ಫೇಸ್‌ಬುಕ್ ಬಳಕೆ: ವೈಯಕ್ತಿಕ ಮಾಹಿತಿಗೆ, ಪೋಸ್ಟ್‌ಗೆ ನಾವೇ ಜವಾಬ್ದಾರರು!

ಪ್ರೈವೆಸಿ ಬಗ್ಗೆ ನಾವೇನೋ ಸಾಕಷ್ಟು ಆತಂಕ ವ್ಯಕ್ತಪಡಿಸುತ್ತಿದ್ದೇವೆ, ವಿಶೇಷವಾಗಿ ಸರಕಾರಕ್ಕೆ, ಇನ್‌ಕಂ ಟ್ಯಾಕ್ಸ್ ಇಲಾಖೆಗೆ ನೀಡಿದ ಆಧಾರ್, ಪ್ಯಾನ್ ಕಾರ್ಡ್ ಮಾಹಿತಿ ಸೋರಿಕೆಯಾಗುತ್ತದೆ ಅಂತೆಲ್ಲ ಹೆದರುತ್ತೇವೆ. ಭ್ರಷ್ಟಾಚಾರಿಗಳಿರುವಲ್ಲೆಲ್ಲಾ ಇಂತಹಾ ಆತಂಕ ಸಹಜವೇ. ಆದರೆ, ನಾವು ಕಷ್ಟ ಪಟ್ಟಾದರೂ ಇಷ್ಟಪಟ್ಟು ಫೇಸ್‌ಬುಕ್, ಜಿಮೇಲ್, ಟ್ವಿಟರ್, ಇನ್‌ಸ್ಟಾಗ್ರಾಂ, ಟೆಲಿಗ್ರಾಂ, ವಾಟ್ಸಾಪ್ ಮುಂತಾದ ಸಾಮಾಜಿಕ ಮಾಧ್ಯಮಗಳನ್ನು ಕಲಿತುಕೊಂಡಿದ್ದೇವೆ ಮತ್ತು ಅದಕ್ಕೆ ಬೇಕಾಬಿಟ್ಟಿಯಾಗಿ ನಮ್ಮ ಸಂಪೂರ್ಣ ವಿವರಗಳನ್ನು, ಪ್ರವರಗಳನ್ನು ಧಾರೆ ಎರೆದಿದ್ದೇವೆ. ಉದಾಹರಣೆಗೆ ಫೇಸ್‌ಬುಕ್ಕನ್ನೇ ತೆಗೆದುಕೊಳ್ಳಿ, ಅದರಲ್ಲಿ ನಮ್ಮ ಬಗ್ಗೆ ಯಾವೆಲ್ಲ ವಿವರಗಳಿಲ್ಲ? ನಮ್ಮ ಜನ್ಮ ದಿನಾಂಕದಿಂದ ಹಿಡಿದು, ಹೆಸರು, ಫೋಟೋ, ಫೋನ್ ನಂಬರ್, ಯಾವ ಶಾಲೆಯಲ್ಲಿ ಯಾವಾಗ ಕಲಿತೆವು, ಯಾವ ಕಾಲೇಜಿನಲ್ಲಿ ಓದಿದೆವು, ಯಾವೆಲ್ಲಾ ಉದ್ಯೋಗಗಳನ್ನು ಬದಲಾಯಿಸಿದೆವು, ಎಲ್ಲಿ, ಯಾವಾಗ ಏನೇನು ಮಾಡಿದೆವು ಎಂಬುದನ್ನೆಲ್ಲಾ ಸೆಲ್ಫೀ ಸಹಿತವಾಗಿ ವಿವರಿಸುತ್ತಿದ್ದೇವೆ. ನಮ್ಮ ಅಪ್ಪ ಅಮ್ಮ ಯಾರು, ನಮ್ಮ ಸಂಗಾತಿ, ಮಕ್ಕಳ ವಿವರ, ಬಂಧುಗಳು, ಮನೆಯ ವಿಳಾಸ ಎಲ್ಲವನ್ನೂ ಆನ್‌ಲೈನ್ ಸಾಮಾಜಿಕ ಜಾಲ ತಾಣಗಳಲ್ಲಿ ಬಟಾಬಯಲು ಮಾಡಿದ್ದೇವೆ.

ನಮ್ಮ ಮಾಹಿತಿಯಷ್ಟೇ ಆದರೆ ಪರವಾಗಿಲ್ಲ, ಆದರೆ ನಮ್ಮನ್ನು ಮೆಚ್ಚಿಕೊಂಡು ಅಂತರಜಾಲದ ಸಾಮಾಜಿಕ ಪ್ರವಾಹದಲ್ಲಿ ಕೈಜೋಡಿಸಿರುವ ಸ್ನೇಹಿತರ ಮಾಹಿತಿಯನ್ನೂ ನಮಗೆ ಅರಿವಿದ್ದೂ ಅರಿವಿಲ್ಲದಂತೆ ಸುಖಾಸುಮ್ಮನೆ ಬಟಾಬಯಲು ಮಾಡುತ್ತಿದ್ದೇವೆ. ಅನಗತ್ಯವಾಗಿ ಬೇರೆಯವರನ್ನು ಟ್ಯಾಗ್ ಮಾಡುವುದು, ಸ್ನೇಹಿತರ ಮನೆಯಲ್ಲಾದ ಕಾರ್ಯಕ್ರಮಗಳ ವಿವರಗಳನ್ನು ಅವರ ಅರಿವಿಗೆ ಬಾರದಂತೆ ಶೇರ್ ಮಾಡುವುದು ಇವೆಲ್ಲವೂ ಪ್ರೈವೆಸಿ ಅಥವಾ ಖಾಸಗಿತನದ ವ್ಯಾಪ್ತಿಯಲ್ಲೇ ಬರುತ್ತವೆ. ಅಂತರಜಾಲ ಕ್ಷೇತ್ರದಲ್ಲಿ ಮಾಹಿತಿಯ ಸ್ಫೋಟವಾಗುತ್ತಿರುವ ಈ ಹಂತದಲ್ಲಿ, ಮಾಹಿತಿಯ ಪ್ರವಾಹದ ವೇಗಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ನಮ್ಮ ವಿವೇಚನೆಯ ಪಾತ್ರ ಸಾಕಷ್ಟು ದೊಡ್ಡದು. ಯಾವುದನ್ನು ಪಬ್ಲಿಕ್ ಆಗಿ ಹಂಚಿಕೊಳ್ಳಬೇಕು, ಯಾವುದನ್ನು ಕೆಲವೊಂದಿಗೆ ಮಾತ್ರವೇ ಶೇರ್ ಮಾಡಿಕೊಳ್ಳಬೇಕು ಎಂಬುದನ್ನು ಯೋಚಿಸಿ ಮುಂದಡಿಯಿಡಬೇಕಾಗುತ್ತದೆ.

ಮುಖ್ಯವಾಗಿ ನಾವು ಗಮನಿಸಬೇಕಾದ ಅಂಶವೆಂದರೆ, ಅಂತರಜಾಲದಲ್ಲಿ ನಾವು ಏನನ್ನು ಶೇರ್ ಮಾಡುತ್ತೇವೋ ಅದನ್ನು ಟ್ರ್ಯಾಕ್ ಮಾಡುವವರೊಬ್ಬರು ಕಾದು ಕುಳಿತಿರುತ್ತಾರೆ ಅಂತ. ‘ಇನ್ನು ನಾಲ್ಕು ದಿನ ರಜಾ ಮಜಾ, ಗೋವಾದಲ್ಲಿ ಫ್ಯಾಮಿಲಿ ಎಂಜಾಯ್‌ಮೆಂಟ್’ ಅಂತ ಗೋವಾಕ್ಕೆ ಹೋದವರು ಕ್ಷಣ ಕ್ಷಣಕ್ಕೆ ಸೆಲ್ಫೀ ತೆಗೆದು ಹಾಕುತ್ತಿದ್ದರೆ, ಅಂಥವರನ್ನೇ ಹಿಂಬಾಲಿಸುತ್ತಿರುವ ಫೇಸ್‌ಬುಕ್‌ನ ಕಳ್ಳ ‘ಫ್ರೆಂಡ್’ ಒಬ್ಬಾತ, ಇನ್ನವರು ನಾಲ್ಕು ದಿನ ಬರಲ್ಲ ಅಂತ ದೃಢಪಡಿಸಿಕೊಂಡಿರುತ್ತಾನೆ. ಈ ಪರಿಯಾಗಿಯೇ ಘಟಿಸಿದ ಅದೆಷ್ಟೋ ಮನೆ ಕಳವು ಪ್ರಕರಣಗಳ ಬಗ್ಗೆ ಪೊಲೀಸರು ತಮ್ಮ ಸಾಮಾಜಿಕ ಮಾಧ್ಯಮಗಳ ಮೂಲಕ ಜನರನ್ನು ಈಗಲೂ ಎಚ್ಚರಿಸುತ್ತಿದ್ದಾರೆ.

ಇತ್ತೀಚೆಗೆ ಮಾಹಿತಿ ತಂತ್ರಜ್ಞಾನವು ಯಾವ ಪರಿಯಾಗಿ ಬೆಳೆದುಬಿಟ್ಟಿದೆಯೆಂದರೆ, ನಮ್ಮ ಫೇಸ್‌ಬುಕ್, ಟ್ವಿಟರ್ ಅಥವಾ ಲಿಂಕ್ಡ್‌ಇನ್ ಪ್ರೊಫೈಲ್‌ನಲ್ಲಿ ನಮ್ಮ ಚಟುವಟಿಕೆಗಳನ್ನು ಆಧರಿಸಿಯೇ ಉದ್ಯೋಗದಾತರು ಉದ್ಯೋಗದ ಆಫರ್ ನೀಡುವಷ್ಟರ ಮಟ್ಟಿಗೆ. ಈ ಸೋಷಿಯಲ್ ಮೀಡಿಯಾ ಪ್ರೊಫೈಲ್ ನೋಡಿಯೇ ನೇಮಕಾತಿ ಮಾಡಿಕೊಳ್ಳುವ ವ್ಯವಸ್ಥೆಯು ನಮ್ಮೂರಿನವರೆಗೂ ತಲುಪಿದೆ ಎಂದರೆ ಅಚ್ಚರಿಯಾಗಬಹುದು. ಆದರೆ ಇದು ನಿಜ. ನೇಮಕಾತಿಯಲ್ಲಿ ನಮ್ಮ ಸೋಷಿಯಲ್ ಮೀಡಿಯಾ ಚಟುವಟಿಕೆಗಳೂ ಮುಖ್ಯವಾಗುವುದರಿಂದ ಎಚ್ಚರಿಕೆಯಿಂದ ಮತ್ತು ಜವಾಬ್ದಾರಿಯುತವಾಗಿ ಈ ಒಂದು ಅತ್ಯಂತ ಉಪಯುಕ್ತ ಟೂಲ್ ಬಳಸಿಕೊಳ್ಳಬೇಕಾಗುತ್ತದೆ. ಇದೊಂದು ಧನಾತ್ಮಕ ಪರಿಣಾಮವಾದರೆ, ಸೋಷಿಯಲ್ ಮೀಡಿಯಾ ಪೋಸ್ಟ್‌ಗಳಿಂದಾಗಿಯೇ ಅದೆಷ್ಟೋ ಜನ ಜೈಲಿಗೆ ಹೋಗಿಲ್ಲ? ವಾರಕ್ಕೊಂದಾದರೂ ಇಂತಹಾ ಪ್ರಕರಣಗಳನ್ನು ನಾವು ಅಲ್ಲಲ್ಲಿ ಓದುತ್ತಿರುತ್ತೇವೆ. ಪರರನ್ನು ನಿಂದಿಸುವುದು, ಸುಳ್ಳು ಸುದ್ದಿ ಹರಡುವುದು, ಬೇರೊಬ್ಬರ ಪ್ರೈವೆಸಿಗೆ ಧಕ್ಕೆ ಉಂಟು ಮಾಡುವುದು… ಇವೆಲ್ಲವೂ ಕಾನೂನಿನ ಕಬಂಧಬಾಹುಗಳಡಿಯೇ ಬರುವುದರಿಂದ, ಯಾರಿಗಾದರೂ ನಿಮ್ಮ ಮೇಲೆ ದ್ವೇಷ ಸಾಧಿಸಬೇಕಿದ್ದರೆ, ನಮ್ಮ ಒಂದು ಪುಟ್ಟ ಬರಹವೂ, ಅದಕ್ಕೆ ಮಾಡಿರುವ ಲೈಕ್ ಕೂಡ ಸಾಕಾಗುತ್ತದೆ ಎಂಬ ಅರಿವು ನಮಗಿರಬೇಕು. ಯಾಕೆಂದರೆ ಸೈಬರ್ ಅಪರಾಧ ಪ್ರಕ್ರಿಯೆಗಳಲ್ಲಿ ಇಂಥ ಕಾನೂನುಗಳು ಸಾಕಷ್ಟಿವೆ. ಈ ಹಿಂದೆ ಮುಂಬಯಿಯಲ್ಲಿ ಬಾಳ ಠಾಕ್ರೆ ನಿಧನರಾದಾಗ ಬಂದ್ ಮಾಡಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಒಂದು ಪೋಸ್ಟ್ ಹಾಕಿದವರು ಮತ್ತು ಅದನ್ನು ಲೈಕ್ ಮಾಡಿದವರನ್ನು ಜೈಲಿಗೆ ತಳ್ಳಿದ ಘಟನೆ ಬಹುಶಃ ಹೆಚ್ಚಿನವರಿಗೆ ನೆನಪಿರಬಹುದು. ಮಾಹಿತಿ ತಂತ್ರಜ್ಞಾನ ಕಾಯಿದೆಯ ಸೆಕ್ಷನ್ 66ಎ ಪರಿಣಾಮವಾಗಿತ್ತು ಇದು. ಆ ಬಳಿಕ ಜನಾಕ್ರೋಶದಿಂದಾಗಿ, ಪ್ರಕರಣವು ಸುಪ್ರೀಂ ಕೋರ್ಟಿನವರೆಗೂ ಹೋದ ನಂತರ, ಕೇಂದ್ರ ಸರಕಾರವು ಈ ಕಾನೂನಿಗೆ ತಿದ್ದುಪಡಿ ತಂದಿತು. ಆದರೂ, ಕಾನೂನಿನ ಬೇರೆ ಬೇರೆ ಅದೆಷ್ಟೋ ಸೆಕ್ಷನ್‌ಗಳಡಿಯಲ್ಲಿ ಬಂಧನವಿನ್ನೂ ಆಗುತ್ತಿದೆ. ಯಾರೂ ತಪ್ಪು ಮಾಡಬಾರದು ಎಂಬುದಷ್ಟೇ ಇದರ ಮುಖ್ಯ ಉದ್ದೇಶ. ಹೀಗಾಗಿ, ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವಾಗಲಂತೂ ಎರಡೆರಡು ಬಾರಿ ಯೋಚಿಸಬೇಕಾಗುತ್ತದೆ.

ಪೋಸ್ಟ್ ಮಾಡುವ ಕಂಟೆಂಟ್ ಬಗ್ಗೆ ಎಚ್ಚರಿಕೆ ವಹಿಸುವುದರ ಹೊರತಾಗಿ, ಫೇಸ್‌ಬುಕ್ ಮೂಲಕ ವಿವಿಧ ಆ್ಯಪ್‌ಗಳಿಗೆ ಲಾಗಿನ್ ಆಗುವಾಗಲೂ ನಿಮ್ಮ ಎಲ್ಲ ಮಾಹಿತಿಯನ್ನೂ ನೀವು ಆ ಥರ್ಡ್ ಪಾರ್ಟಿ ಆ್ಯಪ್‌ಗಳಿಗೆ ಬಿಟ್ಟುಕೊಡುತ್ತೀರಿ ಎಂಬುದು ನೆನಪಿರಲಿ. ಉದಾಹರಣೆಗೆ, ಕೆಲವರ ವಾಲ್‌ಗಳಲ್ಲಿ ಕಂಡುಬರುವ, ‘ನೀವು ಸ್ತ್ರೀ/ಪುರುಷ ಆಗಿದ್ದಿದ್ದರೆ, ಯಾವ ರೀತಿ ಕಾಣಿಸುತ್ತೀರಿ? ನೀವು ಯಾವ ನಟ/ನಟಿಯಂತೆ ಕಾಣಿಸುತ್ತೀರಿ, ಹಿಂದಿನ ಜನ್ಮದಲ್ಲಿ ನಿಮ್ಮನ್ನು ಯಾರು ಪ್ರೀತಿಸಿದ್ದರು… ಕಳೆದ ಜನ್ಮದಲ್ಲಿ ನೀವು ಏನಾಗಿದ್ದಿರಿ…’ ಹೀಗೆ ಏನೋ ಇಲ್ಲಸಲ್ಲದ ವಿಚಾರಗಳನ್ನು ನೋಡಿರಬಹುದು. ಆ ಒಂದು ಪೋಸ್ಟ್‌ನ ಆಕರ್ಷಣೆಯಿಂದಾಗಿ ಫೇಸ್‌ಬುಕ್ ಮೂಲಕ ಬೇರೆಯೇ ವೆಬ್‌ಸೈಟಿಗೆ ಲಾಗಿನ್ ಆಗುತ್ತಾ, ನಮ್ಮ ಫೇಸ್‌ಬುಕ್ ಮಾಹಿತಿಯನ್ನು ನಮಗರಿವಿಲ್ಲದಂತೆಯೇ ಉದಾರವಾಗಿ ದಾನ ಮಾಡುತ್ತೇವೆ ಎಂಬುದರ ಬಗ್ಗೆ ಎಚ್ಚರಿಕೆ ಇರಲಿ.

ಫೇಸ್‌ಬುಕ್ ಮಾಹಿತಿ ಸೋರಿಕೆಯಾಗದಂತಿರಲು:
* ಗೇಮ್ ರಿಕ್ವೆಸ್ಟ್‌ಗಳನ್ನು ಸ್ವೀಕರಿಸಲೇಬೇಡಿ, ಬೇರೆಯವರನ್ನೂ ಆಟಕ್ಕೆ ಕರೆಯಬೇಡಿ
* ಯಾವುದೋ ಗುರುತು ಗೊತ್ತಿಲ್ಲದ ವೆಬ್‌ಸೈಟಿಗೆ ಫೇಸ್‌ಬುಕ್ ಮೂಲಕ ಲಾಗಿನ್ ಆಗಬೇಡಿ
* ಅನಗತ್ಯ ಟ್ಯಾಗ್ ಮಾಡಬೇಡಿ, ಸ್ನೇಹಿತರಿಗೂ ಟ್ಯಾಗ್ ಮಾಡದಂತೆ ಮನವಿ ಮಾಡಿಕೊಳ್ಳಿ
* ಟೈಮ್‌ಲೈನ್‌ನಲ್ಲಿ ಕಂಡುಬರುವ ಲಿಂಕ್‌ಗಳನ್ನು ಕ್ಲಿಕ್ ಮಾಡುವ ಮುನ್ನ ಯೋಚಿಸಿ
* ಮೆಸೆಂಜರ್‌ಗಳಲ್ಲಿಯೂ ಕ್ಲಿಕ್ ಮಾಡಲು ಪ್ರೇರೇಪಿಸುವ ಲಿಂಕ್‌ಗಳು ಬರಬಹುದು, ನಿರ್ಲಕ್ಷಿಸಿ
* ಆಗಾಗ್ಗೆ ನಿಮ್ಮ ಪಾಸ್‌ವರ್ಡ್ ಬದಲಾಯಿಸುತ್ತಾ ಇರಿ. ಸುಲಭದ ಪಾಸ್‌ವರ್ಡ್ ಬೇಡ
* ಮಕ್ಕಳ ಕೈಗೆ ಮೊಬೈಲ್ ಕೊಡುವಾಗ ಪ್ರಮುಖ ಆ್ಯಪ್‌ಗಳಿಗೆ ಲಾಕ್ ಹಾಕಿಕೊಳ್ಳಿ
* ಅನ್ಯರ ಕಂಪ್ಯೂಟರಲ್ಲಿ ಲಾಗಿನ್ ಆಗುತ್ತಿದ್ದರೆ, ಲಾಗೌಟ್ ಆಗಲು ಮರೆಯಲೇಬೇಡಿ
* ಫೇಸ್‌ಬುಕ್ ಲಾಗಿನ್‌ಗೆ 2 ಫ್ಯಾಕ್ಟರ್ ಆಥೆಂಟಿಕೇಶನ್ ವ್ಯವಸ್ಥೆ ಬಳಸಿಕೊಳ್ಳಿ.

ಕೊನೆಯ ಒಂದು ಮಾತು: ನಮ್ಮ ವೈಯಕ್ತಿಕ ಮಾಹಿತಿಯೆಲ್ಲವೂ ಬಟಾಬಯಲಾಗುತ್ತಿದೆ ಎಂದುಕೊಳ್ಳುತ್ತೀರೋ? ಕೆಲವು ಮಾಹಿತಿ ಕೊಡದೇ ಇರುವುದಂತೂ ಅಸಾಧ್ಯವೇ. ಹೀಗಾಗಿ ಫೇಸ್‌ಬುಕ್‌ನಿಂದ ಹೊರಬಂದರೆ ಹೇಗೆ? ಆಲೋಚಿಸಿ.

ಮಾಹಿತಿ@ತಂತ್ರಜ್ಞಾನ ಅಂಕಣ for 26 ಮಾರ್ಚ್ 2018 by ಅವಿನಾಶ್ ಬಿ.

Avinash B

Avinash B. Tech Writer, Columnist, Working as Online media Journalist for more than two decades. Passionate about Technology and Gadgets. Yakshagana and Music are passion.

Recent Posts

Breaking News by Ai Anchor! ನಿಮ್ಮದೇ ಎಐ ಆ್ಯಂಕರ್ ಮಾಡುವುದು ಹೇಗೆ?

AI Anchor: ಎಐ ಅವತಾರಗಳನ್ನು ಸೃಷ್ಟಿಸಲು ಅಕ್ಷರಶಃ 'ನಯಾಪೈಸೆ' ವ್ಯಯಿಸಬೇಕಾಗಿಲ್ಲ. ಸಾಮಾನ್ಯ ವೆಬ್ ಬ್ರೌಸಿಂಗ್ ತಿಳಿದವರೂ ಇದನ್ನು ಮಾಡಬಹುದು.

2 months ago

MacBook Air Review: 15 ಇಂಚು ಸ್ಕ್ರೀನ್‌ನ ಮ್ಯಾಕ್‌ಬುಕ್ ಏರ್ – ಸ್ಲಿಮ್ ಮತ್ತು ಫಿಟ್

MacBook Air Review: 15 ಇಂಚಿನ ಮ್ಯಾಕ್‌ಬುಕ್ ಏರ್ - ದೊಡ್ಡದಾದ ಡಿಸ್‌ಪ್ಲೇ ಹಾಗೂ ತೆಳು ಮತ್ತು ಹಗುರ -…

2 months ago

Artificial Intelligence: ಸಹಜ ಬುದ್ಧಿಮತ್ತೆಗೆ ಸವಾಲು ‘ಯಾಂತ್ರಿಕ’ ಬುದ್ಧಿಮತ್ತೆ

Artificial Intelligence: ಪ್ರಥಮ ರೋಬೊ ವಾರ್ತಾವಾಚಕಿ ಲೀಸಾ ಅಲ್ಲ. 2018ರಲ್ಲಿ ಚೀನಾದ ಪ್ರಮುಖ ಸುದ್ದಿ ಏಜೆನ್ಸಿಯಾಗಿರುವ ಶಿನುವಾ (Xinhua) ಮೊದಲ…

2 months ago

ಹಳೆಯ Android ನಿಂದ ಹೊಸ Apple iPhone ಗೆ ಬದಲಾಗುವುದು ಈಗ ಸುಲಭ

ಆಂಡ್ರಾಯ್ಡ್ ಫೋನ್‌ನಿಂದ Apple iPhone ಗೆ ಬದಲಾಗುವುದು ಸುಲಭ. ಅದಕ್ಕೊಂದು ಆ್ಯಪ್ ಕೂಡ ಲಭ್ಯವಿದೆ.

3 months ago

ChatGPT ಗೆ ಎದುರಾಳಿ Google Bard

ಚಾಟ್-ಜಿಪಿಟಿ ಸಂಭಾಷಣಾ ತಂತ್ರಾಂಶಕ್ಕೆ ಸಮರ್ಥವಾಗಿ ಸವಾಲೊಡ್ಡುತ್ತಿದೆ ಗೂಗಲ್‌ನ ಬಾರ್ಡ್ (Google Bard).

3 months ago

Govo GoSorround 950 ಸೌಂಡ್‌ಬಾರ್: ಮನೆಯನ್ನೇ ಥಿಯೇಟರ್ ಆಗಿಸುವ ಸ್ಪೀಕರ್ ಸಿಸ್ಟಂ

Govo GoSorround 950: ಗೋವೊ ಗೋಸರೌಂಡ್ 950 ಸೌಂಡ್‌ಬಾರ್ ಬೆಲೆ ₹24,999.

3 months ago