GTalk ಎಂಬ ಹಗುರವಾದ, ಬಳಕೆಗೆ ಸುಲಭ ತಂತ್ರಾಂಶ ಬಳಸುತ್ತಿದ್ದವರೆಲ್ಲರೂ ಕೆಲವು ದಿನಗಳಿಂದ ಈ ಕುರಿತ ಸಂದೇಶವನ್ನು ಪಡೆಯುತ್ತಿದ್ದಾರೆ. ಜಿ-ಟಾಕ್‌ಗೆ ಲಾಗಿನ್ ಆದ ತಕ್ಷಣ “ವಿಂಡೋಸ್‌ಗಾಗಿ ಇರುವ ಗೂಗಲ್ ಟಾಕ್ ಆ್ಯಪ್ 2015ರ ಫೆ.16ರಂದು ಕಾರ್ಯ ಸ್ಥಗಿತಗೊಳಿಸಲಿದೆ. ಅದರ ಸ್ಥಾನದಲ್ಲಿ ಹ್ಯಾಂಗೌಟ್ಸ್ ಕ್ರೋಮ್ ಆ್ಯಪ್ ಬರಲಿದ್ದು, ಇನ್‌ಸ್ಟಾಲ್ ಮಾಡಿಕೊಳ್ಳಿ” ಎಂಬ ಜಿಮೇಲ್‌ನಿಂದ ಬಂದಿರುವ ಸಂದೇಶದೊಂದಿಗೆ ಹ್ಯಾಂಗೌಟ್ಸ್ ಆ್ಯಪ್‌ನ ಲಿಂಕ್ (http://goo.gl/yglfk6) ಕೂಡ ನೀಡಲಾಗಿದೆ.
ಜಿಮೇಲ್‌ಗೆ ಲಾಗಿನ್ ಆಗಿ, ಅದರೊಳಗಿಂದ ಸಂವಹನ ನಡೆಸುವ ಬದಲಾಗಿ, ಈ ಕಿರು ತಂತ್ರಾಂಶವನ್ನು ಮಾತ್ರವೇ ಲಾಂಚ್ ಮಾಡಿ, ಸದಾ ಕಾಲ ಸ್ನೇಹಿತರೊಂದಿಗೆ, ಸಹೋದ್ಯೋಗಿಗಳೊಂದಿಗೆ ಸಂದೇಶ ವಿನಿಮಯ ಮಾಡಿಕೊಳ್ಳಲು ಜಿ-ಟಾಕ್ ಅನುಕೂಲ ಕಲ್ಪಿಸುತ್ತಿತ್ತು. ಆನ್‌ಲೈನ್ ಇದ್ದರೆ ಹಸಿರು ಬಣ್ಣದ ಗುಂಡಿ, ಬ್ಯುಸಿ ಇದ್ದರೆ ಕೆಂಪು, ಸ್ವಲ್ಪ ಹೊತ್ತು ಕಂಪ್ಯೂಟರ್ ಮುಟ್ಟದಿದ್ದರೆ (idle) ಕಿತ್ತಳೆ ಬಣ್ಣ ಹಾಗೂ ಆಫ್‌ಲೈನ್ ಇದ್ದರೆ ಬೂದು ಬಣ್ಣದ ಗುಂಡಿ ಕಾಣಿಸುತ್ತಿತ್ತು. ಇಷ್ಟಲ್ಲದೆ, ಇತರ ಸ್ನೇಹಿತರಿಗೆ ಆಫ್‌ಲೈನ್ ಕಾಣಿಸುವಂತೆಯೂ ಕಣ್ಣಾಮುಚ್ಚಾಲೆಯಾಗಿರಬಹುದಾಗಿತ್ತು. ನಮ್ಮ ಜಿಮೇಲ್ ಖಾತೆಗೆ ಯಾವುದಾದರೂ ಇಮೇಲ್ ಬಂದಲ್ಲಿ, ತಕ್ಷಣವೇ ನೋಟಿಫಿಕೇಶನ್ ಪಾಪ್ ಅಪ್ ವಿಂಡೋ ಮೂಲಕ ಕಾಣಿಸುತ್ತಿತ್ತು ಹಾಗೂ ಆ್ಯಪ್‌ನಲ್ಲಿರುವ ಒಂದು ಬಟನ್ ಕ್ಲಿಕ್ ಮಾಡಿದರೆ, ಸ್ವಯಂಚಾಲಿತವಾಗಿ ಇಮೇಲ್ ತೆರೆದುಕೊಳ್ಳುತ್ತಿತ್ತು.
ಇಷ್ಟೆಲ್ಲ ಅನುಕೂಲವಿರುವ ಜಿ-ಟಾಕ್ ಇನ್ನಿರುವುದಿಲ್ಲ. ಇದರ ಬದಲು, ಹ್ಯಾಂಗೌಟ್ಸ್ ಎಂಬ ಹೆಚ್ಚು ಸಂಕೀರ್ಣ ಸಾಧ್ಯತೆಗಳಿರುವ ಆ್ಯಪ್ ಅನ್ನೇ ಗೂಗಲ್ ಬಲವಂತವಾಗಿ ಹೇರುತ್ತಿದೆ. ಸ್ಮಾರ್ಟ್‌ಫೋನ್‌ಗಳಲ್ಲಿ ಈಗಾಗಲೇ ಹ್ಯಾಂಗೌಟ್ಸ್‌ಗೆ ಸ್ಥಾನಾಂತರವಾಗಿದೆ. ಮುಂದಿನ ಸರದಿ ಡೆಸ್ಕ್‌ಟಾಪ್ ಕಂಪ್ಯೂಟರುಗಳದು.
ಮೈಕ್ರೋಸಾಫ್ಟ್ ಈಗಾಗಲೇ ಕಂಪ್ಯೂಟರ್, ಟ್ಯಾಬ್ಲೆಟ್ ಹಾಗೂ ಸ್ಮಾರ್ಟ್‌ಫೋನ್‌ಗಳಿಗೆ ಅನ್ವಯವಾಗುವ ಏಕೀಕೃತ ಸ್ಕೈಪ್ ಎಂಬ ಸಂದೇಶ ವಿನಿಮಯ ತಂತ್ರಾಂಶವನ್ನು ನೀಡುತ್ತಿದೆ. ಇತ್ತೀಚೆಗೆ ವಾಟ್ಸ್ಆ್ಯಪ್ ಎಂಬ ಸ್ಮಾರ್ಟ್‌ಫೋನ್ ಸಂದೇಶ ವಿನಿಮಯ ಆ್ಯಪ್ ಕೂಡ ತನ್ನ ವೆಬ್ ಆವೃತ್ತಿಯನ್ನು ಹೊರತಂದಿತ್ತು. ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ಗೂಗಲ್ ಕೂಡ ಫೋಟೋ, ವೀಡಿಯೋ ಸಹಿತ ಸಂವಹನ ನಡೆಸಬಲ್ಲ, ಫೈಲ್‌ಗಳ ವಿನಿಮಯಕ್ಕೆ ಪೂರಕವಾಗಬಲ್ಲ ಸರ್ವಾಂತರ್ಯಾಮಿ ಹ್ಯಾಂಗೌಟ್ಸ್‌ನತ್ತ ಹೊರಳಿಕೊಂಡಿದೆ.
ಕಂಪ್ಯೂಟರಿನಲ್ಲಿ ಹ್ಯಾಂಗೌಟ್ಸ್ ಬಳಸುವುದು ಹೇಗೆ?
ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿ ಹ್ಯಾಂಗೌಟ್ಸ್ ಆ್ಯಪ್ ಇದೆ. ಬಳಸುವುದು ಬಹುತೇಕ ಎಲ್ಲರಿಗೂ ತಿಳಿದಿದೆ. ಕಂಪ್ಯೂಟರುಗಳಲ್ಲಿ ಹೇಗೆಂಬುದು ತಿಳಿಯುತ್ತಿಲ್ಲವೇ? ಜಿಮೇಲ್ ಓಪನ್ ಮಾಡಿ, ಅದರೊಳಗಿಂದ ಚಾಟಿಂಗ್ ನಡೆಸುವುದು ಒಂದು ಕ್ರಮವಾದರೆ, ಈ ಹ್ಯಾಂಗೌಟ್ಸ್ ಆ್ಯಪ್ ಅನ್ನು ನಮ್ಮ ಬ್ರೌಸರ್‌ಗೇ ಅಳವಡಿಸಿಕೊಳ್ಳುವುದು ಮತ್ತೊಂದು ವಿಧಾನ. ಇದು ಕೆಲಸ ಮಾಡುವುದು ಗೂಗಲ್‌ನ ಕ್ರೋಮ್ ಬ್ರೌಸರ್‌ನಲ್ಲಿ ಮಾತ್ರ.
ಕ್ರೋಮ್ ಬ್ರೌಸರ್‌ನಲ್ಲಿ ಆ್ಯಪ್ ಸ್ಟೋರ್ ಮೂಲಕ ಗೂಗಲ್, ಸಾವಿರಾರು ಆ್ಯಪ್‌ಗಳನ್ನು ಕಂಪ್ಯೂಟರಿಗೂ ಒದಗಿಸುತ್ತಿದೆ. ಮೇಲೆ ತಿಳಿಸಿದ ಲಿಂಕ್ ಕ್ಲಿಕ್ ಮಾಡಿದರೆ, ಬಲ ಮೇಲ್ಭಾಗದಲ್ಲಿ FREE ಎಂಬ ಬಟನ್ ಕ್ಲಿಕ್ ಮಾಡಿ, ಮುಂದಿನ ಸೂಚನೆಗಳ ಪ್ರಕಾರ ಮುಂದುವರಿದಾಗ, ಹ್ಯಾಂಗೌಟ್ಸ್ ನಿಮ್ಮ ಕ್ರೋಮ್ ಬ್ರೌಸರ್‌ಗೆ ಸೇರ್ಪಡೆಯಾಗುತ್ತದೆ. ನಂತರ, ಕ್ರೋಮ್ ಬ್ರೌಸರ್ ತೆರೆದು, ಅದರಲ್ಲಿರುವ ಅಪ್ಲಿಕೇಶನ್‌ಗಳನ್ನು ತೋರಿಸಲು ಬಣ್ಣಬಣ್ಣದ 9 ಚುಕ್ಕಿಗಳಿರುವ ಬಟನ್ ಕ್ಲಿಕ್ ಮಾಡಬೇಕು, ಅಥವಾ ಅಡ್ರೆಸ್ ಬಾರ್‌ನಲ್ಲಿ chrome://apps/ ಅಂತ ಟೈಪ್ ಮಾಡಿದರಾಯಿತು. ಅಲ್ಲಿಂದ ಹ್ಯಾಂಗೌಟ್ಸ್ ಕ್ಲಿಕ್ ಮಾಡಿ. ಈ ಹ್ಯಾಂಗೌಟ್ಸ್ ಮೂಲಕ ಕಂಪ್ಯೂಟರ್‌ನಲ್ಲಿ ಇಂಟರ್ನೆಟ್ ಸಂಪರ್ಕವಿದ್ದರೆ ಹಲವು ಮಂದಿಯೊಂದಿಗೆ ಕಾನ್ಫರೆನ್ಸ್ ಕಾಲ್ ಅನ್ನೋ, ಸಾಮೂಹಿಕ ಚಾಟಿಂಗ್ ಅನ್ನೋ ಅಥವಾ ವೆಬ್ ಕ್ಯಾಮೆರಾ ಇದ್ದರೆ ಸಾಮೂಹಿಕ ವೀಡಿಯೋ ಸಂವಾದವನ್ನೂ ನಡೆಸಬಹುದು.
ಮಾಹಿತಿ@ತಂತ್ರಜ್ಞಾನ: ಅವಿನಾಶ್ ಬಿ. [ವಿಜಯ ಕರ್ನಾಟಕ ಅಂಕಣ, ಫೆಬ್ರವರಿ 9, 2015]
ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್ ಇರುವ ಬಹುನಿರೀಕ್ಷಿತ…
ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…
ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.
ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…
Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.
ಹಾಡುಗಾರಿಕೆ, ಚೆಂಡೆ-ಮದ್ದಳೆಯ ಬಿಡಿತ-ಮುಕ್ತಾಯಗಳ ಬಳಿಕ, ಬಂದಿದ್ದ ಗಣ್ಯರು, ಒಂದೊಂದು ಹಾಡಿನಲ್ಲಿ ಅಡಕವಾಗಿರುವ ಮಂತ್ರ ಮಾಂಗಲ್ಯದ ಪ್ರತಿಜ್ಞಾಗುಚ್ಛವನ್ನು ವಿವರಿಸಿ, ವಧು-ವರರಿಗೆ ಬೋಧಿಸಿದರು