ಫೇಸ್‌ಬುಕ್, ವಾಟ್ಸಾಪ್ ‘ಶಾಕಿಂಗ್’: ಬಂದದ್ದೆಲ್ಲವೂ ನಿಜವಲ್ಲ!

ಫೇಸ್‌ಬುಕ್ ಬಳಸುತ್ತಿರುವವರಿಗೆ ಗೊತ್ತಿದೆ, ‘ಶಾಕಿಂಗ್ ನ್ಯೂಸ್, ಬೆಚ್ಚಿ ಬೀಳಿಸೋ ಸುದ್ದಿ ಇಲ್ಲಿದೆ, ನೋಡಿ, ಕ್ಲಿಕ್ ಮಾಡಿ’ ಎಂಬ ಒಕ್ಕಣೆಯುಳ್ಳ ಅದೆಷ್ಟೋ ಲಿಂಕ್‌ಗಳನ್ನು ನೋಡಿರುತ್ತೀರಿ. ಹತ್ತೇ ದಿನಗಳಲ್ಲಿ ತೂಕ ಇಳಿಸಿಕೊಳ್ಳಿ, ಮೂರೇ ದಿನದಲ್ಲಿ 3 ಕೆಜಿ ಕಳೆದುಕೊಳ್ಳಿ, ಒಂದೇ ವಾರದಲ್ಲಿ ಮಧುಮೇಹದಿಂದ ಮುಕ್ತಿ ಪಡೆಯಿರಿ ಎನ್ನುತ್ತಾ ‘ಹೇಗೆ ಎಂದು ತಿಳಿಯಲು ‘ಶೇರ್ ಮಾಡಿ ಮತ್ತು ಕ್ಲಿಕ್ ಮಾಡಿ’ ಅಂತ ಒಕ್ಕಣೆಯೂ ಇರುತ್ತದೆ. ಇಂಥವುಗಳ ಹಾವಳಿ ಇಂದು ಹೆಚ್ಚಾಗಿಬಿಟ್ಟಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಹರಿದುಬರುವ ಮಾಹಿತಿ ಪ್ರವಾಹದಲ್ಲಿ ಎಲ್ಲವೂ ನಿಜವಾಗಿರುವುದಿಲ್ಲ ಎಂಬುದು ನಾವು ಪ್ರತಿ ಕ್ಷಣವೂ ತಿಳಿದಿರಬೇಕಾದ ವಿಚಾರ. ದಾರಿ ತಪ್ಪಿಸುವ, ನಮ್ಮ ನಂಬಿಕೆಯನ್ನೇ ಬುಡಮೇಲು ಮಾಡಬಲ್ಲ ಅದೆಷ್ಟೋ ಜಾಲತಾಣಗಳು ಇಂದು ಹುಟ್ಟಿಕೊಂಡಿವೆ. ಅಧಿಕೃತವಲ್ಲದ, ವೈಜ್ಞಾನಿಕವಾಗಿ ದೃಢಪಟ್ಟಿರದ ಅಥವಾ ನಿಜವೇ ಅಲ್ಲದ ಸುದ್ದಿಗಳನ್ನು ಹರಡುವ ಇಂಥ ತಾಣಗಳನ್ನು ಕೆಲವು ಕನ್ನಡಿಗರೇ ನಡೆಸುತ್ತಿದ್ದಾರೆ ಎನ್ನುವುದು ಕೂಡ ನಾವು ನಂಬಲೇಬೇಕಾದ ಸತ್ಯ.

ಇದನ್ನು ಹೇಳಲು ಕಾರಣವಿದೆ. ಇತ್ತೀಚೆಗೆ ‘ಬಿಗ್ ಬ್ರೇಕಿಂಗ್ ನ್ಯೂಸ್’ ಅಂತ ಕನ್ನಡದಲ್ಲಿ ಖ್ಯಾತ ನಟಿಯೊಬ್ಬರನ್ನು ಹೆಸರಿಸಿ, ‘ಅವರು ಈಗೇನು ಮಾಡುತ್ತಿದ್ದಾರೆ? ತಿಳಿದರೆ ಶಾಕ್ ಆಗುವಿರಿ’ ಅಷ್ಟೇ ಅಲ್ಲದೆ, ‘ವಿವರ ತಿಳಿಯಲು ಈ ಶಾಕಿಂಗ್ ವೀಡಿಯೋ ಶೇರ್ ಮಾಡಿದ ಬಳಿಕ ಕ್ಲಿಕ್ ಮಾಡಿ’ ಎನ್ನೋ ಆದೇಶವೂ ಜತೆಗಿರುತ್ತದೆ. ಇದರಿಂದ ಪ್ರಭಾವಿತರಾದ ಓದುಗರು ಲಿಂಕ್ ಕ್ಲಿಕ್ ಮಾಡಲು ಹೋದರೆ, ಅಲ್ಲೇನಿತ್ತು? ಆ ನಟಿಯ ಸಾಮಾನ್ಯ ಜೀವನ ಚರಿತ್ರೆಯ ಮೇಲೆ ಬೆಳಕು ಚೆಲ್ಲಲಾಗಿತ್ತು. ಅದರಲ್ಲಿಯೂ ‘ವಿಧಿಯಾಟ’ ಮುಂತಾದ ಭಾವನಾತ್ಮಕ ಪದಗಳನ್ನು ಬಳಸಿ, ‘ಏನು ಮಾಡಿದರು ಗೊತ್ತೇ’ ಅಂತೆಲ್ಲ ಕೇಳುತ್ತಾ ಓದುಗರನ್ನು ಇಡೀ ವೀಡಿಯೋ ನೋಡುವಂತೆ ಹಿಡಿದಿಡಲು ಪ್ರಯತ್ನಿಸಲಾಗಿತ್ತು. ಅಸಲಿಗೆ ಇದು ನೈಜ ವೀಡಿಯೋ ಅಲ್ಲ. ಆ ನಟಿಯ ಹಳೆಯ ಕೆಲವು ಮಾದಕ ಭಂಗಿಯ, ಅಳುವಿನ ಫೋಟೋಗಳನ್ನೆಲ್ಲ ಮಿಶ್ರಣ ಮಾಡಿ ವೀಡಿಯೋ ರೂಪಕ್ಕೆ ಪರಿವರ್ತಿಸಲಾಗಿತ್ತು. ಇದನ್ನು ವೀಕ್ಷಿಸಿದವರೆಷ್ಟು ಮಂದಿ? ಸುಮಾರು ಐದು ತಿಂಗಳಲ್ಲಿ ವೀಡಿಯೋ ನೋಡುಗರ ಸಂಖ್ಯೆ 16.5 ಲಕ್ಷ ದಾಟಿದೆ. ಆದರೆ, ಏನೋ ‘ಶಾಕಿಂಗ್’ ಸುದ್ದಿ ನೋಡಲು ಹೋದವರ ಆಕ್ರೋಶವೆಲ್ಲವೂ ಅಲ್ಲಿ ಕಾಮೆಂಟ್‌ಗಳ ರೂಪದಲ್ಲಿ ಕಾಣಸಿಗುತ್ತದೆ. “ದರಿದ್ರ ವೀಡಿಯೋ, ಏನಿದೆ ಇದರಲ್ಲಿ ಶಾಕಿಂಗ್, ಕನ್ನಡಿಗರ ವಿಶ್ವಾಸವನ್ನು ಹೀಗೆಲ್ಲ ದುರ್ಬಳಕೆ ಮಾಡಿಕೊಳ್ಳಬೇಡಿ, ಜನ ಇಂಟರ್ನೆಟ್ ಬಗ್ಗೆ ಆಸಕ್ತಿಯನ್ನೇ ಕಳೆದುಕೊಂಡಾರು” ಅಂತೆಲ್ಲ ಹಲವು ಪ್ರಜ್ಞಾನಂತರು ಕಾಮೆಂಟ್ ಮಾಡಿದ್ದಾರೆ.

ಏನಿವು?
ಇದೊಂದು ಇಂಟರ್ನೆಟ್‌ನಲ್ಲಿ ಹಣ ಮಾಡುವ ವ್ಯವಸ್ಥೆಯೊಂದರ ದುರುಪಯೋಗವಷ್ಟೇ. ವೀಡಿಯೋಗಳನ್ನು ಜನ ಹೆಚ್ಚು ನೋಡಿದಷ್ಟೂ ಗೂಗಲ್ ಮೂಲಕ ಹಣ ಸಂಪಾದಿಸುವ ವ್ಯವಸ್ಥೆಯೊಂದಿದೆ. ಅದು ಒಳ್ಳೆಯ ವಿಷಯಗಳಿಗಾಗಿ ಉಪಯೋಗವಾದರೆ ಭಾಷೆಯೂ ಆನ್‌ಲೈನ್‌ನಲ್ಲಿ ಬೆಳೆಯುತ್ತದೆ. ಆದರೆ ತಪ್ಪು ಮಾಹಿತಿಗಳನ್ನು ನೀಡುತ್ತಾ, ಆಕರ್ಷಕ ತಲೆಬರಹ ಕೊಟ್ಟು ಜನರನ್ನು ಕ್ಲಿಕ್ ಮಾಡುವಂತೆ ಪ್ರೇರೇಪಿಸುವಂತೆ ಮಾಡುವ ದಂಧೆಯೊಂದು ಅಂತರಜಾಲದಲ್ಲಿ ಇತ್ತೀಚೆಗೆ ಹೆಚ್ಚಾಗತೊಡಗಿದೆ. ನಮಗೆ ಸಿಕ್ಕ ಒಳ್ಳೆಯ ಟೂಲ್ ಒಂದರ ಕೆಟ್ಟ ಉಪಯೋಗದ ಪರಿಯಿದು. ಈಗಂತೂ ಜನರನ್ನು ಅತ್ಯಂತ ಹೆಚ್ಚು ಕಾಡುತ್ತಿರುವ ಎರಡು ಅಂಶಗಳೆಂದರೆ, ‘ತೆಳ್ಳಗಾಗುವುದು ಅಥವಾ ತೂಕ ಇಳಿಸಿಕೊಳ್ಳುವುದು ಹೇಗೆ’ ಮತ್ತು ‘ಮಧುಮೇಹ (ಶುಗರ್) ಮುಕ್ತರಾಗುವುದು ಹೇಗೆ’? ಇದನ್ನೇ ಬಂಡವಾಳವಾಗಿಸಿ ‘ಹತ್ತೇ ದಿನಗಳಲ್ಲಿ 10 ಕೆಜಿ ತೂಕ ಕಳೆದುಕೊಳ್ಳಿರಿ, ಎರಡೇ ವಾರದಲ್ಲಿ ಶುಗರ್ ಮಂಗಮಾಯ’ ಅಂತೆಲ್ಲ ಬಣ್ಣಬಣ್ಣದ ಮಾತುಗಳಿಂದ ಜನರ ಗಮನ ಸೆಳೆಯಲಾಗುತ್ತದೆ. ಅದರಲ್ಲಿ ನೀಡಲಾಗುವ ಸಲಹೆಗಳಿಗೆ ಯಾವುದೇ ವೈದ್ಯಕೀಯ ತಳಹದಿಯೂ ಇರುವುದಿಲ್ಲ.

ಫೇಸ್‌ಬುಕ್‌ನಲ್ಲಿ ಮಾತ್ರವಲ್ಲದೆ ವಾಟ್ಸಾಪ್‌ನಲ್ಲೂ ಕ್ಲಿಕ್ ಮಾಡುವಂತೆ ಜನರನ್ನು ಪ್ರೇರೇಪಿಸುವ ಸಾಕಷ್ಟು ಲಿಂಕ್‌ಗಳು ಬರುತ್ತಿರುತ್ತವೆ. ಇದನ್ನು ಕನಿಷ್ಠ 10 ಮಂದಿಗೆ ಅಥವಾ 10 ಗ್ರೂಪಿಗೆ ಶೇರ್ ಮಾಡಿದರೆ, ನಿಮ್ಮ ಖಾತೆಗೆ ಇಂತಿಷ್ಟು ಹಣ ಜಮೆಯಾಗುತ್ತವೆ ಎಂದೋ, ನಿಮ್ಮ ಮೊಬೈಲ್‌ಗೆ ಸಾವಿರ ರೂಪಾಯಿ ರೀಚಾರ್ಜ್ ಆಗಿರುತ್ತದೆ ಅಂತಲೋ ಆಮಿಷವನ್ನೂ ಒಡ್ಡಲಾಗುತ್ತದೆ. ಇವೆಲ್ಲವೂ ನಕಲಿ ಸಂದೇಶಗಳು.

ಅವರಿಗೇನು ಲಾಭ…
ಜನರು ಕ್ಲಿಕ್ ಮಾಡುವಂತೆ ಪ್ರೇರೇಪಿಸುವುದರಿಂದ ಅವರಿಗೇನು ಲಾಭ? ಯೂಟ್ಯೂಬ್ ವೀಡಿಯೋಗಳನ್ನು ಎಷ್ಟು ಜನ ವೀಕ್ಷಿಸಿದ್ದಾರೆ ಎಂಬುದರ ಆಧಾರದಲ್ಲಿ, ಜತೆಗೆ ಅದರಲ್ಲಿ ಗೂಗಲ್ ಮೂಲಕ ಅಳವಡಿಕೆಯಾಗಿರುವ ಜಾಹೀರಾತನ್ನು ಯಾರಾದರೂ ಕ್ಲಿಕ್ ಮಾಡಿದರೆ, ಅದರ ಆಧಾರದಲ್ಲಿಯೂ ವೀಡಿಯೋದ ಒಡೆಯರಿಗೆ ಗೂಗಲ್ ಹಣ ಪಾವತಿಸುತ್ತದೆ. ಇದಕ್ಕೆ ಗೂಗಲ್ ಆ್ಯಡ್‌ಸೆನ್ಸ್ ಎಂಬ ಖಾತೆ ಹೊಂದಿರಬೇಕಾಗುತ್ತದೆ. ಸ್ವಂತ ವೀಡಿಯೋ ಆಗಿರಬೇಕು. ಕ್ಲಿಕ್ ಹೆಚ್ಚಿಸಿಕೊಂಡಷ್ಟೂ ಹಣ ಸಂಪಾದನೆ ಜಾಸ್ತಿ. ಇದಕ್ಕಾಗಿಯೇ ‘ಕ್ಲಿಕ್ ಮಾಡಿ, ಶೇರ್ ಮಾಡಿ’ ಎಂಬ ಒಕ್ಕಣೆ.

ಯೂಟ್ಯೂಬ್‌ನಲ್ಲಿ ಒಳ್ಳೆಯ ವಿಚಾರಗಳನ್ನು ಹಂಚಿಕೊಳ್ಳುತ್ತಾ ಹಣ ಸಂಪಾದಿಸುವ ಸಾಕಷ್ಟು ಮಂದಿಯೂ ಇದ್ದಾರೆ. ಕಿರು ಚಿತ್ರಗಳು, ಸಾಕ್ಷ್ಯಚಿತ್ರಗಳು, ಒಳ್ಳೆಯ ಮಾಹಿತಿ ಮುಂತಾದವುಗಳು ಜನರಿಗೂ ಉಪಯುಕ್ತ. ಆದರೆ ಕೇವಲ ಹಣ ಮಾಡುವುದರ ಮೇಲಷ್ಟೇ ಗಮನ ಹರಿಸುವ ಸ್ಪ್ಯಾಮ್ ಸಂದೇಶಕಾರರಿಂದಾಗಿ ಆನ್‌ಲೈನ್ ಜಗತ್ತು ಮಲಿನವಾಗುತ್ತಿದೆ. ಉದಾಹರಣೆಗೆ, ಜಾಂಡೀಸ್‌ಗೆ ನಿಮ್ಮೂರಿನ ವೈದ್ಯರೊಬ್ಬರು ಕೊಟ್ಟ ಔಷಧ ಒಳ್ಳೆಯ ಪರಿಣಾಮ ಬೀರಿದೆ, ಅದನ್ನು ನಾವು ಸ್ನೇಹಿತರೊಂದಿಗೆ ಹಂಚಿಕೊಳ್ಳಲೆಂದು ಮಾಡಿದ ವೀಡಿಯೋವನ್ನು ವೀಕ್ಷಿಸುವ ಜನರ ಸಂಖ್ಯೆ ನೂರರ ಆಸುಪಾಸಿದ್ದರೆ, ಅಲಂಕಾರಭರಿತವಾದ ಮಾತುಗಳಿಂದ ಜನರನ್ನು ಕ್ಲಿಕ್ ಮಾಡುವಂತೆ ಪ್ರೇರಣೆ ನೀಡುವ ಒಕ್ಕಣೆಯುಳ್ಳ ವೀಡಿಯೋ ವೀಕ್ಷಕರ ಸಂಖ್ಯೆ ಹತ್ತು ಲಕ್ಷ ದಾಟುತ್ತದೆ. ಸ್ಪ್ಯಾಮ್ ವೀಡಿಯೋಗಳು ಹಾಗೂ ಫೇಕ್ ಸುದ್ದಿಗಳ ಹಾವಳಿ ಯಾವ ಮಟ್ಟಕ್ಕೆ ಬೆಳೆದುಬಿಟ್ಟಿದೆ ಎಂಬುದಕ್ಕಿದು ಸಾಕ್ಷಿ.

ನಾವೇನು ಮಾಡಬೇಕು?
ಲಿಂಕ್ ಕ್ಲಿಕ್ ಮಾಡುವ ಮೊದಲು ಒಂದರೆಕ್ಷಣ ಯೋಚಿಸಿ. ಕೆಲವು ಲಿಂಕ್‌ಗಳನ್ನು ಕ್ಲಿಕ್ ಮಾಡಿದರಂತೂ ಮಾಲ್‌ವೇರ್ (ಸಾಮಾನ್ಯವಾಗಿ ಹೇಳುವುದಾದರೆ ಕಂಪ್ಯೂಟರ್ ವೈರಸ್) ನಿಮ್ಮ ಸಾಧನಕ್ಕೆ ಡೌನ್‌ಲೋಡ್ ಆಗಿ, ಮಾಡಬಾರದ ಅವಾಂತರಗಳನ್ನು ಮಾಡಬಹುದು. ಅದರ ಹೊರತಾಗಿ, ನಿಮ್ಮ ಆರೋಗ್ಯದ ಬಗ್ಗೆ ನೀವೇ ಎಚ್ಚರಿಕೆ ತೆಗೆದುಕೊಳ್ಳಬೇಕೇ ಹೊರತು, ದೃಢೀಕೃತವಲ್ಲದ ವೆಬ್ ತಾಣಗಳ ಲಿಂಕ್‌ಗಳಲ್ಲಿರುವಂತೆ ಮಾಡಲು ಹೋಗಿ ಇದ್ದ ಆರೋಗ್ಯವನ್ನೂ ಕೆಡಿಸಿಕೊಳ್ಳದಿರಿ. ಅದೇ ರೀತಿ, ನಿಮ್ಮ ಫೇವರಿಟ್ ವ್ಯಕ್ತಿಗಳ (ನಟ, ನಟಿಯರು ಮುಂತಾದ ಸೆಲೆಬ್ರಿಟಿಗಳ) ಬಗ್ಗೆ ‘ಶಾಕಿಂಗ್, ಬೆಚ್ಚಿ ಬೀಳುವ’ ಸುದ್ದಿ ಇಲ್ಲಿದೆ ಅಂತ ಬಂದಾಗ, ಅಂಥವನ್ನು ಯಾವ ವೆಬ್ ಜಾಲತಾಣ ವರದಿ ಮಾಡಿದೆ ಎಂಬುದನ್ನು ನೋಡಿ. ಈ ಫೇಕ್ ಸುದ್ದಿಗಳನ್ನು ಅಥವಾ ಇರುವ ಸುದ್ದಿಗಳಿಗೇ ಉಪ್ಪು-ಹುಳಿ-ಖಾರ ಹಚ್ಚಿ ಕ್ಲಿಕ್ ಮಾಡುವಂತೆ ಪ್ರೇರೇಪಿಸುವ ಜಾಲತಾಣಗಳನ್ನು ನಿರ್ಲಕ್ಷಿಸಿಬಿಡಿ. ಅಲ್ಲಿರುವ ಮಾಹಿತಿ ಸುಳ್ಳು ಎಂದು ಗೊತ್ತಾದರೆ, ಅಂಥವನ್ನು ಯೂಟ್ಯೂಬ್ ಅಥವಾ ಫೇಸ್‌ಬುಕ್‌ಗೆ ದೂರು ನೀಡುವ ವ್ಯವಸ್ಥೆಯೂ ಇದೆ. ವಿಜಯ ಕರ್ನಾಟಕ ಸಹಿತವಾಗಿ ವಿಶ್ವಾಸಾರ್ಹ ಸುದ್ದಿ, ಮಾಹಿತಿ ನೀಡುವ ಜಾಲತಾಣಗಳನ್ನಷ್ಟೇ ಅನುಸರಿಸಿ.

ತಪ್ಪು ಸಂದೇಶ ಹರಡುವ ಜಾಲತಾಣಗಳು ಬೆಳೆಯದಂತೆ ಮಾಡುವುದು ಜಾಗೃತ ಕನ್ನಡಿಗರ ಜವಾಬ್ದಾರಿ. ಕ್ಲಿಕ್ ಮಾಡಿದಷ್ಟೂ ಸ್ಪ್ಯಾಮ್ ಸಂದೇಶಗಳಿಗೆ ಪ್ರೋತ್ಸಾಹಿಸಿದಂತಾಗುತ್ತದೆ. ಎಚ್ಚರ ವಹಿಸದಿದ್ದರೆ ಅಂತರಜಾಲದಲ್ಲಿ ಕನ್ನಡದ ಕಂಟೆಂಟ್ ಇಂಥ ಫೇಕ್ ಮಾಹಿತಿಗಳಿಂದಲೇ ತುಂಬಿಹೋಗುವ ಅಪಾಯವಿದೆ. ಹೀಗಾಗಿ ಕನ್ನಡ ಅಂತರಜಾಲ ಲೋಕವನ್ನು ಶುಚಿಯಾಗಿಡಲು ಶ್ರಮಿಸೋಣ.

ಮಾಹಿತಿ@ತಂತ್ರಜ್ಞಾನ ಅಂಕಣ for 12 ಮಾರ್ಚ್ 2018 by ಅವಿನಾಶ್ ಬಿ.

Avinash B

Avinash B. Tech Writer, Columnist, Working as Online media Journalist for more than two decades. Passionate about Technology and Gadgets. Yakshagana and Music are passion.

Recent Posts

ಒಂದೇ ಫೋನ್‌ನಲ್ಲಿ ಎರಡು WhatsApp ಖಾತೆ ಬಳಸುವುದು ಹೇಗೆ?

ಕಳೆದ ಅಕ್ಟೋಬರ್ 19ರಂದು ಮೆಟಾ ಒಡೆತನದ WhatsApp ಸಂಸ್ಥೆಯೇ ತನ್ನ ಆ್ಯಪ್‌ಗೆ ಹೊಸ ಅಪ್‌ಡೇಟ್ ನೀಡಿದ್ದು, ಎರಡು ವಾಟ್ಸ್ಆ್ಯಪ್ ಖಾತೆಗಳನ್ನು…

3 months ago

AI Images: Text ಬಳಸಿ ಚಿತ್ರ ತಯಾರಿಸುವುದು ಹೇಗೆ?

AI Images: ನಮ್ಮ ಕಲ್ಪನೆಯನ್ನು ಎಐ ಎಂಜಿನ್‌ಗೆ ಟೆಕ್ಸ್ಟ್ (ಪಠ್ಯ) ಮೂಲಕ ಊಡಿಸಿದರೆ ಸಾಕು, ಕ್ಷಣ ಮಾತ್ರದಲ್ಲಿ ನೀವಂದುಕೊಂಡ ಚಿತ್ರವೊಂದು…

4 months ago

ಬ್ರಾಡ್‌ಬ್ಯಾಂಡ್ ವೇಗ: ಎಂಬಿಪಿಎಸ್ ಎಂದರೆ ಏನು? ನೀವು ಯಾಮಾರುವುದು ಎಲ್ಲಿ?

ಹಾರ್ಡ್ ಡ್ರೈವ್ ಅಥವಾ ಸ್ಟೋರೇಜ್ ಡ್ರೈವ್‌ಗಳಲ್ಲಿರುವ ಫೈಲ್‌ಗಳ ವಿನಿಮಯದ ಸಂದರ್ಭದಲ್ಲಿ ಬಳಸುವುದು ಮೆಗಾಬೈಟ್ಸ್ ಎಂಬ ಪ್ರಮಾಣವನ್ನು. ಇಂಟರ್ನೆಟ್ ವೇಗವನ್ನು ಅಳೆಯುವುದು…

4 months ago

Apple iPhone 15 Plus Review: ಪ್ರೊ ಮಾದರಿಗಳ ವೈಶಿಷ್ಟ್ಯವಿರುವ ಐಫೋನ್ 15 ಪ್ಲಸ್

Apple iPhone 15 Plus Review: ಲೈಟ್ನಿಂಗ್ ಪೋರ್ಟ್ ಬದಲು ಟೈಪ್ ಸಿ ಚಾರ್ಜಿಂಗ್ ಪೋರ್ಟ್, ಡೈನಮಿಕ್ ಐಲೆಂಡ್, ಹೊಸ…

5 months ago

Type in Kannada: ಐಫೋನ್, ಆಂಡ್ರಾಯ್ಡ್ ಫೋನ್‌ಗಳಲ್ಲಿ ಕನ್ನಡ ಟೈಪಿಂಗ್ ಈಗ ಮತ್ತಷ್ಟು ಸುಲಭ

Type in Kannada: ಗೂಗಲ್‌ನ ಆಂಡ್ರಾಯ್ಡ್ ಹಾಗೂ ಆ್ಯಪಲ್‌ನ ಐಫೋನ್ ಸ್ಮಾರ್ಟ್‌ಫೋನ್‌ಗಳಲ್ಲಿ ಕನ್ನಡ ಟೈಪಿಂಗ್ ಸುಲಭವಾಗಿಸುವ ಸಾಕಷ್ಟು ಖಾಸಗಿ ಕೀಬೋರ್ಡ್…

5 months ago

iPhone 15 Pro Max Review: ಗೇಮರ್‌ಗಳಿಗೆ ಹಬ್ಬ – ಆ್ಯಪಲ್‌ನ ಶಕ್ತಿಶಾಲಿ, ಐಷಾರಾಮಿ ಸಾಧನ

iPhone 15 Pro Max Review: ವಿನೂತನವಾದ ಟೈಟಾನಿಯಂ ಚೌಕಟ್ಟು ಐಷಾರಾಮದ ಅನುಭವ. ಲೈಟ್ನಿಂಗ್ ಪೋರ್ಟ್ ಬದಲು ಯುಎಸ್‌ಬಿ ಸಿ…

5 months ago