿಸುವ ಅಕ್ಷರಗಳಲ್ಲಿ ಆಯಾ ವೆಬ್ ತಾಣದ ಅಥವಾ ಆ ಫೋಟೋ/ವೀಡಿಯೋದ ಒಡೆಯರ ಹೆಸರು ನಮೂದಿಸಿರುವುದು) ಹಾಕಿಬಿಡುತ್ತಾರೆ. ಅವನ್ನೆಲ್ಲಾ ನಮ್ಮದೇ ಸ್ವಂತ ವೆಬ್ ತಾಣದಲ್ಲೋ, ಬ್ಲಾಗ್‌ನಲ್ಲೋ ಹಾಕುವುದು ಸರಿಯಲ್ಲ. ಈ ಮಾಹಿತಿಯನ್ನು ವೆಬ್ ಬಳಸುತ್ತಿರುವ ನಿಮ್ಮ ಸ್ನೇಹಿತವರ್ಗಕ್ಕೂ ತಿಳಿಯಪಡಿಸಿ.
ಮಾಹಿತಿ@ತಂತ್ರಜ್ಞಾನ: ಅವಿನಾಶ್ ಬಿ. 2017 ಜುಲೈ 10, ವಿಜಯ ಕರ್ನಾಟಕ ಅಂಕಣ
ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್ ಇರುವ ಬಹುನಿರೀಕ್ಷಿತ…
ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…
ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.
ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…
Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.
ಹಾಡುಗಾರಿಕೆ, ಚೆಂಡೆ-ಮದ್ದಳೆಯ ಬಿಡಿತ-ಮುಕ್ತಾಯಗಳ ಬಳಿಕ, ಬಂದಿದ್ದ ಗಣ್ಯರು, ಒಂದೊಂದು ಹಾಡಿನಲ್ಲಿ ಅಡಕವಾಗಿರುವ ಮಂತ್ರ ಮಾಂಗಲ್ಯದ ಪ್ರತಿಜ್ಞಾಗುಚ್ಛವನ್ನು ವಿವರಿಸಿ, ವಧು-ವರರಿಗೆ ಬೋಧಿಸಿದರು