ಯಕ್ಷಗಾನ ಮೇಳಗಳ ತಿರುಗಾಟಕ್ಕೆ ಬ್ರೇಕ್ ಬಿದ್ದಾಗ ಕಲಾವಿದರೆಲ್ಲರೂ ಮನೆ ಸೇರಬೇಕಾಯಿತು. ಜನತಾ ಕರ್ಫ್ಯೂ ಹಿಂದಿನ ದಿನವಾದ ಮಾ.21ರ ಶನಿವಾರ ಮನೆಯಲ್ಲಿ ಕೂತಿದ್ದಾಗ ಧರ್ಮಸ್ಥಳ ಯಕ್ಷಗಾನ ಮೇಳದ ಭಾಗವತರೂ, ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ, ಕಾಸರಗೋಡು – ಇದರ ಮುಖ್ಯಸ್ಥರೂ ಆಗಿರುವ ಸಿರಿಬಾಗಿಲು ರಾಮಕೃಷ್ಣ ಮಯ್ಯ ಅವರಿಗೆ ಸೋಷಿಯಲ್ ಮೀಡಿಯಾದಲ್ಲಿ ಬರುತ್ತಿರುವ ಸುಳ್ಳು ಸುದ್ದಿ, ಸುಳ್ಳು ಮಾಹಿತಿ ಇತ್ಯಾದಿಯನ್ನು ನೋಡಿ ಸುಮ್ಮನಿರಲಾಗಲಿಲ್ಲ. ಈ ಬಗ್ಗೆ ಜಾಗೃತಿ ಮೂಡಿಸಬಾರದೇಕೆ ಎಂದು ಯೋಚಿಸಿದಾಗ ಅವರ ಜೊತೆ ಕೈಜೋಡಿಸಿದವರು ಇನ್ನೊಬ್ಬ ಮೇರು ಕಲಾವಿದ ಮಧೂರು ರಾಧಾಕೃಷ್ಣ ನಾವಡರು.
ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ, ಪ್ರಸಂಗಕರ್ತ ಎಂ.ಎ.ಹೆಗಡೆ ಹಾಗೂ ಹಿರಿಯ ಪ್ರಸಂಗಕರ್ತ, ಕವಿ ಶ್ರೀಧರ್ ಡಿ.ಎಸ್. ಅವರು ಕೊರೊನಾ ಜಾಗೃತಿಗಾಗಿ ಎರಡು ದಿನಗಳ ಹಿಂದಷ್ಟೇ ಕೆಲವು ಯಕ್ಷಗಾನ ಹಾಡುಗಳನ್ನು ರಚಿಸಿ ಸಾಮಾಜಿಕ ಜಾಲತಾಣಗಳಿಗೆ ಬಿಟ್ಟಿದ್ದರು. ಪ್ರಜಾವಾಣಿ ಈ ಬಗ್ಗೆ ವರದಿ ಮಾಡಿದ ತಕ್ಷಣ ಹಲವಾರು ಭಾಗವತರು ಈ ಹಾಡುಗಳನ್ನು ಹಾಡಿ, ವಾಟ್ಸ್ಆ್ಯಪ್ ಮೂಲಕ ಜನರಿಗೆ ತಲುಪಿಸಿದ್ದರು. ಈ ಹಿನ್ನೆಲೆಯಲ್ಲಿ, ಎಂ.ಎ.ಹೆಗಡೆ ಹಾಗೂ ಶ್ರೀಧರ ಡಿ.ಎಸ್. ಅವರನ್ನು ಸಂಪರ್ಕಿಸಿದ ರಾಮಕೃಷ್ಣ ಮಯ್ಯರ ಪ್ರಯತ್ನದ ಫಲವಾಗಿ ಮಧ್ಯಾಹ್ನದ ವೇಳೆಗೆ 14-15 ಹಾಡುಗಳುಳ್ಳ, ಒಂದು ಗಂಟೆಯೊಳಗಿನ ಅವಧಿಯ ಯಕ್ಷಗಾನ ಕಥಾನಕವೊಂದು ಸಿದ್ಧವಾಯಿತು. ಅಕಾಡೆಮಿ ಸದಸ್ಯ ಯೋಗೀಶ್ ರಾವ್ ಚಿಗುರುಪಾದೆ ಅವರೂ ಸಲಹೆ ಸೂಚನೆ ನೀಡಿದರು. ಕೆಲವು ಹಾಡುಗಳನ್ನು ಸ್ವತಃ ಮಯ್ಯರೇ ರಂಗದಲ್ಲಿ ಸಾಂದರ್ಭಿಕವಾಗಿ ರಚಿಸಿ ಹಾಡಲು ನಿರ್ಧರಿಸಿದರು. ತಕ್ಷಣವೇ ಪ್ರಸಿದ್ಧ ಕಲಾವಿದರಾದ ವಾಸುದೇವ ರಂಗ ಭಟ್, ಜಯಪ್ರಕಾಶ ಶೆಟ್ಟಿ ಪೆರ್ಮುದೆ ಅವರನ್ನು ಕರೆಸಿಕೊಂಡರು. ದೇವಕಾನ ಪೈವಳಿಕೆ ಗಣೇಶ ಕಲಾವೃಂದವು ಉಚಿತವಾಗಿ ವೇಷಭೂಷಣ ಒದಗಿಸಿತು. ಕಲಾವೃಂದದ ಶಂಕರ ಭಟ್ ನಿಡುವಜೆ, ಉದಯ ಕಂಬಾರು, ಶ್ರೀಮುಖ ಮಯ್ಯ ಅವರು ಚೆಂಡೆ, ಮದ್ದಳೆ, ಚಕ್ರತಾಳದ ಸಾಥ್ ನೀಡಿದರು.
ಸಂಜೆಯ ವೇಳೆಗೆ ತತ್ಕಾಲೀನ ವೇದಿಕೆಯನ್ನು ಸಿದ್ಧಪಡಿಸಿ 57 ನಿಮಿಷಗಳ ಕೊರೊನಾಸುರ ಕಾಳಗ ಎಂಬ ಕಾಲ್ಪನಿಕ ಕಥಾನಕವನ್ನು ನೀರ್ಚಾಲಿನ ವರ್ಣ ಸ್ಟುಡಿಯೋ ಚಿತ್ರೀಕರಣ ನಡೆಸಿತು. ರಾತ್ರಿ ವೇಳೆಗೆ ಎಡಿಟಿಂಗ್ ಪೂರ್ಣಗೊಳಿಸಿ, ಅದನ್ನು ಯೂಟ್ಯೂಬ್‌ನಲ್ಲಿ ಪ್ರಸಾರ ಮಾಡಿ, ಫೇಸ್‌ಬುಕ್, ವಾಟ್ಸ್ಆ್ಯಪ್, ಟೆಲಿಗ್ರಾಂ ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡಿದ ಪರಿಣಾಮ, ಲಾಕ್‌ಡೌನ್ ಸಮಯದಲ್ಲಿ ಮನೆಯಲ್ಲೇ ಕುಳಿತು ಯಕ್ಷಗಾನ ನೋಡುತ್ತಿರುವವರ ಸಂಖ್ಯೆಯೂ ವೃದ್ಧಿಯಾಗುತ್ತಿದೆ, ಜಾಗೃತಿ ಮೂಡಿಸುವಲ್ಲಿಯೂ ಸಫಲವಾಗುತ್ತಿದೆ. ಈ ಬಗ್ಗೆ ಪ್ರಜಾವಾಣಿ ಜೊತೆ ಖುಷಿ ಹಂಚಿಕೊಂಡ ಸಿರಿಬಾಗಿಲು ರಾಮಕೃಷ್ಣ ಮಯ್ಯರು, ಇಂಥದ್ದೊಂದು ಜಾಗೃತಿ ಮೂಡಿಸಬೇಕಾದ ಅಗತ್ಯವನ್ನು ಮನಗಂಡ ಎಲ್ಲ ಕಲಾವಿದರೂ ಸಂಭಾವನೆ ಪಡೆದಿಲ್ಲ ಎಂದು ಕೃತಜ್ಞತೆಯಿಂದ ಸ್ಮರಿಸಿಕೊಂಡಿದ್ದಾರೆ.
ಕಥಾ ಸಾರಾಂಶ: ದೇವ ಧನ್ವಂತರಿಗೆ ನಮಿಸುತ್ತಾ, ಸೇವಾ ಮನೋಭಾವದ ವೈದ್ಯಲೋಕಕ್ಕೆ ವಂದಿಸುತ್ತಾ ಯಕ್ಷಗಾನವು ಮಯ್ಯರ ಮಧುರ ಕಂಠದೊಂದಿಗೆ ಆರಂಭವಾಗುತ್ತದೆ. ಮನುಷ್ಯನಲ್ಲಿ ನೈತಿಕತೆ, ಶಿಸ್ತು, ಪರಾರ್ಥತೆ, ಆಹಾರ ಸಂಯಮ, ಶುಚಿತ್ವ ಇತ್ಯಾದಿ ಇಲ್ಲದಿದ್ದರೆ ಪ್ರಕೃತಿಯ ತಾಳ ತಪ್ಪುತ್ತದೆ ಎಂಬುದು ಕಥೆಯ ನೀತಿ. ಕೊರೊನಾಸುರ (ಮಧೂರು ರಾಧಾಕೃಷ್ಣ ನಾವಡ) ಬಂದು, ಜಗತ್ತಿನಲ್ಲಿ ಸಾವು ತಾಂಡವವಾಡಲು – ಪ್ರತ್ಯಕ್ಷವಾಗಿ ಕೊರೊನಾ, ಪರೋಕ್ಷವಾಗಿ ಮನುಷ್ಯರ ದರ್ಪ, ಅಹಂಕಾರವೇ ಕಾರಣ – ಎಂಬುದನ್ನು ವಿವರಿಸುತ್ತಾ ಮಾತಿನಿಂದಲೇ ಜಾಗೃತಿ ಮೂಡಿಸುತ್ತಾನೆ. ಪರ ಊರಿಗೆ ವಿದ್ಯಾರ್ಜನೆಗೆ ತೆರಳಿದ ವಿದ್ಯಾರ್ಥಿ ಮಣಿಕರ್ಣ (ಕಿಶನ್ ಅಗ್ಗಿತ್ತಾಯ), ಭದ್ರತೆ, ಆರೋಗ್ಯ ರಕ್ಷಕರ ತಪಾಸಣೆಯಿಂದ ತಪ್ಪಿಸಿಕೊಂಡು ಊರೆಲ್ಲಾ ರೋಗ ಹರಡಲು ಹೇಗೆ ಕಾರಣನಾಗುತ್ತಾನೆ, ರೋಗದ ಲಕ್ಷಣಗಳು ಹೇಗಿರುತ್ತವೆ ಎಂಬುದನ್ನು ಬಿಂಬಿಸುತ್ತಾನೆ. ಊರಿಗೆ ಮಹಾಮಾರಿ ಹಬ್ಬಿದಾಗ ನಾಡನ್ನಾಳುವ ದೊರೆ ರಾಜೇಂದ್ರ (ಜಯಪ್ರಕಾಶ ಶೆಟ್ಟಿ ಪೆರ್ಮುದೆ) ಬಳಿ ಊರ ಜನರು (ಮಣಿಕರ್ಣನ ತಂದೆ ಮಣಿಭದ್ರ- ಗುರುರಾಜ ಹೊಳ್ಳ ಬಾಯಾರು, ಪತ್ನಿ-ಪ್ರಕಾಶ್ ನಾಯಕ್ ನೀರ್ಚಾಲು, ಪುರಜನರಾಗಿ ಶ್ರೀಕೃಷ್ಣ ಭಟ್ ದೇವಕಾನ, ಶಬರೀಶ ಮಾನ್ಯ, ಕಿರಣ್ ಕುದ್ರೆಕೂಡ್ಲು) ಮೊರೆಯಿಡುತ್ತಾರೆ. ರಾಜೇಂದ್ರನು ದೇವ ಧನ್ವಂತರಿಯನ್ನು ಪ್ರಾರ್ಥಿಸಿಕೊಂಡ ಪರಿಣಾಮ, ರಾಷ್ಟ್ರರಾಷ್ಟ್ರಗಳಲ್ಲಿ ವ್ಯಾಪಿಸಿದ ಬಳಿಕ ಭರತ ಖಂಡಕ್ಕೂ ವಕ್ಕರಿಸಿದ ಕೊರೊನಾಸುರನನ್ನು ಓಡಿಸುವಲ್ಲಿ ಸಫಲನಾಗುತ್ತಾನೆ. ಧನ್ವಂತರಿ ಪಾತ್ರದಲ್ಲಿ ಮಧೂರು ವಾಸುದೇವ ರಂಗ ಭಟ್ಟರು, ಪ್ರಜೆಗಳ ಶಿಸ್ತುಬದ್ಧ ಜೀವನ ಶೈಲಿ, ಆಹಾರ ಶೈಲಿ, ಸ್ವಚ್ಛತೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ – ಇವೆಲ್ಲವನ್ನೂ ಪಾಲಿಸಿದರೆ ಇಂಥ ಯಾವುದೇ ಅಸುರರೂ ಭರತ ಭೂಮಿಗೆ ಗಣ್ಯವಾಗಲಾರರು ಎಂಬ ಸಂದೇಶ ನೀಡುವುದರೊಂದಿಗೆ ಯಕ್ಷಗಾನಕ್ಕೆ ಮಂಗಳ ಹಾಡಲಾಗುತ್ತದೆ. ಒಂದುವರೆ ದಿನದಲ್ಲಿ ಸಿದ್ಧಗೊಂಡ ಈ ರಂಗ ಪ್ರಸಂಗವು ಯಕ್ಷಗಾನ ಸಾಹಿತ್ಯದ ಸಮೃದ್ಧಿಯನ್ನೂ ಆಶು ವೈಭವವನ್ನೂ ಪ್ರಚುರಪಡಿಸಿದೆ.
ಈ ಪ್ರದರ್ಶನಕ್ಕೆ ದೇಶ-ವಿದೇಶಗಳಿಂದ ಉತ್ತಮ ಪ್ರತಿಕ್ರಿಯೆ ಬಂದಿದೆ. ಮುಂಬೈ, ದೆಹಲಿ ಮುಂತಾದೆಡೆಯಿಂದ ಆಯುರ್ವೇದ ವೈದ್ಯರೂ ಕರೆ ಮಾಡಿ, ದೇವ ವೈದ್ಯನಾದ ಧನ್ವಂತರಿಯ ಮಹತ್ವವನ್ನು ಪ್ರಚುರಪಡಿಸಿದ್ದಕ್ಕೆ ಧನ್ಯವಾದಗಳನ್ನು ತಿಳಿಸಿದ್ದಾರೆ ಎಂದಿರುವ ಮಯ್ಯರು, ಕೊರೊನಾ ಬಗ್ಗೆ ಯಕ್ಷಗಾನದ ಮೂಲಕ ಜಾಗೃತಿ ಮೂಡಿಸುವ ಪ್ರಯತ್ನದಲ್ಲಿ ಕಲಾವಿದರ ಈ ಅಳಿಲುಸೇವೆಯು ಸಾರ್ಥಕ್ಯ ಕಂಡಿದೆ ಎಂಬ ಖುಷಿಯಲ್ಲಿದ್ದಾರೆ.
ವೀಡಿಯೊ: https://www.youtube.com/watch?v=S40LGS3qxA8
ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್ ಇರುವ ಬಹುನಿರೀಕ್ಷಿತ…
ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…
ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.
ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…
Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.
ಹಾಡುಗಾರಿಕೆ, ಚೆಂಡೆ-ಮದ್ದಳೆಯ ಬಿಡಿತ-ಮುಕ್ತಾಯಗಳ ಬಳಿಕ, ಬಂದಿದ್ದ ಗಣ್ಯರು, ಒಂದೊಂದು ಹಾಡಿನಲ್ಲಿ ಅಡಕವಾಗಿರುವ ಮಂತ್ರ ಮಾಂಗಲ್ಯದ ಪ್ರತಿಜ್ಞಾಗುಚ್ಛವನ್ನು ವಿವರಿಸಿ, ವಧು-ವರರಿಗೆ ಬೋಧಿಸಿದರು