ಮಾಹಿತಿ@ತಂತ್ರಜ್ಞಾನ: ಅವಿನಾಶ್ ಬಿ. ವಿಜಯ ಕರ್ನಾಟಕ ಅಂಕಣ, 28 ಜನವರಿ 2019
2018ರಲ್ಲಿ ಸದ್ದು ಮಾಡಲಾರಂಭಿಸಿದ್ದ ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್) ಹಾಗೂ ಯಂತ್ರ ಕಲಿಕೆ (ಮಶಿನ್ ಲರ್ನಿಂಗ್) ಎಂಬೆರಡು ತಂತ್ರಜ್ಞಾನಗಳ ಹವಾ 2019ರಲ್ಲಿ ಜೋರಾಗಿಯೇ ಬೀಸಲಿರುವುದು ಸ್ಪಷ್ಟ. ಈಗ ನಮ್ಮ ಮೊಬೈಲ್ ಫೋನ್‌ಗಳಲ್ಲೇ ಕೃತಕ ಜಾಣ್ಮೆಯನ್ನು ಬಳಸಿ ನಮ್ಮೊಂದಿಗೆ ಮಾತನಾಡುವ ಗೂಗಲ್ ಅಸಿಸ್ಟೆಂಟ್, ಆ್ಯಪಲ್‌ನ ಸಿರಿ, ಮೈಕ್ರೋಸಾಫ್ಟ್‌ನ ಕೋರ್ಟನಾ ಮುಂತಾದವುಗಳು ನಮಗೆ ಡಿಜಿಟಲ್ ಸಹಾಯಕರಾಗಿ ಕೆಲಸ ಆರಂಭಿಸಿದ್ದಾರೆ. ಜನ ಸಾಮಾನ್ಯರ ಕೈಗೇ ಈ ಕೃತಕ ಬುದ್ಧಿಮತ್ತೆ ಬಂದಿದೆ ಎಂದಾದರೆ, ಇನ್ನು ವಾಣಿಜ್ಯ ವಲಯದಲ್ಲಿ, ಔದ್ಯೋಗಿಕ ವಲಯದಲ್ಲಿ ಇದು ಸಾಕಷ್ಟು ಪ್ರಗತಿ ಸಾಧಿಸಿದೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ಮಶಿನ್ ಲರ್ನಿಂಗ್ ತಂತ್ರಜ್ಞಾನಗಳಿಂದಾಗಿ ಉದ್ಯೋಗ ನಷ್ಟವಾಗುತ್ತದೆ ಎಂಬ ಆತಂಕ ಒಂದು ಕಡೆ ಇದ್ದರೂ, ಅದರಿಂದಾಗಿ ಉದ್ಯೋಗಾವಕಾಶಗಳು ಹೆಚ್ಚಲಿದೆ ಎಂಬ ವಾದವೂ ಮತ್ತೊಂದೆಡೆಯಿಂದ ಕೇಳಿಬರುತ್ತಿದೆ. ಒಟ್ಟಿನಲ್ಲಿ ಚರ್ಚೆಯ ವಿಷಯವಾಗಿರುವ ಈ ಎರಡು ತಂತ್ರಜ್ಞಾನಗಳನ್ನು ಬಳಸಿಕೊಂಡು, ಸಣ್ಣ ಪುಟ್ಟ ನವೋದ್ಯಮ (ಸ್ಟಾರ್ಟಪ್) ಕಂಪನಿಗಳನ್ನು ಹುಟ್ಟುಹಾಕುವ ಮನಸ್ಸು ಮಾಡಿದವರಿಗೆ ಇದೋ ಇಲ್ಲಿದೆ ಹೊಸದೊಂದು ನೆರವಿನ ಅವಕಾಶ.
ಈ ಎರಡೂ ತಂತ್ರಜ್ಞಾನಗಳನ್ನು ಜನಸಾಮಾನ್ಯನೊಬ್ಬ ಸುಲಭವಾಗಿ ಹೇಗೆ ಅರ್ಥೈಸಿಕೊಳ್ಳಬಹುದು? ಒಂದು ಕಂಪ್ಯೂಟರ್ ಅಥವಾ ಸಿಸ್ಟಂ ನಮ್ಮ ಬೇಕು-ಬೇಡಗಳನ್ನು ಅರಿತುಕೊಂಡು, ಮುಂದೇನಾಗುತ್ತದೆ ಎಂದು ಬುದ್ಧಿವಂತ ಮನುಷ್ಯನಂತೆಯೇ ಊಹಿಸಿ, ಅದಕ್ಕೆ ತಕ್ಕಂತೆ ಮಾರ್ಗೋಪಾಯವನ್ನೋ, ಅನುಕೂಲಗಳನ್ನೋ ರೂಪಿಸಿಕೊಳ್ಳುವುದು ಕೃತಕ ಬುದ್ಧಿಮತ್ತೆ. ಇರುವ ಡೇಟಾವನ್ನು ಬಳಸಿಕೊಂಡು, ಅದನ್ನು ವಿಶ್ಲೇಷಿಸಿ, ಉದಾಹರಣೆಗೆ, ನಾಲ್ಕು ಬಾರಿ ತಪ್ಪಾದರೂ, ಐದನೇ ಬಾರಿಗೆ ಸರಿಪಡಿಸಿಕೊಳ್ಳುತ್ತಾ ಮುಂದುವರಿಯುವುದು ಮೆಶಿನ್ ಲರ್ನಿಂಗ್. ಒಟ್ಟಾರೆಯಾಗಿ, ಹೇಳಿದ್ದನ್ನು ಕೇಳಿ, ಮಾನವನಂತೆಯೇ ಊಹಿಸಿ, ವಿಶ್ಲೇಷಿಸಿ ನೆರವಾಗುವುದು ಎಐ, ಹೇಳಿದ್ದನ್ನು ಕೇಳಿ, ಅನುಭವದಿಂದ ಕಲಿಯುತ್ತಾ ಹೋಗುವುದು ಎಂಎಲ್.
ಗೂಗಲ್ ಈ ಅತ್ಯಾಧುನಿಕ ತಂತ್ರಜ್ಞಾನದ ದಿಗ್ಗಜ ಸಂಸ್ಥೆಗಳಲ್ಲೊಂದು. ತಂತ್ರಜ್ಞಾನಕ್ಕೆ ಸಂಬಂಧಿಸಿದ ನವೋದ್ಯಮ ರೂಪಿಸುವ ಯೋಜನೆ ನಿಮ್ಮ ಮುಂದಿದ್ದರೆ ಇದಕ್ಕೆ ಗೂಗಲ್ ಸಹಾಯ ಮಾಡಲಿದೆ. ಭಾರತೀಯರ ಆವಶ್ಯಕತೆಗಳಿಗೆ ತಕ್ಕಂತೆ ರೂಪುಗೊಳ್ಳುವ ಮತ್ತು ಎಐ ಹಾಗೂ ಎಂಎಲ್ ತಂತ್ರಜ್ಞಾನ ಬಳಸಿ, ಪರಿಹಾರೋಪಾಯಗಳನ್ನು ಅಥವಾ ಅನುಕೂಲಗಳನ್ನು ಒದಗಿಸುವ ಯಾವುದೇ ಸ್ಟಾರ್ಟಪ್‌ಗೆ ಈ ನೆರವು ದೊರೆಯಲಿದೆ. ಡಿಜಿಟಲ್ ಇಂಡಿಯಾಕ್ಕಾಗಿ ತುಡಿಯುವ ಭಾರತೀಯರಿಗಾಗಿ ಈ ನೆರವು ದೊರೆಯುತ್ತಿರುವುದು ಗೂಗಲ್‌ನ ‘ಲಾಂಚ್‌ಪ್ಯಾಡ್ ಆ್ಯಕ್ಸಲರೇಟರ್ ಇಂಡಿಯಾ’ ಎಂಬ ಕಾರ್ಯಕ್ರಮದಡಿ. ಮೊದಲ ಆವೃತ್ತಿಯಲ್ಲಿ ಈಗಾಗಲೇ 10 ಸ್ಟಾರ್ಟಪ್‌ಗಳು ರೂಪುಗೊಂಡಿದ್ದರೆ, ಎರಡನೇ ಆವೃತ್ತಿಯಲ್ಲಿಯೂ 10 ಸ್ಟಾರ್ಟಪ್‌ಗಳಿಗೆ ನೆರವಿನ ಅವಕಾಶ ದೊರೆಯಲಿದೆ. ಇದಕ್ಕೆ ಅರ್ಜಿ ಸಲ್ಲಿಸಲು 2019ರ ಜನವರಿ 31 ಕೊನೆಯ ದಿನಾಂಕ ಎಂಬುದು ನೆನಪಿರಲಿ.
ಆಯ್ಕೆಯಾದಲ್ಲಿ ಈ ನವೋದ್ಯಮಗಳಿಗೆ ಗೂಗಲ್ ತಂತ್ರಜ್ಞರ ನೆರವು ದೊರೆಯಲಿದೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಅಥವಾ ಮೆಶಿನ್ ಲರ್ನಿಂಗ್, ಕ್ಲೌಡ್, ವೆಬ್, ಆಂಡ್ರಾಯ್ಡ್ ಪ್ಲ್ಯಾಟ್‌ಫಾರ್ಮ್‌ನಲ್ಲಿ ಸಹಾಯ ದೊರೆಯುವುದರೊಂದಿಗೆ, ಉತ್ಪನ್ನದ ಕಾರ್ಯತಂತ್ರ ಹಾಗೂ ಮಾರುಕಟ್ಟೆ ತಂತ್ರಗಳ ಕುರಿತಾಗಿಯೂ ಪ್ರೋತ್ಸಾಹ, ಸಲಹೆ ಸೂಚನೆಗಳು ಲಭ್ಯವಾಗಲಿವೆ.
ಸ್ಟಾರ್ಟಪ್ ಅಥವಾ ನವೋದ್ಯಮ ಸ್ಥಾಪನೆಗೆ ಇಚ್ಛಿಸುವವರಿಗೆ ಕೆಲವೊಂದು ಸುಲಭ ಷರತ್ತುಗಳಿವೆ. ಅವೇನೆಂದರೆ, ಟೆಕ್ನಾಲಜಿ ನವೋದ್ಯಮವೇ ಆಗಿರಬೇಕು ಮತ್ತು ಭಾರತದಲ್ಲೇ ಕಾರ್ಯಾಚರಿಸಬೇಕು. ಭಾರತಕ್ಕೆ ನಿರ್ದಿಷ್ಟವಾಗಿರುವ ಸವಾಲು ಅಥವಾ ಸಮಸ್ಯೆಗೆ ಪರಿಹಾರ ರೂಪದಲ್ಲಿರಬೇಕು ಮತ್ತು ಪರಿಹಾರಕ್ಕಾಗಿ ಅತ್ಯಾಧುನಿಕ ತಂತ್ರಜ್ಞಾನವಾದ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ಮೆಶಿನ್ ಲರ್ನಿಂಗ್ ಅನ್ನು ಬಳಸಬೇಕು. ಫೆಬ್ರವರಿ ತಿಂಗಳಲ್ಲಿ ಆಯ್ಕೆಯಾದ ಸ್ಟಾರ್ಟಪ್‌ಗಳನ್ನು ಪ್ರಕಟಿಸಲಾಗುತ್ತದೆ. ಮಾರ್ಚ್‌ನಿಂದ ಕಾರ್ಯಕ್ರಮ ಬೆಂಗಳೂರಲ್ಲಿ ನಡೆಯಲಿದ್ದು, ಬಳಿಕವೂ ಫಾಲೋ-ಅಪ್ ಶಿಬಿರಗಳಿರುತ್ತವೆ.
ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…
ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.
ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…
Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.
ಹಾಡುಗಾರಿಕೆ, ಚೆಂಡೆ-ಮದ್ದಳೆಯ ಬಿಡಿತ-ಮುಕ್ತಾಯಗಳ ಬಳಿಕ, ಬಂದಿದ್ದ ಗಣ್ಯರು, ಒಂದೊಂದು ಹಾಡಿನಲ್ಲಿ ಅಡಕವಾಗಿರುವ ಮಂತ್ರ ಮಾಂಗಲ್ಯದ ಪ್ರತಿಜ್ಞಾಗುಚ್ಛವನ್ನು ವಿವರಿಸಿ, ವಧು-ವರರಿಗೆ ಬೋಧಿಸಿದರು
ಮುದ್ದಣನ ಕುಮಾರ ವಿಜಯದ ಸುಮಾರು 700ರಷ್ಟಿರುವ ಹಾಡುಗಳನ್ನು ಹಾಡಿದ್ದು ತೆಂಕು ತಿಟ್ಟಿನ ಬಲಿಪ ಶೈಲಿಯ ಪ್ರತಿಪಾದಕ ಭಾಗವತರೇ. ಏಳೆಂಟು ವರ್ಷಗಳ…