4ಕೆ ಗೇಮಿಂಗ್ ಪ್ರಿಯರಿಗಿಷ್ಟವಾಗುವ Lenovo Legion S7 ಲ್ಯಾಪ್‌ಟಾಪ್

Lenovo Legion S7 Review: ಡೆಸ್ಕ್‌ಟಾಪ್ ಕಂಪ್ಯೂಟರ್‌ಗಳ ಮೇಲಿನ ಆಕರ್ಷಣೆ ಕಡಿಮೆಯಾಗಿ, ಜನರೀಗ ಬೇಕಾದಲ್ಲಿಗೆ ಒಯ್ಯಬಹುದಾದ ಲ್ಯಾಪ್‌ಟಾಪ್‌ನತ್ತ ಒಲವು ತೋರುತ್ತಿದ್ದಾರೆ. ಈ ಹಂತದಲ್ಲಿ ಗೇಮಿಂಗ್-ಪ್ರಿಯ ಯುವ ಪೀಳಿಗೆಯನ್ನು ಆಕರ್ಷಿಸಲು ಲ್ಯಾಪ್‌ಟಾಪ್ ತಯಾರಿಕಾ ಕಂಪನಿಗಳು ಗಮನ ಕೇಂದ್ರೀಕರಿಸಿವೆ. ಈ ನಿಟ್ಟಿನಲ್ಲಿ ಪ್ರಜಾವಾಣಿಗೆ ವಿಮರ್ಶೆಗೆ ಲಭ್ಯವಾಗಿರುವ ಲೆನೋವೊ ಕಂಪನಿಯ ಲೀಜನ್ ಎಸ್-7 ಗೇಮಿಂಗ್ ಲ್ಯಾಪ್‌ಟಾಪ್ ಹೇಗಿದೆ? ಎರಡು ವಾರ ಬಳಸಿದ ಬಳಿಕದ ಮಾಹಿತಿ ಇಲ್ಲಿದೆ.

ವೈಶಿಷ್ಟ್ಯಗಳು
ಹೆಸರು: ಲೆನೊವೊ ಲೀಜನ್ S7 15ACH6 (ಲೀಜನ್ S7 ಸರಣಿ)
ಪ್ರೊಸೆಸರ್: AMD ರೈಜೆನ್ 9 5900HX
ಗ್ರಾಫಿಕ್ಸ್ ಅಡಾಪ್ಟರ್: ಎನ್‌ವಿಡಿಯಾ ಜಿಫೋರ್ಸ್ ಆರ್‌ಟಿಎಕ್ಸ್ 3060, ಲ್ಯಾಪ್‌ಟಾಪ್ ಜಿಪಿಯು – 6144 MB
RAM: 32768 MB, DDR4-3200, 16 GB ಆನ್‌ಬೋರ್ಡ್
ಡಿಸ್‌ಪ್ಲೇ (ಸ್ಕ್ರೀನ್): 15.60 ಇಂಚು, 16:9, 3840 x 2160 ಪಿಕ್ಸೆಲ್, 282 ಪಿಪಿಐ, IPS, ಡಾಲ್ಬಿ ವಿಶನ್, HDR, 60 Hz
ಸ್ಟೋರೇಜ್: ಸ್ಯಾಮ್‌ಸಂಗ್, 1024 GB, ಬಳಕೆಗೆ ಲಭ್ಯ: 896 GB
ತೂಕ: 1.966 kg.
ಬೆಲೆ: ₹1,46,990

ವಿನ್ಯಾಸ
ಸಾಮಾನ್ಯ ಬಳಕೆಯ ಲಾಪ್‌ಟಾಪ್‌ಗಳಿಗೆ ಜನರು ಬಹುತೇಕ 14 ಇಂಚಿನದನ್ನೇ ನೆಚ್ಚಿಕೊಳ್ಳುತ್ತಾರೆ. ಆದರೆ ಗೇಮಿಂಗ್‌ಗಾಗಿಯೇ ಸಿದ್ಧಗೊಂಡಿರುವ ಲ್ಯಾಪ್‌ಟಾಪ್‌ಗಳು ಹಾಗಲ್ಲ. ಸ್ಕ್ರೀನ್ ಗಾತ್ರ ದೊಡ್ಡದಿದ್ದರೆ ಅದರ ಆನಂದವೇ ಬೇರೆ. ಹೀಗಾಗಿ 15.6 ಇಂಚಿನ ಲ್ಯಾಪ್‌ಟಾಪ್, ಬೇರೆಯದಕ್ಕೆ ಹೋಲಿಸಿದರೆ ತೂಕಭರಿತವೂ ಆಗಿರುವುದರಿಂದಾಗಿ, ಒಯ್ಯಲು ಸುಲಭವಾಗುವ ಹಗುರ ಲ್ಯಾಪ್‌ಟಾಪ್ ಪ್ರಿಯರಿಗೆ ಇಷ್ಟವಾಗಲಾರದು. ಯಾಕೆಂದರೆ ಇದರ ತೂಕ ಬಹುತೇಕ 2 ಕೆಜಿ. ಆದರೆ ಗೇಮಿಂಗ್ ಲ್ಯಾಪ್‌ಟಾಪ್‌ಗಳಲ್ಲಿ ಇದು ಅತ್ಯಂತ ಹಗುರವಾದ ಗೇಮಿಂಗ್ ಲ್ಯಾಪ್‌ಟಾಪ್‌ಗಳಲ್ಲೊಂದು. ಉತ್ತಮವಾದ ಬಿಲ್ಡ್, ಆಕರ್ಷಕವಾದ ನೋಟ, ಲಿಡ್ ತೆರೆದಾಕ್ಷಣವೇ ಗೇಮಿಂಗ್ ತುಡಿತ ಹೆಚ್ಚಿಸಬಲ್ಲ ಎಲ್ಇಡಿ ಬೆಳಕಿರುವ ಕೀಬೋರ್ಡ್ ವಿನ್ಯಾಸ ಎದ್ದುಕಾಣುತ್ತದೆ.

ಎಡಭಾಗದಲ್ಲಿ 3.5 ಮಿಮೀ ಸ್ಟೀರಿಯೋ ಹೆಡ್‌ಫೋನ್ ಜ್ಯಾಕ್ ಮತ್ತು ಮೆಮೊರಿ ಕಾರ್ಡ್ ರೀಡರ್ ಸ್ಲಾಟ್ ಇದ್ದರೆ, ಬಲ ಭಾಗದಲ್ಲಿ ಎರಡು ಯುಎಸ್‌ಬಿ ಟೈಪ್-ಸಿ ಪೋರ್ಟ್‌ಗಳಿವೆ. ಹಿಂಭಾಗದಲ್ಲಿ ಪವರ್ ಪೋರ್ಟ್ ಮತ್ತು 2 ಯುಎಸ್‌ಬಿ ಪೋರ್ಟ್‌ಗಳಿವೆ. ಎಲ್ಲ ಪೋರ್ಟ್‌ಗಳಿಗೆ ಕೂಡ ಬೆಳಕು ಸೂಸುವ ಸೂಚಕಗಳಿರುವುದರಿಂದಾಗಿ, ಸಂಪರ್ಕಿಸುವುದು ಸುಲಭ. ಆದರೆ, ಈಗಲೂ ಬ್ರಾಡ್‌ಬ್ಯಾಂಡ್ ಇಂಟರ್ನೆಟ್ ಸಂಪರ್ಕವನ್ನು LAN ಮೂಲಕವೇ ಅವಲಂಬಿಸಿರುವ ಭಾರತದಲ್ಲಿ ಬಿಡುಗಡೆಯಾದ ಲೀಜನ್ ಸ್ಲಿಮ್ 7 ಲ್ಯಾಪ್‌ಟಾಪ್‌ನಲ್ಲಿ, ವಿಶೇಷತಃ ಗೇಮಿಂಗ್ ಸಾಧನದಲ್ಲಿ ನೇರವಾಗಿ ಬ್ರಾಡ್‌ಬ್ಯಾಂಡ್ ಸಂಪರ್ಕಿಸಲು ಈಥರ್‌ನೆಟ್ ಪೋರ್ಟ್ ಇಲ್ಲದಿರುವುದು ಆಶ್ಚರ್ಯ ಹುಟ್ಟಿಸುತ್ತದೆ. ಇದಕ್ಕಾಗಿ ಅಡಾಪ್ಟರ್ ಬಳಸಿಕೊಳ್ಳಬೇಕಾಗುತ್ತದೆ.

ಮೆಮೊರಿ ಕಾರ್ಡ್ ರೀಡರ್ ಮೂಲಕ ಸುಮಾರು 80 ಎಂಬಿಪಿಎಸ್ ವೇಗದಲ್ಲಿ ಫೈಲುಗಳ ವಿನಿಮಯವಾಗುತ್ತದೆ, ಅದರೆ ಇದು ಮಧ್ಯಮ ವೇಗ ಎನ್ನಬಹುದು. ಇನ್ನು ಅತ್ಯುತ್ತಮ ಧ್ವನಿ ನೀಡಬಲ್ಲ ಸ್ಪೀಕರ್ ಗ್ರಿಲ್‌ಗಳು ಸ್ಟೀರಿಯೋ ಎಫೆಕ್ಟ್ ಚೆನ್ನಾಗಿ ನೀಡುತ್ತವೆ.

ಕೀಬೋರ್ಡ್ ಮೇಲ್ಭಾಗದ ಮಧ್ಯದಲ್ಲಿ ಪವರ್ ಬಟನ್ ಮತ್ತು ಕೀಪ್ಯಾಡ್‌ಗಳು ಹಾಗೂ ಟಚ್‌ಪ್ಯಾಡ್ ಆಕರ್ಷಕವಾಗಿವೆ. ಲಿಡ್ ಅನ್ನು ಒಂದೇ ಕೈಯಲ್ಲಿ ಕೂಡ ಮೇಲೆತ್ತಬಹುದಾಗಿದೆ. ಲಿಡ್ ಅನ್ನು 180 ಡಿಗ್ರಿ ಕೋನದಲ್ಲಿಯೂ ತೆರೆಯಬಹುದಾಗಿದೆ. ಲಿಡ್ ತೆರೆದು ಆನ್ ಮಾಡಿದರೆ, ಕೀಬೋರ್ಡ್‌ಗಳ ಹಿನ್ನೆಲೆಯಲ್ಲಿ ಆರ್‌ಜಿಬಿ ಲೈಟಿಂಗ್ ವ್ಯವಸ್ಥೆಯು ಇದನ್ನು ಮತ್ತಷ್ಟು ಆಕರ್ಷಕವಾಗಿಸಿದೆ. ಟಚ್ ಪ್ಯಾಡ್ ಮೂಲಕ ನ್ಯಾವಿಗೇಶನ್ ಸುಲಭವಾಗುತ್ತದೆ ಮತ್ತು ಸ್ಪರ್ಶಕ್ಕೆ ಚೆನ್ನಾಗಿ ಸ್ಪಂದಿಸುತ್ತದೆ.

ವಿಜಿಎ ಅಥವಾ ಹೆಚ್‌ಡಿಎಂಐ ಔಟ್‌ಪುಟ್ ಅಗತ್ಯವಿದ್ದರೆ, ಯುಎಸ್‌ಬಿ ಹಬ್ ಬಳಸಬೇಕಾಗಬಹುದು. (ಯುಎಸ್‌ಬಿ-ಸಿ ಯಿಂದ ವಿಜಿಎ, ಹೆಚ್‌ಡಿಎಂಐ ಮತ್ತು ಯುಎಸ್‌ಬಿ ಎ ಟೈಪ್). ಯುಎಸ್‌ಬಿ-ಸಿ ಪೋರ್ಟ್ ಮೂಲಕ ಚಾರ್ಜ್ ಕೂಡ ಮಾಡಬಹುದಾಗಿದೆ. ಆದರೆ, ಕೊಂಚ ನಿಧಾನವಾಗುತ್ತದೆ ಅಷ್ಟೇ.

0.9 ಮೆಗಾಪಿಕ್ಸೆಲ್ ಸಾಮರ್ಥ್ಯದ ವೆಬ್ ಕ್ಯಾಮ್ ಇದರಲ್ಲಿದ್ದು, ಸಂವಹನಕ್ಕೆ, ಮೀಟಿಂಗ್, ಗೇಮಿಂಗ್ ಸಂದರ್ಭದಲ್ಲಿ ಉತ್ತಮವಾಗಿ ಮುಖವನ್ನು ಬಿಂಬಿಸುತ್ತದೆ.

ಹಿಂಭಾಗದ ಕವಚ ತೆಗೆಯಬೇಕಿದ್ದರೆ, 8 ಸ್ಕ್ರೂಗಳನ್ನು ತೆಗೆಯಬೇಕಾಗುತ್ತದೆ. ಇದರೊಳಗೆ ಎರಡನೇ ಎಸ್ಎಸ್‌ಡಿ ಅಳವಡಿಸುವ ಸ್ಲಾಟ್ ಇದೆ. ಜೊತೆಗೆ, ಫ್ಯಾನ್‌ಗಳು, RAM ಮತ್ತು WLAN ಮಾಡ್ಯೂಲ್‌ಗಳು, ಬ್ಯಾಟರಿ ಇದೆ.

15.6 ಇಂಚಿನ ಸ್ಕ್ರೀನ್‌ನಲ್ಲಿ ಉತ್ತಮವಾದ ಪ್ರಖರ ಬೆಳಕು ಮತ್ತು ಕಾಂಟ್ರಾಸ್ಟ್ ಇದ್ದು, 3840×2160 ಪಿಕ್ಸೆಲ್ ರೆಸೊಲ್ಯುಶನ್‌ನಿಂದಾಗಿ ಚಿತ್ರಗಳು, ವಿಡಿಯೊಗಳು ಸ್ಫುಟವಾಗಿ ಮೂಡಿಬರುತ್ತವೆ. 4ಕೆ ಪ್ಯಾನೆಲ್‌ನಲ್ಲಿ ಬಣ್ಣಗಳು ಸಹಜತೆಯೊಂದಿಗೆ ಬಿಂಬಿಸಲ್ಪಡುತ್ತವೆ ಮತ್ತು 60Hz ರೀಫ್ರೆಶ್ ರೇಟ್ ಜೊತೆಗೆ, ಪೂರಕವಾಗಿ ಕೆಲಸ ಮಾಡಬಲ್ಲ ಎಎಂಡಿಯ ಫ್ರೀ ಸಿಂಕ್ ತಂತ್ರಜ್ಞಾನವು ಡಿಸ್‌ಪ್ಲೇ ಹಾಗೂ ಜಿಪಿಯು ನಡುವಿನ ಹೊಂದಾಣಿಕೆಯನ್ನು ಹೆಚ್ಚಿಸಿ, ಯಾವುದೇ ಸ್ಥಾಗಿತ್ಯ ಅಥವಾ ವಿಳಂಬವಿಲ್ಲದ ನ್ಯಾವಿಗೇಶನ್ ಸಾಧ್ಯವಾಗುತ್ತಿದೆ.

ವೀಕ್ಷಣೆಯ ಕೋನವೂ ಸ್ಥಿರವಾಗಿಯೇ ಇದ್ದು, ಯಾವುದೇ ಕೋನದಿಂದ ನೋಡಿದಾಗ ಚಿತ್ರಗಳು ಸ್ಫುಟವಾಗಿ ಕಾಣಿಸುತ್ತವೆ. ಹೊರಾಂಗಣದಲ್ಲಿ ಸ್ಕ್ರೀನ್ ನೋಡುವುದಕ್ಕೆ ಯಾವುದೇ ಸಮಸ್ಯೆಯಾಗದಂತೆ ಅದರ ಬ್ಯಾಕ್‌ಲಿಟ್ ಪ್ರಖರತೆಯು ಹೊಂದಿಕೊಳ್ಳುತ್ತದೆ.

ಕಾರ್ಯಾಚರಣೆ
ರೈಜೆನ್ 9-5900HX ಯುನಿಟ್‌ನ ಸಿಪಿಯು ಭಾಗದಲ್ಲಿ ಒಕ್ಟಾ ಕೋರ್ ಪ್ರೊಸೆಸರ್ ಇದ್ದು, 3.3GHz ವೇಗದಲ್ಲಿ ಕೆಲಸ ಮಾಡುತ್ತದೆ. ಈ ಎಎಂಡಿ ಕಂಪನಿಯ ಚಿಪ್‌ಸೆಟ್, ಇಂಟೆಲ್‌ನ 12ನೇ ಪೀಳಿಗೆಯ ಆಲ್ಡರ್ ಲೇಕ್ ಚಿಪ್‌ಸೆಟ್‌ಗೆ ಸಮರ್ಥವಾಗಿ ಪ್ರತಿಸ್ಫರ್ಧೆ ನೀಡುತ್ತಿದೆ. ವೇಗವನ್ನು ಅಗತ್ಯಕ್ಕೆ ತಕ್ಕಂತೆ ಟರ್ಬೋ ಮೂಲಕ 4.7 GHz ವರೆಗೂ ಹೆಚ್ಚಿಸಿಕೊಳ್ಳಲು ಸಾಧ್ಯವಿದೆ. ಇದರಿಂದಾಗಿ ವೇಗದ ಮತ್ತು ಸುಲಲಿತವಾದ (ಸ್ಮೂತ್) ಕಾರ್ಯಾಚರಣೆ ಸಾಧ್ಯವಾಗಿದೆ. ಗೇಮಿಂಗ್, ವಿಡಿಯೊ ಎಡಿಟಿಂಗ್ ಹಾಗೂ ಇಮೇಜ್ ಪ್ರೊಸೆಸಿಂಗ್ ಮುಂತಾದ ‘ತೂಕದ’ ಅಪ್ಲಿಕೇಶನ್‌ಗಳಲ್ಲಿ ಕೆಲಸ ಮಾಡುವಾಗ ಬೇಕಿರುವ ಕಾರ್ಯಕ್ಷಮತೆಯನ್ನು ಈ ಲ್ಯಾಪ್‌ಟಾಪ್ ಸುಲಭವಾಗಿ ನಿಭಾಯಿಸುತ್ತದೆ.

1 ಟಿಬಿ ಸ್ಟೋರೇಜ್‌ನೊಂದಿಗೆ ಫೈಲ್‌ಗಳ ವರ್ಗಾವಣೆಯೂ ವೇಗವಾಗಿ ನಡೆಯುತ್ತದೆ. ಆದರೆ RTX 3000 GPU ಕಾರ್ಯಾಚರಣೆಯು ಮೆಮೊರಿ ಕಾನ್ಫಿಗರೇಶನ್, ಸಾಧನದ ಉಷ್ಣತೆಯ ಮೇಲೂ ಅವಲಂಬಿತವಾಗಿದೆ. GDDR6ನ ಗ್ರಾಫಿಕ್ಸ್ ಮೆಮೊರಿ (6ಜಿಬಿ) ಆಧಾರದಲ್ಲಿ ಜಿಪಿಯು ಕೆಲಸ ಮಾಡುತ್ತದೆ. ಹೀಗಾಗಿ ಗ್ರಾಫಿಕ್ಸ್ ಕಾರ್ಡ್ ಕಾರ್ಯಕ್ಷಮತೆಯೊಂದಿಗೆ ಗೇಮಿಂಗ್‌ಗೆ ಉತ್ತಮ ಬೆಂಬಲ ಲಭ್ಯವಾಗಿದೆ.

ಫುಲ್ ಹೆಚ್‌ಡಿ ರೆಸೊಲ್ಯುಶನ್‌ನಲ್ಲಿ (1920×1080 ಪಿಕ್ಸೆಲ್) ಮಾತ್ರವೇ ಅಲ್ಲದೆ, ಪೂರ್ಣ ಪ್ರಮಾಣದ ರೆಸೊಲ್ಯುಶನ್‌ನಲ್ಲಿ ಇದ್ದಾಗಲೂ ಯಾವುದೇ ತೊಡಕು ಕಾಣಿಸಿಕೊಳ್ಳಲಿಲ್ಲ. ಸಾಮಾನ್ಯ ಕೆಲಸ ಕಾರ್ಯಗಳಂತೂ ಸುಲಲಿತವಾಗಿಯೇ ಸಾಗುತ್ತವೆ. ಆದರೆ, ಹೆಚ್ಚಿನ ಸಂಪನ್ಮೂಲಗಳು ಬಳಕೆಯಲ್ಲಿರುವಾಗ (ವಿಶೇಷವಾಗಿ ಹೆಚ್ಚಿನ ಗ್ರಾಫಿಕ್ಸ್ ಇರುವ ಗೇಮಿಂಗ್ ವೇಳೆ) ಸಾಧನವು ಸ್ವಲ್ಪ ಬಿಸಿಯಾಗುತ್ತದೆಯಾದರೂ, ಅದು ಅನನುಕೂಲಕರವಾದ ಮಟ್ಟಕ್ಕೆ ಹೋಗುವುದಿಲ್ಲ. ಬ್ಯಾಟರಿ ಚಾರ್ಜ್ ಬಳಕೆಯೂ ಡೀಸೆಂಟ್ ಎನ್ನಿಸುವಷ್ಟಿದೆ.

ಒಟ್ಟಿನಲ್ಲಿ ಹೇಳುವುದಾದರೆ, ಇದು ಗೇಮರ್‌ಗಳಿಗೆ ಮಾತ್ರವೇ ಅಲ್ಲದೆ, ವಿಡಿಯೊ, ಗ್ರಾಫಿಕ್ಸ್ ಎಡಿಟಿಂಗ್ ವೃತ್ತಿಯಲ್ಲಿರುವವರಿಗೂ ಸೂಕ್ತವಾಗಬಹುದಾದ ಲ್ಯಾಪ್‌ಟಾಪ್. ವಿಂಡೋಸ್ 11ರಲ್ಲಿ 4ಕೆ ಸ್ಕ್ರೀನ್, ಉತ್ತಮ ಬ್ಯಾಟರಿ, ಉತ್ತಮ ಎನಿಸುವ ಗ್ರಾಫಿಕ್ಸ್ ಕಾರ್ಡ್ ಮತ್ತು ತೆಳುವಾದ, ಗೇಮಿಂಗ್ ಲ್ಯಾಪ್‌ಟಾಪ್‌ಗಳ ಸಾಲಿನಲ್ಲಿ ಸ್ಲಿಮ್ ಮತ್ತು ಹಗುರ ಎನಿಸಬಹುದಾದದ್ದು ಲೆನೊವೊ ಲೀಜನ್ ಸ್ಲಿಮ್ 7. ಸಾಮಾನ್ಯ ಬಳಕೆಗಾಗಿ ಮತ್ತು ಹೆಚ್ಚು ಪ್ರಯಾಣಿಸಬೇಕಾದವರಿಗೆ ಇದರ ತೂಕ ಮತ್ತು ಗಾತ್ರ ತೊಡಕಾಗಬಹುದು. ಅಂಥವರಿಗೆ ಹೇಗೂ 14 ಇಂಚಿನ ಸ್ಲಿಮ್ ಲ್ಯಾಪ್‌ಟಾಪ್‌ಗಳಿವೆ.

Lenovo Legion S7 15ACH6 Review Published in Prajavani on 25 Aug 2022 by me, Avinash B

Avinash B

Avinash B. Tech Writer, Columnist, Working as Online media Journalist for more than two decades. Passionate about Technology and Gadgets. Yakshagana and Music are passion.

Recent Posts

ಎಐ ವೈಶಿಷ್ಟ್ಯಗಳ realme GT 7 Pro ಬಿಡುಗಡೆ: ಬೆಲೆ ಎಷ್ಟು? ವೈಶಿಷ್ಟ್ಯಗಳೇನು? ಇಲ್ಲಿದೆ ಪೂರ್ಣ ಮಾಹಿತಿ

ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್‌ ಇರುವ ಬಹುನಿರೀಕ್ಷಿತ…

4 weeks ago

ರಿಯಲ್‌ಮಿ ನಾರ್ಜೋ 70 ಟರ್ಬೊ 5 ಜಿ, ರಿಯಲ್‌ಮಿ ಬಡ್ಸ್ ಎನ್‌1 ಬಿಡುಗಡೆ: ಬೆಲೆ, ವೈಶಿಷ್ಟ್ಯ ತಿಳಿಯಿರಿ

ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…

3 months ago

ಓದುವಿಕೆ, ಕಲಿಕೆ ಉತ್ತೇಜನಕ್ಕೆ ‘ರೀಡ್-ಅ-ಥಾನ್’: ದಾಖಲೆಯ ಗುರಿ

ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.

4 months ago

Realme 13 +, Realme 13 5ಜಿ ಫೋನ್ ಬಿಡುಗಡೆ: ವೇಗದ ಫೋನ್‌ನ ವೈಶಿಷ್ಟ್ಯಗಳು, ಬೆಲೆ ಇಲ್ಲಿ ತಿಳಿಯಿರಿ

ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…

4 months ago

e-ಯುಗದ ತನಿಖಾ ಪತ್ರಿಕೋದ್ಯಮ: ಫ್ಯಾಕ್ಟ್ ಚೆಕ್

Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.

5 months ago

ಯಕ್ಷ ಮಂತ್ರ ಮಾಂಗಲ್ಯ: ಕೀರ್ತನಾ ಪ್ರಸಾದ ಕಲ್ಯಾಣವು

ಹಾಡುಗಾರಿಕೆ, ಚೆಂಡೆ-ಮದ್ದಳೆಯ ಬಿಡಿತ-ಮುಕ್ತಾಯಗಳ ಬಳಿಕ, ಬಂದಿದ್ದ ಗಣ್ಯರು, ಒಂದೊಂದು ಹಾಡಿನಲ್ಲಿ ಅಡಕವಾಗಿರುವ ಮಂತ್ರ ಮಾಂಗಲ್ಯದ ಪ್ರತಿಜ್ಞಾಗುಚ್ಛವನ್ನು ವಿವರಿಸಿ, ವಧು-ವರರಿಗೆ ಬೋಧಿಸಿದರು

11 months ago